ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೆಕ್ಕೆ ಕಳಚಿದ ಸಂಕ್ರಮಣದ ಹಕ್ಕಿ

ಬಿದಲೋಟಿ ರಂಗನಾಥ್

ಬದಲಾಗದ ಬದುಕಿನೆದುರು
ಮಂಡಿಯೂರಿ ಕೂತು
ಬೆವೆತ ಕರುಳು ಕೂಗುವ ಸದ್ದಿಗೆ
ಸುರಿವ ಕೆಂಡದ ಮಳೆಯಲಿ ತೊಯ್ದವನಿಗೆ
ಯಾವ ಸಂಕ್ರಮಣ?

ಹೊತ್ತೇರಿದರೂ
ಕತ್ತಲೆಯ ಕಣ್ಣುಗಳು ಬದುಕಿನ ಕೋಲಿಡಿದು
ನಡೆಯುತ್ತಿರುವಾಗ…
ಸಂಕ್ರಮಣ ನೇಯ್ದ ಬಟ್ಟೆಗೆ
ನೋವಿನ ಬಣ್ಣ ಮೆತ್ತಿ
ಆಕಾರ ಕೆಡಿಸಿರುವಾಗ..
ನೆಲದ ಅಳು ನಿಲ್ಲಲು ಸಾಧ್ಯವೆ..?

ಕಾಮನ ಬಿಲ್ಲಿನ ಮೇಲೆ ಕೂತ
ಆ ಹನಿಯ ವಿಳಾಸ ಹುಡುಕಲು
ಯಾರನ್ನ ಕೇಳಲಿ …?
ಎಲ್ಲರೂ ಬಾಗಿಲು ಮುಚ್ಚಿಕೊಂಡು
ಬೆಂಕಿಮುಂದೆ ಬದುಕನ್ನೇ ಕಾಯಿಸುತ್ತಾ ಕೂತಿರುವಾಗ…!

ರೆಕ್ಕೆಕಳಚಿದ ಸಂಕ್ರಮಣದ ಹಕ್ಕಿ
ದಾರಿ ಸವೆಯದೇ ದಿಕ್ಕು ದಿಕ್ಕುಗಳತ್ತ
ಮುಗ್ಧತೆಯಲಿ ನೋಡುತ್ತಾ
ಬಿದ್ದ ಕಣ್ಣೀರು ಕಾವ್ಯವಾಗುತ್ತಿರುವಾಗ
ಬಯಲ ಬೆಳಕು ಹಿಡಿಯಲು ಎಲ್ಲಿಂದ ಸಾಧ್ಯ?

ನೋವುಂಡ ಕಣ್ಣಿಗೆ
ಮದ್ದು ತರುವ ಹೊತ್ತಿಗೆ
ಹಸಿದ ಬೆನ್ನಿನ ಮೇಲೆ ಭಿಕ್ಷುಕರು ಕಾಲೂರಿದ್ದಾರೆ
ಕಾಲನ ಅಂಗಾಲಿನಲಿ
ಬೊಬ್ಬೆಗಳದ್ದೇ ಸಾಮ್ರಾಜ್ಯ!

ದೊರೆ ಮುಖವಾಡ ಧರಿಸಿ
ತನಗರಿವಿಲ್ಲದೆ ಸೆಣಸುವ ಆತ್ಮದ ಕಾವಲಿಗಿದ್ದಾನೆ
ಬೆವರಲಿ ಬೆಂದವರ ಕಣ್ಣುಗಳಲಿ
ದೀಪ ಆರುವುದ ನೋಡುತ್ತಾ…

ಸಂಕ್ರಮಣ ಸಂತೆಯಲೂ ಸಿಗದೆ
ಮೂಕ ಪ್ರೇಕ್ಷಕನಾಂತದ ಗುರಿಕಾರನ ನಡಿಗೆಯಲಿ
ಮೋಡವೇ ಚಲಿಸುತ್ತಿಲ್ಲ.!

‍ಲೇಖಕರು Avadhi

14 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading