ಕನ್ನಡಿಗರೆಲ್ಲರೂ ನೋಡಲೇಬೇಕಾದ ಸಿನಿಮಾ

ಗೊರೂರು ಶಿವೇಶ್

ಬಾಹುಬಲಿ ಕೆಜಿಎಫ್ ಚಿತ್ರಗಳು ವರ್ಷಗಳಲ್ಲಿ ಬಿಡುಗಡೆಗೊಂಡು ಅಪಾರ ಯಶಸ್ಸನ್ನು ಸಾಧಿಸಿದ ನಂತರ ಕನ್ನಡ, ತಮಿಳು, ತೆಲುಗು, ಮಲಯಾಳಂನ ನಾಯಕನಟರ ಚಿತ್ರಗಳು ಪ್ಯಾನ್ ಇಂಡಿಯಾ ಅಡಿಯಲ್ಲಿ ಬಿಡುಗಡೆಯಾದರೂ ಯಾವ ಚಿತ್ರಗಳು ಹೇಳಿಕೊಳ್ಳುವಂತಹ ಯಶಸ್ಸನ್ನು ಪಡೆದಿಲ್ಲ. ಪಾನ್ ಇಂಡಿಯಾ ಸಿನಿಮಾಗಳ ಸಾಲಿಗೆ ಇತ್ತೀಚಿನ ಸೇರ್ಪಡೆ ಅಲ್ಲು ಅರ್ಜುನ್, ಕನ್ನಡದ ರಶ್ಮಿಕ ಮಂದಣ್ಣ ಮತ್ತು ಧನಂಜಯ್ ಅಭಿನಯದ ಪುಷ್ಪ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಯಶಸ್ಸಿನ ಪ್ರಮಾಣವನ್ನು ಮುಂದಿನ ದಿನಗಳು ನಿರ್ಧರಿಸಲಿವೆ.

ಇರಲಿ, ವಿಶೇಷ ಏನೆಂದರೆ ಈ ಚಿತ್ರ ಸರ್ವ ಜನಾಂಗದ ಶಾಂತಿಯ ತೋಟ ಜೊತೆಗೆ ಸರ್ವ ಭಾಷೆಗಳ ಹುಲ್ಲುಗಾವಲು ಆಗಿರುವ ಕರ್ನಾಟಕದಲ್ಲಿ ತೆಲುಗು ಅಷ್ಟೇ ಅಲ್ಲದೆ ಕನ್ನಡ ತಮಿಳು ಮಲಯಾಳಂ ಹಿಂದಿ ಭಾಷೆಗಳಲ್ಲಿ ಈಗ ಚಾಲ್ತಿಯಲ್ಲಿರುವ ಸರಿಸುಮಾರು ಅರ್ಧದಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇರಲಿಬಿಡಿ ಅದರಲ್ಲೇನು ವಿಶೇಷ ಎನ್ನುವಿರಾ ಅದೇ ದಿನ ಕನ್ನಡದ ಪ್ರಸಿದ್ಧ ನಾಯಕರೊಬ್ಬರ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಯಾಗಿರುವುದು, ಹಾಗು ಚಿತ್ರದ ಕಥೆ ಕನ್ನಡ ಭಾಷೆಯನ್ನು ಕಟ್ಟಿದವರ ಕಥೆ ಆಗಿರುವುದು‌.

ಚಿತ್ರವು ಚಿತ್ರೀಕರಣಗೊಂಡು ವರ್ಷವೇ ಕಳೆದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲು ಯತ್ನಿಸಿ ಕರೋನದ ಕಾರಣದಿಂದಾಗಿ ಜೀ ೫ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಹೌದು. ಪ್ರೇಮಲೋಕ, ರಣಧೀರ, ಅಂಜದಗಂಡು, ಅಣ್ಣಯ್ಯ ಸೈನಿಕ ರಾಮಾಚಾರಿ, ಗಡಿಬಿಡಿ ಗಂಡ ಮುಂತಾದ ಯಶಸ್ವಿ ಚಿತ್ರಗಳ ನಾಯಕನಟ ಕ್ರೇಜಿಸ್ಟಾರ್ ಅಭಿನಯದ ಜಟ್ಟ, ಮೈತ್ರಿ ಮುಂತಾದ ಬ್ರಿಡ್ಜ್ ಸಿನಿಮಾಗಳ ನಿರ್ದೇಶಕ ಗಿರಿರಾಜ್ ನಿರ್ದೇಶನದ ‘ಕನ್ನಡಿಗ’ ಚಿತ್ರ ಜಿ 5 ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿದೆ. ಕಳೆದ ವಾರ ತಾನೇ ರವಿಚಂದ್ರನ್ ಅಭಿನಯದ ದೃಶ್ಯ ಎರಡು ಬಿಡುಗಡೆಯಾಗಿ ಜನಮನ್ನಣೆಯನ್ನು ಗಳಿಸಿರುವಂತೆ ಈ ಚಿತ್ರವು ಹೆಚ್ಚಿನ ಜನರನ್ನು ತಲುಪುವುದರ ಜೊತೆಗೆ ಹಾಗೂ ನಿರ್ಮಾಪಕರಿಗೆ ಹೆಚ್ಚಿನ ಲಾಭವನ್ನು ತಂದು ಕೊಡಬಹುದಿತ್ತು ಎಂದೆನಿಸುತ್ತದೆ.

ಕನ್ನಡ ಸಾಹಿತ್ಯ ಚರಿತ್ರೆಯ ಆರಂಭಿಕ ಘಟ್ಟವಾದ ಪಂಪಯುಗ ಅಥವಾ ಜೈನ ಯುಗ ಎಂದೆ ಪ್ರಸಿದ್ಧಿಯಾದರ ಪಂಪ ರನ್ನ ಪೊನ್ನ ಜನ್ನ ನಾಗವರ್ಮ ಕವಿರಾಜಮಾರ್ಗದ ಮಾರ್ಗದ ಕತೃ ಅಮೋಘವರ್ಷ ನೃಪತುಂಗ ನ ಆಶ್ರಯದಲ್ಲಿದ್ದ ಶ್ರೀವಿಜಯ, ಶಬ್ದಮಣಿದರ್ಪಣದ ಕತೃ ಕೇಶಿರಾಜ ಮುಂತಾದ ಜೈನಕವಿಗಳು ಲಾಕ್ಷಣ ಕಾರರು ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತಗೊಳಿಸಿದ್ದಾರೆ.

ಜೊತೆಗೆ ಆ ಕಾಲಘಟ್ಟದಲ್ಲಿದ್ದ ಅರಸರು ಕನ್ನಡ ಭಾಷಾಪ್ರೇಮವನ್ನು ಮೆರೆದು ಸಾಹಿತ್ಯವನ್ನು ಪರಂಪರೆಯಿಂದ ಪರಂಪರೆಗೆ ಕೊಂಡೊ ಯ್ಯವ ಸಲವಾಗಿ ತಾಳೆಗರಿ ಪ್ರತಿಯನ್ನು ಲಿಪಿಕಾರರ ಮೂಲಕ ತಪ್ಪಿಲ್ಲದೆ ಬರೆಸಿ ಸಂಗ್ರಹಿಸಿ ಆ ಸಾಹಿತ್ಯದ ಶ್ರೀಮಂತಿಕೆಯನ್ನು ನೂರಾರು ವರ್ಷಗಳ ಕಾಲ ಕೊಂಡೊಯ್ಯಲು ಸಹಕರಿಸಿದ್ದಾರೆ. ಅಂತಹ ಲಿಪಿಕಾರರಲ್ಲಿ ಒಬ್ಬರಾದ ಗುಣ ಭದ್ರನ ಕಥೆಯನ್ನು ಇಲ್ಲಿ ಬಿಎ ಗಿರಿರಾಜ್ ಹೇಳಲು ಪ್ರಯತ್ನಿಸಿದ್ದಾರೆ.

1550 ರಿಂದ 1860 ರವರೆಗಿನ ಮೂರು ಶತಮಾನಗಳ ಕಥೆಯನ್ನು ಜೋಡಿಸಲು ಯತ್ನಿಸಿರುವ ನಿರ್ದೇಶಕರು ಆರಂಭದಲ್ಲಿ ಗೇರುಸೊಪ್ಪೆಯ ಪ್ರಾಂತ್ಯವನ್ನು ಆಳುತ್ತಿದ್ದ ಸಾಳವ ದೇಶದ ರಾಣಿ ಚೆನ್ನಬೈರಾದೇವಿ ತನ್ನಲ್ಲಿನ ಯೋಧ ಸಮಂತಭದ್ರರನ್ನು ತನ್ನ ಸೈನಿಕ ವೃತ್ತಿಯನ್ನು ತ್ಯಜಿಸಿ ವಂಶದ ವಂಶಾವಳಿ ಹಾಗೂ ಜೈನ ಮಹಾನ್ ಕೃತಿಗಳ ಮರು ಪ್ರತಿ ಹಾಗೂ ಸಂಪಾದನಾ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ಆಜ್ಞಾಪಿಸಿ ಆದರೆ ನಿರ್ವಹಣೆಗಾಗಿ ಒಂದು ದ್ವೀಪವನ್ನು ಉಂಬಳಿಯಾಗಿ ನೀಡುತ್ತಾಳೆ.

ಪೋರ್ಚುಗೀಸರು ಕೆಳದಿಯ ಅರಸರ ಜೊತೆಗೂಡಿ ಚೆನ್ನಬೈರಾ ದೇವಿಯನ್ನು ಬಂದಿಸಿ ಆಕೆ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳುತ್ತಾರೆ .ಇದೇ ಸಂದರ್ಭದಲ್ಲಿ ಸಮಂತ ಭದ್ರನ ದ್ವೀಪವನ್ನು ವಶಪಡಿಸಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ಸಮಂತಭದ್ರನ ದ್ವೀಪವನ್ನು ವಶಪಡಿಸಿಕೊಳ್ಳುತ್ತಾರೆ. ಆ ದ್ವೀಪವನ್ನು ಪೋರ್ಚುಗೀಸರ ಕೈಯಿಂದ ಬಿಡಿಸಿಕೊಳ್ಳಲು ಮಂಜೇಶ್ವರದ ಬೊಮ್ಮ ನರಸಯ್ಯನ ಬಳಿ ದೊಡ್ಡ ಮೊತ್ತದ ಸಾಲವನ್ನು ಸಮಂತಭದ್ರ ಮಾಡುತ್ತಾನೆ‌.

ಸಮಂತಭದ್ರನ ಮುಂದಿನ ಪೀಳಿಗೆಯವರು ಸಾಲದ ಬಡ್ಡಿಯನ್ನು ತೀರಿಸುತ್ತಾ ಬಂದಿದ್ದಾರೆ .ಇದಾಗಿ 300 ವರ್ಷಗಳ ನಂತರವೂ ಗುಣಭದ್ರ ಬೊಮ್ಮ ನರಸಯ್ಯ ವಂಶದವರವಂಶದವರ ಬಳಿ ಸಾಲದ ಬಡ್ಡಿ ತೀರಿಸುತ್ತಿದ್ದಾನೆ. ಗುಣ ಭದ್ರನ ತಮ್ಮ ಚಿಕ್ಕವಯಸ್ಸಿನಲ್ಲೇ ಗೋವೆಗೆ ಓಡಿ ಹೋಗಿದ್ದಾನೆ. ಹೆಂಡತಿ ಒಬ್ಬ ಮಗಳು ಮತ್ತು ಆಳು ಮಗ ಬೊಮ್ಮನ ಜೊತೆಗೆ ಆತನ ವಾಸ.

ಜರ್ಮನಿಯಿಂದ ಮತ ಪ್ರಚಾರಕ್ಕೆಂದು ಬಂದ ಫರ್ಡಿನೆಂಡ್ ಕಿಟೆಲ್ ಈಗ ಆ ದ್ವೀಪವನ್ನು ಕೊಂಡಿದ್ದಾನೆ. ಫರ್ಡಿನೆಂಡ್ ಕಿಟೆಲ್ಗೆ ಭಾಷಾಕಲಿಕೆಯ ಬಗ್ಗೆ ಅಪಾರವಾದ ಆಸಕ್ತಿ. ಸಂಸ್ಕೃತವನ್ನು ಈಗಾಗಲೇ ಚೆನ್ನಾಗಿ ಅಭ್ಯಾಸ ಮಾಡಿರುವ ಕಿಟಲ್ ಅಲ್ಲಿನ ಆಡು ಭಾಷೆ ಕನ್ನಡವನ್ನು ಕಲಿಯಲು ಆಸಕ್ತಿ ವ್ಯಕ್ತಪಡಿಸುತ್ತಾನೆ. ಗುಣ ಭದ್ರನ ಕನ್ನಡ ಪ್ರೌಢಿಮೆಯನ್ನು ಮೆಚ್ಚಿ ಆತನನ್ನು ಗುರುವಾಗಿ ಸ್ವೀಕರಿಸುತ್ತಾನೆ.

ಆರಂಭದಲ್ಲಿ ಶಿಷ್ಯನನ್ನಾಗಿ ಸ್ವೀಕರಿಸಲು ಹಿಂಜರಿಯುವ ಗುಣಭದ್ರ ಗುರುದಕ್ಷಿಣೆಯಾಗಿ ಆತ ಕಳೆದುಕೊಂಡಿದ್ದ ದ್ವೀಪವನ್ನು ನೀಡಲು ಮುಂದೆ ಬಂದಾಗ ಒಪ್ಪಿಕೊಳ್ಳುತ್ತಾನೆ. ಅವನ ಜೊತೆಯಲ್ಲಿ ಕನ್ನಡದ ಭಾಷೆಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡ ಸಿಸ್ಟರ್ ಆನಾಳು ಜೊತೆಯಲ್ಲಿ ಬರುತ್ತಾಳೆ. ಆಗ ಬಳಕೆಯಲ್ಲಿದ್ದ ಕನ್ನಡದ ಪದಗಳನ್ನು ಸಂಗ್ರಹಿಸಿ ಅವುಗಳ ಮೂಲ ಪದದ ವಿವಿಧ ಅರ್ಥ ಅದರ ಇಂಗ್ಲಿಷ್ ಅರ್ಥಗಳನ್ನು ವಿವರಿಸುವ ಒಂದು ಬೃಹತ್ ಕನ್ನಡ ನಿಘಂಟನ್ನು ರೂಪಿಸಲು ಹೊರಡುತ್ತಾರೆ‌. 

ಇನ್ನು ಮುಂದಕ್ಕೆ ಚಿತ್ರವು ನಿಘಂಟುವಿನ ಸುತ್ತ ಸಂಚರಿಸಬಹುದು ಎಂದು ನಿರೀಕ್ಷಿಸಿದ ಪ್ರೇಕ್ಷಕನಿಗೆ ನಾಟಕೀಯವಾಗಿ ಬೇರೆ ತಿರುವನ್ನು ಪಡೆದುಕೊಳ್ಳುತ್ತದೆ. ಕನ್ನಡ ಭಾಷೆಯಿಂದ ಸರಿದು ಆ ಕಾಲಘಟ್ಟದಲ್ಲಿ ಉಂಟಾದ ಮತ, ಜಾತಿ ಹಾಗು ವರ್ಗ ಸಂಘರ್ಷ,ಜಾತಿ ತಾರತಮ್ಯ, ಶೋಷಣೆ ಮುಂತಾದವುಗಳ ಸುತ್ತ ಸಾಗಿ ಇವುಗಳಲ್ಲೇದರ ಪರಿಣಾಮ ಗುಣಭದ್ರ ನ ಕುಟುಂಬದ ಮೇಲೆ ಆಗುವುದನ್ನು ಚಿತ್ರಿಸುತ್ತದೆ.        

ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ರವಿಚಂದ್ರನ್ ಚಿತ್ರದಲ್ಲಿ ಹೆಸರು ಬದಲಿಸಿ ವಿ ರವಿಚಂದ್ರ ಆಗಿದ್ದು ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ಉತ್ತರ ಕನ್ನಡದ ಭಾಷೆಯನ್ನು ಮಾತನಾಡಲು ಎಡವಿದ್ದಾರೆ. ಚಿತ್ರದ ಸಂಕಮ್ಮಬೆ ತುಂಗ ಪಾತ್ರಧಾರಿಗಳು ಈ ಭಾಷೆಯನ್ನು ಚೆನ್ನಾಗಿ ಬಳಸಿದ್ದಾರೆ. ಅಚ್ಚುತ್‌ ಕುಮಾರ್, ಬಾಲಾಜಿ ಮನೋಹರ್ ಪಾತ್ರಕ್ಕೆ ತಕ್ಕಂತೆ ಯಥೋಚಿತ ಅಭಿನಯ. ಆದರೆ ಇಡೀ ಚಿತ್ರದಲ್ಲಿ ಗಮನಸೆಳೆಯುವುದು ಫರ್ಡಿನೆಂಡ್ ಕಿಟೆಲ್ ಅಭಿನಯಿಸಿರುವ ಜೇಮಿ ವಾಲ್ಟರ್.

ಇಂಗ್ಲೀಷ್ ಅಥವಾ ಜರ್ಮನ್ ಭಾಷೆಗಳನ್ನು ಮಾತನಾಡುವ ವಿದ್ವಾಂಸ ನೊಬ್ಬ ಕನ್ನಡವನ್ನು ಮಾತನಾಡುವ ಶೈಲಿ  ಕೃತಕವಾಗದೆ ತುಂಬಾ ಸಹಜವಾಗಿ ಮೂಡಿಬಂದಿದೆ. ರವಿಚಂದ್ರನ್  ಸಿನಿಮಾಗಳ ಖಾಯಂ ಛಾಯಾಗ್ರಹಕ ಸೀತಾರಾಮ್  ಹಾಗೂ ಕೆಜಿಎಫ್ ಚಿತ್ರದ ಖ್ಯಾತಿ ಸಂಗೀತ ನಿರ್ದೇಶಕ ರವಿ ಬಸ್ರೂರ್ ಚಿತ್ರದ ಘನತೆಯನ್ನು ಹೆಚ್ಚಿಸಿದ್ದಾರೆ .ಹಾಡುಗಳ ಮಾಧುರ್ಯ  ಅಷ್ಟಕಷ್ಟೇ ಆದರೂ ಅವುಗಳ ಸುಂದರ  ಚಿತ್ರೀಕರಣ ಅದನ್ನು ಹಿನ್ನೆಲೆಗೆ ಸರಿಸುತ್ತದೆ.

ಕಿಟಲ್ ಅನ್ನು ಕನ್ನಡ ಭಾಷೆಯ ಬಗ್ಗೆ ಅಷ್ಟೊಂದು ಪ್ರೀತಿ ಬೆಳೆಯಲು ಕಾರಣ ಕೇಳಿದ್ದಕ್ಕೆ ಆತ ನೀಡುವ ಉತ್ತರ ಕಾಮನಬಿಲ್ಲು ಅಥವಾ ಮಳೆಬಿಲ್ಲು ಏಕೆ ಎಲ್ಲರಿಗೂ ಇಷ್ಟವಾಗುತ್ತದೆ ಹಾಗೇ ಈ ಕನ್ನಡ ಎನ್ನುತ್ತಾನೆ. ಈ ಚಿತ್ರವು ಕನ್ನಡ ಅಭಿಮಾನಿಗಳಿಗೆ ಕನ್ನಡದ ಮಾಧುರ್ಯವನ್ನು, ವಿದ್ಯಾರ್ಥಿಗಳಿಗೆ ಕನ್ನಡದ ಸೌಂದರ್ಯವನ್ನು ಕೇವಲ ಕಥೆಯನ್ನು ಅಷ್ಟೇ ಬಯಸುವವರಿಗೆ ಅನೇಕ ತಿರುವುಗಳುಳ್ಳ ಕೌತುಕದ ನಿರೂಪಣೆ ಇದ್ದು ಇದು ಕನ್ನಡಿಗರಷ್ಟೇ ಅಲ್ಲದೆ ಎಲ್ಲರೂ ನೋಡಬೇಕಾದ ಸಿನಿಮಾ.

‍ಲೇಖಕರು Admin

December 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: