ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಸ್ತೆ ಬದಿಯಲಿ ಬಿಟ್ಟು ಹೋದವರಾರೋ ?

ಶರತ್ ಪಿ ಕೆ / ಹಾಸನ

ನಿಶ್ಯಬ್ಧದ ಶಬ್ಧ

ಬಸ್‍ನಿಲ್ದಾಣದಲ್ಲೋ ರೈಲು ನಿಲ್ದಾಣದಲ್ಲೋ
ಕಾದು ಕೂತಿರುವಾಗ,
ಕೊಳೆಗಟ್ಟಿದ ಕೂದಲು, ಹರಿದ ಬಟ್ಟೆಯವಳು
ಬಳಿ ಸುಳಿದರೆ,
ಮುಖ ಸಿಂಡರಿಸಿ, ಹೌಹಾರಿ ದೂರ ಸರಿದದ್ದಿದೆ.
ಅವಳಿಗೆ ತುಂಡು ಜೋಳಿಗೆ ಕೊಟ್ಟು
ರಸ್ತೆ ಬದಿಯಲಿ
ಬಿಟ್ಟು
ಹೋದವರಾರೋ ?

ಅವಳಿಗೂ ಅಮ್ಮನಿರಬಹುದು !
ಇಲ್ಲಾ
ಅವಳೇ ಅಮ್ಮನಿರಬಹುದು.
ಅಕ್ಕಿ ತುಂಬಿದ ಸೇರನು, ಕನಸು ತುಂಬಿದ ಕಣ್ಗಳು
ಒದ್ದು ಒಳಬಂದಿರಬಹದು,
ತುಂಬಿದ ಮನೆಯ ಗೃಹಲಕ್ಷ್ಮಿಯಾಗಿದ್ದಿರಬಹುದು.
ಅರೇ..
ಈಗ ಅದೇ ದ್ವಾರದಿ ಒದ್ದು
ಹೊರ
ಹಾಕಿದವರಾರೋ ?

ನೆತ್ತಿಗೆ ಬಿಸಿ ಉಸಿರ ಸೋಕಿಸಿ
ತುತ್ತನು ಕೈತುಂಬ ಬಡಿಸಿ
ಮಮತೆಯ ಝರಿಯನ್ನೇ ಹರಿಸಿ
ಕಣ್ಣಲಿ ಕಣ್ಣ್ಣಿಟ್ಟು ರಕ್ಷಿಸಿ
ಜೀವ ತೇಯ್ದವಳ
ಹೀಗೇ..
ಏದುಸಿರು ಬಿಡುವಂತೆ
ಮಾಡಿದವರಾರೋ ?

ಶ್…………..

ಸ್ವಲ್ಪ ನಿಶ್ಯಬ್ಧವಾಗೋಣ.
ಅವಳ ಈ ಸ್ಥಿತಿಗೆ ಕಾರಣರಾದರವರಾರೋ
ನಮ್ಮ ನಡುವೆಯೇ ಇರಬಹುದು..
ಅವರ ಜೋರಾದ ಎದೆಬಡಿತದ
ಸದ್ದು
ಈಗ ಕೇಳಬಹುದು.

ಅವಳಂತೆಯೇ ನಾವೂ ನಾಳೆ
ಆಗಬಹುದು.
ಇಲ್ಲಾ..
ನಮ್ಮ ಎದೆ ಬಡಿತದ ಸದ್ದು ನಮಗೆ
ಜೋರಾಗಿ ಕೇಳಬಹುದು.

ಬಣ್ಣದ ಮುಖ

ಪ್ರೀತಿಯಿಂದಪ್ಪಿದ ಭೀಮನ ದೇಹ
ಪುಡಿ ಪುಡಿಯಾಗಿದ್ದು,
ಪ್ರೀತಿಯೆಂದೇ ಅಪ್ಪಿದ
ದೊಡ್ಡಪ್ಪನ ತೋಳ್ಬಲದಿಂದ.
ಅಂದು ಆ ಅಪ್ಪುಗೆ ಅಪ್ಪುಗೆಯಾಗಿರಲೇಯಿಲ್ಲ.

ಗೌತಮ ಸತಿಯ ಮೋಸದಿ
ರಮಿಸಿ ಇಂದ್ರ,
ಕಳಚಿಕೊಂಡಿದ್ದು ಬರೀ
ಪೌರುಷವನಲ್ಲ.
ಅವನು ಪುರುಷನೇ ಅಲ್ಲ.
ಅಧಿಕಾರದ ಆತಂಕ ತಪ್ಪಲೇಯಿಲ್ಲ.

ಗಂಟೆಗಳು ತಂತಾನೆ ಸದ್ದು
ಮಾಡುವುದಿಲ್ಲ.
ಬಾರಿಸಿದರಷ್ಟೇ ಮೊಳಗುವುದು ನಾದ.
ಮೊಳಗದಿದ್ದರೆ ನಾದ,
ಅದು ಗಂಟೆಯೇ ಅಲ್ಲ.
ಬಾರಿಸಿದರೂ ಮೊಳಗದಿದ್ದರೆ ನಾದ
ಅದರ ಉಪಯೋಗವಿಲ್ಲ.
ಗಂಟೆಯಿದೆಯೆಂದು
ಹಾಗೆಲ್ಲ ಸುಮ್ಮನ್ನೆ ಸದ್ದು ಮಾಡಬಾರದು.

ಪುಟ್ಟ ಮಕ್ಕಳಿಗೆ ಬಟ್ಟೆ ಇಷ್ಟವಿಲ್ಲ.
ಅದಕ್ಕೆ ಅವು ಆಗಾಗ ಕಿತ್ತೊಗೆಯುತ್ತವೆ.
ಆದರೆ ನಾವು ಮಕ್ಕಳಾಗಿ ಉಳಿದಿಲ್ಲ,
ಬಟ್ಟೆ ಕಳಚಿ ನಿಲ್ಲುವುದು ಅಷ್ಟು ಸುಲಭವಲ್ಲ
ನಮಗೆ ಬಣ್ಣ ಬಣ್ಣದ ಬಟ್ಟೆ ಬೇಕೆ ಬೇಕು.
ಆದರೆ ..
ಆಗಾಗ ಬಣ್ಣ ಬಯಲಾಗುತ್ತಿರುತ್ತದೆಯಷ್ಟೇ..

‍ಲೇಖಕರು avadhi

22 May, 2018

7 Comments

  1. nutana doshetty

    ನಿಶ್ಯಬ್ದದ ಶಬ್ದ..
    ಬಹಳ ಚೆನ್ನಾಗಿದೆ. ಸ್ತ್ರೀ ಮನಸ್ಸು ಇದನ್ನು ಬರೆದದ್ದು ಇನ್ನೂ ಖುಷಿ.

    Nutana Doshetty

    • Sharath

      ಧನ್ಯವಾದಗಳು

  2. Sowmya S

    ಇಷ್ಟವಾಯಿತು

    • Sharath

      ಧನ್ಯವಾದಗಳು

  3. Vanimahesh

    ಶರತ್ ಮನ ಮುಟ್ಟುವಂತೆ ಬರೆದಿರುವಿರಿ. ಇಷ್ಟವಾಯ್ತು.

  4. shylajagangadhar

    ತುಂಬಾ ಚೆನ್ನಾಗಿದೆ ಶರತ್.ಹೆಣ್ಣಿನ ಮನಸ್ಸು ಹೊಕ್ಕು ಬರೆದಂತೆಯೇ.ಅಭಿನಂದನೆಗಳು.

  5. Siddashree

    ಬಲು ಸೊಗಸಾದ ಬರಹಗಳು ಇಷ್ಟ ವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading