ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೂಮಿಯ ಕರುಣೆಯ ಹಕ್ಕಿ..

 ಖಾದರ್ ಮೊಹಿಯೊದ್ದೀನ್. ಕೆ.ಎಸ್

ಅಲೆದಲೆದು ಮನೆಗೆ ಮರಳಿದೆ
ಒಂದೊಂದಾಗಿ ಮೆಟ್ಟಿಲೇರಿ ಬಾಗಿಲ
ಚಿಲಕದ ಸದ್ದು ಮಾಡಿದೆ
ಒಳಗಿನಿಂದ ಪ್ರಶ್ನೆ ಕೇಳಿಸಿತು
‘ಯಾರದು?’
‘ನಾನು’ ಬಂದಿದ್ದೇನೆ
ಉತ್ತರಿಸಿದೆ
ಒಳಗಿನಿಂದ ತಣ್ಣನೆಯ ದನಿ
ಪ್ರತಿಕ್ರಿಯಿಸಿತು
ಹಿಂದುರುಗಿ ಹೊರಟು ಹೋಗು
‘ಅಹಂಕಾರ’ಕ್ಕೆ ಈ ಮನೆಯಲ್ಲಿ
ತಾವಿಲ್ಲ
ಮರು ಮಾತನಾಡದೆ ಹಿಂದುರುಗಿ
ನಡೆಯತೊಡಗಿದೆ


ನಡೆದೆ ನಡೆದೆ ನಡೆಯುತ್ತಲೇ ದಣಿಯತೊಡಗಿದೆ
ಬಿಸಿಲು, ಬೆಂಕಿ, ಮಳೆ, ಚಳಿಯೆನ್ನದ
ಗೊತ್ತು ಗುರಿಯಿಲ್ಲದ ಅಲೆದಾಟ
ಬಳಲಿದೆ, ಬೆವರಿದೆ, ಬಾಯಾರಿದೆ
ಸೋತು ಹೋದೆ
ಮದ, ಮೋಹ, ಮಾತ್ಸರ್ಯಗಳೆಲ್ಲ
ಮೋಡದಂತೆ ಕರಗಿ ‘ನಾನು’
ನಾನಾಗಿ ಉಳಿಯದ
ಕಾಲಘಟ್ಟದಲ್ಲಿ ನೀರಾಗಿ ಹರಿಯತೊಡಗಿದೆ
ನಿಂತ ನೀರು ಯಾವಾಗಲೂ ಬಗ್ಗಡ
ನಿರಂತರ ಹರಿಯುವ ನದಿಯ ನೀರು
ಸದಾಕಾಲ ಸವಿಯಾದದ್ದು, ಮಧುರವಾದದ್ದು
ಚಲನಶೀಲತೆ ಎಲ್ಲವನ್ನೂ ಹದವಾಗಿಸುತ್ತದೆ
ಬೆಂಕಿಯಲ್ಲಿ ಪುಟವಿಟ್ಟ ಚಿನ್ನ
ಅಪರಂಜಿಯಾಗದೇ!!?
ಹಾಗೆ!
ಎಲ್ಲವೂ ಸ್ಪಷ್ಟವಾದಂತೆ
ಮರಳಿ ಮನೆಯ ಕಡೆ ನಡೆಯುವ ದಾರಿ
ಬೆಳಕಾಯಿತು ಮತ್ತೆ

ಮೆತ್ತನೆಯ ಹೆಜ್ಜೆಯಲ್ಲಿ ಒಂದೊಂದಾಗಿ
ಮೆಟ್ಟಿಲೇರಿ ಮೆದುವಾಗಿ ಬಾಗಿಲ ತಾಕಿದೆ
‘ಯಾರದು’
ಒಳದನಿಯ ಮಾಧುರ್ಯ ಅಂತರಂಗದಾಳದಿಂದ
ಹೊಮ್ಮುತ್ತಿತ್ತು
‘ಮರೆತು ಹೋದವನು’, ‘ ಕರಗಿ ಹೋದವನು’
ಮಾರುತ್ತುರದಲ್ಲಿ ಉತ್ತರ ಧ್ವನಿಸುತ್ತಿತ್ತು
‘ನಾನು’ ಅನ್ನುವುದು ಹೊರಟು
ಹೋದ ಮೇಲೆ
ಉಳಿಯುವುದಾದರೂ ಏನು!?

 

ಬರೀ ಆತ್ಮವಲ್ಲವೇ!?
‘ದಯವಿಟ್ಟು ಒಳಗೆ ಬಾ
‘ನಿನ್ನದೆ’ ಈ ಮನೆ
‘ಅಹಂಕಾರದ ಬೆನ್ನ ಹೊರೆ’
ಇಳಿಸದ ಹೊರತು
ಆತ್ಮ ಅನ್ನುವ ಹಕ್ಕಿಗೆ ರೆಕ್ಕೆಗಳು
ಮೂಡುವುದಿಲ್ಲ
ರೆಕ್ಕೆ ಮೂಡದ ಹಕ್ಕಿಗೆ ಬಾನು
ತೆರೆದುಕೊಳ್ಳುವುದಿಲ್ಲ
ಬಾನ ಬಾಂದಳದಲ್ಲಿ ಸ್ವಚ್ಚಂದವಾಗಿ
ವಿಹರಿಸುವ ಹಕ್ಕಿಯೇ ನಿನಗೆ
ನಿನಗೆ ಸ್ವಾಗತ

‍ಲೇಖಕರು nalike

22 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading