ರಂಗಾಯಣದ ‘ಪರ್ವ’

ಪ್ರಸಾದ್ ರಕ್ಷಿದಿ

‘ಪರ್ವ’ ಎಸ್.ಎಲ್. ಭೈರಪ್ಪನವರು ನಾಲ್ಕು ದಶಕಗಳ ಹಿಂದೆ ರಚಿಸಿದ ಕೃತಿ. ದೊಡ್ಡ ಮಟ್ಟದಲ್ಲಿ ಚರ್ಚಿತವಾದ ಕೃತಿಯೂ ಹೌದು. ಇದೀಗ ದೊಡ್ಡದಾಗಿಯೇ ರಂಗವೇರಿದೆ. ಸಾಕಷ್ಟು ವಾದ ವಿವಾದಗಳೂ ನಡೆದಿವೆ, ನಡೆಯುತ್ತಿವೆ. ಅದು ಇನ್ನೂ ಮುಂದುವರಿಯಲಿದೆ.

ಭೈರಪ್ಪನವರ ಸಾಹಿತ್ಯದ ಬಗ್ಗೆ, ರಾಜಕೀಯ ನಿಲುವುಗಳ ಬಗ್ಗೆ ಇರುವ ಬಿನ್ನಾಭಿಪ್ರಾಯಗಳು, ವಿರೋಧಗಳು ಇರುವಂತೆಯೇ, ಅದರ ಜೊತೆಯಲ್ಲಿಯೇ, ದೊಡ್ಡ ಬಜೆಟ್ ನ ಮೆಘಾ ಪ್ರೊಡಕ್ಷನ್ ಗಳ ಬಗ್ಗೆ ನಾನೂ ಸೇರಿದಂತೆ ಹಲವಾರು ರಂಗ ಕರ್ಮಿಗಳ ತಕರಾರುಗಳಿವೆ. ಈ ಎಲ್ಲವನ್ನೂ ಉಳಿಸಿಕೊಂಡೇ, ಒಂದು ರಂಗ ಕೃತಿಯಾಗಿ ರಂಗಾಯಣದ ‘ಪರ್ವ’ವನ್ನುನೋಡಿದೆ.

ಮಹಾಭಾರತ ಯುದ್ಧ ಮುಗಿದಿದೆ. ತನ್ನ ಕರುಳ ಕುಡಿಗಳನ್ನೆಲ್ಲ ಕೊಂದು ಗೆದ್ದು ಬಂದ ಭೀಮನನ್ನು ಸೈರಿಸಲು ಸಾಧ್ಯವೇ ಇಲ್ಲದೆ ಇರಿಯಲು ಪ್ರಯತ್ನಿಸುವ ದೃತರಾಷ್ಟ್ರನ ವಿಫಲ ಯತ್ನದೊಂದಿಗೆ ನಾಟಕ ಪ್ರಾರಂಭವಾಗುತ್ತದೆ.

ಇಷ್ಟು ವರ್ಷಕಾಲ ಪರಮ ಸಾಧ್ವಿಯಾಗಿ ದೇವಿಯಾಗಿ ವೈಭವೀಕರಿಸಲ್ಪಟ್ಟಿದ್ದ ಗಾಂಧಾರಿಯ ಕಣ್ಣು ಪಟ್ಟಿಯನ್ನು ಬಿಚ್ಚಲು ಹೇಳುವ ಮೂಲಕ ಕೃಷ್ಣ ಗಾಂಧಾರಿಯ ಅಂತರಂಗದ ಗೋಡೆಯನ್ನು ಕೆಡವಿಬಿಡುತ್ತಾನೆ. ಮತ್ತೆ ಹೊರಜಗತ್ತನ್ನು ನೋಡುವ ಗಾಂಧಾರಿ ಮಾತನಾಡತೊಡಗುತ್ತಾಳೆ..
ಗಾಂಧಾರಿ, ತಮಗೆ ಮದುವೆ ನಿಶ್ಚಯವಾದ ದಿನದಿಂದೇ ಗಂಡನಿಗಿಲ್ಲದ ಕಣ್ಣು ತನಗೂ ಬೇಡವೆಂದು ಹೇಳಿ ಕಟ್ಟಿಕೊಂಡಿದ್ದ ಕಣ್ಣು ಪಟ್ಟಿ, ತನಗಾದ ಅನ್ಯಾಯದ ವಿರುದ್ಧದ ಅತಿ ಘೋರ ಪ್ರತಿಭಟನೆಯ ಮಾರ್ಗವೆಂದು ತಿಳಿದು ತತ್ತರಿಸಿ ಹೋಗುವ ಧೃತರಾಷ್ಟ್ರ.

ಅಲ್ಲಿಂದ ಮುಂದೆ ಇಡೀ ನಾಟಕ ನಿಲ್ಲುವುದೇ ಮುಖ್ಯವಾಗಿ ಐವರು ಮಹಿಳೆಯರ ದುರಂತಮಯ ಆದರೆ ಸೋಲರಿಯದ ಪ್ರತಿಭಟನೆಯ ಕಥಾನಕವಾಗಿ, ಸತ್ಯವತಿ, ಗಾಂಧಾರಿ, ಕುಂತಿ, ಮಾದ್ರಿ, ದ್ರೌಪದಿ, ಈ ಐವರು. ಪ್ರತಿಯೊಬ್ಬರ ಬದುಕೂ ಒಂದೊಂದು ರೀತಿಯಲ್ಲಿ ದುರಂತ. ಇವರ ವೃತ್ತಾಂತಗಳ ಜೊತೆ ಜೊತೆಯಲ್ಲೇ ನಾಟಕದುದ್ದಕ್ಕೂ ಕರ್ಣನ ಸಾಕುತಾಯಿ ರಾಧೆ, ಸಾಲಕಟಂಕಟಿ ನಾಮಾಂಕಿತ ಹಿಡಿಂಬಿ, ಅಂಬೆ ಅಂಬಾಲಿಕೆಯರ ಹಾಗೇ ಯಾವುದೇ ಅಧಿಕಾರವಿಲ್ಲದೆ ಬೀಜಕ್ಕೆ ಬರಿಯ ಕ್ಷೇತ್ರವಾಗಿ ಉಳಿದುಬಿಡುವ ನೂರಾರು ದಾಸಿಯರ ವೃತ್ತಾಂತಗಳಿವೆ.

ಇದಕ್ಕೆ ಕಾರಣವಾದ ವ್ಯವಸ್ಥೆಯನ್ನು ಪುರುಷಾಧಿಕಾರವನ್ನು, ಭೂಮಿಯೇ ಬಾಯ್ಬಿಟ್ಟು ಮಾತಾಡಿದಂತೆ ಪ್ರತಿ ಸಂದರ್ಭದಲ್ಲೂ ಗಾಂಧಾರಿ, ಕುಂತಿ, ದ್ರೌಪದಿ ಪಾತ್ರಗಳು ಪ್ರಶ್ನಿಸುತ್ತಾ ಹೋಗುವ ನಡೆ ನಾಟಕದ ಮೊದಲ ಭಾಗ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.
ಎರಡನೆಯ ಭಾಗದಲ್ಲಿ ಯುದ್ಧದ ಸಿದ್ದತೆ ಮಹತ್ವಾಕಾಂಕ್ಷೆ, ದುರಾಸೆ, ಮತ್ಸರ, ರಾಜಕಾರಣದ ಒಳಸುಳಿಗಳು, ಜೂಜು ಇವುಗಳೆಲ್ಲವನ್ನೂ ಒಳಗೊಂಡು ಭೂಮಿ ಮತ್ತು ಹೆಣ್ಣಿನ ಒಡೆತನಗಳ, ಹಾಗೇ ವಂಶ, ಕುಲಗಳ ಮೇಲ್ಮೆಯ ಪ್ರಶ್ನೆಗಳು ಇವೆಲ್ಲದರ ಜೊತೆಯಲ್ಲಿ ಯಾರಿಗೂ ಬೇಡದ ಆದರೆ ಎಲ್ಲರಿಗೂ ತಮ್ಮದೇ ಕಾರಣಗಳಿಗಾಗಿ ಬೇಕೆನಿಸಿಬಿಡುವ ಯುದ್ಧದ ಸಿದ್ಧತೆ.

ಆದರೆ ನಿಜವಾಗಿಯೂ ಯುದ್ಧ ಬೇಕು ಎಂದು ನಿಶ್ಚಯಿಸಿದವ ಕೃಷ್ಣನೊಬ್ಬನೇ (ಆದರೆ ಪರ್ವ ಕಾದಂಬರಿಯ ಕೃಷ್ಣನಿಗೆ ಹೋಲಿಸಿದಾಗ ನಾಟಕದಲ್ಲಿ ಕೃಷ್ಣ ನ ಪಾತ್ರಕ್ಕೆ ತಕ್ಕಷ್ಟು ಪ್ರಾಮುಖ್ಯ ಜಸ್ಟಿಫಿಕೇಷನ್, ದೊರಕಲಿಲ್ಲ ಎನಿಸಿತು) ನಂತರ, ನಿಜವಾಗಿಯೂ ಯುದ್ಧ ನಡೆಯುವುದಿಲ್ಲವೇ? ಎಂದು ಕಂಗಾಲಾಗಿ ಯುದ್ಧ ನಡೆಯಲಿ ಎಂದು ಹಂಬಲಿಸಿ ಬೇಡಿಕೊಳ್ಳುವವರು ರಥ ನಿರ್ಮಾಣದ ಕಸುಬಿನವರು!
ಮೂರನೆಯ ಭಾಗ ಯುದ್ಧ ನಾಟಕದ ಬಹುಭಾಗ ಸಮಯವನ್ನು ಬಳಸಿಕೊಂಡಿರುವ ಈ ಭಾಗದಲ್ಲಿ, ಕೃಷ್ಣದ್ವೈಪಾಯನ, ದ್ರೋಣ- ದ್ರುಪದ, ಹಿಡಿಂಬಿ-ಘಟೋತ್ಕಜ, ಏಕಲವ್ಯರ ವೃತ್ತಾಂತಗಳಿವೆ.

ಬಹಳ ಮುಖ್ಯವಾದ ಸಂಗತಿಯೆಂದರೆ ನಾಟಕದ ಮೊದಲ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ನಂತರ ಇಡೀ ಸಮಾಜಕ್ಕೆ, ಸಮಾಜ ರಚನೆಗೆ ಸವಾಲಾಗುತ್ತ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯಾಗಿ ವಿಸ್ತರಿಸುತ್ತಾ ಹೋಗುವುದು. ಸೂತರ ಬದುಕಿನ ದುರಂತಗಳು ಪದೇ ಪದೇ ಪ್ರಸ್ತಾಪವಾಗುತ್ತ ಪ್ರಶ್ನೆಗೊಳಪಡುತ್ತಾ ನಾಟಕ ಸಾಗುತ್ತದೆ. ವಿದುರ, ಕರ್ಣ, ಸಂಜಯರ ಜೊತೆ ಜೊತೆಯಾಗಿ ಚಾರಕ ಪಾತ್ರಗಳೂ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ.

ದ್ರೋಣ- ಏಕಲವ್ಯರ ಪ್ರಕರಣ ವ್ಯವಸ್ಥೆ ಹೇಗೆ ಎಲ್ಲವನ್ನೂ ತನ್ನ ಪರವಾಗಿ ರೂಪಿಸಿಕೊಳ್ಳುತ್ತದೆ ಎನ್ನುವುದನ್ನು ಸೂಚ್ಯವಾಗಿ ಆದರೆ ಅಷ್ಟೇ ಬಲವಾಗಿ ನಿರೂಪಿಸಿದೆ. ಆಶ್ರಮದ ಅಧ್ಯಯನ ಕೇಂದ್ರಗಳ ಮೇಲೆ ರಾಜರುಗಳಿಗೆ ಅಧಿಕಾರವಿಲ್ಲ. ಅವು ಸ್ವತಂತ್ರವಾದವು ಎಂದು ಹೇಳುವ ದ್ರೋಣ ಮತ್ತು ಕೃಷ್ಣದ್ವೈಪಾಯನ ಇಬ್ಬರೂ ಪ್ರಭುತ್ವದ ಮುಂದೆ ಸೋಲುವುದು, ಯುದ್ಧದ ಸಂದರ್ಭದಲ್ಲಿ ಕೃಷ್ಣ ದ್ವೈಪಾಯನರ ಆಶ್ರಮಕ್ಕೆ ದುರ್ಯೋಧನನ ಆಜ್ಞೆಯಂತೆ ಸೈನಿಕರು ನುಗ್ಗಿ ದಾನ್ಯ ದನಕರುಗಳನ್ನು ಒಯ್ಯಲು ಪ್ರಯತ್ನಿಸುವಾಗ ನಿಸ್ಸಾಯಕನಾಗುವ ಕೃಷ್ಣದ್ವೈಪಾಯನನಿಗೆ, ಭೀಷ್ಮ ‘ಸಾಧ್ಯವಿದ್ದರೆ ವಸಿಷ್ಟನಂತೆ ಜನ ಸಂಘಟಿಸಿ ಹೋರಾಡು, ದೃಷ್ಟ್ರಾರನಾಗಬೇಕು ಬರಿಯ ಸಂಗ್ರಾಹಕನಾದರೆ ಸಾಲದು’ ಎನ್ನುವ ಮಾತು ಕೊನೆಗೂ ಅವನಿಗೆ ಈ ವೇದ ಮಂತ್ರಗಳ ಸಂಗ್ರಹದ ನಿಷ್ಪಲತೆಯನ್ನು ಅರಿವಾಗಿಸುತ್ತದೆ.

ಇಲ್ಲಿಯೂ ಕೂಡಾ ಮಂತ್ರಕ್ಕಿಂತ, ತಂತ್ರ- ಶ್ರಮ ಮುಖ್ಯವೆಂದು ಅರಿವಾಗಿಸುವವನು ಒಬ್ಬ ಚಾಕರಿಯವ. ಆಹಾರ ಧಾನಗಳನ್ನು ಬಚ್ಚಿಟ್ಟು, ಸೈನ್ಯದ ಜೊತೆ ಸಾಮಾನ್ಯರನ್ನು ಸಂಘಟಿಸುವ ತಂತ್ರವನ್ನು ರೂಪಿಸುವವನು ಅವನೇ.

ಪ್ರಭುತ್ವದ ವಿರುದ್ಧ ನಿಂತವರು ದೇಶ ದ್ರೋಹಿಗಳು ಎನ್ನುವ ಧೃತರಾಷ್ಟ್ರ, ನಾವು ಹಿಡಿದು ಪಳಗಿಸಿ ಕೊಟ್ಟ ಆನೆಗಳನ್ನು ನೀವು ಯುದ್ಧದಲ್ಲಿ ಹಿಂಸಿಸಿ ಸಾಯಿಸುತ್ತಿದ್ದೀರಿ, ನಾವು ನಿಷಾಧರು ಯಾರ ಅಧೀನರೂ ಅಲ್ಲ ಕಾಡಿನ ಮಕ್ಕಳು ಎಂದು ಯುಧ್ಧಕ್ಕೆಂದು ಬಂದು ಯಾರ ಪಕ್ಷವನ್ನೂ ವಹಿಸದೆ ಹಿಂದಿರುಗುವ ಏಕಲವ್ಯ.

‘ಸೂತನ ಮಗ ಸೂತನೇ ಆಗಬೇಕೆ, ನಾನು ಆದದ್ದು ಸಾಕು ನೀನು ಯಾರಿಗೂ ಸಾರಥಿಯಾಗಬೇಡ’ ಎನ್ನುವ ಕರ್ಣನ ಸಾಕುತಂದೆ. ಕರ್ಣನನ್ನು ದುರ್ಯೋಧನ ರಾಜನನ್ನಾಗಿಸಿದರೂ ಅವನನ್ನು ಮಹಾರಾಜ ಎಂದು ಸಂಬೋಧಿಸುವವರು ಸೂತರು ಮಾತ್ರ.

ನಾಟಕದುದ್ದಕ್ಕೂ ಈ ರೀತಿಯ ಕೆಳವರ್ಗದ, ದಾಸಿ, ದಾಸ ಪಾತ್ರಗಳೇ ವ್ಯವಸ್ಥೆಯನ್ನು ಕಚಗುಳಿಯಿಡಿವ ಲೇವಡಿಗಳ ಮೂಲಕ ವಿಮರ್ಶಿಸುತ್ತ ಸೂಕ್ಷ್ಮವಾಗಿ ಪ್ರತಿಭಟನೆಯನ್ನು ದಾಖಲಿಸುತ್ತವೆ.

ಇವೆಲ್ಲವೂ ಪರ್ವ ನಾಟಕವನ್ನು ಆಧುನಿಕ ಭಾರತದ ಪ್ರಜಾ- ಪ್ರಭುತ್ವಗಳ… ಪರ್ವವಾಗಿಸಿದೆ. ಸಂಜಯನ ಯುಧ್ಧದ ವರದಿ ನಮ್ಮ ದೃಶ್ಯ ಮಾಧ್ಯಮಗಳ ವರದಿಯನ್ನು ಲೇವಡಿ ಮಾಡುತ್ತ ಸಾಗುತ್ತದೆ. ರಾಜತ್ವ-ಪಾಳೇಗಾರೀ ಸಮಾಜದಲ್ಲಿ ವಂಶ ಮತ್ತು ವಂಶೋಧ್ಧಾರಕನ ಪಾತ್ರ ಅಂದಿಗೂ ಇಂದಿಗೂ ಎಂತಹ ಅನಿವಾರ್ಯ ಎನ್ನುವುದು ಮತ್ತೆ ಮತ್ತೆ ನಿರೂಪಿತವಾಗಿದೆ. ಹೇಗಾದರೂ ವಂಶವನ್ನು ಬೆಳೆಸುವ ಅನಿವಾರ್ಯಕ್ಕೆ ಸಿಲುಕುವ ರಾಜವಂಶೀಯರು, ಕುಲೀನರು, ತಮ್ಮ ವಂಶದ ಕುಡಿಯೇ ಜೇಷ್ಠನಾಗಿರಲಿ ಎಂಬ ಹಪಾಹಪಿಗೆ ಬೀಳುವ ಧೃತರಾಷ್ಟ್ರ ಪಾಂಡು ಮುಂತಾದವರು, ರಾಜ ವಂಶಗಳ ಇತಿಹಾಸದ ಉದ್ದಕ್ಕೂ ಕಾಣುವ ನಿಯೋಗ ಪದ್ಧತಿ. (ಮತ್ತೆ ಇಲ್ಲಿಯೇ ಹೆಣ್ಣೇ ಬಲಿ ಪಶು) ಇವೆಲ್ಲವೂ ನಾಟಕದಲ್ಲಿ ಅತ್ಯಂತ ಸಮರ್ಥವಾಗಿ ನಿರ್ದೇಶಕರು ಕಡೆದಿರಿಸಿದ್ದಾರೆ. ರಂಗ ಪಠ್ಯವೂ ಅವರದೇ.

ಯುದ್ಧ ಮುಗಿದಿದೆ. ಉತ್ತರೆ ಗರ್ಭದಲ್ಲಿದ್ದ ಕುರುವಂಶದ ಕೊನೆಯ ಕುಡಿ ಸತ್ತು ಹುಟ್ಟಿದೆ. ಮತ್ತೆ ಕುರುವಂಶವನ್ನು ಮುಂದುವರಿಸುವ ಸಲುವಾಗಿ ಗರ್ಭ ಧರಿಸುವ ಹೊಣೆ ದ್ರೌಪದಿಗೆ ಬಂದಿದೆ. ಅದನ್ನವಳು ನಿರಾಕರಿಸುವ ಮೂಲಕ, ಮತ್ತೆ ದುಷ್ಟ ಬೆಳೆಗೆ ಭೂಮಿಯಾಗಲಾರೆ ಎಂಬ ಮಹತ್ವದ ನಿರ್ಧಾರವನ್ನು ತಳೆದು ಬಿಡುತ್ತಾಳೆ. ಇಲ್ಲಿಗೆ ನಾಟಕ ಮುಗಿಯುತ್ತದೆ.

ರಂಗಾಯಣದ ಹಿರಿಯ ನಟ ನಟಿಯರು, ತಮ್ಮಲ್ಲಿ ಇನ್ನೂ ಚೈತನ್ಯ ಕುಂದಿಲ್ಲ ಎಂದು ಮತ್ತೊಮ್ಮೆ ನಿರೂಪಿಸಿದರು. ಧುರ್ಯೋಧನ, ಭೀಷ್ಮ, ದ್ರೋಣ, ಕುಂತಿ, ಗಾಂಧಾರಿ, ಸತ್ಯವತಿ, ಧೃತರಾಷ್ಟ್ರ, ಸಂಜಯ, ವಿದುರ, ಶಲ್ಯ, ಸುಭದ್ರೆ, ಪಾತ್ರಗಳಲ್ಲಿ ಇವರು, ತಮ್ಮ ಪ್ರಬುದ್ಧ-ಅನುಭವಿ ಅಭಿನಯದ ಮೂಲಕ ಒಂಭತ್ತು ಗಂಟೆಗಳ ನಾಟಕವನ್ನು ತೂಗಿಸಿಕೊಂಡು ಹೋದರು. ಹೊಸಬರಲ್ಲಿ ಕರ್ಣ, ದ್ರೌಪದಿ, ಮಾದ್ರಿ, ಭೀಮ, ಕೃಷ್ಣ,ಪಾತ್ರಧಾರಿಗಳು ಲವಲವಿಕೆಯಿಂದ ನಟಿಸಿ ಪಾತ್ರಕ್ಕೆ ನ್ಯಾಯ ಒದಗಿಸಿದರು. ಉಳಿದ ಅನೇಕರಲ್ಲಿ ಅನುಭವದ ಕೊರತೆ ಕಾಣಿಸುತ್ತಿತ್ತು.

ಇವಿಷ್ಟು ನಾಟಕದ ಉತ್ತಮಾಂಶಗಳಾದರೆ, ಇಡೀ ನಾಟಕವೇ ಪ್ರಥಮ ಭಾಗದ ನಂತರ ತೀರ ವಿಳಂಬಿತವಾಗುತ್ತ, (ಪ್ರಥಮ ಭಾಗವನ್ನೇ ಪ್ರತ್ಯೇಕ ರಂಗ ಕೃತಿಯಾಗಿ ನೋಡಬಹುದು) ಕೊನೆಯ ಹಂತಕ್ಕೆ ಬರುವ ವೇಳೆಗೆ ಪ್ರೇಕ್ಷಕನ ಸಹನೆಯನ್ನು ಪರೀಕ್ಷಿಸುತ್ತದೆ. ಕೃಷ್ಣ ದ್ವೈಪಾಯನರ ಕೆಲವು ದೃಶ್ಯಗಳು, ಶಲ್ಯ, ಕೃಪಾಚಾರ್ಯ, ಜಯದ್ರಥ, ವಿದುರ, ಸಂಜಯರ ಕೆಲವು ಭಾಗಗಳು, ಯುದ್ಧದ ಹಲವು ದೃಶ್ಯಗಳು, ನಿಯೋಗ ಪಧ್ದತಿಯ ವಿವರಗಳು ಹೀಗೆ ಹಲವು ದೃಶ್ಯಗಳಲ್ಲಿ ಹೃಸ್ವಗೊಳಿಸಲು ಸಾಕಷ್ಟು ಅವಕಾಶವಿದೆ. ಕನಿಷ್ಟ ಎರಡು ಗಂಟೆಯಷ್ಟು ಅವಧಿಯನ್ನು ಕಡಿಮೆ ಗೊಳಿಸಿದರೆ, ಒಟ್ಟು ಆಶಯಕ್ಕೆ ಕೊರತೆಯಾಗಂತೆ ಇನ್ನೂ ಬಿಗಿಯಾದ ರಂಗಕೃತಿಯನ್ನು ಕಟ್ಟಲು ಸಾಧ್ಯ.

ರಂಗ ಸಜ್ಜಿಕೆ,ಮತ್ತು ಬೆಳಕಿನ ವಿನ್ಯಾಸ ನಾಟಕಕ್ಕೆ ಬಲ ತುಂಬಿದ್ದರೆ. ಸಂಗೀತ ಇನ್ನೂ ಹೊಂದಿಕೊಳ್ಳುತ್ತಿಲ್ಲ, ಈಗಲೂ ಸರಿಪಡಿಸಿಕೊಳ್ಳಲು ಅವಕಾಶವಿದೆ. ತೀರ ಕಿರಿಕಿರಿ ಎನಿಸಿದ್ದು ವಸ್ತ್ರ ವಿನ್ಯಾಸ. ಭೈರಪ್ಪನವರು ಪರ್ವ ಬರೆದದ್ದೇ ಮೂಲ ಭಾರತದ ಪೌರಾಣಿಕ, ದೈವಿಕ ವೈಭವೀಕರಣಗಳನ್ನೆಲ್ಲ ನಿವಾರಿಸಿ ಇಡೀ ಮಹಾಭಾರತವನ್ನೇ ಜನಸಾಮಾನ್ಯರ ಕಥೆಯಾಗಿಸುವುದರ ಮೂಲಕ.

ಹೆಚ್ಚೂ ಕಡಿಮೆ ಕಂಪೆನಿ ನಾಟಕದ ಶೈಲಿಯ ಪೌರಾಣಿಕ ವೈಭವೀಕೃತ ವಸ್ತ್ರಾಲಂಕಾರ ಬೈರಪ್ಪನವರ ಆಶಯದ ಪರ್ವಕ್ಕೆ ವ್ಯತಿರಿಕ್ತವಾಗಿದೆ ಎನಿಸಿತು. ಭೈರಪ್ಪನವರ ಪರ್ವವನ್ನು ಒಂದು ಜೀವಪರ ಕೃತಿಯಾಗಿಸುವಲ್ಲಿ ನಿರ್ದೇಶಕ ಪ್ರಕಾಶ ಬೆಳವಾಡಿ ಖಂಡಿತ ಯಶಸ್ವಿಯಾಗಿದ್ದಾರೆ.
ಆದರೂ ನಾಟಕ ನೋಡಿದ ನಂತರ…

ನಲುವತ್ತು ವರ್ಷಗಳ ಹಿಂದೆ ಇಂಥ ಕೃತಿಯನ್ನು ಕೊಟ್ಟ ಬೈರಪ್ಪ ಮತ್ತು ನಂತರದ ದಿನಗಳಲ್ಲಿ ಬರೆದ ಭೈರಪ್ಪನವರು ಬೇರೆ ಬೇರೆಯೇ ಆಗಿರಬಾರದೇಕೆ? ಎಂಬ ಭ್ರಮಾತ್ಮಕ ಅಚ್ಚರಿಯೂ ‘ಸಮಕಾಲೀನ ಸಮಸ್ಯೆ ಗಳನ್ನು ಹೇಳಲು ಪುರಾಣ-ಇತಿಹಾಸಗಳ ಬಳಕೆಯ ರೂಪಕವೇ ಆಗಬೇಕೇನ್ರಯ್ಯ? ನಿಮಗೆ ನಾಟಕದವ್ರಿಗೆ, ವರ್ತಮಾನಕ್ಕೆ ನೇರ ಮುಖಾಮುಖಿಯಾಗಲು ಏನು ಕಷ್ಟ?’ ಎಂಬ, ಪೂರ್ಣಚಂದ್ರ ತೇಜಸ್ವಿಯವರ ಪ್ರಶ್ನೆ….. ಮನಸ್ಸಿನಲ್ಲಿ ಉಳಿದೇ ಹೋದವು.

‍ಲೇಖಕರು Avadhi

April 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಶ್ರೀರಂಗ

    ಪೂಚಂತೇ ಅವರ ತಂದೆ ಕುವೆಂಪು ಅವರು
    ರಾಮಾಯಣದರ್ಶನಂ ಬರೆಯಬಹುದಾದರೆ ಭೈರಪ್ಪನವರೂ ಸೇರಿದಂತೆ ಇತರರು ಇತಿಹಾಸ ಮತ್ತು ಪುರಾಣಗಳಿಂದ ರೂಪಕಗಳನ್ನು ತೆಗೆದುಕೊಂಡು ಬರೆಯುವುದರಲ್ಲಿ ತಪ್ಪೇನೂ ಇಲ್ಲ.

    ಪ್ರತಿಕ್ರಿಯೆ
    • ಶ್ರೀರಂಗ

      ಪರ್ವ ಕಾದಂಬರಿಯ ಮುಖ್ಯ ಉದ್ದೇಶ ಮಹಾಭಾರತದ ಕಥೆಯನ್ನು ನಿಜವೆಂದು ಸಾಧಿಸುವ ಮತ್ತು ಆ ಮೂಲಕ ಪೌರಾಣಿಕ ಪ್ರಜ್ಞೆಯನ್ನು ಹಿಂಬಾಗಿಲಿನಿಂದ ಉದ್ದೀಪಿಸುವುದಲ್ಲ. ಕುಂತಿ, ಮಾದ್ರಿ, ದ್ರೌಪದಿ, ಭೀಮ, ಕೃಷ್ಣ ಇತ್ಯಾದಿ ಪಾತ್ರಗಳು ಎದುರಿಸುವ ಸಮಸ್ಯೆಗಳು ಸಮಕಾಲೀನ ಅಲ್ಲದೆ ಇರಬಹುದು. ಆದರೆ ಅವುಗಳ
      ವಿವರವಾದ ವಿಶ್ಲೇಷಣೆಯನ್ನು ಮಾಡುವ ಮೂಲಕ ಆ ಪಾತ್ರಗಳ ಮಾನವೀಯ ಮುಖಗಳನ್ನು ವಿವರಿಸುವುದು ಆ ಕಾದಂಬರಿಯ ಉದ್ದೇಶ. ಸಮಕಾಲೀನ ಕಥೆ, ಕಾದಂಬರಿಗಳೂ
      ಕಲ್ಪನೆ ಅಲ್ಲವೇ? ಇವುಗಳ ಉದ್ದೇಶವೂ ಇದೇ ತಾನೇ? ಆದ್ದರಿಂದ ಮಹಾಭಾರತದ ಕಥೆಯಾದ ಮಾತ್ರಕ್ಕೆ ಅದರ ಬಗ್ಗೆ ತಿರಸ್ಕಾರದಿಂದ ನೋಡುವುದು ಸರಿ ಅಲ್ಲ.

      ಪ್ರತಿಕ್ರಿಯೆ
  2. prasad raxidi

    ಮೊದಲನೆಯದಾಗಿ ಗಮನಿಸಿ ಇದು ಬೈರಪ್ಪ ಮತ್ತು ಕುವೆಂಪು ಅವರ ವಿಮರ್ಶೆ ಅಲ್ಲ. ಮಲೆಗಳಲ್ಲಿ ಮದುಮಗಳು, ರಾಮಾಯಣ ದರ್ಶನಂ, ಪರ್ವ ಇವೆಲ್ಲವೂ ಕನ್ನಡದ ಮೇರು ಕೃತಿಗಳೇ ಇವುಗಳನ್ನು ಕಡೆಗಣಿಸಿ ಕನ್ನಡ ಸಾಹಿತ್ಯವನ್ನು ನೋಡಲು ಸಾಧ್ಯವಿಲ್ಲ
    ಈ ಕೃತಿ ಗಳ ಮಾತ್ರವಲ್ಲ ಯಾವುದೇ ಉತ್ತಮ ಕೃತಿಗಳ ಪಾತ್ರಗಳ ಗಳು ಅದು ಸರ್ರ್ವಕಾಲೀನವೂ ಆಗಿರುತ್ತವೆ.
    ತೇಜಸ್ವಿಯವರು ಎತ್ತಿದ ಪ್ರಶ್ನೆ ರಂಗಕೃತಿಗಳ ಬಗ್ಗೆ . ಪುರಾಣ ಮತ್ತು ಇತಿಹಾಸಗಳ ಕತೆಗಳನ್ನಿಟ್ಟುಕೊಂಡು ರೂಪಕಗಳ ಮೂಲಕ ಸಮಕಾಲೀನ ಸಮಸ್ಯೆಗಳನ್ನು ಪ್ರಸ್ತುತ ಪಡಿಸುವ ಬಗ್ಗೆ. ನೀವು ರಂಗರ್ಮಿಗಳು ನೇರ ವರ್ತಮಾನಕ್ಕೆ ಮುಖಾಮುಖಿಯಾಗಿ ಯಾಕೆ ರಂಗಕೃತಿ ರಚಿಸುವುದಿಲ್ಲ ? ಏನು ಅಡ್ಡಿ ಎಂದಿದ್ದರು.
    ನೇರವಾಗಿ ವರ್ತಮಾನಕ್ಕೆ ಮುಖಾಮುಖಿಯಾಗುವುದಕ್ಕೆ ಕೌಶಲ ಮಾತ್ರ ಸಾಲದು ವರ್ತಮಾನದ ಹಲವು ಶಕ್ತಿಗಳನ್ನು ಎದುರಿಸಉವ ಶಕ್ತಿಯೂ ಬೇಕು, ಅದಕ್ಕಾಗಿ ಕೆಲವರು ರೂಪಕಗಳ ಸುರಕ್ಷಿತ ದಾರಿಯನ್ನು ಕಂಡುಕೊಳ್ಳುತ್ತಾರೆ.
    ನಾನು ಕೂಡಾ ಇಲ್ಲಿ ಸಾಹಿತ್ಯ ಕೃತಿಗಳ ಬಗ್ಗೆ ಬರೆದಿಲ್ಲ.
    ರಂಗಕೃತಿಯ ಬಗ್ಗೆ ಮತ್ತು ಸಶಕ್ತವಾಗಿಯೇ ಉತ್ತಮ ರಂಗೃಕೃತಿಯಾಗಿ ಬಂದಿದೆ ಎನ್ನುವುದನ್ನು ವಿವರವಾಗಿ ಬರೆದಿದ್ದೇನೆ. ಜೊತೆಯಲ್ಲಿ ಪ್ರಸ್ತುತ ರಂಗಭೂಮಿಯ ಸಮಸ್ಯೆಗಳ ಬಗ್ಗೆಯೂ ಸೂಚ್ಯವಾಗಿ ಗಮನಸೆಳೆದಿದ್ದೇನೆ,
    ಇಲ್ಲಿ ಪರ್ವದ ಪಾತ್ರಗಳ ಸಮಕಾಲೀನ ವಲ್ಲ ಎಂದಾಗಲೀ, ರಾಮಾಯಣ ದರ್ಶನಂ ರಂಗಕ್ಕೆ ತಂದದ್ದು ಸರಿ ಪರ್ವ ತಂದದ್ದು ಸರಿಯಲ್ಲ ಎಂಬ ವಿಚಾರವಾದರೂ ಎಲ್ಲಿದೆ ಇನ್ನೊಮ್ಮೆ ಓದಿ…

    ಪ್ರತಿಕ್ರಿಯೆ
  3. ಶ್ರೀರಂಗ

    ಪ್ರಸಾದ್ ರಕ್ಷಿದಿ ಅವರಿಗೆ—ಪರ್ವ ಕಾದಂಬರಿಯ ನಾಟಕ ರೂಪಾಂತರದ ಬಗ್ಗೆ ಬರೆಯುವಾಗ ತಾವು ಪೂಚಂತೇ ಅವರು ಹೇಳಿದ್ದನ್ನು ಪ್ರಸ್ತಾಪಿಸಿದ್ಜಕ್ಕೆ ನಾನು ಪ್ರತಿಕ್ರಿಯಿಸಿದ್ದು. ತಮ್ಮ ಲೇಖನದ ಕೊನೆಯ ಪ್ಯಾರವೇ ಅನವಶ್ಯಕ. ಅದು ನಾಟಕ ಆಡುವವರಿಗೆ, ನೋಡುವವರಿಗೆ ಬಿಟ್ಟ ವಿಷಯ. ತಮ್ಮ ಪ್ರಕಾರ ನೇರವಾಗಿ ವರ್ತಮಾನಕ್ಕೆ ಮುಖಾಮುಖಿಯಾದ ನಾಟಕಗಳನ್ನು ಇದುವರೆಗೆ ಯಾರೂ ರಂಗಭೂಮಿಯ ಮೇಲೆ ತಂದೇ ಇಲ್ಲವೆ? ಮಾಸ್ಟರ್ ಹಿರಣ್ಣಯ್ಯ ಅವರು ಆಡಿದ ಸಾಮಾಜಿಕ ನಾಟಕಗಳ ಬಗ್ಗೆ ನಾನು ನೀವು ನೂರು ತಪ್ಪುಗಳನ್ನು ಹುಡುಕಬಹುದು. ಆದರೆ ನಾಟಕಗಳು ವರ್ತಮಾನದ ಹಲವು ಶಕ್ತಿಗಳನ್ನು ಎದುರಿಸಿವೆ. ಈಗಲೂ ಆ ನಾಟಕಗಳನ್ನು ಆಡುತ್ತಿಲ್ಲವೆ?

    ಪ್ರತಿಕ್ರಿಯೆ
    • ಪ್ರಸಾದ್ ರಕ್ಷಿದಿ

      ನಾನು ನಾಟಕ ನೋಡಿದ ನಂತರವೇ ಬರೆದಿರುವುದು. ಮತ್ತು ಎತ್ತಿರುವ ಪ್ರಶ್ನೆಯೂ ಹಲವರದು. ನಿಮಗೆ ಅನಗತ್ಯ ಆಗಿರಬಹುದು…ಆದರೆ ಖಂಡಿತ ಪ್ರಸ್ತುತ…

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: