ರವಿರಾಜ್ ಸಾಗರ್ ಓದಿದ ʼಚಿರ ಕ್ರಾಂತಿʼ

ರವಿರಾಜ್ ಸಾಗರ್

ರಾಜಾಶ್ರಯದ ನೆರಳಿನಲ್ಲಿ ರಾಜಪ್ರಭುತ್ವದ ದಿಗ್ವಿಜಯ, ದಾನ, ಮತ್ತಿತರ ದಾಖಲೆಗಳನ್ನು, ಪುರಾಣ, ಮಹಾಕಾವ್ಯಗಳ ಜಾಡು ಹಿಡಿದು ಬರೆಯುತ್ತಿದ್ದ ಬರಹಗಾರರ ಪರಂಪರೆಯ ಮಿತಿಯನ್ನ ಮೀರಿ ಸಮಾಜಕ್ಕೆ ಮುಖಾಮುಖಿಯಾಗಿ ಮನದ ಸಂವೇದನೆ, ಸ್ಪಂದನೆ, ಆಕ್ರೋಶ, ವರ್ತಮಾನಗಳ ತವಕ ತಲಣಗಳನ್ನೇ ಸಾಹಿತ್ಯವಾಗಿಸಿದ ದೊಡ್ಡ ಪರಂಪರೆ ಕನ್ನಡ ಸಾಹಿತ್ಯಕ್ಕೆ ಇದೆ. ಅಂತಹ ಪರಂಪರೆಯ ಸಾಹಿತ್ಯ ಕೃತಿಗಳನ್ನು ಓದಿಕೊಂಡು ಪ್ರೇರಣೆ ಪಡೆದು ತಾನು ಒಂದಿಷ್ಟು ಬರೆಯಬೇಕು ಎಂಬ ಹುಮ್ಮಸ್ಸಿನೊಂದಿಗೆ ಅನಿಸಿದ್ದೆಲ್ಲ ಬರೆಯಲು ಲೇಖನಿ ಹಿಡಿದವರಂತೆ ಕಾಣುವ ಚಿರಂಜೀವಿ ರೋಡಕರ್ ಅವರ ಕ್ರಾಂತಿಯ ದಾರಿಯ ಕಾಲು ಪಯಣ ಗಮನಸೆಳೆಯುತ್ತದೆ.

ಅಂಬೇಡ್ಕರ್ ಚಿಂತನೆಗಳ ಪ್ರೇರಣೆ ದಟ್ಟವಾಗಿ ಕಂಡುಬರುವ ಕ್ರಾಂತಿ ಕವನ ಸಂಕಲನ ಚಿರಂಜೀವಿ ಅವರ ಮೊದಲ ಕವನ ಸಂಕಲನವಾಗಿದೆ. ಆರಂಭಿಕ ಯುವಕವಿಗಳಲ್ಲಿ ಕಂಡುಬರುವ ಎಲ್ಲಾ ಬರೆದುಬಿಡುವ ವಾಚಾಳಿತನದ ಹುಮ್ಮಸ್ಸು ಅವರ ಕವಿತೆಗಳಲ್ಲಿ ದಟ್ಟವಾಗಿ ಕಂಡು ಬರುತ್ತದೆ. ಅವರ ಕವಿತೆಗಳು ಹೇಳಬೇಕಾದದ್ದನ್ನು ಸುತ್ತಿ ಬಳಸಿ ಪ್ರತಿಮೆಗಳಲ್ಲಿ ಕಟ್ಟಿ ಕೂಡದೆ ನೇರವಾಗಿ ಹೇಳುತ್ತವೆ. ಜನಸಾಮಾನ್ಯರನ್ನ ತಟ್ಟುತ್ತವೆ. ಕಾವ್ಯ ಪಂಡಿತರಿಗೆ ಕಾವ್ಯದ ಕಸೂತಿಯಲ್ಲಿ ಇನ್ನಷ್ಟು ಸತ್ವ, ಕಾವ್ಯ ನೇಯ್ಗೆ ಇರಬೇಕಿತ್ತು ಅನಿಸಬಹುದಾದರು ತನ್ನೆದೆಯ ದನಿಯನ್ನು ಹೊರ ಹಾಕುವಲ್ಲಿ ಕಾವ್ಯ ಕ್ರಾಂತಿಯೆಬ್ಬಿಸಿಯೇ ಬಿಟ್ಟಿದ್ದಾರೆ.

ಹುಚ್ಚರ ಸಂತೆ ಕವನ ಮೊದಲುಗೊಂಡು, ಕಟ್ಟಬೇಕಾಗಿದೆ, ಶಾಂತಿನ ಕ್ರಾಂತಿನ, ಗಾಂಚಲಿ ಬಿಡಿ ಕನ್ನಡ ಮಾತಾಡಿ ಎನ್ನುವ ಹಲವು ಕವಿತೆಗಳು ಪ್ರಶ್ನೆಗಳ ಕ್ರಾಂತಿಯ ಗುಡುಗು ಸಿಡಿಲಿನ ಸುರಿಮಳೆಯನ್ನೇ ಎಬ್ಬಿಸಿವೆ.

ದೇಶ ಕಾಯೋ ಕಾಲ ಬಂತು ಏಳಿ ಏಳಿ ಗೆಳೆಯರೇ… ಎಂದು ಕೊನೆಯ ಕವಿತೆಯಲ್ಲಿ ಜಾಗೃತಿಯ ಕರೆ ನೀಡಿದ್ದಾರೆ. ಸಹಕಾರ ಸಹಬಾಳ್ವೆಯ ಕನಸು ಕನವರಿಕೆ ಕೃತಿಯ ಉದ್ದಕ್ಕೂ ಕಂಡು ಬರುತ್ತದೆ.

“ಹರಿದ ಚಪ್ಪರದಲ್ಲಿ
ಮುರಿದ ಗುಡಿಸಲಿನಲ್ಲಿ
ಬಡತನದೊಂದಿಗೆ ಬೆರೆತು ನೋವಾ ಮರೆತು
ಆರಿದ ಹಣತೆಯಲ್ಲಿ ಬೆಳಕು ಕಾಣುವವರು ನನ್ನ ಜನ”ಎಂದು ನನ್ನ ಜನ ಮೂಕ ಜನ ಕವಿತೆಯಲ್ಲಿ ವಿಷಾದ, ನೋವಿನೊಂದಿಗೆ, ತಮ್ಮ ಕಳವಳ ಕಾಳಜಿಯನ್ನ ಕವಿತೆಯಾಗಿಸಿದ್ದಾರೆ. ಹೌದು, ನಾ ದಾಸೀ, ಹೊಲದೊಡೆಯ, ಜ್ಞಾನ ಚಿರಂಜೀವಿ, ಸಿದ್ದನಾಗು ಮತ್ತಿತರ ಕವಿತೆಗಳು ಕೃತಿಕಾರರ ಆಶಯ, ಬರಹದ ಉದ್ದೇಶ, ಅವರ ದೃಷ್ಟಿಕೋನವನ್ನು ಸಾರುತ್ತವೆ.

ಶಿಕ್ಷಕರಾಗಿದ್ದುಕೊಂಡು, ಸಮಾಜದಲ್ಲಿ ಬದಲಾವಣೆ ಬಯಸುವ, ಪ್ರಜ್ಞಾವಂತಿಕೆಯ ಪ್ರಜಾಪ್ರಭುತ್ವ ಬಯಸುವ, ಸಹಬಾಳ್ವೆಯ ಸರ್ವೋದಯ ರಾಷ್ಟ್ರ ಬಯಸುವ ವ್ಯಕ್ತಿಯಾಗಿ ಚಿರಂಜೀವಿಯವರ ಸಾಹಿತ್ಯ ಕೃಷಿ ಇಷ್ಟವಾಗುತ್ತದೆ. ಅಕ್ಷರ ಸಾಹಿತ್ಯ ಬಯಸುವ, ಬಂಡಾಯದ ವ್ಯಕ್ತಿಗಳನ್ನು ಪ್ರೀತಿಸುವ, ಪ್ರೋತ್ಸಾಹಿಸುವ ಮನಸ್ಸುಗಳು ಚಿರಂಜೀವಿ ಅವರ ಕ್ರಾಂತಿ ಕೃತಿಯನ್ನು ಓದಬಹುದು. ಈ ಕೃತಿಯನ್ನು ಉಜ್ವಲ ಪ್ರಕಾಶನ ಹನಗುಂಡಿ ಪ್ರಕಟಿಸಿದ್ದು, ದಾನಪ್ಪ ಸಿ ನಿರೋಗಲ್ ಮುನ್ನುಡಿ ಬರೆದು ಹಾರೈಸಿದ್ದಾರೆ. ಮುಖಪುಟ ವಿನ್ಯಾಸ ಗಮನ ಸೆಳೆಯುತ್ತದೆ. ಅವರ ಆರಂಭದ ಸಾಹಿತ್ಯ ಕೃತಿಯ ಕುರಿತಾಗಿ ಓದುಗರು ಹೇಳುವ ಸಲಹೆಗಳನ್ನು ಸಹ ಸ್ವೀಕರಿಸಿ ಮತ್ತಷ್ಟು ಉತ್ಕೃಷ್ಟ ಕಾವ್ಯ ನದಿಯ ಕೃತಿಗಳನ್ನು ಪ್ರಕಟಿಸಲಿ ಎಂದು ಹಾರೈಸುವೆ.

‍ಲೇಖಕರು avadhi

January 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: