ರಾಘು ಮಾಸ್ತರು ಮತ್ತು ವಿದ್ಯೇಶ!
– ಗಣಪತಿ ದಿವಾಣ
ಕೊರೊನಾ ಪೂರ್ವ:
ರಾಘು ಮಾಸ್ತರ ಮಗನು ವಿದ್ಯೇಶನೆಂಬಾತ
ಊರಿಗೆಲ್ಲಾ ಗೊತ್ತು ತುಂಟ ಹುಡುಗ
ಅಕ್ಷರವು ಸರಿಯಿಲ್ಲ ನೋಟ್ಸು ಕಂಪ್ಲೀಟಿಲ್ಲ
ಮೊಬೈಲ್ ಲ್ಯಾಪ್ ಟಾಪ್ ಮಾತ್ರ ಬಿಡದೆ ಹಿಡಿವ
ಹಿರಿಯ ಗುರುಗಳಿಗೆಲ್ಲ ಇಂಥ ಕೆಲಸವು ಬರದು
ವಿದ್ಯೇಶನಿಗದೇನು ಜುಜುಬಿ ಪಂಥ
ಫೋನು ಕಂಪ್ಯೂಟರು ಟ್ಯಾಬ್ಲೆಟ್ಟು ಗ್ಯಾಜೆಟ್ಟು
ನಿಮಿಷದೊಳಗದನೆಲ್ಲ ಸರಿಪಡಿಸುವ
ಏನು ಮಾಡುವೆ ಮಗನೆ ಆ ಯಂತ್ರದೊಳಗೆಲ್ಲ
ಮಾಸ್ತರರ ಬೈಗುಳವು ಗಣನೆಗಿಲ್ಲ
“ಅಂವ ಮೊಬೈಲ್ ಲೇ ದಿನ ಕಳಿತ” ಎಂದರೆ ಊರವರು
ವಿದ್ಯೇಶ ನುಡಿಯುವನು ಕಲಿಕೆ ವಿಷಯ
ಅದೇನು ಕಲಿಗಾಲ ಈ ಯಂತ್ರ ಬಂತೀಗ
ಇವನಿಗೆ ಮೊಬೈಲೆ ಜೋಡಿಯಾಯ್ತು
ಕೇಳಿದರೆ ಉತ್ತರವು ಪಾಠ ಪ್ರಪಂಚದ ಅರಿವು
ಎಷ್ಟು ತಿಳಿಯಲುಬಹುದು ಇಲ್ಲಿ ದಿವಸ
ಮಾಸ್ತರಿಗೆ ಅವನೊಬ್ಬನೇ ತುಂಟ ಮಗ ವಿದ್ಯೇಶ
ಪಾಠ ಕೇಳುವ ಅವನು ಕ್ಲಾಸಿನಲ್ಲಿ
ಪರೀಕ್ಷೆಗೆ ಇನ್ನೇನು ಒಂದು ದಿನ ಎಂಬಾಗ
ನೋಟ್ಸು ಓದುವನಂತೆ ಫೋನಿನಲ್ಲಿ

ಕೊರೊನೋತ್ತರ:
ಇಂತಿರಲು ನೋಡಲ್ಲಿ ಕೊರೊನಾ ಬಂದಾಯ್ತು
ಶಾಲೆ ಬೋರ್ಡಿಲ್ವಂತೆ ಕೆಲವು ಕಾಲ
ಹೊಸಕಲಿಕೆ ಇನ್ನೀಗ ಫೋನು ಲ್ಯಾಪ್ ಟಾಪಿನಲೆ
ವಿದ್ಯೇಶ ಗೆದ್ದಂತೆ ಹೊಸದು ಜಾಲ
ಊರವರು ಈಗೀಗ ಗೊಣಗುವರು ಹೊಸದಾಗಿ
ಆನ್ಲೈನ್ ಕ್ಲಾಸಂತೆ ಏನು ವಿಷಯ
ಅದೇ ಮೊಬೈಲಂತೆ ನೆಟ್ವರ್ಕು ಬೇಕಂತೆ
ವಿದ್ಯೇಶನ ಕೇಳಿದರೆ ತಿಳಿವೆ ಬಹಳ
ರಾಘು ಮಾಸ್ತರಿಗೀಗ ಮಗನ ಮೇಲಭಿಮಾನ
ಯಂತ್ರದೊಳಗಿಷ್ಟೆಲ್ಲ ಸಾಧ್ಯತೆಗಳಿಹುದೆ?
ಇದೆಯೆಂದರೆ ಇಹುದು ಇಲ್ಲವೆಂದರೆ ಇಲ್ಲ
ಅವರವರ ಉಪಯೋಗ ಗುಣವ ಕೇಳಿ
ನೀ ನುಡಿದುದೂ ಸರಿಯೆ ಆದರಾಗದು ಇಷ್ಟೆ
ಯಂತ್ರದಾಚೆಗು ಬಂದು ನೋಡಬೇಕು
ರಾಘು ಮಾಸ್ತರ ನುಡಿಗೆ ಕಿರುನಗೆಯ ಉತ್ತರವು
ಸರಿಯಾಯ್ತು ಮಾಸ್ತರೇ ತಿದ್ದುವೆನು ಕೆಲವ
ಸುಮ್ಮನಾಟವು ಅಲ್ಲ ಎರಡು ತಲೆಗಳ ಪಾಠ
ಜೊತೆಯಾಯ್ತು ಇಂದಿಲ್ಲಿ ಹೊಸದು ಸಮಯ
ಪುಸ್ತಕವು ಇರಬೇಕು ಒಡನಾಟ ಕಲಿಬೇಕು
ತಂತ್ರಜ್ಞಾನದೊಳು ಮತ್ತಷ್ಟು ಪಡೆಯಬೇಕು






Nice poem Ganapati Good
Thank you madam..