ರೇವತಿ ಶೆಟ್ಟಿ ಓದಿದ ‘ಅಜ್ಜ ನೆಟ್ಟ ಹಲಸಿನ ಮರ’

ರೇವತಿ ಶೆಟ್ಟಿ

ಕಥೆಗಳು ನಮ್ಮಿಂದ ಓದಿಸಿಕೊಂಡ ಮೇಲೆ ಅಲ್ಲಿನ ವ್ಯಕ್ತಿ, ಸನ್ನಿವೇಶ, ಘಟನೆಗಳು ಮತ್ತೆ ಮತ್ತೆ ಮನಸ್ಸಿನ ಒಳಪರದೆಯ ಮೇಲೆ ಮೂಡಿ ಓದುಗಾರನನ್ನ ಬಿಡದೆ ಕಾಡುತ್ತವೆ ಎಂದರೆ ಅಲ್ಲಿಗೆ ಕಥೆಗಾರ ಗೆದ್ದಂತೆ! ಆ ಮಟ್ಟಿಗೆ ‘ಅಜ್ಜ ನೆಟ್ಟ ಹಲಸಿನ ಮರ’ದ ಲೇಖಕರಾಗಿರುವ ಸತೀಶ್ ಶೆಟ್ಟಿ ವಕ್ವಾಡಿ ಗೆದ್ದಿದ್ದಾರೆ.

ಕರಾವಳಿಯ ಬದುಕಿನ ಹಲವು ಆಯಾಮವನ್ನ ವಿಭಿನ್ನ ಚೌಕಟ್ಟುಗಳಲ್ಲಿ ಇರಿಸಿ ಕಥೆಗಳಲ್ಲಿ ಬರುವ ಪ್ರತಿಯೊಂದು ಪಾತ್ರದ ಮೂಲಕ ವಾಸ್ತವದ ವಿಡಂಬನೆಯನ್ನ, ಸ್ವಗತವನ್ನ ನಾಜೂಕಾಗಿ ಹೆಣೆದ ಲೇಖಕ ಆಯ್ದುಕೊಂಡ ವಿಷಯ ವಸ್ತು, ಬಹುತೇಕ ಎಲ್ಲರ ಅನುಭವಕ್ಕೆ ತಾಕಿ ಹೋದಂತಹುದೆ.

‘ಅಜ್ಜ ನೆಟ್ಟ ಹಲಸಿನ ಮರʼ ಹತ್ತು ಕಥೆಗಳ ಹೃದ್ಯಗುಚ್ಛ. ಒಂದೊಂದು ಕಥೆಯೂ ನಮ್ಮ ಸುತ್ತ ನಡೆದಿರಬಹುದಾದ ಸಾಧ್ಯತೆಗಳ ಪ್ರತಿಬಿಂಬವೆನಿಸುವುದು ಸಹಜ. ಬದಲಾವಣೆ ಮತ್ತು ವಾಸ್ತವದ ಸಂಘರ್ಷಕ್ಕೆ ತನ್ನ ತಾನು ಈಡು ಮಾಡಿಕೊಂಡು ಅಂತಿಮವಾಗಿ ಸೋಲಿಗೆ, ಮೌನಕ್ಕೆ ಶರಣಾಗುತ್ತಾನೆ ‘ಅಜ್ಜ ನೆಟ್ಟ ಹಲಸಿನ ಮರʼ ದ ಕಥಾ ನಾಯಕ. ‘ಬಣ್ಣದ ನೆರಳು’ ವಿನಲ್ಲಿ ಹಣದ ಮುಂದೆ ಸಂಬಂಧ, ಸ್ಮಾರಕಗಳ ಪರಿಧಿಯನ್ನ ಕತ್ತರಿಸಿ ತಂತಮ್ಮ ಬದುಕಿನ ಕಡೆಗೆ ಮುಖ ಮಾಡುವ ಮಗಳು, ಮಗ, ತಾಯಿಯ ಮುಂದೆ ಅಪರಿಚಿತನಾಗುವ ಅಪ್ಪ ಪ್ರಸ್ತುತ ತಲೆಮಾರಿನ ರೂಪಕದಂತೆ ಕಾಣಿಸುತ್ತಾನೆ.

ರಾಜಕೀಯ ಸ್ಥಿತ್ಯಂತರಗಳ ಮೇಲೆ ಬೆಳಕು ಚೆಲ್ಲುವ ‘ದಾಳ’ ಕಥೆ ಲಾಭ ಮತ್ತುಅಧಿಕಾರದ ಮುಂದೆ ಮೌಲ್ಯಗಳು ಹೇಗೆ ಮಣ್ಣು ಪಾಲಾಗುತ್ತವೆ ಎನ್ನುವುದನ್ನ ಮನಮುಟ್ಟುವಂತೆ ಚಿತ್ರಿಸಿರುವುದು ಲೇಖಕರ ಕಥಾ ಪ್ರಜ್ಞೆಯನ್ನ ಎತ್ತಿ ತೋರಿಸುತ್ತದೆ. ಒಂದೊಂದು ಪಾತ್ರದಲ್ಲೂ ನಾವೀನ್ಯತೆಯನ್ನ ಎತ್ತಿ ಹಿಡಿಯುವ ಕಥೆಗಾರ ‘ಕೊಜೆಯಾನೆ ಹೇಲು ಗೋವಿಂದಪ್ಪʼ ಎಂಬ ಪಾತ್ರದ ಮೂಲಕ ತೋರಿಸಿಕೊಟ್ಟ ಹಲವು ವೈರುಧ್ಯಗಳನ್ನ, ಹೆಂಗಸಿನ ಅಸಹಾಯಕತೆಯನ್ನ, ಬಡತನದಿಂದ ಬಳುವಳಿಯಾಗಿ ಬರುವ ಅವಮಾನವನ್ನ, ದೇವಸ್ಥಾನದ ಹಣವನ್ನ ಕದ್ದು ತಾಯಿ ಜೀವ ಉಳಿಸಿಕೊಂಡ ಬಸವನ ಮುಗ್ಧತೆಯನ್ನ ನಿರೂಪಿಸಿದ ರೀತಿಗೆ ಕಥೆ ಬಹುಕಾಲ ಕಾಡುವಂತಾಗಿಸುತ್ತದೆ.

ಅಪರಾಧ ಮತ್ತು ದೈವ ಭಕ್ತಿಯ ನಡುವೆ ಉಳಿವ ಜಿಜ್ಞಾಸೆಗೆ, ಪ್ರಶ್ನೆಗಳಿಗೆ ಸಾಕ್ಷಿ ‘ಜಿರ‍್ನೋದ್ಧಾರ’ ಎಂಬ ಕಥೆ. ‘ಪ್ರಸಾದ’ನ ಮೂಲಕ ಹಣ ದೇವಸ್ಥಾನದ್ದಾದರೇನು, ಯಾರದ್ದಾದರೇನು? ತಪ್ಪು ಸರಿಗಿಂತ ಜೀವನಕ್ಕೆ ಹಣ ಮುಖ್ಯ ಎಂದು ನಾಪತ್ತೆಯಾಗುವ ಉಪಾಧ್ಯರ ಮಗ ನಮ್ಮೊಳಗಿನ ಆಷಾಡಭೂತಿತನ ಮತ್ತು ಅಸಹಾಯಕ ಮನಸ್ಥಿತಿಯ ಬಿಂಬದಂತೆ ಗೋಚರಿಸುತ್ತಾನೆ. ‘ಕಾಣೆಯಾದವರು’ ಕಥೆಯಲ್ಲಿ ಪ್ರತಿ ಪಾತ್ರ ಕಟ್ಟುವಿಕೆಯ ಹಿಂದಿನ ಕಸೂರಿ ಮತ್ತು ಪ್ರತಿ ಸನ್ನಿವೇಶ ಕಟ್ಟಿಕೊಡುವ ನಿಗೂಢತೆ ಓದನ್ನ ಸುಲಲಿತವಾಗಿಸುತ್ತದೆ.

ಮನಸ್ಸಿನಲ್ಲಿ ಸಾಂದ್ರೀಕೃತವಾಗುವ ಭಾವನೆಗಳು ಕನಸಿನ ರೂಪದಲ್ಲಿ ಬಂದು ಬೆದರಿಸುವ ‘ನೇಣುಗಂಬ’ ಇಂದಿನ ತಲೆಮಾರಿನವರ ಮುಕ್ತ ಅನಿಸಿಕೆಗಳ ಗುಪ್ತ ಸಂವಾದ ಎನಿಸಿ ಮತ್ತೆ ಮತ್ತೆ ಓದುಗನನ್ನ ಒರೆಗೆ ಹಚ್ಚುವ ಹೊಸ ಪ್ರಯತ್ನವಿದು ಅನ್ನಿಸುತ್ತದೆ. ‘ಪಾಪಪ್ರಜ್ಞೆ’ಯಲ್ಲಿ ತನ್ನ ತಾನು ಶಿಕ್ಷಿಸಿಕೊಳ್ಳುವ ಕಥಾನಾಯಕ ಅಂತಿಮವಾಗಿ ನೈಜತೆಯನ್ನ ಒಪ್ಪಿಕೊಳ್ಳುವ ಪರಿ ಅನನ್ಯ. ‘ಪುನೀತಭಾವ’ದಲ್ಲಿ ನಗರೀಕರಣಕ್ಕೆ ಮಾರುಹೋದ ಇಂದಿನ ತಲೆಮಾರಿನವರ ಕಮರ್ಶಿಯಲ್‌ ಯೋಜನೆಗಳಿಗೆ ಒಗ್ಗಿಕೊಳ್ಳಲಾಗದೆ ಪರಿತಪಿಸುವ ಹೆತ್ತವರ ಮನಃಸ್ಥಿತಿ, ಹಸಿರು ಭೂಮಿಯನ್ನ, ತೋಟವನ್ನ ಉಳಿಸಿಕೊಳ್ಳಲೇಬೇಕೆಂದು ಹಠ ಹಿಡಿದ ದೊಡ್ಡಪ್ಪನಿಗೆ ಸಾಥ್ ನೀಡಿ ಪರೋಕ್ಷವಾಗಿ ಅವರ ಭಾವನೆಗಳಿಗೆ ಜೀವತುಂಬಿ ತೋಟವನ್ನ ಉಡುಗೊರೆಯಾಗಿ ನೀಡುವ ಪುನೀತ ಅಪ್ಪಟ ಗ್ರಾಮೀಣ ಸೊಗಡಿನ ದ್ಯೋತಕವೆನಿಸುತ್ತಾನೆ.

ಮನುಷ್ಯ ಸಂಬಂಧಗಳನ್ನ ಬೆಸೆಯಬೇಕಾದ ಸೇತುವೆ ಇಲ್ಲಿ ಸಾವಿನ ರಾಯಭಾರಿಯಾಗಿ ಚಿತ್ರಿತವಾಗುವುದು ಮತ್ತು ತಮ್ಮವರೆಂದುಕೊಂಡವರೇ ಆತ್ಮೀಯ ಗೆಳೆಯನ ಸಾವನ್ನೂ ಗುಟ್ಟಾಗಿ ಸಂಭ್ರಮಿಸಿದಾಗ ಅವರ ಸ್ವಾರ್ಥ ಮತ್ತು ಕುತ್ಸಿತ ಮನಸ್ಥಿತಿಯ ಪ್ರದರ್ಶನವಾಗುವುದು ‘ಸೇತುವೆ’ ಕಥೆಯ ಮೂಲಕ. ಹಸಿವಿನ ಮುಂದೆ ಎಲ್ಲವೂ ಎಲ್ಲರೂ ನಗಣ್ಯವೆನ್ನಿಸುವ ಕಥೆ ‘ಶಾಪ’ ಎಂಜಲನ್ನವನ್ನೆ ಮೃಷ್ಟಾನ್ನದ ರೀತಿ ತಿನ್ನುವ ಪ್ರತಾಪ, ಜಾತಿ, ಮತದ ಗೊಡವೆಯಿಲ್ಲದೆ ಆಪ್ತನಾಗುವ ನವೀನ ಬಡತನಕ್ಕೂ ಜಾತಿಗೂ ಇರುವ ಸಾಮ್ಯತೆ ಹಾಗೂ ಕ್ಷುದ್ರಮುಖಗಳ ಅನಾವರಣ ಮಾಡುವ ಲೇಖಕರು ಒಮ್ಮೊಮ್ಮೆ ಬಂಡಾಯದ ದನಿಯಾಗಿದ್ದಾರೆ ಈ ಕಥೆಯಲ್ಲಿ ಅನ್ನಿಸುವುದು ಸಹಜ.

ಸತೀಶ್ ಶೆಟ್ಟಿ ವಕ್ವಾಡಿ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಯುವ ಕಥೆಗಾರ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿರುವ ಇವರು ಹೈಸ್ಕೂಲ್ ದಿನಗಳಿಂದಲೇ ಸಾಹಿತ್ಯದೆಡೆಗೆ, ಬರವಣಿಗೆಯೆಡೆಗೆ ಒಲವು ಬೆಳೆಸಿಕೊಂಡವರು. ಕ್ರೀಡಾ ಲೇಖನ, ಕತೆ, ಸಣ್ಣಕತೆ, ಅಂಕಣಗಳು ಮತ್ತು ನಿರೂಪಣೆಯಿಂದ ಪ್ರಸಿದ್ಧರಾಗಿರುವ ಲೇಖಕರು ಕುಂದಾಪುರ ಕನ್ನಡವನ್ನ ತುಂಬಾ ಆಪ್ತವಾಗಿ, ಎಲ್ಲಾ ಕಥೆಗಳಲ್ಲೂ ಬಳಸಿಕೊಂಡು ಭಾಷೆಯ ಮೇಲಿನ ಹಿಡಿತವನ್ನ, ಸೊಗಡನ್ನ ನಮ್ಮೆಲ್ಲರ ಮುಂದೆ ಹರವಿದ್ದಾರೆ.

‘ಪಂಜು’ ಅಂತರ್ಜಾಲ ಪತ್ರಿಕೆಯಲ್ಲಿ ಇವರ ಹಲವು ಕತೆಗಳು ಪ್ರಕಟವಾಗಿ ಮೆಚ್ಚುಗೆಯನ್ನ ಗಳಿಸಿವೆ. ‘ಅಜ್ಜ ನೆಟ್ಟ ಹಲಸಿನ ಮರ’ ಸತೀಶ್ ಶೆಟ್ಟಿ ವಕ್ವಾಡಿಯವರ ಚೊಚ್ಚಲ ಕಥಾ ಸಂಕಲನ. ವಕ್ವಾಡಿ ಎಂಬ ಪುಟ್ಟ ಊರಿನ ಸುತ್ತಮುತ್ತಲಿನ ಪರಿಸರವನ್ನ, ಊರನ್ನ ಕಥೆಗಳಲ್ಲಿ ಅನಾಚೂನವಾಗಿ ಬಳಸಿಕೊಂಡಿರುವ ಲೇಖಕರು ನಗರದಲ್ಲಿದ್ದೂ ಗ್ರಾಮೀಣ ಜೀವನ ಶೈಲಿಯ ಹಂದರವನ್ನ ತಮ್ಮ ಕಥಾ ಸಂಕಲನದ ಮೂಲಕ ಮನಮುಟ್ಟುವಂತೆ ಚಿತ್ರಿಸಿರುವುದು ಈ ಕಥಾ ಸಂಕಲನದ ಕಾಣ್ಕೆ.

‍ಲೇಖಕರು Admin

July 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: