ಗೋಪಾಲ ವಾಜಪೇಯಿ ಕಾಲಂ : 'ಜಡಭರತ'ರಿಗೆ ನಮನ!

ಸುಮ್ಮನೇ ನೆನಪುಗಳು – 43

1988ರಲ್ಲಿ ರಾಮಕೃಷ್ಣ ಹೆಗಡೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಇತ್ತ ಕಾರಣಕ್ಕೆ, ತತ್ ಕ್ಷಣವೇ ವೈಕುಂಠರಾಜು ನಾಟಕ ಅಕಾಡೆಮಿಯ ಅಧ್ಯಕ್ಷಸ್ಥಾನವನ್ನು ತ್ಯಜಿಸಿದರು ಅಂತ ಹೇಳಿದೆನಲ್ಲ… ಉಳಿದಿದ್ದ ಅವಧಿಗೆ ಹಿರಿಯ ನಾಟಕಕಾರ ಪರ್ವತವಾಣಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸರಕಾರ ಆಜ್ಞೆ ಹೊರಡಿಸಿತು. ನಾನು ಆ ಮೊದಲೇ ‘ಜಡಭರತ’ರ ನಾಟಕಗಳ ಒಂದು ಉತ್ಸವವನ್ನು ಹುಬ್ಬಳ್ಳಿಯಲ್ಲಿ ಮಾಡುವ ಬಗ್ಗೆ ವೈಕುಂಠರಾಜು ಅವರೆದುರು
 
ಪ್ರಸ್ತಾಪ ಮಾಡಿದ್ದೆ. ‘ಮರುವರ್ಷದ ಯೋಜನೆಗಳಲ್ಲಿ ಇದು ಪ್ರಮುಖವಾಗಿರುತ್ತದೆ,’ ಎಂದಿದ್ದರು ಅವರು.
ಮರುವರ್ಷದ ಯೋಜನೆಗಳ ಮೊದಲ ಸಭೆ. ‘ಜಡಭರತ’ರ ನಾಟಕಗಳ ಒಂದು ಉತ್ಸವ ಮಾಡುವ ಬಗ್ಗೆ ವಿವರವಾದ ಪ್ರಸ್ತಾವನಾ ಪತ್ರವೊಂದನ್ನು ಅಧ್ಯಕ್ಷ ಪರ್ವತವಾಣಿಯವರಿಗೆ ಸಲ್ಲಿಸಿದೆ. ಅದನ್ನವರು ಸಭೆಯ ಮುಂದಿರಿಸಿದರು.
‘ಜಡಭರತ’ರಂಥ ಒಬ್ಬ ಹಿರಿಯನ ನಾಟಕಗಳ ಉತ್ಸವ ಎಂದರೆ ಯಾರು ತಾನೇ ಬೇಡ ಅಂದಾರು? ಒಪ್ಪಿಗೆ ಸಿಕ್ಕಿತು.
ಆದರೆ ಚರ್ಚೆಯಾದದ್ದು ಆ ನಾಟಕೋತ್ಸವ ‘ಎಲ್ಲಿ’ ನಡೆಯಬೇಕೆಂಬ ಬಗ್ಗೆ. ‘ಯಾರಿಗೆ’ ಅದರ ಜವಾಬ್ದಾರಿ ವಹಿಸಬೇಕು ಎಂಬ ಬಗ್ಗೆ. ”ಬೆಂಗಳೂರಲ್ಲೇ ಆಗಲಿ,” ಅಂತ ಕೆಲವರು. ”ಧಾರವಾಡದಲ್ಲಾಗಲಿ,” ಅಂತ ಇನ್ನು ಒಂದಿಬ್ಬರು…
ನಾನು ”ಹುಬ್ಬಳ್ಳಿಯಲ್ಲೇ ಆಗಬೇಕು,” ಎಂದು ಹಠ ಹಿಡಿದೆ. ”ಹುಬ್ಬಳ್ಳಿಯಲ್ಲೇ ಯಾಕೆ?” ಎಂಬುದು ಅನೇಕ ಸದಸ್ಯರ ಪ್ರಶ್ನೆ.
”ಯಾಕೆಂದರೆ, ಅಲ್ಲಿ ಸಂಘಟನೆಯ ಜವಾಬ್ದಾರಿ ಹೊರಬಲ್ಲ ಸಾಂಸ್ಕೃತಿಕ ಸಂಘಟನೆಗಳಿವೆ, ಒಳ್ಳೆಯ ರಂಗ ಮಂದಿರ ಸೌಲಭ್ಯ ಇದೆ (ಧಾರವಾಡದಲ್ಲಿ ಸೂಕ್ತ ರಂಗ ಮಂದಿರದ್ದೇ ಆಗ ದೊಡ್ಡ ಕೊರತೆ.) ಮತ್ತು ಹಗಲಿರುಳು ದುಡಿಯಲು ಸಿದ್ಧವಿರುವ ರಂಗಕರ್ಮಿಗಳ ದಂಡೇ ಇದೆ, ಅದಕ್ಕೆ…” ಎಂದೆಲ್ಲ ನಾನು ಹೇಳಿದ ಮೇಲೆಯೂ ಒಂದಿಬ್ಬರ ಗೊಣಗಾಟ ನಡೆದೇ ಇತ್ತು. ಈ ಹಿಂದೆ ವಿ. ರಾಮಮೂರ್ತಿಯವರ ನೇತೃತ್ವದಲ್ಲಿ ನಡೆಸಿದ ‘ನೇಪಥ್ಯ ಶಿಲ್ಪ’ದ ಯಶಸ್ವಿ ಸಂಘಟನೆಯ ಕುರಿತು ಹೇಳಿದ ಮೇಲೆ ಸರ್ವ ಸದಸ್ಯರ ಒಪ್ಪಿಗೆಯ ಮುದ್ರೆ ಬಿತ್ತು ನನ್ನ ಪ್ರಸ್ತಾವನೆಗೆ.
ಇನ್ನು ಏನೇನು ಕಾರ್ಯಕ್ರಮ, ಎಷ್ಟು ದಿನಗಳ ಉತ್ಸವ, ಯಾವ ಯಾವ ನಾಟಕಗಳು ಮುಂತಾದುವನ್ನು ಪ್ಲಾನ್ ಮಾಡಬೇಕು. ಉಳಿದೆಲ್ಲ ವಿವರಗಳೊಂದಿಗೆ ಬಜೆಟ್ ಸಲ್ಲಿಸಬೇಕು…
ಕೊನೆಗೆ ಅಧ್ಯಕ್ಷ ಪರ್ವತವಾಣಿಯವರು ಮುಗಿಲು ಮುಟ್ಟುವ ಧ್ವನಿಯಲ್ಲಿ, ”ಗೋಪಾಲಾ… ನಾನೊಂದು ಹೇಳ್ಲಾ…? ‘ಜಡಭರತ’ರು ನಮ್ಮ ಪ್ರಮುಖ ನಾಟಕಕಾರ. ಅವರ ನಾಟಕಗಳ ಉತ್ಸವ ತುಂಬಾನೇ ಚೆನ್ನಾಗಿರಬೇಕು ಕಣೋ… ಒಂದ್ ಕೆಲಸಾ ಮಾಡು ; ನಿನ್ ಜತೆ ಈ ಶ್ರೀಪತಿ ಇದಾನ್ನೋಡು, ಇವನ್ನೂ ಸೇರಿಸ್ಕೋ… ಇಬ್ರೂ ಸೇರಿ ಒಂದೊಳ್ಳೆ ಫೆಸ್ಟಿವಲ್ ಪ್ಲಾನ್ ಮಾಡೀಪ್ಪಾ…” ಅಂತ ಒಂದು ಆತ್ಮೀಯ ನಗೆ ನಕ್ಕರು.
ಸ್ವತಃ ಒಬ್ಬ ಹಿರಿಯ ನಾಟಕಕಾರನಾಗಿ, ಇನ್ನೊಬ್ಬ ಹಿರಿಯ ನಾಟಕಕಾರನನ್ನು ‘ಗೌರವದಿಂದ ಕಾಣು’ವುದಿದೆಯಲ್ಲ ಅದು ನಿಜಕ್ಕೂ ದೊಡ್ಡ ಗುಣ.
‘ಆತ ನಾಟಕಕಾರನೇ ಅಲ್ಲ, ಈತ ಕವಿಯೇ ಅಲ್ಲ, ಇಂಥವನಿಗೆ ಇಂಥ ಪ್ರಶಸ್ತಿ ಸಿಗಲೇಬಾರದಿತ್ತು’ ಎಂದೆಲ್ಲ ಗಳಹುತ್ತ ತಿರುಗುವ ‘ಪ್ರತಿಷ್ಠಾ’ಪ್ರಿಯರನ್ನು ಪರ್ವತವಾಣಿಯಂಥವರ ಎದುರು ಖಂಡಿತವಾಗಿ ನಿವಾಳಿಸಿ ಎಸೆಯಬೇಕು. .

-೦-೦-೦-೦-೦-

”ಹುಬ್ಬಳ್ಳಿಯಲ್ಲೇ ಆಗಬೇಕು,” ಎಂದು ಹಠ ಹಿಡಿದು ಗೆದ್ದಾಗಿತ್ತು. ಈಗ ಒಂದು ಒಳ್ಳೆಯ ಫೆಸ್ಟಿವಲ್ ಮಾಡಿ ಗೆಲ್ಲಬೇಕು. ನಮಗೆ ಜನಬೆಂಬಲದ ಕೊರತೆ ಇರಲಿಲ್ಲ. ದುಡಿಯುವ ಕೈಗಳೂ ಸಾಕಷ್ಟಿದ್ದವು. ಬೆನ್ನು ತಟ್ಟಿ ಬೆಂಬಲಕ್ಕೆ ನಿಲ್ಲುವ ಸಂಘ-ಸಂಸ್ಥೆಗಳೂ ನಮ್ಮೊಂದಿಗಿದ್ದವು. ಯಾವುದೇ ಕಾರ್ಯವನ್ನು ಸಂಕಲ್ಪಿಸಿ ನಿಂತರೂ ಹೂವನ್ನು ಎತ್ತಿಕೊಂಡ ಹಾಗೆ ಅದನ್ನು ತಮ್ಮ ಕೈಗೆತ್ತಿಕೊಂಡು ನಮ್ಮ ಶ್ರಮವನ್ನು ಕಡಿಮೆ ಮಾಡುತ್ತಿದ್ದರು. ಅದೆಲ್ಲ ನಿಜವೇ. ಆದರೂ ‘ಈ ಸಲದ್ದೂ ಹಾಗೆಯೇ ಆಗಬಹುದು,’ ಎಂಬ ಬಗ್ಗೆ ಮಾತ್ರ ನನಗೆ ಭರವಸೆ ಉಳಿಯಲಿಲ್ಲ. ನಮಗೆ ಲಭ್ಯವಾಗಬಲ್ಲ ‘ಜಡಭರತ’ರ ನಾಟಕಗಳ ಸಂಖ್ಯೆ ನಮ್ಮನ್ನು ಅಧೀರರನ್ನಾಗಿಸಿಬಿಟ್ಟಿತು.
‘ಜಡಭರತ’ ನಾಮಾಂಕಿತ ಜಿ. ಬಿ. ಜೋಶಿಯವರು ತಾವು ಬರೆದದ್ದಕ್ಕಿಂತ ಇತರರಿಂದ ಬರೆಸಿದ್ದೇ ಹೆಚ್ಚು. ಇದಕ್ಕೆ, ತಮ್ಮ ಲೆಕ್ಕಣಿಕೆಯನ್ನು ಬದಿಗಿಟ್ಟು ಬರೆಯುವವರ ಬೆನ್ನುಹತ್ತಿದ್ದು ಒಂದು ಕಾರಣವಾದರೆ; ಪ್ರಕಟಿಸಿದ ಗ್ರಂಥಗಳ ಗಂಟುಗಳನ್ನು ಹೊತ್ತು ನಾಡನ್ನು ಸುತ್ತಿದ್ದು ಇನ್ನೊಂದು ಕಾರಣ. ಯಾವುದೇ ಒಂದು ಕೆಲಸಕ್ಕೆ ನಿಂತರೂ ಜಿ.ಬಿ.ಯವರು ಎಡೆಬಿಡದೇ ದುಂಬಾಲು ಬೀಳುವ ಸ್ವಭಾವದವರು. ಧಾರವಾಡದ ಭಾಷೆಯಲ್ಲಿ ಹೇಳಬೇಕೆಂದರೆ ‘ಕೈ ತೊಳಕೊಂಡು ಬೆನ್ನು ಹತ್ತು’ವವರು. ಒಂದು ಮುಗಿಯಿತೆಂಬಷ್ಟರಲ್ಲೇ ಇನ್ನೊಂದಕ್ಕೆ ತಮ್ಮನ್ನು ಕೊಟ್ಟುಕೊಳ್ಳುವವರು. ಇಂಥದರ ನಡುವೆಯೇ ತಮ್ಮ ಅಪಾರ ರಂಗ ಕಾಳಜಿಯನ್ನು ಜೀವಂತವಾಗಿಟ್ಟುಕೊಂಡು ನಾಟಕ ಚಟುವಟಿಕೆಗಳನ್ನು ನಡೆಸಿದವರು. ‘ಸಾಹಿತ್ಯೋತ್ಸವ’ಗಳನ್ನು ನ ಭೂತೋ ನ ಭವಿಷ್ಯತಿ ಎಂಬಂತೆ ಸಂಘಟಿಸಿದವರು. ಇಷ್ಟಾಗಿಯೂ ಅವರು ಒಂದು ಕಾದಂಬರಿ (‘ಧರ್ಮ ಸೆರೆ’), ಒಂದು ಆತ್ಮ ನಿವೇದನೆ (‘ಜಡಭರತನ ಕನಸುಗಳು’), ಒಂದು ಕವನ ಸಂಕಲನ (‘ಜೀವ ಫಲ’) ಹಾಗೂ ‘ಮೂಕಬಲಿ’, ‘ಆ ಊರು ಈ ಊರು’, ‘ಕದಡಿದ ನೀರು’, ‘ಸತ್ತವರ ನೆರಳು’, ‘ನಾನೇ ಬಿಜ್ಜಳ’, ‘ಪರಿಮಳದವರು’ ಹಾಗೂ ‘ಜರ್ಮನ್ ಬಂಗ್ಲೆ’ ಎಂಬ ಏಳು ನಾಟಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದವರು.
ಅವರು ಬರೆದದ್ದು ಏಳು ನಾಟಕಗಳೇನೋ ಸರಿ… ನಾವು ಈ ನಾಟಕೋತ್ಸವವನ್ನು ಹಮ್ಮಿಕೊಳ್ಳಲು ಮುಂದಾದಾಗ ಪ್ರಕಟಿತ ಪುಸ್ತಕ ರೂಪದಲ್ಲಿ ನಮಗೆ ಲಭ್ಯವಿದ್ದ ಅವರ ನಾಟಕ ಕೃತಿಗಳು ಕೇವಲ ಆರು. ಅವುಗಳಲ್ಲಿ ಬಹಳ ಹೆಸರು ಮಾಡಿದ ನಾಟಕಗಳು ಎರಡು : ‘ಕದಡಿದ ನೀರು’ ಮತ್ತು ‘ಸತ್ತವರ ನೆರಳು’. ಇನ್ನು ಪ್ರತಿಭಟನೆಗೆ ಈಡಾಗಿ ದೊಡ್ಡ ಸುದ್ದಿ ಮಾಡಿದದ್ದು ‘ನಾನೇ ಬಿಜ್ಜಳ.’ ಇವನ್ನು ಬಿಟ್ಟರೆ ಉಳಿದವು ಎರಡು : ‘ಮೂಕಬಲಿ’ ಮತ್ತು ‘ಆ ಊರು ಈ ಊರು.’ ಆ ನಂತರದ ‘ಪರಿಮಳದವರು’ ಪ್ರಯೋಗಿಸಲು ಯಾಕೋ ಹವ್ಯಾಸಿಗಳು ಮುಂದಾಗಿರಲಿಲ್ಲ. ‘ಜರ್ಮನ್ ಬಂಗ್ಲೆ’ ಆಗ ಇನ್ನೂ ಪ್ರಕಟವಾಗಿರಲಿಲ್ಲ (ಅದು ಪ್ರಕಟವಾದದ್ದು ಜಿ.ಬಿ.ಯವರ ನಿಧನಾನಂತರ ; 1994ರಲ್ಲಿ).

ಈ ನಾಟಕೋತ್ಸವದಲ್ಲಿ ಜಡಭರತರ ಐದು ನಾಟಕಗಳನ್ನಾದರೂ ಆಡಿಸಬೇಕು ಎಂಬ ಆಸೆ ನಮ್ಮದು. ‘ಸತ್ತವರ ನೆರಳು’ ಮಾತ್ರ ಕಾರಂತರ ನಿರ್ದೇಶನದ ‘ಬೆನಕ’ ತಂಡದ್ದೇ ಆಗಬೇಕು ಎಂಬ ಆಗ್ರಹ ನಾಟಕೋತ್ಸವದ ಪ್ರಾಯೋಜಕರದು. ಇನ್ನು ನಾವು ನಿರ್ಧರಿಸಬೇಕಾದ ನಾಟಕಗಳು ನಾಲ್ಕು. ಬೇರೆ ಬೇರೆ ತಂಡಗಳನ್ನು ಸಂಪರ್ಕಿಸಿದೆವು. ಅವರು ಜಡಭರತರ ಯಾವ ನಾಟಕ ಮಾಡಬಹುದು ಎಂದು ಕೇಳಿದೆವು. ಮೂರು ತಂಡಗಳು ಮಾತ್ರ ಜಡಭರತರ ಒಂದೊಂದು ನಾಟಕವನ್ನು ಕೈಗೆತ್ತಿಕೊಳ್ಳುವ ಇಚ್ಚೆ ವ್ಯಕ್ತಪಡಿಸಿದವು. ಬೆಳಗಾವಿಯ ಮಂಥನ ತಂಡ ‘ಆ ಊರು ಈ ಊರು’, ಹುಬ್ಬಳ್ಳಿಯ ಅಭಿರುಚಿ ತಂಡ ‘ಕದಡಿದ ನೀರು’, ಮತ್ತು ಹುಬ್ಬಳ್ಳಿಯದೇ ಆದ ಪ್ರಗತಿ ಕಲಾ ವೃಂದ ‘ನಾನೇ ಬಿಜ್ಜಳ’ ನಾಟಕಗಳನ್ನು ಪ್ರಯೋಗಿಸಲು ಒಪ್ಪಿ ತಾಲೀಮು ಶುರು ಮಾಡಿದವು. ‘ಮೂಕಬಲಿ’ಯನ್ನು ಪ್ರಯೋಗಿಸಲು ಯಾವ ತಂಡವೂ ಮುಂದಾಗಲಿಲ್ಲ. ಆದರೆ, ಹೇಗಾದರೂ ಮಾಡಿ ಐದು ದಿನಗಳ ನಾಟಕೋತ್ಸವ ಮಾಡಲೇಬೇಕು. ಹೇಗೆ? ಮಿತ್ರರ ಜತೆ ಸಮಾಲೋಚಿಸಿ, ‘ಜಡಭರತನ ಕನಸುಗಳು’ ಕೃತಿಯ ಕೆಲವು ಭಾಗಗಳನ್ನು ನಾಟಕಕ್ಕೆ ಅಳವಡಿಸುವ ಯತ್ನಕ್ಕೆ ಕೈಹಾಕಿದೆ. ಇದೇ ಸಂದರ್ಭದಲ್ಲಿ, ನಮ್ಮ ನಡುವಿನ ಹಿರಿಯ ನಾಟಕಕಾರ ಎನಿಸಿಕೊಂಡಿದ್ದ ‘ಜಡಭರತ’ರಿಗೆ ಒಂದು ಸನ್ಮಾನವನ್ನೂ ಮಾಡಿ ನಾಟಕೋತ್ಸವವನ್ನು ಸಾರ್ಥಕವೆನಿಸುವಂತೆ ಮಾಡುವುದು ನಮ್ಮ ಉದ್ದೇಶವಾಗಿತ್ತು.

-೦-೦-೦-೦-೦-

ಇಂಥದೊಂದು ನಾಟಕೋತ್ಸವ ಅಂದರೆ ಅದೊಂದು ತುಂಬಾ ಖರ್ಚಿನ ಬಾಬತ್ತು. ಸಂಘಟನೆಯ ವೆಚ್ಚಗಳು, ನಾಲ್ಕು ದಿನಗಳ ರಂಗ ಮಂದಿರದ ಬಾಡಿಗೆ, ನಾಟಕೋತ್ಸವದ ಪ್ರಚಾರ, ಭಾಗವಹಿಸುವ ತಂಡಗಳ ಕಲಾವಿದರ ಊಟೋಪಚಾರ, ಉತ್ಸವದ ಸ್ವಯಂಸೇವಕರ ಊಟ-ಓಡಾಟ, ಮುದ್ರಣ ಅಂಚೆ ಇತ್ಯಾದಿಗಳಲ್ಲದೇ, ಉತ್ಸವಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳನ್ನು ನೋಡಿಕೊಳ್ಳುವ ಖರ್ಚು ಬೇರೆ. ಅಕಾಡೆಮಿಯ ಹಣಕಾಸಿನ ನೆರವು ನಾಮಮಾತ್ರದ್ದು. ಉಳಿದ ಹಣವನ್ನು ಹೊಂದಿಸಿಕೊಳ್ಳಲು ಪ್ರಾಯೋಜಕತ್ವ, ನೆನಪಿನ ಸಂಚಿಕೆಗೆ ಜಾಹೀರಾತು ಪಡೆಯುವುದು ಇತ್ಯಾದಿ ಮಾರ್ಗಗಳನ್ನು ಅನುಸರಿಸಬೇಕು. ಇಡೀ ನಾಟಕೋತ್ಸವದ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಹುಬ್ಬಳ್ಳಿಯ ಆಗಿನ ಅತ್ಯಂತ ಕ್ರಿಯಾಶೀಲ ತಂಡ ಎನಿಸಿದ್ದ ‘ಅಭಿನಯ ಭಾರತಿ’ ಮುಂದೆ ಬಂತು. ನಾಟಕೋತ್ಸವದ ಪ್ರಾಯೋಜಕತ್ವವನ್ನು ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ವಹಿಸಿಕೊಂಡರೆ, ‘ಹುಬಳಿ ಆರ್ಟ್ಸ್ ಸರ್ಕಲ್’ ಮತ್ತು ‘ಅಕಾಡೆಮಿ ಆಫ್ ಪರ್ಫಾಮಿಂಗ್ ಆರ್ಟ್ಸ್’ ಸಂಸ್ಥೆಗಳು ಸಹಪ್ರಾಯೋಜಕರಾಗಿ ಸಹಕರಿಸಿದವು. ನಾನು ಮತ್ತು ಶ್ರೀಪತಿ ಮಂಜನಬೈಲು ಇಬ್ಬರೂ ಅಕಾಡೆಮಿಯ ಪ್ರತಿನಿಧಿಗಳಾಗಿ ನಾಟಕೋತ್ಸವದ ಸಂಚಾಲಕರಾಗಿ ತೋಳೇರಿಸಿ ನಿಂತೆವು.
ಸಂಘಟನೆಯ ಜವಾಬ್ದಾರಿಯನ್ನು ‘ಅಭಿನಯ ಭಾರತಿ’ ತಂಡ ವಹಿಸಿಕೊಂಡರೂ, ನಾಟಕೋತ್ಸವದ ನೆನಪಿನ ಸಂಚಿಕೆಯ ರೂಪು ರೇಷೆ, ಲೇಖನ ಸಂಪಾದನೆ, ಜಾಹೀರಾತು ಸಂಗ್ರಹ ಮುಂತಾದ ಕೆಲಸಗಳಲ್ಲಿಯೂ ನಾನು ನೆರವಾಗಬೇಕಾದದ್ದು ಅನಿವಾರ್ಯವೇ ಆಗಿತ್ತು. ಹೀಗಾಗಿ, ಆ ಎಲ್ಲ ಕೆಲಸಗಳ ನಡುವೆ ‘ಜಡಭರತನ ಕನಸುಗಳು’ ಕೃತಿಯನ್ನು ನಾಟಕಕ್ಕೆ ಅಳವಡಿಸುವ ಕೆಲಸ ಸಾಗಲೇ ಇಲ್ಲ. ಅಕಾಡೆಮಿಯ ಕೆಲಸಗಳಿಗಾಗಿ ಆಗೀಗ ಬೆಂಗಳೂರಿಗೆ ಹೋಗಬೇಕು. ಹಾಗೊಮ್ಮೆ ಹೊರಟಿದ್ದಾಗ ಥಟ್ಟನೆ ನನಗೆ ‘ಈ ನಾಟಕೋತ್ಸವಕ್ಕೆ ಶಂಕರ್ ನಾಗ್ ಅವರನ್ನು ಹೇಗಾದರೂ ಬರ ಮಾಡಿಕೊಳ್ಳಬೇಕು. ಉದ್ಘಾಟನೆಗಾದರೂ ಸರಿ, ಸಮಾರೋಪಕ್ಕಾದರೂ ಸರಿ ಅವರು ನಮ್ಮೊಂದಿಗೆ ಇರಬೇಕು. ಅವರು ಬಂದರೆ ನಾಟಕೋತ್ಸವಕ್ಕೆ ಒಂದು ಬೇರೆಯೇ ಕಳೆ,’ ಎಂದೆನಿಸತೊಡಗಿತು.
ಶಂಕರ್ ನಾಗ್ ಆಗ ಬಹು ಬೇಡಿಕೆಯ, ಜನಾನುರಾಗಿ ನಾಯಕ ನಟ. ಜಿ.ಬಿ.ಯವರನ್ನು ಅವರು ಕರೆಯುತ್ತಿದ್ದದ್ದು ‘ಅಜ್ಜ’ ಅಂತಲೇ. ‘ಒಂದಾನೊಂದು ಕಾಲದಲ್ಲಿ…’ ಚಿತ್ರದ ಸಂಭಾಷಣೆಯನ್ನು ಜಿ.ಬಿ.ಯವರೇ ಬರೆದಿದ್ದರಲ್ಲ. ಅಲ್ಲದೆ ಚಿತ್ರ ಪೂರ್ಣಗೊಳ್ಳುವವರೆಗೂ ಅವರು ತಂಡದೊಂದಿಗೆ ಓಡಾಡಿಕೊಂಡಿದ್ದರು.
ಬಸ್ಸು ಬೆಂಗಳೂರು ತಲಪಿದ್ದೆ ತಡ, ರೂಮು ಹಿಡಿದು ನಾನು ಮಾಡಿದ ಮೊದಲ ಕೆಲಸ ಎಂದರೆ ‘ಸಂಕೇತ್ ಸ್ಟುಡಿಯೋ’ಗೆ ಫೋನ್ ಮಾಡಿದ್ದು. ಅಲ್ಲಿದ್ದವರು ಇನ್ನೊಬ್ಬ ಶಂಕರ್ ; ಮ್ಯಾನೇಜರ್ ಶಂಕರ್.
”ಸಾರ್ ಗೆ ಇವತ್ತು ಶೂಟಿಂಗು… ಆದರೂ ಇನ್ನೊಂದು ಗಂಟೆಯಲ್ಲಿ ಇಲ್ಲಿ ಬಂದು ಆ ಕಡೆ ಹೋಗ್ತಾರೆ,” ಅಂತ ಮ್ಯಾನೇಜರ್ ಶಂಕರ್ ಸುದ್ದಿ ಕೊಟ್ಟರು
ನಾನು ಅವಸರವಸರದಿಂದ ಸ್ನಾನ, ತಿಂಡಿ ಮುಗಿಸಿ ನೇರ ‘ಸಂಕೇತ್ ಸ್ಟುಡಿಯೋ’ಗೆ ಹೋದರೆ ಶಂಕರ್ ನಾಗ್ ಆಗಷ್ಟೇ ಶೂಟಿಂಗಿಗೆ ಹೊರಟಾಗಿತ್ತು.
”ನಾನು ಅವರನ್ನು ಅರ್ಜಂಟ್ ಕಾಣಬೇಕಲ್ಲ… ಎಲ್ಲಿ ಶೂಟಿಂಗು?” ಅಂತ ಮ್ಯಾನೇಜರ್ ಶಂಕರ್ ಅವರನ್ನು ಕೇಳಿದೆ. ಶೂಟಿಂಗ್ ಇದ್ದದ್ದು ‘ಕಂಠೀರವ ಸ್ಟುಡಿಯೋ’ದಲ್ಲಿ ಅಂತ ಗೊತ್ತಾಯಿತು. ಸ್ವಲ್ಪ ಹೊತ್ತು ಅಲ್ಲೇ ಕೂತೆ. ಆ ನಂತರ ಅಲ್ಲಿಂದಲೇ ‘ಕಂಠೀರವ’ಕ್ಕೆ ಫೋನ್ ಮಾಡಿ ಶಂಕರ್ ನಾಗ್ ಅವರೊಂದಿಗೆ ಮಾತಾಡಬೇಕು,” ಅಂದೆ. ಅವರು ಶೂಟಿಂಗಿನಲ್ಲಿದ್ದರು. ನಾನು ಕಾಯಬೇಕಾಯಿತು.
ಮುಂದೆ ಹತ್ತೇ ನಿಮಿಷದಲ್ಲಿ ಅಲ್ಲಿಂದ ಫೋನ್. ”ಬಂದು ಬಿಡಿ ಗೋವಾ,” ಅಂತ ಶಂಕರ್. ತಡಮಾಡದೇ ‘ಕಂಠೀರವ’ಕ್ಕೆ ಆಟೋ ಹತ್ತಿದೆ.
ಅದು ‘ಪ್ರಾಣಸ್ನೇಹಿತ’ ಚಿತ್ರ. ಭಾರ್ಗವ ನಿರ್ದೇಶನದ ಆ ಚಿತ್ರದಲ್ಲಿ ಭವ್ಯ ನಾಯಕಿ. ರಾಮಕೃಷ್ಣ ಸ್ನೇಹಿತನ ಪಾತ್ರದಲ್ಲಿದ್ದರು. ಚಿತ್ರೀಕರಣದ ಮಧ್ಯೆ ಸಿಗುತ್ತಿದ್ದ ಬಿಡುವಿನಲ್ಲೇ ಶಂಕರ್ ನನ್ನೊಂದಿಗೆ ಮಾತಾಡಿದರು. ‘ಜಡಭರತ ನಾಟಕೋತ್ಸವ’ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಬಂದಿದ್ದ ಉದ್ದೇಶವನ್ನು ಹೇಳಿದೆ.
ಆ ಸಮಯದಲ್ಲಿ ಬೇರೆ ಯಾವುದೊ ದೇಶದಲ್ಲಿ ನಡೆಯುವ ಒಂದು ಚಿತ್ರೋತ್ಸವದಲ್ಲಿ ತಾನು ಭಾಗವಹಿಸಬೇಕಾಗಿದೆಯಲ್ಲ… ಎಂಥ ಅವಕಾಶವನ್ನು ತಪ್ಪಿಸಿಕೊಳ್ತಿದ್ದೇನಲ್ಲಾ ಎಂದೆಲ್ಲ ಪೇಚಾಡಿದರು. ಇನ್ನಾವುದಾದರೂ ರೀತಿಯಿಂದ ನಾಟಕೋತ್ಸವಕ್ಕೆ ನೆರವಾಗುವ ಇಚ್ಚೆ ವ್ಯಕ್ತಪಡಿಸಿದರು. ನಾನು ನೆನಪಿನ ಸಂಚಿಕೆಯ ಪ್ರಸ್ತಾಪ ಮಾಡಿದೆ. ಕೂಡಲೇ ಶಂಕರ್ ಒಂದು ಚೆಕ್ ಬರೆದು ‘ಜಡಭರತ ನಾಟಕೋತ್ಸವ’ಕ್ಕೆ ಯಶಸ್ಸು ಕೋರುತ್ತ ಅಂತ ಹಾಳೆಯೊಂದರಲ್ಲಿ ಗೀಚಿ ನನ್ನತ್ತ ಚಾಚಿದರು. ”ಮುಂದೆ ಯಾವಾಗಾದ್ರೂ ನಿಮ್ಮ ಒಂದು ಕಾರ್ಯಕ್ರಮಕ್ಕೆ ಬರ್ತೀನಿ ಗೋವಾ,” ಅಂತ ನನ್ನನ್ನು ಬೀಳ್ಕೊಟ್ಟರು. (ಅದೇ ಅವರ ಕೊನೆಯ ಭೇಟಿ ಆಗಬಹುದು ಎಂದು ನನಗನಿಸಿರಲಿಲ್ಲ. ಮುಂದೆ ಆರೇ ತಿಂಗಳಿಗೆ ಶಂಕರ್ ನಮ್ಮನ್ನೆಲ್ಲ ಬಿಟ್ಟು ನಡೆದುಬಿಟ್ಟರು.)

-೦-೦-೦-೦-೦-

ಎಲ್ಲವೂ ಅಂದುಕೊಂಡಂತೆಯೇ ಸಿದ್ಧಗೊಂಡಿತು. 1990ರ ಮಾರ್ಚ್ 9ರಿಂದ 12ರ ವರೆಗೆ ನಾಲ್ಕು ದಿನಗಳ ‘ಜಡಭರತ ನಾಟಕೋತ್ಸವ.’
ಉತ್ಸವವನ್ನು ಉದ್ಘಾಟಿಸಿದವರು ವೃತ್ತಿರಂಗಭೂಮಿಯ ಹಿರಿಯ ನಟ ಗರುಡ ಶ್ರೀಪಾದರಾಯರು. ಅವರು ಹುಟ್ಟಿದ್ದೇ ವೃತ್ತಿ ರಂಗಭೂಮಿಯ ವಾತಾವರಣದಲ್ಲಿ.
‘ಅಭಿನಯ ಕೇಸರಿ’ ಎಂದೇ ಹೆಸರಾಗಿದ್ದ ಅಪ್ಪಟ ದೇಶಭಕ್ತ ನಾಟಕಕಾರ, ಮತ್ತು 1920ರಷ್ಟು ಹಿಂದೆಯೇ ಸ್ಥಾಪನೆಗೊಂಡ ಗದಗಿನ ‘ದತ್ತಾತ್ರೇಯ ನಾಟಕ ಮಂಡಳಿ’ಯ ಒಡೆಯ ಗರುಡ ಸದಾಶಿವರಾಯರ ಪುತ್ರ ಈ ಶ್ರೀಪಾದರಾಯರು ನಾಲ್ಕು ದಶಕಗಳ ಕಾಲ ಕರ್ನಾಟಕದ ವೃತ್ತಿ ರಂಗಭೂಮಿಯಲ್ಲಿ ವಿವಿಧ ಪಾತ್ರಗಳನ್ನಾಡಿದ ಶ್ರೀಪಾದರಾಯರು ಆಧುನಿಕ ರಂಗಭೂಮಿಯೊಂದಿಗೂ ನಂಟು ಬೆಳೆಸಿಕೊಂಡವರು. ತಮ್ಮ ವಂಶದ ಕುಡಿಗಳನ್ನು ಹವ್ಯಾಸಿ ರಂಗಭೂಮಿಗೆ ಪರಿಚಯಿಸಿದವರು. (ಇವರ ಮಗನೇ ರಂಗ ನಿರ್ದೇಶ ಪ್ರಕಾಶ ಗರುಡ. ನೀನಾಸಂ ಪದವೀಧರ. ರಂಗಭೂಮಿ ವಿಷಯದಲ್ಲಿ ಡಾಕ್ಟರೇಟ್ ಮಾಡಿ, ಧಾರವಾಡದಲ್ಲಿ ಮಕ್ಕಳ ರಂಗಭೂಮಿ ಚಟುವಟಿಕೆಗಳ ಜೊತೆ ರಂಗಭೂಮಿ ವಿಷಯವಾಗಿ ಸಂಶೋಧನೆಯಲ್ಲಿ ತೊಡಗಿರುವವರು.)
ಶ್ರೀಪಾದರಾಯರು ಜಡಭರತ ನಾಮಾಂಕಿತ ಜಿ.ಬಿ. ಜೋಶಿಯವರನ್ನು ದಶಕಗಳಿಂದ ಬಲ್ಲವರು. ಅವರ ಸಾಹಿತ್ಯಕ, ರಂಗವಿಷಯಕ ಚಟುವಟಿಕೆಗಳನ್ನು ಹತ್ತಿರದಿಂದ ಕಂಡವರು. ಜೋಶಿಯವರು 1940ರ ದಶಕದಷ್ಟು ಹಿಂದೆಯೇ ‘ವಸಂತ ಸಾಹಿತ್ಯೋತ್ಸವ’, ‘ಶಾರದೋತ್ಸವ’ ಮುಂತಾದವನ್ನು ಹಮ್ಮಿಕೊಳ್ಳುತ್ತಿದ್ದದ್ದು ಗದಗಿನಲ್ಲಿಯೇ. ಗರುಡ ಶ್ರೀಪಾದರಾಯರು ಹುಟ್ಟಿ ಬೆಳೆದ ಊರದು.
ಆವತ್ತು ಶ್ರೀಪಾದರಾಯರು ಜಿ.ಬಿ. ಜೋಶಿಯವರ ರಂಗಪ್ರೇಮ, ನಾಟಕ ರಚನೆಯ ವಿಧಾನ ಮುಂತಾದವುಗಳು ಹೇಗೆ ನಮ್ಮ ರಂಗಭೂಮಿಯ ಇತಿಹಾಸದ ಮುಖ್ಯ ಅಂಶಗಳಾಗಿವೆ ಎಂಬುದರ ಕುರಿತು ಚುಟುಕಿನಲ್ಲೇ ವಿವರ ನೀಡಿದರು. ತಾವು ಅವರ ‘ಕದಡಿದ ನೀರು’ ನಾಟಕದ ಶಿವಪ್ಪನಾಗಿ ಅಭಿನಯಿಸದ ಸಂದರ್ಭವನ್ನು ನೆನಪಿಸಿಕೊಂಡರು.
ಇನ್ನು, ‘ಜಡಭರತ ನಾಟಕೋತ್ಸವ’ದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಾನ ವಿದುಷಿ ಶ್ರೀಮತಿ ಗಂಗೂಬಾಯಿ ಹಾನಗಲ್ಲರದು ಆತ್ಮೀಯತೆ ತುಂಬಿದ ಮಾತು. ತಮ್ಮ ಮತ್ತು ಜಿ.ಬಿ. ಜೋಶಿಯವರ ಪರಿಚಯ, ಅವರ ಮನೆತನದೊಂದಿಗಿನ ತಮ್ಮ ನಂಟು, ಅವರ ಸಾಹಿತ್ಯ ಚಟುವಟಿಕೆ ಮುಂತಾದವನ್ನು ಕುರಿತ ಮೆಲುಕು ಅದು. ತಾವು ಸದಾ ಕುತೂಹಲದಿಂದಲೇ ಎಲ್ಲವನ್ನೂ ನೋಡುತ್ತಾ ಬಂದವರು. ಈ ನಾಟಕೋತ್ಸವವನ್ನೂ ಕುತೂಹಲದಿಂದಲೇ ನೋಡಲು ಬಂದಿದ್ದೇನೆ ಎಂದರು.
ಮೊದಲ ದಿನದ (1990ರ ಮಾರ್ಚ್ 9) ನಾಟಕ ‘ಕದಡಿದ ನೀರು’. ಇದನ್ನು ಜಿ.ಬಿ. ಜೋಶಿಯವರು ‘ಅನಾಮಧೇಯ’ ಎಂಬ ಕಾವ್ಯನಾಮದಲ್ಲಿ ಬರೆದಿದ್ದು ಅನೇಕ ತಂಡಗಳು, ಸುವಿಖ್ಯಾತ ನಿರ್ದೇಶಕರು ಪ್ರಯೋಗಿಸಿದ ನಾಟಕ ಇದು. ಈ ಉತ್ಸವದಲ್ಲಿ ಹುಬ್ಬಳ್ಳಿಯ ಅಭಿರುಚಿ ಎಂಬ ತಂಡ ಪ್ರದರ್ಶಿಸಿದ ‘ಕದಡಿದ ನೀರು’ ನಾಟಕವನ್ನು ರಂಗ ವಿನ್ಯಾಸಗೊಳಿಸಿ ನಿರ್ದೇಶಿಸಿದ್ದವರು ಪ್ರಮೋದ್ ಶಿಗ್ಗಾಂವ್. (ಈ ಪ್ರಯೋಗದಲ್ಲಿ ಗರುಡರ ವಂಶದ ಕುಡಿ ಪರಿಮಳಾ ಕುಲಕರ್ಣಿ ಅಭಿನಯಿಸಿದ್ದು ಇನ್ನೊಂದು ವಿಶೇಷ.)
ಈ ನಾಟಕೋತ್ಸವದ ಎರಡನೆಯ ದಿನ (1990ರ ಮಾರ್ಚ್ 10) ಮತ್ತೊಂದು ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಯಿತು. ಅವತ್ತು ಬೆಂಗಳೂರು ಬೆನಕ ತಂಡದವರಿಂದ ‘ಜಡಭರತ’ರ ಸುಪ್ರಸಿದ್ಧ ನಾಟಕ ‘ಸತ್ತವರ ನೆರಳು’ ಪ್ರಯೋಗ. ಬಿ.ವಿ. ಕಾರಂತರು ನಿರ್ದೇಶಿಸಿದ ಈ ನಾಟಕದ ಪ್ರಯೋಗಗಳು ಆ ಮೊದಲೇ ಹುಬ್ಬಳ್ಳಿಯಲ್ಲಿ ಆಗಿದ್ದವಾದರೂ ಪ್ರಸ್ತುತ ಪ್ರಯೋಗಕ್ಕೆ ಇನ್ನೂ ಒಂದು ಮಹತ್ವವಿತ್ತು. ಅಂದಿನ ಪ್ರಯೋಗಕ್ಕೆ ಮೊದಲು ‘ಜಡಭರತ’ರಿಗೆ ಸನ್ಮಾನ ಕಾರ್ಯಕ್ರಮ. ಈ ನಾಟಕೋತ್ಸವವನ್ನು ಮಾಡುತ್ತೇನೆಂಬ ಪ್ರಸ್ತಾವನೆಯನ್ನು ಮುಂದಿಟ್ಟಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದ ಹಿರಿಯ ನಾಟಕಕಾರ, ಮತ್ತು ನಾಟಕ ಅಕಾಡೆಮಿಯ ಅಧ್ಯಕ್ಷ ಪರ್ವತವಾಣಿ ಆ ದಿನದ ಮುಖ್ಯ ಅತಿಥಿ. ‘ಜಡಭರತ’ರನ್ನು ತುಂಬು ಹೃದಯದಿಂದ ಗೌರವಿಸಿದ ಅವರು, ”ಕನ್ನಡದ ಎಲ್ಲ ಹಿರಿಯ ನಾಟಕಕಾರರು ಬರೆದ ನಾಟಕಗಳ ಉತ್ಸವಗಳು ನಡೆಯಬೇಕು. ಅದರಿಂದ ಆಯಾ ನಾಟಕಕಾರನ ನಿಲುವು ಮತ್ತು ಕೊಡುಗೆಯ ಕುರಿತ ಒಂದು ಸ್ಪಷ್ಟ ಚಿತ್ರಣ ಪ್ರೇಕ್ಷಕರಿಗೆ ಸಿಗುತ್ತದೆ. ಇಂಥ ಉತ್ಸವಗಳು ಮತ್ತೆ ಮತ್ತೆ ನಡೆಯುತ್ತಿದ್ದರೆ ಜನಕ್ಕೆ ನಾಟಕಗಳ ಬಗ್ಗೆ ಹೆಚ್ಚು ಒಲವು ಉಂಟಾಗುತ್ತದೆ. ಪ್ರಸ್ತುತ ‘ಜಡಭರತ ನಾಟಕೋತ್ಸವ’ದ ಯಶಸ್ಸು ಉಳಿದ ಇಂಥ ಚಟುವಟಿಕೆಗಳಿಗೆ ಪ್ರೇರಣೆಯಾಗಲಿ,” ಎಂದರು.
ಅಂದಿನ ಸಮಾರಂಭದಲ್ಲಿ ಭಾಗವಹಿಸಿದ್ದ ‘ಜಡಭರತ’ರ ಇನ್ನಿಬ್ಬರು ಅಭಿಮಾನಿಗಳೆಂದರೆ ನಟ ನಿರ್ದೇಶಕ ನಾಗಾಭರಣ ಮತ್ತು ನಟ ಎಂ. ಕೆ. ಸುಂದರರಾಜ್. ಜಿ.ಬಿ.ಯವರು ಹೇಗೆ ತಮ್ಮನ್ನು ಮೊಮ್ಮಕ್ಕಳಂತೆ ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ, ಅವರ ಸಾನ್ನಿಧ್ಯ ತಮಗೆ ಹೊಸದನ್ನು ಯೋಚಿಸಲು ಹೇಗೆ ಪ್ರೇರಣೆ ನೀಡುತ್ತಿರುತ್ತದೆ ಎಂಬುದನ್ನು ಇಬ್ಬರೂ ಸ್ಮರಿಸಿಕೊಂಡರು.
ಮೂರನೆಯ ದಿನ (1990ರ ಮಾರ್ಚ್ 11) ವೀಕ್ಷಕರಿಗೆ ಇನ್ನೊಂದು ಅನುಭವ. ಆವತ್ತು ‘ಆ ಊರು ಈ ಊರು’ ನಾಟಕ ಪ್ರಯೋಗ. ಬೆಳಗಾವಿಯ ಮಂಥನ ತಂಡದ ಕಲಾವಿದರಿಂದ. ಇಲ್ಲಿ ಜಡಭರತರು ಕಟ್ಟಿಕೊಡುವ ಅನುಭವವೇ ಬೇರೆ. ಅವರು ಬಳಸುವ ಭಾಷೆ, ಅದರ ಸತ್ವ, ಆಶಯ ಎಲ್ಲವನ್ನೂ ಪ್ರೇಕ್ಷಕರಿಗೆ ತಲಪಿಸುವಲ್ಲಿ ನಿರ್ದೇಶಕರು (ಶ್ರೀಪತಿ ಮಂಜನಬೈಲು) ಯಶಸ್ವಿಯಾದರು. ಉತ್ತರ ಕರ್ನಾಟಕದ ಅಪ್ಪಟ ಸಂಪ್ರದಾಯ, ಆ ವಿಶಿಷ್ಟ ದಿರಿಸು, ಮಾತಿನ ಶೈಲಿ, ನುಡಿಗಟ್ಟುಗಳು, ಎಲ್ಲವೂ ಪ್ರೇಕ್ಷಕರಿಗೆ ತಾವು ನಾಟಕವನ್ನು ನೋಡುತ್ತಿದ್ದೇವೆಂಬ ಅನಿಸಿಕೆಯನ್ನೇ ಉಂಟು ಮಾಡಲಿಲ್ಲ. ತಾವೂ ಆ ಕಥೆಯಲ್ಲಿ ಆ ಪಾತ್ರಗಳೊಂದಿಗೆ ಒಂದಾಗಿ ಮುನ್ನಡೆದ ಅನುಭವ ಅವರದು.
ನಾಲ್ಕನೆಯ ಮತ್ತು ಕೊನೆಯ ದಿನ (1990ರ ಮಾರ್ಚ್ 12) ಜಡಭರತರ ಮತ್ತೊಂದು ಹೆಸರಾಂತ ನಾಟಕ ‘ನಾನೇ ಬಿಜ್ಜಳ’ವನ್ನು ಹುಬ್ಬಳ್ಳಿಯ ಪ್ರಗತಿ ಕಲಾವೃಂದದ ಕಲಾವಿದರು ಪ್ರಸ್ತುತಪಡಿಸಿದರು. ಬಂಗಾಳಿ ಕನ್ನಡಿಗ ಎಂದೇ ಹೆಸರು ಮಾಡಿದ್ದ ನಿರ್ದೇಶಕ ಚಿತ್ತರಂಜನ ಚಟರ್ಜೀ ಈ ನಾಟಕದ ಅಂತಃಸತ್ವವನ್ನು ಅರಿತುಕೊಂಡು, ಅದನ್ನು ಕಲಾವಿದರ ಮೂಲಕ ಪ್ರೇಕ್ಷಕರಿಗೆ ತಲಪಿಸುವಲ್ಲಿ ಯಶಸ್ವಿಯಾದರು.
ಈ ನಾಟಕ ಪ್ರದರ್ಶನಕ್ಕೆ ಮೊದಲು ‘ಜಡಭರತ ನಾಟಕೋತ್ಸವ’ದ ಸಮಾರೋಪ ಸಮಾರಂಭ ನಡೆಯಿತು. ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಅಧ್ಯಕ್ಷ ಡಾ. ಎಸ್. ಎಸ್. ಗೋರೆಯವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದವರು ಹುಬ್ಬಳ್ಳಿ-ಧಾರವಾಡ ಮಹಾನಗರಸಭೆಯ ಆಗಿನ ಮಹಾಪೌರ, ಕಲಾಭಿಮಾನಿ ಮೋಹನ ಏಕಬೋಟೆಯವರು. ”ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಹಾನಗರದ ಬದುಕು ಹಸನಾಗುತ್ತದೆ. ಇಂಥ ಬದುಕು ಹಸನುಗೊಳಿಸುವ ಎಷ್ಟು ಕಾರ್ಯಕ್ರಮಗಳಾದರೂ ಸರಿ, ಮಹಾನಗರ ಸಭೆ ಅವುಗಳನ್ನು ಬೆಂಬಲಿಸುತ್ತದೆ,” ಎಂಬುದವರ ಅಭಿಪ್ರಾಯ.
ಈ ನಾಲ್ಕೂ ದಿನ ನಮ್ಮೊಂದಿಗಿದ್ದು ಸಂತೋಷಪಟ್ಟವರು, ತಮ್ಮ ಆತ್ಮೀಯತೆಯ ಸಿಂಚನಗೈದವರು ಹಿರಿಯ ವೃತ್ತಿ ರಂಗಭೂಮಿ ನಟ ಏಣಿಗಿ ಬಾಳಪ್ಪನವರು.
ಇದೇ ಸಂದರ್ಭದಲ್ಲಿ ಅಭಿನಯ ಭಾರತೀಯ ರಾಘವೇಂದ್ರ ಹುನಗುಂದ ಸಂಪಾದಿಸಿದ ‘ಜಡಭರತ ನಾಟಕೋತ್ಸವದ ನೆನಪಿನ ಸಂಚಿಕೆ’ಯನ್ನು ಬಿಡುಗಡೆ ಮಾಡಲಾಯಿತು. ಈ ಸಂಚಿಕೆಯಲ್ಲಿ ಹಿರಿಯ ಪತ್ರಕರ್ತ ಪಾ.ವೆಂ. ಆಚಾರ್ಯರ ‘ಕನಸುಗಾರ ಜಿ.ಬಿ.’, ವಿಮರ್ಶಕ ಡಾ. ಕೀರ್ತಿನಾಥ ಕುರ್ತಕೋಟಿಯವರ ‘ಜಡಭರತ ನಾಟಕಗಳು’ (ಒಂದು ಅವಲೋಕನ), ಡಾ. ನ. ರತ್ನ ಅವರ ‘ನಾಟಕದ ಜೋಶಿ’, ಹಾಗೂ ನಟ ಎಂ.ಕೆ. ಸುಂದರರಾಜ್ ಬರೆದ’ಕಲ್ಲು ಸಕ್ಕರೆ ಅಜ್ಜ’ ಮುಂತಾದ ಲೇಖನಗಳನ್ನು ಅಳವಡಿಸಲಾಗಿದೆ.

-೦-೦-೦-೦-೦-

‘ಜಡಭರತ ನಾಟಕೋತ್ಸವ’ ಮುಗಿದ ಕೆಲವೇ ದಿನಗಳಲ್ಲಿ ನಾಟಕ ಅಕಾಡೆಮಿಯ ಅವಧಿಯೂ ಮುಗಿಯಿತು. ಅಷ್ಟೊತ್ತಿಗಾಗಲೇ ನಾನು ಕೆಲಸ ಮಾಡುತ್ತಿದ್ದ ‘ಸಂಯುಕ್ತ ಕರ್ನಾಟಕ’ದಲ್ಲಿಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಆಡಳಿತ ವರ್ಗದ ಆಟಾಟೋಪವನ್ನು ಸಹಿಸದೇ, ಕಾರ್ಮಿಕರು ಮುಷ್ಕರ ಹೂಡುವ ಎಚ್ಚರಿಕೆಯನ್ನು ನೀಡಿದ್ದರು. ಮಾತುಕತೆ ಫಲ ನೀಡದ್ದರಿಂದ 1990ರ ಆಗಷ್ಟ್ ತಿಂಗಳ ಮಧ್ಯದ ಒಂದು ದಿನ ಬೆಳಗಾಗುವುದರೊಳಗಾಗಿ ಕಾರ್ಮಿಕರು ‘ಲಾಲ್ ಜೇಂಡಾ’ ಹಿಡಿದು ಸಂಸ್ಥೆಯ ಮಹಾದ್ವಾರದ ಎದುರು ಗುಂಪುಗೂಡಿ ನಿಂತರು. ಆ ಒಳಗಾಗಿ, ಆಡಳಿತ ಮಂಡಳಿ ಬೆಂಗಳೂರಿನಿಂದ ಕೆಲಸಗಾರರನ್ನು ತಂದು ಪತ್ರಿಕೆಯನ್ನು ನಡೆಸಲು ಎಲ್ಲ ಏರ್ಪಾಡು ಮಾಡಿಕೊಂಡಿತ್ತು. ಕಾರ್ಮಿಕರನ್ನು ಬಗ್ಗುಬಡಿಯಲು ಏನು ಬೇಕಾದರೂ ಮಾಡಲು ಅದು ಸಿದ್ಧವಾಗೇ ಕೂತಿತ್ತು. ಇದು ಕಾರ್ಮಿಕರನ್ನು ಇನ್ನಷ್ಟು ಕೆರಳಿಸಿತು.
ಮುಷ್ಕರ ಸರಾಸರಿ ಒಂದು ವರ್ಷ ಮುಂದುವರಿಯಿತು. ನನ್ನನ್ನೂ ಸೇರಿ ಎಷ್ಟೋ ಜನರನ್ನು ಆಡಳಿತ ಮಂಡಳಿ ‘ಡಿಸ್ಮಿಸ್’ ಮಾಡಿ ಆರ್ಡರ್ ಕಳಿಸಿತು. ನಾವೆಲ್ಲ ಹೊಟ್ಟೆಪಾಡಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ. ಅಂಥದರಲ್ಲಿ ಎಲ್ಲಿಯ ಸಾಹಿತ್ಯ, ಎಲ್ಲಿಯ ರಂಗಭೂಮಿ? ಕುಟುಂಬ ನಿರ್ವಹಣೆಗಾಗಿ ನಾನು ಪ್ರಿಂಟಿಂಗ್ ಕಾಂಟ್ರಾಕ್ಟ್ ಮಾಡತೊಡಗಿದೆ.
ಒಂದು ವರ್ಷ ಮುಗಿಯುವ ಹೊತ್ತಿಗೆ, 1991ರ ಆಗಸ್ಟ್ ಹೊತ್ತಿಗೆ ಆಡಳಿತ ಮಂಡಳಿ ‘ಡಿಸ್ಮಿಸ್’ ಆರ್ಡರನ್ನು ವಾಪಸ್ಸು ಪಡೆದು ನಮ್ಮನ್ನೆಲ್ಲ ಮತ್ತೆ ಕೆಲಸಕ್ಕೆ ಹಾಜರಾಗುವಂತೆ ಹೇಳಿ ಕಳುಹಿಸಿತು. ಆಗ ಇದ್ದ ಪತ್ರಿಕೆಗಳು ಕೇವಲ ಕೈಬೆರಳೆಣಿಕೆಯಷ್ಟು. ಉಪಗ್ರಹ ಚಾನೆಲ್ಲುಗಳಿನ್ನೂ ಕಲ್ಪನೆಯಲ್ಲಿ ಕೂಡ ಇರಲಿಲ್ಲ. ಪತ್ರಿಕಾ ನೌಕರರಿಗೆ ಇದ್ದ ಅವಕಾಶಗಳು ತೀರ ಸೀಮಿತ. ನಾವು ಆಡಳಿತ ಮಂಡಳಿಯ ‘ಔದಾರ್ಯ’ವನ್ನು ಮಹಾಪ್ರಸಾದ ಎಂಬಂತೆ ಸ್ವೀಕರಿಸಲೇಬೇಕಾದ ಸ್ಥಿತಿ. ಆದರೂ, ಯಾವ ಹೊತ್ತಿಗಾದರೂ ಮನೆಗಪ್ಪಣೆ ಬರಬಹುದೆಂಬ ಎಚ್ಚರಿಕೆ ಇಟ್ಟುಕೊಂಡೇ ಕೆಲಸ ಮಾಡಬೇಕಾಗಿತ್ತು. ”ನಿಮ್ಮನ್ನು ಬೇರೆ ಯಾರೂ ಕಸ ಗುಡಿಸಲಿಕ್ಕೂ ಇಟ್ಟುಕೊಳ್ಳುವುದಿಲ್ಲ” ಎಂಬಂಥ ಮಾತುಗಳು ಶ್ಯಾಮರಾಯರ ಬಾಯಿಂದ ಉದುರುತ್ತಿದ್ದವು.
ಅಂಥದರಲ್ಲಿ ಕೆಲಸ ಪುನರಾರಂಭಿಸಿದ ಕೆಲವೇ ದಿನಗಳ ಮೇಲೆ ನಟ ಸುಂದರ ಕೃಷ್ಣ ಅರಸ್ ಭೇಟಿಯಾಗಬೇಕು ಅಂತ ಹೇಳಿ ಕಳಿಸಿದರೆ ನನ್ನ ಸ್ಥಿತಿ ಏನಾಗಬೇಡ? ಯಾರು ಯಾರನ್ನು ಯಾವಾಗ ಎಲ್ಲಿ ಎಷ್ಟೊತ್ತಿಗೆ ಎಷ್ಟು ಹೊತ್ತು ಭೇಟಿ ಮಾಡಿದ್ದರು ಎಂದೆಲ್ಲ ವರದಿ ಮಾಡುವ ಗುಪ್ತಚರರನ್ನು ಶ್ಯಾಮರಾಯರು ಸಾಕಿಕೊಂಡಿದ್ದರು. ನಾವು ಮೈಯೆಲ್ಲಾ ಕಣ್ಣಾಗಿ ಅಡ್ದಾಡಬೇಕಿತ್ತು. ಅಂಥದರಲ್ಲೂ ಭಂಡ ಧೈರ್ಯ ಮಾಡಿದೆ. ಸುಂದರ ಕೃಷ್ಣ ಅರಸ್ ಅವರನ್ನು ಭೇಟಿಯಾದೆ. ಅವರ ವಿನಂತಿಯ ಮೇರೆಗೆ ‘ಸಂಗ್ಯಾ ಬಾಳ್ಯಾ’ ಚಿತ್ರಕ್ಕೆ ಸಂಭಾಷಣೆ ಮತ್ತು ಹಾಡುಗಳನ್ನು ಬರೆಯಲು ಒಪ್ಪಿಕೊಂಡೆ.
ಆ ಚಿತ್ರ ಬಿಡುಗಡೆಯಾಯಿತು. ಸುದ್ದಿ ಶ್ಯಾಮರಾಯರ ಕಿವಿಗೆ ಬಿತ್ತು. ಕರೆಸಿ ಕೇಳಿದರು. ”ಹೌದು. ಬರೆದಿದ್ದು ಖರೆ. ಸಂಭಾಷಣೆ ಮತ್ತು ಮೂರು ಹಾಡುಗಳನ್ನು ಬರೆದಿದ್ದೇನೆ. ಇದೆಲ್ಲ ಸ್ಟ್ರೈಕು ನಡೆದಿದ್ದಾಗ ಬರೆದಿದ್ದು. ಹೊಟ್ಟೆ ಪಾಡಿಗೆ ಏನಾದರೂ ಮಾಡಲೇಬೇಕಾಗಿತ್ತಲ್ಲ,” ಅಂದೆ. ಅವರು ಜಾಸ್ತಿ ಮಾತಾಡಲಿಲ್ಲ.
ಅದಾದ ಮೇಲೆ ಸುಂದರ ಕೃಷ್ಣ ಅರಸ್ ನಿರ್ದೇಶನದ ಮತ್ತೊಂದು ಸಿನಿಮಾಕ್ಕೂ (ಸೂಪರ್ ನೋವಾ 459) ಸಂಭಾಷಣೆ ಬರೆದೆ. ಆಗಲೂ ಶ್ಯಾಮರಾಯರು ತಕರಾರು ಮಾಡಲಿಲ್ಲ. ಆದರೆ ಹುಬ್ಬಳ್ಳಿಗೆ ಬಂದಾಗಲೆಲ್ಲ, ”ಏನಪಾ? ಮತ್ಯಾವ ಸಿನೆಮಾಕ್ಕ ಬರೀಲಿಕತ್ತೀದಿ?” ಅಂತ ವ್ಯಂಗ್ಯವಾಡದೆ ಇರುತ್ತಿರಲಿಲ್ಲ.
ಈ ಎಲ್ಲ ಗಲಾಟೆಯ ನಡುವೆ ನನ್ನ ಧಾರವಾಡ ಭೇಟಿಗಳು ಕಡಿಮೆಯಾಗಿ ಹೋದವು. ಆಕಾಶವಾಣಿಗೂ ‘ಸದ್ಯ ಯಾವುದೇ ಕಾಂಟ್ರಾಕ್ಟ್ ಕಳಿಸಬೇಡಿ’ ಎಂದು ವಿನಂತಿಸಿಕೊಂಡಿದ್ದೆ. ‘ಅಭಿನಯ ಭಾರತಿ’ಯನ್ನು ಮುಂದುವರೆಸಿಕೊಂಡು ಹೋಗುತ್ತೇವೆಂದು ತಂಡದ ಧಾರವಾಡ ಗೆಳೆಯರು ಹೇಳಿದ್ದರಿಂದ ಅದನ್ನು ಅಲ್ಲಿಗೆ ವರ್ಗಾಯಿಸಲಾಗಿತ್ತು. ‘ಅಲ್ಲಿ ಹೋದ ಮೇಲೆ ಅದು ಅವರ ಕೂಸು; ನಾನು ದೂರ ಉಳಿಯುವುದೇ ವಾಸಿ,’ ಎಂದುಕೊಂಡೆ.
ಧಾರವಾಡದ ಭೇಟಿ ಕಡಿಮೆಯಾದದ್ದರಿಂದ ಅಟ್ಟದ ಅಜ್ಜ ಜಿ.ಬಿ.ಯವರ ದರ್ಶನವೂ ಅಪರೂಪದ್ದಾಯಿತು. ಆದರೂ ಒಮ್ಮೆ ಹೋಗಿ ಭೆಟ್ಟಿಯಾಗಿ ಬರಬೇಕೆಂಬ ಆಸೆ ಹಾಗೆ ಉಳಿದಿತ್ತು. ಶ್ಯಾಮರಾಯರ ಹಸ್ತಕರು ಎಲ್ಲೆಲ್ಲಿ ಅಡಗಿ ಕೂತಿರುತ್ತಿದ್ದರೋ ಹೇಳುವುದು ಕಷ್ಟ…
”ಏನಪಾ? ಮತ್ಯಾವ ಸಿನೆಮಾಕ್ಕ ಬರೀಲಿಕತ್ತೀದಿ?” ಅಂತ ವ್ಯಂಗ್ಯವಾಡುವ ಕೆ. ಶ್ಯಾಮರಾಯರೆಲ್ಲಿ… ;
”ಏ ಹುಡಗಾ… ಮತ್ಯಾs ಹೊಸಾ ನಾಟಕಾ ಬರದ್ಯೋ… ಏನs ಆಗ್ಲಿ, ಬರಿಯೂದ ಬಿಡಬ್ಯಾಡಾ…” ಎಂದು ಬೆನ್ನು ತಟ್ಟುವ ಜಿ.ಬಿ. ಜೋಶಿ ಅವರೆಲ್ಲಿ…
ಒಂದು ನಾಗರಕೋಟೆ… ಇನ್ನೊಂದು ಹಾಲಳ್ಳಿ !

-೦-೦-೦-೦-೦-

ಆವತ್ತು ಡ್ಯೂಟಿ ಮುಗಿಸಿ, ಪೇಟೆಯಲ್ಲಿ ತಿರುಗಾಡಿ, ಅವಶ್ಯ ಸಾಮಗ್ರಿಗಳೊಂದಿಗೆ ಮನೆ ಸೇರಿ, ಊಟ ಮಾಡಿ ಇನ್ನೇನು ಮಲಗೋಣ ಅಂತ ಹೋದರೆ ಯಾಕೋ ಬೇಗ ನಿದ್ದೆ ಬರಲಿಲ್ಲ. ಏನೋ ಹಳಹಳಿ. ಆ ಕಡೆಗೊಮ್ಮೆ, ಈ ಕಡೆಗೊಮ್ಮೆ ಮಗ್ಗುಲು ಬದಲಿಸುತ್ತಲೇ ‘ಛೇ… ಇವತ್ತು ಹೀಗೇಕಾಗುತ್ತಿದೆ…?’ ಎಂದುಕೊಳ್ಳುತ್ತಿರುವಷ್ಟರಲ್ಲೇ ಮನೆಯ ಎದುರು ಯಾವುದೋ ಕಾರು ಬಂದು ನಿಂತ ಸದ್ದು. ಬಾಗಿಲು ತೆಗೆದು ಮುಚ್ಚಿದ ಸದ್ದು. ಕಾರು ಮುಂದೆ ಸಾಗಿ ವಾಪಸ್ಸು ಬಂದು ನಿಂತ ಸದ್ದು. ಯಾರದೋ ಹೆಜ್ಜೆಗಳ ಸದ್ದು. ಬಾಗಿಲು ಬೆಲ್ ಮಾಡಿದ ಸದ್ದು.
ಹಾಸಿಗೆಯಿಂದೆದ್ದು ಬಾಗಿಲು ತೆಗೆದರೆ ಎದುರು ನಿಂತಾತ ನಮ್ಮ ಕಿರಿಯ ಸಹೊದ್ಯೋಗಿ. ಒಳಗೆ ಕರೆದೆ. ಆತ ಚೀಟಿಯೊಂದನ್ನು ನನಗಿತ್ತ. ನಮ್ಮ ಸಂಪಾದಕರು ಕಳಿಸಿದ್ದ ಎರಡೇ ಸಾಲುಗಳ ಸಂದೇಶ ಹೊತ್ತ ಚೀಟಿ :
‘ಹಿರಿಯ ಪ್ರಕಾಶಕ ಜಿ.ಬಿ. ಜೋಶಿ ನಿಧನರಾಗಿದ್ದಾರೆ. ಅವರ ಕುರಿತು ನಿಮ್ಮ ಬಳಿ ಇರುವ ಎಲ್ಲ ಮಾಹಿತಿ ಮತ್ತು ಫೋಟೋಗಳಿದ್ದರೆ ಅವುಗಳ ಸಮೇತ ಕೂಡಲೇ ಆಫೀಸಿಗೆ ಬನ್ನಿ…’
ನಮ್ಮ ಸಂಪಾದಕರಿಗೆ ‘ಮಾಹಿತಿ ಸಂಗ್ರಹ’ದ ನನ್ನ ಹವ್ಯಾಸ ಗೊತ್ತು. ಕೆಲವೇ ವರ್ಷಗಳ ಮೊದಲು ‘ಜಡಭರತ ನಾಟಕೋತ್ಸವ’ ಮಾಡಿದ್ದ ವಿಚಾರವೂ ಗೊತ್ತು. ಸಾಹಿತಿಗಳ ಸಾವು ಇಲ್ಲವೇ ಪ್ರಶಸ್ತಿಗಳಂಥ ಸಂಭ್ರಮದ ಸಂದರ್ಭದಲ್ಲೆಲ್ಲ ಅವರು ನನ್ನನ್ನೇ ಕರೆಯುತ್ತಿದ್ದರು. ಕೆಲವೊಮ್ಮೆ ಸಂಪಾದಕೀಯವನ್ನೂ ಬರೆದದ್ದಿದೆ.
ಆಗ ಸರಿಯಾಗಿ ರಾತ್ರಿಯ ಹನ್ನೊಂದು ಗಂಟೆ. ಕೂಡಲೇ ತಯಾರಾಗಿ ಜಡಭರತರ ಕುರಿತು ನನ್ನ ಬಳಿಯಿದ್ದ ಸಂಗ್ರಹದೊಂದಿಗೆ ಹೊರಟೆ.
ಆ ರಾತ್ರಿಯ ಹೊತ್ತಿನಲ್ಲಿ ಮೊದಲು ಮಾಡಿದ ಕೆಲಸ ಎಂದರೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗು, ಗುಲ್ಬರ್ಗದ ಗಣ್ಯರನ್ನು ಫೋನ್ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದ್ದು ; ಅವರ ಶೋಕ ಸಂದೇಶವನ್ನು ಬರೆದುಕೊಂಡದ್ದು. ಪಾಟೀಲ ಪುಟ್ಟಪ್ಪ, ಗಂಗೂಬಾಯಿ ಹಾನಗಲ್ಲ, ಚನ್ನವೀರ ಕಣವಿ, ಶ್ರೀಪಾದರಾವ್ ಗರುಡ, ಚಂದ್ರಕಾಂತ ಕುಸನೂರ ಹೀಗೆಯೇ ಹತ್ತು ಹಲವರು. ಆ ಸಂದರ್ಭದಲ್ಲಿ ಒಂದು ಕ್ಷಣ ಮಾತು ಹೊರಡದೇ, ”ಏನು ಹೇಳಬೇಕು ಅಂತ ತಿಳೀವಲ್ತರೆಪಾ…” ಅಂದ ಗಂಗೂಬಾಯಿಯವರು ಮುಂದೆ ಕಾಲು ಗಂಟೆಯ ನಂತರ ತಾವೇ ಫೋನ್ ಮಾಡಿ ತಮ್ಮ ಮತ್ತು ಜಿ.ಬಿ.ಯವರ ಒಡನಾಟದ ಕುರಿತು ಹೇಳಿದರು.
ಹೌದು, ಜಿ.ಬಿ. ಜೋಶಿಯವರದು ಅಯಸ್ಕಾಂತದಂಥ ವ್ಯಕ್ತಿತ್ವ. ತಮ್ಮ ಸರಳ ನಡೆ-ನುಡಿಗಳಿಂದ ಅವರು ಆಬಾಲವೃದ್ಧರಾದಿಯಾಗಿ ಜನಮನ ಗೆದ್ದವರು.
ಅಂಥ ಧೀಮಂತ ಚೇತನಕ್ಕೆ ಅವತ್ತು ನನ್ನ ‘ಅಕ್ಷರಾಂಜಲಿ’ಯನ್ನು ಸಲ್ಲಿಸಿದೆ.
ಹೀಗೆ ಹಿರಿಯ ಪ್ರಕಾಶಕ, ನಾಟಕಕಾರ, ಸಹೃದಯಿ, ಪದ್ಮಶ್ರೀ ಜಿ. ಬಿ. ಜೋಶಿ (29-07-1904 to 26-12-1993) ನನ್ನ ನೆನಪಿನಲ್ಲಿ ಚಿರಸ್ಥಾಯಿಯಾದರು.
 

‍ಲೇಖಕರು avadhi

April 21, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

20 ಪ್ರತಿಕ್ರಿಯೆಗಳು

  1. Badarinath Palavalli

    ತಾವು ಉಲ್ಲೇಖಿಸಿದ ಪ್ರಾಣಸ್ನೇಹಿತ ಚಿತ್ರಕ್ಕೆ ನಾನು 6ನೇ ಸಹಾಯಕ ಛಾಯಾಗ್ರಾಹಕ.
    ಪದ್ಮಶ್ರೀ ಜಿ.ಬಿ. ಜೋಶಿ – ಜಡಭರತರ ಬಗ್ಗೆ ಒಳ್ಳೆಯ ನುಡಿ ನಮನ ಈ ಲೇಖನ.
    ದಯಮಾಡಿ ನಮಗಾಗಿ ಪರ್ವತವಾಣಿಯವರ ಬಗ್ಗೆ ಬರೆದುಕೊಡಿ.

    ಪ್ರತಿಕ್ರಿಯೆ
  2. Guru dghalli

    NIMMA SUMMANE NENAPUGALU SAVINENAPUGALAGI KADUTHIVE……….. ANUBHAVADA ONDHU NENAPU SAVIRA MATHUGALIGE SAMAVENISUTTHADHE. CHENNAGIDHE SIR.

    ಪ್ರತಿಕ್ರಿಯೆ
  3. laxminarasimha

    ಮತ್ತೆ ಮನಮುಟ್ಟುವ ಲೇಖನ. ಧನ್ಯವಾದ ಗೋವಾ ಅವರಿಗೆ.

    ಪ್ರತಿಕ್ರಿಯೆ
  4. umasekhar

    vajapeyisie nimma lekhana vodide. jadabharatharannu nenapisiddakke thanks. Innomme A natakagalannu noduva ase. mathe neevu hora tanda jadabharatara nenapina sanchike vodalu ase. elli siguthe helutheera please.

    ಪ್ರತಿಕ್ರಿಯೆ
  5. ಮಹದೇವ ಹಡಪದ

    ನಾಗರಕೋಟೆ ಹಾಲಳ್ಳಿಗಳ ನಡುವೆ ನೀವು ಇದ್ದವರೆ…!? ನೆನ್ನೆ ಅಟ್ಟಕ್ಕೆ ಹೋದಾಗ ಸಮೀರ ಜೋಷಿ ಹತ್ತಿರ ಜಡಭರತರ ನಾಟಕೋತ್ಸವ ಜೂನ್ ನಲ್ಲಿ ಮಾಡಬೇಕು ಅಂತ ಮಾತಾಡಿದೆ. ಅವರೂ ಅಷ್ಟೆ ಖುಷಿಯಿಂದ ಪ್ರಯತ್ನ ಮಾಡೋಣ ಅಂದ್ರು.. ಆ ಉತ್ಸವ ಮಾಡಿದರೆ ನೀವು ಖಂಡಿತ ಅತಿಥಿಯಾಗಿ ಬರಬೇಕಾಗತದ ಸರ್.. ಹಿಂದಾಗಡೆ ಹೇಳಲಿಲ್ಲಾಂದೀರಿ ಮತ್ತ..

    ಪ್ರತಿಕ್ರಿಯೆ
  6. umesh desai

    ನಿಮ್ಮದು “ಸುಮ್ಮನೇ ನೆನಪುಗಳು” ಅಲ್ಲ
    ಕಮ್ಮನೆ ನೆನಪುಗಳು..ಎಷ್ಟೊಂದು ಗಂಧ ಹರಡತಾವ ಇವು..

    ಪ್ರತಿಕ್ರಿಯೆ
  7. ಜಿ.ಎನ್ ನಾಗರಾಜ್

    ಜಡ ಭರತರು ನನ್ನ ಬಹಳ ಮೆಚ್ಚಿನ ನಾಟಕಕಾರರು.ನಮ್ಮ ಸಮಾಜವನ್ನು ಅದರಲ್ಲಿಯೂ ಉತ್ತರ ಕರ್ನಾಟಕವನ್ನು ಅರ್ಥ ಮಾಡಿಕೊಳ್ಳಲು ನನಗೆ ಬಹಳ ನೆರವಾದವು ಅವರ ನಾಟಕಗಳು. ಅವರ ಪ್ರಸಿದ್ಧ ಅಟ್ಟವನ್ನು ಧಾರವಾಡದಲ್ಲಿದ್ದಾಗ ನಾನೂ ಕೆಲ ದಿನ ಹತ್ತಿದ್ದೇನೆ.ಕೆಲವು ಪರಹಸ್ತಂ ಗತಂ ಗತಂ ಆಗಿದ್ದರೂ ಈಗಲೂ ಅವರ ನಾಟಕಗಳು ನನ್ನ ಬಳಿ ಇವೆ.ನಿಮ್ಮ ಈ ನೆನಪುಗಳು ಜಡ ಭರತರ ಬಗೆಗಿನ ನನ್ನ ಅಭಿಮಾನ ಮತ್ತೆ ಉದ್ದೀಪ್ತಗೊಳಿಸಿತು. ಅವರ ನಾಟಕಗಳ ಮೂಲಕ ಕಂಡ ಸಮಾಜದ ಬಗ್ಗೆ ಬರೆಯಬೇಕೆಂದು ಒಮ್ಮೆ 1990 ರ ಸಮಯದಲ್ಲಿ ಆರಂಭಿಸಿದ್ದೆ.ಅದನ್ನು ಒಬ್ಬ ವಿಮರ್ಶಕರ ಬಳಿ ಪ್ರಸ್ತಾಪ ಮಾಡುತ್ತಿದ್ದಂತೆ ಅವರು ಒಂದು ಬಾಂಬ್ ಸಿಡಿಸಿದರು. ಜಡಭರತರ ನಾಟಕಗಳೆಲ್ಲ ಕೆಲ ಪಾಶ್ಚಾತ್ಯ ನಾಟಕಗಳ ಕನ್ನಡ ರೂಪ.’ಬಿರುಗಾಳಿ’ಯಂತೆ ಎಂದು. ಸಾಹಿತ್ಯ ಲೋಕದ ಹೊರ ಅಂಚಿನಲ್ಲಿ ನಿಂತು ಒಳಗೆ ಇಣುಕುತ್ತಿದ್ದ ನನಗೆ ಈ ವಿಷಯದ ಹಿಂದೆ ಬಿದ್ದು ಅನ್ವೇಷಣೆ ಮಾಡುವ ಅವಕಾಶವಿಲ್ಲದ್ದರಿಂದ ಅಲ್ಲಿಗೇ ನಿಲ್ಲಿಸಿದೆ.ಈಗಲೂ ಈ ಮಾತಿನ ಮರ್ಮವೇನು ಎಂದು ತಿಳಿಯುವ ಆಸೆ.ಉತ್ಸವದ ಸ್ಮರಣ ಸಂಚಿಕೆಯ ಪ್ರತಿ ಸಿಗಬಹುದೇ ?

    ಪ್ರತಿಕ್ರಿಯೆ
  8. prakash hegde

    ಅಣ್ಣಾ…
    ನಿಮ್ಮ ಅನುಭವದ ಬುತ್ತಿಯ ಸೊಗಸು ಪ್ರತಿವಾರವೂ ಸವಿಯುವದು ನಮ್ಮ ಭಾಗ್ಯ…
    ನೀವು..
    ನಿಮ್ಮ ಗೆಳೆಯರ ತಂಡ.. ಆ ಅನುಭವಗಳು ನಮಗೆಲ್ಲ ಸ್ಪೂರ್ತಿ…
    ನೆನಪಿನ ದೋಣಿಯ ಪಯಣ ಹೀಗೆ ಸಾಗಲಿ…

    ಪ್ರತಿಕ್ರಿಯೆ
  9. h g malagi, dharwad

    ನೀವು ಬರೆದಂತೆ ಅವರು ಅಯಸ್ಕಾಂತವೇ. ಅಯಸ್ಕಾಂತ ದೂರ ಹೋದರೂ ಸೆಳೆತ ಕಡಿಮೆ ಆಗುವುದಿಲ್ಲ. ತುಂಬಾ ಒಳ್ಳೆಯ ಲೇಖನ. ಧನ್ಯವಾದಗಳು

    ಪ್ರತಿಕ್ರಿಯೆ
  10. arathi ghatikaar

    ಸುಮ್ಮನೆ ನೆನಪುಗಳು ಸರಣಿ ಬಹಳ ಚನ್ನಾಗಿ ಮೂಡಿ ಬರ್ತಾ ಇದೆ . ಲೇಖನದಲ್ಲಿ ನೀವು ಎಷ್ಟೂ ಹಿರಿಯ , ಹೆಸರಾಂತ ನಾಟಕಕಾರರರ, ಕಲಾವಂತರ ಬಗ್ಗೆ, ನಿಮ್ಮೊದಿಗೆ ಅವರಿಗಿದ್ದ ಒಡನಾಟ ಎಲವನ್ನೂ ಅಂದವಾಗಿ ನೆನಪಿಸಿ ಕೊಡುತ್ತೀರಿ , ಧನ್ಯವಾದಗಳು .

    ಪ್ರತಿಕ್ರಿಯೆ
  11. Ahalya Ballal

    ಈ ಲೇಖನಮಾಲೆ ಎಂದರೆ ಕನ್ನಡ ರಂಗಭೂಮಿಯ ಬಹುಮೂಲ್ಯ ಭಂಡಾರ. ಅದರ ಸಿರಿವಂತಿಕೆಯನ್ನು ನಮಗೂ ಹಂಚುತ್ತಿದ್ದೀರಿ….ತುಂಬ ಖುಶಿ ಮತ್ತು ಹೆಮ್ಮೆ!

    ಪ್ರತಿಕ್ರಿಯೆ
  12. Sudha ChidanandaGowda

    ಕೊನೆಯ ಭಾಗಕ್ಕೆ ಬರುತ್ತಿದ್ದಂತೆ ಕಣ್ಣಲ್ಲಿ ನೀರು ಬರುವಂತಾಯ್ತು.
    ಎಷ್ಟು ದುಡಿದೀರಿ ರಂಗಭೂಮಿಗೆ..
    ಅಷ್ಟೇ ಚೆನ್ನಾಗಿ ಹಂಚಿಕೊಳ್ತಲು ಇದೀರಿ.
    ಅನಂತ ಧನ್ಯವಾದಗಳು ಗೋವಾ ಸರ್.

    ಪ್ರತಿಕ್ರಿಯೆ
  13. balakrishna

    ಆತ್ಮಿಯ ವಾಜಪೇಯಿ ಅವರೆ,
    ಏನು ಲೇಖನ ಅದು. ನಿಜವಾಗಲು ನಿಮ್ಮ ನೆನಪುಗಳನ್ನೆಲ್ಲ ಒಂದು ದೊಡ್ಡ ಪುಸ್ತಕವಾಗಿಸ ಬೇಕು.
    ಮುಂದಿನವರಿಗೆ,ದಾಖಲೆಗೆ.
    ಇದನ್ನು ಆಗಿಸುತ್ತಿರುವ ಅವಧಿ ಮೋಹನ್ ಗೆ ಅಭಿನಂದನೆಗಳು .
    ಧನ್ಯವಾದಗಳು
    ಬಾಲು

    ಪ್ರತಿಕ್ರಿಯೆ
  14. rajkumar

    ಸತ್ತವರ ನೆರಳಿನಿಂದ…. ನನ್ನನ್ನ ಕಾಡಿದ ಮತ್ತು ಒಂತರಾ ಓದಿನೊಂದಿಗೆ ಇರಲು ಕಾಪಾಡಿದ ಜೀವ ನೆರಳು ಜಡಭರತ ಅವರು.. ಬೆಳೆದದ್ದು ಗೌರಿಶಂಕರ ಬೆಳೆಸಿದ್ದು ಶಂಕರಗೌರಿ ಸ್ವರ್ಗ ಶಿಖರ.. ಅವರ ಎಲ್ಲ ನಾಟಕಗಳು ಇವತ್ತಿನ ನನ್ನ ತಲೆಮಾರಿಗೆ ಸಿಗಬೇಕು… ಅಂತ ಹಬ್ಬ ಇಲ್ಲಿ ಇನ್ನೋಮ್ಮೆಯಾಗಲಿ.. ತುಂಬಾ ಧನ್ಯವಾದ ನಮ್ರ ನೆನಪುಗಳಿಗೆ..

    ಪ್ರತಿಕ್ರಿಯೆ
  15. Ambekar Pramod

    Gurugale,
    Nimma lekhan odi nanu matte chikkavanagi, hublige bandidde, nanna hattiara rokka iddidilla, adaru, nanna kakana hattir teagedukondu banda nenepu ayitu,
    dahanyavadagalu sir,

    ಪ್ರತಿಕ್ರಿಯೆ
  16. Pushparaj Chowta

    ವೈಯಕ್ತಿಕ ಕೆಲಸಗಳಿಂದ ಓದುವುದಾಗಿರಲಿಲ್ಲ ಯಾವುದೇ ಬರಹಗಳನ್ನು ಹಾಗೆ ‘ಜಡ’ವಾಗಿದ್ದ ನನ್ನನ್ನು ಮತ್ತೇ ಓದುವ ‘ಭರತ’ನನ್ನಾಗಿಸಿತು ನಿಮ್ಮ ಲೇಖನ.

    ಪ್ರತಿಕ್ರಿಯೆ
  17. ishwar Bidarannavar

    Nive Adrustavantharu gurugale nimage Shankarnaag avaranthaha mahaan vyaktigal jote kelasa maaduva melaagi avarannu noduva soubhagya sikkide nijakku savi nenapugal saagaradalli ondu haninirannu kuda bidade ellavannu nenapittu kondu namage avara parikalpane maaduttiddiri…. Dannyavaadagalu Gurugale

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: