ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

`ರೇಣು' ಕೇಳೆ!.. ಎಷ್ಟಂತ ಹೆಣೆಯಲಿ ಕನಸುಗಳನು ಸಾಕಿ

R Photo

ರೇಣುಕಾ ಎ ಕಠಾರಿ

1.ಗಜಲ್
ಮನದ ತೋಟದಲಿ ಹೂವಾಗಿ ಅರಳಿ ಕಂಪು ಬೀರುವೆ ನನಗಿಷ್ಟು ಜಾಗಕೊಡು
ಅರಳಿದ ಹೂಗಳ ಜೊತೆ ಚಲುವಲಿ ನಗುವಾಗಿರುವೆ ನನಗಿಷ್ಟು ಜಾಗಕೊಡು

ಕರಗುತ್ತಿರುವ ಮಂಜನಿ ಹನಿಗಳಿಗೆ ಮೊಹಬ್ಬತ್ತನು ಕಲಿಸಬೇಕಿದೆ ನೀನು
ಹಸಿದ ಬಯಕೆಗೆ ಬೆವರ ಹನಿಯಂತೆ ಜೊತೆಯಾಗಿ ಬರುವೆ ನನಗಿಷ್ಟು ಜಾಗಕೊಡು

ಜೀವನವನು ಬೇಸರವೆನಬೇಡ ನಾಳೆಯ ನಗುವ ಹುಡುಕಿ ನಡೆಯಬೇಕು
ನಿನ್ನಸರ ಜಪ ಹಿಡಿದು ಮಡಿಯಿಂದಲೇ ಕಾದಿರುವೆ ನನಗಿಷ್ಟು ಜಾಗಕೊಡು

ಏಕಾದಶಿಯಲೂ ಕಾಡುತ್ತಿದ್ದಾನೆ ಖುದಾ ಜನ್ನ್ತ್ನ ನಿಲುವಿಗೆ ಇಟ್ಟು
ಗುಬ್ಬಿಯಂತೆ ಗೂಡು ಕಟ್ಟಲು ಕಾಯುತಿರುವೆ ನನಗಿಷ್ಟು ಜಾಗಕೊಡು

`ರೇಣು’ ಮನದ ತುಂಬ ಕನಸು ಕಟ್ಟಿದ್ದಾಳೆ ನಾಳೆಯ ಬದುಕು ನೆನೆದು
ಬೊಗಸೆ ತುಂಬಿದ ಪ್ರೀತಿ ತೋರಲು ಬೇಡುತಿರುವೆ ನಗಿಷ್ಟು ಜಾಗಕೊಡು
2.ಗಜಲ್
ಕಾಲದ ನಡಿಗೆಯಗುಂಟ ಇನ್ನೂ ಎಷ್ಟಂತ ನೇಯಲಿ ಕನಸುಗಳನು ಸಾಕಿ
ಕಳೆದು ಹೋದ ಪ್ರೀತಿಯನು ಇನ್ನೂ ಎಷ್ಟಂತ ಹುಡಕಲಿ ಕನಸುಗಳನು ಸಾಕಿ

ಕಣ್ಣಿನ ಬಟ್ಟೆ ಬಿಚ್ಚಿ, ಕೊರಳಿಗೆ ದಾರ ಕಟ್ಟಿ ಲೋಕ ನೋಡೆಂದರೆ ಹೇಗೆ ನೋಡಲಿ
ಮನದ ಮುಂದಿನ ನಾಳೆಗಳನು ನಿನ್ನಿರುವಿಲ್ಲದೆ ಹೇಗೆ ಕಳೆಯಲಿ ಕನಸುಗಳನು ಸಾಕಿ

ಕಲೆ ತೊಳೆಯುವ ಗಂಗೆಯ ಎದೆಯೊಳಗೆ ಕೊಳೆಯ ಕಲೆ ನಿತ್ಯವೀಗ
ಮಡಿ ಮೈಲಿಗೆಯ ಮಾತೇಕೆ ಮನಸಿಗೆ ಮಾತಿದ್ದು ಮೌನವ ಎಷ್ಟಂತ ತಾಳಲಿ ಕನಸುಗಳನು ಸಾಕಿ

ಕಂದೀಲಿಡಿದು ತಿರುಗಿದ ಸಂತರೆಲ್ಲರ ಗೆಜ್ಜೆ ಸದ್ದು ಕಳೆದ್ಹೋಗಿ ಹೆಜ್ಜೆಗಳು ಮಾತ್ರ ಉಳಿದಿವೆ
ಕಾಲದ ಮುಂದಿನ ಬಯಲ ಬದುಕ ಹುಡುಕಲು ಇನ್ನೂ ಎಷ್ಟಂತ ನೋಡಲಿ ಕನಸುಗಳನು ಸಾಕಿ

`ರೇಣು’ ಕೇಳೆ! ಸೀತೆ, ದ್ರೌಪದಿ, ಧಮಯಂತಿರೆಲ್ಲರಿಗೂ ಕಾಡು ಕಾಡಿಗೆಯಾಗಿದೆ ಕಣ್ಣಿಗೆ
ಪ್ರೀತಿಯ ಬೆಳಕನು ಬೊಗಸೆಯೊಳಗೆ ಬಚ್ಚಿಟ್ಟುಕೊಳ್ಳತ ಎಷ್ಟಂತ ಹೆಣೆಯಲಿ ಕನಸುಗಳನು ಸಾಕಿ

 

‍ಲೇಖಕರು admin

20 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading