ಹಾಡಿನ ಮಟ್ಟು ಹತ್ತಿಕ್ಕುವ ಅಧಿಕಾರ ಯಾರಿಗೂ ಇಲ್ಲ

‘ಆನು ಒಲಿದಂತೆ ಹಾಡುವೆ’

g p basavaraju

ಜಿ.ಪಿ.ಬಸವರಾಜು

ವಾರವಿಡೀ ಮೈಸೂರಿನಲ್ಲಿ ಉತ್ಸವದ ರಂಗು. ಕಲಾಮಂದಿರದ ಆವರಣದಲ್ಲಿ ‘ಬಹುರೂಪಿ’ಯ ಅನಾವರಣ. ರಂಗಾಯಣದ ಸಂಕ್ರಾಂತಿಯ ಸಂಭ್ರಮಕ್ಕೆ ‘ಬಹುರೂಪಿ’ಯ ಮೆರುಗು. ಜನಪದ ಕಲೆಗಳು, ಬುಡಕಟ್ಟು ಸಂಸ್ಕೃತಿಯ ಪ್ರದರ್ಶನಗಳು, ಆಧುನಿಕ ರಂಗಭೂಮಿಯ ಪ್ರಯೋಗಗಳು, ಬೀದಿ ನಾಟಕಗಳು, ವಿಚಾರಗಳ ಚಿಂತನೆಯತ್ತ ಮುಖಮಾಡಿದ ಮಾತುಕತೆಗಳು. 600ಕ್ಕೂ ಹೆಚ್ಚು ಕಲಾವಿದರು; 12,000 ನೋಟಕರು; ಕಲಾಮಂದಿರದ ಆವರಣ ತುಂಬಿ ತುಳುಕುತ್ತಿತ್ತು. ನಾಲಗೆಗಳನ್ನು ಕೆಣಕುವ ತಿಂಡಿ ತಿನಿಸುಗಳು, ಅವುಗಳ ವಿಭಿನ್ನ ಶೈಲಿ, ಆರೋಗ್ಯದ ಬಗ್ಗೆ ಕಾಳಜಿ ಹುಟ್ಟಿಸುವ ದೇಸೀಯ ಅಡುಗೆಗಳು. ಇದಲ್ಲದೆ ಹಲ ಬಗೆಯ ವಸ್ತುಗಳ ಮಾರಾಟ ಮತ್ತು ಪ್ರದರ್ಶನ; ಪುಸ್ತಕಗಳೂ ಈ ಪ್ರದರ್ಶನದಲ್ಲಿದ್ದವು.

‘ಆನು ಒಲಿದಂತೆ ಹಾಡುವೆ’- ಇದು ಈ ಬಾರಿಯ ‘ಬಹುರೂಪಿ’ಯ ಮೊಳಗು ಸೊಲ್ಲು. ಕಲೆ, ಸಂಗೀತ, ನೃತ್ಯ, ನಾಟಕ, ಸಿನಿಮಾ ಹೀಗೆ ತನ್ನನ್ನು ತೆರೆದು ತೋರಿಸುವ ಎಲ ಕಲಾಪ್ರಕಾರಗಳು ಹುಟ್ಟಿಕೊಂಡದ್ದರ ಹಿಂದಿರುವ ಶಕ್ತಿಯೇ ‘ಆನು ಒಲಿದಂತೆ ಹಾಡುವೆ.’ ಬರಹಗಾರರಂತೂ ಈ ಉಸಿರನ್ನು ಕಡೆಗಣಿಸುವಂತೆಯೇ ಇಲ್ಲ. ಆನು ಒಲಿದಂತೆ ಹಾಡುವುದೇ ಎಲ್ಲ ಅಭಿವ್ಯಕ್ತಿಗಳ ಉಸಿರು. ಈ ಉಸಿರು ಇಲ್ಲದಿದ್ದರೆ ಅಲ್ಲಿ ಜೀವಂತಿಕೆ ಇರುವುದು ಸಾಧ್ಯವಿಲ್ಲ.
‘ಆನು ಒಲಿದಂತೆ ಹಾಡುವೆ’-ಇದು ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣ ಹೇಳಿದ ಮಾತು. ಒಲಿದಂತೆ ಹಾಡುವುದು ಸುಲಭವಲ್ಲ ಎಂಬ ಸತ್ಯ ಅವನಿಗೆ ತಿಳಿದಿತ್ತು. ಅವತ್ತಿನ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಂದರ್ಭಗಳು ಬಸವಣ್ಣ ಒಲಿದಂತೆ ಹಾಡುವುದನ್ನು ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ಬಸವಣ್ಣ ಹೇಳುತ್ತಾನೆ: ತಾಳಮಾನ ಸರಿವನರಿಯೆ/ ಓಜೆ ಬಜಾವಣೆಯ ಲೆಕ್ಕವನರಿಯೆ/ ಅಮೃತಗಣ ದೇವಗಣವನರಿಯೆ/ ಕೂಡಲ ಸಂಗಮದೇವಾ, ನಿನಗೆ ಕೇಡಿಲ್ಲವಾಗಿ/ ಆನು ಒಲಿದಂತೆ ಹಾಡುವೆ.

ಅರಿಯದ ಮಾತನ್ನು ಆಡಿದರೂ, ಬಸವಣ್ಣನ ‘ಹಾಡಿ’ನಲ್ಲಿ ಎಲ್ಲವನ್ನೂ ಧಿಕ್ಕರಿಸುವವನ ದಿಟ್ಟತನ ಇತ್ತು. ಬಸವಣ್ಣಿನಿಗೆ ‘ಹಾಡು’ ಅಸ್ತ್ರವಾಗಿತ್ತು. ಆಗಿನ ಧಾರ್ಮಿಕ ವ್ಯವಸ್ಥೆ ಎನ್ನುವುದು ಮನುಷ್ಯರನ್ನು ಮೇಲು ಕೀಳೆಂದು ವಿಂಗಡಿಸುವ ಜಾತಿ ವ್ಯವಸ್ಥೆಯಾಗಿತ್ತು. ಇಂಥ ಅಮಾನವೀಯ ವ್ಯವಸ್ಥೆಗೆ ಪೂರಕವಾಗಿ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳಿದ್ದವು. ಇದನ್ನೆಲ್ಲ ಧಿಕ್ಕರಿಸಿ, ಮನುಷ್ಯರನ್ನು ಸಮಾನವಾಗಿ ಕಾಣುವ, ಅವರ ಘನತೆಯನ್ನು ಎತ್ತಿ ಹಿಡಿಯುವ, ಹೊಸ ಸಮಾಜವನ್ನು ಕಟ್ಟುವ ಹೊಸ ವಿಚಾರ ಧಾರೆಗೆ, ಹೋರಾಟಕ್ಕೆ ಬಸವಣ್ಣ ತನ್ನ ಹಾಡನ್ನು ಒಗ್ಗಿಸಿದ್ದ; ಹೋರಾಟಕ್ಕೆ ಧುಮುಕಿದ್ದ. ಇಂಥ ಹೋರಾಟ ಅಂಜಿಕೆಯಿಂದ ಸಾಧ್ಯವಾಗುವುದಿಲ್ಲ ಎಂಬ ಅರಿವು ಅವನಿಗಿತ್ತು. ತನ್ನ ಒಳದನಿಯನ್ನು ಹೇಳುವುದಕ್ಕಾಗಿ ತನ್ನ ಪ್ರಾಣವನ್ನೂ ಒತ್ತೆಯಿಡಬೇಕಾಗಬಹುದು ಎಂಬ ಎಚ್ಚರವೂ ಅವನಲ್ಲಿತ್ತು. ಅವನಿಗೆ ತನ್ನ ಸಮಾಜ ಮುಖ್ಯವಾಗಿತ್ತು; ತನ್ನಂಥ ಇತರ ಜೀವಗಳು ಮುಖ್ಯವಾಗಿದ್ದವು; ತನ್ನ ಒಳದನಿ ಮುಖ್ಯವಾಗಿತ್ತು. ಸತ್ಯ ಮತ್ತು ದೇವರು (ಕೂಡಲಸಂಗಮದೇವ) ಬೇರೆ ಬೇರೆ ಅಲ್ಲ ಎಂದು ಅವನು ನಂಬಿದ್ದ. ‘ನಿನಗೆ ಕೇಡಿಲ್ಲವಾಗಿ’ ಅಂದರೆ ಸತ್ಯಕ್ಕೆ ಕೇಡಿಲ್ಲ ಎಂಬುದನ್ನು ಅರಿತಿದ್ದ ಬಸವಣ್ಣ, ‘ಆನು ಒಲಿದಂತೆ ಹಾಡುವೆ’ ಎಂದು ಸಿದ್ಧವಾಗಿದ್ದ. ಆದ್ದರಿಂದಲೇ ಅವನು ತನ್ನ ಹೋರಾಟಕ್ಕೆ, ತನ್ನ ‘ಹಾಡಿಗೆ’, ಸತ್ಯಕ್ಕೆ ತನ್ನ ಜೀವವನ್ನೇ ಸಮರ್ಪಿಸಿಕೊಂಡ.

‘ಆನು ಒಲಿದಂತೆ ಹಾಡುವೆ’ ಎನ್ನುವುದು ಸತ್ಯವನ್ನೇ ಹೇಳುತ್ತೇನೆ ಎನ್ನುವುದರ ಇನ್ನೊಂದು ರೂಪ ಅಷ್ಟೆ. ಒಳದನಿಯ ಮಾತು ಎಂಬುದು ಕೂಡಾ ಸತ್ಯದ ದನಿ; ಬೆಳಕಿನ ದನಿ. ಏಸು ತನ್ನ ಒಳದನಿಯ ಮಾತನ್ನು ಕೇಳಿಸಿಕೊಂಡ; ಅದನ್ನೇ ಜಗತ್ತಿಗೆ ಹೇಳಿದ. ಬುದ್ಧನ ‘ಜ್ಞಾನೋದಯ’ದ ಹಿಂದೆ ಒಳಮಾತನ್ನು ಕೇಳಿಸಿಕೊಳ್ಳುವ ಧ್ಯಾನದ ಸೂತ್ರವಿದೆ. ಗಾಂಧೀ, ಅಂಬೇಡ್ಕರ್ ಅವರ ಹಾದಿಯೂ ಇದೇ ಆಗಿತ್ತು. ಹೀಗೆ ಹಟತೊಟ್ಟು, ದಿಟ್ಟವಾಗಿ, ತಮ್ಮ ಉಸಿರನ್ನೇ ಪಣವಾಗಿಟ್ಟು ‘ಆನು ಒಲಿದಂತೆ ಹಾಡಿದವರೆ’ಲ್ಲ ಮುಳ್ಳಿನ ಹಾದಿಯಲ್ಲೇ ನಡೆದಿದ್ದಾರೆ. ಕೆಲವರು ಪ್ರಾಣವನ್ನೇ ತೆತ್ತಿದ್ದಾರೆ. ಏಸು ಶಿಲುಬೆಯನ್ನು ಏರಿದ. ಗಾಂಧೀಜಿ ಗುಂಡಿಗೆ ಎದೆಕೊಟ್ಟರು. ಬಸವನ ಹೋರಾಟ, ಮೂಲಭೂತವಾದಿಗಳ ಕತ್ತಿಯಂಚಿನ ದಾರಿಯಲ್ಲಿ ಕೊನೆಯಾಯಿತು. ಮನುಷ್ಯ ಚರಿತ್ರೆಯ ಉದ್ದಕ್ಕೂ ಇಂಥ ಹಲವಾರು ಉದಾಹರಣೆಗಳು ಸಿಗುತ್ತವೆ. ವರ್ತಮಾನದ ಸಂದರ್ಭದಲ್ಲಿಯೂ ‘ಆನು ಒಲಿದಂತೆ ಹಾಡಿದವರನ್ನು’ ಮುಗಿಸಲಾಗಿದೆ. ಡಾ.ಎಂ.ಎಂ.ಕಲ್ಬುರ್ಗಿ ಕೇವಲ ಇತ್ತೀಚಿನ ಉದಾಹರಣೆಯಷ್ಟೆ. ‘ಆನು ಒಲಿದಂತೆ ಹಾಡುವುದು’ ಸಾವಿನ ಅಪ್ಪುಗೆಯಾಗಿ ಪರಿಣಮಿಸಬಹುದಾದ ಸನ್ನಿವೇಶದಲ್ಲಿ ಇವತ್ತು ಭಾರತ ಮಾತ್ರವಲ್ಲ, ಇಡೀ ಜಗತ್ತೇ ಬದುಕುತ್ತಿದೆ.

ಇಷ್ಟಾದರೂ, ಬರಹಗಾರರು ಮತ್ತು ಕಲಾವಿದರಿಗೆ ಹಾಗೂ ಚಿಂತಕರಿಗೆ ‘ಆನು ಒಲಿದಂತೆ ಹಾಡುವು’ದರ ಸೆಳೆತ ಇದ್ದೇ ಇರುತ್ತದೆ. ಹೊರಗಿನ ಶಕ್ತಿಗಳ ಜೊತೆ ಸೆಣಸುತ್ತಲೇ ತನ್ನ ಒಳಗಿನ ದನಿಯನ್ನು, ಕಾಪಾಡಿಕೊಳ್ಳುವ ಸಮಾಜಕ್ಕೆ ಮುಟ್ಟಿಸುವ ಹಂಬಲದಲ್ಲಿ ಹಲಬಗೆಯ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ನೇರವಾಗಿ ಸತ್ಯವನ್ನು ಹೇಳಿದರೆ ಗುಂಡುಗಳು ತಮ್ಮ ಎದೆಗೇ ಬಡಿಯುತ್ತವೆ ಎಂಬ ನಿಜಸ್ಥಿತಿ ಇದ್ದಾಗ, ಹತ್ತಾರು ಬಗೆಯಲ್ಲಿ ಆ ಮಾತನ್ನು ಹೇಳಲು ಕಲಾವಿದ ನೋಡುತ್ತಾನೆ. ಸಂಕೇತ, ಪ್ರತಿಮೆ, ರೂಪಕ, ಭ್ರಾಮಕ ಇತ್ಯಾದಿ ಹುಟ್ಟಿಕೊಂಡದ್ದೇ ಈ ಕಾರಣದಿಂದ ಇರಬೇಕು. ಹೇಳುವ ಹೊಸ ವಿಧಾನದ ಹುಡುಕಾಟದ ಹಿಂದೆಯೂ ಇಂಥ ಒತ್ತಡಗಳು ಇರುತ್ತವೆ. ಇದು ನಿರಂತರವಾದದ್ದು. ಚಾಪ್ಲಿನ್ನಂಥ ಮಹಾಕಲಾವಿದ ನಗಿಸುತ್ತ ನಗಿಸುತ್ತಲೇ ಹಿಟ್ಲರ್ ನಂಥ ಸರ್ವಾಧಿಕಾರಿಯನ್ನು ಗೇಲಿಮಾಡಿದ. ಹಿಟ್ಲರ್ ನ ಮನುಷ್ಯ ವಿರೋಧೀ ಧೋರಣೆಯನ್ನು, ಅದರ ಕರಾಳ ಮುಖವನ್ನು ಸಮಾಜಕ್ಕೆ ತೋರಿಸಿದ. ಸಂಗೀತಗಾರರ ಹಾಡಿನ ಹಿಂದೆ ಕೇವಲ ‘ಇಂಪು’ ಮಾತ್ರ ಇರುವುದಿಲ್ಲ; ನೋವೂ ಇರಬಹುದು; ಪ್ರತಿಭಟನೆಯ ಧ್ವನಿಯೂ ಇರಬಹುದು. ಅದನ್ನು ಕೇಳಿಸಿಕೊಳ್ಳುವವರು ಎದೆ ತೆರೆದು ಕೇಳಿಸಿಕೊಂಡಾಗ ಈ ಭಾವಗಳು ಅರ್ಥವಾಗುತ್ತದೆ.

ಅಷ್ಟೇಕೆ, ಸಮುದಾಯದ ಮುಂದೆ ನಿಂತು ಮಾತನಾಡುವ ರಾಜಕಾರಣಿಗೂ ಈ ಒಳದನಿಯ ಅರಿವು ಇರಬೇಕು. ಇಲ್ಲವಾದರೆ ಮಾತು ರಾಜಕೀಯ ಬೊಗಳೆಯಾಗುತ್ತದೆ. ಹಸುವಿನ ಚರ್ಮ ಹೊದ್ದುಕೊಂಡ ಹುಲಿಯ ಮಾತಾಗುತ್ತದೆ. ಹಸು ಹಸುವಾಗಿ, ಹುಲಿ ಹುಲಿಯಾಗಿಯೇ ನುಡಿಯಬೇಕು. ನುಡಿಯನ್ನು ಒಳದನಿ ನುಡಿಸುತ್ತಿರಬೇಕು. ‘ಬರಿದೆ ಬಾರಿಸದಿರು ತಂಬೂರಿ’ ಎಂದು ಶರೀಫರು ಹೇಳಿದ್ದರ ಹಿಂದೆ ಈ ಇಂಗಿತ ಇತ್ತು.

ಒಳದನಿಯನ್ನು ಹತ್ತಿಕ್ಕಿ ‘ಹಾಡು’ವವನು ಅಧಿಕಾರದಲ್ಲಿರುವವರನ್ನು ಮೆಚ್ಚಿಸಬಹುದು; ಹುಸಿ ಕೀರ್ತಿ ಖಿಲ್ಲತ್ತುಗಳನ್ನು ಪಡೆಯಬಹುದು. ಆಸ್ಥಾನಗಳನ್ನು ಅಲಂಕರಿಸಬಹುದು. ಆದರೆ ಅವನಿಗೆ ಸತ್ಯ ಹೇಳುವವನಿಗಿರುವ ನೆಮ್ಮದಿ, ದಿಟ್ಟತನ ಇರುವುದಿಲ್ಲ. ಅವನ ಬದುಕಿಗೊಂದು ಹೊಳಪೂ ಬರುವುದಿಲ್ಲ.
ರಂಗಾಯಣದಲ್ಲಿನ ನಾಟಕಗಳಿಗೆ, ಹಾಡು ಕುಣಿತಗಳಿಗೆ, ವಿಚಾರಗಳಿಗೆ ಮುಗೆಬೀಳುತ್ತಿದ್ದ ಜನರನ್ನು ನೋಡಿದಾಗ ಒಂದು ಭರವಸೆಯೂ ಮೂಡಿತು: ಒಳದನಿಯನ್ನು ಕೇಳಿಸಿಕೊಳ್ಳುವ ಸಮಾಜ ನಮ್ಮಲ್ಲಿನ್ನೂ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಕೇಳಿಸಿಕೊಳ್ಳುವುದು ಕೂಡಾ ಒಳದನಿಗೆ ಕೊಡುವ ಗೌರವ. ಇದು ತಿಳಿದಾಗ ಹಾಡುವವರಿಗೆ ಉಮೇದು ಉಕ್ಕುತ್ತದೆ; ಅವರು ‘ಆನು ಒಲಿದಂತೆ ಹಾಡಲು’ ಮುಂದಾಗುತ್ತಾರೆ.

ಬಣ್ಣಬಣ್ಣದ ತಮ್ಮ ಸಹಜ ಉಡುಗೆಯಲ್ಲಿ ಕಲಾರಸಿಕರ ಕಣ್ಣುತುಂಬಿದ ಬುಡಕಟ್ಟು ಜನ, ಹೆಜ್ಜೆ, ಲಯ, ಗತ್ತುಗಳಲ್ಲಿ ಕಲಾಮಂದಿರದ ಧೂಳನ್ನೆಬ್ಬಿಸಿದ ನಮ್ಮ ಜಾನಪದರು, ಸಮಾಜದ ಹಿತಕ್ಕಾಗಿ ಬೀದಿಯಲ್ಲೇ ನಿಂತು ಜನರೊಂದಿಗೆ ಮಾತನಾಡಿದ ಬೀದಿ ನಾಟಕದ ಮಂದಿ-ಇವರೆಲ್ಲ ತಮ್ಮ ಒಳದನಿಯನ್ನು ನೆಚ್ಚಿಕೊಂಡವರೇ.

ಈ ಹಾಡಿನ ಮಟ್ಟುಗಳನ್ನು, ಕುಣಿತದ ಹೆಜ್ಜೆಗಳನ್ನು, ನಾದದ ಗೆಜ್ಜೆಗಳನ್ನು ಹತ್ತಿಕ್ಕುವ ಅಧಿಕಾರ ಯಾರಿಗೂ ಇರುವುದಿಲ್ಲ. ಯಾವುದಾದರೂ ದುಷ್ಟಶಕ್ತಿ ತಾತ್ಕಾಲಿಕವಾಗಿ ಹತ್ತಿಕ್ಕಿದರೂ, ಅವು ಮತ್ತೆ ಮತ್ತೆ ಮೈಮುರಿದು ಮೇಲೇಳುತ್ತವೆ. ಮತ್ತೆ ಹೊಸ ಲಯದಲ್ಲಿ ಹಾಡುತ್ತವೆ; ಹೊಸ ಉಮೇದಿನಲ್ಲಿ ಕುಣಿಯುತ್ತವೆ. ಹೊಸ ನಾದ ಕೇಳುತ್ತಲೇ ಇರುತ್ತದೆ. ಈ ನಾದವೇ ಸಮಾಜಕ್ಕೆ ಚೈತನ್ಯವನ್ನು ತುಂಬಿ, ಸಮುದಾಯಗಳನ್ನು ಮುನ್ನಡೆಸುತ್ತದೆ.

‍ಲೇಖಕರು Admin

January 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: