ರಾಜೇಶ್ವರಿ ತೇಜಸ್ವಿ ಅವರೊಡನೆ ಕುಪ್ಪಳಿಯಲ್ಲಿ ಕಳೆದ ನೆನಪು…

ಮಮತಾ ರಾವ್

ನನ್ನ ಮತ್ತು ರಾಜೇಶ್ವರಿಯವರ ಪರಿಚಯ ಆದುದು ಮುಂಬಯಿಯಲ್ಲಿ. ಮೈಸೂರು ಅಸೋಶಿಯೇಶನ್, ಮುಂಬಯಿಯವರು ಆಯೋಜಿಸಿದ್ದ ‘ತೇಜಸ್ವಿ ಸಂಸ್ಮರಣೆ’ (೨೦೦೮-೨೦೦೯) ಕಾರ್ಯಕ್ರಮದಲ್ಲಿ. ಅಲ್ಲಿತನಕ ಅವರ ಹೆಸರು ಕೂಡ ಕೇಳಿರಲಿಲ್ಲ ನಾನು. ಆದರೆ ಅಂದು ನಮ್ಮ ನಡುವಿನ ಅಂತರವನ್ನೆಲ್ಲಾ ಮೀರಿ ಮೊಳಕೆಯೊಡೆದ ಸ್ನೇಹ ನನ್ನ ಬದುಕಿಲ್ಲೇ ಅನರ್ಘ್ಯವಾದುದು.

ಆ ದಿನ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದೆ. ಕಾರಣ ಕನ್ನಡ ಸಾಹಿತ್ಯದ ಮೇರು ಪ್ರತಿಭೆಗಳಾದ ರಾಷ್ಟ್ರಕವಿ ಕುವೆಂಪು ಹಾಗೂ ತೇಜಸ್ವಿಯವರ ಸಾನಿಧ್ಯವನ್ನು ಪಡೆದ ಪುಣ್ಯಜೀವಿಯೆಂದು. ಆದರೆ ಎಳ್ಳಷ್ಟೂ ಬಿಗುಮಾನವಿಲ್ಲದೆ ನನ್ನ ಕೈಯನ್ನು ತಮ್ಮ ಕೈಯಲ್ಲಿ ಬಿಗಿಯಾಗಿ ಹಿಡಿದು ಅವರು ಮಾತನಾಡಿಸಿದಾಗ ಮೈಯೆಲ್ಲಾ ರೋಮಾಂಚನಗೊಂಡಿತ್ತು.

ನನ್ನ ಪ್ರವಾಸಕಥನದ ಪ್ರತಿಯನ್ನು ಅವರಿಗೆ ನೀಡಿದ್ದೆ. ಅದನ್ನು ಓದಿಮುಗಿಸಿ ನನಗೆ ಮೊತ್ತಮೊದಲು ಫೋನಾಯಿಸಿದ ರಾಜೇಶ್ವರಿಯವರು ತರುನಂತರ ನೆನೆಪಾದಾಗೆಲ್ಲಾ ಫೋನ್ ಮಾಡುತ್ತಿದ್ದರು. ನಾನೂ ಅಷ್ಟೇ. ಸಮಯದ ಗೋಚರವಿಲ್ಲದೆ ಪಟ್ಟಾಂಗ ಹೊಡೆಯುತ್ತಿದ್ದೆವು. ಮಾತು ಮುಗಿಸಿದ ನಂತರ ಎಷ್ಟೋ ಸಮಯದ ತನಕ ಅವರ ಮುಕ್ತ ನಗು, ಅಂತಃಕರಣಾತ್ಮಕ ದನಿ ನನ್ನ ಕಿವಿಯಲ್ಲಿ ಅನುರರಣಗೊಳ್ಳುತ್ತಲೇ ಇರುತ್ತಿತ್ತು. ‘ಮಮತಾ.. ಮೂಡಿಗೆರೆಗೆ ಬನ್ನಿ’ ಎನ್ನುವ ಒತ್ತಾಯ ಮಾತ್ರ ಅವರ ಮಾತಿನ ಕೊನೆಯಲ್ಲಿ ಇದ್ದೇ ಇರುತ್ತಿತ್ತು. ಅವರ ಚೊಚ್ಚಲ ಕೃತಿ ‘ನನ್ನ ತೇಜಸ್ವಿ’ ೨೦೧೧ರಲ್ಲಿ ಹಾಗೂ ೨೦೧೭ರಲ್ಲಿ ‘ನಮ್ಮ ಮನೆಗೂ ಬಂದರು ಗಾಂಧೀಜಿ’ಯನ್ನು ಪ್ರೀತಿಯಿಂದ ಕಳುಹಿಸಿ ಕೊಟ್ಟಿದ್ದರು.

೨೦೧೪ರಲ್ಲಿ ನಾನು ಮಣಿಪಾಲಕ್ಕೆ ಹೋಗಿದ್ದಾಗ ಕುಪ್ಪಳ್ಳಿಯಲ್ಲಿ ಎರಡುದಿನಗಳ ‘ ತೇಜಸ್ವಿ ನೆನಪು’ ಎನ್ನುವ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದ ಪ್ರಕಟಣೆ ದಿನಪತ್ರಿಕೆಯಲ್ಲಿ ಓದಿದೆ. ತಕ್ಷಣ ಫೋನ್ ಮಾಡಿ ನನಗೂ ಬರುವ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡಾಗ ಕಡಿದಾಳು ಪ್ರಕಾಶ್ ಅವರು ಸಂತೋಷದಿಂದಲೇ ‘ಮುಂಬಯಿಯವರೇ? ಬನ್ನಿ ಬನ್ನಿ’ ಎಂದು ಆಮಂತ್ರಿಸಿದರು.

ಕುವೆಂಪು ಜನ್ಮಸ್ಥಾನ ಕುಪ್ಪಳ್ಳಿಯನ್ನು ನೋಡಬೇಕೆಂಬಾಸೆಗಿಂತಲೂ ರಾಜೇಶ್ವರಿ ಬರಬಹುದಲ್ಲವೇ? ಅವರನ್ನು ಮತ್ತೊಮ್ಮೆ ಭೇಟಿಯಾಗುವ ಅವಕಾಶ ದೊರಕೀತು ಎನ್ನುವುದು ನನ್ನ ಆಲೋಚನೆ ಹಾಗೂ ಅಭಿಲಾಷೆ. ರಾಜೇಶ್ವರಿಗೆ ಕೇಳಿದಾಗ ಆರೋಗ್ಯ ಸರಿಯಿಲ್ಲ ಬರುವ ಹಾಗಿಲ್ಲ ಅಂದಾಗ ನಿರಾಶೆಯಾಯಿತು. ಅಲ್ಲಿಂದ ನೇರವಾಗಿ ಮೂಡಿಗೆರೆಗೆ ಬನ್ನಿ ಅಂತಾನೂ ಅಂದರು, ನೋಡೋಣ, ಪ್ರಯತ್ನಿಸುತ್ತೇನೆ ಎಂದೆ.

ಕುಪ್ಪಳ್ಳಿಗೆ ಹೋಗುವ ಅವಕಾಶ ಬಿಡಬಾರದೆಂದು ಹೊರಟೆ. ಅಲ್ಲಿ ಹಂಪನಾ ಸರ್, ರಹಮತ್ ತರಿಕೇರಿ, ಬಸವರಾಜ್ ಕಲ್ಗುಡಿ ಇನ್ನಿತರರು ಎಲ್ಲರನ್ನೂ ನೋಡಿ ಖುಷಿಯಾಯಿತು. ಎಲ್ಲರೂ ಕೂಡಿ ಇನ್ನೇನು ತೇಜಸ್ವಿಯವರ ಪುಣ್ಯಸ್ಥಾನಕ್ಕೆ ತಲುಪಿದೆವು ಅನ್ನುವಷ್ಟರಲ್ಲಿ ರೊಯ್ಯನೆ ಕಾರು ಬಂದು ನಿಂತು ರಾಜೇಶ್ವರಿಯವರು ಇಳಿದಾಗ ನನಗೆ ಸ್ವರ್ಗವೇ ಧರೆಗಿಳಿದಂತಾಯಿತು. ಅವರ ಕೈಯಲ್ಲೊಂದು ದೊಡ್ಡ ಪೇಪರಿನ ಪೊಟ್ಟಣ. ಅದರಲ್ಲಿ ಅವರ ತೋಟದಲ್ಲರಳಿದ ಬಣ್ಣ-ಬಣ್ಣದ ಹೂಗಳನ್ನಾಯ್ದು ಕೈಯಾರೆ ಮಾಲೆ ಕಟ್ಟಿ ತಂದಿದ್ದರು. ತೇಜಸ್ವಿಯವರ ಭಾವಚಿತ್ರವನ್ನು ಆ ಹೂಗಳಿಂದಲೇ ಅಲಂಕರಿಸಿ ನಮಿಸಿದ ನಂತರ ಕಾರ್ಯಕ್ರಮಗಳು ಒಂದರನಂತರ ಒಂದು ನಡೆದವು.

ಮಧ್ಯಾಹ್ನದ ಊಟ, ಸಂಜೆಯ ಚಹಾ-ತಿಂಡಿ ಮುಗಿಯುವ ತನಕ ನನ್ನ ಪಕ್ಕ ಬಿಡದ ರಾಜೇಶ್ವರಿ ಯಾವಕ್ಷಣದಲ್ಲಿ ಹೊರಟು ಬಿಡುತ್ತಾರೋ ಎನ್ನುವ ಆತಂಕ ನನ್ನನ್ನು ಕಾಡುತ್ತಿತ್ತು. ಮಾತ್ರವಲ್ಲ ನನ್ನ ವಸತಿಯ ವ್ಯವಸ್ಥೆ ಸಂಜೆ ಮಾಡೋಣ ಎಂದು ವ್ಯವಸ್ಥಾಪಕರು ಹೇಳಿದ್ದ ಕಾರಣ ನನ್ನ ಸೂಟುಕೇಸು ಆಫೀಸು ರೂಮಿನಲ್ಲಿ ಇಣುಕುತ್ತಿತ್ತು.

ಎಲ್ಲರೂ ಅಲ್ಲಲ್ಲಿ ಕುಳಿತು ಪಟ್ಟಾಂಗ ಹೊಡೆಯುತ್ತಾ ನಾಳೆ ಬೆಳಿಗ್ಗೆದ್ದು ನವಿಲು ಕಲ್ಲಿಗೆ ಭೇಟಿ ನೀಡುವ ಕುರಿತು ಉತ್ಸುಕತೆಯಿಂದ ಚರ್ಚಿಸುತ್ತಿದ್ದರು. ರಾತ್ರಿಯ ಊಟಾನೂ ಬೇಗನೇ ಮುಗಿಸಿ ಆಯಿತು. ಬಹುಷ ವಿದ್ಯಾರ್ಥಿಗಳೊಂದಿಗೇನೇ ನನ್ನ ವ್ಯವಸ್ಥೆ ಇರಬಹುದೆನ್ನುತ್ತಿರುವಾಗ ರಾಜೇಶ್ವರಿಯವರು ಆಫೀಸ್ ರೂಮಿನ ಪಕ್ಕದ ಕೋಣೆಯನ್ನು ತೆರೆಯುತ್ತಾ ನನ್ನನ್ನು ಕರೆದರು. ನಾನೂ ಅವರೊಂದಿಗೆ ಆ ಕೋಣೆಯಲ್ಲೇ ಇರಬೇಕೆನ್ನುವ ಪ್ರೀತಿಯ ಒತ್ತಾಯ ಅವರದ್ದು. ನಾನಂತೂ ಅವರ ಆತ್ಮೀಯತೆಯ ಮುಂದೆ ಕುಬ್ಜಳಾಗಿ ಹೋದೆ. ಅಲ್ಲಿರುವ ಉಳಿದೆಲ್ಲಾ ಕೋಣೆಗಳಿಗಿಂತ ವಿಶಾಲವಾದ ಆ ಕೋಣೆಯಲ್ಲಿ ದೊಡ್ಡ ಡಬಲ್ ಬೆಡ್ ಹಾಗು ಕಿಟಕಿ ಪಕ್ಕದಲ್ಲಿ ಒಂದು ದಿವಾನ್ ಇತ್ತು.

ಮಾತು-ಮಾತಿನಲ್ಲಿ ಇಲ್ಲಿಗೆ ಬಂದಾಗೆಲ್ಲಾ ನಾನೂ ತೇಜಸ್ವೀ ಇದೇ ಕೋಣೆಯಲ್ಲಿರುತ್ತಿದ್ದುದು. ಅವರ ನಿಧನದ ನಂತರ ಇದೇ ಮೊದಲು ಈ ಕೋಣೆಯನ್ನು ಪ್ರವೇಶಿಸುತ್ತಿರುವುದು ಎಂದು ಭಾರವಾದ ದನಿಯಲ್ಲಿ ವಿವರಿಸಿದರು. ಅವರೊಂದಿಗೆ ಅದೂ ತೇಜಸ್ವಿಯವರು ಮಲಗುತ್ತಿದ್ದ ಆ ಬೆಡ್ ಮೇಲೆ ಮಲಗುವುದೇ? ಇಲ್ಲ ಸಾಧ್ಯವೇ ಇಲ್ಲ; ನಾನು ದಿವಾನ್ ಮೇಲೆ ಮಲಗುತ್ತೇನೆ ಎಂದರೂ ಸುತರಾಂ ಒಪ್ಪಲಿಲ್ಲ ; ಕೈಹಿಡಿದು ಒತ್ತಾಯದಿಂದ ಜೊತೆಗೆ ಮಲಗಿಸಿ ತಮ್ಮ ಹಾಗೂ ತೇಜಸ್ವಿಯವರ ಒಡನಾಟದ ಸವಿನೆನಪುಗಳನ್ನು ಹಂಚಿಕೊಂಡರು. ರಾತ್ರಿ ಸುಮಾರು ಹೊತ್ತಿನತನಕ ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಯಾವಾಗ ಮೂರುವರೆ ಆಯಿತೋ ಗೊತ್ತೇ ಆಗಲಿಲ್ಲ. ಹೊರಗೆ ಮಕ್ಕಳ ಸದ್ದು ಕೇಳಿಬಂತು. ತಕ್ಷಣ ಎದ್ದು ತಯಾರಾಗಿ ಹೊರಟು ನಿಂತೆವು.

ಡಾ ಶಿವಾರೆಡ್ಡಿ ಮತ್ತಿತರರು ಮ್ಯಾಡಮ್ ನೀವು ಬೆಟ್ಟ ಏರುವುದು ಬೇಡ ಎಂದು ನಯವಾಗಿ ತಡೆದರೆ, ‘ ಏಯ್ ಹೋಗ್ರಪ್ಪಾ ಹೋಗಿ.. ನನ್ನೊಂದಿಗೆ ಕೈಲಾಸ್ ಪರ್ವತಕ್ಕೆ ಹೋಗಿ ಬಂದಿರುವ ಮಮತಾ ಇರುವಾಗ ನಾನು ನವಿಲುಕಲ್ಲು ಹತ್ತದಿದ್ದರೆ ಹೇಗೆ? ಎಂದು ಹಠಮಾಡಿ ಹೊರಟು ನಿಂತರು. ನಸುಕಿನ ನಾಲ್ಕು ಗಂಟೆಗೆ ಎರಡು ಬಸ್ಸುಗಳು ನಮ್ಮನ್ನೆಲ್ಲಾ ಹೊತ್ತು ಕತ್ತಲಲ್ಲಿ ಹೊರಟವು. ಒಂದುಕಡೆ ನಿಲ್ಲಿಸಿದ ಬಸ್ಸಿನಿಂದಿಳಿದು ನಡೆದುಕೊಂಡು ಹೋಗಬೇಕು. ಆ ಕಾರ್ಗತ್ತಲಲ್ಲಿ ದಾರಿಮಾಡಿಕೊಂಡು ಹೊರಟರು ಎಲ್ಲರೂ. ಬಿಸಿರಕ್ತದವರು ಓಡೋಡಿ ಹೋದರೆ, ಪ್ರಾಯದವರು ಏದುಸಿರು ಬಿಡುತ್ತಾ ತಡವರಿಸುತ್ತಾ ನಡೆಯಲಾರಂಭಿಸಿದರು.

ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಧಾನಕ್ಕೆ ಹೆಜ್ಜೆಯ ಮೇಲೆ ಹೆಜ್ಜೆ ಊರುತ್ತಿದ್ದ ರಾಜೇಶ್ವರಿಯವರಿಗೆ ದಾರಿ ಕಾಣಲೆಂದು ಟಾರ್ಚ್ ಬೆಳಕು ಬೀರಲು ಕೆಲವರು ಪೈಪೋಟಿ ನಡೆಸುತ್ತಿದ್ದರು. ಅಂತೂ ಇಂತೂ ಅತ್ಯಂತ ಸಾವಕಾಶವಾಗಿ ಬೆಟ್ಟಹತ್ತಿ ಒಂದು ಕಡೆ ಕುಳಿತಾಗ ಆಲ್ಲಿಯ ನಿಸರ್ಗರಮ್ಯತೆ ಪ್ರಶಾಂತತೆ ಎಲ್ಲರಂತೆ ನಮ್ಮನ್ನೂ ಮೌನಕ್ಕೆ ತಳ್ಳಿತು. ಎಲ್ಲರೂ ಉಸಿರು ಬಿಗಿಹಿಡಿದು ಸೂರ್ಯೋದಯವನ್ನು ಕಾಯುತ್ತಿದ್ದರು. ಮೋಡ ಕವಿದಿದ್ದ ಕಾರಣ ಸೂರ್ಯನ ದರ್ಶನವಾಗದಿದ್ದರೂ ಬೆಳಕು ಮಾತ್ರ ಮೆಲ್ಲಮೆಲ್ಲನೆ ಎಲ್ಲಾ ಕಡೆ ಪಸರಿತು.

ಎಷ್ಟೋ ಸಮಯದ ನಂತರ ನನ್ನ ಸಹವಾಸದಲ್ಲಿ ನವಿಲುಕಲ್ಲಿನ ಮೇಲೆ ಕುಳಿತು ಸುರ್ಯೋದಯ ವೀಕ್ಷಿಸುವ ಅವಕಾಶ ಸಿಕ್ಕಿದ ಸಂತಸದಲ್ಲಿ ರಾಜೇಶ್ವರಿಯವರ ಮುಖದಲ್ಲಿ ಸಂತೃಪ್ತಿಯ ಭಾವ ಸೂಸುತ್ತಿತ್ತು. ಅವರ ಕೈಯ ಬಿಸುಪು ನನ್ನಲ್ಲಿ ಅರ್ವಚನೀಯ ಧನ್ಯತಾಭಾವ ಮೂಡಿಸುತ್ತಿತ್ತು. ಯಾವಜನ್ಮದ ಮೈತ್ರಿಯೋ ಏನೋ? ಕುವೆಂಪು ಅವರ ಸ್ಪೂರ್ತಿ ಸ್ಥಾನದಲ್ಲಿ ಅವರ ಮುದ್ದುಮಗ ನನ್ನ ನೆಚ್ಚಿನ ಸಾಹಿತಿ ತೇಜಸ್ವಿಯವರ ಧರ್ಮಪತ್ನಿಯ ಗೆಳತಿಯಾಗಿ ಅವರ ಪಕ್ಕದಲ್ಲಿ ಕುಳಿತು ಸುರ್ಯೋದಯವನ್ನು ವೀಕ್ಷಿಸುತ್ತಿದ್ದೆ. ಬೆಳಕು ಮೂಡುತ್ತಲೇ ಮಕ್ಕಳ ಕಲರವ ಶುರುವಾಯಿತು. ಕುವೆಂಪು ಅವರ ಸೂರ್ಯೋದಯದ ಕವಿತೆಗಳನ್ನು ಕೆಲವರು ವಾಚಿಸಿದರೆ, ಇನ್ನು ಕೆಲವರು ಸುಶ್ರಾವ್ಯವಾಗಿ ಹಾಡಿದರು.

ಕಾಲೇಜು ಮಕ್ಕಳೆಲ್ಲಾ ರಾಜೇಶ್ವರಿಯವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳಲಾರಂಭಿಸಿದರು. ನಾನು ಅವರ ಬದಿಯಿಂದೆದ್ದು ದೂರನಿಂತು ಅವರು ಮಕ್ಕಳೊಂದಿಗೆ ಮಕ್ಕಳಾಗಿ ನಕ್ಕು ನಗುತ್ತಾ ಸೆಲ್ಫೀಗೆ ಫೋಸ್ ಕೊಡುವುದನ್ನು, ಅವರ ಕೋರಿಕೆಯಂತೆ ತೇಜಸ್ವಿಯವರ ಕುರಿತಾಗಿ ಹೇಳುವುದನ್ನು ಗಮನಿಸುತ್ತಾ ನಿಂತೆ. ಎಂತಹ ಮುಗ್ಧಜೀವಿ!!! ತನ್ನ ಒಂಟಿತನವನ್ನು ಮರೆತು ಎಲ್ಲರೊಂದಿಗೆ ಬೆರೆತು ಒಂದಾಗುವ ಈ ಹೃದಯವೈಶಾಲ್ಯತೆ ಎಷ್ಟು ಮಂದಿಗಿದೆ? ಅಲ್ಲಿಂದ ನಾವು ಕುವೆಂಪು ಅವರ ಕಾದಂಬರಿಯಲ್ಲಿ ಬರುವ ವಿವಿಧ ಸ್ಥಾನಗಳಿಗೆ ಮಕ್ಕಳಂತೆಯೇ ಲವಲವಿಕೆಯಿಂದ ಬಸ್ಸಿನಿಂದ ಇಳಿದು ಹತ್ತಿ ಭೇಟಿ ನೀಡಿದೆವು.

ಅಂದು ಸಂಜೆ ಸಮಾರೋಪ ಕಾರ್ಯಕ್ರಮ ಮುಗಿಸಿ ಒಬ್ಬರನ್ನೊಬ್ಬರು ಬೀಳ್ಕೊಡುವಾಗ ಇಬ್ಬರ ಕಣ್ಣಂಚೂ ತೇವವಾಗಿತ್ತು. ಖಂಡಿತಾ ಮೂಡಿಗೆರೆಗೆ ಬಂದೇ ಬರುತ್ತೇನೆ ಅದೂ ಕೂಡ ಶ್ಯಾಮಲಾ ಮಾಧವ ಅವರನ್ನು ಜೊತೆಗೂಡಿ ಎನ್ನುವ ಭರವಸೆ ನೀಡಿದ್ದೆ, ಆ ನಂತರ ಎಷ್ಟೋ ಸಲ ನಾನೂ ಶ್ಯಾಮಲಾ ಮಾಧವ್ ಅವರು ಮೂಡಿಗೆರೆಗೆ ಹೋಗುವ ಪ್ಲಾನ್ ಮಾಡಿ ಏನೇನೋ ಕಾರಣಾಂತರದಿಂದ ಅಸಫಲರಾಗಿದ್ದೆವು.

ಮುಂಬಯಿಯಲ್ಲಿ ಏನಾದರೂ ಏರುಪೇರಾಯಿತ್ತೆಂದರೆ ತಕ್ಷಣ ಫೋನ್ ಮಾಡಿ ಕಾಳಜಿಯಿಂದ ಅವರು ವಿಚಾರಿಸುತ್ತಿದ್ದರೆ. ನಾನೂ ಅಲ್ಲಿ ಜೋರು ಮಳೆ ಬಂತು ಅಂದರೆ ಫೋನ್ ಮಾಡಿ ಅವರ ಯೋಗಕ್ಷೇಮ ವಿಚಾರಿಸೋಳು. ಆದರೆ ಏಕೋ ಏನೋ ಈ ಲಾಕ್‌ಡಾನ್ ಆದಂದಿನಿಂದ ಯಾಕೆ ಅವರನ್ನು ಮರೆತೆ? ಅದೇ ಸಿಟ್ಟಿನಲ್ಲಿ ತೇಜಸ್ವಿಯವರ ಬೈಕನ್ನೇರಿ ಬಾಯ್ ಅಂತನೂ ಹೇಳದೆ ರಾಜೇಶ್ವರಿ ಹೊರಟೇ ಹೋದರೇ?

‍ಲೇಖಕರು Admin

December 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಡಾII ಮಿರ್ಜಾ ಬಷೀರ್. ತುಮಕೂರು

    ಮಮತಾ ಮೇಡಂ,
    ವಿಷಾದ ತುಂಬಿಕೊಂಡೇ ಇಡೀ ಲೇಖನ ಬರೆದಂತಿದೆ.
    ನನ್ನ ಮನಸ್ಸಿನಲ್ಲಿ ಯೂ ಅದೇ ಭಾವದ
    ತಾಂಡವ .
    ಎಷ್ಟುಸಲ ರಾಜೇಶ್ವರಿ ಮೇಡಮ್ಮರನ್ನು ಕಂಡಿದ್ದು ಮಾತನಾಡಿಸಿದ್ದು ನಕ್ಕಿದ್ದು,!
    ಕುಪ್ಳಿಯಲ್ಲಿ ಮೂಡಿಗೆರೆಯಲ್ಲಿ ‘ಕೊಟ್ಟಿಗೆಹಾರದಲ್ಲಿ.
    ಎಷ್ಟು ಸಲ ಅವರ ಕೈ ಕಾಫಿ ಕುಡಿದದ್ದು!
    ಒಮ್ಮೆ ನಮ್ಮಕುಟುಂಬದವರೆಲ್ಲ ಹೋಗಿ ರಾಜೇಶ್ವರಿ ಮೇಡಮ್ಮರನ್ನು ಅವರ ಅಡಿಗೆ ಮನೆಯಲ್ಲೇ ಮುತ್ತಿಗೆ ಹಾಕಿದ್ದೆವು.
    ಇದನ್ನೆಲ್ಲ ನೆನೆಸಿಕೊಂಡರೆ ನಮಗೂ ಕಳೆದುಕೊಂಡ ಭಾವ.
    ಇಡೀ ಕನ್ನಡಿಗರೇ ಈ ಭಾವದಲ್ಲಿದ್ದಾರೆನಿಸುತ್ತದೆ.
    ರಾಜೇಶ್ವರಿ ಮೇಡಮ್ ರವರ ಸ್ನೇಹಪರತೆ ಮತ್ತು ಮುಗ್ಧತೆಯನ್ನು ಸರಿಯಾಗಿಯೇ ನೆನಪು ಮಾಡಿಕೊಂಡಿದ್ದೀರಿ ಮಮತಾ ಮೇಡಂ
    ವಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: