’ರಣ್ ಉತ್ಸವ ಮತ್ತು ನಾವಿಬ್ಬರು’ – ನಾ ಕಲಿತ ಗುಜರಾತಿ ’ವಾಂಧೋ ನಹಿ’!

(ಇಲ್ಲಿಯವರೆಗೆ)

ಬೆಳಗ್ಗೆ 7:30ಕ್ಕೆ ಭುಜ್ ರೈಲ್ವೆ ಸ್ಟೇಶನ್ ನಿಂದ ರಣ್ ಉತ್ಸವ್ ಗೆ ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಲಗು-ಬಗೆಯಿಂದ ಎದ್ದು ತಯಾರಾಗಿ ಸುಮಾರು ೬:೫೦ ರಷ್ಟೊತ್ತಿಗೆ  ಹೋಟೆಲ್ ನಿಂದ ಚೆಕ್-ಔಟ್ ಮಾಡಿ ಆಟೋ ಏರಿ ಹೊರಟರೆ ಇನ್ನೂ ಕಣ್ಬಿಡದ ಬೆಳಗು! ಸಮಯ ನಿಜಕ್ಕೂ ಏಳಾ? ಅನುಮಾನದಿಂದ ಗಡಿಯಾರ ನೋಡಿಕೊಂಡರೆ ಹೌದು, ಸಮಯ ೭ ಗಂಟೆ! ಹಾಗೇ ಆಟೋ ಹತ್ತಿ ಹೊರಟಾಗ ‘ಕೇಸರಿ ಚಂದಿರ’ನ  good morning! ಮೈ- ಪುಳಕಗೊಳ್ಳುವಷ್ಟು ಕೇಸರಿಯಾಗಿ ಮಂದಗಮನೆಯಂತೆ ಅಂದವಾಗಿ, ಮೃದುವಾಗಿ ಅವ ಬೆಳಗಿತಿದ್ದರೆ, ಕಾಲ ಹಾಗೇ ಅಲ್ಲೇ ನಿಂತುಬಿಡಬೇಕು ಎಂದೆನಿಸಿತ್ತು. ಆ ಕ್ಷಣಕ್ಕೆ ಆಟೋ ನಿಲ್ಲಿಸಿ ಆ ತುಂಬು ಚಂದಿರನನ್ನು ನನ್ನ  ಕ್ಯಾಮೆರಾನಲ್ಲಿ, ಕಣ್ಣಿನಲ್ಲಿ, ಮನಸಿನಲ್ಲೆಲ್ಲ ತುಂಬಿಕೊಂಡು ಮತ್ತೆ ಮುಂದುವರೆದದ್ದು. ಭುಜ್ ರೈಲ್ವೆ ಸ್ಟೇಶನ್ ನಲ್ಲಿ  ರಣ್ ಉತ್ಸವ್ ನ  waiting-lounge ತಲುಪಿದವರಲ್ಲಿ ನಾವೇ ಮೊದಲಿಗರು. ಸ್ವಲ್ಪ ಸಮಯ ಕಳೆದಂತೆ ಜನ ಸೇರತೊಡಗಿದರು. ರೈಲ್ವೆಯಿಂದ ಜನ ಬಂದಿಳಿದಾಗ ಗುಂಪು ದೊಡ್ಡದಾಯಿತು.  ಚಳಿ ಕೊರೆಯುತ್ತಿತ್ತು. ಬಿಸಿ ಚಹಾದ ಆಸ್ವಾದ ಚೆನ್ನಾಗಿತ್ತು.

ಬಸ್ ಹೊರಡಲು ಅಣಿಯಾಗುತ್ತಿದ್ದಾಗ, ಸೂರ್ಯ ಬೆಳಗಲು ಅಣಿಯಾಗುತ್ತಿದ್ದ. ಹೂಂ! ಸೂರ್ಯೋದಯ ಸರಿ ಸುಮಾರು ೭:೩೦ ರ ಆಸು-ಪಾಸಿನಲ್ಲಿ! ಹೆದ್ದಾರಿಯ  ತಂತಿಗಳ ಹಿಂದಿನಿಂದ ಸೂರ್ಯ ಮೇಲೇರುತ್ತಿದ್ದ. ಈ ಪ್ರವಾಸದ ಎಲ್ಲಾ ದಿನಗಳಲ್ಲೂ ಸೂರ್ಯೋದಯ ಮತ್ತು ಚಂದ್ರೋದಯವನ್ನು ಮನಸು ತುಂಬುವಷ್ಟು ವೀಕ್ಷಿಸಿರುವುದು ಒಂದು ವಿಶೇಷ. ಬಸ್ ಹೊರಟಾಗ ಹೆಚ್ಚಾನು-ಹೆಚ್ಚು ಗುಜರಾತಿ ಜನಗಳ ಗುಜರಾತಿ ಕಲರವ ಶುರುವಾಗಿತ್ತು. ನಂದನ್ ನ ಒಬ್ಬ ಫ್ರೆಂಡ್ ಗುಜರಾತಿ ಆಗಿರೋದ್ರಿಂದ ಅಲ್ಪ-ಸ್ವಲ್ಪ ಗುಜರಾತಿ ನನಗೂ ಅರ್ಥವಾಗುತ್ತದೆ. ಗುಜರಾತಿ ಜನ ಸ್ನೇಹ ಜೀವಿಗಳು  ಮತ್ತು ತುಂಬಾ ಸಜ್ಜನಿಕೆಯ ಜನ. ಈ ಪ್ರವಾಸದೊಂದಿಗೆ ನಾ ಹೊತ್ತು ತಂದಿರುವ ಗುಜರಾತಿ ಶಬ್ದ ‘ವಾಂಧೋ  ನಹಿ’ (ಪರವಾಗಿಲ್ಲ). ಅದೆಷ್ಟು ಸಲ ನಾ ಆ ಶಬ್ದವನ್ನು ಪ್ರವಾಸದ ವೇಳೆಯಲ್ಲಿ ಕೇಳಿದೆನೋ ಲೆಕ್ಕವಿಲ್ಲ. ಬಸ್ ಚಲಿಸುತ್ತಿದ್ದಂತೆ ಕಿಟಕಿಯಿಂದ ಹೊರ ನೆಟ್ಟ ನೋಟಕ್ಕೆ ದೃಷ್ಟಿ ಸಾಗಿದಷ್ಟೂ ದೂರ ಕಂಡದ್ದು ಒಣ ನೆಲ, ಗಿಡ ಗಂಟಿಗಳಿಲ್ಲದ, ಮರ-ಗಿಡಗಳಿಲ್ಲದ ವಿಸ್ತಾರವಾದ ಒಣ ಭೂಮಿ. ಜಾಲಿಯ ಬೇಲಿ ಮಾತ್ರ ಕಣ್ಣಿಗೆ ಕಾಣುತ್ತಿದ್ದ ಹಸಿರು. ಆದರೂ ಕುರಿ ಹಿಂಡು,ಎತ್ತು, ಎಮ್ಮೆ, ಆಕಳುಗಳು ಆ ವಿಸ್ತಾರವಾದ ಭೂಮಿಯಲ್ಲಿ ಅದೇನು ಮೇಯುತ್ತಿದ್ದವೋ, ಅದೇನು ಮಾಡುತ್ತಿದ್ದವೋ ಎಂಬುದು ಸೋಜಿಗದ ಸಂಗತಿ.

ಮಾರ್ಗ ಮಧ್ಯದಲ್ಲೊಂದು ಚಾಯ್-ಬ್ರೇಕ್, ಅಲ್ಪ-ಸ್ವಲ್ಪ ಶಾಪಿಂಗ್ (ಯೆಸ್  ;-)) ಮತ್ತು ನಂದನ್ ಗೆ ಬೀದಿ ನಾಯಿಗಳಿಗೆ ಬಿಸ್ಕಿಟ್ ತಿನ್ನಿಸೋ ಖುಶಿ. ಈ ಪುಟ್ಟ ಖುಶಿಗಳಲ್ಲದೆಷ್ಟು ಖುಷಿ! ಮತ್ತೆ ಬಸ್  ಮುಂದುವರೆದು, ಸ್ವಲ್ಪ ಹೊತ್ತಲ್ಲೇ ನಾವು ತಲುಪಿದ್ದು ನಮ್ಮ actual destination of the trip – Dhordo Tent City, Rann Utsav. ಮೊದಲ ನೋಟದಲ್ಲೇ  ನಾ ಫಿದಾ! ಎಲ್ಲಿ ನೋಡಿದರಲ್ಲಿ ರಂಗು & ಬೆರಗು. Reception ನಲ್ಲಿ ತಿಲಕವಿಟ್ಟು traditional welcome. ಚೆಕ್-ಇನ್ ಗೆ ಸ್ವಲ್ಪ ಸಮಯ ತಗುಲಿತಾದರೂ, ಕಾಫಿ, ಚಹಾ, ನೀರು, ಕುಳಿತುಕೊಳ್ಳಲು ಆಸನಗಳು, ಪ್ಲೇ ಏರಿಯಾ ಮಕ್ಕಳಿಗಾಗಿ,  ವ್ಯವಸ್ಥೆಗಳಿದ್ದುದರಿಂದ ಕಾಯುವಿಕೆ ಬೇಸರ ತರಲಿಲ್ಲ.  ಆಗಲೇ ಕ್ಯಾಮೆರಾ ಕಾಯಕವೂ ಶುರುವಾಗಿತ್ತು. ಕಣ್ಣಿಗೆ , ಮನಸಿಗೆ ವಿಪರೀತ ಕೆಲಸ; ಕ್ಯಾಮೆರಾಗೂ ಅಲ್ಪ-ಸ್ವಲ್ಪ.

ರಣ್ ಉತ್ಸವ್ ನ ಪ್ರಮುಖ ಅಂಶ – ಟೆಂಟ್ ಸಿಟಿ. ವ್ಹೈಟ್ ರಣ್ ನಿಂದ ಸುಮಾರು ೭-೮ ಕಿ.ಮೀ. ದೂರದಲ್ಲಿ ಕೃತಕವಾಗಿ ನಿರ್ಮಿಸಲ್ಪಟ್ಟ ಈ ಟೆಂಟ್ ನಗರದಲ್ಲಿ ಏನುಂಟು-ಏನಿಲ್ಲ! ಹೆಸರೇ ಹೇಳುವಂತೆ, ಈ ನಗರದಲ್ಲಿ, ಎಲ್ಲಿ ನೋಡಿದರಲ್ಲಿ ಟೆಂಟ್ ಗಳು. ಒಟ್ಟು A ನಿಂದ I ವರೆಗೆ ಟೆಂಟ್ ನ ಗುಂಪುಗಳು. ಒಂದೊಂದು ಕ್ಲಸ್ಟರ್ ನಲ್ಲಿ ೪೫-೫೦ ಟೆಂಟ್ ಗಳು. ಪ್ರತಿ ಟೆಂಟ್ ನಲ್ಲಿ ಕನಿಷ್ಟ ಇಬ್ಬರು ಉಳಿದಿಕೊಳ್ಳಲು ಬೇಕಾಗುವ ಎಲ್ಲ ವ್ಯವಸ್ಥೆಗಳು. ಇದರ ಹೊರತಾಗಿ  Reception, Dining Hall, Kids Zone, Adventure Zone, Medical Facility ಇತ್ಯಾದಿ. ಇದು ಟೆಂಟ್ ಸಿಟಿಯ ಚಿತ್ರಣ.

ನಮಗೆ ದೊರೆತಿದ್ದ ಟೆಂಟ್ I-1. Reception ನಿಂದ ಅಲ್ಲಿಯವರೆಗೆ ಹೋಗಲು ಗಾಡಿಯ ವ್ಯವಸ್ಥೆ.  ಗಾಡಿಯೇರಿ ನಮ್ಮ ಕ್ಲಸ್ಟರ್ ತಲುಪಿದರೆ ಅದರ ಮೊದಲ ನೋಟವೂ ಚಂದ. ಅಥವಾ ಎಲ್ಲಾ ಮೊದಲ ನೋಟಗಳೂ ಚೆಂದವೇನಾ? ಅನ್ನೋ ಚಿಕ್ಕ ಸಂಶಯ! ನನ್ನ skeptical mind ಸುಮಾರು ಸಲ ಸಹಾಯಕಾರಿಯಾದರೂ, ಕೆಲವೊಮ್ಮೆ ಕಿರಿಕಿರಿ ಮಾಡುತ್ತದೆ.  ಸರಾಗವಾಗಿ ಕಳೆದು ಹೋಗಲು ಬಿಡುವುದಿಲ್ಲ. ನಂದನ್ ಕ್ಲಸ್ಟರ್ ನಲ್ಲಿ ಕಾಲಿಡುತ್ತಿದ್ದಂತೆ ಓಡಲು ಶುರುವಿಟ್ಟಿದ್ದ. ಅಷ್ಟೊಂದು ದೊಡ್ಡ ಜಾಗ. ಓಡಾಡಲು, ನೆಗೆದಾಡಲು, ಗಲಾಟೆ ಮಾಡಲು! ಜೊತೆಗೆ ಈಗವರು ಅಕ್ಷರಸ್ಥರು ಬೇರೆ; ತಕ್ಕ ಮಟ್ಟಿಗೆ ಇಂಗ್ಲೀಷ್ ಓದಿ ಬಿಡುತ್ತಾರೆ. ನಮಗಿಂತ ಮೊದಲು ಹೋಗಿ I-1 ತಲುಪಿದ್ದು ನಂದನ್. ಅವನಿಗೆ ಟೆಂಟ್ ನಲ್ಲಿ ಇರುವುದೆಂದರೆ ಅದೇನೋ excitement!

ಇಲ್ಲಿಯ  ಪ್ರತಿ ಟೆಂಟ್ ಬಟ್ಟೆಯಿಂದ ಮಾಡಿದ್ದು. ಬಟ್ಟೆಯ ತುಂಬೆಲ್ಲ ಪುಟ್ಟ-ಪುಟ್ಟ ಚಂದದ ಪ್ರಿಂಟ್. ಎರಡು ಬೆಚ್ಚನೆ ಹಾಸಿಗೆಗಳು, ಮೇಜು, ಕುರ್ಚಿ, ಹೀಟರ್, ಎ.ಸಿ., ಮತ್ತು ಬಚ್ಚಲು ಮನೆ. ಒಪ್ಪವಾಗಿ ಜೋಡಿಸಿಟ್ಟಿದ್ದ ನೀರಿನ ಬಾಟಲಿಗಳು, ಬರೆಯಲೆಂದೇ ಇಟ್ಟ ರಣ್ ಉತ್ಸವ್ ನ ಮುದ್ರಣವಿದ್ದ ಹಾಳೆಗಳು, ಜೊತೆಗೊಂದು ಸೀಸದ ಕಡ್ಡಿ. ಬಚ್ಚಲಿನಲ್ಲಿ ರಣ್ ಉತ್ಸವ್ ನ bathing kit. ಟೆಂಟ್ ಗೆ ಮತ್ತು ಟೆಂಟ್ ಒಳಗೇ ವಿಭಜಿಸಲ್ಪಟ್ಟ ಬಚ್ಚಲು ಮನೆಗೆ ಬಟ್ಟೆಯ ಬಾಗಿಲು with zip locking facility. ಹೊರಗಡೆ ಸಾಲು-ಸಾಲು ಟೆಂಟ್ ಗಳ ಎದುರು ವಿಶಾಲವಾದ ಪ್ರಾಂಗಣ, ಅದರ ಮೇಲೆ ಹಸಿರು ಬಟ್ಟೆಯ ಹೊದಿಕೆ. ಮಧ್ಯದಲ್ಲಿ ಒಂದೆರಡು ತೂಗು ಮಂಚಗಳು. ಟೆಂಟ್ ಗಳು ಮುಂದಿನ ಪ್ರಾಂಗಣಕ್ಕಿಂತ ಸ್ವಲ್ಪ ಎತ್ತರದ ಸ್ತರದಲ್ಲಿ ನಿರ್ಮಿಸಲ್ಪಟ್ಟಿರುವುದು. ಮತ್ತು ಆ ಸ್ತರದಲ್ಲಿನ ನೆಲವನ್ನು ನೋಡಿದರೆ,  ಸೆಗಣಿಯಿಂದ ಸಾರಿಸಿದ ನೆಲದ್ದೇ  ಹೋಲಿಕೆ, ಆದರೆ ಬಣ್ಣ  ಕಂದು ಅಷ್ಟೇ.

(ಮುಂದುವೆರಿಯುವುದು…)

‍ಲೇಖಕರು avadhi

March 29, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Anonymous

    ‘ವಾಂಧೋ ನಹಿ’ (ಪರವಾಗಿಲ್ಲ). alla ‘Wandho Nathi’…

    ಪ್ರತಿಕ್ರಿಯೆ
  2. ಮಂಜುಳಾ ಬಬಲಾದಿ

    ನಾನು ಪ್ರವಾಸದಲ್ಲೆಲ್ಲ ಕೇಳಿದ್ದು ‘ವಾಂಧೋ ನಹಿ’, ನನ್ನ ಒಂದಿಬ್ಬರು ಗುಜರಾತಿ ಗೆಳೆಯರನ್ನು ಕೇಳಿದರೆ, ಅವರು ಅದನ್ನು ಹಾಗೆ ಬಳಸಬಹುದು ಎಂದಿದ್ದರು. ಈಗ ‘ವಾಂಧೋ ನಥಿ’ ಎಂದು ತಿದ್ದಿದ್ದೀರ. ಧನ್ಯವಾದ. ವಾಂಧೋ ನಥಿ 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: