ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಂಕೇಶರು ಸೋತದಿನ

-ಜಿ.ಪಿ.ಬಸವರಾಜು

ರೇಸ್‌ನಲ್ಲಿ ಸೋತು ಲಂಕೇಶರು
ಹೊರಬಂದಾಗ
ಆಕಾಶ ಸಣ್ಣಗೆ ಹನಿಯುತ್ತಿತ್ತು

ಇದ್ದುದನೆಲ್ಲ ಕುದುರೆ ಬಾಲಕ್ಕೆ
ಸುರಿದು ಕೈ ಖಾಲಿ ಖಾಲಿಯಾಗಿ
ಯಾವನಾದರೂ ಸಿಕ್ಕಬಹುದೇ
ಎಂದು ಓರೆಗಣ್ಣಲ್ಲಿ ನೋಡಿದರು:
ಸೋತ ಮುಖಗಳು ಕಾಲೆಳೆದುಕೊಂಡು
ಭೂಮಿಯ ಭಾರ ಹೊತ್ತುಕೊಂಡು
ಸಾಗುತ್ತಿತ್ತು ಹೆಣಗಳ ಪಯಣ

ಸೋತ ಕುದುರೆ ಕಣ್ಮುಂದೆ ಬಂದು
ಥತ್‌ ಎಂದು ಉಗಿದರು ಲಂಕೇಶ್‌
ಈ ಜನ್ಮದಲ್ಲಿ ಅದು ಗೆಲ್ಲುವುದಿಲ್ಲ
ಹಾಳಾಗಲಿ ಎಂದು ಬೈದರು ತುಸು
ಗಟ್ಟಿಯಾಗಿ ಸಿಟ್ಟನ್ನು ಹೊರಹಾಕಿ

ಸಾವಿರಾರು ರೂಪಾಯಿ ಬೇಡ
ಮನೆಗೆ ಹೋಗುವಷ್ಟಾದರೂ
ಇದು ಗೆಲ್ಲಲಿಲ್ಲ ಎಂದರೆ ಇದು
ಕುದುರೆಯಲ್ಲ ಕತ್ತೆ,ಎಂದು ರೇಗಿ,
ʼ ಗೆಲ್ಲದಿದ್ದರೆ ಹಾಳಾಗಲಿ ಕತ್ತೆಬಾಲʼ
ಎಂದು ಕ್ಯಾಕರಿಸಿ ಉಗಿದರು

ಪಕ್ಕದಲ್ಲಿ ನಡೆಯುತ್ತಿದ್ದವನು
ಇವರನ್ನೇ ದುರುದುರು ನೋಡಿದಾಗ,
ʼಗೊತ್ತು ಕಣಯ್ಯಾ, ನೀನೂ ಸೋತವನೇ,
ಮುಚ್ಚಕೊಂಡು ನಡೀʼ – ಎಂದರು
ಅವನು ತಬ್ಬಿಬ್ಬಾಗಿ ಹೊರಟುಹೋದ
ಸೋಲಿನ ಅವಮಾನದ ಭಾರ ಹೊತ್ತು

ಲಂಕೇಶರಿಗೆ ಶಾನೆ ಬೇಜಾರಾದದ್ದು
ಕಡ್ಲೇಕಾಯಿಗೂ ಕಾಸಿರಲಿಲ್ಲ
ಸೀಬೆ ಕಾಯಿಯವನು ಕೊಡೆಯ ಅಡಿಯಲ್ಲಿ
ಉಪ್ಪು ಖಾರ ಬೆರಸಿ ಮಾರುತ್ತಿದ್ದ ಕಂಡ-
ಕಂಡವರ ಬಾಯಲ್ಲಿ ನೀರೂರಿಸುತ್ತಿದ್ದ
ʼದರಿದ್ರದವನು ಅದೇನ್‌ ಮೋಡಿ ಮಾಡ್ತಾನೊ
ಜನ ಜೇನುಹುಳ ಮುತ್ತಿದಂಗೆ ಮುಗೇಬೀಳ್ತಾರೆʼ
ಎಂದು ಬೈಯ್ಯುತ್ತಲೇ
ವಾರೆಗಣ್ಣಲ್ಲಿ ನೋಡುತ್ತ ಜೇಬು ತಡಕಾಡಿದರು
ಬೆರಳಿಗೆ ಬೆರಳು ತಾಕಿ ಬೆಪ್ಪಾದರು

ನಡೆದೇಬಿಡೋಣ ಇವತ್ತು ಎಂದು
ಅವಡುಗಚ್ಚಿ ಹೆಜ್ಜೆಹಾಕಿದರು
ಮೆಜೆಸ್ಟಿಕ್ಕು ಗೂಡ್‌ಶೆಡ್‌ ರೋಡು ರಾಯಣ್ಣ ಸರ್ಕಲ್ಲು
ಬಸವನಗುಡಿ ನ್ಯಾಷನಲ್‌ ಕಾಲೇಜು…

ಈ ಬೆಂಗಳೂರು ಎಷ್ಟು ಬ್ಯೂಟಿಫುಲ್‌ ಎಂದು ಗೆಲುವಾದರು
ಮೋಡ ಹನಿಯುವುದು ನಿಂತಿತ್ತು, ಗಾಳಿ ಹಿತವಾಗಿ ಬೀಸುತ್ತಿತ್ತು
ಲಂಕೇಶರ ಕಾಲಲ್ಲಿ ಕುದುರೆಗಳು ಕೆನೆದು ನಡಿಗೆ ಬಿರುಸಾಗಿ
ಮೈಬೆವರಿ, ಹಿಗ್ಗು ಹಿರಿದಾಗಿ ಲಂಕೇಶ್‌ ನಕ್ಕರು ನೆಲ ನಡುಗುವಂತೆ
ತೋಳುಗಳ ಬೀಸುತ್ತ, ಬಾಹುಗಳ ಚಾಚುತ್ತ ಇಡಿಯಾಗಿ ಬೆಂಗಳೂರನ್ನೆ
ತಬ್ಬುತ್ತ ತಬ್ಬುತ್ತ ಮೋಡಗಳಿಗೆ ಕೈಚಾಚಿದರು ಹಿಡಿದು ಉಂಡೆಮಾಡುವಂತೆ

‍ಲೇಖಕರು Admin

10 July, 2026

1 Comment

  1. D.M Nadaf

    ಲಂಕೇಶರು ಸೋತ ದಿನ ಸುಂದರ ಕವಿತೆ.
    ಲಂಕೇಶರ ಜೀವ ಚೈತನ್ಯ ಹಿಡಿದಿಟ್ಟ ಶಬ್ದಗಳಿಂದ ಕವಿತೆ ಕಟ್ಟಿದ ಬಸವರಾಜು ಸರ್ ಗೆ ಅಭಿನಂದನೆಗಳು.
    ಡಿ ಎಂ ನದಾಫ್ ಅಫಜಲಪುರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading