ಪ್ರತಿಭಾ ನಂದಕುಮಾರ್ ಅಂಕಣ- ಯಾವುದು ಸತ್ಯ, ಯಾವುದು ಮಿಥ್ಯ?

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಸಾಮಾನ್ಯ ಜನರಲ್ಲಿ ಒಂದು ಗೊಂದಲ ಇನ್ನೂವರೆಗೂ ಇದೆ. ಹೈದರಾಲಿ (ಮತ್ತು ಟೀಪು ಸುಲ್ತಾನ್ ಕೂಡಾ) ಒಳ್ಳೆಯವನೋ ಕೆಟ್ಟವನೋ ಎನ್ನುವುದು.  ಇದು, ಕಮಲಹಾಸನ್ ಅವರ ‘ನಾಯಗನ್’ ಚಿತ್ರದಲ್ಲಿ ಮಗು ‘ನೀಂಗ ನಲ್ಲವರಾ ಕೆಟ್ಟವರಾ?’ ಎಂದು ಕೇಳಿದಾಗ ಅವನು ‘ಗೊತ್ತಿಲ್ಲ’ ಎಂದು ಉತ್ತರ ಕೊಡುತ್ತಾನೆ, ಆ ಥರ. ನಮ್ಮ ಚರಿತ್ರೆ ರಕ್ತಸಿಕ್ತವೇ. ಅಲ್ಲಿ ಮತ ಧರ್ಮ ಸಿದ್ಧಾಂತಗಳನ್ನು ಮೀರಿದ ಕ್ರೌರ್ಯ, ಸಹನೆ ಪ್ರೀತಿ ತಾಳ್ಮೆಯ ಜೊತೆಜೊತೆಗೇ ದ್ವೇಷ, ಶೌರ್ಯ, ಅತಿವರ್ತನೆಗಳೂ  ಕಾಣಿಸುತ್ತವೆ. ಹಾಗಾಗಿ ನಮಗೆ ಒಪ್ಪಿತವಾದದ್ದನ್ನು ಕಣ್ಣುಮುಚ್ಚಿ ಅಂಗೀಕರಿಸಿ ನಮಗೆ ಒಪ್ಪಿತವಲ್ಲದ್ದನ್ನು ‘ಪ್ರಕ್ಷಿಪ್ತ’ ಎಂದೋ ‘ಸುಳ್ಳು’ ಎಂದೋ ಕರೆದುಬಿಡುವುದು ನಮ್ಮ ಸಹಜ ಗುಣ.

ಹಿರಿಯ ಇತಿಹಾಸ ತಜ್ಞ ಸಿ ಹಯವದನ ರಾವ್ ಅವರು 1943 ರಲ್ಲಿ ಪ್ರಕಟಿಸಿದ ಹಿಸ್ಟರಿ ಆಫ್ ಮೈಸೂರು  (1399-1799 AD) ಗ್ರಂಥದ ಮುನ್ನುಡಿಯಲ್ಲಿ ಕೆಲವು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಇಲ್ಲಿ ಪೂರಕವಾದ ದೃಢೀಕರಣ ಮತ್ತು ದಾಖಲೆಗಳ ಪುರಾವೆ ಇಲ್ಲದಿದ್ದಲ್ಲಿ ಹೈದರಾಲಿಯ ಚಿತ್ರಣ ನಂಬಲಾಗದ ಸಂಗತಿ ಎನ್ನಿಸಬಹುದು.

ಹದಿನೆಂಟನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಪ್ರಬಲರಾಗಿದ್ದ ಪ್ರಚಂಡ (ಟೈಟಾನ್ಸ್) ರಾಗಿದ್ದ ಸ್ಟ್ರಿಂಜರ್ ಲಾರೆನ್ಸ್, ಐರ್ ಕೂಟೆ, ಕ್ಲೈವ್, ಹೈದರ್ ಅಲಿ ಮುಂತಾದವರ ಅದ್ಭುತ ಶಕ್ತಿ ಸಾಮರ್ಥ್ಯಗಳ ವರ್ಣರಂಜಿತ ಹಿನ್ನೆಲೆಯಲ್ಲಿ… ಹೈದರನ ನಾಟಕೀಯ ಬದುಕಿನ ಕಥೆ, ಚರಿತ್ರೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಸಾಮಾನ್ಯ ಓದುಗರಿಗೂ ರೋಚಕವೆನ್ನಿಸುವಂತಿದೆ.  

‘ಇಲ್ಲಿ, ಹೈದರನಿಗೆ ಸಂಬಂಧಪಟ್ಟ ಚಾರಿತ್ರಿಕ ಕಾಲವನ್ನು ವಸ್ತುನಿಷ್ಠವಾಗಿ ಪ್ರತಿಪಾದಿಸಲು ಗಂಭೀರ ಪ್ರಯತ್ನ ಮಾಡಲಾಗಿದೆ. ಹೈದರ್ ತನ್ನ ಗುರಿಯನ್ನು ಸಾಧಿಸಲು ವಾಸ್ತವವಾಗಿ ನಡೆಸಿದ ಕ್ರಮಗಳ ಬಗ್ಗೆ ನಿಖರವಾಗಿ ನಮಗೆ ತಿಳಿದಿಲ್ಲ. ಆತನ ಯುದ್ಧ ಕೌಶಲ್ಯದ ಬಗ್ಗೆ ನಮಗೆ ಗೊತ್ತು.  ಆದರೆ ನಿಜಕ್ಕೂ ಶತ್ರುಗಳ ಎದೆಯಲ್ಲಿ ಭಯದ ಕಂಪನ ಹುಟ್ಟಿಸುವ ಮತ್ತು ವಿದೇಶೀ ವೀಕ್ಷಕರು ಮತ್ತು ಟೀಕಾಕಾರರಲ್ಲಿ ಆಶ್ಚರ್ಯ ಹುಟ್ಟಿಸುವ, ಅಷ್ಟು ದೊಡ್ಡ ಸೈನ್ಯ ಕಟ್ಟುವಲ್ಲಿ ಆತನ ಚಾಣಾಕ್ಷತನ ಏನು ಎನ್ನುವುದು ರಹಸ್ಯವೇ ಆಗಿದೆ. ಅಷ್ಟು ಬೃಹತ್ ಸಂಖ್ಯೆಯಲ್ಲಿ ಸೈನಿಕರ ಊಟ, ಉಡುಗೆ, ಶಸ್ತ್ರಾಸ್ತ್ರ ವಾಸ, ಶಿಸ್ತು ಇವೆಲ್ಲವನ್ನೂ ಹೇಗೆ ಸಂಭಾಳಿಸಿದ? (ಬೆಂಗಳೂರಿನ ಕಲಾಸಿಪಾಳ್ಯ ಸ್ಥಾಪನೆಯಾಗಿದ್ದೇ ಸೇನೆಗೆ ಟೆಂಟುಗಳನ್ನು ಸರಬರಾಜು ಮಾಡುವ ಜನರ ವಸತಿಗಾಗಿ).

ಜೊತೆಗೆ ಸಾವಿರಾರು ಎತ್ತು ಮತ್ತು ಹಸುಗಳು, ದಿನನಿತ್ಯದ ಊಟಕ್ಕಾಗಿ ದವಸ ಇತ್ಯಾದಿಗಳನ್ನು ಹೊತ್ತುಕೊಂಡು ಸೇನೆಯ ಜೊತೆಗೆ ಹೋಗುತ್ತಿದ್ದವು.) ಅವರೆಲ್ಲ ಅವನಿಗಾಗಿ ಮತ್ತು ಆತನ ರಾಜ್ಯಕ್ಕಾಗಿ ಪ್ರಾಣ ತೆರುವ ನಿಷ್ಠೆ ತೋರಿಸುವಂತೆ ಮಾಡಲು ಅವನಿಗೆ ಹೇಗೆ ಸಾಧ್ಯವಾಯಿತು?  ಇದಕ್ಕೆಲ್ಲ ಗಂಭೀರ ಯತ್ನದ ಅಗತ್ಯವಿದೆ ಮತ್ತು ಹೈದರನ ಪ್ರಯತ್ನದ ಬಗ್ಗೆ ಅಲ್ಲಲ್ಲಿ ದಾಖಲೆಗಳು ಸಿಗುತ್ತವೆ

‘ಹೈದರ್ ಏಕಕಾಲದಲ್ಲಿ ಯೋಧನಾಗಿ ಮಹಾನ್ ವಿಧ್ವಂಸಕನಾಗಿದ್ದ ಮತ್ತು ಅಪ್ರತಿಮ ಸುಧಾರಕನಾಗಿದ್ದ. ಹೊಸ ಸೈನ್ಯ, ಹೊಸ ಯುದ್ಧ ತಂತ್ರಗಳನ್ನು ಕಟ್ಟುತ್ತಾ ಯುರೋಪಿಯನ್ ಸೈನ್ಯಕ್ಕೆ ಸವಾಲಾಗಿದ್ದ. ಹೊಸ ಮಾದರಿಯಲ್ಲಿ ಹೊಸ ರಾಜ್ಯ ಕಟ್ಟುವ ಅವನ ಪ್ರಯತ್ನ ಸಂಪೂರ್ಣವಾಗಿ ಯಶಸ್ವಿಯಾಗದೇ ಇರಲು ಮುಖ್ಯ ಕಾರಣ, ಬಹುಶಃ ಮಾನವನ ಪ್ರಯತ್ನಗಳು ಮೂಲವಾಗಿ ನೈತಿಕತೆಯ ತಳಪಾಯದ ಮೇಲೆ ನಿಂತಿರುತ್ತವೆ ಎನ್ನುವುದನ್ನು ಅವನು ಅರಿತುಕೊಳ್ಳಲಿಲ್ಲ ಎಂದರೆ ತಪ್ಪಾಗಲಾರದೇನೋ. ಅಲ್ಲದೇ ಅವನು ಸಂದರ್ಭಕ್ಕೆ ತಕ್ಕಂತೆ ಮಣಿಯುವ ಮತ್ತು ವಿಧೇಯನಾಗುವಂತೆ ತನ್ನ ಮನಸ್ಸನ್ನು ರೂಢಿಸಿಕೊಳ್ಳಲಿಲ್ಲ.

ಸತತವಾಗಿ ವಂಚಿಸುವ ಅವನ ರೂಢಿಗತ ಸ್ವಭಾವ ಅಂತಿಮವಾಗಿ ದುರ್ಬಲ ಮತ್ತು ನಿಷ್ಕ್ರಿಯ ಎನ್ನಿಸಿಕೊಂಡಿತೇ ಹೊರತು ಪ್ರಬಲ ರಾಜಕೀಯ ತಂತ್ರವಾಗಲಿಲ್ಲ. ವಾಸ್ತವವಾಗಿ ಅದು ಅವನ ಮಹತ್ಸಾಧನೆಗಳನ್ನೂ ನಿರರ್ಥಕಗೊಳಿಸಿತು. ಅವನ ಎಲ್ಲಾ ಸಾಧನೆಗಳೂ ಕೊನೆಗೆ ಅವನ ಚಾಣಾಕ್ಷತನದ ತಂತ್ರಜಾಲ ಎನ್ನಿಸಿಕೊಂಡಿತೇ ಹೊರತು ಶಾಶ್ವತವಾಗಲಿಲ್ಲ. ಸತ್ಯವಾಗಿಯೂ ಅವನ ಬದುಕು ದುರಂತ ಎನ್ನಿಸಿಕೊಂಡಿತು. ಏಕೆಂದರೆ ಆತನ ಅಂತ್ಯ ಆತ ಅಷ್ಟು ಹೋರಾಡಿದ ತನ್ನ ರಾಜ್ಯದ ಹೊರಗೆ ಸಂಭವಿಸಿತು ಮತ್ತು ಅಂತಹ ದೈತ್ಯ ಪ್ರತಿಭೆಯ ವೀರ ನಮ್ಮ ನಡುವೆ ಇದ್ದು ಹೋದುದಕ್ಕೆ ಯಾವ ಸಾಕ್ಷಿಯೂ ಉಳಿಯಲಿಲ್ಲ.

‘ಹೈದರಾಲಿಯ ಬದುಕಿನ ಬಗ್ಗೆ ಬರೆದ ಮಾರ್ಕ್ ವಿಲ್ಕ್ಸ್, ಒರ್ಮೆ, ದೆ ಲ ತೂರ್ ಮತ್ತು ಇತರ ಎಲ್ಲರೂ ಅವರವರ ದೇಶದ ದೃಷ್ಟಿಕೋನದಿಂದ ಅವನನ್ನು ಅಳೆಯಲು ಯತ್ನಿಸಿದ್ದಾರೆ. ಒರ್ಮೆ ಮತ್ತು ವಿಲ್ಕ್ಸ್ ಬರೆದಾಗ ಅವರು ಹೈದರನ ಕಾಲಕ್ಕೆ ತೀರಾ ಹತ್ತಿರದಲ್ಲಿದ್ದರು. ಹಾಗಾಗಿ ವಸ್ತುನಿಷ್ಠವಾಗಿ ಪರಿಗಣಿಸಬೇಕಾದ ‘ದೂರ’ ಅವರಲ್ಲಿ ಇರಲಿಲ್ಲ. ಹೈದರ್ ಮತ್ತು ಟೀಪು ತಮ್ಮ ಬಗ್ಗೆ ಹೇಳಿಕೊಂಡ ಸಂಗತಿಗಳು ಅವರ ಕಾಲದಲ್ಲಿಯೇ ಸ್ವಲ್ಪ ದಾಖಲಾಗಿವೆ. ಇವುಗಳಲ್ಲಿ ಮುಖ್ಯವಾಗಿ ಅಜ್ಞಾತ ಚರಿತ್ರೆಕಾರನ ಹೈದರ್ ನಾಮಾ, ಹುಸೈನ್ ಅಲಿ ಖಾನ್ ಕಿರ್ಮಾನಿ, ಮಿರ್ಜಾತ್ ಇಕ್ಬಾಲ್ ಬರಹಗಳಿವೆ. ಕರ್ನಲ್ ಮೈಕ್ಸ್ 1842 ರವರೆಗೆ ನಿಖರವಾಗಿ ಬರೆದಿದ್ದಾನೆ. ರಾಬರ್ಟ್ ಒರ್ಮೆ ಮತ್ತು ಕಿರ್ಮಾನಿ ಹೆಚ್ಚುಕಡಿಮೆ ಒಂದೇ ರೀತಿಯ ವಿವರಗಳನ್ನು ನೀಡುತ್ತಾರೆ.’

ಆದರೆ ನಂತರ ಪ್ರಕಟವಾದ ಗ್ರಂಥಗಳಲ್ಲಿ ಆಕ್ರಮಣಕಾರೀ ವ್ಯಕ್ತಿಯಾಗಿ ಹೈದರ್ ಮತ್ತು ಯುವ ಶಕ್ತಿಯ ಕ್ರೂರನಾಗಿ ಟೀಪು ಮೂಡಿಬರುತ್ತಾರೆ.  ಇಬ್ಬರನ್ನೂ ಕಟಕಟೆಯಲ್ಲಿ ನಿಲ್ಲಿಸಿ ಅವರ ವ್ಯಕ್ತಿತ್ವಗಳನ್ನು ವಿಶ್ಲೇಷಿಸುವ ಪ್ರಯತ್ನ ಕಾಣುತ್ತದೆ. 

1760ರ ತಿರುಚಿನಾಪಳ್ಳಿ ಯುದ್ಧ ದಕ್ಷಿಣ ಭಾರತದ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ಪ್ರಸಂಗ. ತಿರುಚಿನಾಪಳ್ಳಿ ಯುದ್ಧದಲ್ಲಿ ಮರಾಠರು ಮೈಸೂರು ಸೈನ್ಯಕ್ಕೆ ಬೆಂಬಲ ಕೊಟ್ಟುಬಿಟ್ಟಿದ್ದರೆ ಬ್ರಿಟಿಷರು ಯಾವುದೇ ಕಾರಣಕ್ಕೂ ದಕ್ಷಿಣ ಭಾರತದಲ್ಲಿ ನೆಲೆಸಲು ಸಾಧ್ಯವಿರುತ್ತಿರಲಿಲ್ಲ.

ಇದು ಆಂಗ್ಲೋ – ಫ್ರೆಂಚ್ ಅವಧಿ ಎಂದು ಪರಿಗಣಿತವಾಗಿದ್ದು ಮೊಟ್ಟಮೊದಲ ಬಾರಿಗೆ ಮೈಸೂರನ್ನು ದಕ್ಷಿಣ ಭಾರತದ ರಾಜಕೀಯದಲ್ಲಿ ಮುಂಚೂಣಿಗೆ ತಂದಿತು.  ತಿರುಚಿನಾಪಳ್ಳಿಯ ಯುದ್ಧದಲ್ಲಿ ಹೈದರನಿಗೆ, ಅಂದರೆ ಮೈಸೂರಿಗೆ, ಆದ ಅನ್ಯಾಯವೇ ಮುಂದೆ ಹೈದರನಲ್ಲಿ ಸಮಗ್ರ ದಕ್ಷಿಣ ಭಾರತವನ್ನು ಗೆದ್ದುಕೊಳ್ಳುವ ಆಲೋಚನೆ ಹುಟ್ಟುಹಾಕಿತು. (ಈ ಅನ್ಯಾಯ ಏನು ಎನ್ನುವುದನ್ನು ಮುಂದೆ ಹೇಳುತ್ತೇನೆ) ಈ ಮೂಲ ಕಾರಣವೇ ಭಾರತದಿಂದ ಬ್ರಿಟಿಷ್ ಮತ್ತು ಫ್ರೆಂಚರನ್ನು ಮಾತ್ರವಲ್ಲ ಎಲ್ಲಾ ವಿದೇಶಿಯರನ್ನು ಹೊರಗೋಡಿಸುವ ಪ್ರಯತ್ನಕ್ಕೆ ನಾಂದಿ ಆಯಿತು.

ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಅಂಶ. ಹಾಗಾಗಿಯೇ ಚರಿತ್ರೆಕಾರರು/ವಿಶ್ಲೇಷಕರು ಹೈದರ್ (ಮತ್ತು ಟೀಪು) ಕಾಲದ ರಾಜಕೀಯ ವಿದ್ಯಮಾನಗಳನ್ನು ಅಧ್ಯಯನ ಮಾಡುವ ಅಗತ್ಯತೆ ಇದೆ. ಜೊತೆಗೆ ಆ ಮಹಾನ್ ವೀರರು ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ತಮ್ಮ ಬದುಕನ್ನೇ ಪಣಕ್ಕಿಟ್ಟರು ಎನ್ನುವುದನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

‘ಫ್ರೆಂಚ್ ಬರಹಗಾರ ದ ಲ ತೂರ್ 1784 ರಲ್ಲಿ ಅಂದರೆ ಹೈದರ್ ಮರಣಹೊಂದಿದ ಎರಡೇ ವರ್ಷಗಳಲ್ಲಿ ಅವನ ಬದುಕಿನ ಚರಿತ್ರೆಯನ್ನು ಪ್ರಕಟಿಸಿದ. ಅವನು ಹೈದರನಲ್ಲಿ ಕೆಲಸಕ್ಕೆ ಬೇರೆ ಇದ್ದ ಮತ್ತು ಅದರ ಮುನ್ನುಡಿಯಲ್ಲಿ ಹೇಳಿರುವಂತೆ ಹೈದರ್ ಬದುಕಿರುವಾಗಲೇ ಬರೆಯುವುದನ್ನು ಪ್ರಾರಂಭಿಸಿದ್ದ… ಅವನು ಹೈದರನನ್ನು ‘ತನ್ನ ಗೆಳೆಯ’ (mon ami) ಎಂದು ಹೇಳಿಕೊಳ್ಳುತ್ತಾನೆ… ಹೈದರನ ವ್ಯಕ್ತಿತ್ವ ಕುರಿತು ದ ಲ ತೂರ್ ತಾನು ಸ್ವತಃ ಕಂಡಿದ್ದನ್ನು ದಾಖಲಿಸಿದ್ದಾನೆ.’

ಈ ಕೃತಿಯ ಇಂಗ್ಲಿಷ್ ಅನುವಾದ 1784ರಲ್ಲಿಯೇ ಇಂಗ್ಲೆಂಡಿನಲ್ಲಿ ಪ್ರಕಟವಾಯಿತು. ಮತ್ತೆ 1855 ರಲ್ಲಿ ಟೀಪು ಸುಲ್ತಾನನ ಏಕಮಾತ್ರ ಜೀವಿತ ಮಗ ಗುಲಾಂ ಮೊಹಮ್ಮದ್  ತಿದ್ದಿ ಮತ್ತೆ ಪ್ರಕಟಿಸಿದ.  ಇದರ ಪ್ರತಿಯನ್ನೇ ಆತ ಎಲಿಜಿಬೆತ್ ರಾಣಿಗೆ ಕಾಣಿಕೆಯಾಗಿ ನೀಡಿದ (ಅದರ ಪತ್ರ ನೋಡಿ).

‘ಹೈದರನ ವ್ಯಕ್ತಿತ್ವ ಕುರಿತು ಬರೆಯಲು ಯಾವುದೇ ಮುಲಾಜು ಇರಬೇಕಾಗಿಲ್ಲ. ಸೈನಿಕನಾಗಿ, ಸೇನಾಧಿಪತಿಯಾಗಿ, ಯುದ್ಧ ತಂತ್ರಜ್ಞನಾಗಿ ಮತ್ತು ಆಡಳಿತಗಾರನಾಗಿ ಆತ ಮಹಾನ್ (ಗ್ರೇಟ್). ಅದೇ ಸಮಯದಲ್ಲಿ ಆತ ಮಾನವ ಸಹಜ ಆಕಾಂಕ್ಷೆಗಳಿಗೆ ತುತ್ತಾಗಿ, ಚಾರಿತ್ರಿಕವಾಗಿ ಹಲವಾರು ವ್ಯಕ್ತಿಗಳನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿರುವಂತೆಯೇ, ಈತನೂ ಆ ಆರೋಪಕ್ಕೆ ಗುರಿಯಾಗುತ್ತಾನೆ. ಆತ ಮೈಸೂರು ದೊರೆಗಳಿಗೆ ವಿಧೇಯನಾಗಿರುವಂತೆ ಸಾರ್ವಜನಿಕವಾಗಿ ನಡೆದುಕೊಂಡರೂ ಒಳಗೊಳಗೇ ಆತ ಅವರ ಸಾವನ್ನೇ ಬಯಸಿದ್ದ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ ಆದರೂ ಅದಕ್ಕೆ ಪುರಾವೆಗಳಿಲ್ಲ.’

ಆದರೆ ಇವತ್ತಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ದ್ವೇಷದ ಉರಿ ಹತ್ತಿ ಧಗಧಗಿಸುತ್ತಿರುವುದರಿಂದ ಹೈದರನನ್ನು ಈ ದೃಷ್ಟಿಕೋನದಿಂದ ನೋಡುವುದು ಅಸಾಧ್ಯವಾಗಿ ವಿದ್ಯಾರ್ಥಿಗಳ ಪಠ್ಯಪುಸ್ತಕದಿಂದ ಹೈದರನ ಬಗ್ಗೆ ಪಾಠಗಳನ್ನೇ ತೆಗೆದುಹಾಕುವುದರಿಂದ ನಮ್ಮ ಚರಿತ್ರೆಯನ್ನು ತಿಳಿದುಕೊಳ್ಳುವ ಅವಕಾಶವನ್ನೇ ನೀಡದೇ ಮುಂದಿನ ಪೀಳಿಗೆಗೆ ವಂಚನೆ ಮಾಡುವಂತಾಗುತ್ತದೆ. 

ಹೈದರನ ಸಮಕಾಲೀನನಾದ, ಅಸಾಧಾರಣ ಯೋಧನೆಂದು ಹೆಸರುವಾಸಿಯಾಗಿದ್ದ ತಮಿಳುನಾಡಿನ  ಮರುದನಾಯಕಂ ಪಿಳ್ಳೈ ಎನ್ನುವವನು ಇಸ್ಲಾಮಿಗೆ ಮತಾಂತರಗೊಂಡು, ಯೂಸುಫ್ ಖಾನ್ ಎಂದು ಹೆಸರಿಟ್ಟುಕೊಂಡು, ಮೊದಲು ಪಾಂಡಿಚೇರಿಯಲ್ಲಿ ಫ್ರೆಂಚರ ಬಳಿ ಕೆಲಸದಲ್ಲಿದ್ದುಕೊಂಡು ನಂತರ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಹತ್ತು ವರ್ಷ ಕಾಲ ಸೇವೆ ಸಲ್ಲಿಸಿ, ಅವರಿಗೆ ನಿಷ್ಠೆಯಿಂದಿದ್ದು, ಕೊನೆಗೆ ಬ್ರಿಟಿಷ್ ಮತ್ತು ಆರ್ಕಾಟ್ ನವಾಬರ ಕೃತ್ರಿಮತೆಯಿಂದಾಗಿ ನೇಣಿಗೆ ಬಲಿಯಾದ. ಅವನ ತಲೆ ಮತ್ತು ಕೈಕಾಲುಗಳನ್ನು ಕತ್ತರಿಸಿ ತಲೆ ಒಂದು ಕಡೆ, ಕೈಕಾಲುಗಳು ಒಂದು ಕಡೆ ಮತ್ತು ಮುಂಡ ಒಂದು ಕಡೆ ಹೂಳಲಾಯಿತು. ಅವನನ್ನು ತಮಿಳರು ಈಗಲೂ ಮಹಾನ್ ದೇಶಪ್ರೇಮಿ ಎಂದು ಕರೆಯುತ್ತಾರೆ.

ಕಮಲಹಾಸನ್ ಅವನ ಬಗ್ಗೆ ಚಲನಚಿತ್ರ ಮಾಡಲು ನಿರ್ಧರಿಸಿ ಇಂಗ್ಲೆಂಡಿನ ರಾಣಿ ಎಲಿಜಿಬೆತ್ ರನ್ನು ಮುಹೂರ್ತಕ್ಕೆ ಆಹ್ವಾನಿಸಿದಾಗ ಆಕೆ ಬಂದರು. ಯಾಕೆಂದರೆ ಯೂಸುಫ್ ಖಾನ್ ತಾನು ಸದಾ ಬ್ರಿಟಿಷರ ಸೇವಕ ಎಂದು ಕರೆದುಕೊಳ್ಳುತ್ತಿದ್ದ ‘ಋಣ’ ದಿಂದ! 1999ರಲ್ಲಿ ಮುಹೂರ್ತ ಆದ ಚಿತ್ರ ಹಣಕಾಸಿನ ತೊಂದರೆಯಿಂದ, ಜೊತೆಗೆ ಮತಧರ್ಮ ರಾಜಕೀಯದಿಂದ, ನಿಂತುಹೋಯಿತು. 

ಆದರೆ ಹೈದರಾಲಿಯ ಬಗ್ಗೆ ಚಿತ್ರ ನಿರ್ಮಿಸಲು ಕನ್ನಡಿಗರು ಸಿದ್ಧರಿಲ್ಲ. ನಿಜವಾಗಿ ದಕ್ಷಿಣ ಭಾರತವನ್ನು ಬ್ರಿಟಿಷರ ವಶಕ್ಕೆ ಸಿಗದಂತೆ ಹೋರಾಡಿ ಪ್ರಾಣ ತೆತ್ತ, ನಮ್ಮದೇ ನೆಲದ ಹೈದರನನ್ನು ಧರ್ಮ ಕಾರಣಗಳಿಗೆ ದ್ವೇಷಿಸುತ್ತಾ ಭಾರತದ ಚರಿತ್ರೆಯಲ್ಲಿ ಮೈಸೂರು ರಾಜ್ಯಕ್ಕೆ ನಿಜವಾಗಿಯೂ ಸಿಗಬೇಕಾದ ಮಾನ್ಯತೆಯನ್ನು ನಾವೇ ಅಲ್ಲಗಳೆಯುತ್ತಿದ್ದೇವೆ. ಹೈದರ್ ವಿಮರ್ಶೆಗೆ ಮೀರಿದವನಲ್ಲ, ನಿಜ, ಆದರೆ ಟೀಕಿಸುವ /ದ್ವೇಷಿಸುವ ಭರದಲ್ಲಿ ಚಾರಿತ್ರಿಕವಾಗಿ ಆತನ ಮಹತ್ವವನ್ನೂ ಅಲ್ಲಗಳೆಯಬೇಕಾಗಿಲ್ಲ. ಇರಲಿ.

1760ರಲ್ಲಿ ಪಾಂಡಿಚೇರಿಯಲ್ಲಿದ್ದ ಫ್ರೆಂಚರಿಗೆ ಬ್ರಿಟಿಷರ ಕಾಟ ಹೆಚ್ಚಾಯಿತು. ಫ್ರೆಂಚರ ಜೊತೆ ಹೈದರ್ ಸ್ನೇಹದಿಂದ ಇದ್ದಿದ್ದರಿಂದ ಫ್ರೆಂಚರ ಎಂ ಲ್ಯಾಲಿ ಸಹಾಯ ಕೋರಿದ ಮೇರೆಗೆ ಹೈದರ್ ಏಳು ಸಾವಿರ ಸೈನಿಕರನ್ನು ತನ್ನ ಭಾಮೈದ ಮಖ್ದುಂ ನೇತೃತ್ವದಲ್ಲಿ ಕಳಿಸಿದ. ಲ್ಯಾಲಿಯ ಅಪ್ಪಣೆಯ ಮೇರೆಗೆ ಮಖ್ದುಂ (ತಿಯಾಗರ್) ಕೋಟೆಯಲ್ಲಿ ತನ್ನ ಸೈನ್ಯವನ್ನು ನಿಲ್ಲಿಸಿದ. ಅಲ್ಲಿ ಲ್ಯಾಲಿಯ ಮುನ್ನೂರು ಫ್ರೆಂಚ್ ಮತ್ತು ಹನ್ನೆರಡು ಸಾವಿರ ಇತರ ಸೈನಿಕರ ದಂಡು ಪಾಳೆಯ ಬಿಟ್ಟಿತ್ತು. ಹೈದರನ ಸೇನೆಯು ಅವರ ಜೊತೆ ಸೇರಿಕೊಂಡಿತು. 1760 ಸೆಪ್ಟೆಂಬರ್ 4 ನೇ ತಾರೀಕಿನಿಂದ 15 ಜನವರಿ 1761ರವರೆಗೆ ನಡೆದ ಈ ಯುದ್ಧದಲ್ಲಿ  ಬ್ರಿಟಿಷರ ರಾಬರ್ಟ್ ಕ್ಲೈವ್ ನೇತೃತ್ವದಲ್ಲಿ ಪಾಂಡಿಚೇರಿಯಿಂದ ಫ್ರೆಂಚರನ್ನು ಸೋಲಿಸಲಾಯಿತು. ಲ್ಯಾಲಿ ಶರಣಾದ. 

ಮಖ್ದುಂ ಹಿಂದಿರುಗುವಾಗ ಹಲವಾರು ಫ್ರೆಂಚ್ ತಂತ್ರಜ್ಞರನ್ನು, ಉತ್ತಮ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡು ಬಂದಿದ್ದ. ಇದರಿಂದ ಹೈದರ್ ಸಂತೋಷಪಟ್ಟು ಮಖ್ದುಂನನ್ನು ಕೊಂಡಾಡುತ್ತಾನೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ತನ್ನ ಗೆಳೆಯರಾಗಿದ್ದ ಫ್ರೆಂಚರು ಬ್ರಿಟಿಷರಿಗೆ ಶರಣಾಗಿದ್ದು ಹೈದರನಿಗೆ ಸಹಿಸಲಾಗಲಿಲ್ಲ. ಭಾಮೈದ ಮಖ್ದುಂನನ್ನೇ ಹೈದರ್ ನಿಕೃಷ್ಟವಾಗಿ ಕಂಡ ಮತ್ತು ಸರಿಯಾಗಿ ಮರ್ಯಾದೆ ಮಾಡುವುದಿರಲಿ ಅವನನ್ನು ಉನ್ನತ ಅಧಿಕಾರದಿಂದ ಹಿಂಭಡ್ತಿ ಮಾಡಿ ಸಾಮಾನ್ಯ ಸೈನಿಕನ ಸ್ಥಾನ ನೀಡಿದ. ಇದರಿಂದ ಮಖ್ದುಂ ಜೊತೆ ಹೋರಾಡಿದ ಎಲ್ಲರಿಗೂ ಶಾಕ್ ಆಯಿತು. ಅದರಲ್ಲೂ ವಿಶೇಷವಾಗಿ ಫ್ರೆಂಚರೇ  ಹೈದರನ ಜೊತೆ ಇದರ ಬಗ್ಗೆ ಪ್ರಸ್ತಾಪಿಸಿ, ಅವನ ಭಾಮೈದನ ಪರವಾಗಿ ಮಾತಾಡಿದರು.  

ಕೋಪದಲ್ಲಿದ್ದರೂ ಹೈದರ್ ನ್ಯಾಯಸಮ್ಮತವಾಗಿರಲು ನಿರ್ಧರಿಸಿ ತನ್ನ ಸೈನ್ಯದ ಎಲ್ಲಾ ಅಧಿಕಾರಿಗಳನ್ನು ಕರೆದು ಒಂದು ಸಭೆ ನಡೆಸಿದ. ಮುಖ್ಧಂನ ಜೊತೆ ಹೋರಾಡಿದ ಗೆಳೆಯರಿಗೆ ಪಾಂಡಿಚೇರಿ ಧಾಳಿಯ ಸಂಪೂರ್ಣ ವಿವರಗಳನ್ನು ನೀಡಲು ಅನುಮತಿಸಿದ. ಪ್ರತಿಯೊಬ್ಬರೂ ಮುಖ್ಧಂನ ಗುಣಗಾನ ಮಾಡಿದರು. ಆತನು ಯಾವುದೇ ತಪ್ಪು ಮಾಡಲಿಲ್ಲ ಎಂದು ಸಮರ್ಥಿಸಿದರು. 

ಆಗ ಹೈದರ್ ನಡೆದುಕೊಂಡ ರೀತಿಯ ಬಗ್ಗೆ ಹೇಳಲು ಇಷ್ಟೆಲ್ಲಾ ಹಿನ್ನೆಲೆ ನೀಡಬೇಕಾಯಿತು. ಹೈದರ್ ತನ್ನ ಸವಾರಿಯನ್ನು ಸಿದ್ಧಪಡಿಸಲು ಹೇಳಿದ. ಅವನು ಆನೆಯಲ್ಲಿ ಮತ್ತು ಇತರ ಎಲ್ಲಾ ಅಧಿಕಾರಿಗಳು ಕುದುರೆಯ ಮೇಲೆ ಮೆರವಣಿಗೆ ಹೊರಟರು. ಮುಖ್ದಂ ಮನೆಗೆ! ಹೈದರ್ ಅರ್ಧ ದಾರಿಯಲ್ಲಿದ್ದಂತೇ ಬಜಾರಿನಲ್ಲಿ ಸಾಮಾನ್ಯ ಮನುಷ್ಯನಂತೆ ಕಾಲುನಡಿಗೆಯಲ್ಲಿ ಹೋಗುತ್ತಿದ್ದ ಮುಖ್ದಂ ಕಾಣಿಸಿದ. ಅವನನ್ನು ನೋಡಿದ ಕೂಡಲೇ ಹೈದರ್ ಆನೆಯಿಂದ ಇಳಿದ. ಮುಖ್ದಂನನ್ನ ಆತ್ಮೀಯವಾಗಿ ಆಲಂಗಿಸಿದ.

‘ನಿನ್ನ ಗೆಳೆಯರು ಹೇಳಿದ ಹಾಗೆ ನಿನ್ನ ಬಗ್ಗೆ ನಾನು ನಡೆದುಕೊಂಡಿದ್ದು ತಪ್ಪು. ಅದಕ್ಕೇ ನಿನ್ನ ಬಳಿ ಕ್ಷಮಾಪಣೆ ಕೇಳಲು ನಿನ್ನ ಮನೆಗೆ ಹೋಗುತ್ತಿದ್ದೆ. ಬಜಾರಿನಲ್ಲೇ ನೀನು ಎದುರಾದದ್ದು ಒಳ್ಳೆಯದಾಯಿತು. ಎಲ್ಲಾ ಸಾರ್ವಜನಿಕರ ಎದುರಿನಲ್ಲಿ ಇದನ್ನು ಹೇಳಲು ಅವಕಾಶವಾಯಿತು’ ಎಂದು ಹೇಳಿ, ಅವನನ್ನು ತನ್ನ ಆನೆಯ ಮೇಲೆ ಕೂರಿಸಿ ತಾನು ಕುದುರೆಯಲ್ಲಿ ಮುಂದೆ ಸವಾರಿ ಮಾಡುತ್ತಾ ಅವನ ಮನೆಗೆ ತಲುಪಿಸಿದ!ದ ಲ ತೂರ್ ಇದನ್ನು ವರದಿ ಮಾಡಿದ ಮೇಲೆ ಸಣ್ಣದೊಂದು ಟಿಪ್ಪಣಿಯನ್ನೂ ಸೇರಿಸುತ್ತಾನೆ. ಏನೆಂದರೆ ತಾನು ಯಾವ ಸಣ್ಣ ತಪ್ಪನ್ನೂ ಸಹಿಸುವುದಿಲ್ಲ, ಅದು ತನ್ನ ಅತ್ಯಂತ ಆಪ್ತನಾದ ಭಾಮೈದನೇ ಮಾಡಿದ್ದರೂ ಸರಿಯೇ ಶಿಕ್ಷೆಗೆ ಒಳಪಡಿಸುತ್ತೇನೆ ಎನ್ನುವುದನ್ನು ತನ್ನ ಎಲ್ಲಾ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡುವುದು ಹೈದರನ ಉದ್ದೇಶ ಇದ್ದಿರಬಹುದು!

‍ಲೇಖಕರು Admin

July 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: