ರಾಜಶೇಖರ ನೀರಮಾನ್ವಿ ಅವರ ಅಂಗಳದಲ್ಲಿ..

ಚಂದ್ರಕಾಂತ ವಡ್ಡು

ಬಳ್ಳಾರಿಯ ಹಿರಿಯ ಕಥೆಗಾರ ಡಾ.ರಾಜಶೇಖರ ನೀರಮಾನ್ವಿ ಅವರನ್ನು ಭೇಟಿಯಾಗುವುದು ಬಹಳ ದಿನಗಳಿಂದ ಬಾಕಿ ಉಳಿದಿತ್ತು. ಸ್ನೇಹಿತರ ವಲಯದಲ್ಲಿ ಅವರ ಆರೋಗ್ಯದ ಬಗ್ಗೆ ಆಗಾಗ ಆತಂಕ ವ್ಯಕ್ತವಾದಾಗಲೆಲ್ಲ ನನ್ನೊಳಗೆ ಅವರನ್ನು ಕಾಣಲಾಗದ ತಪ್ಪಿತಸ್ಥ ಭಾವನೆ ಉಂಟಾಗುತ್ತಿತ್ತು. ನಿನ್ನೆ ಬಳ್ಳಾರಿಯ ಅವರ ಮನೆಯಲ್ಲಿ ಭೇಟಿ ಮಾಡಿದ ನಂತರ ಎಂಥದೋ ಸಮಾಧಾನ ಸ್ಥಿತಿ.

ಎಂಬತ್ಮೂರು ವರ್ಷದ ಹಿರಿಯ ಜೀವ ವಯೋ ಸಹಜ ಅನಾರೋಗ್ಯಕ್ಕೆ ಈಡಾಗಿದ್ದರೂ ಆತಂಕ ಪಡುವಷ್ಟು ಬೆಂಡಾಗಿಲ್ಲ. ಕುರ್ಚಿಯಲ್ಲಿ ಶೂನ್ಯ ದಿಟ್ಟಿಸುತ್ತಾ ಕುಳಿತಿದ್ದ ಅವರಿಗೆ ನನ್ನ ಜೊತೆಗಿದ್ದ ಗೆಳೆಯ ವೀರೇಶ್, “ಇವರು ಯಾರು ಗೊತ್ತಾಯ್ತಾ…? ಚಂದ್ರಕಾಂತ ವಡ್ಡು…” ಎಂದು ನೆನಪಿಸಲು ಯತ್ನಿಸಿದರು.

ನೀರಮಾನ್ವಿ ಅವರು ತಕ್ಷಣ ನನ್ನ ಕೈಯನ್ನು ಅದುಮಿ ಹಿಡಿದು, “ಹೇ… ನಮ್ಮ ವಡ್ಡು ಗೊತ್ತಿಲ್ಲೇನು? ವಡ್ಡು ಅಂದ್ರ ಸಾಕು… ಚಂದ್ರಕಾಂತ ಅಂತ ಯಾಕ ಸೇರಿಸ್ತೀ…” ಎಂದಾಗ ನಾನು ಕರಗಿ ಹೋಗಿದ್ದೆ. ಅವರ ಹೊಳಪು ಕಣ್ಣುಗಳಿಂದ ಹೊರ ಸೂಸಿದ ಪ್ರೀತಿಯ ಕಿರಣಗಳು ನೇರವಾಗಿ ತಾಗಿದ್ದು ನನ್ನ ಹೃದಯಕ್ಕೆ.

ಅವರೊಂದಿಗಿದ್ದ ಅರ್ಧ ತಾಸಿನ ಮಾತುಕತೆಯಲ್ಲಿ ಬಂದುಹೋದ ವ್ಯಕ್ತಿಗಳು, ಸಂದರ್ಭಗಳು, ವಿಷಯಗಳು ಒಂದೆರಡಲ್ಲ. ಬಳ್ಳಾರಿಯಲ್ಲಿ ನೆಲೆಸಿ ದಶಕಗಳು ಉರುಳಿದರೂ ಅವರು ಬಳಸುವುದು ತಮ್ಮ ತವರೂರು ರಾಯಚೂರು ಜಿಲ್ಲೆ ನೀರಮಾನ್ವಿ ಶೈಲಿಯ ಕನ್ನಡವನ್ನೇ.

ಆರೋಗ್ಯದ ವಿವರ ವಿಚಾರಿಸುವಾಗ ಅವರ ಮಡದಿ ಮಂಗಳಾ ಮೇಡಂ, ಬಿಪಿ-ಡಯಾಬಿಟಿಸ್ ಇರುವುದಾಗಿ ತಿಳಿಸಿದರು. ನಾನು ಡಯಾಬಿಟಿಸ್ ಕಂಟ್ರೋಲ್ ಇರಬೇಲ್ಲವೇ…? ಎಂದು ಸಹಜವಾಗಿ ಪ್ರಶ್ನಿಸಿದ್ದೇ ತಡ, ನೀರಮಾನ್ವಿ ಅವರು, “ಅದು ಕಂಟ್ರೋಲ್ ನಲ್ಲಿ ಇಲ್ಲ… ನಾನು ಅದರ ಕಂಟ್ರೋಲ್ ನಲ್ಲಿ ಅದೇನಿ…” ಎಂದು ಚಟಾಕಿ ಹಾರಿಸಿದರು. ಅವರೇ ಹೇಳುವಂತೆ ಅವರಲ್ಲಿನ ವಿನೋದ ಪ್ರಜ್ಞೆ ತಂದೆಯ ಬಳುವಳಿ.

ಮಾತಿನ ಮಧ್ಯೆ ರಾಯಚೂರಿನಲ್ಲಿ ಹಿಂದೆ ನಡೆಯುತ್ತಿದ್ದ ಕೊಲೆಗಳ ಪ್ರಸ್ತಾಪ ಬಂದಿತು. “ನೀವು ಬಿಡ್ರಿ, ರಾಯಚೂರಿನವರು ಫ್ಯೂಡಲ್ ಮಂದಿ…” ಎಂದು ಸಮಾಜವಾದಿ ಹಿರಿಯರನ್ನು ತಮಾಷೆಯಾಗಿ ಕೆಣಕಿದೆ. ಪಕ್ಕದಲ್ಲಿದ್ದ 10ನೇ ತರಗತಿ ಓದುತ್ತಿರುವ ಮೊಮ್ಮಗಳನ್ನು, “ಫ್ಯೂಡಲ್ ಅಂದ್ರೆ ಗೊತ್ತೇನಮ್ಮ…” ಎಂದು ಕೇಳಿದರೆ ಆ ಮಗು, “ಹೂಂ ಅಂಕಲ್ ಸೋಷಿಯಾಲಜಿಯಲ್ಲಿ ಓದೇನಿ…” ಎಂದಿತು, ಮುಗ್ಧವಾಗಿ.

ಅವರಿಗೆ ಹೆಚ್ಚು ಓಡಾಡಲು ಆಗುವುದಿಲ್ಲ. “ಮನೆಯಲ್ಲಿಯೇ ಕೋಲು ಹಿಡಿದುಕೊಂಡು ಓಡಾಡ್ರಿ…” ಅಂದ್ರೆ, ಅವರ ಪ್ರತಿಕ್ರಿಯೆ: “ಕೋಲು ಹಿಡಕಳ್ಳಲ್ಲಪ್ಪ… ಮುದುಕ ಅಂತಾರ…!”

ಮಂಡ್ಯದ ವಿಷಯ ಬಂದ ತಕ್ಷಣ, “ನಮಗ ಮಂಡ್ಯ ಅಂದ್ರ ರಾಮಣ್ಣ… ಆವಾಗ ಅಲ್ಲಿಗೆ ಭಾಳ ಹೋಗುತ್ತಿದ್ದೆವು… ಎಂದು ನೆನಪುಗಳನ್ನು ಬಗೆಯತೊಡಗಿದರು. “ರಾಮಣ್ಣನ ಮಗ ಎಲ್ಲದಾನ…?” ಎಂದು ವಿಚಾರಿಸಿದರು. ನಾನು, “ಅವರ ಹೆಸರು ರವಿಕಾಂತೇಗೌಡ” ಎಂದು ವಿವರಿಸಿದೆ. “ಆತ ನಮ್ಮ ರವಿ” ಅಂತ ತಿದ್ದಿದರು!

ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನಡೆಸುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದೆ. ಮಂಗಳಾ ಮೇಡಂ, “ಮೊದ್ಲು ಕಾರ್ಡು ಕಳಿಸುತ್ತಿದ್ದರು. ಈಗ ಬರ್ತಿಲ್ಲ…” ಎಂದು ಆಕ್ಷೇಪಣೆ ದನಿ ಎತ್ತಿದರು.

ವಾಟ್ಸಾಪ್ ಕಾಲದಲ್ಲಿ ಮುದ್ರಿತ ಆಹ್ವಾನ ಪತ್ರಿಕೆಗಳು ಮೂಲೆ ಸೇರಿದ್ದರ ಕುರಿತು ಚರ್ಚೆ ಆಯಿತು. ಎಂಥ ವಿಚಿತ್ರ ನೋಡಿ! ನವ ಸಂವಹನ ಮಾಧ್ಯಮಗಳ ಗುಂಗಿನಲ್ಲಿ (ಹಂಗಿನಲ್ಲಿ!) ನಾವು ಇಂಥ update ಆಗದ ಹಿರಿಯರನ್ನು ತಲುಪುವ ಅಗತ್ಯ ಮತ್ತು ವಿಧಾನವನ್ನು ಅಲಕ್ಷಿಸುತ್ತಿದ್ದೇವೇನೋ…

ನಿವೃತ್ತ ಭೂವಿಜ್ಞಾನ ಪ್ರಾಧ್ಯಾಪಕರಾದ ಡಾ.ರಾಜಶೇಖರ ನೀರಮಾನ್ವಿ ಬರೆದಿದ್ದು ಬಹಳ ಕಡಿಮೆ. ಆದರೆ ಅವರ ದಟ್ಟ ಅನುಭವಗಳ ಗಟ್ಟಿ ಕಥೆಗಳು ಕನ್ನಡ ಸಾಹಿತ್ಯಲೋಕದಲ್ಲಿ ಶಾಶ್ವತ ಸ್ಥಾನ ಪಡೆದಿವೆ.

‘ಹಂಗಿನರಮನೆಯ ಹೊರಗೆ’ ಮತ್ತು ‘ಕರ್ಪುರದ ಕಾಯದಲ್ಲಿ’ ಅವರ ಕಥಾಸಂಕಲನಗಳು. ಹಿರಿಯರಾದ ಚನ್ನಬಸವಣ್ಣ ಅವರ ಲೋಹಿಯಾ ಪ್ರಕಾಶನದಿಂದ ಹೊರಬಂದ ಮೊಟ್ಟಮೊದಲ ಕೃತಿಗಳಿವು.

ನನ್ನ ಮೊದಲ ಮತ್ತು ಕೊನೆಯ ಕಥಾಸಂಕಲನವಾದ ‘ನಾರಿಹಳ್ಳದ ದಂಡೆಯಲ್ಲಿ’ ಕೂಡ ಲೋಹಿಯಾ ಪ್ರಕಾಶನದ ಎರಡನೇ ಪ್ರಕಟಣೆ ಎಂಬುದು ನನ್ನ ಸಣ್ಣ ಹೆಮ್ಮೆ.

‍ಲೇಖಕರು admin j

July 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: