'ಛೇ ಏನರೇ ಮಾಡಿ ಹೊಟ್ಟಿ ಕರಗಸಬೇಕು’ – ಗುರುಪ್ರಸಾದ್ ಲಹರಿ

ಲಿಫ್ಟನ್ನು, ಅದರಲ್ಲಿದ್ದ ಬಳಕುವ ಬಳ್ಳಿಯನ್ನೂ ತ್ಯಾಗ ಮಾಡಿದ.


ಗುರುಪ್ರಸಾದ ಕುರ್ತಕೋಟಿ

ಕನ್ನಡಿ ಎದುರು ನಿಂತ ಗಣೇಶನ ಕಣ್ಣುಗಳು ತನ್ನದೇ ಪ್ರತಿಬಿಂಬದಲ್ಲಿ ಕಾಣುತ್ತಿದ್ದ ಡುಮ್ಮ ಹೊಟ್ಟೆಯನ್ನೇ ಗಾಬರಿಯಿಂದ ಗಮನಿಸುತ್ತಿದ್ದವು. ಎಷ್ಟು ಸಣ್ಣಗಿದ್ದವನು ಹಿಂಗ್ಯಾಕಾದೆ ಅಂತ ಯೋಚಿಸುತ್ತಿರುವಂತೆ, “ಏನ ನೋಡಕೋತ ನಿಂತ್ರಿ ? ” ಅಂತ ಹೆಂಡತಿ ಜಾನು ಎಚ್ಚರಿಸಿದಾಗ, “ಏನೂ ಇಲ್ಲಾ, ಹಂಗ ಸುಮ್ನ ..” ಅಂತೇನೋ ಬಡಬಡಿಸಿ ಕೈಗೆ ಸಿಕ್ಕ ಪ್ಯಾಂಟೊಂದನ್ನು ಏರಿಸಿಕೊಂಡು ಉಸಿರು ಬಿಗಿ ಹಿಡಿದು ಹೊಟ್ಟೆ ಒಳಗೆ ತಂದುಕೊಂಡು, ಹರಸಾಹಸದಿಂದ ಇನ್ ಶರ್ಟ್ ಮಾಡಿಕೊಳ್ಳುವಷ್ಟರಲ್ಲಿ ಒಂಭತ್ತಾಗಿತ್ತು. ಇವತ್ತೇನು ಟಿಫಿನ್ನು ಅಂತ ವಾಸನೆಯಿಂದಲೇ ಗ್ರಹಿಸುವ ವ್ಯರ್ಥ ಪ್ರಯತ್ನ ಮಾಡಿ ಅರ್ಥವಾಗದೇ ಹೆಂಡತಿಯನ್ನು ಪ್ರಶ್ನಾರ್ಥಕವಾಗಿ ನೋಡಲಾಗಿ “ಇಡ್ಲಿ ಮಾಡೇನಿ” ಅಂತ ಅವಳು ಅಂದಾಗ ಅವನ ಮೈ ಝುಮ್ ಅಂತು. ಈ ಥರ ಇಡ್ಲಿ, ದ್ವಾಸಿ ಅಂತೆಲ್ಲ ತಿಂದೇ ತನ್ನ ಈ ಪರಿಸ್ಥಿತಿ ಆಗಿರುವುದು ಅಂತ ಅವನಿಗೆ ಮನದಟ್ಟಾಯ್ತು. “ಇವತ್ತ್ಯಾಕೊ ಹಸಿವಿಲ್ಲಾ, ಬರೆ ಹಾಲು ಕೊಟ್ಟು ಬಿಡು” ಅಂದಾಗ, ಜಾನು ಮುಖ ಮಾತಾಡದೆನೇ “… ಈಗ ಮಾಡಿದ್ದೇನು ನಾಯಿಗೆ ಹಾಕ್ಲ್ಯಾ?” ಅನ್ನುತ್ತಿರುವಂತೆ ಭಾಸವಾಗಿ, “ಇರ್ಲಿ ಬಿಡು ಒಂದೆರಡು ಇಡ್ಲಿ ಕೊಡು. ನೀ ಮಾಡಿದ ಇಡ್ಲಿ ತಿನ್ನದ ಹೋಗಲಿಕ್ಕೆ ಮನಸ್ಸು ಒಪ್ಪುದಿಲ್ಲಾ ” ಅಂದಾಗ ಜಾನುನ ಮುಖ ನಾಚಿಕೆಯಿಂದ ಮಸಾಲೆ ದೋಸೆಯಂತೆ ಕೆಂಪಗಾಗಿತ್ತು. ಎರಡು ಇಡ್ಲಿ ಅಂದವನು ಹನ್ನೆರಡು ತಿಂದು ಆಬ್ ಅಂತ ತೇಗಿ ಹೊಟ್ಟೆ ಮೇಲೆ ಕೈ ಆಡಿಸಿಕೊಂಡ. ಅದು ಇನ್ನೂ ದೊಡ್ಡದಾಗಿತ್ತು.

ಕಾರಿನಲ್ಲಿ ಕೂತವನ ಹೊಟ್ಟೆಗೆ ಸ್ಟೇರಿಂಗು ತಾಗುತ್ತಿತ್ತು. ’ಛೇ ಏನರೇ ಮಾಡಿ ಹೊಟ್ಟಿ ಕರಗಸಬೇಕು’ ಅಂತ ಅಚಲ ನಿರ್ಧಾರ ಅವನು ಮಾಡಿ ಆಗಿತ್ತು. ಹಾಗೂ ಹೀಗೂ ಬೆಂಗಳೂರಿನ ಹೊಂಡಗಳ ನಡುವಿನ ರಸ್ತೆಯಲ್ಲಿ ತೇಲುತ್ತ ಸಾಗಿದಾಗಲೆಲ್ಲಾ ಹೊಟ್ಟೆ ತುಂಬಿದ ಕೊಡದಂತೆ(?)  ತುಳುಕಿ ತನ್ನ ಅಸ್ತಿತ್ತ್ವವನ್ನು ನೆನಪಿಸುತ್ತಿತ್ತು. ಆಫೀಸಿನ ಕಟ್ಟಡದ ಲಿಫ್ಟಿನ ಹತ್ತಿರ ಹೋದವನಿಗೆ, ಬಳಕುವ ಬಳ್ಳಿ ಲತಾ ’ಹಾಯ್’ ಅಂತ ಕೈ ಮಾಡಿದಾಗ, ಹೊಟ್ಟೆಯ ಬಗ್ಗೆ ಮೂಡಿದ್ದ ಅಸಮಾಧಾನ, ಬೇಸರವೆಲ್ಲಾ ಮಾಯವಾಗಿ ಲವಲವಿಕೆ ಮೂಡಿತ್ತು! ಹತ್ತಿರ ಹೋಗಿ ಕೈ ಕುಲುಕುತ್ತಿದ್ದಂತೆ ಘಂ ಅಂತ ಗಾಳಿಯಲ್ಲಿ ತೇಲಿ ಬಂದ ಅವಳ ಪರ್ ಫ್ಯುಮ್ ವಾಸನೆಗೆ ತಲೆ ತಿರುಗಿ ಝೋಲಿ ತಪ್ಪಿದಂತಾಗಿ ಹೆಂಗೋ ಮಾಡಿ ಸಾವರಿಸಿಕೊಂಡನವನು. ಇವಳು ಪರ್ ಫ್ಯುಮ್ ನಲ್ಲೇ ದಿನಾಲೂ ಸ್ನಾನ ಮಾಡುತ್ತಾಳೇನೊ ಅಂತ ವಿಚಾರಮಗ್ನನಾದನು. ಇಲ್ಲಾಂದರೆ ಅಷ್ಟು ಘಾಟು ವಾಸನೆ ಬರಲು ಹೇಗೆ ಸಾಧ್ಯ?! ಸಧ್ಯ ಲಿಫ್ಟು ಬಂತು,  ಇನ್ನೇನು ಲತಾಳೊಂದಿಗೆ ಉಮೇದಿಯಿಂದ ಒಳಗೆ ನುಗ್ಗಬೇಕೆನ್ನುವಷ್ಟರಲ್ಲಿ ತನ್ನ ಹೊಟ್ಟೆಯ ನೆನಪಾಗಿ ಹಿಂದೆ ಸರಿದನವನು, ಲಿಫ್ಟಿನಲ್ಲಿ ಹೋಗುವ ಬದಲು ಮೆಟ್ಟಿಲೇರಿಯೆ ಹೋಗಿ ಸ್ವಲ್ಪ ಹೊಟ್ಟೆ ಇವತ್ತು ಕರಗಿಸಿಯೇಬಿಡುವುದೆಂಬ ದಿಟ್ಟ ನಿರ್ಧಾರ ತೊಗೊಂಡು ಮೇಲೆ ಹೋಗುತ್ತಿರುವ ಲಿಫ್ಟನ್ನು, ಅದರಲ್ಲಿದ್ದ ಬಳಕುವ ಬಳ್ಳಿಯನ್ನೂ ತ್ಯಾಗ ಮಾಡಿದ.

ಲತಾ ಮಾತ್ರ ಇವನು ಬಹುಶಃ, ಮೇನಕೆಯನ್ನು ತಿರಸ್ಕರಿಸಿದ ವಿಶ್ವಾಮಿತ್ರನ ಅಪರಾವತಾರನೇ ಇರಬೇಕು ಎಂಬಂತೆ ಕೆಕ್ಕರಿಸಿ ನೋಡುತ್ತಿರುವಲ್ಲಿಗೆ ಲಿಫ್ಟಿನ ಬಾಗಿಲು ತಂತಾನೇ ಮುಚ್ಚಿಕೊಂಡು, ಜೀವನಪೂರ್ತಿ ಗಡಿಬಿಡಿಯಲ್ಲಿಯೇ ಇರುವ ಮಾನವ ಜೀವಿಗಳನ್ನು ಹೊತ್ತು ಲಗುಬಗೆಯಿಂದ ಸಾಗಿತು. ಅದಕ್ಕೂ ಅವಸರವೇ, ಪಾಪ! ಇವನ ಆಫೀಸು ಇರುವುದು ಆರನೇ ಮಹಡಿಯಲ್ಲಿ. ಮೊದಲೆರಡು ಮಹಡಿಗಳನ್ನು ತೇನ್ಸಿಂಗ ನನ್ನೂ ನಾಚಿಸುವಂತೆ ಅಬ್ಬರಿಸಿ ನುಗ್ಗಿದವನಿಗೆ ಮುಂದಿನ ನಾಲ್ಕು ಮಹಡಿಗಳನ್ನೇರುವುದರೊಳಗಾಗಿ ತಿಂದ ಇಡ್ಲಿಗಳು ಕರಗಿ ತಲೆ ಸುತ್ತು ಬಂದಿತ್ತು. ಅಂತೂ ಹರ ಸಾಹಸ ಪಟ್ಟು ತನ್ನ ಜಾಗಕ್ಕೆ ತಲುಪಿ ಉಸ್ಸಪ್ಪಾ ಅಂತ ನಿಟ್ಟುಸಿರಿಟ್ಟನು.

ಇವನಿಗೆ ಆ ದಿನ ಕೆಲಸ ಮಾಡಲು ಮನಸ್ಸಿರಲಿಲ್ಲ, ತಲೆಯಲ್ಲಿ ಕೊರಿತಿದ್ದದ್ದು ಬರೀ ಹೊಟ್ಟೆ ಕರಗಿಸುವ ಚಿಂತೆ! ಅಂತರ್ಜಾಲದಲ್ಲೇನಾದರೂ ಟಿಪ್ಸ್ ಇರಲೇಬೇಕಲ್ಲವೇ ಅಂತ ಗೂಗಲ್ ನಲ್ಲಿ “ಹೊಟ್ಟೆ ಕರಗಿಸುವ ಬಗೆ” ಅಂತ ಟೈಪ್ ಮಾಡಿ ಕೂತವನಿಗೆ ನಿರಾಸೆಯಾಗಲಿಲ್ಲ. ಬಗೆ ಬಗೆಯ ಕಸರತ್ತುಗಳನ್ನು ಫೋಟೋದ ಸಮೇತ ವಿವರಿಸಿದ್ದರು. ಆದರೆ ಫೋಟೊದಲ್ಲಿರುವವರೆಲ್ಲ ಬಳಕುವ ಬಳ್ಳಿಗಳೆ! ಹೊಟ್ಟೆ ಇದ್ದವರ ಕಷ್ಟ ಅವರಿಗೇನು ಗೊತ್ತು. ಈ ಪರಿ ಹೊಟ್ಟೆ ಇಟ್ಟುಕೊಂಡು ಆ ಥರ ಕಸರತ್ತು ಮಾಡಲು ಸಾಧ್ಯವೆ ಎನ್ನುವ ಸಾಮಾನ್ಯ ಪರಿಜ್ನ್ಯಾನವೂ ಇಲ್ಲ ದುರುಳರಿಗೆ ಅಂತ ಬೈದುಕೊಂಡಿರುವಾಗಲೆ,  ಬಳಕುವ ಬಳ್ಳಿ ಲತ ಇವನ ಬಳಿ ಬಂದಳು.  “ಕಾಫಿಗೆ ಬರ್ತೀರಾ” ಅಂತ ವೈಯ್ಯಾರದಿಂದ ಅಹ್ವಾನಿಸಿದಾಗ ತಿರಸ್ಕರಿಸುವ ಧೈರ್ಯ ಅಥವಾ ಮನಸ್ಸು ಯಾರಿಗಿತ್ತು? ಎದ್ದೇ ಬಿಟ್ಟಾ… ಅದು ಇದು ಅಂತ ಹರಟುತ್ತಾ ಕಾಫಿ ಸವಿಯುತ್ತಿರುವಾಗಲೆ ಲತಾ ತಾನು ದಿನಾ ಬೆಳಿಗ್ಗೆ ಐದು ಕಿಲೋಮೀಟರ್ ಸೈಕಲ್ ತುಳಿಯುತ್ತೇನೆ ಅಂತ ಹೇಳಿ ಇವನ ಕಣ್ಣಲ್ಲಿ ಹೊಳಪು ಮೂಡಿಸಿದಳು. ’ಒಹೋ ಇದೋ ಈ ಬಳಕುವ ಬಳ್ಳಿಯ ಗುಟ್ಟು’ ಅಂತ ಮನಸ್ಸಿನಲ್ಲಿ ಯೋಚಿಸಿದವನಿಗೆ ಹೊಟ್ಟೆ ಕರಗಿಸುವುದಕ್ಕೊಂದು ಉಪಾಯ ಸಿಕ್ಕಿತ್ತು.

ಅವತ್ತು ಸ್ವಲ್ಪ ಬೇಗನೇ ಮನೆಗೆ ಹೊರಟು ಬಂದವನ ನೋಡಿ ಜಾನು “ಯಾಕ ಇಷ್ಟು ಲೊಗುನೇ ಬಂದ್ರಿ” ಅಂತ ಅಚ್ಚರಿಯಿಂದ ಕೇಳಿದಳು. ಈ ಹೆಂಡತಿಯರೇ ವಿಚಿತ್ರ, ತಡವಾಗಿ ಬಂದರೂ ಅವರಿಗೆ ಕಾರಣ ಬೇಕು, ಬೇಗ ಬಂದರೂ ವಿವರಿಸಬೇಕು!… “ಇವತ್ತ ಒಂದು ಹೊಸಾ ಸೈಕಲ್ಲು ತೊಗೊಬೇಕು, ಲೊಗೂನ ತಯಾರಾಗು” ಅಂದವನನ್ನು ಇನ್ನೂ ಅಶ್ಚರ್ಯದಿಂದ ನೋಡುತ್ತಿದ್ದವಳಿಗೆ, ಈ ಐಡಿಯಾ ಕೊಟ್ಟದ್ದು ಲತಾ ಅಂತ ಹೇಳುವಷ್ಟು ಮುರ್ಖನೆ ಅವನು? “ನಾನು ಇನ್ನ ಮ್ಯಾಲೆ ಮುಂಜಾನೆ ಸೈಕಲನ್ಯಾಗ ೫ ಕಿಲೋಮೀಟರು ಓಡಸ್ತೀನಿ. ಮುಂಜಾನೆ ಹಾಲೂ ನಾನ ತರ್ತೀನಿ. ಹೊಟ್ಟಿ ಕರಗಸಬೇಕು ಅಂದ್ರ ಏನಾದ್ರೂ ಮಾಡಬೇಕಲ್ಲ?”

ಜಾನುಗೆ ಖುಷಿಯಲ್ಲಿ ಏನು ಹೇಳಬೇಕೆಂದು ತೋಚಲಿಲ್ಲ. ಒಳ್ಳೆ ಬುಧ್ದಿ ಕೊಟ್ಟ ಸಕಲ ದೇವಗಣಕ್ಕೆ ಮನಸ್ಸಿನಲ್ಲೇ ನಮಿಸಿದಳು. ಸಣ್ಣ ಪುಟ್ಟ ಕೆಲಸಕ್ಕೂ ಕಾರಿನಲ್ಲೇ ಹೋಗುತ್ತಿದ್ದ ಗಂಡ ಇನ್ನು ಮುಂದೆ ಸೈಕಲ್ಲು ತುಳಿಯುತ್ತ ಹೋಗುವುದನ್ನು ಕಲ್ಪಿಸಿಕೊಂಡು ಪುಳಕಗೊಂಡಳು. ತಿಂಗಳಿಗೊಂದು ಎರಡು ಸಾವಿರ ರುಪಾಯಿ ಪೆಟ್ರೋಲು ಉಳಿತಾಯವಾಗುವುದನ್ನು ಅಂದಾಜಿಸಿ ಖುಷಿ ಪಟ್ಟಳು. ಅವತ್ತೇ ಇಬ್ಬರೂ ಮಾರ್ಕೆಟ್ಟಿಗೆ ಹೋಗಿ ಗೇರುಗಳಿರುವ ಹೈಫೈ ಸೈಕಲ್ಲೊಂದನ್ನು ಹದಿನೈದು ಸಾವಿರ ಕೊಟ್ಟು ತಂದೂ ಆಯಿತು. ಬರೀ ಸೈಕಲ್ಲಷ್ಟೆ ಸಾಕೆ? ಕೈಗೊಂದು ಗ್ಲೌಸು, ಪಾದಗಳಿಗೆರಡು ಚಂದನೆಯ ಬೂಟುಗಳು, ತಲೆಗೊಂದು ಹೆಲ್ಮೇಟು… ಅಬ್ಬಬ್ಬಬ್ಬಾ ಒಳ್ಳೆ ಮದುವೆ ತಯಾರಿಯಂಗಿತ್ತು!  ಮನೆಗೆ ತಂದವನೇ ಅದರಲ್ಲಿ ಕೂತು ಬೇರೆ ಬೇರೆ ಯ್ಯಾಂಗಲ್ ನಲ್ಲಿ ಫೋಟೊ ತೆಗೆಸಿಕೊಂಡು, ಫೇಸ್ ಬುಕ್ಕಿನಲ್ಲಿ ಹಾಕಿ ಸ್ನೇಹಿತರಿಂದ ಲೈಕು, ಕಮೆಂಟುಗಳ ಸುರಿಮಳೆಗಳನ್ನ ಕಣ್ತುಂಬಾ ನೋಡಿದವನಿಗೆ ಅವತ್ತು ರಾತ್ರಿ ನಿದ್ದೆ ಬರುವುದೇ ದುಸ್ತರವಾಯ್ತು. ಹಾಗೂ ಹೀಗು ಹೊರಳಾಡಿ ರಾತ್ರಿ ನಿದ್ರಾದೇವಿ ಅವರಿಸಿಕೊಂಡಾದ ಮೇಲೆ, ರಾತ್ರಿಯಲ್ಲಾ ಕನಸಿನಲ್ಲೆಲ್ಲಾ ಸೈಕಲ್ಲೆ!

ಬೆಳಿಗ್ಗೆ ಬೇಗ ಎದ್ದವನೆ ತನ್ನ ತೂಕ ೮೦ ಇರುವುದನ್ನು ಖಚಿತಪಡಿಸಿಕೊಂಡ. ಯಾಕೆಂದರೆ ಒಂದು ತಿಂಗಳ ನಂತರ ಎಷ್ಟು ಕಡಿಮೆಯಾಯಿತೆಂಬುದರ ಅಂದಾಜು ಬೇಕಲ್ಲವೆ? ತದ ನಂತರ ಜೊತೆಗೆ ತಂದ ಎಲ್ಲ ಪರಿಕರಗಳನ್ನು ಧರಿಸಿಕೊಂಡು ಒಳ್ಳೆ ಯುಧ್ಧಕ್ಕೆ ಹೊರಟವನಂತೆ,  ಸೈಕಲ್ಲು ತುಳಿಯುತ್ತ ರೋಡಿನಲ್ಲಿ ಹೋಗುತ್ತಿದ್ದರೆ ಒಂಥರ ನಾಚಿಕೆ! ಉಮೇದಿನಲ್ಲಿ ಸುಮಾರು ಐದು ಕಿಲೋಮೀಟರು ಸೈಕಲ್ಲು ತುಳಿದು ಮನೆಗೆ ಬಂದವನ ಕಾಲುಗಳು ಮಾತಾಡಲು ತೊಡಗಿದ್ದವು.  ಇವನ ಉಮೇದಿ ಎಷ್ಟು ದಿನವೋ ಅಂತ ಅತಂಕದಿಂದಿದ್ದ ಜಾನುಗೆ  ದಿನಾಲು ರೆಗುಲರ್ ಆಗಿ ಸೈಕಲ್ಲು ಹೊಡೆಯಲು ಶುರು ಮಾಡಿ  ಆಶ್ಚರ್ಯ ತಂದನಲ್ಲದೇ, ಯಾವುದಾದರು ಹುಡುಗಿ ಹಿಂದೆ ಬಿದ್ದಿರಬಹುದೆಂಬ ಗುಮಾನಿಯನ್ನೂ ಹುಟ್ಟು ಹಾಕಿದ! ಹಾಗಿರಲಿಕ್ಕಿಲ್ಲ, ತನಗಿಂತ ಪೆದ್ದ ಹುಡಿಗಿ ಹತ್ತಿರದಲ್ಲ್ಯಾರೂ ಇರಲಿಕ್ಕಿಲ್ಲ ಅಂತ ಸಮಾಧಾನ ಮಾಡಿಕೊಂಡಳು! ಅದೂ ಅಲ್ಲದೇ, ದಿನಾಲು ಹಾಲು ತಾನೇ ತಂದು, ಚಹಾ ಕೂಡ ತನ್ನ ಕೈಯಾರೆ ಮಾಡಿಕೊಂಡು ಕುಡಿಯುವ ಗಂಡ ಯಾರಿಗೆ ತಾನೆ ಇಷ್ಟವಾಗುವುದಿಲ್ಲ? ಹೀಗೆ ಒಂದು ತಿಂಗಳು ಕಳೆಯಿತು. ಕಾರಿನ ದುರ್ಬಳಕೆಯೂ ಕಡಿಮೆಯಾಗಿತ್ತು. ಎರಡು ಕೇಜಿ ತೂಕ ಕಡಿಮೆಯಾಗಿದ್ದೂ ಒಂದು ದೊಡ್ಡ ಸಾಧನೆಯೇ ಆಗಿತ್ತು. ಗಂಡ ಹೆಂಡತಿ ಕೂತುಕೊಂಡು ಒಂದು ತಿಂಗಳಲ್ಲಿ ಎಷ್ಟು ಉಳಿತಾಯವಾಗಿರಬಹುದೆಂದು ಲೆಕ್ಕ ಹಾಕಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು!

ಮತ್ತೆ ಒಂದಿಷ್ಟು ಫೋಟೊ ತೆಗೆದು ಬಿಫೋರ್ – ಆಫ್ಟರ್  ಅಂತ ಫೇಸ್ ಬುಕ್ಕಿನಲ್ಲಿ ಹಾಕಿ ಲೈಕುಗಳ ಗಿಟ್ಟಿಸಿಕೊಂಡಾಯ್ತು. ಅದೇನೋ ವಿಚಿತ್ರ, ತಮ್ಮ ಜೀವನದ ಹೆಚ್ಚು ಕಡಿಮೆ ಎಲ್ಲ ಚಟುವಟಿಕೆಗಳನ್ನು ಫೇಸ್ ಬುಕ್ಕಿನಲ್ಲಿ ಹಾಕಿಕೊಂಡು ತೋರಿಸಿಕೊಳ್ಳುವ ಈಗಿನ ಹುಡುಗ ಹುಡುಗಿಯರಿಗೆ, ತಮ್ಮ ಜೀವನವೇ ಅಲ್ಲಿ ಒಂದು ಓಪನ್ ಬುಕ್ ಆಗುವುದು ಅರಿವಿಗೇ ಬರುವುದೇ ಇಲ್ಲ!

ಹೀಗಿರುವಾಗ ಒಂದು ದಿನ…. ರೋಡಿನಲ್ಲಿ ಸೈಕಲ್ಲು ಒಳ್ಳೆ ಸ್ಟೈಲಿನಲ್ಲಿ ಹೊಡೆದುಕೊಂಡು ಹೋಗುತ್ತಿರುವಾಗ, ರೋಡಿನಲ್ಲಿ ಹೊಚ್ಚ ಹೊಸದಾಗಿ ಹಿಂದಿನ ರಾತ್ರಿ ನಿರ್ಮಾಣವಾಗಿದ್ದ ಹೊಂಡದಲ್ಲಿ ತಿಳಿಯದೇ ನುಗ್ಗಿಸಿಬಿಟ್ಟ. ಪರಿಣಾಮವಾಗಿ ಕೈಗೆ ಬಲವಾಗಿ ಪೆಟ್ಟು ಮಾಡಿಕೊಂಡುಬಿಟ್ಟ ಪಾಪ! ಅಂತೂ ಯಾರೋ ಪುಣ್ಣ್ಯಾತ್ಮರು ಅವನನ್ನು ಆಸ್ಪತ್ರೆಗೆ ಸಾಗಿಸಿ, ಹೆಂಡತಿಗೆ ಫೋನು ಮಾಡಿ ವಿಷಯ ತಿಳಿಸಿದರು. ಕೈಯ ಒಳಗಡೆಯ ಕೀಲು ಮುರಿದಿದ್ದರಿಂದ ಅಲ್ಲೊಂದೆರಡು ಮೊಳೆ ಬಡಿಯಲೇಬೇಕಾಯ್ತು!  ಹಂಗೇ ಬಡಿಯಲಾದೀತೆ? ತೋಳಿನ ಮೇಲೆ ಉದ್ದಕ್ಕೊಂದು ಗಾಯ ಮಾಡಿ ಶಸ್ತ್ರ ಪ್ರಯೋಗ ಮಾಡಿದ್ದರು.  ಚಿಕಿತ್ಸೆ ಮಾಡಿದ ಡಾಕ್ಟರು ನೀವು ಇನ್ನೂ ಒಂದು ತಿಂಗಳು ಮನೇಲೇ ರೆಸ್ಟು ತೊಗೊಬೇಕು ಅಂತ ಅಪ್ಪಣೆ ಹೊರಡಿಸಿದರು. ಇನ್ನೇನು ಮಾಡೊದು, ಮಾಡಿದ್ದುಣ್ಣೊ ಮಹರಾಯ ಅಂತ… ಅನುಭವಿಸಲೇಬೇಕಲ್ಲವೇ? ….

ಮನೆಯಲ್ಲಿ ಇದ್ದು ಇದ್ದು ಬೇಜಾರಾದಾಗತೊಡಗಿತು. ಬೇಜಾರು ಕಳೆಯಲು ಅದು ಇದು ಅಂತ ಕುರುಕಲು ಜಂಕ್ ತಿಂಡಿ ತಿನ್ನಲು ಶುರು ಹಚ್ಚಿಕೊಂಡ. ಕಾಲಿಗೂ ಸ್ವಲ್ಪ ಏಟಾಗಿದ್ದರಿಂದ ಅಡ್ಡಾಡುವುದು ಕಷ್ಟವಾಗುತ್ತಿತ್ತು. ಇವೆಲ್ಲ ಕಾರಣಗಳಿಂದ ೨ ಕೇಜಿ ಕಡಿಮೆ ಮಾಡಿಕೊಂಡಿದ್ದ ತೂಕ ೫ ಕೇಜಿ ಹೆಚ್ಚಾಗಿ ೮೩ ಕ್ಕೆ ಬಂದು ಮುಟ್ಟಿತು! ಹೊಟ್ಟೆ ಇನ್ನೂ ದೊಡ್ಡದಾಯ್ತು. ಆಸ್ಪತ್ರೆಯ ಖರ್ಚು ಎಲ್ಲಾ ಸೇರಿ ಸೈಕಲ್ಲು ತಂದು ಉಳಿಸಿದ್ದ ಹಣದ ಹತ್ತು ಪಟ್ಟು ಖರ್ಚಾಗಿತ್ತು. ಈ ಸೈಕಲ್ಲಿನ ಐಡಿಯಾ ಕೊಟ್ಟ ಲತಾ ಮೇಲೆ ಸಿಕ್ಕಾಪಟ್ಟೆ ಕೋಪ ಬಂತವನಿಗೆ. ಹೀಗೆ ಕೋಪದಿಂದಿರುವಾಗಲೇ ಲತಾ ಇವನ ಆರೋಗ್ಯ ವಿಚಾರಿಸಲು ಉಳಿದ ಸಹೋದ್ಯೋಗಿಗಳೊಂದಿಗೆ ಇವನ ಮನೆಗೆ ಬಂದಾಗ, ನೀನು ಕೊಟ್ಟ ಹಾಳು ಐಡಿಯಾದಿಂದಲೇ ಹೀಗಾಗಿದ್ದು ಅಂತ ಅವಳಿಗೆ ಅರುಹಿದನು. ಅದಕ್ಕವಳು ಬಿದ್ದು ಬಿದ್ದು ನಗಲು ಶುರು ಮಾಡಿದಾಗ ಇವನಿಗೆ ಕೆಂಡದಂಥ ಕೋಪ ಬಂತು ಆಗ ಲತಾ ತನ್ನ ಸಹಜ ವೈಯಾರದಿಂದ ಹೇಳಿದಳು “ನಾನು ತುಳಿಯೋದು ಈ ಸೈಕಲ್ಲ್ ಅಲ್ಲಾರಿ, ಮನೇಲೇ ನಿಂತಲ್ಲೆ ತುಳಿಯೋ ಸೈಕಲ್ಲು.  ನೀವು ಅವತ್ತು ನನ್ನ ಮಾತು ಪೂರ್ತಿ ಕೇಳಲೇ ಇಲ್ಲ” ಅಂದಾಗ, ಅವನು ಮಾತು ಬದಲಾಯಿಸಲೇ ಬೇಕಾಯ್ತು! ಅಂತೂ ಹೊಟ್ಟೆ ಕರಗಿಸುವ ಕನಸು ಸಧ್ಯಕ್ಕೆ ಕನಸಾಗಿಯೇ ಉಳಿದಿತ್ತು. ಆದರೆ ಲತಾ ತನ್ನ ಮನೆಗೆ ಹೋದ ಮೇಲೆ ಇವನ ಕೈ, ಕಾಲು ಮುರಿದುಕೊಂಡಿರುವ ಫೋಟೊ ಫೇಸ್ ಬುಕ್ ನಲ್ಲಿ ಹಾಕಿ ಸಿಕ್ಕಾಪಟ್ಟೆ ’ಲೈಕು’ಗಳ ಗಳಿಸಿ ಗಣೇಶನಿಗೊಂದಿಷ್ಟು ’ಮರುಕ’ಗಳ ಸುರಿಮಳೆಗೆ ಕಾರಣಳಾದಳು . ಜಾನುಗೆ ಲತಾಳ ಕೈ ಮುರಿಯುವಷ್ಟು ಸಿಟ್ಟು ಬಂದಿರುವುದ ಗಮನಿಸಿದ ಗಣೇಶ ಅವಳ ಕಣ್ಣು ತಪ್ಪಿಸಿದನು!

ಸ್ವಲ್ಪ ದಿನ ಕಳೆದಂತೆ ಗಾಯವೇನೋ ಮಾಯ್ದಿತ್ತು, ಆದರೆ ಉದ್ದಕ್ಕೆ ಡಾಕ್ಟರ್ ಕೊರೆದು ಹಾಕಿದ್ದ ಹೊಲಿಗೆ ಗುರುತು ಹಾಗೆ ಉಳಿಯಿತು. ಅದೊಂಥರ ಭಯಾನಕವಾಗಿ ಕಾಣುತ್ತಿತ್ತು. ತುಂಬು ತೋಳಿರುವ ಅಂಗಿ ಹಾಕಿದಾಗ ಕಾಣುತ್ತಿರಲಿಲ್ಲವಾದ್ದರಿಂದ ಫುಲ್ ಶರ್ಟ್ ಹಾಕಿಕೊಳ್ಳುವದು ಅನಿವಾರ್ಯವಾಗಿತ್ತವನಿಗೆ. ಒಂದು ದಿನ ಕಚೇರಿಯ ಕೆಲಸ ಮುಗಿಸಿ ಮನೆಗೆ ಬರುವುದು ತಡವಾಯ್ತು. ಅದೂ ಅಲ್ಲದೇ ಮಳೆಗಾಲದ ಸಮಯವಾದ್ದರಿಂದ ರಪ ರಪ ಮಳೆ ಬೇರೆ ಹೊಡೆಯುತ್ತಿತ್ತು. ಕಾರಿನಲ್ಲಿ ವೈಪರ್ ಹಾಕಿಕೊಂಡು, ಯವುದೋ ಹಳೆಯ ಹಾಡೊಂದನ್ನು ಕೇಳುತ್ತಾ ಬರುತ್ತಿದ್ದಾಗಲೇ, ಮನೆಗೆ ಸ್ವಲ್ಪ ಮುಂಚೆ ತಿರುಗುವ ತಿರುವಿನಲ್ಲಿ ಯಾವನೊ ಪುಣ್ಣ್ಯಾತ್ಮ ಎದುರುಗಡೆಯಿಂದ ಬೈಕಿನಲ್ಲಿ ಬಂದವನು ಇವನ ಕಾರಿಗೆ ಹೊಡೆದು ಧುಪ್ ಅಂತ ಬೀಳುವುದಕ್ಕೂ, ಮಳೆ ನಿಲ್ಲುವುದಕ್ಕೂ ಸರಿ ಹೋಯ್ತು. ಕಾರು ನಿಲ್ಲಿಸಿ ಬಿದ್ದವನಿಗೆ ಏನಾಯ್ತೋ ಅಂತ ಗಾಬರಿಯಿಂದ, ಕಾರಿನಿಂದ ಇಳಿದು ಹೊರಗೆ ಬಂದು ನಿಂತ ಗಣೇಶನಿಗೆ, ಬಿದ್ದವನಿಗೆ ಅಷ್ಟೇನು ಏಟಾಗಿಲ್ಲದಿದ್ದದ್ದು ಸಮಾಧಾನ ತಂದಿತ್ತು. ಅದೂ ಅಲ್ಲದೇ ಬೈಕಿನವನದೇ ತಪ್ಪಿದ್ದುದರಿಂದ, ಹಾಗೂ ಅದು ಬೈಕಿನ ಸವಾರನಿಗೆ ಅರಿವಾಗಿದ್ದರಿಂದಲೋ ಏನೊ ಅಲ್ಲಿ ಗಲಾಟೆಯಾಗುವ ಮುನ್ಸೂಚನೆಗಳಿರಲಿಲ್ಲ. ಆದರೆ ಅಲ್ಲಿ ಆಗಲೇ ಜಮಾಯಿಸಿದ್ದ ಎರಡು ಮೂರು ಜನರಿಗೆ ಅದು ಖಂಡಿತ ಇಷ್ಟವಾಗಲಿಲ್ಲ! ಅರೇ ಇಷ್ಟೆಲ್ಲ ಆದ ಮೇಲು ಜಗಳವಾಗಿಲ್ಲವೆಂದರೆ ಹೇಗೆ ಅಂತ  ಅವರಲ್ಲೊಬ್ಬ ಗಣೇಶನಿಗೆ ತರಾಟೆಗೆ ತೆಗೆದುಕೊಂಡು “ಎನಯ್ಯಾ ಹಿಂಗಾ ನೀನು ಕಾರು ಓಡ್ಸೋದು? ಯಾರು ನಿನಗೆ ಲೈಸನ್ಸು ಕೊಟ್ಟಿದ್ದು?” ಅಂತ ವಿಚಾರಣೆಗೆ ಶುರು ಮಾಡಿ ಗಣೇಶನಿಗೆ ತಬ್ಬಿಬ್ಬು ಮಾಡಿಬಿಟ್ಟ.

ಗಣೇಶ ಇದನ್ನು ನಿರೀಕ್ಷೆ ಮಾಡಿಲ್ಲದಿದ್ದರೂ ಇದ್ದುದರಲ್ಲೇ ಸಾವರಿಸಿಕೊಂಡು  ಅದು ಬೈಕಿನವನದ್ದೆ ತಪ್ಪೆಂದು, ತನ್ನ ಕಾರಿಗೇ ಜಾಸ್ತಿ ಏಟಾಗಿರುವುದೆಂದೂ ಸಮಝಾಯಿಷಿ ಕೊಡುವ ಪ್ರಯತ್ನ ಮಾಡುತ್ತಿರುವಂತೆಯೆ, ಆ ಮನುಷ್ಯ ಇನ್ನೂ ಜೋರಾಗಿ ಇವನಿಗೆ ದಬಾಯಿಸಲು ಶುರು ಮಾಡಿ, “ಅದೆಲ್ಲಾ ನಾವು ಕೇಳೋದಿಲ್ಲ. ಇರು ನಮ್ಮ ಜನರನ್ನ ಕರೀತಿನಿ, ಇವನು (ಬೈಕಿನವನು) ನಮ್ಮ ಏರಿಯಾದ ಹುಡುಗ, ಅವನ ಗತಿ ಏನಾಗಬೇಕು?…. ” ಅಂತ ಒದರಾಡಲು ಶುರು ಮಾಡಿದಾಗ, ಗಣೆಶನಿಗೆ ಇವನು ಕಡ್ಡಿಯನ್ನು ಗುಡ್ಡ ಮಾಡುತ್ತಿದ್ದಾನೆಂದು ಮನವರಿಕೆಯಾಯ್ತು. ಅವನು ಇನ್ನೊಂದಿಷ್ಟು ಜನರ ಸೇರಿಸಿ ಗಲಾಟೆ ಮಾಡಿ ತನ್ನ ಹತ್ತಿರ ದುಡ್ಡು ಕಿತ್ತುವದು ಗ್ಯಾರಂಟಿ ಅಂತ ಗೊತ್ತಾಗಿ ಏನು ಮಾಡುವುದೆಂದು ಯೋಚಿಸುತ್ತ ತನ್ನ ಅಂಗಿಯ ಬಲಗೈ ತೋಳು ಏರಿಸಿದಾಗ ತನ್ನ ಗಾಯದ ಭಯಂಕರವಾದ ಕಲೆ ನೋಡಿ ಆ ಕ್ಷಣಕ್ಕೊಂದು ಉಪಾಯ ಹೊಳೆಯಿತವನಿಗೆ. ಕೂಡಲೇ ಪೂರ್ತಿ ತೋಳು ಏರಿಸಿ ತನ್ನ ಗಾಯದ ಕಲೆಯನ್ನು ಆ ಮನುಷ್ಯನಿಗೆ ಕಾಣುವಂತೆ ಕೈ ಮುಂದೆ ಮಾಡಿ, ಸ್ವಲ್ಪ ಜೋರು ದನಿಯಲ್ಲೇ “ಏ ಯಾರನ್ನ ಕರಸ್ತಿ ಕರಸು. ನಾವೂ ಎಲ್ಲಾ ಮಾಡೇ ಇಲ್ಲಿಗೆ ಬಂದಿವಿ… ನಾನೂ ನೋಡೇ ಬಿಡ್ತೀನಿ ಒಂದು ಕೈ” ಅಂತೇನೇನೊ ಬೈಯಲು ಶುರು ಮಾಡಿದ. ಅವನ ಆರ್ಭಟಕ್ಕೂ ಹಾಗೂ ಅವನ ಕೈ ಮೇಲಿರುವ ಉದ್ದನೆಯ ಹೊಲಿಗೆ ಗುರುತು ನೋಡಿ ಆ ಮನುಷ್ಯ ಒಂದು ಕ್ಷಣ ಅಧೀರನಾದ. ಆ ಗಾಯದ ಕಲೆ ನೋಡಿ ಇವನೆಲ್ಲೋ ದೊಡ್ಡ ಮಾಜಿ ರೌಡಿಯೇ ಇರಬೇಕೆಂದೂ, ಇದು ಮಚ್ಚಿನಲ್ಲಿ ಹೊಡೆಸಿಕೊಂಡ ಗುರುತೇ ಅಂತ ಅಂದುಕೊಂಡು ಸ್ವಲ್ಪ ತಣ್ಣಗಾದ. “ಇರಲಿ ಬಿಡಿ ಆಗಿದ್ದು ಆಗಿ ಹೊಯ್ತು..” ಅಂತ ತನ್ನ ಮುಂದಿನ ಯೋಜನೆಗೆ ಬ್ರೇಕು ಹಾಕಿದ. ಗಣೇಶ ಅಂತೂ ಆ ಪರಿಸ್ಥಿತಿಯಿಂದ ಬಚಾವಾಗಿ ಕಾರು ಹತ್ತಿ ಮನೆಗೆ ಬಂದ.

ಸೈಕಲ್ಲು ತಂದದ್ದು ಅವನ ಕೊಬ್ಬು ಕರಗಿಸದಿದ್ದರೂ ಈ ತರಹದ ಒಂದು ದೊಡ್ಡ ಉಪಕಾರ ಮಾಡಿತ್ತು, ಜಾನುಗೆ ತನ್ನ ಸಾಹಸ ಗಾಥೆಯನ್ನು ಹೇಳಿ ಮಲಗುವಾಗ ತನ್ನ ಗಾಯದ ಕಲೆ ಹಂಗೇ ಇರಲಪ್ಪ ಅಂತ ದೇವರಿಗೆ ಕೇಳಿಕೋಳ್ಳಲು ಮರೆಯಲಿಲ್ಲ!

‍ಲೇಖಕರು avadhi

March 29, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

    • Guruprasad Kurtkoti

      ಅರವಿಂದ,’A picture is worth thousand words’ ಅನ್ನೋ ಥರ ನಿಮ್ಮ ಈ smiley, ನಿಮ್ಮನ್ನು ಬರಹ ನಗಿಸಿದೆ ಎನ್ನುವುದಕ್ಕೆ ಸಾಕ್ಷಿ! ಮೆಚ್ಚಿದ್ದಕ್ಕೆ ಧನ್ಯವಾದಗಳು!

      ಪ್ರತಿಕ್ರಿಯೆ
  1. praveen anjanappa

    Nimma parikalpanege koti namanagalu gurugale 🙂 bahala sogasagi moodide nimma sahithya 🙂

    ಪ್ರತಿಕ್ರಿಯೆ
  2. umesh desai

    ಈ ಗಣೇಶ ಯಾರು ಯಾಕಂದ್ರ ನಿಮಗೇನು ಅಂಥಾಪರಿ ಹೊಟ್ಟಿ ಇಲ್ಲ
    ಖುಶಿ ಅನಸತು ಓದಿ..

    ಪ್ರತಿಕ್ರಿಯೆ
    • Guruprasad Kurtkoti

      ದೇಸಯ್ರ, ಗಣೇಶನಿಗೂ ಹೊಟ್ಟೆಗೂ ಬಿಡಿಸಲಾರದ ನಂಟಿದ್ದುದರಿಂದ ಅವನ ಹೆಸರೇ ಈ ಪಾತ್ರಕ್ಕೆ ಸೂಕ್ತ ಅನಿಸಿತು. ನೀವು ಹೇಳಿದ ಹಾಗೆ ಆ ಗಣೇಶ ನಾನಂತೂ ಅಲ್ಲ :). ಮೆಚ್ಚಿದ್ದಕ್ಕೆ ಧನ್ಯವಾದಗಳು!

      ಪ್ರತಿಕ್ರಿಯೆ
  3. Anil Talikoti

    ಹೊಟ್ಟಿ ಬಿಟ್ರ ಕೆಟ್ರಿ -ಕಟ್ಟಿ ಕೂತ್ರ ಪೂರಾ ಕೆಟ್ರಿ ಅಂತಿನಿ ನಾನು. ತುಂಬಾ ಚೆನ್ನಾಗಿದೆ – ಇಷ್ಟವಾಯಿತು

    ಪ್ರತಿಕ್ರಿಯೆ
    • Guruprasad Kurtkoti

      ಅನಿಲ, ನೀವು ಹೇಳಿದ್ದು ಸರಿ ಇದೆ. ಬರಹವನ್ನ ಮೆಚ್ಚಿದ್ದಕ್ಕೆ ಧನ್ಯವಾದಗಳು!

      ಪ್ರತಿಕ್ರಿಯೆ
  4. Sowmya

    Olle baraha….
    nanna gandanigu ide cycle odiso aase bandide adikke link kottu odhalu heliddene 😀

    ಪ್ರತಿಕ್ರಿಯೆ
    • Guruprasad Kurtkoti

      ಸೌಮ್ಯಾ, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು! ಸೈಕಲ್ಲು ಓಡಿಸಲಿ ಬಿಡಿ ಪರವಾಗಿಲ್ಲಾ, ಆದರೆ ರಸ್ತೆ ಮೇಲಿನ ಹೊಂಡಗಳ ತಪ್ಪಿಸಿ ಓಡಿಸಿದರೆ ಸಾಕು 🙂

      ಪ್ರತಿಕ್ರಿಯೆ
  5. Anonymous

    Nice one Guru sir… 🙂 The lesson learnt from this story is “After marriage be like RAMA 😛 don’t think of doing diet to impress BALAKUVA LATHA” 😉 and get damage yourself 🙂 :)…

    ಪ್ರತಿಕ್ರಿಯೆ
  6. chandan

    Good story Guru… 🙂 ಇಬ್ಬರೂ ಮಾರ್ಕೆಟ್ಟಿಗೆ ಹೋಗಿ ಗೇರುಗಳಿರುವ ಹೈಫೈ ಸೈಕಲ್ಲೊಂದನ್ನು ಹದಿನೈದು ಸಾವಿರ ಕೊಟ್ಟು ತಂದೂ ಆಯಿತು –> :):)
    The lesson learnt from this story is “DIET is WASTE after marriage” :):)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: