ರಾಜ್ ಕುಮಾರ್ ಪಿಕ್ಚರು ನೋಡುವವನು, ಬೀಡಿ ಸೇದುವುದು ಎಂದರೇನು?

ರಾಜ್ ಕುಮಾರ್ ನನ್ನನ್ನು ಬೀಡಿಯ
ಬೆಂಕಿಯಿಂದ ಪಾರು ಮಾಡಿದರು

R T Vittal Murthy

ಆರ್.ಟಿ.ವಿಠ್ಢಲಮೂರ್ತಿ

ಒಂದು ಕೈ ರಪ್ಪಂತ ನನ್ನ ಹೆಗಲ ಮೇಲೆ ಬಿತ್ತು.ತಿರುಗಿ ನೋಡುತ್ತೇನೆ. ನನ್ನ ಜಂಘಾಬಲವೇ ಉಡುಗಿ ಹೋದಂತಾಯಿತು. ಯಾಕೆಂದರೆ.ನನ್ನಜ್ಜಿ ಗಂಗಮ್ಮ ಕೆಕ್ಕರುಗಣ್ಣಿನಿಂದ ನನ್ನನ್ನು ನೋಡುತ್ತಿದ್ದಾರೆ.

ಮೊದಲೇ ಅದು ಸಿನೆಮಾ ಟೆಂಟು. ಬೇಸಿಗೆ ರಜೆ ಬಂದಾಗಲೆಲ್ಲ ನಾನು, ನನ್ನಣ್ಣ ಮಹೇಂದ್ರ ಹಾಗೂ ತಮ್ಮ ಪಾಂಡುರಂಗ ಹೊನ್ನಾಳಿ ತಾಲ್ಲೂಕಿನ ಸಾಸ್ವೇಹಳ್ಳಿಯಲ್ಲಿದ್ದ ನಮ್ಮಜ್ಜ-ಅಜ್ಜಿಯ ಮನೆಗೆ ಹೋಗುತ್ತಿದ್ದೆವು. ಅಲ್ಲಿ ನಮ್ಮ ಮಾವ ಡೋಯಿಜೋಡೆ ರಾಮಪ್ಪ ಅವರ ಮನೆಯಲ್ಲಿ ನೆಮ್ಮದಿಯಾಗಿರುತ್ತಿದ್ದೆವು.
ಬೆಳ್ಳಂ ಬೆಳಗ್ಗೆ ಬೆಲ್ಲದ ಕಾಫಿ ಕುಡಿಯುವುದು, ಅರ್ಧ ಡಜನ್ ರೊಟ್ಟಿ ತಿನ್ನುವುದು, ಗುಂಡರಗೋವಿಂಗಳಂತೆ ತುಂಗಭದ್ರಾ ನದಿ, ಮಾವಿನ ಕೊಪ್ಪಲು, ಕುಳಗಟ್ಟೆ ಸರ್ಕಲ್ಲಿನ ಗದ್ದೆ ಅಂತ ತಿರುಗುವುದು. ರಾತ್ರಿ ಆಯಿತೆಂದರೆ ಸಾಕು. ಹಳ್ಳಿಯಲ್ಲಿದ್ದ ಟೆಂಟಿಗೆ ಪಿಕ್ಚರು ನೋಡಲು ಹೋಗುವುದು.

rajkumar pa sa kumar3ಆಗೆಲ್ಲ ಪಿಕ್ಚರು ನೋಡಲು ಹೋಗುವುದು ಎಂದರೆ ಭರ್ಜರಿ ತಯಾರಿ. ತಲೆಗೆ ಮಫ್ಲರು ಸುತ್ತಿಕೊಂಡು,ಮೈ ತುಂಬಾ ಹೊದ್ದುಕೊಂಡು ನಾವು ದಂಡಾಗಿ ಸಿನೆಮಾಗೆ ಹೋಗುವುದು. ದೇವು ಮಾಮ, ಅಣ್ಣಯ್ಯ ಮಾಮ, ಗಣೇಶ ಮಾಮ, ಮೋಹನ ಮಾಮ, ಮಹೇಂದ್ರ, ನಾನು ಹೀಗೆ.

ನಮ್ಮಲ್ಲೆಲ್ಲ ದೇವು ಮಾಮ ಹಾಗೂ ಅಣ್ಣಯ್ಯ ಮಾಮ ಸ್ವಲ್ಪ ದೊಡ್ಡವರು. ನಮಗೆ ಏಳೆಂಟು ವರ್ಷವೆಂದರೆ ಅವರಿಗೆ ಸ್ವಲ್ಪ ಜಾಸ್ತಿ. ಹೀಗಾಗಿ ಅವರಿಬ್ಬರು ನಮ್ಮ ಟೀಮಿನ ನಾಯಕರು. ಲೇಯ್, ಪಿಕ್ಚರು ನೋಡೋಕೇನೋ ಹೋಗ್ತೀವಿ. ಖಾಲಿ ಕೈಲಿ ಹೋಗೋಕಾಗ್ತದೇನ್ರಲೇ? ಪಿಕ್ಚರು ಶುರು ಆಗೋದು ಲೇಟು.  ಈಗ ನಾವೊಂದು ಕೆಲ್ಸ ಹೇಳ್ತೀವಿ ಮಾಡಿ ಅನ್ನುತ್ತಿದ್ದರು.

ಶುರುವಿನಲ್ಲಿ ಅವರೇನು ಹೇಳುತ್ತಾರೋ? ಅಂತ ಕಾಯುತ್ತಿದ್ದೆವು. ಆದರೆ ಕಾಲ ಕ್ರಮೇಣ ಅವರು ಏನು ಆರ್ಡರು ಮಾಡುತ್ತಾರೆಂದು ಮುಂಚಿತವಾಗಿಯೇ ನಮಗೆ ಗೊತ್ತಿರುತ್ತಿತ್ತು. ಆ ಸಿನೆಮಾ ಟೆಂಟಿನ ಎದುರು ಯಾರೋ ಅರೆ ಮರೆ ಸೇದಿ ಬಿಸಾಡಿದ ಬೀಡಿಯ ತುಂಡುಗಳು ಬಿದ್ದಿರುತ್ತಿದ್ದವು. ಇಂತಹ ಇಪ್ಪತ್ತು-ಮೂವತ್ತು ಬೀಡಿ ತುಂಡುಗಳನ್ನು ಆರಿಸಿಕೊಂಡು ಬಂದು ಅವರ ಕೈಗಿಡುತ್ತಿದ್ದೆವು. ಅವರು ಧಾರಾಳವಾಗಿ ನಮಗೂ ತಲಾ ಮೂರೋ,ನಾಲ್ಕೋ ಬೀಡಿ ಕೊಟ್ಟು: ಹೋಗ್ರಲೇ ಪಿಕ್ಚರು ನೋಡ್ಕಳಿ ಎನ್ನುತ್ತಿದ್ದರು.

ಆ ಟೆಂಟಿನ ಫ್ರಂಟು ಭಾಗದಲ್ಲಿ ಕೂರಲು ಬತ್ತದ ಹೊಟ್ಟಿನ ರಾಶಿ. ಅದನ್ನು ಸಮತಲವಾಗಿ ಹರಡಿಟ್ಟಿರಲಾಗುತ್ತಿತ್ತು. ಅಲ್ಲಿ ಅದೇ ಗಾಂಧಿ ಸೀಟಿದ್ದಂತೆ. ಸ್ವಲ್ಪ ಹಿಂದೆ ಬಾಲ್ಕನಿ. ಅಂದರೆ, ಎರಡು ಕಟ್ಟಿಗೆ ತುಂಡಿನ ಮೇಲೆ ಹಲಗೆ ಇರುತ್ತಿತ್ತು. ಸ್ವಲ್ಪ ದುಡ್ಡು ಜಾಸ್ತಿ ಇದ್ದವರಿಗೆ ಬಾಲ್ಕನಿ. ನಮ್ಮಂತವರದೆಲ್ಲ ಗಾಂಧಿ ಸೀಟು.
ತುಂಬ ಸಲ ದುಡ್ಡೇ ಕೊಡದೆ ಹಾಗೇ ಟೆಂಟಿಗೆ ನುಗ್ಗಿ ಕುಳಿತು ಬಿಡುತ್ತಿದ್ದೆವು. ಆ ಟಾಕೀಸಿಗೆ ನುಗ್ಗುವ ಕಳ್ಳ ಮಾರ್ಗಗಳು ಹೇಗೂ ಗೊತ್ತಿದ್ದುದರಿಂದ ತೊಂದರೆ ಏನಿರಲಿಲ್ಲ. ತೀರಾ ಸಿಕ್ಕು ಬಿದ್ದರೆ ಗೇಟ್ ಕೀಪರುಗಳು, ನಿಮಗೇನು ಕೆಲಸ ಇಲ್ಲವೇನ್ರಲೇ? ಮುಚ್ಕಂಡು ಮನೆಯಲ್ಲಿ ಮಲಗೋದು ಬಿಟ್ಟು ಈ ಪಿಕ್ಚರಿನ ಚಟ ಬೇರೆ ನನ್ನಕ್ಕಳು ಎಂದು ಬೈಯ್ಯುತ್ತಿದ್ದರು.

ಹಳ್ಳಿಯಲ್ಲಿದ್ದ ಎಮ್ಮೆಗಳಂತೆ, ನಮ್ಮದೂ ದಪ್ಪ ಚರ್ಮವಾದ್ದರಿಂದ, ಅವರೇನೇ ಬೈದರೂ ನಾವು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇಂತಹ ಒಂದು ದಿನವೇ ಆ ಟೆಂಟಿನಲ್ಲಿ ಡಾ ರಾಜ್ ಕುಮಾರ್ ಅಭಿನಯದ ಮಯೂರ ಪಿಕ್ಚರು ಹಾಕಿದ್ದರು. ಅದಾಗಲೇ ಭಾರೀ ಜನಪ್ರಿಯವಾಗಿದ್ದ ಚಿತ್ರ. ಸರಿ, ನಾವೆಲ್ಲ ಮಾತನಾಡಿಕೊಂಡು ನೋಡಲು ಹೋದೆವು.

ಯಥಾ ಪ್ರಕಾರ, ಟೆಂಟಿನ ಮುಂದೆ ಬಿದ್ದಿದ್ದ ಬೀಡಿಗಳನ್ನು ಆರಿಸಿಕೊಂಡು ನಮ್ಮ ಟೀಮ್ ಲೀಡರುಗಳ ಕೈಯ್ಯಲ್ಲಿಟ್ಟು, ನಮ್ಮ ಕೋಟಾ ಪಡೆದು ಒಳಗೆ ಹೋದೆವು. ಶುರುವಾಯಿತು ಪಿಕ್ಚರು. ಬತ್ತದ ಹೊಟ್ಟಿನ ಮೇಲೆ ಕೂತು, ಬೀಡಿ ಸೇದುತ್ತಾ,ಸೇದುತ್ತಾ ಎಷ್ಟೋ ಹೊತ್ತು ಕಳೆದಿದೆ.

ಮಯೂರನಿಗೆ ತನ್ನ ಜನ್ಮ ರಹಸ್ಯ ತಿಳಿಯುವ ದೃಶ್ಯ. ರಾಜ್ ಕುಮಾರ್ ಮೊದಲೇ ಪ್ರಚಂಡ ನಟ. ನಾವಿನ್ನೂ ಚಿಕ್ಕವರಿದ್ದುದರಿಂದ ಅವರು ಮಾಡುತ್ತಿದ್ದುದು ನಟನೆ ಎಂಬುದು ತಿಳಿಯುತ್ತಿರಲಿಲ್ಲ. ಅವರ ಅಭಿನಯ ನೋಡುತ್ತಾ, ಅವರು ಚಿತ್ರದಲ್ಲಿ ತನ್ನ ತಾಯಿಯ ಸಮಾಧಿಯ ಮುಂದೆ ಕುಳಿತು ಅಳುತ್ತಿದ್ದರೆ ನನ್ನ ಕಣ್ಣಲ್ಲೂ ನೀರು.
ಹೀಗೆ ತಾಯಿಯ ಸಮಾಧಿಯ ಮುಂದೆ ಕುಳಿತು ದು:ಖಿಸುವ ಮಯೂರ (ರಾಜ್ ಕುಮಾರ್ ) ಇದ್ದಕ್ಕಿದ್ದಂತೆ ಮೇಲೆದ್ದು ನಿಂತು ಪಲ್ಲವ ರಾಜ ಶಿವಸ್ಕಂದ ವರ್ಮನ ವಿರುದ್ಧ ಕಿಡಿ ಕಾರುವ ದೃಶ್ಯ.ಬೀಡಿ ಸೇದುತ್ತಾ, ಅದನ್ನು ನೋಡುತ್ತಾ, ಮೈ ಮರೆತಿದ್ದೇನೆ. ಅಷ್ಟರಲ್ಲೇ ರಪ್ಪಂತ ಬಿತ್ತು ಕೈ.
ತಿರುಗಿ ನೋಡಿದರೆ ನನ್ನಜ್ಜಿ ಗಂಗಮ್ಮ. ನಾನು ಕಕ್ಕಾಬಿಕ್ಕಿ. ಪಿಕ್ಚರಿನಲ್ಲಿ ಶಿವಸ್ಕಂದ ವರ್ಮನ ರಾಜ ದರ್ಬಾರು ಶುರುವಾಗಬೇಕು. ಅಷ್ಟರಲ್ಲಿ ನಮ್ಮಜ್ಜಿ ನನ್ನ ಕತ್ತಿನ ಪಟ್ಟಿ ಹಿಡಿದಿದ್ದೇ ದರ ದರನೆ ಹೊರಗೆ ಎಳೆ ತಂದು ಬಿಟ್ಟರು. ಏನಲೇ, ಮಲಗುತ್ತೇವೆ ಅಂತ ಸುಳ್ಳು ಹೇಳಿ, ಮಲಗುವ ಜಾಗದಲ್ಲಿ ದಿಂಬುಗಳನ್ನಿಟ್ಟು ಮೇಲೆ ಕಂಬಳಿ ಹೊದಿಸಿ ಇಲ್ಲಿಗೆ ಬಂದಿದ್ದೀರಾ? ಉಳಿದವರೆಲ್ಲ ಎಲ್ಲಿ? ಎಂದು ಕೇಳಿದರು.

smoking beedi2ತಿರುಗಿ ನೋಡುತ್ತೇನೆ. ದೇವು ಮಾಮನಿಂದ ಹಿಡಿದು ಅಣ್ಣಯ್ಯ ಮಾಮನ ತನಕ, ಮೋಹನ ಮಾಮನಿಂದ ಹಿಡಿದು ಮಹೇಂದ್ರನ ತನಕ ಯಾರೆಂದರೆ ಯಾರೂ ಪತ್ತೆಯಿಲ್ಲ. ಅವರೆಲ್ಲ ಮುಂಚೆಯೇ ಇವರನ್ನು ನೋಡಿ ಜಾಗ ಖಾಲಿ ಮಾಡಿದ್ದಾರೆ. ನಾನು ಬೀಡಿ ಸೇದುತ್ತಾ, ಪಿಕ್ಚರು ನೋಡುತ್ತಾ ಮೈ ಮರೆತು ಸಿಕ್ಕಿ ಬಿದ್ದಿದ್ದೇನೆ.
ನಮ್ಮಜ್ಜಿ ದುಸುರಾ ಮಾತನಾಡಲಿಲ್ಲ. ದರ ದರನೆ ಎಳೆದುಕೊಂಡು ಹೊರಟರು. ಅದಾಗಲೇ ರಾತ್ರಿಯ ಹೊತ್ತು.  ದಾರಿಯಲ್ಲಿದ್ದ ಮನೆಗಳ ಕಟ್ಟೆಯ ಮೇಲೆ ಕೂತಿದ್ದವರು, ಅದ್ಯಾಕವ್ವಾ ಗಂಗವ್ವಾ, ಮೊಮ್ಮಗನನ್ನ ಆ ತರ ಎಳಕಂಡು ಬರುತ್ತಿದ್ದೀಯ? ಎಂದು ಕೇಳುತ್ತಿದ್ದರು.

ಕೇಳಿದವರಿಗೆಲ್ಲ ನನ್ನಜ್ಜಿ: ನೋಡ್ರಪ್ಪಾ,ಚೋಟುದ್ದ ಇದಾನೆ. ಬೀಡಿ ಸೇದ್ತಾ ಟೆಂಟ್ನಾಗೆ ಕುಂತಿದ್ದಾನೆ ಎನ್ನುತ್ತಿದ್ದರು. ಅದನ್ನು ಕೇಳಿದ್ದೇ ತಡ, ಹಲವರು ಎದ್ದು ಬಂದವರೇ ನನ್ನ ಕಪಾಳ ಚೆದುರಿ ಹೋಗುವಂತೆ ಬಾರಿಸುತ್ತಿದ್ದರು. ಅಯ್ಯೋ, ನಿನ್ನ ಲೇಯ್, ಈಗಲೇ ಬೀಡಿ ಸೇದ್ತೀ ಅಂದರೆ ಮಂತ್ಯಾನಕ್ಕೆ (ಮನೆತನಕ್ಕೆ) ಒಳ್ಳೆ ಹೆಸರು ತರ್ತೀಯ ಬಿಡು ಎನ್ನುತ್ತಿದ್ದರು. ಹೀಗೆ ಒಬ್ಬರಲ್ಲ, ಇಬ್ಬರಲ್ಲ, ಹಲವರು ಹೀಗೆ ಹೊಡೆದು ಹೊಡೆದು ನಾನು, ಬಲವಂತವಾಗಿ ನೀರು ಕುಡಿದ ಕೋಳಿಯಂತಾಗಿ ಹೋಗಿದ್ದೆ.

ಇನ್ನೇನು ಮನೆ ಸೇರಬೇಕು. ಆಗ ನಾನು,ಅಜ್ಜಿ, ಇನ್ನು ಮೇಲೆ ಇಂತಹ ಕೆಲಸ ಮಾಡುವುದಿಲ್ಲ. ಬಿಟ್ಟು ಬಿಡಜ್ಜಿ ಎಂದು ಕೇಳಿಕೊಂಡೆ. ಅದಕ್ಕವರು, ಅಲ್ಲಲೇ, ಹೋಗಿ ಹೋಗಿ ಆ ದೇವರಂತ ರಾಜ್ ಕುಮಾರ್ ಪಿಕ್ಚರು ನೋಡ್ತೀಯ. ಅದನ್ನು ನೋಡಿ ಬುದ್ದಿ ಕಲೀಬೇಕು ಕಣಲೇ. ಪಿಕ್ಚರು ನೋಡಿ ಮನೆಗೆ ಬಂದು ಮಲಗಿ, ಬಿಕನಾಸಿ ತರ ತಿರುಗುವುದಲ್ಲ ಎಂದರು.

ಆ ಕ್ಷಣದಲ್ಲೇ ನನಗೆ, ಅರೇ ಹೌದಲ್ಲ ಅನಿಸಿತು. ಪಿಕ್ಚರು ನೋಡುವುದು ಬರೀ ಮಜಕ್ಕಾಗಿ ಮಾತ್ರವಲ್ಲ. ಒಳ್ಳೆಯ ಬುದ್ಧಿ ಕಲಿಯಲು ಎಂಬುದನ್ನು ಆಕೆ ತನ್ನ ಹಳ್ಳಿ ಭಾಷೆಯಲ್ಲಿ ಬಹಳ ಸಮರ್ಪಕವಾಗಿ ಹೇಳಿದ್ದರು. ರಾಜ್ ಕುಮಾರ್ ಪಿಕ್ಚರು ನೋಡುವವನು, ಬೀಡಿ ಸೇದುವುದು ಎಂದರೇನು?
ಅವತ್ತಿನಿಂದ ನನ್ನ ಬೀಡಿಯ ಹವ್ಯಾಸವೇ ನಿಂತು ಹೋಯಿತು. ಆಮೇಲೆ ಯಾವತ್ತೂ ಅದರ ಸಹವಾಸಕ್ಕೂಹೋಗಲಿಲ್ಲ. ಲೇ,ಹೋಗಲೇ, ಏನು ಬೀಡಿ ಕುಡಿದ ಕೂಡಲೇ ನಾಸ ಆಗಿ ಹೋಗಲ್ಲ. ತಗಂಬಾರಲೇ ಎಂದು ದೇವು ಮಾಮ, ಅಣ್ಣಯ್ಯ ಮಾಮ ಹೇಳಿದರೆ ಬೀಡಿ ತಂದು ಕೊಡುತ್ತಿದ್ದೆ. ಆದರೆ ಸೇದುವ ಗೊಡವೆಗೆ ಹೋಗುತ್ತಲೇ ಇರಲಿಲ್ಲ.

ಮುಂದೆ ದೇವು ಮಾಮನಿಂದ ಹಿಡಿದು, ಅಣ್ಣಯ್ಯ ಮಾಮನ ತನಕ ಯಾರೂ ಬೀಡಿ,  ಸಿಗರೇಟಿನ ಗೊಡವೆಗೆ ಹೋಗಲಿಲ್ಲ ಎನ್ನಿ. ಬದುಕಿನ ಯಾವುದೋ ಕಾಲಘಟ್ಟದಲ್ಲಿ ಅವರೆಲ್ಲ ಅದರಿಂದ ದೂರವಾಗಿ ಬಿಟ್ಟರು. ಇವತ್ತೇಕೋ ಆ ಘಟನೆ ನೆನಪಾಯಿತು. ನಾವೆಲ್ಲ ರಾಜ್ ಕುಮಾರ್ ಅವರನ್ನು ಯಾಕೆ ಆ ಪರಿ ಪ್ರೀತಿಸುತ್ತೇವೆ? ಗೌರವಿಸುತ್ತೇವೆ? ಎಂಬುದಕ್ಕೆ ನನ್ನಂತವರು ಹಲ ಉದಾಹರಣೆಗಳನ್ನು ಕೊಡಬಹುದು.

ಆದರೆ ನಾನು ಮಾತ್ರ ನಿಶ್ಚಿತವಾಗಿ ಹೇಳುತ್ತೇನೆ. ನಾನು ಬೀಡಿ ಸೇದದಂತೆ ತಡೆದವರು ನನ್ನಜ್ಜಿ ಮತ್ತು ಪರೋಕ್ಷವಾಗಿ ರಾಜ್ ಕುಮಾರ್.
ಹೀಗಾಗಿ ಮಯೂರ ಪಿಕ್ಚರಿನ ಆ ದೃಶ್ಯವನ್ನು ನಾನು ಮೇಲಿಂದ ಮೇಲೆ ನೋಡುತ್ತಲೇ ಇರುತ್ತೇನೆ. ಇವತ್ತಿಗೂ ಆ ನಟನೆಯನ್ನು ನೋಡಿ ಪುಳಕಿತಗೊಳ್ಳುತ್ತೇನೆ. ಒಳ್ಳೆಯ ನಟನೆಗಾಗಿ ಹಲವರು ನನ್ನ ಮನಸ್ಸಿನಲ್ಲಿ ಜಾಗ ಗಿಟ್ಟಿಸಿರಬಹುದು. ಆದರೆ ರಾಜ್ ಕುಮಾರ್ ಜಾಗವನ್ನು ಯಾರಾದರೂ ನನ್ನ ಮನಸ್ಸಿನಲ್ಲಿ ತುಂಬುತ್ತಾರಾ? ಹಾಗನ್ನಿಸುತ್ತಿಲ್ಲ. ನೀವೂ ಒಂದು ಸಲ ರಾಜ್ ಕುಮಾರ್ ನಟನೆಯ ಆ ದೃಶ್ಯ ನೋಡಿ. ನಿಮಗೂ ಹಾಗನ್ನಿಸದಿದ್ದರೆ ಕೇಳಿ.

‍ಲೇಖಕರು admin

April 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Raj

    Howdu, naavu aa tent nalli estondu picture hinge nodiddivi. Adara hesaru “siddeshwara talkies” antha ittu ansutte. Paapa adara owner olle manushya, bala soft agi baitha iddru 😉 (avara hesaru tent Rajanna ansutte RIP). Thanks for reminding those memories.

    ಪ್ರತಿಕ್ರಿಯೆ
  2. Raj

    Howdu, naavu aa tent nalli estondu picture hinge nodiddivi. Adara hesaru “siddeshwara talkies” antha ittu ansutte. Paapa adara owner olle manushya, bala soft agi baitha iddru 😉 (avara hesaru tent Rajanna ansutte RIP). Thanks for reminding those memories.

    ಪ್ರತಿಕ್ರಿಯೆ
  3. Sangeeta Kalmane

    ರಾಜರ ರಾಜ
    ಮುತ್ತು ರಾಜ
    ಕುಮಾರನ
    ಹೆತ್ತಮ್ಮ ಆದಳು
    ಪುಣ್ಯವಂತೆ
    ಹಿಂದೆ ಹುಟ್ಟಿಲ್ಲ
    ಮುಂದೆ ಹುಟ್ಟೋಲ್ಲ
    ನಮ್ಮ ರಾಜಣ್ಣನಿಗೆ
    ಸರಿ ಸಾಟಿ
    ಯಾರಿಲ್ಲ ಬಿಡಿ.

    ಅದಕೆ
    ಅಭಿಮಾನಿಗಳೆ
    ದುಶ್ಚಟದ
    ಬೀಡಿ
    ಬಿಡಿ!☺

    ಪ್ರತಿಕ್ರಿಯೆ
  4. Sangeeta Kalmane

    ರಾಜರ ರಾಜ
    ಮುತ್ತು ರಾಜ
    ಕುಮಾರನ
    ಹೆತ್ತಮ್ಮ ಆದಳು
    ಪುಣ್ಯವಂತೆ
    ಹಿಂದೆ ಹುಟ್ಟಿಲ್ಲ
    ಮುಂದೆ ಹುಟ್ಟೋಲ್ಲ
    ನಮ್ಮ ರಾಜಣ್ಣನಿಗೆ
    ಸರಿ ಸಾಟಿ
    ಯಾರಿಲ್ಲ ಬಿಡಿ.

    ಅದಕೆ
    ಅಭಿಮಾನಿಗಳೆ
    ದುಶ್ಚಟದ
    ಬೀಡಿ
    ಬಿಡಿ!☺

    ಪ್ರತಿಕ್ರಿಯೆ
  5. Rakshith Gowda

    Haudu bahala dindadinda annavarigoskara naanu enadru thyaga (Chata) bidabekendiddene..Adare innu sadyavagilla:(

    ಪ್ರತಿಕ್ರಿಯೆ
  6. Rakshith Gowda

    Haudu bahala dindadinda annavarigoskara naanu enadru thyaga (Chata) bidabekendiddene..Adare innu sadyavagilla:(

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: