ರಾಜಾ ರಾವ್ ಅವರ ‘ಕಾಂತಾಪುರ’ದಲ್ಲಿ ಒಂದು ತಿರುಗಾಟ…

ಪ್ರದೀಪ ಆರ್ ಎನ್

ಕನ್ನಡದ ಹೆಸರಾಂತ ಇಂಗ್ಲಿಷ್ ಕಾದಂಬರಿಕಾರ ರಾಜಾರಾವ್ (Raja Rao) ಹಾಸನದವರು. ಅವರ ಪ್ರಸಿದ್ಧ ಕಾದಂಬರಿ “ಕಾಂತಾಪುರ”(Kanthapura) ಪ್ರಕಟವಾಗಿದ್ದು 1938ರಲ್ಲಿ. ಮತ್ತೊಂದು ಕಾದಂಬರಿ “ದಿ ಸರ್ಪೆಂಟ್ ಅಂಡ್ ದಿ ರೂಪ್” (The Serpent and the Rope)1960ರಲ್ಲಿ ಪ್ರಕಟವಾಯಿತು. ರಾಜಾರಾವ್ ಅವರು ತಂಭೊತ್ತೇಳು ವರ್ಷ ಬದುಕಿದ್ದವರು. (1908-2006) ಭಾರತ ಹಳ್ಳಿಗಳ ದೇಶ. ಈ ದೇಶದ ಭವಿಷ್ಯ ಇಲ್ಲಿನ ಹಳ್ಳಿಗಳಲ್ಲಿ ಅಡಗಿದೆ ಎಂದು ಮಹಾತ್ಮ ಗಾಂಧೀಜಿಯವರು ಕಂಡುಕೊಂಡಿದ್ದರು ಹಾಗೂ ಅದನ್ನು ಮತ್ತೆಮತ್ತೆ ಜನತೆಗೆ ನೆನಪಿಸುತ್ತಿದ್ದರು.

ಆಗ ದೇಶದಲ್ಲಿ ಸ್ವತಂತ್ರ ಚಳುವಳಿ ನಡೆಯುತ್ತಿದ್ದ ಗಾಂಧಿಯುಗದ ಸಂದರ್ಭ. ಭಾರತದೆಲ್ಲೆಡೆ ಬ್ರಿಟಿಷ್ ದುರಾಡಳಿತದ ವಿರುದ್ಧ ಗಾಂಧೀಜಿಯ ಅಸಹಕಾರ ಚಳುವಳಿ, ಕಾನೂನುಭಂಗ ಚಳುವಳಿ, ಅಹಿಂಸೆ, ಸ್ವದೇಶಿ, ಚರಕ ಮುಂತಾದ ಹಲವಾರು ಘಟನೆಗಳು ನಡೆಯುತ್ತಿದ್ದ ಕಾಲವದು. ದ.ಆಫ್ರಿಕಾದಿಂದ ಸ್ವದೇಶಕ್ಕೆ ಬಂದ ಬಾಪು ಅವರ ಚಿಂತನೆ ಗ್ರಾಮೀಣ ಭಾಗವನ್ನು ಬಹುಬೇಗ ಆಕ್ರಮಿಸಿತು. ಹಳ್ಳಿಯ ವಿದ್ಯಾವಂತ ಯುವಕರು, ಯುವತಿಯರು, ರೈತರು, ಗೃಹಿಣಿಯರು ಗಾಂಧಿ ಕರೆಕೊಟ್ಟ ಸ್ವಾತಂತ್ರ್ಯ ಚಳುವಳಿಗೆ ತನು-ಮನ-ಧನವನ್ನು ಅರ್ಪಿಸಲು ಸಿದ್ಧರಾಗಿ ನಿಂತಿದ್ದರು.

ಆ ಸಂದರ್ಭದಲ್ಲಿ ಬಂದ  ಸಾಹಿತ್ಯದ ಬಹಳಷ್ಟು ಮುಖ್ಯ ಆಶಯಗಳು ಸ್ವಾತಂತ್ರ್ಯ ಚಳುವಳಿ, ಗಾಂಧಿ ಚಿಂತನೆ, ಗ್ರಾಮೀಣ ಪ್ರದೇಶದಲ್ಲಿ ಜಾತಿ ಹಾಗೂ ಊಳಿಗಮಾನ್ಯ ಪದ್ಧತಿಯ  ಚಿತ್ರಣವನ್ನು ಒಳಗೊಂಡಿದ್ದವು. ಅದೇ ರೀತಿ ರಾಜಾ ರಾವ್ ಅವರ ಕಾಂತಾಪುರ (1938) ಕಾದಂಬರಿಯಲ್ಲಿ “ಕಾಂತಾಪುರ” ಎಂಬ ಹಳ್ಳಿಯು ಮುಖ್ಯ ಕೇಂದ್ರವಾದರೆ, ಕನ್ನಡದ ಮತ್ತೊಬ್ಬ ಹೆಸರಾಂತ ಕಾದಂಬರಿಕಾರ, ಕಥೆಗಾರ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್(Malgudi Days)(1943)ನ “ಮಾಲ್ಗುಡಿ” ಗ್ರಾಮ ಹಾಗೂ ಹೆಸರಾಂತ ಸಮಾಜಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ ಅವರ ದಿ ರಿಮೆಂಬರ್ಡ್ ವಿಲೇಜ್ (The Remembered Village)(1978)ನಲ್ಲಿ “ರಾಮಪುರ” ಎಂಬ ಹಳ್ಳಿ ಮುಖ್ಯ ಕೇಂದ್ರಬಿಂದು ಆಗಿವೆ. 

ಮಹಾತ್ಮ ಗಾಂಧಿಯವರ ಪ್ರಭಾವಕ್ಕೆ ಒಳಗಾದ “ಮೂರ್ತಿ” ಎಂಬ ಯುವಕನನ್ನು ಕೇಂದ್ರವಾಗಿರಿಸಿಕೊಂಡು  ರಾಜಾ ರಾವ್ ಅವರ “ಕಾಂತಾಪುರ” ಕಾದಂಬರಿ ರಚನೆಯಾಗಿದೆ. ಮೂರ್ತಿ ಕಾಂತಾಪುರ ಗ್ರಾಮದ ವಿದ್ಯಾವಂತ ಯುವಕ ಹಾಗೂ ಗಾಂಧಿವಾದಿ. ಮೇಲ್ಜಾತಿಯಲ್ಲಿ ಜನಿಸಿದ ಈತ ಗಾಂಧೀಜಿಯವರ ಪ್ರಭಾವದಿಂದಾಗಿ ತನ್ನ ಹಳ್ಳಿಯಲ್ಲಿ ಅಸ್ಪೃಶ್ಯತೆಯನ್ನು ವಿರೋಧಿಸುತ್ತಿದ್ದನು. ಇದಕ್ಕಾಗಿ ಊರಿನ ಮೇಲ್ಜಾತಿಯ ಬ್ರಾಹ್ಮಣ ಹಾಗೂ ಗೌಡರ ಕೆಂಗಣ್ಣಿಗೆ ಗುರಿಯಾಗಿದ್ದನು. ಅದರ ಜೊತೆಗೆ ತನ್ನ ತಂದೆ-ತಾಯಿಯಿಂದಲೂ ಜಾತಿ ಭ್ರಷ್ಟನೆಂದು ಕರೆಸಿಕೊಂಡು ಮನೆ ತೊರೆದವನು. ಸ್ವಾತಂತ್ರ್ಯ ಚಳುವಳಿ, ಅಸ್ಪೃಶ್ಯತೆಯ ನಿವಾರಣೆ ಇವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹಾಗೂ ಗಾಂಧಿವಾದದ ಮುಖ್ಯ ಧ್ಯೇಯ ಎಂದು ಹಳ್ಳಿಯ ಜನರನ್ನು ಒಗ್ಗೂಡಿಸುತ್ತಿದ್ದನು. ಚರಕದಲ್ಲಿ ನೂಲು ನೇಯುವುದು, ಸ್ವದೇಶಿ ಉಡುಪನ್ನು- ಗಾಂಧಿ ಟೋಪಿಯನ್ನು ಧರಿಸುವುದು, ಉಪ್ಪಿನ ಸತ್ಯಾಗ್ರಹ, ಕರಾ ನಿರಾಕರಣೆ, ಸತ್ಯ, ಅಹಿಂಸೆ, ಲಿಂಗ ಹಾಗೂ ಜಾತಿ ಸಮಾನತೆ ಹೀಗೆ ಹಲವಾರು ಸಾಮಾಜಿಕ ಕಾಳಜಿಯ ವಿಚಾರಗಳನ್ನು ಮೂರ್ತಿ ಕಕಾಂತಾಪುರದ ಜನತೆಗೆ ವಿವರಿಸುತ್ತಿದ್ದನು.

ಗ್ರಾಮದ ಜನತೆಗೆ ಮೂರ್ತಿ ಒಬ್ಬ ಪುರಾಣ ಪುರುಷನಂತೆ ಹಾಗೂ ಅವರ ಪಾಲಿಗೆ ಆತನೇ ಮಹಾತ್ಮ ಬಾಪುವಿನಂತೆ‌ ಕಾಣುತ್ತಿದ್ದನು. ಗ್ರಾಮದ ರಂಗಮ್ಮನ ಮನೆಗೆ ಪ್ರತಿದಿನ ಪೇಟೆಯಿಂದ ದಿನಪತ್ರಿಕೆಗಳು ಬರುತ್ತಿದ್ದವು. ಇದರಿಂದ ಜನರು ರಾಜಕೀಯ ವಿದ್ಯಮಾನ ಹಾಗೂ ಸ್ವಾತಂತ್ರ್ಯ ಚಳಿವಳಿಯ ವಾಸ್ತವತೆಯನ್ನು ಅರಿಯುತ್ತಿದ್ದರು. ಹರಿಜನ ನಾಯಕ ರಾಜಣ್ಣನನ್ನು ಸಹ ಮೂರ್ತಿ ಕಾಂಗ್ರೆಸ್ ಗೆ ಸೇರಿಸಿದನು. ಗ್ರಾಮದ ಮೇಲ್ಜಾತಿಯ “ಭಟ್ಟ”ನು ಸದಾ ಈ ಗಾಂಧಿವಾದಿಗಳಿಗೆ ಬಯ್ಯುತ್ತಲಿದ್ದನು. ಇವರು ಜಾತಿಭ್ರಷ್ಟರು, ನಮ್ಮ ಸಂಸ್ಕೃತಿಗೆ ಕಳಂಕ ತರುವವರು. ಇವರು ಎಲ್ಲಾ ಜಾತಿಯವರೊಂದಿಗೆ ಬೆರೆತು ನಮ್ಮ ಕುಲವನ್ನು ಕೆಡಿಸುತ್ತಿದ್ದಾರೆ ಎನ್ನುವನು. ಮಹಿಳೆಯರು ಸಹ ಪುರುಷರೊಂದಿಗೆ ಸಮಾನವಾಗಿ ಕಾಲೇಜಿನಲ್ಲಿ ಕಲಿಯಲು ಹೋಗುತ್ತಿರುವುದು ತಮ್ಮ ಸಂಪ್ರದಾಯಕ್ಕೆ ವಿರೋಧ ಎಂದು ಭಟ್ಟರು ಗಾಂಧಿಯನ್ನು ಹಾಗೂ ಅವರ ಅನುಯಾಯಿಗಳನ್ನು ತಿರಸ್ಕಾರ ಭಾವನೆಯಿಂದ ನೋಡುವನು.

ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆಯಲು ಎಲ್ಲಾ ತ್ಯಾಗ-ಬಲಿದಾನಗಳಿಗೂ ಸಿದ್ದರಿರಬೇಕೆಂದು ಮೂರ್ತಿ ಕಾಂತಾಪುರದ ಜನತೆಯನ್ನು ಸಜ್ಜುಗೊಳಿಸುತ್ತಿದ್ದನು. ಮಹಿಳೆಯರು, ಪುರುಷರೆಲ್ಲರು ಜಾತಿ-ಲಿಂಗಭೇದ ಮರೆತು ಚಳುವಳಿಯಲ್ಲಿ ಭಾಗವಹಿಸಬೇಕು. ಅಲ್ಲಿ ಯಾವುದೆ ಹಿಂಸೆಗೆ ಅವಕಾಶವಿಲ್ಲ! ಬಾಪು ತಿಳಿಸಿದಂತೆ ನಾವು “ನಮ್ಮ ಶತ್ರುಗಳನ್ನು ಪ್ರೀತಿಸೋಣ”. ಮದ್ಯದಂಗಡಿಗಳಿಗೆ ನುಗ್ಗಿ ಅದನ್ನು ಮುಚ್ಚಿಸಬೇಕು ಜನರನ್ನು ಮದ್ಯವ್ಯಸನದಿಂದ ದೂರವಿರವಂತೆ ಮನವೊಲಿಸಬೇಕು. ವೇಶ್ಯಾಗೃಹಗಳಿಗೆ ನುಗ್ಗಿ ಅಲ್ಲಿನ ಹೆಣ್ಣುಮಕ್ಕಳನ್ನು ರಕ್ಷಿಸಬೇಕು ಹೀಗೆ ಹಲವಾರು ಚಳುವಳಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವರು.

1935ರಲ್ಲಿ ಪ್ರಕಟವಾದ ಮುಲ್ಕ್ ರಾಜ್ ಆನಂದ್ ಅವರ “ಅನ್ಟಚಬಲ್” (Untouchable)(ಅಸ್ಪೃಶ್ಯ) ಕಾದಂಬರಿ ಕೂಡ “ಬಾಕ” ಎಂಬ ಅಸ್ಪೃಶ್ಯ ಯುವಕನ ಚಿತ್ರಣವನ್ನು ನೀಡುತ್ತದೆ. ತನ್ನನ್ನು ಒಬ್ಬ ಹಿಂದೂವಾದಿ ಎಂದು ಕರೆದುಕೊಂಡ ಗಾಂಧಿಯ ಈ ಜಾತಿವಿನಾಶ ಚಿಂತನೆಯನ್ನು ಅರ್ಥಮಾಡಿಕೊಳ್ಳಲಾಗದೆ ಗೊಂದಲದ ಸ್ಥಿತಿಯಲ್ಲಿ ಇದ್ದ ಬಾಕನನ್ನು ಇಲ್ಲಿ ಕಾಣಬಹುದು. ಗಾಂಧೀಜಿಯವರು “ಯಂಗ್ ಇಂಡಿಯಾ”ಕ್ಕೆ ಬರೆದಿದ್ದ  ಜಲಗಾರ ಸಮುದಾಯದ ಒಬ್ಬ ಯುವಕನ ಕಥೆಯೇ ಆನಂದರ ಈ‌ ಕಾದಂಬರಿಗೆ ಮುಖ್ಯ ಪ್ರೇರಣೆ ಎಂದು ಸ್ವತಃ ಕಾದಂಬರಿಕಾರರೇ ಹೇಳಿಕೊಂಡಿದ್ದಾರೆ. ಅನ್ಟಚಬಲ್‌ ಕಾದಂಬರಿಯನ್ನು ವಿದೇಶದಲ್ಲಿ ಕುಳಿತು ಬರೆದ ಮುಲ್ಕ್ ರಾಜ್ ಅವರು ಶಬರಮತಿ ಆಶ್ರಮಕ್ಕೆ ಬಂದು ತಿಂಗಳುಗಟ್ಟಲೆ ನೆಲೆಸಿ ಅಲ್ಲಿಯೇ ಇಡೀ ಕಾದಂಬರಿಯನ್ನು ಗಾಂಧೀಜಿಗೆ ಓದಿ ಹೇಳಿದ್ದರು. ಇದು ಪ್ರಕಟವಾದ ಮರುವರ್ಷ ಅಂದರೆ 1936ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹತ್ವ ಕೃತಿ ” ಜಾತಿ ವಿನಾಶ”(Annihilation of cast) ಪ್ರಕಟವಾಗಿದ್ದನ್ನು ನೋಡಬಹುದಾಗಿದೆ.

ಕಾಂತಾಪುರದ ತ್ಯಾಗಜೀವಿ ಮೂರ್ತಿ ಗಾಂಧಿಮಾರ್ಗದಲ್ಲಿ ನಡೆಯುತ್ತಲೇ ತನ್ನ ಜನರನ್ನು ಅದರ ಆಕರ್ಷಣೆಗೆ ಒಳಪಡಿಸಿದನು. ಮುಂದೆ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸುತ್ತಾನೆ. ತನ್ನ ಜೊತೆಗೆ‌ ಹಲವಾರು ಜನ ಅಹಿಂಸಾವಾದಿ ಸತ್ಯಾಗ್ರಹಿಗಳು‌ ಕಾರಾಗೃಹ ಶಿಕ್ಷೆಗೆ ಒಳಗಾಗುತ್ತಾರೆ. ಇತ್ತಾ ಕಾಂತಾಪುರ ಗ್ರಾಮದ ಮೂರ್ತಿಯ ಅನುಯಾಗಿಗಳು ಆತನ ಬರುವಿಗಾಗಿ‌ ಕಾಯುತ್ತಿರುತ್ತಾರೆ.

ಆ ಸಂದರ್ಭದಲ್ಲಿ ಮೂರ್ತಿಯಿಂದ ಒಂದು ಪತ್ರ ಕಾಂತಾಪುರವನ್ನು ತಲುಪುತ್ತದೆ. ಅದು ಈ ರೀತಿ ಇದೆ; “ಎಲ್ಲಿಯವರೆಗೆ ಬಲವಾದ ಭದ್ರವಾದ ಕಬ್ಬಿಣದ ಬಾಗಿಲುಗಳು ಮತ್ತು ಮುಳ್ಳು ತಂತಿಯ ಬೇಲಿಗಳು ಸ್ಕೇಫಿಂಗ್ ಟನ್ ಕಾಫಿ ತೋಟದ ಸುತ್ತ ಇರುತ್ತವೆಯೋ, ಎಲ್ಲಿಯವರೆಗೆ ನಗರದ ಅದ್ಧೂರಿ ಕಾರುಗಳು ಬೆಬ್ಬೂರಿ ದಿಬ್ಬವನ್ನು ಬೀಗಿ ಬೀರುತ್ತಾ ಹೆಮ್ಮೆಯಿಂದ ಹತ್ತುತ್ತವೆಯೋ, ಎಲ್ಲಿಯವರೆಗೆ ಗ್ಯಾಸ್ ದೀಪಗಳು ಮತ್ತು ಕೂಲಿಗಳನ್ನು ಹೊತ್ತು ತರುವ ವಾಹನಗಳಿರುತ್ತವೆಯೋ ಅಲ್ಲಿಯವರೆಗೆ ನಮ್ಮ ದೇಶದಲ್ಲಿ ಅಸ್ಪೃಶ್ಯತೆ, ಹೊಲೆಯರು ಮತ್ತು ಕಡುಬಡತನ ಇದ್ದೇ ಇರುತ್ತದೆ. ಎಲ್ಲವೂ ಬದಲಾವಣೆಯಾಗಬೇಕು. ಇಲ್ಲಿಯ ಯುವಜನಾಂಗ ಈ‌ ಬದಲಾವಣೆಯನ್ನು ತಂದೇತರುತ್ತೆವೆಂದು ಪಣತೊಟ್ಟಿದ್ದಾರೆ. ಜವಹರಲಾಲರು ಆ ಬದಲಾವಣೆಯ ಅಧ್ವರ್ಯರಾಗುತ್ತಾರೆ. ನಿನಗೆ ಗೊತ್ತಿದೆ ಜವಹರಲಾಲರು ಮಹಾತ್ಮರ ಭರತನಿದ್ದಂತೆ.”ಈ ಮೇಲಿನ ಮಾತು ಕೇವಲ ಮೂರ್ತಿಯ ಆಶಯವಾಗಿರದೆ. ಅದು ಅಂದಿನ‌ ರಾಷ್ಟ್ರೀಯ ಕಾಂಗ್ರೆಸ್ಸಿನ ಹಾಗೂ ಗಾಂಧೀಜಿಯ ಕನಸಿನ ಭಾರತದ ಆಶಯವಾಗಿದೆ ಎನ್ನಬಹುದು.

‍ಲೇಖಕರು Admin

December 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: