ರಮಾ ಉಡುಪ ಓದಿದ ‘ವೈದ್ಯಭೂಷಣ’

ರಮಾ ಉಡುಪ

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ‘ಎನ್ನುವ ಸರಳ ಸೂತ್ರವನ್ನು ಜನಸಾಮಾನ್ಯರಿಗೆ ವೈದ್ಯಭೂಷಣ ಡಾಕ್ಟರ್ ಬಿ. ಎಂ.ಹೆಗ್ಡೆ

ಇತ್ತೀಚೆಗೆ ಭಾರತ ಸರ್ಕಾರದ ಪದ್ಮವಿಭೂಷಣ ಪ್ರಶಸ್ತಿಯನ್ನು ತಮ್ಮ ಕೊರಳಿಗೆ ಏರಿಸಿಕೊಂಡ ಬೆಳ್ಳೆ ಮೋನಪ್ಪ ಹೆಗ್ಡೆಯವರು ನಮ್ಮವರು, ನಮ್ಮ ಕರ್ನಾಟಕದವರು ಎನ್ನುವುದು ಕನ್ನಡಿಗರಿಗೆಲ್ಲ ಹೆಮ್ಮೆಯ ವಿಷಯ. ಈಗಾಗಲೇ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಡಾ. ಹೆಗ್ಡೆ ಯವರು ಅತ್ಯುತ್ತಮ ಹೃದಯ ತಜ್ಞ, ಒಳ್ಳೆಯ ಶಿಕ್ಷಕ, ಉತ್ತಮ ವಾಗ್ಮಿ , ವಿಜ್ಞಾನಿ, ಲೇಖಕ, ಸಂಶೋಧಕ.  ಹೆಗ್ಡೆಯವರು ಜನಸಾಮಾನ್ಯರಿಗೆ ನೀಡಿರುವ ಸಲಹೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಭಾರತೀಯರು ವೀಕ್ಷಿಸಿ ಅದರ ಪ್ರಯೋಜನಗಳನ್ನು ಪಡೆದಿದ್ದಾರೆ. ಅವರ ವಿಚಾರಧಾರೆಗಳನ್ನು ಕೃತಿಯ ಮೂಲಕ ಕನ್ನಡಿಗರಿಗೆ ಪರಿಚಯಿಸುವ ಉಪಯುಕ್ತ ಕೆಲಸವನ್ನು ಮುಂಬೈ ವಿಶ್ವವಿದ್ಯಾಲಯದ ಕಲಾ ಭಾಗ್ವತ್ ಅವರು ಮಾಡಿರುವುದು ಶ್ಲಾಘನೀಯ ಸಂಗತಿ.

ಮಾನವೀಯತೆ ಹಾಗೂ ಅನುಕಂಪವನ್ನು ಜೀವನದ ಉಸಿರಾಗಿಸಿಕೊಂಡ ಶ್ರೇಷ್ಠ ವೈದ್ಯ ಬಿ.ಎಂ .ಹೆಗ್ಡೆಯವರ ಜೀವನದ ಅವಿಸ್ಮರಣೀಯ ಘಟನೆಗಳ ಚಿತ್ರಗಳನ್ನು ಮತ್ತು ವಿವಿಧ ವಿಷಯಗಳ ಬಗ್ಗೆ ಹೆಗ್ಡೆಯವರ ಹೇಳಿಕೆಗಳನ್ನು, ಅಭಿಪ್ರಾಯ ಗಳನ್ನು ಒಂದುಗೂಡಿಸಿ ಕಲಾ ರವರು ವೈದ್ಯಭೂಷಣ ಡಾಕ್ಟರ್ ಬಿ.ಎಂ. ಹೆಗ್ಡೆಎನ್ನುವ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ಒಟ್ಟು ಹನ್ನೆರಡು ಅಧ್ಯಾಯಗಳಿವೆ.

‘ಹೆಜ್ಜೆಗುರುತು’ ಅಧ್ಯಾಯದಲ್ಲಿ ಹೆಗ್ಡೆಯವರ ಬಾಲ್ಯದ ದಿನಗಳು, ಶಾಲಾ ದಿನಗಳು, ತಾಯಿಯ ಅವಿರತ ಪ್ರೋತ್ಸಾಹ, ಶಾಲಾ ಗುರುಗಳಿಂದ ಮತ್ತು ಕುಟುಂಬದ ವೈದ್ಯರಿಂದ ಪಡೆದ ಪ್ರೇರಣೆ, ಕಾಲೇಜು ವಿದ್ಯಾಭ್ಯಾಸ, ವೈವಾಹಿಕ ಜೀವನ, ವೃತ್ತಿಜೀವನದ ದಿಟ್ಟ ಹೆಜ್ಜೆಗಳನ್ನು ವಿಷದವಾಗಿ ನಿರೂಪಿಸಲಾಗಿದೆ. ಕಲಾ ಅವರು ಬಿ .ಎಂ. ಹೆಗ್ಡೆ ಅವರೊಂದಿಗೆ ನಡೆಸಿರುವ ಸಂದರ್ಶನ ಬಹಳ ಆತ್ಮೀಯವಾಗಿದೆ. ಪ್ರತಿಯೊಂದು ಪ್ರಶ್ನೆಗೂ ಅವರು ನೀಡಿರುವ ಸರಳವಾದ ನೇರನುಡಿಯ ಉತ್ತರ ಅವರ ಸಜ್ಜನಿಕೆಯ ಪ್ರತೀಕವಾಗಿದೆ.

ಜನಸಾಮಾನ್ಯರಿಗೆ ಇಂದಿನ ಯುವ ವೈದ್ಯರಿಗೆ ಅವರು ನೀಡಿರುವ ಮಾರ್ಗದರ್ಶನ ಅತ್ಯಮೂಲ್ಯವಾದದ್ದು. ಮನುಷ್ಯ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಆತನ ದೈಹಿಕ ಕಾಯಿಲೆಗಳು ಬೇಗನೆ ಗುಣವಾಗುತ್ತದೆ ಎಂಬುದನ್ನು ಹೆಗ್ಡೆಯವರು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಅವರು ಪ್ರತಿಯೊಬ್ಬರಲ್ಲೂ ಕಳಕಳಿಯಿಂದ ಮಾಡುವ ಮನವಿಯೆಂದರೆ ಯಾರನ್ನೂ ದ್ವೇಷಿಸಬೇಡಿ. ಎಲ್ಲರಲ್ಲೂ ಒಳ್ಳೆಯತನವನ್ನು ಹುಡುಕಿ. ಸಹಜೀವಿಗಳನ್ನು ಸಹಾನುಭೂತಿಯಿಂದ ಪ್ರೀತಿಸಿದಾಗ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಮನಸ್ಸು ಪ್ರಸನ್ನ ವಾಗಿದ್ದರೆ ದೇಹಕ್ಕೆ ಕಾಯಿಲೆ ಬರುವ ಸಾಧ್ಯತೆ ಇಲ್ಲ ಎನ್ನುವ ಹೆಗ್ಡೆಯವರ ಮಾತನ್ನು ಪ್ರತಿಯೊಬ್ಬರೂ ಗಮನಿಸಬೇಕಾದ ಅಂಶ.

ನಮ್ಮ ದಿನನಿತ್ಯ ದ ಅಡುಗೆ ಯಲ್ಲಿ ಉಪಯೋಗಿಸುವ ಬೆಳ್ಳುಳ್ಳಿ, ತೆಂಗಿನೆಣ್ಣೆ ಮುಂತಾದ ಸಾಮಗ್ರಿಗಳ ಬಗ್ಗೆ ಸಂಶೋಧನೆ ನಡೆಸಿ, ಆ ಪದಾರ್ಥಗಳಲ್ಲಿ ಇರುವ ಔಷಧೀಯ ಗುಣಗಳನ್ನು ಜನಸಾಮಾನ್ಯರಿಗೆ ತೋರಿಸಿಕೊಟ್ಟಿದ್ದಾರೆ. ಅವರು ಮಾಡಿರುವ ಇಂತಹ ಅನೇಕ ಸಂಶೋಧನೆಗಳಿಗೆ ಯಾವುದೇ ಅನುದಾನವನ್ನು ಪಡೆಯದೆ ತಮ್ಮದೇ ಖರ್ಚಿನಲ್ಲಿ, ತಮ್ಮ ಆಸಕ್ತಿಗಾಗಿ ಸಂಶೋಧನೆಗಳನ್ನು ಮಾಡಿದ್ದಾರೆ. ತಮ್ಮ ಅವಿರತ ಕೆಲಸಗಳ ನಡುವೆಯೂ ಸಂಶೋಧನೆಗಾಗಿ ಪ್ರತ್ಯೇಕ ಸಮಯವನ್ನು ಮೀಸಲಿಟ್ಟಿದ್ದಾರೆ. ಹೆಗ್ಡೆ ಯವರು ನಿಷ್ಠುರವಾದಿ. ವೈದ್ಯ ಜಗತ್ತಿನ ಮೋಸ ವಂಚನೆಗಳನ್ನು ಜನಸಾಮಾನ್ಯರಿಗೆ ಅರಿವು ಮೂಡಿಸಿದ ವೈದ್ಯಕೀಯ ಸಂತ.

ಜಾಗತೀಕರಣ, ಆಧುನೀಕರಣ, ನಗರೀಕರಣದ ಫಲವಾಗಿ ಇಂದು ವೈದ್ಯವೃತ್ತಿಯೂ ವ್ಯಾಪಾರವಾಗುತ್ತಿದೆ. ಯಾವುದೇ ದೈಹಿಕ ತೊಂದರೆಗೆ ಆಸ್ಪತ್ರೆಗೆ ಹೋದರೆ ನೂರಾರು ಪರೀಕ್ಷೆಗಳು, ಒಂದು ರಾಶಿ ಔಷಧಿಗಳು ಆ ಪಟ್ಟಿಯನ್ನು ನೋಡಿ ರೋಗಿಯ ಲ್ಲದೆ ಅವನ ಮನೆಯವರ ಮಾನಸಿಕ ಸ್ಥಿತಿಯೂ ಕುಗ್ಗಿಹೋಗುತ್ತದೆ. ಇಂದು ಬದಲಾಗಿರುವ ಈ ಪರಿಸ್ಥಿತಿಯನ್ನು ಗಮನಿಸಿರುವ ಹೆಗ್ಡೆಯವರು ಯುವ ವೈದ್ಯರಿಗೆ ‘ಮೊದಲು ರೋಗಿಯ ಮಾನಸಿಕ ಸ್ಥಿತಿಯನ್ನು ಸರಿಪಡಿಸಿ ನಂತರ ಕಾಯಿಲೆಯನ್ನು ಗುಣಪಡಿಸಬೇಕು.

ಔಷಧಿಯನ್ನು ಕಡಿಮೆ ಮಾಡಬೇಕು’ ಎಂದು ಕಿವಿಮಾತನ್ನು ಹೇಳುತ್ತಾರೆ. ವೈದ್ಯರಾದವರು ಸ್ವಾರ್ಥ, ಸ್ವಪ್ರತಿಷ್ಠೆ, ಶ್ರೀಮಂತಿಕೆ ಯಾವುದರ ಬಗ್ಗೆಯೂ ಚಿಂತಿಸದೆ ಕೇವಲ ವೈದ್ಯ ನಾಗಿರಬೇಕು. ಆ ಸ್ಥಾನಕ್ಕೆ ಸೇವೆಯ ಮೂಲಕ ಶ್ರೀಮಂತಿಕೆಯನ್ನು ತರಬೇಕು ಎಂದು ಹೇಳುವ ಹೆಗ್ಡೆಯವರು ತಮ್ಮ ಜೀವನದಲ್ಲಿ ಸ್ವತಃ ಅದನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಹೆಗ್ಡೆಯವರು ಅಲೋಪತಿ ವೈದ್ಯಕೀಯ ಶಿಕ್ಷಣ ಪಡೆದಿದ್ದರೂ ಆಯುರ್ವೇದ, ಹೋಮಿಯೋಪತಿ ಚಿಕಿತ್ಸಾ ವಿಧಾನದಲ್ಲೂ ಆಸಕ್ತಿ ಹೊಂದಿದ್ದಾರೆ. ಆಯುರ್ವೇದಕ್ಕೆ ಉಜ್ವಲ ಭವಿಷ್ಯವಿದೆ. ನಿಜವಾದ ಆರೋಗ್ಯ ರಕ್ಷಣೆಗೆ ನಮ್ಮ ಮನಸ್ಸು ಹಾಗೂ ದೇಹವನ್ನು ಒಂದಾಗಿ ಕಾಣಬೇಕು. ಆಯುರ್ವೇದವನ್ನು ಆಧುನೀಕರಣ ಗೊಳಿಸುವ ಪ್ರಯತ್ನವಾಗಬೇಕು ಎನ್ನುವುದು ಅವರ ಆಶಯ.

ಕ್ಯಾನ್ಸರ್, ಮಧುಮೇಹ ಮುಂತಾದ ಕಾಯಿಲೆಗಳು ವಂಶಪಾರಂಪರ್ಯವಾಗಿ ಬರುತ್ತದೆ ಎನ್ನುವ ಥಿಯರಿಯನ್ನು ಒಪ್ಪದ ಹೆಗ್ಗಡೆಯವರು ಕ್ವಾಂಟಮ್ ವಿಜ್ಞಾನದ ಪ್ರಕಾರ ನಮ್ಮ ಪರಿಸರವೇ ನಮ್ಮ ಶರೀರವನ್ನು ನಡೆಸುತ್ತದೆ. ಹಾಗಾಗಿ ಪರಿಸರವೇ ನಮ್ಮ ರೋಗಕ್ಕೆ ಕಾರಣ ಹಾಗೂ ರೋಗವನ್ನು ಗುಣಪಡಿಸುವ ಸಾಧನ ಎಂದು ಒತ್ತಿ ಹೇಳುತ್ತಾರೆ.

ಸ್ವಸ್ತ್ಯ ಸಮಾಜದ ನಿರ್ಮಾಣಕ್ಕಾಗಿ ಅಳವಡಿಸ ಬೇಕಾಗಿರುವ ಮೂಲಭೂತ ಸೌಕರ್ಯದ ಬಗ್ಗೆ ಅವರು ನೀಡಿರುವ ಸಲಹೆ-ಸೂಚನೆಗಳನ್ನು ನಮ್ಮ ಸರ್ಕಾರ ಜಾರಿಗೆ ತಂದರೆ ನಮ್ಮ ಸಮಾಜದ ವ್ಯವಸ್ಥೆ ಬಹಳಷ್ಟು ಸುಧಾರಿಸುತ್ತದೆ. ಸಮಾಜದ ಸ್ವಾಸ್ಥ್ಯ ಕೆಟ್ಟು ಹೋದಮೇಲೆ ಉಪಕಾರ ಮಾಡುವುದಕ್ಕಿಂತ ಕೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ಇರಬೇಕು ಎಂದು ಹೆಗ್ಡೆಯವರು  ಜನರನ್ನು ಎಚ್ಚರಿಸುತ್ತಾರೆ.

ದೇಶದ ಬಡಜನತೆಯ ಬಗ್ಗೆ ಕಳಕಳಿಯಿರುವ ಹೆಗ್ಡೆಯವರು ಅವರ ಭವಿಷ್ಯದ ಬಗ್ಗೆ, ಬಡ ಮಹಿಳೆಯರ ಆರ್ಥಿಕ ಸಬಲೀಕರಣ ದ ಬಗ್ಗೆ ನೀಡಿರುವ ಸಲಹೆಗಳನ್ನು ಖಂಡಿತವಾಗಿಯೂ ಅನುಷ್ಠಾನಕ್ಕೆ ತರಬೇಕು. ಸ್ವಸ್ಥ ಸಮಾಜವನ್ನು ಕಟ್ಟಲು ಒಬ್ಬರು ಇಬ್ಬರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬ ಪ್ರಜೆಯೂ ಇದರ ಬಗ್ಗೆ ಹೆಚ್ಚಿನ ಗಮನಹರಿಸಿ ಕಾರ್ಯಪ್ರವೃತ್ತರಾಗಬೇಕು. ಹೆಗ್ಡೆಯವರು ನೀಡುವ ಸಲಹೆಗಳು ಓದುಗರಿಗೆ ಪ್ರೇರಣಾದಾಯಕ ವಾಗಿವೆ. ಅಂತಹ ಉಪಯುಕ್ತ ಅಣಿಮುತ್ತುಗಳನ್ನು ಒಂದೆಡೆಯಲ್ಲಿ ಉಪಲಬ್ದ ವಾಗುವಂತೆ ಮಾಡಿರುವ  ಕಲಾರವರು ನಿಜಕ್ಕೂ  ಅಭಿನಂದನಾರ್ಹರು.

ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಎಂ.ಎಗೆ ಸೇರಿದ ಪ್ರಥಮ ವರ್ಷದಲ್ಲಿಯೇ ವೈದ್ಯ ವಿಭೂಷಣ ಹೆಗ್ಡೆಯವರ ಜೀವನ ಚಿತ್ರಣವನ್ನು ಮಾಡ ಬಯಸಿದ್ದು ಕಲಾ ಅವರ ಆತ್ಮವಿಶ್ವಾಸವನ್ನು ಎತ್ತಿ ತೋರಿಸುತ್ತದೆ .ಅಷ್ಟೇ ಅಲ್ಲದೆ ಅವರು ಕೈಕೊಂಡ ಕಾರ್ಯದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಅವರಿಂದ ಮತ್ತಷ್ಟು ಇಂತಹ ಲೋಕೋಪಯುಕ್ತ ಕೃತಿಗಳು ಹೊರಬರಲಿ ಎಂದು ಹಾರೈಸುತ್ತೇನೆ.

‍ಲೇಖಕರು Admin

December 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: