ಚಿಕ್ಕಲ್ಲೂರು ಜಾತ್ರೆ: ಸಾಂಸ್ಕೃತಿಕ ಅನನ್ಯತೆ…

ಗೋಳೂರ ನಾರಾಯಣಸ್ವಾಮಿ

ಜಾತ್ರೆ ಎಂಬುದು ಜನಪದರಲ್ಲಿ ಬರುವ ರೂಢಿ ಸಂಪ್ರದಾಯಗಳ ಒಂದು ಭಾಗವಾಗಿರುತ್ತದೆ. ಯಾವುದೋ ಒಂದು ಘನ ಉದ್ದೇಶಕ್ಕಾಗಿ ತಮ್ಮ ಇಷ್ಟ ಬಂದ ಸಾಂಸ್ಕೃತಿಕ ನಾಯಕನಿಗಾಗಿ ಒಂದು ನಿರ್ಧಿಷ್ಟ ಜಾಗದಲ್ಲಿ ಸಂಪ್ರದಾಯ, ಆಚರಣೆಯ ಹಿನ್ನೆಲೆಯಲ್ಲಿ ಸೇರುವ ಜನ ಸಮೂಹವೇ ಜಾತ್ರೆ. ಜಾತ್ರೆಯು ಕೂಟ, ಸಂತೋಷ, ಮನರಂಜನೆ, ಭಕ್ತಿ-ಭಾವದ ಪ್ರತೀಕ! ಜನಪದರ ಜೀವನದಲ್ಲಿ ಧರ್ಮಕ್ಕೂ ಮಹತ್ವದ ಸ್ಥಾನವಿದೆ. ಆದರೆ ಜಾತ್ರೆ ಕೇವಲ ಧರ್ಮಕ್ಕೆ ರೂಪಿತವಾದುದ್ದಲ್ಲ; ಜಾತಿ, ಧರ್ಮ ಇನ್ನಿತರ ಗಡಿಗಳನ್ನು ಮೀರುವ ಜೀವನದ ಏಕತಾನತೆಯನ್ನು ಮುರಿಯುವ ಅನನ್ಯ ಸಂಸ್ಕೃತಿಯಾಗಿದೆ.

ಮಂಟೇಸ್ವಾಮಿ ನೀಲಗಾರ ಪರಂಪರೆಯು ಅಪ್ಪಟ ದೇಶಿ ಜಾತ್ರೆಯಾಗಿದೆ. ವರ್ಷದ ಆರಂಭದಲ್ಲಿ ಜರಗುವ ಈ ಜಾತ್ರೆಗೆ ಐದು ದಿನಗಳ ಕಾಲ ಸಮಾಜದ ಎಲ್ಲ ಸಮುದಾಯದ ಜನರು ಚಿಕ್ಕಲ್ಲೂರಿಗೆ ಬಂದು ಸೇರುತ್ತಾರೆ. ಘನನೀಲಿ ಸಿದ್ದಾಪ್ಪಾಜಿ ಈ ಜಾತ್ರೆಯ ಜೀವಾಳ. ಮಂಟೇಸ್ವಾಮಿಯವರ ಶಿಶುಮಗನಾಗಿ ಬಂದು ಅನೇಕ ಪವಾಡಗಳನ್ನು ಗೆದ್ದು ಪರಮ ಶಿಷ್ಯನಾಗಿ ರೂಪುಗೊಂಡು ಮೆರೆಯುವ ದೇವರಾಗಿ ಚಿಕ್ಕಲೂರಿನಲ್ಲಿ ನೆಲೆಸಿದ್ದಾರೆ.

ಹನ್ನೆರಡನೇ ಶತಮಾನದ ಅಲ್ಲಮಪ್ರಭು, ಬಸವಣ್ಣನವರನ್ನು ಸೇರಿದಂತೆ ವಚನಕಾರರ ಪ್ರಧಾನ ತಾತ್ವಿಕ ಆಶಯಗಳನ್ನು ಜಾರಿಗೊಳಿಸಲೆಂದೇ ಮಂಟೇಸ್ವಾಮಿಯವರು ತನ್ನ ಶಿಶು ಮಕ್ಕಳಾದ ರಾಚಪ್ಪಾಜಿ, ದೊಡ್ಡಮ್ಮ ತಾಯಿ, ಸಿದ್ದಪ್ಪಾಜಿ, ಫಲಾರದಯ್ಯ, ಲಿಂಗಯ್ಯ, ಚೆನ್ನಯ್ಯ ಹಾಗೂ ಅಪಾರವಾದ ನೀಲಗಾರರೊಡನೆ ಸೇರಿ ನಡೆಸಿದ ಆಂದೋಲನವನ್ನು ಚಿಕ್ಕಲ್ಲೂರು ಜಾತ್ರೆಯಲ್ಲಿ ಕಾಣಬಹುದು.

ಇಂದು ನಮ್ಮ ದೇಶದಲ್ಲಿ ಒಂದೇ ಧರ್ಮ, ಒಂದೇ ಭಾಷೆ, ಒಂದೇ ಸತ್ಯ ಎನ್ನುವ ಭಾವನೆಯನ್ನು ಸೃಷ್ಠಿಸುತ್ತಿರುವ ಸನ್ನಿವೇಶದಲ್ಲಿ ನಮ್ಮ ಸಾಂಸ್ಕೃತಿಕ ನಾಯಕ ಮಂಟೇಸ್ವಾಮಿಯವರ ಸಾಮಾಜಿಕ ಚಳುವಳಿ ಹಾಗೂ ಅವರ ಆಶಯಗಳು ನಮಗೆ ಪ್ರಬಲವಾದ ಅಸ್ತ್ರವಾಗಿದೆ. ಶ್ರೀಮಂತಿಕೆ, ಶ್ರೇಷ್ಠತೆ, ಜಾತಿಯ ಅಹಂಕಾರವನ್ನು ಪ್ರಜ್ಞಾಪೂರ್ವಕವಾಗಿ ಮೀರುವ ಅಥವಾ ಜಯಿಸುವ ಅಗತ್ಯವನ್ನು ಪ್ರತಿಪಾದಿಸಿವುದು ಚಿಕ್ಕಲ್ಲೂರು ಜಾತ್ರೆಯ ನಿರ್ಧಿಷ್ಟವಾದ ಆಶಯವಾಗಿದೆ. ಈ ಅಹಂಕಾರವು ಕೆಲವರಲ್ಲಿ ಮಾತ್ರ ಇರುತ್ತದೆ ಎಂದರೆ ತಪ್ಪಾಗುತ್ತದೆ! ಎಲ್ಲರಲ್ಲೂ ಮೇಲು-ಕೀಳು ಎಂಬುದು ಇದೆ. ಶ್ರೀಮಂತಿಕೆ ಬಂದಾಗ ಅಹಂಕಾರ ಪಡುವುದು ಒಂದು ವಿಧವಾದರೆ, ನಾನು ಮೇಲು ಜಾತಿ ಎಂಬುದು ಹಾಗೂ ನಾನು ಕೀಳು ಎಂಬುದು ಕೂಡ ಅಹಂಕಾರವೆ! ಕೀಳು ಜಾತಿಯವನೆಂದು ಸಿಕ್ಕ ಸಿಕ್ಕವರ ಮೇಲೆ ದಬ್ಬಾಳಿಕೆ ಮಾಡುವುದು ಅಹಂಕಾರವೇ ಆಗಿದೆ. ಇಂತಹ ಅಹಂಕಾರವನ್ನು ನಾಶ ಮಾಡಿ ಸಮಾನತೆ, ಏಕತೆ, ಮಾನವೀಯ ಸೌಹಾರ್ದತೆಯನ್ನು ಸಾರುವುದೇ ಈ ಜಾತ್ರೆಯ ವೈಶಿಷ್ಟ್ಯ.

ಚಿಕ್ಕಲ್ಲೂರು ಜಾತ್ರೆಯ ತಾತ್ವಿಕ ನಾಯಕ ಮಂಟೇಸ್ವಾಮಿಯಾದರೆ, ಸಾಮಾಜಿಕ ಹಾಗೂ ಪ್ರಧಾನ ನಾಯಕ ಕೆಂಪಾಚಾರಿಯೇ ಆಗಿದ್ದಾರೆ. ಕೆಂಪಾಚಾರಿಯಾದರೂ ಕೂಡ ಆ ಕಾಲದ ಕಬ್ಬಿಣ ಹಾಗೂ ಲೋಹದ ಒಡೆತನ ಹೊಂದಿದ್ದ ಶ್ರೀಮಂತ ಕುಟುಂಬದವನಾಗಿದ್ದು, ದುರಾಹಂಕಾರ ಹೊಂದಿರುವವನಾಗಿರುತ್ತಾನೆ. ಇಂತಹ ಶ್ರೀಮಂತಿಕೆ ಹಾಗೂ ಜಾತಿಯ ಅಹಂಕಾರವನ್ನು ಗೆಲ್ಲುವ ಕಾರಣದಿಂದ ಕೆಂಪಾಚಾರಿಯನ್ನೇ ಶಿಶು ಮಗನನ್ನಾಗಿ ಪಡೆಯುವ ಮೂಲಕ ಮಂಟೇಸ್ವಾಮಿ ತಮ್ಮ ಬಹುದೊಡ್ಡ ತಾತ್ವಿಕ ಆಶಯವಾದ ಅಹಂಕಾರ ನಿರ್ಮೂಲನೆ ಮಾಡುವುದೇ ಆಗಿತ್ತು. ಹೀಗಾಗಿಯೇ ಮೇಲ್ಜಾತಿಯ ಜನರನ್ನು ಬಿಟ್ಟು ಕೆಳ ಜಾತಿಗೆ ಸೇರಿದ್ದ ಕೆಂಪಾಚಾರಿಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವೂ ಇದೆ.  ಆ ದಿನ ಕೆಳಜಾತಿ ಎನಿಸಿಕೊಂಡರು ಕಬ್ಬಿಣ ಹಾಗೂ ಲೋಹದ ಒಡೆತನದ ಜೊತೆಗೆ ಹಣವೂ ಸೇರಿದರೆ ಅಪಾಯ ಹೆಚ್ಚು ಇರುತ್ತದೆ ಎನ್ನುವ ಕಾರಣಕ್ಕೆ ಕೆಂಪಾಚಾರಿಯನ್ನು ಆಯ್ಕೆ ಮಾಡಿಕೊಂಡು ಆತನಿಗೆ ಹಿಡಿದಿದ್ದ ಹಣ ಹಾಗೂ ಜಾತಿಯ ಅಹಂಕಾರದ ಭೂತವನ್ನು ಬಿಡಿಸುತ್ತಾರೆ.

ಶಿಶುಮಗನಾಗಿ ಪಡೆದಿದ್ದ ಕೆಂಪಾಚಾರಿಯನ್ನು ಹನ್ನೇರೆಡು ವರ್ಷಗಳ ಕಾಲ ಕಾಳಿಂಗನ ಗವಿಯಲ್ಲಿ ಕೂಡಿ ಹಾಕುತ್ತಾರೆ. ಅರ್ಥಾತ್ ಧ್ಯಾನದ ಸ್ಥಿತಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುವಂತೆ ಪ್ರಜ್ಞಾಪೂರ್ವಕವಾದ ತರಬೇತಿಯನ್ನು ನೀಡುತ್ತಾರೆ. ಅನೇಕ ಪವಾಡಗಳಿಗೆ ಹೊಡ್ಡುತ್ತಾರೆ. ಇವೆಲ್ಲ ಪವಾಡಗಳನ್ನು ಜಯಿಸಿದ ಮೇಲೆಯೇ ಕೆಂಪಾಚಾರಿ ಸಿದ್ದಪ್ಪಾಜಿಯಾಗಿ ರೂಪುಗೊಂಡು ತನ್ನ ಹಣ ಮತ್ತು ಜಾತಿಯ ಮದವನ್ನು ಕಳೆದುಕೊಂಡು ಸಮಾನತೆಯ ಸಂದೇಶವನ್ನು ಸಾರುತ್ತಾನೆ. ಅಂದಿನಿಂದ ಕೆಂಪಾಚಾರಿಯು ಎಲ್ಲ ತಳವರ್ಗಗಳ, ಪ್ರೀತಿಗೆ, ಗೌರವಕ್ಕೆ ಪೂಜೆಗೆ ಒಳಪಟ್ಟಿದ್ದಾರೆ.

ಇಂದು ಜಗತ್ತು ಮೂರನೇ ಯುದ್ಧದ ಕಡೆ ನಡೆಯುತ್ತಿದೆ ಎಂಬ ಅಂಶ ದಿನ ಬೆಳಗ್ಗೆ ನಮಗೆ ಗೋಚರಿಸುತ್ತದೆ ಇದಕ್ಕೆಲ್ಲ ಕಾರಣ ಅಧಿಕಾರದ ಅಂಹಕಾರ. ನಾನು ಕೀಳು, ಶ್ರೀಮಂತ, ದೂಡ್ಡವನು ಎಂಬ ಅಂಹಕಾರ ಕಾರಣವಾಗಿದೆ. ಇದಕ್ಕೆಲ್ಲ ಪರಿಹಾರವೆಂಬಂತೆ ಚಿಕ್ಕಲ್ಲೂರು ಜಾತ್ರೆ ಉತ್ತರ ನೀಡುತ್ತದೆ. ಅಂದರೆ ಹಣದ ಅಂಹಕಾರವಿಲ್ಲದೆ ಜಾತಿ-ಧರ್ಮದ ಹಂಗಿಲ್ಲದೆ, ಮೇಲು-ಕೀಳೆಂಬ ಬೇದವಿಲ್ಲದೆ ಎಲ್ಲ ಜಾತಿ ಜನರು ಒಂದು ಕಡೆ ಸೇರಿ ಆಚರಿಸುವ ಜಾತ್ರೆ ದೊಡ್ಡ ಮೌಲ್ಯವನ್ನು ಸಾರುತ್ತದೆ. ಶ್ರೀಮಂತಿಕೆ, ದೂಡ್ಡಸ್ತಿಕೆ ಬಂದಾಗ ಗೌರವದಿಂದ, ಸಾವಧಾನದಿಂದ ನಡೆದುಕೊಳ್ಳಬೇಕು ಎಂಬ ಸಂದೇಶ ಕೊಡುವ ಬಹುದೂಡ್ಡ ಸಾಂಸ್ಕೃತಿಕ ಸಿರಿವಂತಿಕೆಯನ್ನು ಎತ್ತಿ ಹಿಡಿಯುತ್ತದೆ.

ಈ ಜಾತ್ರೆಯು ಕೊಳ್ಳೆಗಾಲದ ಚಿಕ್ಕಲ್ಲೂರಿನಲ್ಲಿ ನಡೆಯುವುದರಿಂದ ಮಂಟೇಸ್ವಾಮಿ, ದೊಡ್ಡಮ್ಮತಾಯಿ, ರಾಚಪ್ಪಾಜಿ, ಸಿದ್ದಪ್ಪಾಜಿಯವರು ಹಾಗೂ ನೀಲಗಾರ ಪರಂಪರೆಯ ಮುಖ್ಯಭೂಮಿಕೆಯಲ್ಲಿ ಬರುವ ಸಂತರು ರಸವಿದ್ಯೆ, ಮೋಡಿವಿದ್ಯೆ, ಕಾಲಜ್ಞಾನ, ಮಾಟ-ಮಂತ್ರವಿಧ್ಯೆ ಮುಂತಾದವುಗಳನ್ನು ತಿಳಿದವರಾಗಿದ್ದರು. ಇವುಗಳನ್ನು ಸಮಾಜದಲ್ಲಿ ಶೋಷಣೆಗೆ ಒಳಗಾದವರ ಪರವಾಗಿ ಬಳಸಬೇಕು ಹಾಗೂ ಯಾವುದೇ ಕಾರಣಕ್ಕೂ ಜನರ ಶೋಷಣೆಗೆ ಬಳಸಬಾರದು ಎಂಬ ಸಂದೇಶ ನೀಡುತ್ತದೆ. ಈ ಕಾರಣಕ್ಕಾಗಿಯೇ ಮಂಟೇಸ್ವಾಮಿ “ಮಾಟ ಮಾಡಿಸುವವರ ಮನೆ ಮಂಟಕ್ಕಳ್ಳಲಿ” ಎಂದು ಶಾಪದ ರೂಪದಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ. ಇದು ಅಲ್ಲಿನ ಜನರ ನಂಬಿಕೆ ಆಗಿದೆ. ಒಂದು ವೇಳೆ ಕಾದಗಟ್ಟೆ ಪವಾಡವನ್ನು ಗೆದ್ದ ಸಿದ್ದಪ್ಪಾಜಿ ಜಗತ್ತಿನಲ್ಲೇ ನನ್ನಂತೆ ಯಾರೂ ಇಂತಹ ಪವಾಡವನ್ನು ಮಾಡಿಲ್ಲವೆಂಬ ಅಂಹಕಾರದಿಂದ ಜನರ ಶೋಷಣೆಗೆ ಈ ವಿಧ್ಯೆಯನ್ನು ಬಳಸಿದ್ದೇ ಆದರೆ ಕೆಂಪಾಚಾರಿ ಸಿದ್ದಪ್ಪಾಜಿ ಆಗುತ್ತಿರಲಿಲ್ಲ; ಎಲ್ಲರಿಂದ ಗೌರವ ಆದರಗಳಿಂದ ಪೊಜೆಗೆ ಒಳಪಡುತ್ತಿರಲಿಲ್ಲ. ಆತ ಸಾಮಾನ್ಯ ಜನರ, ಬಹುಜನರ ಕಲ್ಯಾಣಕ್ಕಾಗಿ, ಸೊಕ್ಕಿನವರ ಅಳಿವಿಗಾಗಿ ತಮ್ಮ ಪವಾಡ ವಿಧ್ಯೆಗಳನ್ನು ಬಳಸಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿದರು. ಇದೇ ಜಾತ್ರೆಯ ಬಹಳ ದೊಡ್ಡ ಸಂದೇಶ.

ಚಿಕ್ಕಲ್ಲೂರು ಜಾತ್ರೆಯ ಸಾಂಸ್ಕೃತಿಕ ಸಂಘರ್ಷದ ಕಡೆ ನಾವು ನೋಡುವುದಾದರೆ 15ನೇ ಶತಮಾನದಲ್ಲಿ ಉತ್ತರದಲ್ಲಿ ಕೋಡೆಕಲ್ಲು ಬಸವಣ್ಣ “ಅಮರ ಕಲ್ಯಾಣವನ್ನು”  ಕಟ್ಟುವ ಕಾರ್ಯದ ದೊಡ್ಡ ಪರಂಪರೆಯೊಂದಿಗೆ ಕೃಷ್ಣ ನದಿಯ ಜಲಮಾರ್ಗದ ದ್ವೀಪದಲ್ಲಿ ಆರೂಢ ಸಂಗಮನಾದನೆಂಬ ದೊಡ್ಡ ಸಂತನ ಮಾರ್ಗದರ್ಶನದಲ್ಲಿ ಕಾರ್ಯ ನಿರತನಾಗಿರುತ್ತಾನೆ. ಇವರ ಮುಖ್ಯು ಉದ್ದೇಶ 12 ನೇ ಶತಮಾನದ ಅಲ್ಲಮಪ್ರಭು, ಬಸವಣ್ಣನವರು ಕಟ್ಟಿದ ಮಹಾ ಸಾಮಾಜಿಕ ಚಳುವಳಿಯನ್ನು ಮುಂದುವರಿಸುವುದೇ ಆಗಿರುತ್ತದೆ. ಇಲ್ಲಿಗೆ ಮಂಟೇಸ್ವಾಮಿಯವರು ದಕ್ಷಿಣದಿಂದ ಅಂದರೆ ಕೊಳ್ಳೇಗಾಲ ಪ್ರಾಂತ್ಯದಿಂದ ಹೋಗಿ ಈ ಆಂದೋಲನದಲ್ಲಿ ಭಾಗವಹಿಸುತ್ತಾರೆ ಎಂದು ಪ್ರೋ.ಹೆಚ್.ಗೋವಿಂದಯ್ಯ ಹೇಳುತ್ತಾರೆ.

ಈ ಸಾಂಸ್ಕೃತಿಕ ಚಳುವಳಿ ಬಸವಣ್ಣನ ಧಾರ್ಮಿಕತೆಯನ್ನು ಉಳಿಸಬೇಕೆಂದು ಅಮರ ಕಲ್ಯಾಣದಲ್ಲಿ ಬರಹಗಾರರನ್ನು, ಕವಿಗಳನ್ನು ಸೃಷ್ಠಿ ಮಾಡುವ ಕಾರ್ಯದಲ್ಲಿ ತೋಡಗಿರುತ್ತಾರೆ. ಇಲ್ಲಿಗೆ ಕೊಳ್ಳೇಗಾಲದ ಪ್ತಾಂತ್ಯದಿಂದ ತನ್ನ ಮಹಾಯಾನವನ್ನು ಆರಂಭಿಸಿದ ಮಂಟೇಸ್ವಾಮಿ ಬಂದು ಸೇರುತ್ತಾರೆ. ಈ ಸಮಯದಲ್ಲಿ ಅಲ್ಲಿ ಬಹಮನಿ ಸುಲ್ತಾನ್ ಹಾಗೂ ವಿಜಯನಗರ ಅರಸರ ನಡುವೆ ಯುದ್ದ ಆರಂಭವಾಗಿ ವಿಷಣ್ಣ ಸ್ಥಿತಿ ನಿರ್ಮಾಣವಾದಾಗ ಕೋಡೆಕಲ್ಲು ಬಸವಣ್ಣನವರು ಜಾಣತನದಿಂದ ತಮ್ಮ ಮಗನಾದ ರಾಚಾಪ್ಪಜಿಯವರೊಡನೆ ಮಂಟೇಸ್ವಾಮಿಯವರನ್ನು ದಕ್ಷಿಣದ ಕಡೆಗೆ ಹೋಗುವಂತೆ ಹೇಳಿ 12 ಶತಮಾನದ ಶರಣ ಚಳುವಳಿ ಹಾಗೂ 15 ನೇ ಶತಮಾನದ ಕೋಡೆಕಲ್ಲು ಬಸವಣ್ಣನ ಅಮರಕಲ್ಯಾಣ ಚಳುವಳಿ ನಿಮ್ಮ ಮೂಲಕ ಮುಂದುವರೆಯಲಿ ಎಂದು ಹೇಳಿ ಅಲ್ಲಿಂದ ಕಳಿಸುತ್ತಾರೆ.  ಅಲ್ಲಿಂದ ಮಂಟೇಸ್ವಾಮಿಯವರು ಅನೇಕ ವರ್ಷಗಳು, ಅನೇಕ ಊರುಗಳಲ್ಲಿ ತಂಗುವ ಮೂಲಕ ಅಲ್ಲಿನ ಜನರಿಗೆ ತನ್ನ ತಾತ್ವಿಕ ಚಿಂತನೆಗಳನ್ನು ಪ್ರಸ್ತಾಪ ಮಾಡಿ ಜನರನ್ನು ಪರಿವರ್ತನೆ ಮಾಡುತ್ತಾರೆ. ಕೊನೆಗೆ ಬೋಪ್ಪೇಗೌಡನಪುರಕ್ಕೆ ತನ್ನ ಶಿಷ್ಯರೊಡನೆ ಬಂದು ತಲುಪಿದಾಗ ಅವರಿಗೆ ಸುಮಾರು 60 ವರ್ಷ ವಯಸ್ಸು ಆಗಿತ್ತು ಎಂದು ವಿದ್ವಾಂಸರು ಅಂದಾಜು ಮಾಡುತ್ತಾರೆ.

ಮಂಟೇಸ್ವಾಮಿ ಅವರು ಈಗ ಸಾಕಷ್ಟು ಮಾಗಿದಂತಹ ಕಾಲ. ಬಸವಣ್ಣ ಹಾಗೂ ಕೋಡೇಕಲ್ಲು ಬಸವಣ್ಣನವರ ಆಶಯವನ್ನು ಮುಂದುವರೆದ ಭಾಗವಾಗಿ ನೀಲಗಾರರ ಜತೆಗೂಡಿ ಒಂದು ದೋಡ್ಡ ಸಾಮಾಜಿಕ ಪರಿವರ್ತನಾ ಚಳುವಳಿಯನ್ನು ಕಟ್ಟುತ್ತಾರೆ. ಅವರು ಅಂದು ಶುರು ಮಾಡಿದ ಸಾಮಾಜಿಕ ಬದಲಾವಣೆಗೆ ಅವರು ಮಾಡಿದ ಪ್ರಯತ್ನ, ತ್ಯಾಗದ ಫಲವಾಗಿ ಇಂದು ನಾವು ಇಷ್ಟೊಂದು ಪ್ರಜ್ಞಾವಂತ ಮನುಷ್ಯರಾಗಲು ಸಾಧ್ಯವಾಗಿದೆ. ಈ ಎಲ್ಲ ವಿಚಾರಗಳನ್ನು ಸಾರುವ ಚಿಕ್ಕಲ್ಲೂರು ಜಾತ್ರೆ ಹಾಗೂ ನೀಲಗಾರರ ಹಾಡು ತನ್ನ ತಾಳ, ಸ್ವರದಿಂದ ನಮ್ಮನ್ನು ರಂಜಿಸುವ ಮೂಲಕ ಅನನ್ಯವಾದ ಸಂಸ್ಕೃತಿಯೊಂದನ್ನು ತೆರೆದಿಟ್ಟಿದೆ.

ಚಿಕ್ಕಲ್ಲೂರು ಜಾತ್ರೆಗೆ 600 ವರ್ಷಗಳ ಇತಿಹಾಸವಿದೆ. ಅಂದಿನಿಂದ ಇಂದಿನವರೆಗೂ ಯಾವುದೇ ಧಕ್ಕೆ ಬಂದಿಲ್ಲ. ಚಾಮರಾಜನಗರ, ಮೈಸೂರು, ಮಂಡ್ಯ, ಕೊಡುಗು, ಹಾಸನ ಸೇರಿದಂತೆ ಹಳೇ ಮೈಸೂರು ಭಾಗದಿಂದ ಲಕ್ಷಾಂತರ ಜನರು ಒಂದು ಕಡೆ ಸೇರಿ ಯಾವ ಭಿನ್ನ ಬೇಧವಿಲ್ಲದೆ ನಡೆಯುವ ಬಹುದೊಡ್ಡ ಸಾಂಸ್ಕೃತಿಕ ಆಚರಣೆಯಾಗಿದೆ. 

ಚಿಕ್ಕಲ್ಲೂರು ಜಾತ್ರೆ ಐದು ದಿನಗಳ ಕಾಲ ನಡೆಯತ್ತದೆ. 

ಮೊದಲನೆಯ ದಿನ, ‘ಪರಂಜ್ಯೋತಿ ಸೇವೆ’: ತುಂಬಿದ ಹುಣ್ಣಿಮೆಯ ರಾತ್ರಿಯಂದು “ಚಂದ್ರಮಂಡಲ” ಪೂಜೆಯ ಮುಖೇನ ಜಾತ್ರೆಗೆ ಬೆಳಕು ಮೂಡುತ್ತದೆ. ಈ ದಿನ ಭಕ್ತರು ಹೊತ್ತು ತಂದ ಮೀಸಲು ಬುತ್ತಿ ಬಿಚ್ಚಿ ಊಟ ಮಾಡುತ್ತಾರೆ. ದೇವರಿಗೆ ಫಲಾಹಾರವನ್ನು ನೇವೈದ್ಯವಾಗಿ ಒಪ್ಪಿಸುತ್ತಾರೆ.

ಎರಡನೇ ದಿನ, “ದೊಡ್ಡಮ್ಮ ತಾಯಿ ಸೇವೆ”: ಸಿದ್ದಾಪ್ಪಾಜಿಯವರ ಆತ್ಮಜ್ಯೋತಿಯಾಗಿ ಬೆಳಗಿದ ದೊಡ್ಡಮ್ಮತಾಯಿಯವರನ್ನು ಜನಪದರು ನೆನೆಯುವ ಕಾರ್ಯ ಜರಗುತ್ತದೆ ಹಾಗೂ ಭಕ್ತರು ಈ ದಿನ ಕಜ್ಜಾಯ ತುಪ್ಪವನ್ನು ಮಾಡಿ ಸೇವಿಸುತ್ತಾರೆ.

ಮೂರನೇ ದಿನ, “ಮುಡಿಸೇವೆ”: ಸಿದ್ದಪ್ಪಾಜಿ ಭಕ್ತರು ತಮ್ಮ ಮುಡಿಯನ್ನು ದೇವರಿಗೆ ಅರ್ಪಿಸುವುದರ ಮೂಲಕ ಭಕ್ತಿ ಮೆರೆಯುತ್ತಾರೆ ಹಾಗೂ ಹೊಸದಾಗಿ ನೀಲಗಾರರಾಗುವವರು ನೇಮಗಳನ್ನು ಕೈಗೊಂಡು ಧೀಕ್ಷೆ ಪಡೆದುಕೊಳ್ಳುತ್ತಾರೆ. ಹಿರಿಯ ನೀಲಗಾರರು ಕಿರಿಯರಿಗೆ ನೀತಿ ಬೋಧನೆ ಮಾಡುತ್ತಾರೆ. ನೀಲಗಾರ ಧೀಕ್ಷೆ ಪಡೆದ ಮೇಲೆ ಗುರು-ಹಿರಿಯರಿಗೆ ಗೌರವ ಕೊಡಬೇಕು, ಸುಳ್ಳು ಹೇಳಬಾರದು, ಮೋಸ ಮಾಡಬಾರದು, ಕಳ್ಳತನ ಮಾಡಬಾರದು, ಮದ್ಯಪಾನ ಮಾಡಬಾರದು, ಜೂಜು ಆಡಬಾರದು ಎಂದು ಕಿರಿಯರಿಗೆ ನೀತಿಯನ್ನು ಭೋದಿಸುತ್ತಾರೆ. ಇನ್ನು ಮುಂದೆ ನೀನು ಅಪ್ಪ ಅಮ್ಮನ ಮಗನಲ್ಲ ದೇವರ ಮಗನೆಂದು ಹೊಸದಾಗಿ ಧೀಕ್ಷೆ ಪಡೆಯುವ ನೀಲಗಾರರಿಂದ ಹೇಳಿಸುತ್ತಾರೆ. ನಂತರ ಭಿಕ್ಷಾಟನೆ ಮಾಡಿಸುತ್ತಾರೆ. ಈ ದಿನ ಹೆಸರುಬೇಳೆ ಪಾಯಸ ಮಾಡಿ ಸಸ್ಯಹಾರ ಸೇವಿಸುತ್ತಾರೆ.

ನಾಲ್ಕನೇ ದಿನ, “ಪಂಕ್ತಿಸೇವೆ”: ಚಿಕ್ಕಲ್ಲೂರು ಜಾತ್ರೆಯ ಪ್ರಧಾನ ಆಶಯವಾದ ಐಕ್ಯತೆ, ಸಮಾನತೆ, ಸೌಹಾರ್ದತೆ ಸಾರುವ ಪಂಕ್ತಿಸೇವೆ ನಡೆಯುತ್ತದೆ. ಪಂಕ್ತಿಸೇವೆ ಮಾಂಸಾಹಾರದಿಂದ ಕೂಡಿದ್ದು, ತಮ್ಮ ಇಷ್ಟಾರ್ಥಗಳು ನೆರೆವೇರಲೆಂದು ಜಾತ್ರೆಗೆ ಬಂದ ಭಕ್ತರು ಕುರಿ, ಕೋಳಿ, ಆಡು ಪ್ರಾಣಿಗಳನ್ನು ತಂದು ಹರಕೆ ಒಪ್ಪಿಸಿ , ಸಿದ್ದಪ್ಪಾಜಿಯವರ ಕಂಡಾಯಕ್ಕೆ ಮೊದಲುಗೊಂಡು ಎಡೆ ಪ್ರಸಾದವನ್ನು ಬಡಿಸಿ ಪೂಜಾದಿ ಕಾರ್ಯಕ್ರಮಗಳನ್ನು ನೆರೆವೇರಿಸುತ್ತಾರೆ. ನಂತರ ಎಲ್ಲ ಜಾತಿಯ ಜನರು ಒಟ್ಟಿಗೆ ಕುಳಿತು ಊಟ ಮಾಡುವ ವಿಶಿಷ್ಟ ಆಚರಣೆ ಸಮಾನತೆಯನ್ನು ಸಾರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ‘ಪ್ರಾಣಿಬಲಿ’ ನೆಪದಲ್ಲಿ ಈ ಜಾತ್ರೆಯಲ್ಲಿ ಮಾಂಸಾಹಾರ ನಿಷೇಧಿಸುವ ಮೂಲಕ ಈ ವಿಶಿಷ್ಟ ಆಚರಣೆಗೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿದ್ದು; ಇದು ಈ ಜಾತ್ರೆಯ ಕತ್ತನ್ನೇ ಹಿಚುಕಿದಂತಾಗಿದೆ. ಈ ವಿಚಾರವಾಗಿ ಸಸ್ಯಾಹಾರ ಪ್ರತಿಪಾದನೆಯ ಮೂಲಕ ಜಾತ್ರೆಯನ್ನು ಬ್ರಾಹ್ಮಣೀಕರಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬ ಮಾತುಗಳು ಸಾಂಸ್ಕೃತಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅದೇನೆ ಇರಲಿ ‘ಸಸ್ಯಾರವೇ ಶ್ರೇಷ್ಟ ಎನ್ನುವ ಅಹಂ’ ನಾಶವಾಗಿ ಯಾವುದೇ ಭಿನ್ನಬೇದವಿಲ್ಲದೆ ಉರಿವ ಪರಂಜ್ಯೋತಿಯ ಚಂದ್ರಮಂಡಲದ ಬೆಳಕು ಎಲ್ಲರ ಎದೆಯೊಳಗೆ ಮೂಡಲಿ. ಆ ಮೂಲಕ ನೂರಾರು ವರ್ಷಗಳಿಂದ ಭಾವೈಕ್ಯತೆ ಸಾರುತ್ತಾ ಬಂದಿರುವ ಜನಪದರ ಜಾತ್ರೆ ಉಳಿಯಲಿ ಎಂಬುದು ಪ್ರತಿಯೊಬ್ಬರ ಆಶಯವಾಗಿದೆ. 

ಐದನೇ ದಿನ ಹಾಗೂ ಜಾತ್ರೆಯ ಕೊನೆಯ ದಿನ “ಮುತ್ತತ್ತಿರಾಯನ ಸೇವೆ” ನಡೆಯುತ್ತದೆ. ಈ ದಿನ ಮೊದಲ ಮೂರು ದಿನಗಳಂತೆ ಸಸ್ಯಹಾರವನ್ನು ಭಕ್ತರು ಸೇವಿಸುತ್ತಾರೆ. ಇಲ್ಲಿಗೆ ಬಹಳ ವೈಭವದಿಂದ ಜನ ಸಮೂಹವೇ ಮಾಡುವ ಒಂದು ಬಹುದೊಡ್ಡ ಸಾಂಸ್ಕೃತಿಕ ಜನಜಾತ್ರೆಗೆ ತೆರೆ ಬೀಳುತ್ತದೆ.ಜನರು ತಾವು ಬೆಳೆದ ಬೆಳೆಗಳನ್ನು ಮೊದಲ ಪಾಲು ದೇವರಿಗೆಂದೇ ನೀಡಲು ತಂದು ಅರ್ಪಿಸುವ ಪದ್ಧತಿ ಭಾರತೀಯ ಜನಪದ ಪರಂಪರೆಯೊಳಗೆ ನಡೆದು ಬಂದಿದೆ. ಅಂತೆಯೇ “ಈ ಜಾತ್ರೆ ಚಿಕ್ಕಲ್ಲೂರು, ಕೊತ್ತನೂರು, ಬಾಳಹುಣಸೆ, ತೆಳ್ಳನೂರು, ಬಾಣೂರು, ಅಂಕನಪುರ, ಗಾಂಧಿನಗರ” ಸೇರಿದಂತೆ ಸುತ್ತ ಏಳು ಊರಿನವರಿಂದ ಆಯೋಜಿಸಲ್ಪಟ್ಟರೂ, ಅನೇಕ ಹಳ್ಳಿಗಳಿಂದ  ಲಕ್ಷಾಂತರ ಭಕ್ತರು ಬಂದು ಸೇರುವ ಈ ಜಾತ್ರೆಯು ಬಹುದೊಡ್ಡ ಸಾಂಸ್ಥಿಕ ರೂಪವನ್ನು ಪಡೆಯುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ‘ಮನುಷ್ಯ ಪ್ರೇಮ’ವನ್ನು ಸಾರುವ ಚಿಕ್ಕಲ್ಲೂರು ಜಾತ್ರೆ ಯಾವುದೇ ಅಡ್ಡಿ ಆತಂಕಗಳು ಇಲ್ಲದೆಯೇ ಶಾಂತಿ-ಸೌಹಾರ್ದತೆಯಿಂದ  ನಡೆಯಬೇಕು. ಮಂಟೇಸ್ವಾಮಿಯವರ ನೀಲಗಾರರ ಪರಂಪರೆ ಉಳಿಯಬೇಕು; ಬೆಳೆಯಬೇಕು. ಆ ಮೂಲಕ ಸಮಾಜದಲ್ಲಿ ಸಮಾನತೆ ನೆಲಸಬೇಕು ಎಂಬುದು ಮಂಟೇಸ್ವಾಮಿ ಪರಂಪರೆಯ ಆಶಯವಾಗಿದೆ.

‍ಲೇಖಕರು Admin

December 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: