ಮೇಗರವಳ್ಳಿಯಲ್ಲಿ ಕಂಡ ಹಾಜಬ್ಬ ಮತ್ತು ಹುಲಿಕಲ್ಲು ನೆತ್ತಿಯ ಗುತ್ತಿ

ನೆಂಪೆ ದೇವರಾಜ್

ಬಾಯಿ ಬಿಡದೆ ಆಡಿದ ಮಾತೆಲ್ಲವೂ ಹೃದಯದಿಂದಲೆ ಹೊರ ಹೊಮ್ಮುತ್ತಿದ್ದವು.. ಕೋಲಿಗೆ ಬಿಳಿಯ ಬಟ್ಟೆ ಸುತ್ತಿದಂತಿದ್ದ ಇವರು ನಡೆಯುತ್ತಿದ್ದಾರೋ ಅಥವಾ ಕೋಲೆ ಇವರನ್ನು ನಡೆಸುತ್ತಿದೆಯೋ ಎಂಬುದನ್ನು ತಿಳಿಯಲು ತಡವಾಗಲಿಲ್ಲ. ಏಕೆಂದರೆ ಎಲ್ಲರು ಅಡರಾ ಬಡರಾ ತಮ್ಮ ತಮ್ಮ ಚಪ್ಪಲಿಗಳನ್ನು ಬಿಟ್ಟು ಒಳ ಹೋದರೆ, ಇನ್ನು ಕೆಲವರು ಚಪ್ಪಲಿಗಳನ್ನು ಹಾಕಿಕೊಂಡೆ ನಿಂತಿದ್ದರು. ಈ ಮನುಷ್ಯ ಪ್ರತ್ಯೇಕವಾದ ಸ್ಥಳವೊಂದರಲ್ಲಿ ತನ್ನ ಚಪ್ಪಲಿಗಳನ್ನು ಸಾವಧಾನವಾಗಿ ಇಟ್ಟರು.

ರಾಷ್ಟ್ರಪತಿಯವರಿಂದ ರಾ಼ಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುವಾಗ ಚಪ್ಪಲಿ ಬಿಡಲು ಇವರು ವಹಿಸಿದ್ದ ಶ್ರದ್ದೆಯನ್ನು ನೋಡಿದವರಿಗೆ ಪ್ರತ್ಯೇಕವಾಗಿ ಇದನ್ನು ಹೇಳುವ ಅಗತ್ಯವಿಲ್ಲ. ಇಂದೂ (ದಿನಾಂಕ ೨೭_೧೧-೨0೨೧) ಕೂಡಾ ಅದೇ ಶ್ರದ್ದೆ. ಅದೇ ರೀತಿ ತಮ್ಮ ಪ್ಲಾಸ್ಟಿಕ್ ಚಪ್ಪಲಿಗಳನ್ನಿಟ್ಟರು. ಸೀಳು ಬಿಟ್ಟ ಹಿಮ್ಮಡಿಗಳು ಒರಟೊರಟಾದ ಕೈಗಳು, ಸುಕ್ಕು ಗಟ್ಟಿದ ಕಪೋಲಗಳು ಗತಿಸಿ ಹೋದ ನನ್ನ ಅಪ್ಪನನ್ನು ನೆನಪಿಸಿದವು. ತನ್ನ ಆದಾಯದ ಅರ್ದ ಪಾಲನ್ನು ತನ್ನೂರಿನಲ್ಲಿ ತಾನು ಸ್ಥಾಪಿಸಿದ ಸರಕಾರಿ ಶಾಲೆಗಾಗಿ ನೀಡಿದವರು. ಕಾಯಿಲೆ ಬಿದ್ದ ತನ್ನ ಹೆಂಡತಿಯ ಔಷಧಿ ಖರ್ಚಿಗಾಗಿ ಇಟ್ಟ ಹಣವನ್ನೆಲ್ಲ ಶಾಲೆಗಾಗಿ ನೀಡಿದಾತ.

ಬೆಳಿಗ್ಗೆ ಕೇವಲ ಒಂದು ಲೋಟ ಚಹಾ ಕುಡಿದು ಬದುಕುಳಿದು ಸಾಧಿಸಿ ತೋರಿಸಿದ ತಪಸ್ವಿ. ಹೊಟ್ಟೆ ತುಂಬಾ ಉಂಡರೆ ಉಳಿತಾಯ ಮಾಡಲಾಗದು. ಉಳಿತಾಯ ಮಾಡದಿದ್ದರೆ ಶಾಲಾಭಿವೃದ್ದಿ ಸಾಧ್ಯವಿಲ್ಲ. ಉಪವಾಸವಿದ್ದು ತನ್ನೂರ ಶಾಲೆಯನ್ನು ಕಟ್ಟಿದವರು ಮಾತ್ರವಲ್ಲ, ಅದು ಬೀಳದಂತೆ ಹೆಗಲು ಕೊಟ್ಟವರು. ಅವರ ಅಂಗಿ ಬಿಚ್ಚಿದರೆ ಅವರ ಹೆಗಲ ಮೇಲಿನ ಸುಕ್ಕುಗಳು ಕಾಣ ಸಿಕ್ಕರೂ ಸಿಗಬಹುದು.

ಇಂಡಿಯನ್ ಎಕ್ಸ್ಪ್ರೆಸ್-ಕನ್ನಡ ಪ್ರಭ ಕೊಡಮಾಡುವ ವರ್ಷದ ವ್ಯಕ್ತಿ ಪ್ರಶಸ್ತಿಯ ಒಂದು ಲಕ್ಷ ಮತ್ತು ಸಿ ಎನ್ ಎನ್ ಐ ಬಿ ಎನ್ ನೀಡಿದ ಐದು ಲಕ್ಷ ರೂಪಾಯಿಗಳನ್ನೆಲ್ಲವನ್ನು ಸೋರುತಿರುವ ತನ್ನ ಮನೆಯ ರಿಪೇರಿಗೆ ವ್ಯಯಿಸಲಿಲ್ಲ, ಹಾಸಿಗೆಯಲ್ಲಿ ಸಾವು ಬದುಕಿನೊಂದಿಗೆ ಹತಾಶೆಯ ಕಣ್ಣೋಟದಲ್ಲಿರುವ ಹೆಂಡತಿಯ ಔಷದೋಪಚಾರಕ್ಕೆ ಈ ಹಣ ಉಪಯೋಗಿಸಲಿಲ್ಲ. ಇದೆಲ್ಲವನ್ನು ಯಾವ ಪ್ರತಿಫಲಾಪೇಕ್ಷೆಗೂ ಕಾಯದೆ ಶಾಲಾಭಿವೃದ್ದಿಗೆ ನೀಡಿದ ಸಂತನೀತ.

ಇಂದು(೨೭೧೧೨೦೨೧) ಬೆಳಿಗ್ಗೆ ವ್ಯಾಟ್ಸ್ ಅಪ್ ನಲ್ಲಿ ಬಂದ ಸಂದೇಶದ ತುಣುಕಿನ ಅಧಾರದ ಮೇಲೆ ತೀರ್ಮಾನಿಸಿಯೆ ಬಿಟ್ಟೆ. ಅಕ್ಷರ ಸಂತ ಪದ್ಮಶ್ರೀ ಪಡೆದಾದ ಮೇಲೆ, ನೂರಾರು ಪ್ರಶಂಸೆಯ ಮಹಾಪೂರದಲ್ಲಿ ಈ ಮನುಷ್ಯ ಬದಲಾಗಿರ ಬಹುದೆ ಎಂಬ ಸಣ್ಣ ಕುತೂಹಲವೂ ನನ್ನ ಇಂದಿನ ಮೇಗರವಳ್ಳಿಯ ಭೇಟಿಯಲ್ಲಿತ್ತು. ಆದರೆ ಅದೇ ಮಾಸಿದ ಒರಟೊರಟಾದ ಬಿಳಿ ಪಂಚೆ ಮತ್ತು ಅಂಗಿಯೊಳಗಿನ ದೇಹದಲ್ಲಿ ಗುಳಿ ಬಿದ್ದಿದ್ದ ಕಣ್ಣುಗಳೆರಡು ತೀಕ್ಷವಾಗಿ ಹೊಳೆಯುತ್ತಿದ್ದವು. ೨೦೧೨ರಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದಿದ್ದಾಗ ಹಾಜಬ್ಬರೊಂದಿಗೆ ವೇದಿಕೆ ಹಂಚಿಕೊಂಡಿದ್ದಾಗ ಹೇಗಿದ್ದರೋ ಹಾಗೇ ಇಂದೂ ಕಾಣುತ್ತಿದ್ದರು.

ಮೇಗರವಳ್ಳಿಯ ವಿಜೇತ ಶೆಟ್ಟಿಯವರ ಮನೆಗೆ ಎಂಟೂವರೆಗೇ ಹೋದೆ. ಹಾಜಬ್ಬನೆಂಬ ಸಂತ ಇನ್ನೂ ಬಂದಿರಲಿಲ್ಲ. ಇವರನ್ನು ತನ್ನ ಮನೆಗೆ ಕರೆಸಿಕೊಂಡ ವಿಜೇತ ಶೆಟ್ಟರೋ ಇನ್ನೊಂತರಾ ಸರಳ ಜೀವಿ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈ ಗೆ ಗೊತ್ತಾಗಬಾರದೆಂಬುದನ್ನು ಚಾಚೂ ತಪ್ಪದೆ ಪರಿಪಾಲಿಸಿಕೊಂಡು ಬಂದ ಶ್ರಮ ಜೀವಿ. ತನ್ನ ದುಡಿಮೆಯ ಬಹುಪಾಲು ಹಣವನ್ನು ತನ್ನೂರಿನ ಸರಕಾರಿ ಶಾಲೆಗಳ ಅಭಿವೃದ್ದಿಗೆ ನೀಡುತ್ತಾ ಬಂದರೂ ಪ್ರಚಾರ ಬಯಸದ, ಫೋಟೋಗಳಿಗೆ ಹಾತೊರೆಯದ ಅಪರೂಪದ ವ್ಯಕ್ತಿ. ತನ್ನ ಮನೆಯಲ್ಲೆ ಹಾಜಬ್ಬರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಇಟ್ಟುಕೊಂಡರೂ ಸಮಾರಂಭದ ಎದುರಲ್ಲಿ ಕಾಣಿಸಿಕೊಳ್ಳದ ಸಂಕೋಚದ ವ್ಯಕ್ತಿತ್ವದವರು ಎಂಬುದನ್ನು ಹಾಜಬ್ಬ ಇವರ ಮನೆಗೆ ಬರುವ ಮುನ್ನವೆ ತಿಳಿದು ಕೊಂಡೆ.

ಚಳಿಗಾಲವಾದರೂ ಚಳಿಯೆ ಇಲ್ಲದ ದಿನಗಳೆ ಈಗೀಗ ಹೆಚ್ಚು. ಆದರಿವತ್ತು ಬೆಳಿಗ್ಗೆಯ ಚಳಿ ಆಹ್ಲಾದವೊಂದರ ಸೃಷ್ಟಿಗೆ ಕಾರಣವಾಗಿತ್ತು. ರಿಪ್ಪನ್ ಪೇಟೆಯ ಕಾರ್ಯಕ್ರಮಕ್ಕೆಂದು ಹೊರಟಿದ್ದ ಹಾಜಬ್ಬ ಮತ್ತು ಅವರ ಗೆಳೆಯರನ್ನುಳಿಸಿಕೊಂಡಿದ್ದ ಅ ಒಂದು ಗಂಟೆಯಲ್ಲಿ ನಮ್ಮೊಳಗಿನ ಅಹಂಕಾರಗಳು ಒಂದೊಂದೇ ನಾಶವಾಗತೊಡಗಿದವು. ಜಟಿಲಾವಸ್ಥೆಗೆ ನಮಗೆ ನಾವೆ ನಮ್ಮನ್ನು ದೂಡಿಕೊಂಡು ಚಡಪಡಿಸುತ್ತಾ, ಹೊರೆಯಾಗುತ್ತಾ ಕಾಲಾಯಾಪನೆ ಮಾಡಿಕೊಂಡ ಬಗೆಗೆ ಹಾಜಬ್ಬರು ಉತ್ತರವಾದರು. ಪ್ರಾರ್ಥನೆಯಾಗಬೇಕಿದ್ದ ಮಾತುಗಳು ಬಾಯಿಬಡುಕತನವಾಗಿ ಹೊರ ಹೊಮ್ಮುತ್ತಿರುವುದು ಹಾಜಬ್ಬರನ್ನು ನೋಡಿದಾಕ್ಷಣದಿಂದ ಅರಿವಿಗೆ ಬರ ತೊಡಗಿವೆ.

ಮಂಜು ಬಾಬು, ದಿವಾಕರ್, ವೆಂಕಟೇಶ ಹೆಗಡೆ, ಹರ್ಷೇಂದ್ರ ಮುಂತಾದವರಿದ್ದ ಪುಟ್ಟ ಸಂವಾದ ನಿಜಕ್ಕೂ ಮಾಂತ್ರಿಕವಾದುದು. ಕನ್ನಡ ಬಾವುಟಗಳೊಂದಿಗೆ ಸ್ವಾಗತ ಕೋರಿಸಿಕೊಂಡ ಹಾಜಬ್ಬರ ನಡುಗೆಯಲ್ಲುಳಿಸಿಕೊಂಡಿರುವ ಉತ್ಸಾಹ ಮತ್ತು ವೇಗ ಗಾಂಧಿ ನೆನಪಿಗೆ ಕಾರಣವಾಯಿತು.

ಶ್ರೀಮಂತಿಕೆಯನ್ನೆ ಹಾಸಿ ಹೊದ್ದು ಮಲಗಿರುವ ಕೊಲ್ಲಿ ರಾಷ್ಟ್ರ ದುಬೈಗೆ ಹಾಜಬ್ಬ ಹೋಗುತ್ತಾರೆ. ಇವರಿಗೆ ಸಂದಿರುವ ಪ್ರಶಸ್ತಿಗಳು ಹಾಗೂ ಇವರು ಸಾಕ್ಷರತೆಗಾಗಿ ತನ್ನೂರಲ್ಲಿ ಮಾಡಿದ ಸಾಧನೆಗಾಗಿ ದುಬೈನಲ್ಲಿರುವ ಕನ್ನಡ ಸಂಘ ಸನ್ಮಾನವೇರ್ಪಡಿಸಿ ಆಹ್ವಾನಿಸುತ್ತದೆ.. ದುಬೈಗೆ ಹೋಗುವಾಗಲೂ ಮಾಮೂಲಿಯಂತೆ ತಮ್ಮ ಮಾಸಲು ಮಾಸಲಾದ ಅಂಗಿ ಪಂಚೆಯಲ್ಲೆ ಹೋಗುತ್ತಾರೆ. ವಿಮಾನ ನಿಲ್ದಾಣದಲ್ಲಿ ಇಳಿದಾಕ್ಷಣ ಈ ಮನುಷ್ಯನಿಗೆ ದುಬೈ ಎಂಬುದು ವೈಭವೋಪೇತ ಸ್ವರ್ಗವಾಗಿ ಕಾಣದೆ ಆಗಷ್ಟೆ ಗೂಡಿನ ಗರ್ಭದಿಂದ ಹೊರ ಬಂದ ಹಕ್ಕಿ ಮರಿಯ ಪಾಡಾಗುತ್ತದೆ.

ಯಾತನಾಮಯ ಜಗಮಗಿಸುವಿಕೆ ಇರಿತವಾಗುತ್ತದೆ.. ಇವರ ಚಡಪಡಿಕೆ ಗಮನಿಸಿದ ಅಧಿಕಾರಿಗಳು ಈತನಾರೋ ಉಗ್ರನೆ ಇರಬೇಕು. ಅಥವಾ ಅಕ್ರಮವಾಗಿ ದೇಶದೊಳಗೆ ನುಗ್ಗಿದ ನುಸುಳುಕೋರನಿರಬೇಕೆಂದು ಅಲ್ಲಿಯೆ ಬಂಧಿಸುತ್ತಾರೆ. ಭಾಷೆಯ ಜೊತೆಗೆ ತಳುಬಳುಕು ಗೊತ್ತಿಲ್ಲದ ಹಾಜಬ್ಬ ಬಂದನಕ್ಕೊಳಗಾದರೂ ಸಮ ಚಿತ್ತತೆ ಕಳಕೊಳ್ಲುವುದಿಲ್ಲ. ನಿಧಾನವಾಗಿ ತಮ್ಮ ಸೊಂಟದಲ್ಲಿ ಭದ್ರವಾಗಿ ಕಟ್ಟಿಕೊಂಡಿದ್ದ ಗಂಟೊಂದನ್ನು ತೆಗೆಯುತ್ತಾರೆ. ಸುತ್ತ ನೆರೆದಿದ್ದ ಭದ್ರತಾ ಅಧಿಕಾರಿಗಳು ಆತಂಕಿತರಾಗುತ್ತಾ ಕುತೂಹಲ ಉಳಿಸಿಕೊಳ್ಳುತ್ತಾರೆ.

ಹಾಜಬ್ಬರ ಕೈಯಲ್ಲಿರುವ ವಸ್ತು ಬಾಂಬ್ ಇರಬಹುದು. ಕ್ಷಣಮಾತ್ರದಲ್ಲಿ ಸಿಡಿದು ಹಾಜಬ್ಬರ ಜೊತೆ ನಾವೆಲ್ಲರೂ ಸುಟ್ಟು ಕರಕಲಾಗುವ ಕಾಲ ಸನಿಹದಲ್ಲಿದೆ ಎಂದು ಯೋಚಿಸಿರಲೂಬಹುದು. ಕಟ್ಟಿನೊಳಗಿದ್ದ ಒಂದೊಂದೆ ಕಾಗದ ಪತ್ರಗಳು ಹೊರ ಬರುತ್ತವೆಯೇ ವಿನಃ ಬಾಂಬಿನ ಆಕಾರದ ವಸ್ತು ಕಾಣಿಸುತ್ತಿಲ್ಳ.

ಒಂದೊಂದೇ ಪತ್ರಿಕಾ ಕಟ್ಟಿಂಗ್ ಗಳನ್ನು ಅದಿಕಾರಿಗಳ ಕೈಗಳಿಗೆ ಹಾಜಬ್ಬರು ತಮ್ಮ ದಿವ್ಯ ಮೌನ ಮುರಿಯದೆ ಕೊಡುತ್ತಾ ಹೋಗುತ್ತಾರೆ. ಇಡೀ ಅಧಿಕಾರಿ ಸಮೂಹ ಪುಟ್ಟ ದೇಹಿ ಹಾಜಬ್ಬರನ್ನು ತುಂಬಿಕೊಳ್ಳುತ್ತಾ ಹೋಗುತ್ತದೆ. ಪ್ರಪಂಚದ ಪ್ರಸಿದ್ದ ಪತ್ರಿಕೆಗಳಲ್ಲಿ ಸವಿವರವಾಗಿ ಬಂದ ಹಾಜಬ್ಬರ ಅದ್ವಿತೀಯ ಸಾಧನೆಗಳ ವರದಿಗಳು ಪತ್ರಿಕಾ ಕಟಿಂಗುಗಳಲ್ಲಿ ತುಂಬಿಕೊಂಡಿರುತ್ತವೆ. ಈ ವರದಿಗಳನ್ನು ಓದಿದ ಭದ್ರತಾ ಅಧಿಕಾರಿಗಳಿಗೆ ತಾವು ಮಾಡಿದ ತಪ್ಪಿನ ಅರಿವಾಗಿ ಹಾಜಬ್ಬರಲ್ಲಿ ಕ್ಷಮೆ ಯಾಚಿಸಿ ಸಂಘಟಕರಲ್ಲಿ ಇವರನ್ನು ಕಳುಹಿಸಿದ ವಿಷಯವನ್ನು ಹಾಜಬ್ಬರ ಜೊತೆಗೆ ಇಂದು ಮೇಗರವಳ್ಳಿಗೆ ಆಗಮಿಸಿದ್ದ ರಫೀಕ್ ಮಾಸ್ಟರ್ ಜನರೆದುರು ಬಿಚ್ಚಿಟ್ಟಾಗ ಪುಟ್ಟ ಸಭೆ ಪ್ರಾಜ್ಙರುಗಳ ಗಾಂಭೀರ್ಯತೆ ಪಡೆಯುತ್ತದೆ.

‍ಲೇಖಕರು Admin

November 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: