ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜಶ್ರೀ ಟಿ ರೈ ಪೆರ್ಲ ಕವಿತೆ- ವಿಪರ್ಯಾಸ…

ರಾಜಶ್ರೀ ಟಿ ರೈ ಪೆರ್ಲ 

ನಿದ್ದೆಗೆ ಜಾರುವ ಹೊತ್ತಿಗೆ ಅವಳು
ಹಸುಳೆಗೆ ಎದೆ ಹಾಲು ಹಿಂಡಿದ್ದಾಳೆ
ಹಸಿವಿನ ಅಮಲಿಗೆ ಅಲೆಮಾರಿಯ ಉಸಿರು
ಅಲೆದಾಡುತ್ತಿದೆ.
ಬೀದಿ ನಾಯಿಯೊಂದು
ಹಾಲುಗೆನ್ನೆಯಲಿ ಹರಿದ ಹಾಲಿನ ಹನಿಗೆ
ಬಾಯಿ ಇಕ್ಕಿ ನೆಕ್ಕಿದೆ.
ದೊರಗಿಗೆ ಮಗು ಬೆಚ್ಚಿದೆ
ಗಾಭರಿಗೆ ಬೊಬ್ಬಿರಿದು ಅತ್ತಿದೆ.
ನಾಯಿ ದುರುಗುಟ್ಟಿ ಬೆದರಿಸಿ ಬೆನ್ನು ಹಾಕಿದೆ
ಅಮ್ಮ ನಡುರಾತ್ರಿಯ ದುಡಿಮೆಯಲ್ಲಿದ್ದಾಳೆ!

ಎಳೇಯ ಕರಗಳು ಗ್ಯಾರೇಜಿನ ಗ್ರೀಸು ಸೋಕಿ ಕಪ್ಪಾಗಿದೆ.
ಅಲ್ಲೇ ಬೀದಿಯಲಿ ಶಾಲಾ ಬಸ್ಸು ಕಲರವವೆಬ್ಬಿಸಿ ಸಾಗಿದೆ
ಆಸೆಗಣ್ಣುಗಳು ಅತ್ತ ಹೊರಳಿದ
ಆ ಹೊತ್ತಿನ ತಪ್ಪಿಗೆ ಬಡಿದ ಏಟಿನಲಿ
ನಡುಮೂಳೆ ಬೆಂಡಾಗಿದೆ.
ನಿನ್ನೆ ಮೊನ್ನೆಗಳ ಬಿರುಕಿನ ನಡುವೆ
ಇಣುಕುವ ಕೆಂಪನ್ನು
ಚರ್ಮ ಸುರುಟಿ ಮರೆಮಾಚುತ್ತಿದೆ!

ನಡುವಿಲ್ಲದ ಬಡಕಲು ದೇಹಕ್ಕೊಂದು
ಎಳೆಗೂಸು ಅಂಟಿಸಿಕೊಂಡ ಕೈಗಳು
ನಿಂತ ಬಸ್ಸಿನಲ್ಲಿ, ಚಲಿಸುವ ರೈಲಿನಲ್ಲಿ, ಟೋಲ್ ಗೇಟುಗಳಲ್ಲಿ
ಮುನ್ನುಗ್ಗಿ ಬರುತ್ತವೆ
ಬೊಗಸೆ ಬೊಕ್ಕಸ ಒಪ್ಪಿಸಬೇಕು
ಶರತ್ತುಗಳು ಸಾವಿರವಿದೆ, ಬೇಲಿ ಭದ್ರ.
ಬತ್ತಿದ ಕಣ್ಣು, ಒಣಗೂದಳಿನ
ಎಲುಬು ತುಂಬಿಸಿದ ಸಿಪ್ಪೆಗಳ ಚೀಲ
ಪ್ರತಿ ಬೀದಿಯಲಿ ಹಸಿದ ಬೆರ್ಚಪ್ಪಗಳು ಸಂಚರಿಸುತ್ತವೆ.

ಪೈವ್‍ಸ್ಟಾರ್ ಹೋಟೆಲ್, ಮಾಲುಗಳು, ವಿಮಾನಗಳಲ್ಲಿನ
ತಂಪಿನ ಪಯಣಕೆ ಈ ನೋಟವಿಲ್ಲ
ಆವಶ್ಯಕತೆಯಿಲ್ಲದ ಆಯ್ಕೆಗಳ ಸಾಲು
ಇವರೆಲ್ಲಾ ಸಾವಿಲ್ಲದ ಮನೆಯ ಸಾಸಿವೆಯನ್ನು
ಮೂಟೆ ಕಟ್ಟಿಕೊಂಡು ಬಂದವರು.
ಬುದ್ಧನಿಗೆ ಸಡ್ಡು ಹೊಡೆದವರಂತೆ
ನಿರಾಳವಾಗಿದ್ದಾರೆ.
ಒಳಗೊಳಗೆ ಕುಟುಕುವ ವಾಸ್ತವವನ್ನು ಅಡಗಿಸಲು
ಮದರ್ಸ್ ಡೇ, ಫಾದರ್ಸ್ ಡೇ ಎಂದು
ತೂತು ಬಿದ್ದ ಸಂಬಂಧಗಳಿಗೆ ತೇಪೆ ಹಾಕಿ
ಪ್ಯಾಷನ್ ಎನ್ನುತ್ತಿದ್ದಾರೆ!

‍ಲೇಖಕರು Admin

31 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading