ಅದಕ್ಕಾಗಿ ಉಮಾಶ್ರೀ ಹೀಗೆ ಮಾಡಿದ್ದಾಳೆ ಅಂದ್ರು ರಾಜಣ್ಣ

beluru raghunandan

ಬೇಲೂರು ರಘುನಂದನ್ 

ರಾಜ್ ಕುಮಾರ್ ಅವ್ರ ಜೊತೆ ಉಮಾಶ್ರೀ ಅವರು ನಾಯಕಿ ಆಗುವ ಅವಕಾಶ ತಪ್ಪಿತು

ಹೌದು ಅವತ್ತು ನಾನೂ ಅಮ್ಮ ಇಬ್ಬರೂ ನಮ್ಮ ಮನೆ ಹತ್ರ ಇರೋ ಕುಡ್ಲ ಹೋಟೆಲ್ ಗೆ ಊಟಕ್ಕೆ ಅಂತ ಹೋಗಿದ್ದೆವು. ಅವತ್ತು ನಮ್ಮ ಭಾವ ಅಂದ್ರೆ ಉಮಾಶ್ರೀ ಅವರ ಮಗನ ಹುಟ್ಟಿದ ಹಬ್ಬ. ಅದಕ್ಕಾಗಿ ರಾತ್ರಿಯ ಊಟಕ್ಕೆಂದು ಮನೆಯರೆಲ್ಲಾ ಸೇರಿದ್ದವು. ಕೇಕ್ ಕತ್ತರಿಸುವುದು ಪರಸ್ಪರ ಶುಭಕೋರುವುದು ಹೀಗೆ ಸಂತೋಷಕ್ಕೆ ಒಂದು ನೆವ ಅಷ್ಟೇ. ಅದಕ್ಕಾಗಿ ಅಮ್ಮ ಮತ್ತು ನಮ್ಮ ಭಾವ ಇಬ್ಬರೂ ಸಂಜೆ ಹೊತ್ತಿಗೆ ಕ್ಷೇತ್ರದಿಂದ ಬಂದು ನಮ್ಮನ್ನೆಲ್ಲಾ ಸೇರಿಕೊಂಡಿದ್ದರು. ಮನೆಯವರಿಗೆಲ್ಲಾ ಜನುಮದಿನದ ಸಂಭ್ರಮ. ಕೇಕ್ ಕತ್ತರಿಸಿ ಶುಭಾಷಯ ಹೇಳಿದ ಮೇಲೆ ನನಗೆ ಅಮ್ಮನಿಗೆ ಒಂದೆಡೆ ಊಟಕ್ಕೆ ಕೂತು ಮಾತಾಡುವ ಸಂಭ್ರಮ.

umashree with rajkumarಅವತ್ತು ನಮ್ಮಿಬ್ಬರ ಮಾತಿನ ಶಕ್ತಿ, ಅಮ್ಮನ ಮಾತುಗಳ ಪ್ರೀತಿಯ ಬುತ್ತಿ, ಕನ್ನಡದ ಜೀವಸತ್ವ ಡಾ. ರಾಜ್ ಕುಮಾರ್ ಅವರನ್ನು ಕುರಿತದ್ದು. ಹೌದು ಅವತ್ತು ನಾವಿಬ್ಬರೂ ಒಟ್ಟಿಗೆ ಇದ್ದಷ್ಟೂ ಹೊತ್ತು ನಮ್ಮೆಲ್ಲಾ ಮಾತುಗಳು ರಾಜಣ್ಣ ಮತ್ತು ಅಮ್ಮನನ್ನು ಕುರಿತದ್ದೇ ಆಗಿತ್ತು.

ಅಮ್ಮನ ಮಾತುಗಳೆಲ್ಲಾ ಅಭಿಮಾನದ ದಾರಿಯನ್ನು ಹಿಡಿದು ಗೌರವ ಪ್ರೀತಿಗಳ ಮಳೆಗರೆಯುತ್ತಿದ್ದವು. ಅಪ್ಪಾಜಿ ಅಪ್ಪಾಜಿ ಎಂದು ರಾಜಣ್ಣ ಹೆಸರು ಹೇಳುವಾಗ ಅಮ್ಮ ತನ್ನ ದೇಹವನ್ನು ಹಿಡಿಯಾಗಿಸಿಕೊಳ್ಳುತ್ತಿದ್ದರು. ಕೂತಲ್ಲೇ ಬಾಗುತ್ತಿದ್ದರು. ಒಂಥರಾ ಮಬ್ಬು ಬೆಳಕಿದ್ದ ಹೋಟೆಲ್ಲಿನಲ್ಲಿ ಅಮ್ಮನ ಕಣ್ಣುಗಳು ತೇವಗೊಂಡು ಹೊಳಪಿನಲ್ಲಿ ಪಳಗುಡುತ್ತಿತ್ತು. ಅಮ್ಮನ ದನಿಯಲ್ಲಿದ್ದ ಏರಿಳಿತಕ್ಕೆ ನನ್ನ ಎದೆ ಬಡಿತ ಹೆಚ್ಚಾಗಿ ಕಾಣುವ ದರ್ಶನ ಅಮೂರ್ತವೆಲ್ಲಾ ಮೂರ್ತವಾಗಿ ರಾಜಣ್ಣ ಎದುರಿಗೆ ಬರುತ್ತಿದ್ದಾರೆ ಅನ್ನುವಂತೆ ಕಾಣುತ್ತಿತ್ತು.

ಅಮ್ಮ ತನ್ನ ಜೀವನದಲ್ಲಿ ಡಾ. ರಾಜ್ ಕುಮಾರ್ ಅವರ ಹೆಜ್ಜೆ ಗುರುತುಗಳನ್ನು ಒಂದೊಂದಾಗಿ ನನ್ನ ಬಳಿ ಹಂಚಿಕೊಳ್ಳುತ್ತಾ ಡಾ.ರಾಜ್ ಅನ್ನುವ ಜೀವದ ಬಗ್ಗೆ ಮನದಣಿಯೇ ಹೇಳ ತೊಡಗಿದರು. ನಾ ಕೇಳುತ್ತಾ ಹೋದೆ. ಇಷ್ಟರ ನಡುವೆ ನನಗೆ ಕುವೆಂಪು ಅವರ “ನೀನು ಬೆಳೆದರೆ ನಾನು ಬೆಳೆಯುವೆ, ನೀನು ಹೊಳೆದರೆ ನಾನು ಹೊಳೆಯುವೆ” ಅನ್ನುವ ಕವಿತೆಯ ಸಾಲುಗಳು ಮೈ ಮನಗಳಲಿ ಮತ್ತೆ ಮತ್ತೆ ಅನುರಣಿಸುತಿತ್ತು. ರೋಮಾಂಚನ ಅಷ್ಟೇ. ಅಬಿವ್ಯಕ್ತಿಗೆ ಮಾತುಗಳಿಲ್ಲ. ಅನುಭವಿಸುವುದಷ್ಟೇ ನನ್ನ ಪಾಲಿನ ಸಂತಸವಾಗಿತ್ತು. ಅಣ್ಣಾವ್ರಿಗೆ ಸಂಭಂದಪಟ್ಟಂತೆ ಅಮ್ಮ ಹೇಳಿದ ಅದೆಷ್ಟೋ ಅನುಭವಗಳಲ್ಲಿ, ಘಟನೆಗಳಲ್ಲಿ ದಕ್ಕಿದ್ದನ್ನು ಈ ಕೆಳಗಿನಂತೆ ದಾಖಲಿಸಿದ್ದೇನೆ. ಮಿಕ್ಕಿದ್ದವು ಅಕ್ಷರವಾಗದ ಅನಂತ.

****

ಒಮ್ಮೆ ಶೂಟಿಂಗ್ ನಡೆಯುವಾಗ ಬಿಡುವಿನ ವೇಳೆಯಲ್ಲಿ ಕಾಲು ಮೇಲೆ ಕಾಲು ಹಾಕ್ಕೊಂಡು ಕೂತಿದ್ದೆ. ನನ್ನ ಪಾಡಿಗೆ ನಾನು ಅಭಿನಯಿಸ ಬೇಕಾದ ಶಾಟ್ ಬಗ್ಗೆ ಯೋಚಿಸುತ್ತಿದ್ದೆ. ಪಾತ್ರ, ಡೈಲಾಗ್ ಇವುಗಳಲ್ಲೇ ಮುಳುಗಿ ಹೋಗಿದ್ದೆ. ಹೀಗಿದ್ದಾಗ ಅದೇ ಸಿನಿಮಾದಲ್ಲಿ ಅಣ್ಣಾವ್ರು ಅಭಿನಯಿಸುವುದಿತ್ತು. ಶೂಟಿಂಗ್ ಲೋಕೇಶನ್ ಗೆ ಅಪ್ಪಾಜಿ ಬಂದರು. ಅದು ನನಗೆ ಗೊತ್ತಾಗಲಿಲ್ಲ. ನನ್ನ ಪಾಡಿಗೆ ನಾನು ಕಾಲು ಮೇಲೆ ಕಾಲು ಹಾಕಿಕೊಂಡು ಕೂತೇ ಇದ್ದೆ. ರಾಜಣ್ಣ ಶೂಟಿಂಗಿಗೆ ಬಂದ್ರೆ ಅಲ್ಲಿನ ವಾತವರಣವೇ ಬಲಾಗುತಿತ್ತು. ಅಲ್ಲೆಲ್ಲಾ ಭಕ್ತಿಯ ಮತ್ತು ಗೌರವದ ಪರಿಸರ ಸೃಷ್ಟಿ ಆಗಿಬಿಡುತಿತ್ತು. ರಾಜಣ್ಣ ಬಂದ ಕೂಡಲೇ ಎಲ್ಲರೂ ಎದ್ದು ನಿಂತು ಗೌರವ ಕೊಡುತ್ತಿದ್ದರು. ಅಣ್ಣಾವ್ರು ಬಂದ್ರು ಅಣ್ಣಾವ್ರು ಬಂದ್ರು ಅನ್ನುವ ಮೆಲ್ಲನೆಯ ಮಾತುಗಳು ಕೇಳುತ್ತಿದ್ದವು. ಇದಾವುದು ನನ್ನ ಗಮನಕ್ಕೆ ಬಾರದೇ ನನ್ನ ಪಾಡಿಗೆ ನಾನು ಕಾಲು ಮೇಲೆ ಕಾಲು ಹಾಕಿಕೊಂಡು ಕೂತಿರುವುದನ್ನು ಕಂಡು ಪ್ರೊಡಕ್ಷನ್ ನವರು ಬಂದು ‘ಎದ್ದೇಳಮ್ಮ ಬೇರೆ ಕಡೆ ಎಲ್ಲಾದರು ಚೇರ್ ಹಾಕಿಕೊಂಡು ಕೂತ್ಕೋ ಹೋಗು’ ಅಂದ್ರು.

ನಾನು ಬೇರೇ ಥಿಯೇಟರ್ ಹಿನ್ನಲೆ ಇದ್ದವಳು. ಅಲ್ಲಿ ಹೀಗೆಲ್ಲಾ ಇರಲಿಲ್ಲ. ಏನಾದ್ರೂ ಎಡವಟ್ಟು ಮಾಡಿಬಿಟ್ಟೆನಾ ಅನ್ನುವ ಆತಂಕ ಬೇರೆ. ಅದೇನೋ ಗುಂಗಿನಲ್ಲಿ ಮುಳುಗಿ ಹೋಗಿದ್ದ ಮನಸು ಮುದುಡಿ ಹೋಯಿತು. ಅಯ್ಯೋ ಅಷ್ಟು ದೊಡ್ಡ ವ್ಯಕ್ತಿತ್ವ ಬಂದಾಗ ನಾ ಅಗೌರವ ತೋರಿಬಿಟ್ಟೆನಲ್ಲಾ ಎಂದು ತುಂಬಾ ದುಃಖವಾಯಿತು. ಏನು ಮಾಡೋದು ಎಂದು ಒಂದೂ ತಿಳಿಯದೇ ಮನಸು ಚಡಪಡಿಸಿ ಕೊನೆಗೆ ಆಪ್ಪಾಜಿ ಹತ್ತಿರ ಕ್ಷಮೆ ಕೇಳಿ ಬಿಡೋಣ ಅಂತ ತೀರ್ಮಾನಿಸಿ ಬಿಟ್ಟೆ.

umashree certificate

ನಾನು ಕಾಲು ಮೇಲೆ ಕಾಲು ಹಾಕಿ ಕೂತಿದ್ದನ್ನು ಅಪ್ಪಾಜಿ ಏನು ನೋಡಿರಲಿಲ್ಲ, ಆದರೂ ನಾಳೆ ದಿನ ಯಾರಾದ್ರೂ ಉಮಾಶ್ರೀ ಹಿಂಗೆ ಕಾಲು ಮೇಲೆ ಕಾಲು ಹಾಕ್ಕೊಂಡು ಕೂತಿದ್ದಳು. ದವಲತ್ತು ಅವಳಿಗೆ ಅಂತ ಹೇಳಿಬಿಟ್ಟರೆ. ಅವರಿಗೆ ನನ್ನ ಮೇಲೆ ಬೇಸರ ಮೂಡಿ ಬಿಟ್ಟರೆ ಅಂತೆಲ್ಲಾ ಏನೇನೋ ಯೋಚಿಸಿ ಅಣ್ಣಾವ್ರ ಬಳಿ ಹೋಗಿ ನಡೆದದ್ದನ್ನು ಹೇಳಿ ಬಿಡೋಣ ಅಂದುಕೊಂಡೆ. ಆದ್ರೂ ಅಷ್ಟು ಸುಲಭಕ್ಕೆ ಅಣ್ಣಾವ್ರ ಬಳಿ ಹೋಗಿ ಯಾರೂ ಮಾತಾಡುತ್ತಿರಲಿಲ್ಲ. ಇಷ್ಟರ ನಡುವೆ ಧೈರ್ಯ ಮಾಡಿ ಹೋಗಿ ರಾಜಣ್ಣನ ಎದುರು ನಿಂತು ‘ಅಪ್ಪಾಜಿ ಸಾರಿ ಗೊತ್ತಾಗಲಿಲ್ಲ ನೀವು ಬಂದಿದ್ದು. ಕಾಲು ಮೇಲೆ ಕಾಲು ಹಾಕಿಕೊಂಡು ಕೂತಿದ್ದೆ‘ ಎಂದು ಒಂದೇ ಉಸಿರಿಗೆ ಮುಗ್ದವಾಗಿ ಹೇಳಿಬಿಟ್ಟೆ.

ಅದಕ್ಕೆ ಅಪ್ಪಾಜಿ “ ಅದರಲ್ಲಿ ತಪ್ಪೇನಿದೆಯಮ್ಮ ನಿನ್ನ ಕಾಲು ಮೇಲೆ ನೀನು ಕಾಲು ಹಾಕ್ಕೊಂಡು ಕೂತಿದ್ದೀಯ. ತಪ್ಪೇನು ಇಲ್ಲಮ್ಮ. ಬಾ ಚೇರ್ ಎಳ್ಕೋ. ಕೂತ್ಕೋ ಬಾ ನನ್ನ ಪಕ್ಕದಲ್ಲಿ “ ಅಂತ ಕೂರಿಸಿದರು. “ಯಾರು ನಿನಗೆ ಹಾಗೇ ಕೂತ್ಕೋ ಬಾರದು ಅಂತ ಹೇಳಿದವರು? ಹೇಳು. ಯಾರಪ್ಪ ಅದು ಈ ಮಗೂಗೆ ಹಾಗೇ ಕೂರಬೇಡ ಹೀಗೆ ಕೂರಬೇಡ ಅಂದೋರು ? ಹೇಳಮ್ಮ ನೀನು ಅವರು ಯಾರು ಅಂತ. ಏನು ವಿಷ್ಯ ಅಂತ ಕೇಳ್ತೀನಿ.” ಅಂದ್ರು. ಅದಕ್ಕೆ ನಾ ಥರ ಥರ ನಡುಗುತ್ತಿದ್ದೆ. ಕೇಳೋದು ಆಮೇಲೆ ನಾ ಚಾಡಿ ಹೇಳಿದ್ದೀನಿ ಅಂತ ಗೊತ್ತಾಗೋದು ಇವೆಲ್ಲಾ ಯಾಕೆ ಅಂತ ‘ತಪ್ಪಾಯ್ತು ಅಪ್ಪಾಜಿ’ ಅಂದೆ. ‘ಅಯ್ಯೋ ರಾಮಾ ನೀನು ಯಾಕಮ್ಮ ತಪ್ಪಾಯ್ತು ಅಂತ ಕೇಳಬೇಕು. ನಿನಗೆ ಹೇಳಿದವನು ತಪ್ಪಾಯ್ತು ಅಂತ ಕೇಳಬೇಕು’ ಅಂದ್ರು. ಆಮೇಲೆ ಇದೆಲ್ಲಾ ಆದ ಮೇಲೆ ಪ್ರೊಡಕ್ಷನ್ನವರನ್ನು ಕರೆಸಿ ಆಕೆ ದೊಡ್ಡ ಕಲಾವಿದೆ. ರಂಗಭೂಮಿಯಿಂದ ಬಂದಿರುವ ರಂಗ ಸರಸ್ವತಿ. ಅವರಿಗೆ ಹೀಗೆಲ್ಲಾ ಹೇಳಬಾರದು’ ಎಂದು ಹೇಳಿದರು. ಕೊನೆಗೆ ನನಗೆ ‘ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡಮ್ಮ ಹೋಗು ಚೆನ್ನಾಗಿ ಪಾರ್ಟ್ ಮಾಡು’ ಎಂದು ಆಶೀರ್ವದಿಸಿ ಕಳಿಸಿದರು.

****

ನಾನು ಅನೇಕ ರಂಗಭೂಮಿಯ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ನಾ ಪಾತ್ರ ಮಾಡಿದ ಕೆಲ ನಾಟಕಗಳಿಗೆ ಡಾ. ರಾಜ್ ಕುಮಾರ್ ಅವರು ಕೂಡ ತೀರ್ಪುಗಾರರಾಗಿ ಬಂದಿದ್ದಾರೆ ಕೂಡ. ಕನ್ನಡದ ಮೇರು ಪ್ರತಿಭೆಯ ಎದುರು ನಾಟಕ ಮಾಡೋದು ಅನ್ನೋದೇ ಒಂದು ದೊಡ್ಡ ಗೌರವ. ಪ್ರೈಸ್ ಬರುತ್ತೋ ಬಿಡತ್ತೋ ಅಪ್ಪಾಜಿ ಎದುರು ನಾಟಕ ಮಾಡಿದ್ರೆ ಬಹುಮಾನ ಗೆದ್ದಂತೆ ಲೆಖ್ಖ ಅಂತ ನಂಬಿದ್ದವಳು ನಾನು. ಸರಿ ಹೀಗೆ ಒಂದೆರಡು ಸಲ ಅಪ್ಪಾಜಿಯ ಎದುರು ನಾಟಕ ಮಾಡಿ ಅತುತ್ತಮ ನಟಿ ಅಂತ ಪ್ರಶಸ್ತಿ ಪಡೆದುಕೊಂಡಿದ್ದೇನೆ. ರಾಷ್ಟ್ರ ಪ್ರಶಸ್ತಿ ಬಂದಾಗಲೂ ಕೂಡ ಅಣ್ಣಾವ್ರು ಇದ್ದಿದ್ದರೆ ಹೋಗಿ ಆಶೀರ್ವಾದ ಪಡೆದು ಬರಬಹುತಿತ್ತು. ತುಂಬಾ ಸಂತೋಷ ಪಡುತ್ತಿತ್ತು ಆ ಹಿರೀ ಜೀವ ಅಂತ ಅಪ್ಪಾಜಿಯನ್ನು ಸ್ಮರಿಸಿಕೊಂಡೆ.

ಒಡಲಾಳ ನಾಟಕವನ್ನು ಅಪ್ಪಾಜಿ ನೋಡಲು ಬಂದಿದ್ದರು. ನಾಟಕ ನೋಡಿ ಮೆಚ್ಚಿಕೊಂಡು ಪ್ರೀತಿಯ ಆಶೀರ್ವಾದಗಳನ್ನು ಕೂಡ ಕೊಟ್ಟಿದ್ದರು. ನಾಟಕ ನೋಡಿಕೊಂಡು ಮನೆಗೆ ಹೋಗಿ ಪಾರ್ವತಮ್ಮ ಅವರ ಹತ್ತಿರ ನನ್ನ ಮುಂದಿನ ಸಿನೆಮಾಕ್ಕೆ ಈ ಹುಡುಗಿಯೇ ನಾಯಕಿ ಅಂತ ಹೇಳಿದ್ದರಂತೆ. ಆ ವಿಷಯವನ್ನು ಅಮ್ಮಾವ್ರು ನನಗೆ ತಿಳಿಸದರು. ಹೀಗೆ ಅಪ್ಪಾಜಿಯ ಜೊತೆ ಸಿನೆಮಾದಲ್ಲಿ ನಾನು ಅಭಿನಯಿಸಲು ಅವಕಾಶ ಕೊಡಬೇಕು ಎಂದು ತೀರ್ಮಾನವಾಗಿ ಕೆಲ ದಿನಗಳಲ್ಲೇ ಅನುಭವ ರಿಲೀಸ್ ಆಯಿತು. ಈ ಸಿನೆಮಾ ಬಂದ ಕಾರಣ ಅಪ್ಪಾಜಿಯ ಜೊತೆ ಸಿನೆಮಾ ಮಾಡುವ ಕೈ ತಪ್ಪಿ ಹೋಯಿತು ಅನ್ನುವ ವಿಷಯವನ್ನು ಪಾರ್ವತಮ್ಮ ಅವರು ತಿಳಿಸಿದರು. ಹೊಟ್ಟೆಪಾಡು ಮಕ್ಕಳ ಬದುಕಿಗಾಗಿ ಬಂದ ಪಾತ್ರವನ್ನೆಲ್ಲಾ ಮಾಡಿದೆ. ಆದ್ರೂ ಇಂಥದ್ದೊಂದು ಅವಕಾಶ ಕೈ ತಪ್ಪಿ ಹೋಯಿತಲ್ಲ ಅನ್ನುವ ಅಗಾಧ ನೋವಿದೆ. ಅತ್ಯುತ್ತಮ್ಮ ನಟಿ ಆಗಲು ಐವತೈದು ವರ್ಷ ಕಳೆಯಬೇಕಾಯಿತು ನೋಡಿ.

****

umashreeಸಿನಿಮಾ ಇಂಡಸ್ಟ್ರೀಯ ಟ್ಯಾಕ್ಸ್ ಗೆ ಸಂಬಂಧಪಟ್ಟ ಕಲಾವಿದರ ಹೋರಾಟದಲ್ಲಿ ಭಾಗಿಯಾಗಿದ್ದೆ. ಆ ಹೋರಾಟದಲ್ಲಿ ಅಣ್ಣಾವ್ರ ಜೊತೆಗೆ ಇಡೀ ಇಂಡಸ್ಟ್ರೀ ಇತ್ತು. ರಾಜಣ್ಣನ ನಾಯಕತ್ವದಲ್ಲಿ ನಾವೆಲ್ಲಾ ಹೋರಾಟಕ್ಕೆ ಇಳಿದಿದ್ದೆವು. ಎಲ್ಲರೂ ಸರ್ಕಾರ ಮತ್ತು ಸಿ,ಎಂ ವಿರುದ್ಧ ದಿಕ್ಕಾರ ಕೂಗುತ್ತಿದ್ದೆವು. ನಾನು ಆ ಸಂದರ್ಭದಲ್ಲಿ ವ್ಯವಸ್ಥೆಯ ಎದುರು ಚಪ್ಪಲಿ ಬೀಸಿ ಪ್ರತಿಭಟನೆ ವ್ಯಕ್ತ ಪಡಿಸಿದ್ದ ಸಂದರ್ಭ ಅದು. ನಾ ಹೀಗೆ ಮಾಡಿದ್ದಕ್ಕೆ ಅನೇಕ ಕಲಾವಿದರು ಹೀಗೆಲ್ಲಾ ಯಾಕೆ ಮಾಡಿದೆ ಅಂತ ಕೇಳಿದ್ದಕ್ಕೆ ಉತ್ತರವಿರಲಿಲ್ಲ. ಹೀಗೆ ಮಾಡಬೇಕೋ ಬೇಡವೋ ಅದೂ ಗೊತ್ತಾಗುತ್ತಿರಲಿಲ್ಲ. ಒಟ್ಟು ಕಲಾವಿದರಿಗೆ ತೊಂದರೆ ಆಗುತ್ತದೆ ಅನ್ನುವ ಸಂಕಟಕ್ಕೆ ಮತ್ತು ಆಗಿದ್ದ ಹುಮ್ಮಸಿಗೆ ಚಪ್ಪಲಿ ಬೀಸಿದ್ದಂತೂ ನಿಜ.

ಈ ವಿಷ್ಯ ತಿಳಿದ ರಾಜಣ್ಣ ತಮ್ಮ ಭಾಷಣದಲ್ಲಿ ‘ಆಕೆಯ ಹೊಟ್ಟೆಯಲ್ಲಿ ಕಲಾವಿದರ ಸಂಕಟ ಬಿಸಿ ತಟ್ಟುತ್ತಿದೆ. ಅದಕ್ಕಾಗಿ ಉಮಾಶ್ರೀ ಹೀಗೆ ಮಾಡಿದ್ದಾಳೆ’ ಎಂದು ಸಮರ್ಥಿಸಿಕೊಂಡಿದ್ದರು. ಪತ್ರಿಕೆಗಳೂ ಕೂಡ ಇದನ್ನೆಲ್ಲಾ ವರದಿ ಮಾಡಿದ್ದವು.

ಅಪ್ಪಾಜಿ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದರು. ನಾವೆಲ್ಲಾ ಕಲಾವಿದರು ಸದಸ್ಯರಾಗಿದ್ದೆವು. ಸಭೆಗಳಲ್ಲಿ ಸಮಾರಂಭಗಳಲ್ಲಿ ಅಣ್ಣಾವ್ರನ್ನು ಕಂಡವರೆಲ್ಲಾ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಿದ್ದರು. ನಾನೂ ಕೂಡಾ ಅಪ್ಪಾಜಿಯವರಿಗೆ ಕಾಲು ಮುಟ್ಟಿ ನಮಸ್ಕರಿಸಲು ಹೋದಾಗ ಅವರು ಎಷ್ಟೋ ಸಲ ತಿರಸ್ಕರಿಸಿದ್ದಾರೆ. ‘ನೀನು ಅತ್ಯುತ್ತಮ ಕಲಾವಿದೆಯಮ್ಮ. ನೀನು ನನ್ನ ಪಾದ ಮುಟ್ಟಿ ನಮಸ್ಕರಿಸಬಾರದು’ ಅಂತ ಅಪ್ಪಾಜಿ ಹೇಳುತ್ತಿದ್ದರು. ಆದ್ರೆ ನನಗೆ ಅವರ ಪಾದ ಸ್ಪರ್ಶಿಸಬೇಕು ಅನ್ನುವ ಅದಮ್ಯ ಆಸೆ ಅಂತೂ ಸದಾ ಇತ್ತು.

****

ಶಬ್ಧವೇದಿ ಸಿನೆಮಾದ ಚಿತ್ರೀಕರಣ ಸಂದರ್ಭ. ನಾನೂ ಅಣ್ಣಾವ್ರು ಒಂದೇ ಫ್ರೇಮ್ ನಲ್ಲಿ ಬರೋದಿತ್ತು. ಅಣ್ಣಾವ್ರ ಎದುರಿಗೆ ಹಾದು ಹೋಗುವಂತೆ ಅಭಿನಯಿಸಿದೆ. ಅದನ್ನು ನೋಡಿದ ಎಸ್. ನಾರಯಣ್ ಅವರು ತಕ್ಷಣ ಕಟ್ ಕಟ್ ಎಂದು ನನ್ನ ಪಕ್ಕಕ್ಕೆ ಕರೆದು ‘ರಾಜಣ್ಣನ ಎದುರು ಹಾದುಹೋಗದಂತೆ ಅಭಿನಯಿಸಿ. ಅಣ್ಣಾವ್ರ ಪಾತ್ರದ ಎದುರು ಕ್ರಾಸ್ ಮಾಡಿದರೆ ತಪ್ಪಾಗುತ್ತದೆ’ ಎಂದರು. ಈ ವಿಷಯವಾಗಿ ನಾನು ಮತ್ತು ಎಸ್ ನಾರಯಣ್ ಅವರು ಗುಸು ಗುಸು ಮಾತಾಡಿಕೊಳ್ಳುತ್ತಿದ್ದಾಗ ಅದು ಅಣ್ಣಾವ್ರಿಗೆ ತಿಳಿದು ಏನದು ಎಂದು ಕೇಳಿದರು. ನಡೆದದ್ದನ್ನು ಎಸ್. ನಾರಾಯಣ್ ಅವರು ಹೇಳಿದರು. ಅದಕ್ಕೆ ಅಪ್ಪಾಜಿ “ಅವಳು ಹರಿಯೋ ನದಿ. ಹೇಗೆ ಬೇಕೋ ಹಾಗೇ ಹರಿಯಲಿ ಬಿಡಿ. ಕಲಾ ಸರಸ್ವತಿ ಅವಳು. ತಡೆಯಬೇಡಿ ಅವಳನ್ನು” ಅಂದ್ರು. ಖುಲ್ಲಾ ಅಭಿನಯಿಸುವುದನ್ನು ರಂಗಭೂಮಿ ಹೇಳಿಕೊಟ್ಟಿದ್ದ ಕಾರಣಕ್ಕೆ ಇಷ್ಟಕ್ಕೆ ಅಭಿನಯಿಸಿದೆ. ಅಣ್ಣಾವ್ರು ಜೊತೆಯಲ್ಲೇ ಇದ್ದಾರೆ ಅನ್ನುವುದು ನನ್ನ ಉಮೇದನ್ನು ಹೆಚ್ಚಿಸಿತ್ತು ಕೂಡ. ನಾ ಅಂದುಕೊಂಡಂತೆ ಪಾತ್ರ ಮಾಡಿದೆ. ಅಪ್ಪಾಜಿ ಜೋರಾಗಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಇದೇ ಸಿನಿಮಾದಲ್ಲಿ ಕಾಂಪೌಂಡ್ ಹಾರಿ ಬೆನ್ನು ಮೂಳೆ ಕೂಡ ಜರುಗಿತ್ತು. ಆಗ ಆದ ಸ್ಲಿಪ್ ಡಿಸ್ಕ್ ಪ್ರಾಬ್ಲಮ್ ಈಗಲೂ ಇದೆ. ಆದ್ರೆ ಅದು ನೋವಲ್ಲ. ಶಬ್ಧವೇದಿ ಸಿನಿಮಾದ ಶತದಿನೋತ್ಸವದ ಸಮಾರಂಭದಲ್ಲಿ ಅಪ್ಪಾಜಿ ಜೊತೆ ಹೆಜ್ಜೆ ಹಾಕಿದ್ದು ಜೀವನದ ಉದ್ದಕ್ಕೂ ಮರೆಯುವುದಿಲ್ಲ.

ನನ್ನ ಮಗಳು ಗಾಯತ್ರಿ ಮದುವೆಯನ್ನು ಅವಳು ಇಷ್ಟ ಪಟ್ಟಳು ಅನ್ನುವ ಕಾರಣಕ್ಕೆ ಅದ್ದೂರಿಯಾಗಿ ಮಾಡಿದೆ. ಸಿನೆಮಾದವರು, ರಂಗಭೂಮಿಯವರು ಮತ್ತು ರಾಜಕಾರಣಿಗಳು ನೆಂಟರು ಇಷ್ಟ್ರೂ ಎಲ್ಲಾ ಸೇರಿದ್ದ ಜೋರು ಮದುವೆ ಅದು. ಆಮೇಲೆ ಹೆಣ್ಣು ಹೆಂಗಸು ಕೂಡ ಎಲ್ಲವನ್ನು ಮಾಡಲು ಸಾಧ್ಯ ಎಂದು ಸಮಾಜಕ್ಕೆ ತೋರಿಸುವ ಒಂದು ಒಳ್ಳೆಯ ಅವಕಾಶ ಕೂಡ ನನಗೆ. ಅಂತೂ ಇಂತೂ ಕಷ್ಟ ಪಟ್ಟು ಮದುವೆ ಮಾಡಿದೆ. ಆ ಮದುವೆಗೆ ಅಣ್ಣಾವ್ರು ಬಂದಿದ್ದರು. ಮದುವೆಯ ಸಂಭ್ರಮವನ್ನು ನೋಡಿ ‘ಬದುಕಿನಲ್ಲಿ ನೀನು ಗೆದ್ದು ಬಿಟ್ಟಮ್ಮ. ಕಷ್ಟಗಿಷ್ಟ ಎಲ್ಲಾ ಏನೂ ಆಗಲ್ಲ ನಿಂಗೆ. ಯಾಕಂದ್ರೆ ನೀನು ಒಂಥರಾ ಆಂಜನೇಯ ಇದ್ದಂಗೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಇನ್ನೂ ಎಲ್ಲವನ್ನೂ ನೀ ಸಾಧಿಸ್ತೀಯ’ ಅಂದು ವಧು ವರರನ್ನು ಆಶೀರ್ವದಿಸಿದ್ದರು.

****

ಹೀಗೆ ಅವತ್ತು ಅಮ್ಮ ರಾಜಣ್ಣನ ಬಗೆಗೆ ತನ್ನ ಪಾಲಿಗೆ ದಕ್ಕಿದ ಕೆಲ ಅನುಭಗಳನ್ನು ಮತ್ತು ಘಟನೆಗಳನ್ನು ಹಂಚಿಕೊಳ್ಳುತ್ತಾ ಭಾವುಕರಾಗಿದ್ದರು. ನಾನು ತದೇಕದಿಂದ ಅಮ್ಮನ್ನನ್ನೇ ನೋಡುತ್ತಿದ್ದೆ. ಹೌದು ಪರಭಾಷಾ ನಟಿಯರೇ ಅಣ್ಣಾವ್ರ ಜೊತೆ ನಾಯಕಿರಾಗಿ ಹೆಚ್ಚು ಅಭಿನಯಿಸದ ಕಾಲದಲ್ಲಿ ಉಮಾಶ್ರೀ ಅವರಂಥ ಸಂವೇದನಾ ಶೀಲ ಅಪ್ಪಟ ಕನ್ನಡದ ಕಲಾವಿದೆ ರಾಜ್ ಕುಮಾರ್ ಅವರ ಜೊತೆ ನಾಯಕ ನಟಿಯಾಗಿ ಅಭಿನಯಿಸಿದ್ದರೆ ಎರಡು ಮೇರು ಪ್ರತಿಭೆಗಳು ಒಂದೆಡೆ ಸೇರಿದ ಶಕ್ತಿ ಕೇಂದ್ರ ಆಗಿಬಿಡುತ್ತಿತ್ತು. ಹೌದಲ್ವಾ ?? ಇಷ್ಟೆಲ್ಲಾ ಮಾತಾಡಿಕೊಂಡು ಸಮಯ ಸರಿದಿದ್ದು ಗೊತ್ತಾಗಲೇ ಇಲ್ಲ. ಆಗಾಗಲೇ ಹನ್ನೊಂದೂವರೆ ಆಗಿತ್ತು. ಸಚಿವೆ ಅನ್ನೋ ಕಾರಣಕ್ಕೆ ಮತ್ತು ನಮ್ಮಿಬ್ಬರ ಸಂವಾದವನ್ನು ಗಮನಿಸಿದ ಹೋಟೆಲ್ ನವರು ತೊಂದರೆ ಕೊಡಲಿಲ್ಲ.

ದುತ್ತೆಂದು ಆತ್ಮ ಸಂವಾದ ಮೆದುಳ ಕಡೆ ತಿರುಗಿ ತಕ್ಷಣ ಲೌಕಿಕರಾಗಿಬಿಟ್ಟೆವು. ಕೊನೆಗೆ ಒಂದಿಷ್ಟು ನೀರು ದೋಸೆ ಮತ್ತು ನಾಟಿ ಕೋಳಿ ಸಾರು ಗಬಗಬನೇ ತಿಂದು ಬರ್ಥಡೇ ಪಾರ್ಟಿ ಮುಗಿಸಿ ಹೊರಟೆವು. ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಉಮಾಶ್ರೀ ಅವರ ಮೊಮ್ಮಗಳು ನಿಸರ್ಗ ‘ರಾಜ್ ಕುಮಾರ್ ನಿನಗೆ ಗೊತ್ತಾ ? ನಮ್ಮನೆಗೆ ಬಾ ಉಮಾಶ್ರೀ ಅಮ್ಮಮ್ಮ ರಾಜ್ ಕುಮಾರ್ ಜೊತೆ ಇರೋ ಫೋಟೋ ಇದೆ ತೋರಿಸ್ತೀನಿ ಅಂತ ನನ್ನ ಮಗ ಸಹೃದಯಯನಿಗೆ ಹೇಳುತ್ತಿದ್ದಳು. ನಾನೂ ಅಮ್ಮ ಒಬ್ಬರನೊಬ್ಬರು ನೋಡಿಕೊಂಡೆವು. ಕಣ್ಣುಗಳು ತನ್ನ ಕನಸುಗಳನ್ನು ವಿಸ್ತರಿಸಿಕೊಂಡವು. ಮಾತುಗಳೆಲ್ಲಾ ಮೌನವಾದವು.

‍ಲೇಖಕರು g

April 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. shri

    Dr Raajkumar ravarige moulya iruvudu vyaktigalla pratibhege embudu spashta vaagittu adu nammalli bahlashtu janarige gottilla….. Navu vyaktigalannu tumba ettarakke erisi aalada maravaagisi ulid pratibhegalannu beleyalu biduvudilla gouravisuvudilla….o nanna chetana aagu nee aniketana.

    ಪ್ರತಿಕ್ರಿಯೆ
  2. shri

    Dr Raajkumar ravarige moulya iruvudu vyaktigalla pratibhege embudu spashta vaagittu adu nammalli bahlashtu janarige gottilla….. Navu vyaktigalannu tumba ettarakke erisi aalada maravaagisi ulid pratibhegalannu beleyalu biduvudilla gouravisuvudilla….o nanna chetana aagu nee aniketana.

    ಪ್ರತಿಕ್ರಿಯೆ
  3. Anonymous

    ಅವರ ಅನುಭವದ ಮೂಟೆಯ ಕಟ್ಟು ತೆರೆದಿದ್ದೀರಿ.

    ಪ್ರತಿಕ್ರಿಯೆ
  4. Anonymous

    ಅವರ ಅನುಭವದ ಮೂಟೆಯ ಕಟ್ಟು ತೆರೆದಿದ್ದೀರಿ.

    ಪ್ರತಿಕ್ರಿಯೆ
  5. bannadi vardhan

    ಮೇರುನಟ ಡಾ.ರಾಜ್‌ಕುಮಾರ್ ಜೊತೆ ಉಮಾಶ್ರೀ ಕಳೆದ ಮಧುರಕ್ಷಣಗಳು ಚೆನ್ನಾಗಿದೆ.ಧನ್ಯವಾದಗಳು

    ಪ್ರತಿಕ್ರಿಯೆ
  6. bannadi vardhan

    ಮೇರುನಟ ಡಾ.ರಾಜ್‌ಕುಮಾರ್ ಜೊತೆ ಉಮಾಶ್ರೀ ಕಳೆದ ಮಧುರಕ್ಷಣಗಳು ಚೆನ್ನಾಗಿದೆ.ಧನ್ಯವಾದಗಳು

    ಪ್ರತಿಕ್ರಿಯೆ
  7. dinesh

    so many unknown interesting moments , great work bringing them together and letting is know . tumba chennagi odisikondu hoyithu
    dhanyavaadagalu

    ಪ್ರತಿಕ್ರಿಯೆ
  8. dinesh

    so many unknown interesting moments , great work bringing them together and letting is know . tumba chennagi odisikondu hoyithu
    dhanyavaadagalu

    ಪ್ರತಿಕ್ರಿಯೆ
  9. Naveen Ba

    Nenapugalannu Terediduva sandharbagalu chennagi mudi bandide,ibbara ವ್ಯಕ್ತಿತ್ವ yetti hidiyuttade.

    ಪ್ರತಿಕ್ರಿಯೆ
  10. Naveen Ba

    Nenapugalannu Terediduva sandharbagalu chennagi mudi bandide,ibbara ವ್ಯಕ್ತಿತ್ವ yetti hidiyuttade.

    ಪ್ರತಿಕ್ರಿಯೆ
  11. Harishbabu Tanegar

    ಡಾ॥ರಾಜ್ ಅವರ ವ್ಯಕ್ತಿತ್ವದ ಆಭರಣವನ್ನು ಉಮಾಶ್ರೀಯವರು ತಮ್ಮ ಅನುಭವವನ್ನು ಹಂಚಿಕೊಳ್ಳುವುದರೊಂದಿಗೆ ಇನ್ನಷ್ಟು ಹೊಳಪಿಸಿದ್ದಾರೆ..

    ಪ್ರತಿಕ್ರಿಯೆ
  12. Harishbabu Tanegar

    ಡಾ॥ರಾಜ್ ಅವರ ವ್ಯಕ್ತಿತ್ವದ ಆಭರಣವನ್ನು ಉಮಾಶ್ರೀಯವರು ತಮ್ಮ ಅನುಭವವನ್ನು ಹಂಚಿಕೊಳ್ಳುವುದರೊಂದಿಗೆ ಇನ್ನಷ್ಟು ಹೊಳಪಿಸಿದ್ದಾರೆ..

    ಪ್ರತಿಕ್ರಿಯೆ
  13. mamatha

    ಓದುತ್ತಾ ರಸಘಳಿಗೆಯಲ್ಲಿ ಮುಳುಗಿದ ಹಾಗಾಯ್ತು. ನಿಜಕ್ಕೂ ಉಮಾಶ್ರಿಯವರಿಗೆ ಮೇರು ನಟನ ಎದುರು ನಾಯಕಿ ಪಾತ್ರ ತಪ್ಪಿದ್ದು ನೋವಿನ ಸಂಗತಿ. ಆಯಾ ಕಾಲಕ್ಕೆ ಸಾಕ್ಷಿಯಾಗಿ ನಿಲ್ಲುವ ಪ್ರತಿಭೆಗಳ ಬಗ್ಗೆ ತಿಳಿಯುವುದು ಅದ್ಭುತ ಅನುಭವ

    ಪ್ರತಿಕ್ರಿಯೆ
  14. mamatha

    ಓದುತ್ತಾ ರಸಘಳಿಗೆಯಲ್ಲಿ ಮುಳುಗಿದ ಹಾಗಾಯ್ತು. ನಿಜಕ್ಕೂ ಉಮಾಶ್ರಿಯವರಿಗೆ ಮೇರು ನಟನ ಎದುರು ನಾಯಕಿ ಪಾತ್ರ ತಪ್ಪಿದ್ದು ನೋವಿನ ಸಂಗತಿ. ಆಯಾ ಕಾಲಕ್ಕೆ ಸಾಕ್ಷಿಯಾಗಿ ನಿಲ್ಲುವ ಪ್ರತಿಭೆಗಳ ಬಗ್ಗೆ ತಿಳಿಯುವುದು ಅದ್ಭುತ ಅನುಭವ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: