ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೋಹಿತ್ ವೇಮುಲನ ಅಂತ್ಯ ಕುರಿತು ಯೋಚಿಸುತ್ತಿದ್ದಾಗ ಇದೆಲ್ಲಾ ನೆನಪಾಯಿತು..

savitri m hatti

 

 

 

 

 

 

 

ಸಾವಿತ್ರಿ ವೆಂ ಹಟ್ಟಿ 

ನನಗೆ ೭ ವರ್ಷಗಳ ಹಿಂದೆ ಬದುಕು ಬಹಳ ಬೇಸರವಾಗಿತ್ತು.

ನಮ್ಮ ಸಮಾಜ ಬಾಂಧವರಲ್ಲಿ ಕೆಲವರು ಬಾಂಧವ್ಯವನ್ನೇ ಕಡಿದುಕೊಂಡು ನಮ್ಮ ಮೇಲೆ ಉಗ್ರ ಸಿಟ್ಟನ್ನು ತೋರಿಸಿಬಿಟ್ಟಿದ್ದರು. ಅದು ತಲೆಮಾರುಗಳಿಂದ ಸಣ್ಣಗೆ ದ್ವೇಷದ ಕಿಡಿಯಾಗಿ ಹೊತ್ತಿಕೊಂಡಿದ್ದು, ಆ ದಿನ ಕಾಡ್ಗಿಚ್ಚಿನಂತೆ ನಮ್ಮ ಮನೆಯ ಮೇಲೆ ಮುತ್ತಿಗೆ ಹಾಕಿತ್ತು. ನಾನು, ಅಪ್ಪ ಮತ್ತು ಮೂವರು ಹಿರಿಯ ಸಹೋದರರು ಊರಲ್ಲಿಲ್ಲದ ಸಮಯವದು. ಕೆಲವರು ನಮಗೆ ಬೇಡವಾದವರಲ್ಲ, ನಾವು ಅವರಿಗೆ ಬೇಡವಾಗಿದ್ದೆವು. ನಾವು ಅವರಿಗೆ ಬೇಡವಾಗಲು ನಾವು ಯಾವ ಘೋರ ತಪ್ಪನ್ನೂ ಮಾಡಿರಲಿಲ್ಲ.

ನಮ್ಮ ಪಾಡಿಗೆ ನಾವು ದುಡಿದುಕೊಂಡು ತಿಂದು ಬದುಕುತ್ತಿದ್ದೆವು. ದುಡಿಮೆಯ ಫಲ ಕೈಗೆ ಬಂದಾಗಲೇ ಹೊಟ್ಟೆ ತುಂಬ ಊಟ, ಕೈಗೆ ಅಷ್ಟಕಷ್ಟೆ ಬಂದಾಗ ಅರೆಹೊಟ್ಟೆ, ದುಡಿದರೂ ಎಷ್ಟೂ ಕೈಗೆ ಬರದೇ ಇದ್ದಾಗ ತಾಯಿ ಕೊಟ್ಟ ತಣ್ಣೀರನ್ನೇ ಕುಡಿದು ಮಲಗುತ್ತಿದ್ದೆವು.

ನನಗೆ ತಿಳುವಳಿಕೆ ಬಂದಾಗಿನಿಂದ ಅಂದರೆ ಸುಮಾರು ೬ ವರ್ಷದವಳಿದ್ದಾಗಿನಿಂದ ನಾನು ಎಂದೂ ರಾತ್ರಿ ೧೨ ಗಂಟೆಗಿಂತ ಮುಂಚೆ ನಿದ್ರೆ ಮಾಡ್ಲಿಲ್ಲ. ಅವ್ವ, ಅಕ್ಕಂದಿರ ಜೊತೆ ರಾತ್ರಿ ೧೨ ಗಂಟೆಯೊ ಒಂದು ಗಂಟೆಗೋ ಹೂವು ಕಟ್ಟುವುದನ್ನು ಮುಗಿಸಿ ಮಲಗುವುದು ನಮ್ಮ ನಿತ್ಯದ ಹಾಡಾಗಿತ್ತು. ಅದೇ ಬದುಕಿನ ದಾರಿಯಾಗಿತ್ತು. ನನ್ನ ಓದಿನುದ್ದಕ್ಕೂ ಇದೇ ರೀತಿ ನನ್ನ ರಾತ್ರಿಗಳು ಉರುಳಿದವು.

ಈ ರೀತಿಯಾಗಿ ಬದುಕಿನುದ್ದಕ್ಕೂ ತನ್ನ ನೆರಳಿಗೆ ತಾನೇ ಹೆದರುತ್ತ ದುಡಿದು ಅವ್ವ ನಮ್ಮ ಹೊಟ್ಟೆ ಬಟ್ಟೆ ನೋಡಿಕೊಂಡಳು. ಜೊತೆಗೆ ಎಲ್ಲರಿಗೂ ತಕ್ಕಮಟ್ಟಿಗೆ ಶಿಕ್ಷಣ ಕೊಡಿಸಿದಳು. ಉಳಿದವರು ಅಷ್ಟಕಷ್ಟೆ ಓದಿ ಓದುವುದನ್ನು ನಿಲ್ಲಿಸಿದರೂ ನಾವಿಬ್ಬರೂ ಹುಡುಗಿಯರು, ತಂಗಿ ಪ್ರೇಮಾ ಮತ್ತು ನಾನು ಓದನ್ನು ನಿಲ್ಲಿಸಲಿಲ್ಲ. ಪಿ.ಯು.ಸಿ ಮುಗಿಯುತ್ತಲೇ ಓದು ಸಾಕು ಎಂದು ತಕರಾರು ಮಾಡಿದ ಅಪ್ಪ ನಮ್ಮ ಹಟದ ಮುಂದೆ ಸೋತು ಸುಮ್ಮನಾದ.

ನಾವು ಮತ್ತೆ ನಮ್ಮ ಹೂವಿನ ಬದುಕಿನ ಜೊತೆ ಅಕ್ಷರಗಳ ಒಡನಾಟವನ್ನು ಗಟ್ಟಿಗೊಳಿಸಿಕೊಂಡೆವು. ಸ್ವಲ್ಪ ತೋದವಿದ್ದರೂ ಅದರಿಂದ ಬರುವ ಆದಾಯ ಎಲ್ಲರ ಹೊಟ್ಟೆಗೆ ಸಾಲದಾಗಿದ್ದರಿಂದ ವರ್ಷವಿಡಿ ನಾವು ಹೂವು ತಂದು ಹೆಣೆದು ಅವ್ವನಿಗೆ ಕೊಡುವುದು, ಅವ್ವ ಮಾರಿಕೊಂಡು ಬಂದು ನಮ್ಮಗೆ ತುತ್ತು ನೀಡುವುದು ನಡೆದೇ ಇತ್ತು. (ಈಗಲೂ , ಆದರೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ, ತಮ್ಮಂದಿರು ಜವಾಬ್ದಾರಿ ಹೊತ್ತಿದ್ದಾರೆ).

ಈಗ ಏನು ಹೇಳಹೊರಟೆನಂದರೆ ಅದೇ ಬಂಧುಗಳು ಬಾಂಧವ್ಯ ಕಡಿದುಕೊಂಡಿದ್ದು. ಅವರೆಲ್ಲರೂ ಶ್ರೀಮಂತರು. ನಾವು ದುಡಿದು ಸಣ್ಣಾದರೂ ಹೊಟ್ಟೆ ತುಂಬ ಕೂಳು ಕಾಣದ ದರಿದ್ರರು. ನಮ್ಮಂತಹ ದರಿದ್ರರಿಗೆ ಅಕ್ಷರ ವಿದ್ಯೆ ಒಲಿಯುವುದು ಆ ನಮ್ಮ ಬಂಧುಗಳಿಗೆ ಬೇಡವಾಗಿತ್ತು. ಆದ್ದರಿಂದ ಅವರು ನಾವು ಚಿಕ್ಕವರಿರುವಾಗಿನಿಂದಲೇ ಅವ್ವನಿಗೆ ಹೇಳುತ್ತಲೇ ಇದ್ದರು. ಯಾಕೆ ಹೆಣ್ಣುಗಳಿಗೆ ಓದಿಸ್ತೀ? ಎಷ್ಟು ಓದಿಸಿದರೂ ಮದುವಿ ಮಾಡೂದು ತಪ್ಪಂಗಿಲ್ಲ, ಗಡಗಿ ಮುಕುಳಿ ತೊಳೆಯೂದು ತಪ್ಪಂಗಿಲ್ಲ ಸುಮ್ನಾ ದುಡ್ಡು ಖರ್ಚು ಮಾಡಿಸಿ ಓದಿಸಬ್ಯಾಡ ಅಂತ ಕೆಲವರು ಯಾವಾಗಲೂ ಅವ್ವನಿಗೆ ಉಪದೇಶ ಮಾಡುತ್ತಲೇ ಬಂದರು.

ಆದರೆ ಅವ್ವ ಯಾರ ಮಾತಿಗೂ ಕಿವಿಗೊಡಲಿಲ್ಲ. ಅಪ್ಪ ಅವ್ವ ಅಂದ್ರೆ ಯಾವತ್ತೂ ಒಂಚೂರು ಭಿನ್ನಾಭಿಪ್ರಾಯವಿಲ್ಲದ ಜೀವಿಗಳು. ಅವರಿಬ್ಬರೂ ನಾವು ಹುಡುಗಿಯರು ಅಂತ ಯಾವತ್ತೂ ಹಿಂಜರಿಯಲಿಲ್ಲ. ಅಪ್ಪ ಲೋಕಾಚಾರಕ್ಕೆ ಪಿಯುಸಿ ಓದುವುದು ಸಾಕು ಅಂದಿದ್ದರೂ ಅದು ಆತನ ಮನಸ್ಸಿನಿಂದ ಬಂದ ತಕರಾರಾಗಿರಲಿಲ್ಲ. ಬೇರೆಯವರ ಉಪದೇಶದ ಫಲವಾಗಿತ್ತು. ನಂತರ ಅವ್ವನ ಅಭಿಪ್ರಾಯಕ್ಕೆ ತಲೆದೂಗಿ ನಮ್ಮನ್ನು ಮುಂದೆ ಓದಲು ಬಿಟ್ಟ.

ನನ್ನ ವೈಯಕ್ತಿಕ ಆರೋಗ್ಯ ಸಂಬಂಧೀ ಸಮಸ್ಯೆಯಿಂದಾಗಿ ನನ್ನ ಓದು ಸ್ವಲ್ಪ ಕುಂಟುತ್ತಲೇ ಸಾಗಿತ್ತು. ನನ್ನ ತಂಗಿ ತುಂಬ ಕಷ್ಟದಿಂದ ಎಂ.ಎ (-ನಮ್ಮ ಸಮಾಜದಲ್ಲಿ ಬಹುಶಃ ನಮ್ಮೂರಿನಲ್ಲಿಯೇ ಮೊದಲ ಇಂಗ್ಲಿಷ್ ಸ್ನಾತ್ತಕೋತ್ತರ ಪದವೀಧರೆ) ಇಂಗ್ಲಿಷ್, ಬಿ.ಇಡಿ ಮುಗಿಸುತ್ತಲೇ ಗದಗ ನಲ್ಲಿ ಒಂದು ಡಿ.ಇಡಿ ಕಾಲೇಜಿನಲ್ಲಿ ಉಪನ್ಯಾಸಕಿ ಕೆಲಸ ಸಿಕ್ಕಿತು. ಅದು ಖಾಸಗಿಯದೇ ಆಗಿರಲಿ ನಮ್ಮನ್ನು ದ್ವೇಷಿಸುವವರಿಗೆ ಮತ್ತಷ್ಟು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯ್ತು.

ಒಂದಿನ ಬೇಕಂತಲೇ ಒಬ್ಬ ಹೆಣ್ಣುಮಗಳಿಂದ ನೀರಿನ ಬಿಂದಿಗೆಯನ್ನು ಬಾವಿಯಲ್ಲಿ ಬೀಳಿಸಿದ್ದರು. ಆಕೆ ಬಾವಿಗೆ ನೀರಿನ ಬಿಂದಿಗೆ ಬೇಕೆಂದೆ ಬೀಳಿಸಿದ್ದು ನನ್ನ ತಮ್ಮನಿಗೆ ಗೊತ್ತಿರಲಿಲ್ಲ. ತಮ್ಮನಿಗೆ ಕರೆದು, “ಬಿಂದಿಗಿ ಬಿದ್ದೈತಿ ತಗ್ದು ಕೊಡು ತಮ್ಮ ” ಅಂತ ಆಕೆ ಕೇಳಿದಾಗ ತಮ್ಮ ಆಗಲ್ಲ ಎನ್ನಲಾಗದೇ ಬಾವಿಗೆ ಜಿಗಿದಿದ್ದ ಕೊಡ ತೆಗೆದುಕೊಡಲು. ಆದರೆ ಅಲ್ಲಿ ಅಗಿದ್ದೇ ಬೇರೆ. ನಮ್ಮನ್ನು ದ್ವೇಷಿಸುವವರ ಗುಂಪು ತಡ ಮಾಡದೇ ಇಕ್ಕಟ್ಟಾದ ಬಾವಿಗೆ ಮುಳ್ಳಿನ ಪೊದೆಗಳನ್ನು ಎಸೆದು ನನ್ನ ತಮ್ಮ ಮೇಲೆ ಬರುವುದಿರಲಿ ನೀರು ತುಳಿಯಲು, ತಲೆ ಎತ್ತಲು ಕೂಡ ಆಗದಂತೆ ಬಾವಿ ತುಂಬ ಜಾಲಿ ಮುಳ್ಳಿನ ಕಂಠಿಗಳನ್ನೆಸೆದುಬಿಟ್ಟಿದ್ದಾರೆ. ಮೇಲೆ ಅವರೆಲ್ಲರೂ ನಿಂತು ನಗತೊಡಗಿದ್ದಾರೆ.

ಬಾವಿಗೆ ಇಳಿಸಿದ ಹೆಣ್ಣುಮಗಳು ಹೆದರಿ ತಮ್ಮ ಮನೆಗೆ ಓಟ ಕಿತ್ತಿದ್ದಾಳೆ. ತಮ್ಮ , ಪ್ರಾಣ ಸಂಕಟದಿಂದ ಜೋರಾಗಿ ಅವ್ವ ಅಪ್ಪ ಅಂತ ಕಿರುಚಾಡಿದ್ದು ಕೇಳಿ ಅವ್ವ ಮನೆಯಿಂದ ಹೊರಬಂದು ನೋಡಿದರೆ ರಾಕ್ಷಸರು ಗಹಗಹಿಸಿ ನಗುತ್ತಿದ್ದರಂತೆ. ಅವ್ವ ಒಂದು ಕ್ಷಣ ಹೆದರಿದರೂ ಈಗ ಅಳುವ ಸಮಯ ಅಲ್ಲ ಅಂತ ಧೈರ್ಯ ತಗೊಂಡು ಮನೆಗೆ ಓಡಿ ಹಗ್ಗ ದೋಟಿ ತಗೊಂಡು ಬಂದು ದೋಟಿಯಿಂದ ಮುಳ್ಲು ಸರಿಸಿ, ಹಗ್ಗ ಬಿಟ್ಟು ಯಾರನ್ನೋ ಕರೆದು ತಮ್ಮ ಬಾವಿಯಿಂದ ಹೊರಬರಲು ಸಹಾಯ ಮಾಡಿದ್ದಾಳೆ. ಹೀಗ್ಯಾಕೆ ಮಾಡಿದ್ದು ಅಂತ ತಾಯಿ ಹೋಗಿ ಆ ಪುಂಡರ ಮನೆಯ ಹಿರಿಯರ ಮುಂದೆ ಹುಡುಗರ ಬಗ್ಗೆ ದೂರಿದರೆ, ನಿನ್ನ ಮಗ ಕುಡಿಯೂ ನೀರಾಗ ಈಜಾಡಿದರ ಮತ್ತೇನು ಮಾಡ್ತಾರ, ಹೋಗೇ ಅಂತ ಅವಾಚ್ಯ ಮಾತಾಡಿ ನೋಯಿಸಿದ್ದಾರೆ.

bd75f7da8e7d355ccef1fb6b0f4b2959ತಮ್ಮ ನೋಡಿದರೆ,”ನಂಗೆ ಬುದ್ಧಿ ಇಲ್ಲೇನು? ನಂಗೆ ಗೊತ್ತಿಲ್ಲೇನು ಕುಡಿಯೂ ನೀರು ಅಂತ.ಆ ಹೆಣ್ಮಗಳು ಕೊಡ ತೆಗೆದುಕೊಡು ಅಂದ್ಲು. ಹಿಂದೆ ಎಷ್ಟೋ ಜನರಿಗೆ ಕೊಡ ಬಿದ್ದಾಗ ತೆಗೆದುಕೊಟ್ಟಿಲ್ಲೇನು? ಈಗಲೂ ಅಷ್ಟಾ ಅವರು ನನ್ನ ಅಕ್ಕ ತಂಗಿ ಸಮಾನ ಅಂದ್ಕೊಂಡು ಸಹಾಯ ಮಾಡಾಕ ಹೋಗಿದ್ದಾ ತಪ್ಪಾತು…” ಅಂತ ಅವ್ವನ ಕಾಲು ಹಿಡಿದು ಹೇಳಿದ.

ಇಷ್ಟಾದಮೇಲೆ ಅವ್ವ ಅಪ್ಪ ಸುಮ್ಮನಾಗಿದ್ದಾರೆ. ಒಂದೆರಡು ದಿನ ಬಿಟ್ಟು ಅಪ್ಪ ಮತ್ತು ಮೂವರು ಸಹೋದರರು ಬೇರೆಡೆಗೆ ಕೆಲಸದ ನಿಮಿತ್ಯ ಹೋಗಿದ್ದಾರೆ. ನಾನು ಬಿಜಾಪುರದಲ್ಲಿದ್ದೆ. ತಂಗಿ ಕಾಲೇಜಿಗೆ ಹೋಗಿದ್ದಾಳೆ. ಇದ್ದಕ್ಕಿದ್ದಂತೆ ಮನೆಗೆ ನುಗ್ಗಿ ಅವ್ವನ ಕೈ ಹಿಡಿದು ಹೊರಗೆಳೆದುಕೊಂಡು ಬಂದು, “ನೋಡೇ ನಿನ್ನ ಮಗನ ಕುಡಿಯೂ ನೀರಾಗ ಇಳಿಸಿದ್ದೆಲ್ಲಾ ಈಗ ಹೆಂಗ ಮಾಡ್ತೀವಿ ನೋಡು…” ಅಂತ ತಲೆಗೊಂದು ಹೊಲಸು ಮಾತಾಡುತ್ತ ಸುಮಾರು ಇಪ್ಪತ್ತು ಜನ ಪುಂಡರು ಅವರ ಹೆಣ್ಮಕ್ಕಳು ಸೇರಿ ತಮ್ಮನಿಗೆ ದೇಹದ ಮೃದು ಜಾಗ ಅನ್ನದೇ ಸಿಕ್ಕ ಸಿಕ್ಕಲ್ಲಿ ಒದ್ದು, ಹೊಡೆದು ಉಟ್ಟಿರುವ ಬಟ್ಟೆಯನ್ನೆಲ್ಲಾ ಹಿಡಿದು ಎಳದಾಡಿ ಹರಿದಿದ್ದಾರೆ.

ಒಂದಿಬ್ಬರು ಮರ್ಮಾಂಗಕ್ಕೆ ಒದ್ದಿದ್ದಾರೆ. ಒಂದಿಬ್ಬರು ತಲೆಗೆ ಕೋಲಿನಿಂದ ಹೊಡೆದಿದ್ದಾರೆ. ಅವ್ವ ಅದನ್ನೆಲ್ಲಾ ನೋಡಿ ಹೌಹಾರಿ ಬಿದ್ದಿದ್ದಾಳೆ, ಸೀರೆಯಲ್ಲಿಯೇ ಮೂತ್ರ ಮಾಡಿಕೊಂಡು ಹೆದರಿ ನಡುಗುತ್ತಾ… “ಮಕ್ಕಳನ್ನು ಪೈಲವಾನರ‍್ನ ಮಾಡೀನಿ ಅಂತ ತೋರಿಸ್ತೀಯೇನೇ, ನೋಡೀಗ ನಿನ್ನ ಮಗನ ಕಥೀನ…” ಅಂತ ನಕ್ಕಿದ್ದಾರೆ. ಇಷ್ಟೆಲ್ಲಾ ಆಗೂವಾಗ ಬಿಡಿಸಲು ಯಾರೂ ಬಂದಿಲ್ಲ ಅಂತಲ್ಲ. ಆದರೆ ಒಳ್ಳೆಯವರು ಎಷ್ಟು ಹೇಳಿದರೂ ಕೋಲು ಹಿಡಿದ ರಾಕ್ಷಸರು ಅಟ್ಟಹಾಸ ಮಾಡುವುದನ್ನು ನಿಲ್ಲಿಸುವುದಾದರೂ ಹೆಂಗೆ? ಆ ಹೊತ್ತಿಗೆ ನನ್ನ ದೊಡ್ಡ ತಮ್ಮ ಬಂದ ಅಂತ ಯಾರೋ ಹೇಳಿದ್ದು ಕೇಳಿ ಕೋಲು ಹಿಡಿದವರು ಪರಾರಿಯಾದರೂ ಸಿಕ್ಕವರಿಗೊಂದಿಷ್ಟು ದೊಡ್ಡ ತಮ್ಮನೂ ಥಳಿಸಿದ್ದಾನೆ…

ನಂತರ ಪಂಚಾಯತಿ ಸೇರಿದಾಗ ಅವರ ಕಡೆಯವರು ಮಹಾಜಾಣರೇ ಪಂಚರಾಗಿ ಬಂದಿದ್ದಾರೆ. ಅವರಲ್ಲೊಬ್ಬಾತ, “ಏನು ತಿನ್ನಿಸಿ ಬೆಳೆಸಿದ್ದೀರಪ್ಪಾ ನೋಡು ಅಷ್ಟು ಜನರು ಕೈ ಎತ್ತಿದರೂ ಎಲ್ಲರ ಏಟು ತಾಳ್ಕೊಂಡ…” ಅಂತ ಅಂದಾಗಲೇ ದ್ವೇಷದ ಬೇರುಗಳು ಹೆಂಗ್ಹೆಂಗೆ ಹಬ್ಬಿವೆ ಅವರೆಲ್ಲರ ಹೃದಯದಾಗ ಅಂತ ಅಪ್ಪ ಅವ್ವನಿಗೆ ಸೋಜಿಗ! ಅಪ್ಪನಿಗೆ ಸಂಕಟವಾಗಿ, “ಹೇಲು ತಿನ್ನಿಸಿ ಬೆಳೆಸೀನಿ ನನ್ನ ಮಕ್ಕಳ್ನ…” ಅಂತ ಉತ್ತರ ಕೊಟ್ಟಿದ್ದಾನೆ. ಒಟ್ಟು ಪಂಚಾಯತಿಯಲ್ಲಿ ನ್ಯಾಯ ಮೇಲ್ನೋಟಕ್ಕೆ ನಮ್ಮ ಪರವಾಗಿಯೇ ಆಯಿತಾದರೂ ನನ್ನ ತಮ್ಮನಿಗೆ ಆದ ಪೆಟ್ಟು, ಅವ್ವನಿಗಾದ ಅವಮಾನವನ್ನು ಅರಗಿಸಿಕೊಳ್ಳಲು ನನಗೆ ಇವತ್ತಿಗೂ ಆಗುತ್ತಿಲ್ಲ.

ತಮ್ಮನಿಗೆ ಆಗ ಔಷಧಿ ಕೊಡಿಸಿದ್ದೆವಾದರೂ ಈಗಲೂ ತಲೆ ತಲೆ ಅನ್ನುತ್ತಾನೆ ಆಗೀಗ. ಆ ಘಟನೆಯಿಂದ ಅವ್ವ ಬಹಳ ನೊಂದುಕೊಂಡು ಸುಮಾರು ಎಂಟು ತಿಂಗಳು ಮಾನಸಿಕ ರೋಗಿಯಾಗಿಬಿಟ್ಟಿದ್ದಳು. ಡಾಕ್ಟರಿಗೆ ತೋರಿಸಿದರೆ ಏನೂ ಸಮಸ್ಯೆ ಇಲ್ಲ ಅನ್ನುತ್ತಿದ್ದರು. ಆದರೆ ಅವ್ವನಿಗೆ ಒಂದು ತುತ್ತು ಅನ್ನವೂ ದಕ್ಕದೇ, ನೀರು ಕುಡಿದರೇ ಅದೂ ದಕ್ಕದೇ ವಾಂತಿ-ಬೇಧಿ ಹಿಡಿದು ಬಿಟ್ಟಿತ್ತು. ಕಾಯ್ಸಿ ಆರಿಸಿದ ನೀರು, ಮೊಸರನ್ನ, ಎಳೆನೀರು ಇಷ್ಟನ್ನೇ ಕೊಟ್ಟು ನೋಡಿದರೂ ಅವ್ವಗೆ ದಕ್ಕಲೇ ಇಲ್ಲ. ಹಿಂಗಾದ್ರ ಹೆಂಗೆ ಅಂತ ನಾವೆಲ್ಲರೂ ಹಗಲೂ ರಾತ್ರಿ ಕಣ್ಣೀರಿನಿಂದ ಕೈ ತೊಳೆಯುತ್ತಿದ್ದೆವು.

ಅವ್ವ ನಮ್ಮನ್ನೆಲ್ಲಾ ಬಿಟ್ಟು ಸತ್ತು ಹೋಗ್ತಾಳೆ ನಮ್ಮ ಬದುಕು ಇಲ್ಲಿಗೆ ಮುಗಿಯುತ್ತಿದೆ ಅಂತ ಹಗಲೂ ರಾತ್ರಿ ಅಳುತ್ತಿದ್ದೆ. ಅವ್ವಗೆ ನೀರು ಕುಡಿದರೂ ತಕ್ಷಣ ವಾಂತಿ ಆಗತೊಡಗಿತು. ಡಾಕ್ಟರ್ ನೋಡಿದರೆ ಏನೂ ದೈಹಿಕ ಅಸ್ವಸ್ಥತೆ ಇಲ್ಲ ಅನ್ನುತ್ತಾರೆ. ಆ ಕಹಿ ಘಟನೆಯೇ ಅವ್ವನ ಮಾನಸಿಕ ಅಸ್ವಸ್ಥತೆಗೆ ಕಾರಣ ಅಂತ ಒಂದಿನ ನಾನು ಆ ಎಲ್ಲಾ ವಿರೋಧಿಗಳಿಗೆ ತೊಳೆದುಬಿಟ್ಟೆ. ಆ ದಿನ ನಾನು ಬಹಳ ಕಟುವಾಗಿ, ಕೆಟ್ಟ ಮಾತುಗಳಿಂದ ಅವರಿಗೆಲ್ಲಾ ಬೈದೆ. “ನಮ್ಮವ್ವನ ಪ್ರಾಣಕ್ಕೇನಾದರೂ ಅಪಾಯ ಆದ್ರೆ ನಿಮ್ಮನ್ನ ಒಬ್ಬನನ್ನೂ ಸುಮ್ಮನೆ ಬಿಡಲ್ಲ ನಾನು… ” ಕಿರುಚಾಡಿ ಕೂಗಾಡಿಬಿಟ್ಟಿದ್ದೆ.

ಈ ಎಲ್ಲಾ ಘಟನೆಗಳಿಂದ ಜೀವನ ರೋಸಿ ಹೋಗಿತ್ತು. ಬೆಳಗಾದರೆ ವಿರೋಧಿಗಳ ಮುಖ ಎದುರಿಗೆ. ತೀರ ಹತ್ತಿರದ ರಕ್ತ ಸಂಬಂಧಿಗಳು ನಂಟರು ಅನ್ನಿಸಿಕೊಂಡವರೆ ಅಷ್ಟು ಕ್ರೂರವಾದರೆ ಬದುಕು ಅಸಹನೀಯ. ಒಮ್ಮೊಮ್ಮೆ ಆತ್ಮಹತ್ಯೆ ಮಾಡಿಕೊಂಡು ಬಿಡಲಾ ಅನ್ನಿಸುತ್ತಿತ್ತು. ಆತ್ಮಹತ್ಯೆಯ ವಿಚಾರ ಬಂದ ಕೂಡಲೆ ಸುಮ್ಮನೆ ಒಂದು ಪೆನ್ನು ಒಂದು ಕಾಗದ ತೆಗೆದುಕೊಂಡು ಡೆತ್ ನೋಟ್ ಬರೆಯುತ್ತಿದ್ದೆ. ಅದರಲ್ಲಿ ಎಲ್ಲಾ ಕಾರಣಗಳನ್ನೂ ಬರೆಯುತ್ತಿದ್ದೆ… ಆಮೇಲೆ ಪೂರ್ಣ ಬರೆಯುವ ಹೊತ್ತಿಗೆ ಆ ವಿರೋಧಿಗಳ ಮೇಲಿನ ಸಿಟ್ಟು ಕರಗಿ, ಪಾಪ ಅನ್ನಿಸಿಬಿಡುತ್ತಿತ್ತು.

ನಾನೊಬ್ಬಳು ಸತ್ತರೆ ನನ್ನ ಮನೆಗೆ ನೆರವು, ನ್ಯಾಯ ಸಿಗುತ್ತಾದರೂ, ವಿರೋಧಿಗಳೆಲ್ಲರೂ ಕಂಬಿ ಎಣಿಸುವುದು, ಅವರ ಮಕ್ಕಳ ಭವಿಷ್ಯ ಮುರುಟುವುದು ಬೇಡವೆನ್ನಿಸಿಬಿಡುತ್ತಿತ್ತು. ಡೆತ್ ನೋಟ್ ನ್ನು ತೆಗೆದುಕೊಂಡು ಹೋಗಿ ನಿಗಿ ನಿಗಿ ಒಲೆಯ ಕೆಂಡಕ್ಕೆ ಹಾಕುತ್ತಿದ್ದೆ. ಹೀಗೆ ಡೆತ್ ನೋಟ್ಸ್ ದಿನಾಲು ಒಂದು ಪತ್ರ ಅಗ್ನಿ ದೇವನಿಗೆ ಆಹುತಿಯಾಗುವುದು, ನನ್ನ ಮನಸ್ಸು ತಣ್ಣಗಾಗುವುದು ನಡೆದೇ ಇತ್ತು. ಆ ಸಮಯದಲ್ಲಿಯೇ ಅವ್ವ ಅಯ್ಯಪ್ಪ ಸ್ವಾಮಿಯ ವೃತ ಹಿಡಿಯಿತು. ಬಹಳ ವರ್ಷಗಳಿಂದ ಅಯ್ಯಪ್ಪನನ್ನು ಪೂಜಿಸುತ್ತಿದ್ದಳಾದರೂ ಈ ಸಲ ಮಣಿಮಾಲೆಯನ್ನೂ ಧರಿಸಿ ಕಪ್ಪು ವಸ್ತ್ರ ಧರಿಸಿ ಅವ್ವ ಉಗ್ರ ತಪ್ಪಸಿಗೆ ಕುಳಿತುಬಿಟ್ಟಳು.

ಎಷ್ಟು ಸಲ ಒಂದಕ್ಕೆ ಎರಡಕ್ಕೆ ಹೋಗ್ತಾಳೆ ಅಷ್ಟು ಸಲ ತಣ್ಣೀರು ತಲೆ ಸ್ನಾನ.ಜೀರ್ಣವ್ಯವಸ್ಥೆ ಬೇರೆ ಸರಿ ಇರಲಿಲ್ಲವಲ್ಲ. ಗಿರಿಗೆ ಹೋದಾಗ ನನ್ನವ್ವ ವಾಪಸ್ ಬರಲ್ಲ ಅಂತಲೇ ಅನ್ನಿಸಿಬಿಟ್ಟಿತ್ತು. ದೇವರು ಅಂದ್ರೆ ಮೂಗು ಮುರಿಯುತ್ತಿದ್ದ ನಾನು ಅವ್ವ ಬರುವ ತನಕ ತಣ್ಣೀರು ಸ್ನಾನ ಮಾಡಿ ದೀಪ ಕಾಯುವ ಹೊಣೆ ಹೊತ್ತೆ. ಜೀವನದಲ್ಲಿ ದೇವರಿಗೆ ಒಂದಿನವೂ ಕೈ ಮುಗಿಯದಿದ್ದ ಅಪ್ಪ ತಣ್ಣೀರು ಸ್ನಾನ ಮಾಡಿ ಅವ್ವನಿಗಾಗಿ ಪ್ರಾರ್ಥನೆ ಮಾಡತೊಡಗಿತು. ಅವ್ವ ಯಾತ್ರೆ ಮುಗಿಸಿ ಬಂದ ಬಳಿಕವೇ ಮನೆಯಲ್ಲಿ ಊಟ ಮಾಡುವುದು ಅಂತ ಅಪ್ಪ ಹಟ ಹಿಡಿಯಿತು. ದಿನಕ್ಕೆ ಒಂದೇ ಸಲ ಅದೂ ಚಹಾದಂಗಡಿಯಲ್ಲಿ ಏನಾದರೂ ತಿಂಡಿ ತಿಂತಿತ್ತು ಅಪ್ಪ. ಈ ಮಧ್ಯೆ ಅವ್ವ ಸುರಕ್ಷಿತವಾಗಿ ಯಾತ್ರೆ ಮುಗಿಸಿ ಬರಲಿ ಅಂತ ಪ್ರಾರ್ಥನೆಯಲ್ಲಿ ತೊಡಗಿದ ನನ್ನ ಮನಸ್ಸು ಡೆತ್ ನೋಟ್ಸ್ ಬರೆಯುವ ಸುಡುವ ದಿನಚರಿಯನ್ನು ಮರತೇ ಬಿಟ್ಟಿತ್ತು.

ಅಂತೂ ಅವ್ವ ಶಬರಿ ಗಿರಿ ಕಂಡು ಬಂದಳು. ಅಪ್ಪ ನಗುತ್ತ ಮತ್ತೆ ಮನೆಯಲ್ಲಿ ಊಟ ಮಾಡತೊಡಗಿತು.ಅವ್ವನಿಗೆ ಅನ್ನ ನೀರು ಮೊದಲಿನಂತೆ ದಕ್ಕತೊಡಗಿತ್ತು.. ಒಂದು ರೀತಿಯಲ್ಲಿ ಮನೆ ಮತ್ತು ಮನಸ್ಸುಗಳು ಶಾಂತ ಸ್ಥಿತಿಗೆ ಮರಳಿದವು.

ಈಗ ಹಾಗೆ ನಮಗೆ ಹಿಂಸಿಸಿದ್ದ ಎಲ್ಲರೂ ನಮ್ಮ ಮನೆಯ ಸದಸ್ಯರೊಂದಿಗೆ ಮಾತಾಡುತ್ತಾರೆ. ನನ್ನನ್ನು ಮಾತ್ರ ಮಾತನಾಡಿಸುವುದಿಲ್ಲ. ನನಗೆ ಅವರ ಮೇಲೆ ಯಾವುದೇ ಕೋಪ, ದ್ವೇಷ, ಅಸಹನೆ ಇಲ್ಲ. ಅವರ ಸಣ್ಣತನವನ್ನು ನಾನು ಯಾವತ್ತೋ ಕ್ಷಮಿಸಿದ್ದೇನೆ. ಆದರೆ ಅವರೆಲ್ಲರೂ ತೋರಿಕೆಗೆ ಮಾತನಾಡುವುದು ನನಗೆ ಹಿಡಿಸುವುದಿಲ್ಲ. ಮನುಷ್ಯರ ಮನಸ್ಸುಗಳು ಪಶ್ಚಾತಾಪದಲ್ಲಿ ಬೆಂದು, ಪ್ರೀತಿಯ ನೀರಿನಲ್ಲಿ ಹೊಸತಾಗಿ ಚಿಗುರೊಡೆಯಬೇಕು ಅಂತ ನನ್ನಾಸೆ….

()

‍ಲೇಖಕರು Admin

25 January, 2016

5 Comments

  1. ಶಮ, ನಂದಿಬೆಟ್ಟ

    ಯಾಕೋ ಕಣ್ಣಲ್ಲಿ ನೀರಿಳಿಯಿತು ನಿನ್ನ ಬರಹ ಓದಿ. ನಿನ್ನ ಭವಿಷ್ಯ ಉಜ್ವಲವಾಗಲಿ ಸೋದರೀ. ನಿನ್ನ ಧೈರ್ಯ, ತಾಳ್ಮೆ, ಶ್ರದ್ಧೆಗೆ ನಮನ. ಅಪ್ಪ ಅಮ್ಮನಿಗೆ ಸಲಾಂ. ಖುಷಿಯಾಗಿರಿ.

    ಎಲ್ಲರೂ ಬೊಬ್ಬಿರಿಯುವಂತೆ ಎರಡು ಜಾತಿ ಅಥವಾ ಕೋಮುಗಳ ನಡುವಣ ತಿಕ್ಕಾಟ ಅಥವಾ ಪುರೋಹಿತಶಾಹಿ ಮತ್ತು ಇತರರದಲ್ಲ ಎಲ್ಲೆಡೆ ಕನಸುಗಳನ್ನ ಕೊಲ್ಲುತ್ತಿರುವುದು. ಪ್ರತಿ ಹಂತದಲ್ಲೂ ಪ್ರತಿ ಜಾಗದಲ್ಲೂ ನಡೆಯುತ್ತಿರುವುದು ಮಾನವೀಯತೆ ಮತ್ತು ರಾಕ್ಷಸ ಪ್ರವೃತ್ತಿಯ ನಡುವಿನ ಗುದ್ದಾಟ.

    • ಸಾವಿತ್ರಿ.ವೆಂ.ಹಟ್ಟಿ

      ಹೃತ್ಪೂರ್ವಕ ಧನ್ಯವಾದಗಳು ಶಮ ಅಕ್ಕ. ನಿಮ್ಮೆಲ್ಲರ ಶುಭಾಶಯಗಳು ಮತ್ತು ಆಶೀರ್ವಾದಗಳು ನನ್ನನ್ನು ಮುನ್ನಡೆಸುತ್ತಿವೆ…

  2. Bharathi b v

    ಸಾವಿತ್ರಿ ಎದೆ ನಡುಗಿತು ಕಣಮ್ಮಾ ಇದೆಲ್ಲ ಓದಿ. ಇಷ್ಟೆಲ್ಲ ಆದರು ಬದುಕಿನ ಬಗ್ಗೆ ಕಹಿ ಇಲ್ಲದ ನಿಮ್ಮ ರೀತಿ ಮೆಚ್ಚಿದೆ. ಒಳ್ಳೆಯದಾಗಲಿ ನಿಮಗೆ

    • ಸಾವಿತ್ರಿ.ವೆಂ.ಹಟ್ಟಿ

      ಧನ್ಯವಾದಗಳು ಮೇಡಮ್ಮಾವ್ರೆ.. ಅಕ್ಷರಗಳಷ್ಟೇ ನನಗೆ ಧೈರ್ಯ ತುಂಬಿದ್ದು ಮತ್ತು ನನ್ನ ಮೂಲಕ ಮನೆಯಲ್ಲಿ ಸ್ವಲ್ಪ ಬದಲಾವಣೆ ತಂದಿದ್ದು.. ಸಮಾಜದಲ್ಲಿ ಬದುಕನ್ನು ಅಸಹನೀಯ ಮಾಡಿಕೊಳ್ಳುವಲ್ಲಿ ನನ್ನ ಕೈಹಿಡಿದು ನಡೆಸಿದ್ದು ಅಕ್ಷರಗಳೇ. ಈ ನಿಟ್ಟಿನಲ್ಲಿ ಅಕ್ಷರ ಬಂಧುಗಳಾದ ನನ್ನ ಎಲ್ಲಾ ನೆಚ್ಚಿನ ಲೇಖಕರಿಗೆ, ಪುಸ್ತಕಗಳಿಗೆ, ಪತ್ರಿಕೆಗಳಿಗೆ ನಾನು ಜೀವನಪೂರ್ತಿ ಋಣಿ…

      • ಸಾವಿತ್ರಿ.ವೆಂ.ಹಟ್ಟಿ

        ಮೇಲಿನ ಸಾಲುಗಳಲ್ಲಿ ಕಣ್ತಪ್ಪಿನಿಂದಾಗಿ ’ಅಸಹನೀಯ’ ಪದ ಬಂದಿದೆ. ಅದನ್ನು ಸಹನೀಯ ಅಂತ ಓದಿಕೊಳ್ಳಿ ಪ್ಲೀಸ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading