ನಿವೇದಿತಾ ಓದಿದ ಕನ್ನಡತಿ ರಂಜನಿ ರಾಘವನ್‌ ‘ಕತೆ ಡಬ್ಬಿ’

ನಿವೇದಿತಾ ಎಚ್

ಪುಟ್ಟ ಗೌರಿಯಂತಹಾ ಕನ್ನಡತಿ ರಂಜನಿ ರಾಘವನ್‌ ಕತೆಗಳನ್ನು ನಾನು ‘ಅವಧಿ’ಯಲ್ಲಿ ಕೂಲಂಕಷವಾಗಿ ಓದಿದ್ದಲ್ಲ. ಮೈಸೂರಿನ ನವಕರ್ನಾಟಕ ಮಳಿಗೆಗೆ ಆಕೆ ಬಂದಾಗ, ಸಂಕಲನ ತೆಗೆದುಕೊಂಡದ್ದು, ಓದಿದ್ದು. ಬೆನ್ನುಡಿಯಲ್ಲಿ ಜೋಗಿ ಅವರು, ‘ಕಟ್ಟಿದ ಕತೆಗಳು’ ಎಂದು ಎಂದು ಉಲ್ಲೇಖಿಸುತ್ತಾರೆ.

ಮುಂದೆ ಕತೆಗಳು ಪುಂಖಾನುಪುಖಾವಾಗಿ ʻಹುಟ್ಟಲಿ ಎಂಬುದು ಅವರ ಆಶಯ. ಆದರೆ ಕತೆಗಳನ್ನು ಓದಿದ ಮೇಲೆ ನನಗನ್ನಿಸಿದ್ದು, ಸುತ್ತಲ ಪ್ರಪಂಚವನ್ನು ಆಳವಾಗಿ, ಗಂಭೀರವಾಗಿ, ಸಹೃದಯತೆಯಿಂದ, ವಾಸ್ತವದ ಕನ್ನಡಕ ಹಾಕಿಕೊಂಡು ನೋಡಿ, ಅಭ್ಯಸಿಸಿಯಾದಮೇಲೆ ʻಹುಟ್ಟಿದʻ ಎಳೆಗಳನ್ನು, ಕತೆಗಳಾಗಿಸಿ ʻಕಟ್ಟಿʻ ಕೊಟ್ಟಿರುವ ರಂಜನಿ ಅವರ ಪ್ರಥಮ ಪ್ರಯತ್ನ, ಶ್ಲಾಘನೀಯ.

ರಂಜನಿ ಬೆಂಗಳೂರಿನವರು, ಎಂ.ಬಿ.ಎ ಮಾಡಿರುವವರು, ಬಣ್ಣದ ಲೋಕದಲ್ಲಿರುವವರು, ಯುವತಿ… ಹಾಗಾಗಿ, ಪುಸ್ತಕ ಓದಲು ಪ್ರಾರಂಭಿಸುವ ಮುಂಚೆ, ನನ್ನ ನಿರೀಕ್ಷೆಯಿದ್ದದ್ದು, ಕೆಲವು ʻಯೂತ್ ಫುಲ್ʻ, ʻಬೆಂಗಳೂರಿನʻ, ಆಧುನಿಕೋತ್ತರ ಚಿಂತನೆಯುಳ್ಳ ಕತೆಗಳಿರುತ್ತವೆ ಎಂದು. ಒಂದೇ ಸಿಟ್ಟಿಂಗ್‌ ನಲ್ಲಿ ಮುಗಿಸಲೇಬೇಕೆಂದು ಒತ್ತಾಯಿಸುವ ಈ ಪುಸ್ತಕದ ಕತೆಗಳಲ್ಲಿನ ವೈವಿಧ್ಯತೆ, ಸಂವೇದನಾಶೀಲತೆ, ಬೇರುಗಳ ತೊಡಕು, ಹುಡುಕಾಟ, ವ್ಯಂಗ್ಯ, ವಿಡಂಬನೆ, ತಲ್ಲಣಗಳು, ತಣ್ಣನೆಯ ಕ್ರೌರ್ಯ, ಸಂಬಂದಗಳಲ್ಲಿ ವ್ಯಾವಹಾರಿಕತೆ…

ಹೀಗೆ ಮನುಷ್ಯ ಲೋಕದ ತಿಕ್ಕಾಟಗಳನ್ನು, ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವುದನ್ನು ನೋಡಿ ಅಚ್ಚರಿಯಾಯಿತು. ಧಾರಾವಾಹಿಯ ಪಾತ್ರಧಾರಿಯಾಗಿ ಮಾತ್ರ ರಂಜನಿ ಪ್ರಬುದ್ಧರಲ್ಲ, ನಿಜ ಜೀವನದಲ್ಲೂ ಅಷ್ಟೇ ಪ್ರೌಢಿಮೆ, ಪ್ರಬುದ್ಧತೆ ಅವರಿಗಿದೆ ಎಂಬುದು, ಇವತ್ತಿನ ಮಟ್ಟಿಗೆ ಸಂತಸದ ವಿಚಾರ. 

ತೀರಾ ಗ್ರಾಂಥಿಕವಲ್ಲದ, ಆದರೆ ಜನರ ಮನೆಮಾತಾಗಿರುವ ಸರಳಗನ್ನಡದಲ್ಲಿ ಇರುವ ೧೪ ಕತೆಗಳು, ೧೪ ಭಾವಕೋಶಗಳು. ಇಲ್ಲಿನ ಪಾತ್ರಗಳು ಏನನ್ನೋ ಸಾಧಿಸಲು, ಸಾಕ್ಷಾತ್ಕಾರ ಮಾಡಿಕೊಳ್ಳಲು, ಸತ್ಯ ದರ್ಶನಗೈಯ್ಯಲು, ಜೀವನದ ಅರ್ಥ ತಿಳಿಯಲು ಪಾರಮಾರ್ಥದ ಮೊರೆ ಹೋಗುವುದಿಲ್ಲ. ಬದಲಿಗೆ ಜೀವನವನ್ನು ಇಡಿಯಾಗಿ ಮನುಷ್ಯ ಸಹಜ ದೋಷಗಳೊಂದಿಗೆ ಅನುಭವಿಸುತ್ತಲೇ, ಸಂಕಟಗಳನ್ನು ಹಾದುಹೋಗುತ್ತಲೇ, ಜೀವನದ ಅರ್ಥ ಕಂಡುಕೊಳ್ಳುತ್ತವೆ.

‘ಕ್ಯಾಬ್‌ ವಿ ಮೆಟ್’, ‘ಅಪ್ಪನ ಮನೆ ಮಾರಾಟಕ್ಕಿದೆ’, ‘ವೈರಾಗ್ಯದ ವಾಲಿಡಿಟಿ’, ‘ನಂಜನಗೂಡು ಟೊ ನ್ಯೂಜರ್ಸಿ’ ಹಾಗೆ ಬದುಕನ್ನೇ ಪಾಠ ಮಾಡಿಕೊಳ್ಳಬೇಕೆಂದು ಹೇಳದೆಯೇ ಹೇಳುವ ಕತೆಗಳು. ‘ಮಾತುಗಾರರಿದ್ದಾರೆ ಎಚ್ಚರಿಕೆ ‘ಇಂಗ್ಲೀಷ್‌ ಕೃಷ್ಣ’, ‘ದೇವರು ಕಾಣೆಯಾಗಿದ್ದಾನೆ’, ಮನುಷ್ಯನಲ್ಲಿ ರಕ್ತಗತವಾಗಿರುವ ಬೂಟಾಟಿಕೆಯನ್ನು ಸುಂದರವಾಗಿ ಹೆಣೆದಿಟ್ಟಿದೆ. 

ಎಲ್ಲ ಕತೆಗಳಲ್ಲೂ ರಂಜನಿ ಒಂದಷ್ಟು ತತ್ವಗಳನ್ನು ಲೀಲಾಜಾಲವಾಗಿ ಹೇಳುತ್ತಾರೆ. ‘ಕಾಣದ ಕಡಲಿಗೆ’ ಕತೆಯಲ್ಲಿ, ದೃಷ್ಟಿ ಹೀನತೆಯನ್ನು ಅನುಭವಿಸಲು ಯತ್ನಿಸುವ ಕುಮುದ, ‘ಅಂತರಂಗಕ್ಕೆ ಹತ್ತಿರವಿರಲು ಈ ಊನ ಒಂದು ವರ’ ಎನ್ನುತ್ತಾಳೆ. ಹೀಗೆ ಪುಸ್ತಕದಲ್ಲಿ ಬೇಕಾದಷ್ಟು ಧನಾತ್ಮಕ ವಿಚಾರಗಳನ್ನು ಸರಳವಾಗಿ ಹೇಳಿದ್ದಾರೆ ಕತೆಗಾರ್ತಿ.

ಮೊದಲ ಪ್ರಯತ್ನದಲ್ಲಿಯೇ ಇಷ್ಟು ಸೊಗಸಾದ ಕತೆಗಳನ್ನು ನೀಡಿರುವ ರಂಜನಿ ಅವರ ಕತೆಗಳ ಡಬ್ಬಿಗಳ ಸಾಲು ಅನಂತವಾಗಲಿ.       

‍ಲೇಖಕರು Admin

December 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: