ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಯಾವ ತಿರುವಿನಲೂ ಅತ್ತ ವಾಲದವನ…’ – ವಿನಯಾ ಒಕ್ಕುಂದ ಕವಿತೆ

ನುಡಿಯುವುದು ಹೇಗೇ?

ವಿನಯಾ ಒಕ್ಕುಂದ

ಹೌದು ವೇದೂ,
ನಡೆನಡೆದು ಪಾದ ಸಪಾಟಾಗಿ
ವೈಯ್ಯಾರವೂ ಮಾಸಿ
ಮೈ ಭಾರಕ್ಕೇ ಹಂಸ ನಡಿಗೆಯಲಿ
ತೊನೆವ ಈ ಕಾಲದಲ್ಲೂ
ಹೊಯ್ದ ಮಳೆ ಒಳ ಪದರ ತೋಯಿಸದೆ
ಕಸ ಕಸುರು ಹುಟ್ಟಿ ಹಸಿರು ವಿಷ ಉಕ್ಕಿ
ಸೀರೆಯ ಪಿನ್ನಿನಂತೆ ಬಿಳಿಕೂದಲ ಕತ್ತರಿಯೂ
ಹರಕತ್ತಾದ ಈ ಹೊತ್ತಿನಲೂ
ಮುಟ್ಟು ನಿಲ್ಲುವಾಗಿನ ಹೊಟ್ಟೆಯ ಗುಟ್ಟುಗಳ
ಕಡೆಗೊಮ್ಮೆ ಕಿವಿ ಹಾಯಿಸುತ್ತ ಕಣ್ಣು ಚಾಚುತ್ತ
ಸಂಭಾಳಿಸುವುದು ಹೇಗೋ ರಾಮರಾಮ ಎನುತ
ಹೊರಗೆ ಲೇಪಿಸಿದ ನಗೆ ಕಳಚಿ ಕಳಚಿ
ಬೀಳುತ್ತಿರುವ ಈ ದಿನಗಳಲ್ಲೂ
ಬಸ್ಸಿನಲಿ ಪಕ್ಕದ ಸೀಟಿನವಗೆ
ಸಖತ್ತು ನಿದ್ದೆ ಮಾರಾಯ್ತಿ
ಇತ್ತಿತ್ತ ಜರಿದೂ ಜರಿದೂ ಕಾಲು ಜುಂಗುಟ್ಟಿ

ಯಾವ ತಿರುವಿನಲೂ ಅತ್ತ ವಾಲದವನ
ತೂಕಡಿಸುವ ಭುಜಕ್ಕೊಂದು ಪಿನ್ನು ಚುಚ್ಚಬೇಕೆಂದರೆ
ಮತ್ತೀಗ ಏತಕ್ಕೆ ಅಂತ ಬಿಸಾಕಿ ಆಗಿದೆಯಲ್ಲೇ
ಎದ್ದೊಮ್ಮೆ ಗದರಿ ಗಂಟುಮುಖ ಹಾಕಿ ಒದರಬೇಕೆಂದರೆ
ಬಸ್ಸಿನ ತುಂಬ ವಾಲುವ ಭುಜಗಳೇ ಕಂಡಂತಾಗಿ
ಆ ಕಣ್ಣುಗಳೆಲ್ಲ ಪಕಪಕ ನಕ್ಕಂತಾಗಿ
ಬಸ್ಸು ಥೇಟ್ ನಾಟಕದ ಥೇಟರಿನಂತೆ ಥಾಟು ಮಾಡಿದರೆ
ನಾಳೆ ಮತ್ತೆ ಏರಲೇಬೇಕಲ್ಲ ಹೊಟ್ಟೆಗೆ ಲಜ್ಜೆಯಿಲ್ಲ
ಅದಕ್ಕೇ ವೇದೂ
ಹೊಕ್ಕಳ ಸುಳಿ ದಾಟಿ ನಿರಿಗೆ ಸಿಗಿಸುವ
ಪದ್ಮಾವತಿ ಹಾಗೆ ಒತ್ತರಿಸಿಕೊಂಡೇ ಕೂತು
ತಕಾ ಎಷ್ಟು ದಮ್ಮು ನಿನಗೆ ಅಂತ
ನಿಸೂರಾಗಿ ಎದ್ದು ಹೊರಟಾಗ
ನೋಡಬೇಕವರ ಬೆಪ್ಪು
ಆಗಿನ ಹಾಗೆ ಈಗಲೂ
ಎಲ್ಲರಿದ್ದೂ ಎಲ್ಲವಿದ್ದೂ
ಎಲ್ಲ ಹಾಗೇ ಇರುವ ಕಳವಳವ
ನುಡಿಯುವುದು ಹೇಗೆ?
ನುಡಿಯದಿರುವುದು ಹೇಗೆ?
 

‍ಲೇಖಕರು avadhi

7 October, 2013

8 Comments

  1. Kavya Nagarakatte

    ಚೆನ್ನಾಗಿದೆ. ಇದು ಪ್ರತೀ ಹೆಣ್ಣಿನ ಒಡಲಾಳದ ಕವಿತೆಯೂ ಹೌದು, ಆಕ್ರೋಶವೂ ಹೌದು. ಕವಿತೆ ಎದೆಯ ಕದ ತಟ್ಟಿತು.

  2. nagraj.harapanahalli

    ಮಹಿಳಾ ಸಂವೇದನೆಯ ಕವಿತೆ..ಮೊನ್ನೆ ಮೊನ್ನೆ ನಳಿನಿ ಅವ್ರು ಬರೆದ ಕವಿತೆ ನಂತರ ಮತ್ತೊಂದು ಕವಿತೆ .

  3. haravu spoorthy

    ಕೆಲವು ಧಿಕ್ಕರಿಸಲಾಗದ ದೌರ್ಬಲ್ಯಗಳು ಸೂಕ್ಷ್ಮವಾಗಿ ಮೂಡಿವೆ:)

  4. subbanna mattihalli

    ಹೇಳಿ ಹೇಳಿ ಸಾಕಾಯಿತು ಕವಿತೆಯಲ್ಲಿ. ಕೇಳಿ ಕೇಳಿ ಸಾಕಾಯಿತು
    ಕಿವಿಯಲ್ಲಿ. ಹೇಗೆಬೇಕೋ ಹಾಗೆ ವಾಲುವ ಈ [ಪುರುಷ]ಜಗತ್ತಿಗೆ
    ಇನ್ನೇನನ್ನಬೇಕೋ ತಿಳಿಯದಾಗಿದೆ. ಕಾಡುವ ಕವಿತೆಯಿದು.

  5. mmshaik

    nice poem..

  6. Anonymous

    ಬಸ್ಸುಗಳಲ್ಲಿ ಒತ್ತುತ್ತಾ ನಿಮ್ಮ ಮೇಲೆ ಒರಗಿದವ, ನಿದ್ದೆ ಹೋದಂತೆ ನಿಮ್ಮ ಮೇಲೆ ಬೀಳುವವನಿಗೆ ಒದ್ದು ನೀತಿ ಪಾಠ ಹೇಳಿ ಶಿಸ್ತಿನ ಮಾಸ್ತರರ ಹಾಗೆ. ಹೇಳದಿರಬೇಡಿ. ಸುಮ್ಮನಿದ್ದರೆ ಅದನ್ನೇ ನಿಮ್ಮ ಬಯಕೆ ಎಂದು ತಪ್ಪು ತಿಳಿಯುವವನಿಗೆ ಎಚ್ಚರಿಕೆಯ ಮಾತುಗಳ ಬಿಸಿ ಮುಟ್ಟಿಸಿ. ಸುಮ್ಮನಿರದಿರಿ ಅಕ್ಕ ತಂಗಿಯರೆ, ಮೇನೋಪೋಸ್ ಆದ ಮಹಿಳೆಯರೇ. ಒದ್ದು ಪ್ರತಿಭಟಿಸಿ. ನಾವಿದ್ದೇವೆ ನಿಮ್ಮ ಜೊತೆ. ಉದಯಕುಮಾರ ಹಬ್ಬು, ಕಿನ್ನಿಗೋಳಿ

  7. na.. damora shetty

    kavitege bassina prayaana miirida harahu ide.

  8. Anand Jakkannavar

    nice madam really wonderfull

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading