ರಂಗಭೂಮಿಯನ್ನೂ ಬೆನ್ನತ್ತಿದ ಕೋಮುವಾದದ ಸರಕು

ನಾ ದಿವಾಕರ

ಈ ಬರಹ ಈ ಮೊದಲು ಲೇಖಕರ ಫೇಸ್ ಬುಕ್ ನಲ್ಲಿ ಪ್ರಕಟವಾಗಿದೆ

ಒಂದು ನಾಟಕೋತ್ಸವ ಎಂದರೆ ಅಲ್ಲಿ ನೆರೆಯುವ ಜನರಿಗೆ ನಾಟಕಗಳನ್ನು ಆಸ್ವಾದಿಸುವ ಒಂದು ಹಂಬಲ ಇರುತ್ತದೆ. ನಾಟಕದ ಕಥಾವಸ್ತು ಏನೇ ಆಗಿದ್ದರೂ, ಪ್ರೇಕ್ಷಕರ ನಡುವಿನ ವ್ಯಕ್ತಿಗತ ತಾತ್ವಿಕ ನಿಲುವುಗಳು ಬದಿಗೆ ಸರಿದು, ರಂಗದ ಮೇಲಿನ ಅಭಿನಯ, ಬೆಳಕು, ರಂಗಸಜ್ಜಿಕೆ, ವಿನ್ಯಾಸ, ಸಂಭಾಷಣೆ, ಪಾತ್ರಧಾರಿಗಳ ಅಂಗಿಕ, ಭಾವುಕ ಅಭಿನಯ ಇವುಗಳೇ ಮುಖ್ಯವಾಗಿ ಆಸ್ವಾದನೆಗೊಳಗಾಗುತ್ತವೆ. ರಂಗಭೂಮಿ ಈ ಆಧುನಿಕ ಕಾಲಘಟ್ಟದಲ್ಲೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿರುವುದಕ್ಕೆ ಕಾರಣ ಈ ಸೌಂದಾರ್ಯಾಸ್ವಾದವೇ ಆಗಿದೆ.

ಒಂದು ನಾಟಕೋತ್ಸವವನ್ನು ಎದುರು ನೋಡುವ ರಂಗಭೂಮಿಯ ಅಭಿಮಾನಿಗಳಿಗೆ, ಹೊಸ ಅನುಭವಗಳಿಗೆ ಮುಖಾಮುಖಿಯಾಗುವ ನಿರೀಕ್ಷೆಯೂ ಇರುತ್ತದೆ. ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟಿನಲ್ಲಿ ಇರಬಹುದಾದ ತಾತ್ವಿಕ ಭಿನ್ನಾಭಿಪ್ರಾಯಗಳೆಲ್ಲವೂ ನೇಪಥ್ಯಕ್ಕೆ ಸರಿದು, ನಾಟಕಗಳು ಪ್ರೇಕ್ಷಕರ ಮುಂದೆ ಮನರಂಜನೆ ಮತ್ತು ಬೌದ್ಧಿಕ ವಸ್ತುಗಳನ್ನು ಇಡುತ್ತವೆ. ಹಾಗಾಗಿಯೇ ನಾಸ್ತಿಕರಾದವರೂ ಒಂದು ಪೌರಾಣಿಕ ನಾಟಕವನ್ನು, ದೈವತ್ವ ಕೇಂದ್ರಿತ ನಾಟಕಗಳನ್ನು ಆಸ್ವಾದಿಸಲು ಸಾಧ್ಯ. ಇದು ರಂಗಭೂಮಿಯ ಗುಣ.

ಈ ಪೀಠಿಕೆಗೆ ಕಾರಣ ಇತ್ತೀಚಿನ ಒಂದು ಕಹಿ ಅನುಭವ. ಇದೇ 26ನೆಯ ತಾರೀಕು ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ಅಪ್ರವರಂಬೆ ಸಂಸ್ಥೆಯ ಒಂದು ನಾಟಕೋತ್ಸವ ಆರಂಭವಾಯಿತು. ಆಹ್ವಾನವಿದ್ದುದರಿಂದ, ನಾಟಕಗಳಲ್ಲಿ ಆಸಕ್ತಿ ಇದ್ದುದರಿಂದ ಹೋಗಿದ್ದೆ. ಮೊದಲ ದಿನವೇ ಶ್ರೀಯುತ ನಾಗಚಂದ್ರ ಅವರ ‘ಧರ್ಮ ದುರಂತ’ ಎಂಬ ನಾಟಕದ ಕೃತಿ ಬಿಡುಗಡೆಯನ್ನೂ ಮಾಡಲಾಯಿತು.

1942ರಲ್ಲಿ ಎಂ ಆರ್ ಶ್ರೀ ಅವರಿಂದ ರಚಿಸಲಾಗಿದ್ದ ರಗಳೆಯ ರೂಪದ ಕಥಾವಸ್ತುವನ್ನು ನಾಟಕ ಕಥಾವಸ್ತುವನ್ನಾಗಿ ನಾಗಚಂದ್ರ ಅವರು ಈ ಪುಸ್ತಕವನ್ನು ಹೊರತಂದಿದ್ದರು. ಈ ನಾಟಕದ ಕತೆಯೂ ಟಿಪ್ಪು ಸುಲ್ತಾನನ ಕಾಲದಲ್ಲಿ ಆದ ಮತಾಂತರದ ಸುತ್ತ ಇದ್ದುದು ಪ್ರಾಸಂಗಿಕವಷ್ಟೆ. ಈ ನಾಟಕೋತ್ಸವವನ್ನು ಉದ್ಘಾಟಿಸಿ, ಕೃತಿ ಬಿಡುಗಡೆ ಮಾಡಿದ ರಂಗಾಯಣ ನಿರ್ದೇಶಕರಾದ ಶ್ರೀಯುತ ಅಡ್ಡಂಡ ಕಾರ್ಯಪ್ಪ ಸಹಜವಾಗಿಯೇ ಪುಸ್ತಕದ ಕಥಾವಸ್ತುವಿನ ಸುತ್ತ ಮಾತನಾಡಬೇಕಿತ್ತು. ಈ ಪುಸ್ತಕದಲ್ಲಿ ಬರುವ ಕಥಾಹಂದರದ ಸುತ್ತ ಮಾತನಾಡಿ, ನಾಟಕೋತ್ಸವಕ್ಕೆ ಚಾಲನೆ ನೀಡಬೇಕಿತ್ತು.

ಅದರೆ ಮಾನ್ಯ ಕಾರ್ಯಪ್ಪನವರ ಉದ್ಘಾಟನಾ ಭಾಷಣ, ರಂಗಾಯಣದ ನಿರ್ದೇಶಕರ ಭಾಷಣದಂತೆ ಇರಲಿಲ್ಲ. ಒಬ್ಬ ಸಂಘಪರಿವಾರದ ವಕ್ತಾರರಂತೆ ಟಿಪ್ಪು ಸುಲ್ತಾನನ ಬಗ್ಗೆ ಈಗಾಗಲೇ ಇರುವ ವಾಟ್ಸಾಪ್ ವಿಶ್ವವಿದ್ಯಾಲಯದ ಸರಕುಗಳನ್ನೇ ಪ್ರಸ್ತಾಪಿಸುತ್ತಾ ಕೆಂಡ ಕಾರಲಾರಂಭಿಸಿದರು. ಟಿಪ್ಪುವಿನ ಬಗ್ಗೆ ಈಗಾಗಲೇ ಚರ್ಚೆಯಲ್ಲಿರುವ ಮತಾಂತರ, ಮತಾಂಧತೆ, ದೇವಸ್ಥಾನಗಳ ಲೂಟಿ, ಅವನ ಅಂತ್ಯ ಹೀಗೆ ತಮಗೆ ತಿಳಿದಿದ್ದನ್ನು ಅಥವಾ ತಾವು ಓದಿಕೊಂಡಿದ್ದನ್ನು, ತಮ್ಮ ಪೂರ್ವಿಕರು ಮತಾಂತರಗೊಂಡಿದ್ದನ್ನೂ ಪ್ರಸ್ತಾಪಿಸುತ್ತಾ ಮಾತನಾಡಿದ ಕಾರ್ಯಪ್ಪನವರು ತಮ್ಮ ಮಾತಿನ ಓಘದಲ್ಲಿ ತಾವು ರಂಗಾಯಣದ ನಿರ್ದೇಶಕರಾಗಿ ಅಲ್ಲಿ ನಿಂತಿರುವುದನ್ನೇ ಮರೆತು ಮಾತನಾಡಿದಂತಿತ್ತು. ಅವರ ಮಾತಿನಲ್ಲಿದ್ದ ಸುಳ್ಳು ಇತಿಹಾಸಗಳನ್ನು ಈಗಾಗಲೇ ಹಲವು ಯುವ ಲೇಖಕರು, ಸಾಹಿತಿಗಳು ಚಾರಿತ್ರಿಕ ದಾಖಲೆಗಳೊಡನೆ ಅಲ್ಲಗಳೆಯುತ್ತಿರುವುದರಿಂದ ಎಲ್ಲವನ್ನೂ ಇಲ್ಲಿ ಪ್ರಸ್ತಾಪಿಸುವುದಿಲ್ಲ.

ಆದರೆ ಇಲ್ಲಿ ಪ್ರಶ್ನೆ ಇರುವುದು ಸಾಂದರ್ಭಿಕ ವ್ಯವಧಾನವನ್ನು ಕುರಿತಾದದ್ದು. ಮಾನ್ಯ ಕಾರ್ಯಪ್ಪನವರು ನಾಟಕೋತ್ಸವವನ್ನು ಉದ್ಘಾಟಿಸಬೇಕಿತ್ತು, ಧರ್ಮ ದುರಂತ ಕೃತಿ ಬಿಡುಗಡೆ ಮಾಡಿ ಆ ಕೃತಿಯನ್ನು ಕುರಿತು ನಾಲ್ಕು ಮೆಚ್ಚುಗೆಯ (ಅನಿವಾರ್ಯವಾಗಿಯಾದರೂ) ಮಾತುಗಳನ್ನಾಡಿ ಮುಗಿಸಬೇಕಿತ್ತು. ಸಾರ್ವಜನಿಕವಾಗಿ ಚರ್ಚೆಯಲ್ಲಿರುವ ಟಿಪ್ಪುವಿನ ಚರಿತ್ರೆಯನ್ನು ವೇದಿಕೆಯ ಮೇಲೆ ಪುನರುಚ್ಚರಿಸಲು ಅದು ಸಂದರ್ಭ ಆಗಿರಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ಅಲ್ಲಿ ನೆರೆದಿದ್ದ ಮೂವತ್ತರಷ್ಟು ನಾಟಕ ಪ್ರೇಮಿಗಳಿಗೆ ಇದು ಅಗತ್ಯವಾಗಿರಲಿಲ್ಲ.

ಹಾಗೆಯೇ ತಾವು ಅಲ್ಲಿ ನಿಂತಿರುವುದು ಕರ್ನಾಟಕದ ರಂಗಭೂಮಿಯ ಪ್ರತಿಷ್ಠೆ ಎನ್ನಬಹುದಾದ ರಂಗಾಯಣದ ನಿರ್ದೇಶಕರಾಗಿ ಎನ್ನುವುದನ್ನೇ ಮರೆತು, ಸಂಘಪರಿವಾರದ ವಕ್ತಾರರಂತೆ ಟಿಪ್ಪುವಿನ ಮೇಲೆ ಕೆಂಡ ಕಾರಲು ಮುಂದಾಗಿದ್ದು, ಸಮರ್ಥನೀಯ ಎನಿಸುವುದಿಲ್ಲ. ನಾಟಕ ನೋಡಲೆಂದೇ ಬಂದವರಿಗೆ ಇದು ರಸಭಂಗ ಉಂಟುಮಾಡಿರಲಿಕ್ಕೂ ಸಾಕು. ಇದೇ ಉದ್ದೇಶದಿಂದ, ತಮ್ಮದೇ ರಂಗಾಯಣದ ಕಾರ್ಯಕ್ರಮವನ್ನೂ ತೊರೆದು ಇಲ್ಲಿಗೆ ಬಂದಿದ್ದೇ ಆದರೆ ಅದು ಅಕ್ಷಮ್ಯ. ಈ ಮಾತುಗಳಿಗೆ ವೇದಿಕೆ ಒದಗಿಸಲು ವಿಪುಲ ಅವಕಾಶಗಳು ಸಾರ್ವಜನಿಕವಾಗಿಯೇ ಲಭ್ಯವಿದೆ ಅಲ್ಲವೇ ? ಒಂದು ನಾಟಕೋತ್ಸವದ ಉದ್ಘಾಟನೆಯೇ ಬೇಕಿತ್ತೇ ?

ಆಹ್ವಾನಿತ ಅಧ್ಯಕ್ಷರು ಬಾರದೆ ಹೋದ ಕಾರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಸ. ರಾ ಸುದರ್ಶನ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾರ್ಯಪ್ಪ ಅವರು ಪ್ರಸ್ತಾಪಿಸಿದ ಕೆಲವು ವಿಚಾರಗಳಿಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದೇ ಅಲ್ಲದೆ ಟಿಪ್ಪುವಿನ ಇತಿಹಾಸವನ್ನು ಪರ ಮತ್ತು ವಿರೋಧ ಎರಡೂ ಬಣಗಳು ವಸ್ತುನಿಷ್ಠವಾಗಿ ನೋಡಬೇಕು ಎಂದು ಹೇಳುವುದರಲ್ಲಿದ್ದರು. ಅಷ್ಟರಲ್ಲಿ ಪ್ರೇಕ್ಷಕರ ನಡುವೆ ನೆರೆದಿದ್ದ ಕೆಲವು ಕೂಗುಮಾರಿಗಳಿಂದ ಪ್ರಬಲ ವಿರೋಧ ವ್ಯಕ್ತವಾಗಿ ಕೊನೆಗೆ ಅವರಿಗೆ ಮಾತನಾಡಲು ಅವಕಾಶವನ್ನೇ ನೀಡದೆ, ಸುದರ್ಶನ್ ಸಭೆಯಿಂದ ನಿರ್ಗಮಿಸಬೇಕಾಯಿತು.

ಇಲ್ಲಿ ಪ್ರಶ್ನೆ ಇರುವುದು ಟಿಪ್ಪು ಅಲ್ಲ. ಟಿಪ್ಪುವಿನ ಇತಿಹಾಸವೂ ಅಲ್ಲ. ಅದನ್ನು ಚರ್ಚೆ ಮಾಡಲು ವೇದಿಕೆಗಳು ವಿಪುಲವಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಚರ್ಚೆಯಾಗುತ್ತಿವೆ. ಹತ್ತಾರು ಪುಸ್ತಕಗಳು ಹೊರಬರುತ್ತಿವೆ, ವಾಟ್ಸಾಪ್ ವಿಶ್ವವಿದ್ಯಾಲಯದ ಪಂಡಿತರಿಂದಲೂ ಭಿನ್ನ ಇತಿಹಾಸದ ಮಜಲುಗಳು ಹೊರಬರುತ್ತಿವೆ. ಆದರೆ ಈ ವೇದಿಕೆಯಲ್ಲಿ ಇದು ಚರ್ಚೆಯಾಗಬೇಕಿತ್ತೇ ? ಮಾನ್ಯ ಅಡ್ಡಂಡ ಕಾರ್ಯಪ್ಪ ಅವರಿಗೆ ಈ ವ್ಯವಧಾನ ಇರಬೇಕಿತ್ತು. ಪುಸ್ತಕದ ಕಥಾವಸ್ತುವಿನ ಬಗ್ಗೆ ಮಾತ್ರವೇ ಮಾತನಾಡಿ ನಾಟಕಕ್ಕೆ ಚಾಲನೆ ನೀಡಿದ್ದಲ್ಲಿ, ನಾಟಕೋತ್ಸವ ಆಯೋಜಿಸಿದವರಿಗೂ, ಅಲ್ಲಿ ನೆರೆದಿದ್ದ ರಂಗಾಭಿಮಾನಿಗಳಿಗೂ ತೃಪ್ತಿಯಾಗುತ್ತಿತ್ತು ? ತಾವು ಪ್ರತಿನಿಧಿಸುತ್ತಿರುವ ರಂಗಾಯಣ ಕನ್ನಡ ಜನತೆಗೆ ಸೇರಿದ ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆ ಎನ್ನುವುದನ್ನೂ ನಿರ್ದೇಶಕರಾದವರು ನೆನಪಿನಲ್ಲಿಡಬೇಕು.

‘ನಾನು ರಂಗಾಯಣದ ನಿರ್ದೇಶಕನಾಗಿರುವವರೆಗೂ ಈ ಸತ್ಯವನ್ನು (ಟಿಪ್ಪುವಿನ ಬಗ್ಗೆ) ಹೇಳುತ್ತಲೇ ಇರುತ್ತೇನೆ’ ಎಂದು ಘೋಷಿಸಲು ಅದು ರಾಜಕೀಯ ವೇದಿಕೆಯಲ್ಲ ಅಥವಾ ಯಾವುದೇ ಒಂದು ಸಂಘಟನೆಯ ವೇದಿಕೆ ಆಗಿರಲಿಲ್ಲ. ಅಡ್ಡಂಡ ಕಾರ್ಯಪ್ಪ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಾನ್ಯ ಮಾಡುತ್ತಲೇ ಈ ಆಕ್ಷೇಪಗಳನ್ನು ವ್ಯಕ್ತಪಡಿಸುವುದು ನನ್ನ ಕರ್ತವ್ಯ ಎಂದೇ ಭಾವಿಸುತ್ತೇನೆ. ಏಕೆಂದರೆ ರಸಭಂಗವಾಗಿ ಹೊರನಡೆದವರಲ್ಲಿ ನಾನೂ ಒಬ್ಬನಾಗಿದ್ದೆ.

ಸಾಂಸ್ಕೃತಿಕ ವಲಯದಲ್ಲಿರುವ ಸ್ವಾಯತ್ತ ಸಂಸ್ಥೆಗಳು ಬೌದ್ಧಿಕವಾಗಿ ಹೀಗೆ ಕಲುಷಿತವಾಗುವುದರಿಂದ ಎಂತೆಂತಹ ಅಪಾಯಗಳುಂಟಾಗುತ್ತವೆ ಎನ್ನುವುದಕ್ಕೆ ಈ ನಾಟಕೋತ್ಸವದ ಉದ್ಘಾಟನೆ ಸಾಕ್ಷಿಯಾಗಿತ್ತು.

‍ಲೇಖಕರು Admin

November 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. augustin

    ರಂಗಾಯಣದ ನಿರ್ದೇಶಕ ಕಾರ್ಯಪ್ಪ “ಹಿಜ್ ಮಾಸ್ಟರ್ಸ ವಾಯ್ಸ್”

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: