ರಂಗಾಯಣ: ಒಂದು ಸದಾಗ್ರಹ…

ಈ ಬಾರಿಯ ‘ಬಹುರೂಪಿ ನಾಟಕೋತ್ಸವ’ ತನ್ನ ಬಣ್ಣವನ್ನು ಬದಲಾಯಿಸುತ್ತಿರುವುದಕ್ಕೆ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಕೆಲವು ಕಾರಣಗಳನ್ನು ನೀಡಿದ್ದಾರೆ. ಬಹುರೂಪಿಯ ಸಮಾರಂಭಕ್ಕೆ ರಂಗಾಯಣ ಆಯ್ಕೆಮಾಡಿರುವ ಇಬ್ಬರು ಅತಿಥಿಗಳ ಬಗ್ಗೆ ಮೈಸೂರಿನ ರಂಗಭೂಮಿ ಕಲಾವಿದರು, ಬರಹಗಾರರು ಮತ್ತು ಧೀಮಂತರು ಎತ್ತಿರುವ ಆಕ್ಷೇಪದ ಹಿನ್ನೆಲೆಯಲ್ಲಿ ಕಾರ್ಯಪ್ಪ ಈ ಮಾತುಗಳನ್ನು ಆಡಿದ್ದಾರೆ. ಹಾಗೆಯೇ ರಂಗಾಯಣದ ಕಿರಿಯ ಕಲಾವಿದರು ಆಡಿರುವ ಮಾತುಗಳು ಮತ್ತು ಹಂಚಿಕೊಂಡಿರುವ ಅಭಿಪ್ರಾಯಗಳ ಬಗ್ಗೆಯೂ ಈ ನಿರ್ದೇಶಕರು ಮಾತನಾಡಿದ್ದಾರೆ.

ಬಹುರೂಪಿಯ ಈ ಇಬ್ಬರು ಅತಿಥಿಗಳ ಬಗ್ಗೆ ಆಕ್ಷೇಪ ಹೊರಬಿದ್ದಾಗ ಕಾರ್ಯಪ್ಪನವರು ಇದನ್ನು ‘ಎಡಚರʼ ಅಡ್ಡಗಾಲು, ಕಿರುಕುಳ ಎಂದು ಭಾವಿಸಿದರು. ಈ ಸಂದರ್ಭವನ್ನು ಬಳಸಿಕೊಂಡು ಎಡಚರು ಮತ್ತು ಬಲಚರು ಎಂದೆಲ್ಲ ಹೇಳಿ ಎಡಚರನ್ನು ಕಟುವಾಗಿ ಟೀಕಿಸಿದ್ದಾರೆ.

ಮೈಸೂರಿನ ರಂಗಪ್ರಿಯರಾಗಲಿ, ಕರ್ನಾಟಕದ ರಂಗಾಸಕ್ತರಾಗಲಿ, ರಂಗಾಯಣವನ್ನು ಒಂದು ಗಂಭೀರ ರಂಗಭೂಮಿಯ ಸಂಸ್ಥೆ ಎಂದು ಪರಿಭಾವಿಸಿ ದಶಕಗಳೇ ಕಳೆದಿವೆ. ರಂಗಾಯಣವನ್ನು ಕಟ್ಟಿಬೆಳಸಿದ ಈವರೆಗಿನ ರಂಗಕಲೆಯ ಅಧ್ಯಾಪಕರಾಗಲಿ, ರಂಗಾಯಣದ ನಿರ್ದೇಶಕರಾಗಲಿ, ರಂಗಾಸಕ್ತರಾಗಲಿ ಎಂದೂ ರಂಗಾಯಣವನ್ನು ಎಡಚ, ಬಲಚ ಸಂಸ್ಥೆ ಎಂದು ಭಾವಿಸಲೇ ಇಲ್ಲ. ಯಾರ ಒಲವು ಯಾವುದೇ ಇರಲಿ, ರಂಗಭೂಮಿ, ಅಥವಾ ಬಹುರೂಪಿ ಉತ್ಸವ ಎಂದಾಗ, ಇದೆಲ್ಲವನ್ನು ಮೀರಿದ ಒಂದು ಸಾಂಸ್ಕೃತಿಕ ಹಬ್ಬ, ಇಡೀ ರಾಷ್ಟ್ರದ ಭಿನ್ನ ಭಾಷೆಗಳ, ಸಂಸ್ಕೃತಿಗಳ ಮೇಳ, ಹೊಸ ಹೊಸ ಪ್ರಯೋಗಗಳ, ಸಾಧನೆಗಳ ವೇದಿಕೆ ಎಂದು ಗೌರವಿಸಿದರು. ಈ ಕಾರಣಕ್ಕಾಗಿಯೇ ʼಬಹುರೂಪಿʼ ಎಂದರೆ ಇಡೀ ಕರ್ನಾಟಕದ ಜನತೆ ಕುತೂಹಲದಿಂದ, ಆಸಕ್ತಿಯಿಂದ ನೋಡುತ್ತ, ಭಾಗವಹಿಸುತ್ತ ಈ ಹಬ್ಬಕ್ಕೆ ಆಸರೆಯಾಗಿ ನಿಂತಿದ್ದಾರೆ.

ಇದು ಒಬ್ಬರ ಸಾಧನೆಯಲ್ಲ; ರಂಗಾಯಣದ ನಿರ್ದೇಶಕರು, ರಂಗಕಲೆಯ ಅಧ್ಯಾಪಕರು, ಕಲಾವಿದರು, ಕಲಾರಸಿಕರು ಎಲ್ಲ ಸೇರಿದ ಸಾಮೂಹಿಕ ಪ್ರಯತ್ನದ ಫಲ. ಹಾಗೆಯೇ ಈ ಬಹುರೂಪಿ ಉತ್ಸವಕ್ಕೆ ಸರ್ಕಾರ, ಖಾಸಗೀ ಸಂಸ್ಥೆಗಳು ಮತ್ತು ಸಾರ್ವಜನಿಕರು ಆರ್ಥಿಕ ಬಲವನ್ನೂ ಒದಗಿಸುತ್ತ ಬಂದಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಲು ಅವಕಾಶವೇ ಇಲ್ಲದಂತೆ ಈ ಹಬ್ಬ ಎರಡು ದಶಕಗಳ ಕಾಲ ನಡೆದುಕೊಂಡು ಬಂದಿದೆ.

ಕಾರ್ಯಪ್ಪನವರು ತಾವೇ ಸರ್ಕಾರದಿಂದ ಹಣತಂದಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ತಾವೇ ಹೇಳಿಕೊಂಡಿರುವಂತೆ, ಕಾರ್ಯಪ್ಪನವರು ಆರ್‌ ಎಸ್‌ ಎಸ್‌ನಿಂದ ಬಂದವರು. ಆರ್‌ಎಸ್‌ಎಸ್‌ ನ ಬಿಗಿಹಿಡಿತದಲ್ಲಿರುವ ಸರ್ಕಾರ ಕಾರ್ಯಪ್ಪನವರು ಕೇಳಿದಷ್ಟು ಹಣವನ್ನು ಕೊಟ್ಟಿರಬಹುದು. ಆದರೆ ಈ ಹಣ ಯಾವುದೇ ಪಕ್ಷದ ಅಥವಾ ಸಂಸ್ಥೆಯ ಹಣವಲ್ಲ. ಇದು ಜನರ ಹಣ. ನಾಡಿನ ಜನರು ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಈ ಹಣದ ಮೂಲಕ ಬೆಳೆಸುತ್ತ ಬಂದಿದ್ದಾರೆ. ಸರ್ಕಾರ ಈ ಹಣವನ್ನು ಕೊಡುವುದು ಅದರ ಕರ್ತವ್ಯಭಾಗ. ಇಲ್ಲಿ ಕಾರ್ಯಪ್ಪನವರ ಓಡಾಟ, ಶ್ರಮ ಇದ್ದರೆ ಅದಕ್ಕಾಗಿ ಅವರಿಗೆ ವಂದನೆ ಹೇಳೋಣ. ಆದರೆ ಹಣ ಸಾರ್ವಜನಿಕ ಹಣ ಎಂಬ ಎಚ್ಚರ ಮಾನ್ಯ ಕಾರ್ಯಪ್ಪನರಿಗೆ ಮತ್ತು ಆರ್‌ಎಸ್‌ಎಸ್‌ ಅಥವಾ ಬಿಜೆಪಿಗೆ ಇರಬೇಕಾಗುತ್ತದೆ.

ರಂಗಾಯಣದ ಕಿರಿಯ ಕಲಾವಿದರ ಬಗ್ಗೆ ಕಾರ್ಯಪ್ಪನವರು ಆಡಿರುವ ಮಾತುಗಳು ಈಗ ಗಾಳಿಯಲ್ಲಿ ಹರಿದಾಡುತ್ತಿವೆ. ಆ ಮಾತುಗಳನ್ನು ಇಲ್ಲಿ ಬಳಸದೆ, ಅದರ ಧ್ವನಿ ಮತ್ತು ಅರ್ಥವನ್ನಷ್ಟೆ ಬಳಸಿಕೊಂಡು ಹೇಳುವುದಾದರೆ:
ರಂಗಾಯಣವಾಗಲಿ, ಅದು ಪ್ರಸ್ತುತ ಪಡಿಸುವ ವಿಭಿನ್ನ ಬಗೆಯ ನಾಟಕಗಳಾಗಲಿ ಕೇವಲ ರಂಜನಗೆಗಾಗಿ ಇರುವ ಸಾಧನಗಳಲ್ಲ. ಯಾವುದೇ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಚಿಂತನೆಯನ್ನು ಬೆಳೆಸುತ್ತ, ವೈಚಾರಿಕ ಎಚ್ಚರವನ್ನು ಜಾಗೃತವಾಗಿಡುತ್ತ, ಜನತಂತ್ರ ವ್ಯವಸ್ಥೆಯ ಜೀವನಾಡಿಯಾಗಿ ಕ್ರಿಯಾಶೀಲವಾಗಿರುತ್ತವೆ. ಕಲಾವಿದರು ಮುಕ್ತವಾಗಿ ಮಾತನಾಡುವ, ಪ್ರಬುದ್ಧವಾಗಿ ಚಿಂತಿಸುವ ಅವಕಾಶವೂ ಇಲ್ಲಿರುತ್ತದೆ. ಇಂಥ ಅವಕಾಶ ಬಳಕೆಯಾಗುತ್ತಿದ್ದರೆ ನಾವೆಲ್ಲ ಸಂತೋಷಪಡಬೇಕು. ಜನತೆಯ ಹಣ ಸರಿಯಾದ ರೀತಿಯಲ್ಲಿ ಉಪಯೋಗವಾಗುತ್ತಿದೆ ಎಂದುಕೊಳ್ಳಬೇಕು. ಅದು ಬಿಟ್ಟು, ʼಸರ್ಕಾರದ ಹಣವನ್ನು ತಿಂದು, ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆʼ ಇತ್ಯಾದಿ ನಮೂನೆಯ ಮಾತನಾಡುವುದು ರಂಗಾಯಣದಂಥ ಸ್ವಾಯತ್ತ ಸಂಸ್ಥೆಯ, ಜನ ಸಂಸ್ಥೆಯ ಘನತೆಯನ್ನು ಕೆಳಗಿಳಿಸಿದಂತಾಗುತ್ತದೆ. ರಂಗಾಯಣದ ನಿರ್ದೇಶಕ ಸ್ಥಾನದಲ್ಲಿರುವವರು ಇಂಥ ಕೆಲಸಕ್ಕೆ ಮುಂದಾಗಬಾರದು.

ಇದಲ್ಲದೆ, ಕಾರ್ಯಪ್ಪನವರು ‘ಸಂವಾದ’ (SAMVADA) ಎಂಬ ಯೂಟ್ಯೂಬ್ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ, ಬಿ. ವಿ. ಕಾರಂತರನಂತರ ರಂಗಾಯಣಕ್ಕೆ ನಿರ್ದೇಶಕರಾಗಿ ಬಂದವರಲ್ಲಿ ಒಬ್ಬರನ್ನು ಬಿಟ್ಟರೆ ಉಳಿದವರೆಲ್ಲ ‘ಮಾವೋವಾದಿಗಳ ಸಿದ್ಧಾಂತಗಳನ್ನು ಸ್ವೀಕರಿಸುವವರು’ ಎಂದು ಇಲ್ಲಸಲ್ಲದ ಮಾತಾಡಿದ್ದಾರೆ. ಆ ಸಿದ್ಧಾಂತವನ್ನು, ತನಗಿಂತ ಮುಂಚೆ ರಂಗಾಯಣದಲ್ಲಿದ್ದು ಆ ಸಂಸ್ಥೆಗೆ ಜವಾಬ್ದಾರರಾಗಿದ್ದವರ ತಲೆಗೆ ಮೇಲಿಂದಮೇಲೆ ಕಟ್ಟಿದ್ದಾರೆ. ಆದರೆ, ಆ ಸಂಬಂಧ ಅವರು ಆಡಿರುವುದೆಲ್ಲ ಶುದ್ಧ ಅಬದ್ಧವಾದ ಮಾತು. ವಿಶ್ವವಿದ್ಯಾಲಯಗಳೂ ಸೇರಿದಂತೆ ಕರ್ನಾಟಕದ ಯಾವುದೇ ಶಿಕ್ಷಣ ಸಂಸ್ಥೆ ಮತ್ತು ಕಲಾಸಂಸ್ಥೆಯ ಮುಖ್ಯಸ್ಥರು ಕಾರ್ಯಪ್ಪನವರ ತರಹ ಅಬದ್ಧಗಳನ್ನು, ಕೀಳು ಮಾತುಗಳನ್ನು ಎಂದೂ ಆಡಿದ್ದಿಲ್ಲವೆಂದೇ ಹೇಳಬೇಕು.   

ಈವರೆಗೆ ರಂಗಾಯಣ ನಡೆದುಬಂದ ದಾರಿಯನ್ನು ನೋಡಿದರೆ, ನಿರ್ದೇಶಕ ಸ್ಥಾನದಲ್ಲಿದ್ದು ಕೆಲಸ ಮಾಡಿರುವ ಗಣ್ಯರು, ಮತ್ತು ಅಲ್ಲಿ ಅದರ ಆರಂಭದ ದಿನಗಳಿಂದ ಕೆಲಸಮಾಡಿ ಅದರ ಆರೋಗ್ಯಪೂರ್ಣ ಕಾಯಕಕ್ಕೆ ಬುನಾದಿಹಾಕಿದ ರಂಗಕಲೆಯ ಅಧ್ಯಾಪಕರು, ವಿಭಿನ್ನ ಚಿಂತನೆಯ, ತಾತ್ವಿಕ ನಿಲುವಿನ, ದೃಷ್ಟಿ ಧೋರಣೆಯ ಗಂಭೀರ ವ್ಯಕ್ತಿಗಳು. ಇವರು ತಮ್ಮ ವ್ಯಕ್ತಿಗತ ಅಭಿಪ್ರಾಯಗಳನ್ನು ಬದಿಗಿಟ್ಟು ರಂಗಭೂಮಿಯ ಘನತೆಗೆ ಕುಂದುಬರದಂತೆ ನೋಡಿಕೊಂಡಿದ್ದಾರೆ. ತಮ್ಮ ಕೈಲಾದ ಮಟ್ಟಿಗೆ ರಂಗಾಯಣವನ್ನು ಬೆಳಸಿ, ಉಳಿಸಿ ಹೋಗಿದ್ದಾರೆ. ಇವತ್ತು ಕರ್ನಾಟಕದಲ್ಲಿ ಮತ್ತು ಕನ್ನಡಿಗರ ಮನಸ್ಸಿನಲ್ಲಿ ರಂಗಾಯಣ ಮತ್ತು ಬಹುರೂಪಿಗಳು ಉಳಿದಿದ್ದರೆ ಅದಕ್ಕೆ ಕಾರಣ ಈ ಎಲ್ಲ ಗಣ್ಯರು. ಅವರನ್ನು ಯಾರೂ ‘ಎಡಚರುʼ ʼಬಲಚರುʼ ಎಂದು ಗುರುತಿಸಲಿಲ್ಲ. ಅವರು ರಂಗಭೂಮಿಯವರು. ಅಲ್ಲಿಯೇ ಚಿಂತಿಸಿ, ದುಡಿದು, ರಂಗಭೂಮಿಯನ್ನು ಬೆಳಸಿದವರು; ಕರ್ನಾಟಕವನ್ನು ಮುನ್ನಡೆಸಿದವರು.

ಕಾರ್ಯಪ್ಪನವರು ಮತ್ತು ಅವರಂಥವರು ರಂಗಾಯಣವನ್ನು ಮತ್ತು ಬಹುರೂಪಿಯನ್ನು ಹಗುರವಾಗಿ ನೋಡಬಾರದು; ಅವುಗಳ ಗೌರವವನ್ನು ಹಾಳುಮಾಡಬಾರದು ಎಂಬ ಸದಾಗ್ರಹ ನಮ್ಮದು. 

ಇಂತೀ:

ಪಂಡಿತ ರಾಜೀವ ತಾರಾನಾಥ್,  ಸರೋದ್ ವಾದಕ

ಪ. ಮಲ್ಲೇಶ್,  ಸಮಾಜವಾದಿ ಕಾರ್ಯಕರ್ತ

ಎಂ. ಸಿ. ಕೃಷ್ಣಪ್ರಸಾದ್, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ

ಎಸ್. ರಾಮು, ನಟ, ರಂಗನಿರ್ದೇಶಕ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ.

ಸಂತೋಷಕುಮಾರ್ ಕುಸನೂರು, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ

ನೂರ್ ಅಹಮದ್ ಶೇಖ್, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ

ಮೈಮ್ ರಮೇಶ್, ನಟ, ರಂಗನಿರ್ದೇಶಕ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ

ರಘುನಂದನ, ಕವಿ, ರಂಗನಿರ್ದೇಶಕ, ಮಾಜಿ ಅಭಿನಯ ಪ್ರಶಿಕ್ಷಕ, ರಂಗಾಯಣ, ಮೈಸೂರು

ಬಸವಲಿಂಗಯ್ಯ, ರಂಗನಿರ್ದೇಶಕ, ಮತ್ತು ಮತ್ತು ಮಾಜಿ ನಿರ್ದೇಶಕ, ರಂಗಾಯಣ, ಮೈಸೂರು

ಭಾಗೀರಥಿಬಾಯಿ ಕದಂ, ಬಹುಭಾಷಾ ನಟಿ, ರಂಗನಿರ್ದೇಶಕಿ,  ಮತ್ತು ಮಾಜಿ  ನಿರ್ದೇಶಕಿ, ರಂಗಾಯಣ , ಮೈಸೂರು

ವೆಂಕಟರಮಣ ಐತಾಳ, ರಂಗನಿರ್ದೇಶಕ, ನೀನಾಸಮ್ ರಂಗಶಿಕ್ಷಣ ಕೇಂದ್ರದ ನಿವೃತ್ತ ಪ್ರಾಂಶುಪಾಲ,

ಇಕ್ಬಾಲ್ ಅಹ್ಮದ್ , ರಂಗ ನಿರ್ದೇಶಕ ಹಾಗೂ ನಟ, ಮತ್ತು ಚಿತ್ರಕಾರ

ಎಸ್. ಸುರೇಂದ್ರನಾಥ್, ಕತೆಗಾರ, ನಾಟಕಕಾರ, ರಂಗನಿರ್ದೇಶಕ 

ಐ. ಕೆ. ಬೊಳುವಾರು, ರಂಗನಿರ್ದೇಶಕ, ನಿರತನಿರಂತ, ಪುತ್ತೂರು

ಪ್ರಕಾಶ್ ಗರುಡ, ರಂಗನಿರ್ದೇಶಕ, ಮತ್ತು ಮಾಜಿ ನಿರ್ದೇಶಕ, ರಂಗಾಯಣ, ಧಾರವಾಡ

ರಜನಿ ಗರುಡ, ರಂಗನಿರ್ದೇಶಕಿ, ಗೊಂಬೆಮನೆ, ಧಾರವಾಡ

ವಸಂತ ಬನ್ನಾಡಿ, ರಂಗನಿರ್ದೇಶಕ, ಬರಹಗಾರ

ಬಿ. ಸುರೇಶ, ರಂಗಕರ್ಮಿ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ

ಶಂಕರಯ್ಯ ಆರ್ ಘಂಟಿ, ರಂಗ ನಿರ್ದೇಶಕ, ಸಂಘಟಕ, ಕಲಬುರಗಿ

ಅಚ್ಯುತಕುಮಾರ್ ಎಚ್ ಕೆ, ನಟ

ಎಚ್ ಎಸ್ ರಾಘವೇಂದ್ರರಾವ್,  ವಿಮರ್ಶಕ, ಅನುವಾದಕ

ಎನ್. ಮನು ಚಕ್ರವರ್ತಿ, ಸಾಹಿತ್ಯ ಮತ್ತು ಚಲನಚಿತ್ರ ವಿಮರ್ಶಕ

ಓ. ಎಲ್. ನಾಗಭೂಷಣಸ್ವಾಮಿ, ಅನುವಾದಕ, ವಿಮರ್ಶಕ

ಜಿ. ಪಿ. ಬಸವರಾಜು, ಕವಿ

ಜಿ. ರಾಜಶೇಖರ್, ಬರಹಗಾರ

ರಾಜೇಂದ್ರ ಚೆನ್ನಿ, ಲೇಖಕ

ಬೊಳುವಾರು ಮಹಮದ್ ಕುಂಞಿ,  ಬರಹಗಾರ, ಹಾಗೂ ಗೌರವಾಧ್ಯಕ್ಷ, ಸಮುದಾಯ, ಕರ್ನಾಟಕ.

ಕೇಶವ ಶರ್ಮ, ಬರಹಗಾರ

ಡಿ. ಎಸ್. ನಾಗಭೂಷಣ, ಲೇಖಕ, ಮತ್ತು ಸಂಪಾದಕ, ಹೊಸ ಮನುಷ್ಯ

ಬಿ.ಟಿ.ಜಾಹ್ನವಿ, ಕತೆಗಾರ್ತಿ

ಅಮರೇಶ ನುಗಡೋಣಿ, ಕತೆಗಾರ

ಪಿ.ಮಹಮ್ಮದ್‌, ವ್ಯಂಗ್ಯಚಿತ್ರಕಾರ

ಆರ್‌.ವಿಜಯರಾಘವನ್‌, ಬರಹಗಾರ

ಟಿ. ಎಸ್. ವೇಣುಗೋಪಾಲ್, ಅರ್ಥಿಕ ಚಿಂತಕ-ಲೇಖಕ, ಪುಸ್ತಕ ಪ್ರಕಾಶಕ

ಡಾ.ವಿ.ಲಕ್ಷ್ಮೀನಾರಾಯಣ, ಸಾಮಾಜಿಕ ಕಾರ್ಯಕರ್ತ

ಇ.ರತಿರಾವ್‌, ಸಾಮಾಜಿಕ ಕಾರ್ಯಕರ್ತೆ

ನಾ. ದಿವಾಕರ,  ಬರಹಗಾರ, ಸಾಮಾಜಿಕ ಕಾರ್ಯಕರ್ತ 

ಪ್ರೊ. ಪಂಡಿತಾರಾಧ್ಯ, ಬರಹಗಾರ, ನಿವೃತ್ತ ಪ್ರಾಧ್ಯಾಪಕ

ರವಿಕುಮಾರ್ ಕಾಶಿ, ಸಮಕಾಲೀನ ಕಲಾವಿದ

ವಿ. ಎನ್. ಲಕ್ಷ್ಮೀನಾರಾಯಣ, ಬರಹಗಾರ, ನಿವೃತ್ತ ಪ್ರಾಧ್ಯಾಪಕ

ಶೈಲಜ, ಸಂಗೀತಜ್ಞೆ, ಲೇಖಕಿ, ಪುಸ್ತಕ ಪ್ರಕಾಶಕಿ

ಸಚ್ಚಿದಾನಂದ ಕೆ. ಜೆ., ವರ್ಣಚಿತ್ರ ಕಲಾವಿದ

ಸವಿತಾ ನಾಗಭೂಷಣ, ಕವಯಿತ್ರಿ

ಪ್ರಶಾಂತ್ ಪಂಡಿತ್, ಚಲನಚಿತ್ರ ಸಂಕಲನಕಾರ

‍ಲೇಖಕರು Admin

December 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. G.N.Ranganatha Rao

    idellavuu sari.Idkke nanna oppige ide.Rangabhoomi vyvastheya adiyaalla.Sarvaangeena samaajik vyavastheynnu alisihaaki adara jaagdlli
    Bharatavannu mattondu Bharatavaagisalu katibaddavagiruva sarkarkke RANGAYANA gulaami seeve sallisalu mundaagiruvudu duradrustakara.
    G.N.Ranganatha Raoi

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: