ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 3

ಮೂಲ : ನಿಕೊಲಾಯ್ ಗೊಗೊಲ್
ಅನು : ಜಿ. ವಿ. ಕಾರ್ಲೊ

ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್ ದಸ್ತವೆಸ್ಕಿ ಪ್ರಮುಖ. ನಾವೆಲ್ಲಾ ಗೊಗೊಲಾನ The Overcoat ನಿಂದ ಹೊರ ಬಂದವರೆಂದು ಅವನು ಗೊಗೊಲನನ್ನು ಸ್ಮರಿಸುತ್ತಾನೆ.

ಗೊಗೊಲ್, ಅವನ ಸಮಕಾಲಿನ ರಶ್ಯನ್ ಸಮಾಜವನ್ನು ಲೇವಡಿ ಮಾಡುವ ನಾಟಕ The Inspector General, ಮಾನವ ಸರಕುಗಳಲ್ಲೊಂದಾದ ಗುಲಾಮರ ಲೇವಾದೇವಿಯ The Dead Souls ಕಾದಂಬರಿ ಮತ್ತು ಪ್ರಭುತ್ವವನ್ನು ಅಣಕಿಸುವ, ಬಡ ಗುಮಾಸ್ತನ ಕತೆ The Overcoat ಮತ್ತು ಪ್ರಸ್ತುತ ಅಧಿಕಾರಿಶಾಹಿಯ ಒಣ ಪ್ರತಿಷ್ಠೆ ಮತ್ತು ಮಹತ್ವಾಕಾಂಕ್ಷೆಯ The Nose ಓದುವಾಗ, ‘ಮೂಗು’ ಇಲ್ಲದಿರುವುದು ಎಷ್ಟೊಂದು ಅನಾಹುತಾಕಾರಿಯಾಗಬಲ್ಲದೆಂದು ನನಗೆ ‘ರಾಮಾಯಣ’ದ ‘ಶೂರ್ಪನಖಿ’ಯ ಪಾತ್ರ ಕಣ್ಣ ಮುಂದೆ ಬಂದಿತು.

3

ಅದೊಂದು ಹಿತವಾದ ಬಿಸಿಲಿನ ದಿನವಾಗಿತ್ತು. ನೆವೆಸ್ಕಿ ರಸ್ತೆಯುದ್ದಕ್ಕೂ ಜನ ತುಂಬಿ ತುಳುಕಾಡುತ್ತಿದ್ದರು. ಕೊವಾಲ್ಯೊವ್ ಒಂದು ಗಾಡಿಯನ್ನು ಕೂಗಿ ಕರೆದು, “ನೆಟ್ಟಗೆ, ಆದಷ್ಟು ಬೇಗ ಪೊಲೀಸ್ ಕಮೀಷನರ ಆಫೀಸಿಗೆ ಹೊಡಿಯಪ್ಪ,” ಎಂದ.

“ಪೊಲೀಸ್ ಕಮೀಷನರ್ ಇದಾರೇನಯ್ಯ,” ಪೊಲೀಸ್‌ ಕಚೇರಿಯೊಳಗೆ ಕಾಲಿರಿಸುತ್ತಿದ್ದಂತೆಯೇ ಅವನು ಜವಾನನನ್ನು ಕೇಳಿದ.

“ಇಲ್ಲ ಸಾರ್, ಈಗಷ್ಟೇ ಹೊರಗೆ ಹೋದರು,” ಜವಾನ ಉತ್ತರಿಸಿದ.

“ಇವತ್ತ್ಯಾಕೋ ನನ್ನ ಗ್ರಹಚಾರನೇ ಸರಿ ಇಲ್ಲ,” ಎಂದು ಬೈದುಕೊಳ್ಳುತ್ತಾ ಕೊವಾಲ್ಯೊವ್ ಮತ್ತೆ ಗಾಡಿ ಏರಿ, “ನಡಿ, ಹೋಗೋಣ,” ಎಂದ.

“ಎಲ್ಲಿಗೆ ಸಾರ್?” ಗಾಡಿಯವನು ಕೇಳಿದ.

“ನೆಟ್ಟಗೆ ಓಡಿಸು…”

“ಇದೇ ರಸ್ತೆಯ ಕೊನೆ ಸರ್. ಬಲಕ್ಕೋ ಇಲ್ಲ ಎಡಕ್ಕೋ ಹೋಗಬೇಕಷ್ಟೆ,” ಗಾಡಿಯವನು ಹೇಳಿದ.

ಅವನು ಯೋಚಿಸಿ ಒಂದು ನಿರ್ಧಾರಕ್ಕೆ ಬಂದ. ಮೊದಲು ನಗರ ಭದ್ರತಾ ಕಚೇರಿಗೆ ಹೋಗುವುದೇ ಒಳ್ಳೆಯದೆಂದು ಅವನು ತೀರ್ಮಾನಿಸಿದ. ಭದ್ರತಾ ಕಚೇರಿಗೆ ಮತ್ತು ಪೊಲೀಸ್ ಇಲಾಖೆಗೆ ನೇರ ಸಂಪರ್ಕವಿದೆಯೆಂಬ ಕಾರಣಕ್ಕಾಗಿಯಲ್ಲದಿದ್ದರೂ, ಅಲ್ಲಿ ಉಳಿದ ಸರ್ಕಾರಿ ಕಚೇರಿಗಳಿಗಿಂತ ಬೇಗನೇ ಕೆಲಸಗಳು ಆಗುತ್ತವೆ ಎಂಬ ಕಾರಣಕ್ಕಾಗಿ. ಮೂಗು ಕೆಲಸ ಮಾಡುತ್ತಿರುವ ಇಲಾಖೆಗೆ ಹೋಗಿ ದೂರು ಕೊಡುವುದು ನಿಷ್ಪ್ರಯೋಜಕವೆಂದು ಅವನು ಅರಿತಿದ್ದ. ಮೂಗು, ತನ್ನ ಪ್ರಭಾವ ಬೀರಿ ಅದರ ಮೇಲಾಧಿಕಾರಿಯನ್ನು ಬುಟ್ಟಿಗೆ ಹಾಕಿಕೊಳ್ಳುವುದರಲ್ಲಿ ಯಾವುದೇ ಸಂಶಯಗಳಿರಲಿಲ್ಲ.

ಗಾಡಿ ಓಡಿಸುವವನಿಗೆ ಭದ್ರತಾ ಕಚೇರಿಗೆ ಹೋಗಲು ಹೇಳುವ ಮೊದಲೇ ಅವನಿಗೆ ಮತ್ತೊಂದು ಸಮಸ್ಯೆ ಎದುರಾಯಿತು. ಈಗಾಗಲೇ ಬಹಳಷ್ಟು ಸಮಯ ವ್ಯರ್ಥವಾಗಿ ಕಳೆದು ಹೋಗಿತ್ತು. ತನ್ನ ವೇಷಾಧಾರಿ ಲಫಂಗ ಮೂಗು ಇದೇ ಸುಸಮಯವೆಂದು ನಗರದಿಂದ ಕಾಲ್ಕಿತ್ತಿದ್ದರೆ…? ಅದನ್ನು ಹುಡುಕಲು ತಾನು ಪಟ್ಟ ಶ್ರಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿತ್ತು. ಆದ್ದರಿಂದ ಅವನು ಅಲ್ಲಿಂದ ನೇರವಾಗಿ ಪತ್ರಿಕಾ ಕಚೇರಿಗೆ ಹೋಗಿ ತನ್ನ ಕಳೆದು ಹೋದ ಮೂಗಿನ ಬಗ್ಗೆ ವಿವರವಾದ ಮಾಹಿತಿ ಮತ್ತು ಅದನ್ನು ಗುರುತು ಹಚ್ಚಿದವರು ತನ್ನನ್ನು ಸಂಪರ್ಕಿಸಬೇಕೆಂಬ ಕೋರಿಕೆಯ ಜಾಹೀರಾತು ಕೊಡುವುದೆಂದು ತೀರ್ಮಾನಿಸಿ, ಗಾಡಿಯನ್ನು ಪತ್ರಿಕಾ ಕಚೇರಿಗೆ ಹೊಡೆಯಲು ಹೇಳಿ ದಾರಿಯುದ್ದಕ್ಕೂ ಗಾಡಿ ಓಡಿಸುವವನ ಬೆನ್ನಿಗೆ ತಿವಿಯುತ್ತಾ, “ಬೇಗ, ಬೇಗ…” ಎಂದು ಅವಸರಿಸತೊಡಗಿದ.

ಪತ್ರಿಕಾ ಕಚೇರಿ ತಲುಪುತ್ತಿದ್ದಂತೆಯೇ ಕೊವಾಲ್ಯೊವ್ ಬಿರುಗಾಳಿಯಂತೆ ಒಳಗೆ ನುಗ್ಗಿದ. ಒಳಗೆ, ಕನ್ನಡಕ ಧರಿಸಿದ್ದ ವಯಸ್ಸಾದ ಗುಮಾಸ್ತನೊಬ್ಬ ಲೇಖನಿಯನ್ನು ಹಲ್ಲುಗಳೊಳಗೆ ಸಿಗಿಸಿಕೊಂಡು ತಾಮ್ರದ ನಾಣ್ಯಗಳನ್ನುಎಣಿಸುವುದರಲ್ಲಿ ಮಗ್ನನಾಗಿದ್ದ.

“ಇಲ್ಲಿ ಜಾಹೀರಾತು ವಿಭಾಗ ನೋಡಿಕೊಳ್ಳುವವರು ಯಾರಪ್ಪಾ?” ಕೊವಾಲ್ಯೊವ್ ಅವನನ್ನು ಕೇಳಿದ.

ಗುಮಾಸ್ತ ಕತ್ತೆತ್ತಿ ಅವನನ್ನೊಮ್ಮೆ ನೋಡಿ ಮತ್ತೆ ತನ್ನ ಹಿಂದಿನ ಕೆಲಸದಲ್ಲೇ ಮಗ್ನನಾದ.

“ನನಗೆ ಒಂದು ಜಾಹೀರಾತು ಕೊಡಬೇಕಿತ್ತು.”

“ಒಂದ್ನಿಮಿಷ, ಒಂದ್ನಿಮಿಷ…” ಎನ್ನುತ್ತಾ ಗುಮಾಸ್ತ ತನ್ನ ಪುಸ್ತಕದಲ್ಲಿ ಅಂಕಿಗಳನ್ನು ಗೀಚುತ್ತಾ ತನ್ನೆದುರಿನ ಮಣಿಚೌಕಟ್ಟಿನಲ್ಲಿ ಎರಡು ಮಣಿಗಳನ್ನು ಪಕ್ಕಕ್ಕೆ ಸರಿಸಿದ.

ಸಮವಸ್ತ್ರಧರಿಸಿದ್ದ ಸೇವಕನೊಬ್ಬ, ಯಾರೋ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುವವನಿರಬೇಕೆಂದು ಅವನ ಗತ್ತಿನಲ್ಲೇ ಗೊತ್ತಾಗುತ್ತಿತ್ತು, ಗುಮಾಸ್ತನೊಡನೆ ಜಾಹೀರಾತು ದರ ಕಳೆದು ಹೋದ ನಾಯಿ ಮರಿಯ ಮೌಲ್ಯಕ್ಕಿಂತಲೂ ಹೆಚ್ಚಾಯಿತೆಂದು ಕೊಸರಾಡುತ್ತಿದ್ದ. ಆದರೆ, ಗುಮಾಸ್ತ ಅವನ ಎದುರಿಗಿದ್ದ ಜಾಹೀರಾತು ಪ್ರತಿಯೊಳಗಿನ ಶಬ್ದಗಳನ್ನು ಎಣಿಸುವುದರಲ್ಲೇ ಮಗ್ನನಾಗಿದ್ದ. 

ಆ ಸಣ್ಣ ಕೊಠಡಿ ಜನರಿಂದ ತುಂಬಿ ಹೋಗಿತ್ತು. ವಯಸ್ಸಾದ ಹೆಂಗಸರು, ವ್ಯಾಪಾರಿಗಳು, ಕೊಳ್ಳುವವರು ಇತ್ಯಾದಿ… ಎಲ್ಲರಿಗೂ ಒಂದಲ್ಲ ಒಂದು ಜಾಹೀರಾತು ಕೊಡುವ ತವಕವಿತ್ತು. ಅಷ್ಟೂ ಜನರ ಉಸಿರಾಟದಿಂದ ಆ ಕೋಣೆಯಲ್ಲಿ ಬಿಸಿಯೇರಿತ್ತು. ಬೆವರಿನಿತ್ಯಾದಿ ವಾಸನೆಯಿಂದ ಕೆಲವರು ಕಷ್ಟಪಡುತ್ತಿದ್ದರೆ ಸರಕಾರಿ ಆಸ್ತಿ ಮೌಲ್ಯ ಮಾಪಕ ಕೊವಾಲ್ಯೊವ್‌ನಿಗೆ ಅದಾವುದರ ಪರಿವೆಯೇ ಇರಲಿಲ್ಲ. ಏಕೆಂದರೆ ಈ ಬಾಧೆ ಕೊಡುವ ಮೂಗೇ, ಆ ಜಾಗವನ್ನು ಕರವಸ್ತ್ರದಿಂದ ಮುಚ್ಚಿಕೊಂಡಿದ್ದರೂ, ಅವನಿಗಿರಲಿಲ್ಲ!

“ಸರ್, ನನಗೆ ಇನ್ನು ಕಾಯಲು ಆಗುತ್ತಿಲ್ಲ. ದಯವಿಟ್ಟು ನನ್ನ ಜಾಹೀರಾತಿನ ವಿವರಗಳನ್ನು ತೆಗೆದುಕೊಳ್ಳಿ,”ಎಂದು ಗೋಗರೆದ.

“ಬೇಸರ ಮಾಡಿಕೊಳ್ಳಬೇಡಿ, ಒಂದೇ ನಿಮಿಷ… ನಿಮ್ಮದು ಎರಡು ರೂಬಲ್ ನಲ್ವತ್ತಮೂರು ಕೊಪೆಕುಗಳು, ನಿಮ್ಮದು… ಇನ್ನೇನು ಆಗೇ ಹೋಯ್ತು… ಒಂದು ರೂಬಲ್, ಅರವತ್ತನಾಲ್ಕು ಕೊಪೆಕ್‌ಗಳು ಎಂದು ಬರೆದ ಸಣ್ಣ ಕಾಗದದ ತುಂಡುಗಳನ್ನು ಮುನ್ನುಗ್ಗುತ್ತಿದ್ದ ಜಾಹೀರಾತುದಾರರ ಕೈಗಳಿಗೆ ಕೊಡುತ್ತಿದ್ದ. ಅಂತೂ, ಕೊನೆಗೊಮ್ಮೆ ಅವನು ಕೊವಾಲ್ಯೊವ್‌ನ ಕಡೆಗೆ ತಿರುಗಿದ.

“ನಿಮ್ಮದೇನು ಸಾರ್?”

“ನನ್ನ ವಿರುದ್ಧ ಎಂಥದ್ದೊ ಮಸಲತ್ತು ನಡೆಯುತ್ತಿದೆ, ಉಡಾಳ ಹಾಸ್ಯನೋ ಇಲ್ಲ ವಂಚನೆಯೋ ಗೊತ್ತಾಗುತ್ತಿಲ್ಲ. ಇದನ್ನು ಪತ್ತೆ ಮಾಡಿಕೊಟ್ಟವರಿಗೆ ಸೂಕ್ತ…”

“ನಿಮ್ಮ ಹೆಸರು…?”

“ಹೆಸರು ಕಟ್ಕೊಂಡು ನಿಮಗೇನಾಗಬೇಕು? ನಾನು ಕೊಡುವುದಿಲ್ಲ. ನನ್ನ ಪರಿಚಯಸ್ತರು ತುಂಬಾ ಜನರಿದ್ದಾರೆ. ಉದಾಹರಣೆಗೆ ಶ್ರೀಮತಿ ಚೆಕ್ತಾರೆವ್, ಈಕೆಯ ಪತಿ ರಾಜ್ಯ ಕೌನ್ಸಿಲರ್. ಶ್ರೀಮತಿ ಪಲಾಗೆಯಾ ಪೊಡ್‌ಟೊಚಿನ್… ಸ್ಟಾಫ್ ಆಫೀಸರನ ಮಡದಿ.. ಈ ಜಾಹೀರಾತು ನೋಡುತ್ತಿದ್ದಂತೆ ಅವರಿಗೆಲ್ಲಾ ಅದು ಯಾರದೆಂದು ತಕ್ಷಣ ಗೊತ್ತಾಗುತ್ತದೆ! ಬೇಕೇಬೇಕು ಎಂದರೆ, ಮೌಲ್ಯ ಮಾಪಕ ಎಂದು ಹಾಕಿ. ‘ಮೇಜರ್’ ಅಂತ ಹಾಕಿದರೆ ಮತ್ತಷ್ಟು ಸ್ಫುಟವಾಗುತ್ತದೆ.”

“ಕಾಣೆಯಾದವನು ನಿಮ್ಮ ಸೇವಕನೇ ಸಾರ್?”

“ಮನೆ ಕೆಲಸದವನು ಕಾಣೆಯಾದರೆ ಯಾರಪ್ಪ ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ? ಕಳೆದು ಹೋಗಿರುವುದು ನನ್ನ ಸ್ವಂತ ಮೂಗು!”

“ಇದೆಂತಾ ವಿಚಿತ್ರ ಹೆಸರು? ತುಂಬಾ ಬೆಲೆ ಬಾಳುವಂತಾದ್ದು ಕದ್ಕೊಂಡು ಹೋಗಿರಬೇಕು ಅನಿಸುತ್ತೆ ಈ ಮೂಗು?”

“ನನ್ನ ‘ಮೂಗು’ ಕಣಯ್ಯ. ನನ್ನ ತುಟಿಗಳ ಮೇಲಣ ಮೂಗು. ಯಾರೋ ನನ್ನ ಮೇಲೆ ಜೋಕ್ ಮಾಡಿದ್ದಾರೆ.”

“ಅದೇಗೆ ಕಾಣೆಯಾಯ್ತು…? ನನಗರ್ಥವಾಗುತ್ತಿಲ್ಲ!”

“ಅದು ಹೇಗೆ ಅಂತ ಹೇಳಲಾರೆ. ಒಂದಂತೂ ನಿಜ. ಈ ಹೊತ್ತಿನಲ್ಲಿ ನನ್ನ ಮೂಗು ತಾನೊಬ್ಬ ರಾಜ್ಯ ಮಟ್ಟದ ಕೌನ್ಸಿಲರ್ ಎಂದು ಪೇಟೆ ತುಂಬಾ ತಿರುಗಾಡುತ್ತಿದೆ. ಅದಕ್ಕೇ ನಾನು ಜಾಹೀರಾತು ಕೊಡಲು ಬಂದಿರುವುದು. ನೀವೇ ಯೋಚಿಸಿ, ನಿಮ್ಮ ದೇಹದ ಇಂಥ ಒಂದು ಪ್ರಮುಖ ಅಂಗವೇ ಇಲ್ಲದಿದ್ದರೆ ಎಂಥಾ ಪಜೀತಿಯಾಗಬಹುದು?! ಒಂದು ಕಾಲ್ಬೆರಳು ಏನಾದರು ಈ ರೀತಿ ಕಾಣೆಯಾಗಿದ್ದಿದ್ದರೆ ನಾನು ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಶೂ ಹಾಕಿದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ನಾನು ಪ್ರತಿ ಗುರುವಾರ ಶ್ರೀಮತಿ ಚೆಕ್ತಾರೆವ್ಳ (ಈಕೆಯ ಗಂಡ ರಾಜ್ಯದ ಕೌನ್ಸಿಲರ್) ಹಾಗೂ ಶ್ರೀಮತಿ ಪೊಡ್‌ಟೊಚಿನ್‌ಳ (ಆಕೆಯ ಗಂಡ ಸ್ಟಾಫ್ ಆಫೀಸರ್. ಆಕೆಗೊಬ್ಬಳು ತುಂಬಾ ಸುಂದರಿಯಾದ ಮಗಳೂ ಇದ್ದಾಳೆ) ಮನೆಗೆ ಭೇಟಿ ಕೊಡುತ್ತಿರುತ್ತೇನೆ. ಅವರೆಲ್ಲಾ ನನ್ನ ಆಪ್ತ ಸ್ನೇಹಿತರು. ನೀನೆ ಯೋಚಿಸಿ ನೋಡು? ಮೂಗೇ ಇಲ್ಲದೆ ನಾನು ಅವರನ್ನು ಹೇಗೆ ಕಾಣಲಿ?

ಗುಮಾಸ್ತ ಕೆಳದುಟಿಯನ್ನು ಹಲ್ಲಿನಲ್ಲಿ ಕಚ್ಚಿ ಯೋಚನಾಮಗ್ನನಾಗಿದ್ದ.

“ನಾನು ಈ ಥರದ ತಮಾಷೆಯನ್ನು ನಮ್ಮ ಪತ್ರಿಕೆಯಲ್ಲಿ ಅಚ್ಚುಮಾಡಲು ಸಾಧ್ಯವಿಲ್ಲ…” ಅವನು ಕೊನೆಗೆ ಹೇಳಿದ.

“ಏಕೆ…? ಯಾಕಾಗೊಲ್ಲ?!”

“ಹೇಳ್ತೇನೆ. ಏಕೆಂದರೆ ಇದರಿಂದ ನಮ್ಮ ಪತ್ರಿಕೆಗೆ ಕೆಟ್ಟ ಹೆಸರು ಬರಬಹುದು. ಪ್ರತಿಯೊಬ್ಬರು ತಮ್ಮ ಮೂಗು ಓಡಿ ಹೋಗಿದೆ ಅಂತ ಪತ್ರಿಕಾ ಪ್ರಕಟಣೆ ಕೊಡಲಾರಂಭಿಸಿದರೆ ಇದು ಎಲ್ಲಿಗೆ ಹೋಗಿ ಅಂತ್ಯವಾಗುತ್ತದೋ ಗೊತ್ತಿಲ್ಲ. ಎಷ್ಟೇ ಎಚ್ಚರ ವಹಿಸಿದರೂ ಪತ್ರಿಕೆಯಲ್ಲಿ ಸುಳ್ಳು ಮತ್ತು ಗಾಳಿ ಸುದ್ದಿಗಳು ಹೇಗೋ ನುಸುಳಿಕೊಂಡು ನಮಗೆ ಸಾಕಷ್ಟು ತಲೆನೋವು ತರಿಸುತ್ತಿವೆ…”

“ಇದೊಂದು ತಮಾಷೆಯ ವಿಷಯವೆಂದು ನಿಮಗೇಕೆ ಅನಿಸಿತು? ನನಗೇಕೋ ಇದು ತಮಾಷೆಯ ವಿಷಯ ಅಂತ ಅನಿಸೋದಿಲ್ಲ.”

“ಅದು ನಿಮ್ಮ ಅಭಿಪ್ರಾಯ. ಕಳೆದ ವಾರ ಇಂಥದ್ದೆ ಒಂದು ಪ್ರಕರಣ ಜರುಗಿತು. ನಿಮ್ಮ ಹಾಗೆಯೇ ಒಬ್ಬ ಗುಮಾಸ್ತನೊಬ್ಬ ಒಂದು ಜಾಹೀರಾತಿನ ಪ್ರಕಟಣೆಗೆಂದು ಬಂದಿದ್ದ. ಅದಕ್ಕೆ ಎರಡು ರೂಬಲುಗಳು ಮತ್ತು ಎಪ್ಪತ್ತಮೂರು ಕೋಪೆಕ್‌ಗಳು ದರ ನಿಗದಿಯಾಯ್ತು. ಅವನ ಕಪ್ಪು ಬಣ್ಣದ ಪೂಡಲ್ ನಾಯಿ ಕಳೆದು ಹೋಗಿತ್ತು. ನಾವೇನೋ ಜಾಹೀರಾತು ಹಾಕಿದೆವು. ನಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದಾಗಲೇ ನಮಗೆ ಮೋಸ ಹೋದೆವೆಂದು ಗೊತ್ತಾಗಿದ್ದು! ಅದು ಸರಕಾರಿ ಕ್ಯಾಶಿಯರನ ಕುರಿತಾಗಿ ಅವಹೇಳನ ಮಾಡಿ ಹಾಕಿದ ಜಾಹೀರಾತಂತೆ! ಅವನು ಯಾವ ಇಲಾಖೆಯವನೆಂಬುದು ಈಗ ಮರೆತು ಹೋಗಿದೆ.”

“ನಾನು ನನ್ನದೇ ಮೂಗಿನ ಜಾಹೀರಾತು ಕೊಡುತ್ತಿದ್ದೇನಪ್ಪಾ! ಕಪ್ಪು ಪೂಡಲ್ ನಾಯಿದಲ್ಲ!!”

“ಇಲ್ಲ ಸರ್, ಇಲ್ಲ! ನಾನು ನಿಮ್ಮ ಜಾಹೀರಾತು ತೆಗೆದುಕೊಳ್ಳುವುದಿಲ್ಲ.”

“ಆದರೆ,ನಿಜವಾಗಲೂ ನನ್ನ ಮೂಗು ಕಳೆದು ಹೋಗಿದೆ… ಡ್ಯಾಮ್ ಇಟ್…!!”

“ಹಾಗಾದರೆ, ನೀವು ಒಬ್ಬ ಒಳ್ಳೇ ಡಾಕ್ಟರನ್ನ ನೋಡುವುದೊಳಿತು. ಈಗೆಲ್ಲಾ, ನಿಮಗೆ ಎಂಥಾ ಮೂಗು ಬೇಕು ಆ ಥರಾದ್ದು ಜೋಡಿಸಿಕೊಡುವ ಡಾಕ್ಟರುಗಳಿದ್ದಾರೆಂದು ಕೇಳಿದ್ದೇನೆ. ಅಲ್ಲದೇ… ನಿಮ್ಮ ಮುಖಚರ್ಯೆ ನೋಡಿದರೆ ಕಳೆದು ಹೋಗಿರುವ ಮೂಗಿನ ಬಗ್ಗೆ ನೀವು ಅಷ್ಟೊಂದು ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ! ನೀವು ಜೋಕು ಮಾಡುತ್ತಿರುವವರಂತೆ ಕಾಣಿಸುತ್ತಿದ್ದೀರಿ!

“ನಾನು ನಿಜವಾಗಲೂ ತಮಾಷೆ ಮಾಡುತ್ತಿಲ್ಲ. ನಿಮಗೆ ನೋಡಲೇಬೇಕು ಎಂದರೆ ತೋರಿಸುತ್ತೇನೆ.”

“ಅದಾವುದರ ಅಗತ್ಯವಿಲ್ಲ.” ಒಂದು ಚಿಟಿಕೆ ನಶ್ಯವನ್ನು ಎತ್ತಿಕೊಳ್ಳುತ್ತಾ ಅವನು ಹೇಳಿದ. “ಆದರೂ… ನನ್ನದೇನೂ ಅಭ್ಯಂತರವಿಲ್ಲ!” ಅವನಿಗೂ ಕುತೂಹಲ ತಡೆಯಲಿಕ್ಕಾಗಲಿಲ್ಲ!

ಇದನ್ನು ಕೇಳಿ ಮೌಲ್ಯಮಾಪಕ ಮುಖಕ್ಕೆ ಮುಚ್ಚಿಕೊಂಡಿದ್ದ ಕರವಸ್ತ್ರವನ್ನು ತೆರೆದು ತೋರಿಸಿದ.

“ವ್ಹಾವ್!” ಉದ್ಗರಿಸಿದ ಗುಮಾಸ್ತ! “ನಿನ್ನ ಮುಖ ರೊಟ್ಟಿಯ ಥರ ಚಪ್ಪಟೆಯಾಗಿದೆ!”

“ಈಗ ನಿನಗೆ ಮನವರಿಕೆಯಾಯಿತು ತಾನೇ? ನೀನಿನ್ನು ನಿರಾಕರಿಸುವಂತಿಲ್ಲ! ನಿನ್ನನ್ನು ಭೇಟಿ ಮಾಡಿದ್ದು ನಿಜವಾಗಲೂ ಒಳ್ಳೆಯದಾಯಿತು,” ಹೊಗಳಿಕೆಯಿಂದ ಬಹಳಷ್ಟು ಕೆಲಸಗಳು ಸುಗಮಗೊಳ್ಳುತ್ತವೆ ಎಂದು ಅವನು ಕಂಡುಕೊಂಡಿದ್ದ.

“ನಿಮ್ಮ ಜಾಹೀರಾತು ಪ್ರಕಟಿಸಲು ತೊಂದರೆಗಳೇನಿಲ್ಲ… ಆದರೂ, ಇದರಿಂದ ನಿಮಗೆ ಏನು ಲಾಭವೆಂದೇ ನನಗೆ ತಿಳಿಯುತ್ತಿಲ್ಲ! ನಿಮಗೆ ನಿಮ್ಮ ಮೂಗಿನ ಬಗ್ಗೆ ಬರೆಯಲೇಬೇಕು ಎಂದರೆ ಯಾರಾದರೊಬ್ಬ ಪತ್ರಕರ್ತನಿಗೆ ತೋರಿಸಿ ಈ ಪ್ರಕೃತಿಯ ತಿಕ್ಕಲಿನ ಬಗ್ಗೆ (ಇಲ್ಲಿ ಅವನೊಂದು ಚಿಟಿಕೆ ನಶ್ಯವನ್ನು ಏರಿಸುತ್ತಾ…) ಒಂದು ಕುತೂಹಲಕಾರಿ ಲೇಖನವನ್ನೇ ಬರೆಸಿ ‘ದಿ ನಾರ್ಥರ್ನ್ ಬೀ’ ಪತ್ರಿಕೆಯಲ್ಲಿ ಹಾಕಿಸಿದರೆ (ಈಗ ಮೂಗನ್ನೊರಸುತ್ತಾ…) ಯುವಜನಾಂಗಕ್ಕೆ ಉಪಯೋಗಕ್ಕೆ ಬರಬಹುದು ಅಥವಾ ಸಾಮಾನ್ಯ ಓದುಗರ ಆಸಕ್ತಿಯೂ ಕೆರಳಬಹುದು! (ಸೈಂಟ್ ಪೀಟರ್ಸ್​ಬರ್ಗ್​​ನ ಈ ಪ್ರತಿಗಾಮಿ ನಿಯತಕಾಲಿಕವು ಗೊಗೊಲನನ್ನೂ ಸೇರಿಸಿ ಪ್ರತಿಭಾವಂತ ಲೇಖಕರನ್ನು ಹೀಯಾಳಿಸಿ ಬರೆಯುತ್ತಿತ್ತು!)

ಇದನ್ನು ಕೇಳುತ್ತಿದ್ದಂತೆ ಸರ್ಕಾರಿ ಮೌಲ್ಯಮಾಪಕನ ಉತ್ಸಾಹ ಒಮ್ಮೆಲೇ ಜರ‍್ರೆಂದು ಕೆಳಗಿಳಿಯಿತು. ಎದುರಿಗಿದ್ದ ಪತ್ರಿಕೆಯ ಕೆಳಗಿನ ಕಾಲಮಿನಲ್ಲಿ ರಂಗಭೂಮಿ ಮಾರ್ಗದರ್ಶಿಯಲ್ಲಿ ನಟಿಯೊಬ್ಬಳ ಹೆಸರು ನೋಡಿ ಅವನ ಮುಖ ಅರಳಿತು. ಅವನು ಐದು ರೂಬಲುಗಳಿವೆಯೇ ಎಂದು ತನ್ನ ಜೇಬನ್ನು ತಡಕಾಡಿದ. ತನ್ನ ಅಂತಸ್ತಿನ ಆಫೀಸರ್‌ಗಳು ಬಾಲ್ಕನಿಯಲ್ಲಿ ಕುಳಿತೇ ನಾಟಕ ನೋಡಬೇಕೆಂದು ಅವನು ನಿರ್ಧರಿಸಿದ್ದ. ಆದರೆ, ಅವನಿಗೆ ತಕ್ಷಣ ತನ್ನ ಮೂಗಿನ ಬಗ್ಗೆ ಅರಿವಾಗಿ ನಾಟಕ ನೋಡಲು ಹೋಗುವುದು ಸಾಧ್ಯವಿಲ್ಲವೆಂದು ಗೊತ್ತಾಯಿತು.

ಜಾಹೀರಾತು ವಿಭಾಗದ ಗುಮಾಸ್ತನಿಗೆ ಕೊವಾಲ್ಯೊವ್‌ನ ಮನದಾಳದ ಅಳಲು ಅರ್ಥವಾಗಿ ಬೇಜಾರಾಯಿತು. ಅವನನ್ನು ಕೆಲವು ಉತ್ತೇಜಕ ಮಾತುಗಳಿಂದ ಸಂತೈಸುವುದು ಸೂಕ್ತವೆಂದು ಅವನು ಭಾವಿಸಿದ.

“ನಿಮ್ಮ ನೋವು ನನಗೆ ಖಂಡಿತಾ ಅರ್ಥವಾಗುತ್ತದೆ. ನಿಮಗೆ ಹೇಗೆ ಸಂತೈಸುವುದೆಂದೇ ನನಗೆ ಗೊತ್ತಾಗುತ್ತಿಲ್ಲ. ಅಂದ್ಹಾಗೆ.. ನಿಮಗೊಂದು ಚಿಟಿಕೆ ನಶ್ಯ ಕೊಡಲೇ? ಅದು ನಿಮ್ಮೆಲ್ಲಾ ವ್ಯಸನಗಳಿಂದ ಮುಕ್ತಗೊಳಿಸಿ ಹೊಸ ಚೈತನ್ಯವನ್ನು ತರುತ್ತದೆ. ನಶ್ಯ ಸೇವನೆ ಮೂಲವ್ಯಾಧಿಯನ್ನು ಕೂಡ ಗುಣಪಡಿಸುತ್ತದೆಯಂತೆ!” ಎಂದು ಹೇಳುತ್ತಾ ಗುಮಾಸ್ತ ನಶ್ಯದ ಡಬ್ಬಿಯನ್ನು ತೆರೆದು ಕೊವಾಲ್ಯೊವ್‌ನ ಕಡೆಗೆ ಚಾಚಿದ. ಅದರ ಮುಚ್ಚಳದ ಮೇಲೆ ಹ್ಯಾಟು ಧರಿಸಿದ್ದ ಒಬ್ಬ ಹೆಣ್ಣುಮಗಳ ಚಿತ್ರವಿತ್ತು.

ಗುಮಾಸ್ತನ ಈ ನಿರುದ್ದೇಶಪೂರ್ವಕ ಪ್ರತಿಕ್ರಿಯೆ ಕೊವಾಲ್ಯೊವ್‌ನಿಗೆ ಭಯಂಕರ ಸಿಟ್ಟು ತರಿಸಿತು.

“ನನ್ನ ಈ ಪರಿಸ್ಥಿತಿಯಲ್ಲಿ ನಿನಗೆ ಈ ರೀತಿಯ ಅವಹೇಳನಕಾರಿ ಜೋಕು ಮಾಡಲು ಹೇಗೆ ಮನಸ್ಸು ಬಂದಿತೋ, ಇಲ್ಲ ನೀನು ಕುರುಡನೋ ನನಗೆ ಗೊತ್ತಾಗುತ್ತಿಲ್ಲ! ನಾನು ಏನನ್ನೂ ಅಘ್ರಾಣಿಸುವ ಸ್ಥಿತಿಯಲ್ಲಿಲ್ಲ ಎನ್ನುವುದು ನಿನಗೆ ಚೆನ್ನಾಗಿ ಗೊತ್ತಿದೆ! ನಿನ್ನ ಆ ದರಿದ್ರ ನಶ್ಯದ ಬದಲು ನನಗೆ ಅಪ್ಪಟ ಫ್ರೆಂಚ್ ಗಿಣ್ಣವನ್ನಾದರೂ ಕೊಟ್ಟೆಯಾ?” ಎಂದು ಹೇಳುತ್ತಾ ಸಿಡಿಮಿಡಿಗೊಂಡ ಕೊವಾಲ್ಯೊವ್ ಅಲ್ಲಿಂದ ತಲೆಗೆಟ್ಟು ದಾಪುಗಾಲುಗಳನ್ನಿಡುತ್ತಾ ಹೊರನಡೆದ. 

| ಮುಂದುವರೆಯುವುದು |

‍ಲೇಖಕರು Admin

December 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: