ರೈಲು ಪ್ರಯಾಣದ ಬಗ್ಗೆ ರೈಲು ಬಿಡೋಕ್ಕಾಗಲ್ಲ!

ಆಹಾ..ರೈಲು ಪ್ರಯಾಣ!

ಎಸ್.ಜಿ.ಶಿವಶಂಕರ್

 

ಸಾಮಾನ್ಯವಾಗಿ ಬೆಂಗಳೂರಿಗೆ ಹೋಗುವುದನ್ನು ಯಾವುದಾದರೊಂದು ಕಾರಣಕ್ಕೆ ತಪ್ಪಿಸಿಕ್ಕೊಳ್ಳ್ಳುವುದು ನನ್ನ ಸ್ವಭಾವ. ಬೆಂಗಳೂರೆಂದರೆ ನನಗೆ ಒಂತರಾ ಅಲರ್ಜಿ! ಅಲ್ಲಿಗೆ ಕಾಲಿಟ್ಟ ನಿಮಿಷದಿಂದ ಎಷ್ಟು ಹೊತ್ತಿಗೆ ಮೈಸೂರಿಗೆ ವಾಪಸ್ಸಾಗುವೆನೋ ಎಂದು ಹಪಹಪಿಸುವುದು ನನ್ನ ಸ್ವಭಾವ. ಭಾರತದ ಉಳಿದ ಭಾಗದ ಜನರಿಗೆ ಬೆಂಗಳೂರೆಂದರೆ ಸ್ವರ್ಗವಂತೆ! ನನಗೋ ಅದು ನರಕದಂತೆ ಕಾಣುವುದು. ಲೋಕೋಭಿನ್ನರುಚಿ ಅಲ್ಲವೆ..? ಒಬ್ಬರ ಪರಮಾನ್ನ ಇನ್ನೊಬ್ಬರಿಗೆ ಪಾಷಾಣ ಎನ್ನುವ ಇಂಗ್ಲಿಷ್ ಮಾತನ್ನು ನೆನಸಿಕ್ಕೊಳ್ಳಿ.

ಬೆಂಗಳೂರಿನ ರಸ್ತೆಗಳಲ್ಲಿ ನಡೆಯುವಾಗ ನಾನು ಜೀವ ಕೈಯಲ್ಲಿ ಹಿಡಿದಿರುತ್ತೇನೆ! ಕಾರಣ ಕೇಳುತ್ತೀರಾ..? ಮೊದಲಿಗೆ ಅಲ್ಲಿ, ಅಂದರೆ ಬೆಂಗಳೂರಿನಲ್ಲಿ ಜನರು ನಡೆಯಲು ಪುಟ್ಪಾತೇ ಇಲ್ಲ! ಪುಟ್ಪಾತುಗಳನ್ನು ರಸ್ತೆಗಳು ನುಂಗಿವೆ! ಇದು ರಸ್ತೆ ಅಗಲೀಕರಣದ ಯೋಜನೆಯಿಂದಾದ ಸ್ಥಿತಿ! ಅಗಲಿಸಿದ ರಸ್ತೆಗಳೂ ಸಹ ಅಲ್ಲಿನ ವಾಹನಗಳಿಗೆ ಸಾಲದು. ರಸ್ತೆಯಲ್ಲಿ ತುಂಬಿ ತುಳುಕುವ ಆ ವಾಹನಗಳ ನಡುವೆ ನಡೆಯುವುದು ಹುಡುಗಾಟವೆ..? ಯಾವ ಕ್ಷಣ ಯಾವ ಬಸ್ಸು, ಕಾರು, ಆಟೋ ಇಲ್ಲವೇ ಮೋಟಾರುಬೈಕೋ ಮೇಲೆರಗುವುದೋ ಎಂಬ ಭೀತಿ ಎಂತಾ ಗಟ್ಟಿಗರನ್ನೂ ಕಾಡುತ್ತದೆ. ಪಾದಚಾರಿಗಳಿಗೆ ನಡೆಯಲು ಜಾಗವೇ ಇಲ್ಲದಿದ್ದರೆ ಅವರು ನಡೆಯುವುದಾದರೂ ಹೇಗೆ..? ನನ್ನಂತ ಕಾರಿಲ್ಲದ ಕಾಲಿಗರು ಎಲ್ಲಿ ಕಾಲಿಡಬೇಕು..? ಚಕ್ರವ್ಯೂಹದಂತೆ ಚಲಿಸುವ ವಾಹನಗಳ ನಡುವೆ ಹೇಗೋ ನುಸುಳಿ ನಡೆಯುವಾಗ ಭೀಕರವಾಗಿ ಹಾರನ್ ಮಾಡುವ ದ್ವಿಚಕ್ರಿಗರು, ತ್ರಿಚಕ್ರಿಗಳು, ಬಿಎಮ್ಟಿಸಿ ಬಸ್ಸುಗಳು, ಲಾರಿಯಂತಿರುವ ಇನ್ನೋವಾಗಳು, ಜೈಲೋಗಳು ಕೂದಲೆಳೆಯ ಅಂತರದಲ್ಲಿ ಪಕ್ಕದಲ್ಲೇ ಹಾದು ಹೋದರೆ ಜೀವ ದೇಹದಲ್ಲಿ ಉಳಿಯುವುದೆ..? ನೀವೇ ಹೇಳಿ. ಈ ಕಾರಣದಿಂದ ಬೆಂಗಳೂರಿನ ರಸ್ತೆಗಳು ನನ್ನಲ್ಲಿ ಅತೀವ ಭಯವನ್ನು ಹುಟ್ಟಿಸುತ್ತವೆ. ಬೆಂಗಳೂರಿಗೆ ಹೋಗುವುದನ್ನು ಎಷ್ಟು ಸಲ ತಪ್ಪಿಸಿಕೊಂಡರೂ ಒಂದಲ್ಲ ಒಂದು ಸಲ ಹೋಗುವುದು ಅನಿವಾರ್ಯವಾಗಿಬಡುತ್ತದೆ! ಮೊನ್ನೆ ಹೀಗೇ ಆಯಿತು. ಸಂಬಂಧಿಯೊಬ್ಬರ ಮನೆಯಲ್ಲೊಂದು ಶುಭ ಕಾರ್ಯ, ಹೋಗುವುದು ಅನಿವಾರ್ಯ! ತಪ್ಪಿಸಿದರೆ ಅಪವಾದ!

ಮೈಸೂರಿನಿಂದ ಹೊರಡುವಾಗಲೇ ಜಿಜ್ಞಾಸೆ ಶುರುವಾಗಿತ್ತು! ರೈಲು ಹಿಡಿಯಲೋ ಇಲ್ಲಾ ಬಸ್ಸು ಹಿಡಿಯಲೋ..? ರೈಲಿನಲ್ಲಿ ವಿಪರೀತ ಜನಸಂದಳಿ! ಬಸ್ಸಿನಲ್ಲಿ ವಿಪರೀತ ರೇಟು! ಇವೆರಡರ ನಡುವಿನ ದರದಲ್ಲಿ ಬೇರಿನ್ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ! ಇವರೆಡರಲ್ಲಿ ಒಂದನ್ನು ಆರಿಸಿಕ್ಕೊಳ್ಳಬೇಕಾದದ್ದು ಅನಿವಾರ್ಯವಾಗಿತ್ತು! ಬಸ್ಸಿನಲ್ಲಿ ಹೋದರೆ ಬ್ಯಾಟರಾಯನಪುರದ ಸ್ಯಾಟಲೈಟ್ ನಿಲ್ಧಾಣದಲ್ಲಿ ಇಳಿದು ‘ಬ್ಯಾ’ ಎಂದು ಕೂಗುವ ಕುರಿಯಾಗಬೇಕು! ಕಾರಣ ಸಿಟಿ ಬಸ್ಸು ಹಿಡಿಯಲು ಮತ್ತೆ ಮೆಜೆಸ್ಟಿಕ್ಕಿಗೆ ಹೋಗಲೇಬೇಕು. ಅದಕ್ಕೆ ಮತ್ತೆ ಬಸ್ಸು ಇಲ್ಲವೆ ಆಟೋ ಹಿಡಿಯಬೇಕು! ರೈಲು ಎರಡು ಕಾರಣಕ್ಕೆ ಪ್ರಿಯವಾಗಿ ಕಂಡಿತು. ಒಂದು ಬಸ್ಸಿನ ಚಾರ್ಜ್ ಗೆ ಹೋಲಿಸಿದರೆ ಅರ್ಧದಷ್ಟು ಕಡಿಮೆ! ಎರಡು ಅದು ಸೀದಾ ಮೆಜೆಸ್ಟಿಕ್ಕಿಗೇ ಹೋಗಿ ನಿಲ್ಲುತ್ತದೆ. ಮೈಸೂರಿನಲ್ಲಿ ರೈಲು ಹತ್ತಿಸಲು ಮಗ ಬಂದಿದ್ದ ! ರೈಲು ನಿಲ್ದಾಣದ ಮುಂದೆ ನನ್ನನ್ನು ಇಳಿಸಿ ಬೈಬೈ ಹೇಳಿ, ‘ಹುಷಾರು’ ಹೋದ. ನಿಲ್ದಾಣದ ಕಡೆ ತಿರುಗಿದಾಗ ಬೆಚ್ಚಿಬೀಳುವಂತ ದೃಶ್ಯ ಕಂಡತು. ಅರ್ಧ ಕಿಲೋಮೀಟರು ಉದ್ದದ ಕ್ಯೂನಲ್ಲಿ ಟಿಕೇಟು ಪಡೆಯಲು ಜನರು ನಿಂತಿದ್ದರು. ಇಂದು ರೈಲುಪ್ರಯಾಣ ನನ್ನ ಹಣೆಯಲ್ಲಿ ಬರೆದಿಲ್ಲವೆನಿಸಿತು. ಆ ಕ್ಯೂನಲ್ಲಿ ನಿಂತು ಟಕೇಟು ಪಡೆಯುವುದು ಅಸಾಧ್ಯ ಎಂದು ಎಂತ ಮಂಕನಾದರೂ ಹೇಳಲು ಸಾಧ್ಯವಿತ್ತು! ಯಾರೋ ಕ್ಯೂನಲ್ಲಿ ನಿಂತಿದ್ದವರು ನನ್ನ ಹೆಸರು ಹಿಡಿದು ಕೂಗಿದರು. ತಿರುಗಿ ನೋಡಿದರೆ ನನ್ನ ಶಿಷ್ಯ ಕಲ್ಲೇಶಿ!

ಎಷ್ಟು ಟಿಕೇಟು ಸಾರ್..? ಎಂದು ಕೂಗಿ ಕೇಳಿದ.

ರೀ..ಊರವರ ಟಿಕೇಟೆಲ್ಲಾ ತಗೊಳ್ಳೋ ಹಾಗಿದ್ರೆ ಕ್ಯೂನಿಂದ ಆಚೆ ಹೋಗಿ ನಾನು ಕಲ್ಲೇಶಿಗೆ ಉತ್ತರ ಹೇಳುವ ಮುನ್ನವೇ ಕಲ್ಲೇಶಿ ಹಿಂದಿದ್ದವರು ದಭಾಯಿಸಿ ಕಲ್ಲೇಶಿಯ ಬಾಯಿ ಮುಚ್ಚಿಸಿದರು. ಅಲ್ಲೊಂದು ಸಣ್ಣ ಯುದ್ಧವೇ ನಡೆಯಿತು! ಕಲ್ಲೇಶಿ ಕಡಿಮೆ ಆಸಾಮಿಯೇನಲ್ಲ! ಎಂ.ಬಿ.ಯೆ ಎಂಬ ಡಿಗ್ರಿಯನ್ನು ಓದದೇ ಪಾಸು ಮಾಡಿದ ಚಾಣಾಕ್ಷ! ಅದು ಹೇಗೆಂದು ಕೇಳಬೇಡಿ ಅದನ್ನು ಹೇಳಬೇಕೆಂದರೆ ಅದೇ ಒಂದು ಲೇಖನವಾಗುತ್ತದೆ. ಕಲ್ಲೇಶಿ ಕಣ್ಸನ್ನೆಯಲ್ಲೇ ಟಿಕೇಟು ತಗೋತೀನಿ ನೀವು ಸುಮ್ಮನಿರಿ ಎಂದು ಹೇಳಿದಂತಾಯಿತು. ಏನಾದರಾಗಲೀ..ರೈಲು ಸಿಗದಿದ್ದರೆ ಬಸ್ ಇದೆಯಲ್ಲ, ಕಲ್ಲೇಶಿ ಏನ್ಮಾಡ್ತಾನೋ ನೋಡೋಣ ಎಂದು ಸುಮ್ಮನೆ ನಿಂತೆ. ಹತ್ತು ನಿಮಿಷದಲ್ಲಿ ಕಲ್ಲೇಶಿ ವಿಜಯದ ನಗೆ ಬೀರುತ್ತಾ ಬಂದು ನನ್ನ ಕೈಗೆ ಟಿಕೇಟಿತ್ತ. ಹಣ ಕೊಡಲು ಹೋದಾಗ ವಿನಯದಿಂದ ತಿರಸ್ಕರಿಸಿದ.

ಇದೆಲ್ಲಾ ನಂಗಾಗೊಲ್ಲ ಕಲ್ಲೇಶಿ, ಟಿಕೇಟಿನ ಹಣ ತಗೊಳ್ಳದೆ ಇದ್ದರೆ ಇದೋ..ನಿನ್ನ ಟಿಕೇಟು, ನಾನು ಮನೆಗೆ ಹೋಗ್ತೀನಿ ಎಂದು ಬೆದರಿಸಿ ಅವನಿಗೆ ಹಣವಿತ್ತೆ. ಕಲ್ಲೇಶಿ ನನ್ನ ಆಗ್ರಹಕ್ಕೆ ಮಣಿದು ಹಣ ತೆಗೆದುಕೊಂಡ. ನನ್ನನ್ನು ಕರೆದುಕೊಂಡು ಹೋಗಿ ರೈಲು ಹತ್ತಿಸಿದ. ಒಳಗೆ ಅವನ ಚಿಕ್ಕಪ್ಪನ ಮಗ ಸೀಟು ಹಿಡಿದಿದ್ದು, ಅದನ್ನು ಉಳಿಸಿಕ್ಕೊಳ್ಳಲು ಇತರರಿಂದ ಉಗಿಸಿಕೊಳ್ಳುತ್ತಲ್ಲೇ ಹೋರಾಟದಲ್ಲಿ ತೊಡಗಿದ್ದು, ನಾವು ಬಂದಿದ್ದಕ್ಕೆ ನಿಟ್ಟುಸಿರುಬಿಟ್ಟು ನಮ್ಮನ್ನು ಕೂರಿಸಿದ. ಅಂತೂ ಟಿಕೇಟೂ ಸಿಕ್ಕಿತ್ತು, ಕೂರಲು ಜಾಗವೂ ಸಿಕ್ಕಿತ್ತು. ರೈಲು ಹತ್ತಿದ ನನಗೆ ದೊಡ್ಡ ಅಚ್ಚರಿ ಕಾದಿತ್ತು. ಜನರಿಂದ ತುಂಬಿದ ಬೋಗಿಯ ಹೊಟ್ಟೆ ಬಿರಿಯುವಂತಾಗಿತ್ತು. ಒಂದೇ ಒಂದು ಸಣ್ಣ ಸೊಳ್ಳೆ ಕೂಡ ನುಸುಳದಷ್ಟು ಜನರು! ಅಷ್ಟೂ ಜನರಿದ್ದ ರೈಲು ಕೊನೆಗೆ ಹೊರಟಿತು. ನಿಂತಿದ್ದವರು ಕೂತಿದ್ದ ನಮ್ಮನ್ನು ಅಸೂಯೆಯಿಂದ ನೋಡುತ್ತಿದ್ದರು. ಮನಸ್ಸಿನಲ್ಲಿ ಅದೆಷ್ಟು ಷಾಪ ಹಾಕುತ್ತಿದ್ದರೋ ಗೊತ್ತಿಲ್ಲ_ಗೊತ್ತಾಗುವಂತೆಯೂ ಇರಲಿಲ್ಲ ಪುಣ್ಯವಶಾತ್!

ರೈಲು ಶ್ರೀರಂಗಪಟ್ಟಣದಲ್ಲಿ ನಿಂತಿತು. ಅಲ್ಲೂ ಹತ್ತಿಪ್ಪತ್ತು ಜನರು ಹತ್ತಿದರು. ಅವರ ಜೊತೆಗೆ ತಿಂಡಿ ಮಾರುವವರು, ಕಾಫಿ ಮತ್ತು ಮದ್ದೂರು ವಡೆಯವರೂ ಹತ್ತಿದರು. ಒಬ್ಬೊರಾದರೂ ಇಳಿಯಲಿಲ್ಲ! ಎಲಾ ಇನ್ನೆಷ್ಟು ಜನರನ್ನು ಈ ರೈಲು ತುಂಬಿಕ್ಕೊಳ್ಳಲು ಸಾಧ್ಯ ಎಂದು ಅಚ್ಚರಿಯಾಯಿತು. ‘ಇಡ್ಲಿ, ಮಸಾಲೆ ದೋಸೆ, ಕಾಪಿ’ ಎಂದು ಕೂಗುತ್ತಾ ಒಂದು ಬ್ಯಾಗು ಮತ್ತು ಕೈಲೊಂದು ಕೆಟಲ್ ಹಿಡಿದ ಐದಾರು ಜನರು, ಅಲ್ಲಿನ ಜನಸಂದಣಿಯ ನಡುವೆಯೂ ತೂರುತ್ತಾ, ತಮ್ಮ ವ್ಯಾಪಾರವನ್ನು ಘನವಾಗಿಯೇ ಮಾಡುತ್ತಾ ಮುಂದೆ ಹೋಗುವುದು ನನಗೆ ಪ್ರಪಂಚದ ಅಚ್ಚರಿಗಳಲ್ಲಿ ಒಂದು ಎನ್ನಿಸಿತು. ಜಾಗವೇ ಇಲ್ಲದ ಕಡೆ ಇವರು ವ್ಯಾಪಾರ ಮಾಡುವುದು, ತಮ್ಮ ಕೆಟಲನ್ನೂ ಸಾಗಿಸಿವುದು, ಗಿರಾಕಿಗಳಿಗೆ ಕೆಟಲ್ಲಿನಿಂದ ಕಾಫಿ ಸುರಿದು ಕೊಡುವುದು ಇವೆಲ್ಲಾ ಪವಾಡದಂತೆ ನನ್ನ ಕಣ್ಣಿಗೆ ಕಾಣುತ್ತಿತ್ತು. ನನಗೆ ಸೀಟಿನ ಕೊನೆಯಲ್ಲಿ ಜಾಗ ಸಿಕ್ಕಿತ್ತು. ಜನರು ಓಡಾಡಬೇಕಾದ ಜಾಗದಲ್ಲಿ ನಿಂತಿದ್ದವರು ನನ್ನ ಮೇಲೆ ತಮ್ಮ ಭಾರವನ್ನು ಅರ್ಧದಷ್ಟು ಹೊರಿಸಿದ್ದರು. ಮೊದಲೆ ನಿಲ್ಲಲು ಜಾಗವಿಲ್ಲ, ಇನ್ನು ಸರಿಯಾಗಿ ನಿಲ್ಲಿ ಎಂದರೆ ಆ ಮಹಾನುಭಾವರು ನನ್ನ ಮೇಲೆ ಹರಿಹಾಯುವುದರಲ್ಲಿ ಅಚ್ಚರಿಯಿಲ್ಲ ಎನ್ನಿಸಿತು. ಇಡ್ಲಿ, ವಡೆಯವರು ಬಂದಾಗ ಆ ಮಹಾಶಯರು ತಮ್ಮ ಪೃಷ್ಠರಿಂದ ನನ್ನನ್ನು ತಿವಿಯುತ್ತಿದ್ದರು. ಇವಲ್ಲವನ್ನೂ ಸಹಿಸುತ್ತಾ ಏನೂ ಆಗದವನಂತೆ ನಟಿಸುತ್ತಾ ಕೂರುವುದು ಸುಲಬದ ಕೆಲಸವಲ್ಲ ಎನ್ನುವುದು ಅರಿವಾಯಿತು. ಬೇರೆ ದಾರಿಯಿಲ್ಲದೆ ಪ್ರಯಾಣವನ್ನು ಕೈಗೊಂಡಿದ್ದಕ್ಕೆ ನನ್ನನ್ನು ನಾನೇ ಶಪಿಸಿಕೊಂಡೆ!

ಈ ಎಲ್ಲಾ ಸುಖಗಳ ನಡುವೆ ಮಂಡ್ಯ ಬಂತು! ಟ್ರೈನು ನಿಂತಿತು. ಅಲ್ಲಿಯೂ ಯಾರೂ ಇಳಿಯದೆ ಕನಿಷ್ಟ ನೂರು ಜನರಾದರೂ ಹತ್ತಿದರು. ಮೈಸೂರಿನಿಂದ ಬೆಂಗಳೂರಿಗೆ ಹೊರಡುವಾಗ ಕಾಲೇಜಿನ ಸಹೋದ್ಯೋಗಿಗಳು ಎಚ್ಚರಿಸಿದ್ದರು. ಬೆಂಗ್ಳೂರಲ್ಲಿ ‘ಡೆಂಘೀ ಜ್ವರ ಇದೆ, ಅದು ಸೊಳ್ಳೆಯಿಂದ ಬರುತ್ತೆ ಹುಷಾರು’ ಎಂದಿದ್ದರು. ಟ್ರೈನಿನಲ್ಲಿ ಪ್ರಯಾಣಿಸುವವರನ್ನು ನೋಡಿದರೆ ಸೊಳ್ಳೆಗಳಿಗೆ ಜಾಗ ಇರಲು ಸಾಧ್ಯವೇ ಇರಲಿಲ್ಲ! ಜನರಿಗೇ ಅವಕಾಶವಿಲ್ಲದಿರುವಾಗ ಇನ್ನು ಡೆಂಘೀ ಹರಡುವ ಸೊಳ್ಳೆಗೆಲ್ಲಿದೆ ಅವಕಾಶ ಎಂಬ ಪ್ರಶ್ನೆ ಮೂಡಿತು. ಮೈಸೂರಿನಿಂದ ಹೊರಟ ಟ್ರೈನಿಗೆ ಪ್ರತಿ ಸ್ಟೇಷನ್ನಿನಲ್ಲೂ ಜನ ಒಂದೇ ಸಮನೆ ಹತ್ತುತ್ತಲೇ ಇದ್ದರು. ಎಲ್ಲರ ಗುರಿ ಒಂದೇ..! ಅದೇ ಬೆಂಗಳೂರು! ಅತಿ ವೇಗವಾಗಿ ಬೆಳೆಯುತ್ತಿರುವ ನಗರ! ಸಮಸ್ಯೆಗಳ ಅಗರ! ಸಾಗರದೋಪಾದಿಯಲ್ಲಿ ಜನರನ್ನು ಹೊಂದಿರುವ ಬೃಹತ್ ನಗರ!

ಬೆಂಗಳೂರಿನ ರೈಲು ಪ್ರಯಾಣವನ್ನು ವರ್ಣಿಸಲು ಕನಿಷ್ಟ ಹತ್ತು ಪುಟಗಳಾದರೂ ಬೇಕಾಗುತ್ತದೆ. ನೀವು ಹೆದರಬೇಕಾಗಿಲ್ಲ, ಅದೆಲ್ಲವನ್ನೂ ಒಂದೆರಡು ಪ್ಯಾರಾಗಳಲ್ಲಿ ಹೇಳುತ್ತೇನೆ. ರೈಲಿನ ಪ್ರಯಾಣ ದರ ಕೆಸ್ಸಾರ್ಟಿಸಿ ದರಕ್ಕೆ ಹೋಲಿಸಿದರೆ ಅರ್ಧಕ್ಕಿಂತಲೂ ಕಮ್ಮಿ. ಈ ಕಾರಣದಿಂದಲೂ ಮತ್ತು ರೈಲು ನಮ್ಮನ್ನು ಮೆಜಸ್ಟಿಕ್ಕಿನಲ್ಲಿ ಇಳಿಸುವುದರಿಂದ ಇನ್ನಷ್ಟು ಅನುಕೂಲ. ಈ ಎರಡು ಕಾರಣಗಳಿಂದ ಅತಿ ಹೆಚ್ಚಿನ ಜನ ಉದ್ಯೋಗಕ್ಕಾಗಿ ಪ್ರತಿದಿನ ಮೈಸೂರು, ಮಂಡ್ಯ, ಮದ್ದೂರು, ಚೆನ್ನಪಟ್ಟಣ, ರಾಮನಗರ ಮತ್ತು ಬಿಡದಿಗಳಿಂದ ಪ್ರತಿದಿನವೂ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಮತ್ತು ಸಂಜೆ ರೈಲಿನಲ್ಲಿ ವಾಪಸ್ಸಾಗುತ್ತಾರೆ. ಇವರೆಲ್ಲರೂ ತಿಂಗಳು ಪಾಸಿನವರು. ಹೀಗಾಗಿ ರೈಲಿನಲ್ಲಿ ಮಿತಿಮೀರಿದ ಜನ ಪ್ರಯಾಣಿಸುವರು! ಈ ಜನಸಂದಣಿ ಮಾಮೂಲು ಎಂದು ಕಲ್ಲೇಶಿ ವಣರ್ಿಸಿದ.

ಈ ಮಿತಿ ಮೀರಿದ ಜನರು ಸಿಕ್ಕ ಜಾಗದಲ್ಲಿ ಕೂರುತ್ತಾರೆ! ಸೀಟು ಮರೆತುಬಿಡಿ, ಅದಿರುವುದೇ ಕೂರಲು. ಆದರೆ ಈ ಜನ ಕೂರುವುದು ಎಲ್ಲಿ ಗೊತ್ತೆ..? ಸಾಮಾನಿಡುವುದಕ್ಕೆ ಮಾಡಿರುವ ಜಾಗಗಳಲ್ಲಿ! ನೆಲದ ಮೇಲೆ ಕೂಡ! ಕೂತವರು ಸುಮ್ಮನಿರುತ್ತಾರೆಯೇ..? ಕಡ್ಲೆಕಾಯಿ, ಮದ್ದೂರು ವಡೆ ಇವುಗಳನ್ನು ತಿನ್ನುತ್ತಾ, ಕೆಳಗೆ ಕುಳಿತಿರುವವರ ಮೇಲೆ ಕಡಲೆಕಾಯಿಯ ಸಿಪ್ಪೆ, ಕಾಲಿನ ಚಪ್ಪಲಿಯ ಮಣ್ಣು ಎಲ್ಲವನ್ನೂ ಅಭಿಷೇಕ ಮಾಡುತ್ತಾರೆ! ಆಕ್ಷೇಪಿಸಿದವರ ಮೇಲೆ ಏರಿ ಹೋಗುತ್ತಾರೆ! ‘ನಿಂಗೆ ಅಷ್ಟೊಂದು ಅನುಕೂಲ ಬೇಕಂದರೆ ಕಾರಲ್ಲಿ ಹೋಗು’ ಎಂದು ಏಕದಂ ಏಕವಚನವನ್ನೇ ಪ್ರಯೋಗಿಸಿಬಿಡುತ್ತಾರೆ. ಇವರೆಲ್ಲಾ ತಿಂಗಳ ಪಾಸಿನ ಪ್ರಯಾಣಿಕರು. ಅಂದರೆ ಇಡೀ ತಿಂಗಳಿಗೆ ಒಂದೇ ಸಲ ರಿಯಾಯತಿ ದರದಲ್ಲಿ ಹಣವನ್ನು ಮುಂಗಡ ನೀಡಿರುತ್ತಾರೆ. ಇವರಲ್ಲಿ ಬಹುತೇಕರು ಬಹಳ ಕಾಲದಿಂದ ಪ್ರಯಾಣಿಸುತ್ತಿರುವುದರಿಂದ ಇವರಿಗೆ ಇಡೀ ಟ್ರೈನೇ ತಮ್ಮದು ಎನ್ನುವ ಭಾವನೆ ಬಂದಿರುವುದು ಸಹಜ. ಇನ್ನು ಅಂದಂದಿನ ಟಿಕೇಟು ಅಂದೇ ಪ್ರಯಾಣಿಸುವವರನ್ನು ಅವರು ಸವತಿಯ ಮಕ್ಕಳಂತೆ ಕಾಣುತ್ತಿದ್ದರು!

ಈ ಜನರಲ್ಲಿ ಅನೇಕ ರೀತಿಯವರಿರುತ್ತಾರೆ. ಬೇರೆ ಊರಿನಲ್ಲಿ ಕಾಲೇಜಿಗೆ ಹೋಗುವ ಹುಡುಗ-ಹುಡುಗಿಯರು, ಆಫೀಸು ಕೆಲಸಕ್ಕೆ ಹೋಗುವ ಮಧ್ಯವಯಸ್ಕರು, ಬೆಂಗಳೂರಿನಿಂದ ವಸ್ತುಗಳನ್ನು ತಮ್ಮೂರಿಗೆ ತಂದು ಮಾರುವ ವ್ಯಾಪಾರಸ್ಥರು, ಕೂಲಿ ಕೆಲಸಗಾರರು, ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡವರು, ಮನೆ ಕೆಲಸ ಮಾಡವವರು-ಹೀಗೆ ಇನ್ನೂ ಎಷ್ಟೋ ರೀತಿಯವರಿರುತ್ತಾರೆ. ಇವರಲ್ಲದೆ ರಾಮನಗರ, ಬಿಡದಿ, ಚನ್ನಪಟ್ಟಣಗಳಿಂದ ಪ್ರಯಾಣಿಸುವ ಹೆಂಗಳೆಯರು, ಬೆಂಗಳೂರಿನ ಗಾರ್ಮೆಂಟ್ ಕಾರ್ಖನೆಗಳಲ್ಲಿ ಕೆಲಸ ಮಾಡುವ ಯುವತಿಯರು, ಮಕ್ಕಳ ಮನೆಗೆ ಹೋಗಲಿರುವ ಇಳಿವಯಸ್ಸಿನವರು-ಎಲ್ಲಾ ಸೇರಿರುತ್ತಾರೆ.

ಇಲ್ಲಿ ಪಡ್ಡೆ ಹುಡುಗ-ಹುಡುಗಿಯರ ಕದ್ದು ಮುಚ್ಚಿದ ಕಣ್ಣೋಟಗಳನ್ನು ಕಾಣಬಹುದು! ರೌಡಿಗಳಂತವರೂ ಸೀಟಿಗಾಗಿ ಸಿಕ್ಕವರ ಮೇಲೆ ರೇಗಾಡುವವರೂ ಕಾಣುತ್ತಾರೆ. ದಿನನಿತ್ಯ ಇವರು ಪ್ರಯಾಣಿಸುವುದರಿಂದ ರೈಲಿನಲ್ಲಿ ವ್ಯಾಪಾರ ಮಾಡುವವರೆಲ್ಲರ ಪರಿಚಯ ಇವರಿಗಿರುತ್ತದೆ. ಅವರಲ್ಲಿ ಸಲುಗೆಯಿಂದ ಸೇವೆಯನ್ನು ಪಡೆಯುತ್ತಾರೆ. ಇವರ ನಡುವೆ, ಕಾಫಿ, ಇಡ್ಲಿ, ಮಸಾಲೆ ದೋಸೆ, ಮದ್ದೂರು ವಡೆ, ಸೀಬೆ ಹಣ್ಣು, ಕಳ್ಳೆಕಾಯಿ ಮಾರುವವರು ಬೇರೆ! ಜಾಗವೇ ಇಲ್ಲದಲ್ಲಿ ಜಾಗ ಮಾಡಿಕೊಂಡು ವ್ಯಾಪಾರ ಕೂಡ ಮಾಡುತ್ತಾರೆ! ಇದೆಲ್ಲ ಬಿಡಿ, ನಾನು ಬೆಂಗಳೂರಿನ ವಿಷಯ ಮಾತಾಡುತ್ತಿದ್ದೆ ಅಲ್ಲವೆ? ಅಂತೂ ಬೆಳಗಿನ ಆರೂ ಮುಕ್ಕಾಲಿಗೆ ಹೊರಡುವ ಟ್ರೈನು ಹಿಡಿದು ಒಂಬತ್ತೂ ಮುಕ್ಕಾಲಿಗೆ ಬೆಂಗಳೂರು ಹತ್ತಿರಹತ್ತಿರ ತಲುಪಿಯೇ ಬಿಟ್ಟೆ! ಇದೇನು ಅಶ್ಚರ್ಯಸೂಚಕ ಚಿನ್ಹೆ ಉಪಯೋಗಿಸಿದ್ದಾನೆ ಈ ಲೇಖಕ ? ಬೆಂಗಳೂರು ತಲುಪಲಿಲ್ಲವೆ ಎನ್ನುತ್ತೀರಾ..? ಸ್ಟೇಷನ್ನು ಇನ್ನೂ ಒಂದು ಕಿಲೋಮೀಟರು ದೂರ ಇರುವಾಗ ವೇಗ ತಗ್ಗುತ್ತಾ ಬಂದ ರೈಲು ನಿಂತು ಬಿಟ್ಟಿತು. ಅಲ್ಲೇ ಸುಮರು ಜನ ಇಳಿಯಲು ಪ್ರಾರಂಭಿಸಿದರು.

ಇದೇನು? ಸ್ಟೇಷನ್ನು ತಲುಪಿಯೇ ಇಲ್ಲ..? ಇವರೆಲ್ಲ ಇಳಿದು ಏನು ಮಾಡುತ್ತಾರೆ..? ಅಚ್ಚರಿಯಿಂದ ನನ್ನಷ್ಟಕ್ಕೇ ಮಾತಾಡಿಕೊಂಡೆ. ಇಲ್ಲಿ ಇನ್ನೂ ಅರ್ಧ ಗಂಟೆ ನಿಂತರೂ ನಿಲ್ಲುತ್ತೆ ಪಕ್ಕದ ಸಹಪ್ರಯಾಣಿಕ ನನ್ನ ಮಾತಿಗುತ್ತರಿಸಿದ. ಯಾಕೆ..? ಸ್ಟೇಷನ್ನಿನಲ್ಲಿ ಪ್ಲಾಟ್ಫಾರಂ ಖಾಲಿ ಇರಬೇಕಲ್ಲ..? ಈಗ ಇಲ್ಲಿ ಇಳಿದವರು ರೈಲಿಗಿಂತ ಮುಂಚೆ ಸ್ಟೇಷನ್ನು ತಲುಪುತ್ತಾರೆ ನನ್ನ ಅಜ್ಞಾನಕ್ಕೆ ಮರುಗಿದ ಸಹಪ್ರಯಾಣಿಕ ವಿವರಿಸಿದ. ರೈಲಿನಲ್ಲಿದ್ದ ಸಹಸ್ರಾರು ಪ್ರಯಾಣಿಕರು ಜೂನ ಬೋನಿನಲ್ಲಿ ಸಿಕ್ಕ ಹುಲಿಯಂತೆ ಅಸಹನೆಯಿಂದ ಚಡಪಡಿಸುವುದನ್ನು ನೋಡದೆ ಬೇರೆ ದಾರಿಯೇ ಇರಲಿಲ್ಲ. ಎಲ್ಲರಿಗೂ ಅವಸರ! ಎಲ್ಲರೂ ತಮ್ಮತಮ್ಮ ಕೆಲಸ ಕಾರ್ಯಗಳಿಗೆ ತಡವಾಯಿತು ಎಂಬುದನ್ನು ತಮ್ಮ ಮುಖ ಚಹರೆ, ಅಸಹನೆಗಳಿಂದ ವ್ಯಕ್ತಪಡಿಸುತ್ತಿದ್ದರು. ಎಲ್ಲ ವಯಸ್ಸಿನ, ಎಲ್ಲ ಭಾಷೆಯ, ಎಲ್ಲ ವರ್ಗದ ಜನರೂ ಚಡಪಡಿಸುತ್ತಿದ್ದರು. ಇದರಲ್ಲಿ ಯಾವ ತಾರತಮ್ಯವೂ ಕಾಣಲಿಲ್ಲ. ಇದಕ್ಕೆ ಅಪವಾದದಂತೆ ನನ್ನಂತ ಕೆಲವರು ನಿರ್ಲಿಪ್ತರಾಗಿದ್ದವರೂ ಇದ್ದರೆನ್ನಿ. ತಟಸ್ಥವಾಗಿದ್ದ ರೈಲು ಹತ್ತು ನಿಮಿಷಗಳ ನಂತರ ಚಲಿಸಲು ಶುರು ಮಾಡಿತು. ಆ ಹತ್ತು ನಿಮಿಷಗಳು ವರ್ಷಗಳಂತೆ ಇದ್ದವು! ಕೊನೆಗೂ ರೈಲು ಸ್ಟೇಷನನ್ನು ತಲುಪಯೇಬಿಟ್ಟಿತು! ಇದಕ್ಕೆ ಆಶ್ಚರ್ಯ ಸೂಚಕ ಚಿನ್ಹೆಯೇಕೆ ಎಂದು ಹುಬ್ಬೇರಿಸಿದಿರಾ..? ಅಲ್ಲ ಟ್ರೈನಿನ ಎಲ್ಲ ಬವಣೆಗಳನ್ನು ಅನುಭವಿಸಿ ಬೆಂಗಳೂರು ತಲುಪುವುದು ಅಶ್ಚರ್ಯವಲ್ಲದೆ ಇನ್ನೇನು ಹೇಳಿ?

‍ಲೇಖಕರು avadhi

April 21, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: