ಬಿಡು ಸಾಕು ಈ ಕೇಡುಗಾಲಕ್ಕಿಷ್ಟು..

ಕನ್ನಡದ ಪ್ರಮುಖ ಕವಿ ರಮೇಶ್ ಅರೋಲಿ ಅವರ ಹೊಸ ಕವನ ಸಂಕಲನ ಇದು.

ಸಂಗಾತ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಗೆ ರಮೇಶ್ ಅರೋಲಿ ಬರೆದಿರುವ ಮಾತು ಇಲ್ಲಿದೆ-

ನೀವು ಮಾತ್ರ ನೋಡಬಲ್ಲ ಸ್ಥಿತಿಯಲ್ಲಿದ್ದ ನನ್ನನ್ನು, ಯಾರೋ ತಾಕಿದಂತೆ ಅನಿಸಿ…

ರಮೇಶ ಅರೋಲಿ

In the dark, pitch dark nights
When moments shudder from each other to recoil,
And the light in the rooms upstairs
Jump down to death from window above;
In the womb of such serene nights,
When revolt rages wild,
My murder can occur in the light or twilight.

ಹೀಗೊಂದು ಪುಟ್ಟ ಕವಿತೆಯ ಪೋಸ್ಟರ್ ‌ಆ ವಿಶ್ವವಿದ್ಯಾಲಯದ ಆ ಕಂದು ಬಣ್ಣದ ಇಟ್ಟಂಗಿ ಗೋಡೆಗಳಿಂದ ಎದ್ದು ಕಂಡಾಗ ಒಮ್ಮೆ ಮೈ ಚಳಿ ಬಿಟ್ಟು ಓದಿದ್ದೆ. ಆ ಕವಿತೆ ಪಂಜಾಬಿ ವಿಪ್ಲವ ಕವಿ ಪಾಷ್‌ ನದು. ಆ ವಿಶ್ವವಿದ್ಯಾಲಯದ ಗೋಡೆ ಜೆ.ಎನ್.ಯು ನದು. ನಾನು ಅತ್ಯಂತ ಲವಲವಿಕೆಯಿಂದ, ಜೀವಂತಿಕೆಯಿಂದ ಇರಲು ಕಲಿಸಿಕೊಟ್ಟ ಜಾಗೆ ಜವಹಾರಲಾಲ್‌ ನೆಹರು ವಿಶ್ವವಿದ್ಯಾಲಯ ಆವರಣ. ಕಣ್ಣೆದುರೆ ನಡೆದ ದಾಳಿಗಳಿಗೆ ಮತ್ತದೆಲ್ಲೋ ದೇಶದ ಮೂಲೆಯಲ್ಲಿ ಘಟಿಸುವ ಅನ್ಯಾಯಕ್ಕೆ ಕೊರಳೆತ್ತಿ ದನಿಗೊಟ್ಟ ನೆಲವಿದು. ಇಲ್ಲಿಯ ಮರಗಿಡಗಳಿಗೆ ಎಲೆಗಳಿಗಿಂತ ಕರಪತ್ರ ಚಿಗಿರುವುದು ಗೊತ್ತು!

ಪ್ರತಿ ಇಟ್ಟಿಗೆಯ ಮೇಲೆ ಪ್ರತಿರೋಧದ ಒಕ್ಕಣಿಕೆಯಿದೆ. ಅದಕ್ಕೆ ಹೊರಜಗತ್ತಿಗೆ ಇದೊಂದು ನಿಷೇಧಿಸಬೇಕಾದ ತಾಣ. ಜಗದ ಮುದ್ರಣಗಳು ಪ್ರಕಟಿಸಲು ಹಿಂಜರಿವ ನುಡಿಗಳನ್ನು ಇಲ್ಲಿಯ ಗೋಡೆಗಳು ತಮ್ಮ ಹಣೆಗೊತ್ತಿಕೊಳ್ಳುತ್ತವೆ. ಅದಕ್ಕೆ ಅವುಗಳನ್ನು ಕೆಡವಲು ಬುಲ್ಡೋಜರ್‌ಗಳನ್ನು ಒಳ ನುಗ್ಗಿಸಲಾಗಿದೆ.

ಕೊರಳೆತ್ತಿದ ಗಂಟಲಿಗೆ ಕೋಳ ತೊಡಿಸುತ್ತಿರುವ ಈ ಕೇಡುಗಾಲದ ಮುಂಜಾನೆಗಳಲ್ಲಿ ಹಾಡಬೇಕಾದ ಹಾಡು ಯಾವುದು? ಕೇಳಬೇಕಾದ ಮಾತು ಯಾವುದು? ಎಂಬತ್ತು ದಾಟಿರುವ ಕವಿಯೊಬ್ಬಾತನನ್ನು ಕಂಬಿ ಹಿಂದಣ ದೋಷಿಯಂತೆ ಮಾಡಿರುವ ಈ ವ್ಯವಸ್ಥೆಯಲ್ಲಿ ಅದ್ಹೇಗೆ ತಾನೆ ಕಂಡು ಕಾಣದಂತೆ ಆತ್ಮದ್ರೋಹ ಬಗೆದುಕೊಳ್ಳಲಿ? ದಿನೇ ದಿನೆ ಮಣ್ಣುಪಾಲಾಗುತ್ತಿರುವ ಹೆಣ್ಣು ಜೀವಗಳ ಗೋರಿ ಮುಂದೆ ನಿಂತು ಪಠಿಸಬೇಕಾದ ಮಂತ್ರ ಯಾವುದು? ದ್ವೇಷದ ಭಾಷೆಯನ್ನು ಕಿರುನಾಲಿಗೆಯಲ್ಲಿ ಅಡಗಿಸಿಕೊಂಡವರು ಈಗ ದೇಶ ಆಳುತ್ತಿದ್ದಾರೆ.

ಮನುಷ್ಯರನ್ನು ಮನುಷ್ಯರಂತೆ ಕಾಣು ಅನ್ನುವ ಸಂವಿಧಾನದ ಹಾಳೆಗಳನ್ನು ಹರಿದು ಯಜ್ಞಕುಂಡದ ಬೆಂಕಿಗೆ ಹಾಕುತ್ತಿವವರ ಗ್ರೂಪ್ ‌ಫೋಟೋದ ಎದುರು ಕೈಕಟ್ಟಿ ಕೂಡುವುದಾದರು ಹೇಗೆ? ಉಣ್ಣಲು ರೊಟ್ಟಿ ಕೊಟ್ಟವರ ಅಂಗೈ ಮೇಲೆ ಕೈದಿ ನಂಬರ್‌ ಬರೆಯ ಹೊರಟ ನಕಲಿ ನಗೆಮೊಗದ ಭಾವಚಿತ್ರಗಳಿಗೆ, ನಾಯಿ ಕಾಲೆತ್ತಿ ‘ನಮನ’ ಸಲ್ಲಿಸುವ ಹೊತ್ತು ಅದೊಂದು ವಿದ್ರೋಹಯೆಂದು ಬಗೆಯುವುದಾದರು ಹೇಗೆ?
ದಿಲ್ಲಿ ಚಳಿಗಿಷ್ಟು ಬೆಂಕಿ ಹಾಕಾ… ಅಂತ ಬೈದು ಕೊಂಡರೂ, ಇದರಿಂದ ಬಚಾವ್‌ ಆಗುವ ರಹದಾರಿಗಳು ಸಿಗುತ್ತಿಲ್ಲ. ಸಿಕ್ಕಾಗೊಮ್ಮೆ ಹಾಡು ಕೇಳಿಸಿಕೊಂಡು ‘ಇದನ್ನು ಹಲಗೆ ಜೊತೆ ಜನ ಸಮೂಹದಲ್ಲಿ ಹಾಡಬೇಕು, ಆಗ ಇನ್ನು ಮಜಾ ಕೊಡತದೆ’ ಎಂದು ಹುರಿದುಂಬಿಸುವ ಪುರುಷೋತ್ತಮ ಬಿಳಿಮಲೆ ಸರ್‌, ಮೆದುಳಿನ ಭಾಷೆ ತಿಳಿದವರ ನಡುವೆ, ಕರುಳಿನ ಭಾಷೆ ಬಲ್ಲ ಡಿ.ಉಮಾಪತಿ ಸರ್‌, ಬಿಡುವು ಮಾಡಿಕೊಂಡು ಕವಿತೆ ಕೇಳಿಸಿಕೊಳ್ಳುವ ರೇಣುಕಾ ನಿಡುಗುಂದಿ ಯವರಿಗೆ ನೆನೆಕೆಗಳು.

ಕೆಟ್ಟಕಾಲದಲ್ಲಿ ಒಳ್ಳೆಯ ಕಾವ್ಯ ಜನುಮ ತಾಳುತ್ತದೆ ಅಂದವರ ಬಾಯಿಗೆ ಬೀಗ ತೊಡಿಸಿರುವ ಈ ಘಳಿಗೆಯನು ಈ ನಿರುಪದ್ರವಿ ಪದಪುಂಜಗಳಲ್ಲಿ ಅಲ್ಲದೆ ಮತ್ತ್ಯಾವ ಬಣ್ಣದಲ್ಲಿ ಬಣ್ಣಿಸಬಹುದಿತ್ತು…೨೦೧೦ ರಲ್ಲಿ ಪ್ರಕಟವಾದ ʼಎಳೆಯ ಪಾಪದ ಹೆಸರು…ʼ ಸಂಕಲನದಲ್ಲಿ ವ್ಯಕ್ತವಾದ ತಳಮಳ, ೨೦೧೪ ರಲ್ಲಿ ಅಚ್ಚಾದ ʼಜುಲುಮೆʼ ಹಾಡಿನ ನಾದ, ಈ ಸಂಕಲನದ ಕೆಲ ಕವಿತೆಗಳಲ್ಲಿಯಾದರು ದಕ್ಕಿದೆ ಅನಿಸಿದರೆ ನಿಮ್ಮ ಓದಿಗೆ ಋಣಿ.

ಆರು ವರುಷದ ತರುವಾಯ ನನ್ನ ಕವಿತಾ ಸಂಕಲನ ಪ್ರಕಟವಾಗುತ್ತಿದೆ. ಒಲಿದಷ್ಟು ಉಲಿದಿರುವ ಇಲ್ಲಿಯ ಸಾಲುಗಳನ್ನು ಬರೆಯದಿದ್ದರೆ ಯಾರಿಗ್ಯಾವ ನಷ್ಟವಾಗಬಹುದಿತ್ತು! ಎಷ್ಟೇ ತಿವಿದು, ಟೀಕಿಸಿ, ಜಾಡಿಸಿ, ಛೇಡಿಸಿದರೂ; ಕೂಗುಮಾರಿತನ, ಅಸಂವಿಧಾನಿಕ ನಡೆ, ಏಕಮುಖೀಯ ಆಲೋಚನೆ, ಪ್ರಸಂಶೆಯ ಶನಿ ಕಾಟದಿಂದ ಹೊರಗುಳಿಯಲಾಗದ ಈ ಕಾಲದ ನಡೆಗೆ ಅದ್ಹೇಗಾದರು ಪ್ರತಿಕ್ರಿಯಿಸಬಹುದು ಎಂದೆಲ್ಲ ಅಂದುಕೊಂಡಾಗಲೆಲ್ಲ ಮತ್ತೆ ಮತ್ತೆ ನನ್ನನ್ನು ಕಟ್ಟಿಹಾಕಿದ್ದು ಕವಿತೆ.

ಇದೇ ನನ್ನ ಸೀಮೆ ಮತ್ತು ನನ್ನ ಸೀಮಿತ ಜಗವನ್ನಾಗಿಸಿ, ಈ ಕಾಲಕ್ಕೆ ಹೊಂದಿಕೊಂಡು ಹೋಗುವಂತೆ ಮಾಡಿದ ಬದುಕಿನ ನಿಷ್ಠುರ ಆಯ್ಕೆಯ ಹೆಗಲ ಮೇಲೆ ಕೈಹಾಕಿ ಹಾದಿ ಸವೆಸುವುದನ್ನು ಅರ್ಥೈಸಲು ವಿಫಲನಾಗಿದ್ದೇನೆ. ರೊಟ್ಟಿ ತಿನ್ನುವುದಿಲ್ಲಿ ಉಗುರು ಕಚ್ಚಿದಂತೆ ಅನಿಸುತ್ತಿರುವ ಈ ಕ್ಷಣ ನನಗೆ ಉಳಿದಿರುವುದು ಇದೊಂದೇ ದಾರಿ. ಅಲೆಗಳಂತೆ ಮೇಲೆದ್ದ ಪಕ್ಕದ ಗಲ್ಲಿಯ ಮನುಷ್ಯರ ಸುಟ್ಟ ಕೂಗು, ಕಮಟು ವಾಸನೆ ನನ್ನ ಮಕ್ಕಳ ಮೂಗು ತಲುಪುವ ಮುನ್ನ ಅವರಿಗೆ ಅದರ ಕಾರಣ ತಿಳಿಸಬೇಕಿದೆ. ಇಲ್ಲವೆಂದರೆ ಕಿಟಕಿಗಳಿಗೆ ಮೊಳೆ ಜಡಿದು ಈಗ ಉಸಿರು ನಿಲ್ಲಿಸಬೇಕಿದೆ.

‘ಮಹನೀಯರೆ, ನಿಮ್ಮನ್ನು ಟೀಕಿಸಲು ನನಗೆ ಅನುಮತಿ ಕೊಡಿ’ ಎಂದು ಬೇಡುವಂತೆ ಮಾಡಿದವರ ನಡೆ ಯಾರದಾಗಿದೆಯೋ, ಅವರೆದುರು ಮನೆಯಲ್ಲಿ ಹಾಡುವುದು ನಿಷಿದ್ಧಗೊಳ್ಳಬಹುದು. ಅದಕ್ಕಾಗಿ ಬ್ರೆಕ್ಟ್‌ನ ಬೀದಿಗೀತೆಯನು ನಡುಮನೆಯ ಗೋಡೆಗೆ ಒಪ್ಪಿಸಿ ಕಾಲ ನೂಕುವುದಕ್ಕಿಂತ, ಬಂದ ಘೋರವನು ಬರಮಾಡಿಕೊಂಡವರ ಢೇರೆಯಿಂದ ಇನ್ನಾದರು ಹೊರಬೀಳಬೇಕಿದೆ.

ಈ ತುಮುಲ, ಕಸಿವಿಸಿಯಿಂದ ತಪ್ಪಿಸಿಕೊಳ್ಳಲು ಕವಿತೆಯ ಸಹವಾಸವೇ ಸಾಕೆಂದುಕೊಂಡಿದ್ದು ಇದೆ. ದಿಗಿಲಿಗೆ ಕಾರಣವಾಗುವ ದಿನಪತ್ರಿಕೆಯ ಸುದ್ದಿಯಿಂದ ಎಲ್ಲಿಗಂತ ಓಡಿ ಹೋಗುವುದು! ಪಾಷ್‌ನ ಸಂಕಟ ನನ್ನದಾಗಿಸುವ ಈ ಕವಿತೆಯಿಂದ ದೂರ ಉಳಿಯುವ ಪ್ರಯಾಸ ತಪ್ಪುತ್ತಿಲ್ಲ. ಹೀಗಿರುವಾಗ ಕವಿತೆ ಕೇಳಿ ಪತ್ರಿಕೆಗಳಲ್ಲಿ ಪ್ರಕಟಿಸಿದ ಗೆಳೆಯರಿಗೆ, ನನ್ನ ಬರವಣಿಗೆಯೆಡೆಗೆ ಬೆರಗುಗಣ್ಣಿನಿಂದ ನೋಡುವ ಹಿರಿಯರಿಗೆ ಋಣಿ. ‘ಏನಯ್ಯಾ…ಹೊಸ ಕವಿತೆ ಬರೆದಿಯಾ? ಎಲ್ಲಿ ಓದು…’ ಎನ್ನುತ್ತಾ ನನ್ನ ಕವಿತೆಗಳಿಗೆ ಕಿವಿ, ಕಣ್ಣಾಗುವ ಎಚ್‌ ಎಸ್ ‌ಶಿವಪ್ರಕಾಶರಿಗೆ, ಎಂದಿನಂತೆ ಮಮತೆ ತೋರುವ ಶಶಿಧರ ತೋಡ್ಕರ್‌ಅವರಿಗೆ ನಮನಗಳು.

ಕವಿತೆ ಬೆಸೆಯುವ ಕಳ್ಳುಬಳ್ಳಿಯ ನಂಟು ದೊಡ್ಡದು. ಕೇವಲ ಕೆಲ ಹೆಸರು ಹೇಳಿದ ಅಪರಾಧಕ್ಕೀಡಾದೆ. ಗೆಳೆಯ ಆರೀಫ್‌ನ ತಮಾಷೆಯಂತೆ ಆ ಆಧಾರ್‌ಕಾರ್ಡ್, ಓಟರ್‌ ‌ಲಿಸ್ಟ್‌ ಛಾಪಿಸುವಿಕೆ ನಿಲ್ಲಿಸಬೇಕು ಅನಿಸಿ ಇಲ್ಲಿ ಎಲ್ಲಾ ಹಿತೈಸಿಗಳ ಹೆಸರು ಹಾಕುತ್ತಿಲ್ಲ. ಹಿಂದಿನ ಸಂಕಲನಗಳ ಬಗ್ಗೆ ಸುದೀರ್ಘವಾಗಿ ಬರೆದ ಗೆಳೆಯ ಸುರೇಶ ನಾಗಲಮಡಿಕೆ ಅವರ ಬರಹವನ್ನು ಯಥಾವತ್ತು ಇಲ್ಲಿ ಬಳಸಿಕೊಂಡಿದ್ದೇನೆ. ಅವರಿಗೆ ನಮಸ್ಕಾರ.

ಹಾಗೆಯೆ ಈ ಕವಿತೆಗಳನ್ನು ಓದಿ ತಮ್ಮ ನುಡಿ ಆಡಿದ ಹಿರಿಯರಾದ ಕವಿಯತ್ರಿ ಲಲಿತಾ ಸಿದ್ಧಬಸವಯ್ಯ ಮೇಡಂ ಅವರಿಗೆ ಧನ್ಯವಾದಗಳು. ‘ಸಂಗಾತ’ದಡಿ ಪ್ರಕಟಿಸುತ್ತಿರುವ ಗೆಳೆಯ ಟಿ.ಎಸ್. ಗೊ ರವರಗೆ, ಮುಖಪುಟ ರಚಿಸಿದ ಕಲಾವಿದರಿಗೆ, ಮುದ್ರಿಸಿದವರಿಗೆ ವಂದಿಸುತ್ತೇನೆ.

‍ಲೇಖಕರು Avadhi

April 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: