ಜೋಗಿ ಮನೆ : ನಮ್ಮ ಸ್ವಾತಂತ್ರ್ಯವೇ ನಮ್ಮ ಬಂಧನವೂ ಆಗಿಬಿಟ್ಟಿದೆ..

ಯಾವ ದೇಶ ಚರಿತ್ರೆ ಮತ್ತು ಪುರಾಣದ ಸತ್ವದ ಕುರಿತು ಚಿಂತಿಸುವುದನ್ನು ಬಿಟ್ಟು, ಪೌರಾಣಿಕ ಸತ್ಯಗಳನ್ನು ಚಾರಿತ್ರಿಕ ಸತ್ಯಗಳನ್ನೂ ಪ್ರತಿಪಾದಿಸಲಿಕ್ಕೆ ಹೊರಡುತ್ತದೋ, ಆ ದೇಶ ಒಳಗೊಳಗೇ ಟೊಳ್ಳಾಗುತ್ತ ಹೋಗುತ್ತದೆ. ಇದೀಗ ನಮ್ಮಲ್ಲಿ ಆಗುತ್ತಿರುವುದೂ ಅದೇ. ವೇದ ಉಪನಿಷತ್ತುಗಳನ್ನು ಉಲ್ಲೇಖೀಸುತ್ತ ಆಸ್ತಿಕರೂ ನಾಸ್ತಿಕರೂ, ಆಧುನಿಕರೂ ಸಂಪ್ರದಾಯಸ್ಥರೂ ಮಾತಾಡುತ್ತಿದ್ದಾರೆ. ಆ ಕುರಿತು ಚರ್ಚಿಸುತ್ತಾರೆ. ಪತ್ರಿಕೆಗಳಲ್ಲಿ ಹೇಳಿಕೆ ಕೊಡುತ್ತಾರೆ. ಅದರ ವಿಚಾರವಾಗಿ ವಾಗ್ವಾದ ನಡೆಯುತ್ತದೆ.
ನಮ್ಮೆದುರು ರಕ್ತಸಿಕ್ತವಾದ, ಗಾಯಗೊಂಡ ವರ್ತಮಾನ ಇದೆ. ನಾವು ಬದಲಾಯಿಸಬಲ್ಲ ನಾಳೆಯಿದೆ. ನಾವು ಚೆಂದಗೊಳಿಸಬಹುದಾದ ಭವಿಷ್ಯವಿದೆ. ಮನೆಯಿಂದಾಚೆ ಒಯ್ದು ಬಿಟ್ಟ ಕಾಟುನಾಯಿ, ಮತ್ತೆ ಮತ್ತೆ ದಾರಿ ಹುಡುಕಿಕೊಂಡು ಮನೆಗೆ ಮರಳುವಂತೆ, ನಾವು ಪುನಃ ಪುನಃ ಪೌರಾಣಿಕ ಸತ್ಯಗಳನ್ನು ಹುಡುಕಿಕೊಂಡು ಹೋಗುತ್ತಿದ್ದೇವೆ. ಆ ಇಟ್ಟಿಗೆಯ ಮೂಲಕ ನಾವೇನನ್ನು ಕಟ್ಟಬಯಸುತ್ತೇವೆ ಅನ್ನುವುದು ನಮಗೆ ಗೊತ್ತಿದೆಯಾ? ಅಷ್ಟಕ್ಕೂ ಇವತ್ತು ಚಾರಿತ್ರಿಕ ಸತ್ಯಗಳೇ ಚರ್ಚಾಸ್ಪದ ಸಂಗತಿಗಳಾಗಿ ನಮ್ಮೆದುರು ಕಾಣಿಸುತ್ತಿವೆ.
ಚರಿತ್ರೆಯನ್ನು ಸೃಷ್ಟಿಸುವುದು ಆಯಾ ಕಾಲದ ರಾಜಕೀಯ ಸ್ಥಿತಿಗತಿ. ಬ್ರಿಟಿಷರು ಬಂದು, ತೊಲಗುವ ತನಕ ನಮ್ಮಲ್ಲಿದ್ದದ್ದು ರಾಜರ ಆಳ್ವಿಕೆ. ಅಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆ ಎಂಬ ಮಾತಿಗೆ ಅರ್ಥವೇ ಇರಲಿಲ್ಲ. ಯಾರೋ ಆಳುತ್ತಿದ್ದರು, ಯಾರೋ ಆಳಿಸಿಕೊಳ್ಳುತ್ತಿದ್ದರು. ಪ್ರಜಾನುರಾಗಿ ಎಂಬ ಬಿರುದು ಕೂಡ ಪ್ರಜೆಗಳು ಕೊಟ್ಟದ್ದಲ್ಲ ಅನ್ನುವುದು ನಮಗೆ ಗೊತ್ತಿದೆ. ಅಲ್ಲೋ ಇಲ್ಲೋ ಒಂದಿಬ್ಬರು ಒಳ್ಳೆಯ ಅರಸರಿದ್ದರೋ ಏನೋ? ಅಂಥವರ ಸಂಖ್ಯೆ ತೀರಾ ಕಡಿಮೆಯಿತ್ತು ಅನ್ನುವುದೂ ನಿಜವೇ. ಅಷ್ಟಕ್ಕೂ ರಾಜಧಾನಿಯಿಂದ ದೂರದಲ್ಲಿರುವ ಹಳ್ಳಿಗಾಡಿನಲ್ಲಿರುವ ರೈತನಿಗೋ ಬಡಗಿಗೋ ಕಮ್ಮಾರನಿಗೋ ರಾಜನೊಬ್ಬ ಇದ್ದಾನೆ ಅನ್ನುವುದು ಕೂಡ ಗೊತ್ತಿರಲಾರದ ಕಾಲ ಅದು. ಆಗ ಚಾಲ್ತಿಯಲ್ಲಿದ್ದ ಕಾನೂನಾಗಲೀ, ಕಂದಾಯ ವ್ಯವಸ್ಥೆಯಾಗಲೀ ಇವತ್ತಿಗೆ ಪ್ರಸ್ತುತ ಅಲ್ಲವೇ ಅಲ್ಲ. ಹಾಗಿದ್ದರೂ ನಾವು ಚಾರಿತ್ರಿಕವಾಗಿ ನಮ್ಮ ದೇಶ ಹೇಗಿತ್ತು, ರಾಜ್ಯ ಹೇಗಿತ್ತು ಎಂದೆಲ್ಲ ಮಾತಾಡಲು ಹೊರಡುತ್ತೇವೆ.
ಪೌರಾಣಿಕತೆ ಅದಕ್ಕೂ ಹಿಂದಿನದು. ನಮಗೆ ಗೊತ್ತೇ ಇಲ್ಲದ ಕಾಲವದು. ಋಷಿಗಳು ಹೇಗೆ ಬದುಕಿದ್ದರು ಎನ್ನುವುದಕ್ಕೆ ನಮ್ಮಲ್ಲಿ ಸಾಕ್ಷಿಯೇ ಇಲ್ಲ. ಅವರೇನು ತಿನ್ನುತ್ತಿದ್ದರು ಅನ್ನುವುದಕ್ಕೂ ಪುರಾವೆಯಿಲ್ಲ. ಅಷ್ಟಕ್ಕೂ ನಾವು ನಮ್ಮ ಜೀವನ ಶೈಲಿ, ಆಹಾರ ಪದ್ಧತಿ, ಸಾಂಸಾರಿಕ ನೆಲೆಗಟ್ಟು, ಕುಟುಂಬ ಜೀವನ- ಎಲ್ಲವನ್ನೂ ಬದಲಾಯಿಸಿಕೊಂಡಾಗಿದೆ. ಭಾಷೆ ಕೂಡ ಬದಲಾಗುತ್ತಲೇ ಸಾಗಿದೆ. ಇಂಥ ಹೊತ್ತಲ್ಲಿ , ಯಾರೇನು ತಿನ್ನುತ್ತಿದ್ದರು ಅಥವಾ ತಿನ್ನುತ್ತಿರಲಿಲ್ಲ ಅನ್ನುವುದು ನಮಗೆ ಮಾನದಂಡವೂ ಅಲ್ಲ, ಸ್ವೀಕಾರಾರ್ಹವೋ ಆಕ್ಷೇಪಾರ್ಹ ಅಂಶವೋ ಅಲ್ಲ.
ಆದರೂ ನಾವು ಕಾದಾಡುತ್ತಲೇ ಇರುತ್ತೇವೆ. ನಮಗೆ ನಮ್ಮ ಚರಿತ್ರೆ ಶುದ್ಧವಾಗಿರಬೇಕು ಅನ್ನುವ ಆಸೆ. ಮಗ ಪಾಪಿಯಾದರೂ ಪರವಾಗಿಲ್ಲ, ಅಪ್ಪ ಪರಿಶುದ್ಧನಾಗಿರಬೇಕು. ನಾವು ಜಾರತನದಲ್ಲಿ ಮಕ್ಕಳಿಗೆ ಜನ್ಮ ಕೊಟ್ಟರೆ ತಪ್ಪೇನಲ್ಲ, ನಮ್ಮ ಜನ್ಮ ಮಾತ್ರ ಧರ್ಮಬದ್ಧವಾಗಿರಬೇಕು ಎಂಬ ಅಶುದ್ಧ ಆಸೆಯಿಂದ ಹಿಂದಿನದನ್ನು ಉಳಿಸಿಕೊಳ್ಳಲು ಕದನಕ್ಕೆ ಇಳಿಯುತ್ತೇವೆ. ಅದಕ್ಕೆ ಆಧುನಿಕ ಅಸ್ತ್ರಗಳನ್ನೆಲ್ಲ ಬಳಸುತ್ತೇವೆ.
ಅಂಥ ಅಸ್ತ್ರಗಳಲ್ಲಿ ಪ್ರಮುಖವಾದದ್ದು ಫೇಸ್‌ಬುಕ್‌  ವಾಲಾಯುಧ. ಅದನ್ನು ಹಿಡಿದುಕೊಂಡು ವಾಲಾಯುಧನ್‌ ಆಗುವ ನಾವು, ಆ ಮೈಂಡ್‌ಸ್ಪೇಸ್‌ನಲ್ಲಿ ಯಾರನ್ನಾದರೂ ಕೊಚ್ಚಿ ಕೆಡವಲು ಸಿದ್ಧರಾಗಿ ಕಾಯುತ್ತೇವೆ.
ನಮ್ಮ ಈ ಕಾಲದ ಸಮಸ್ಯೆಗಳಾದರೂ ಏನು? ನಾವು ಎಷ್ಟು ಸ್ವತಂತ್ರರೋ ನಮಗೆ ಗೊತ್ತಿಲ್ಲ. ನಮ್ಮನ್ನು ಆಳುವವರು ಯಾರೆಂಬುದು ನಮಗೆ ಸ್ಪಷ್ಟವಿದೆ ಮತ್ತು ಸ್ಪಷ್ಟವಿಲ್ಲ. ಒಂದು ಪಕ್ಷದ ಮುಖ್ಯಮಂತ್ರಿ, ಮತ್ತೂಂದು ಪಕ್ಷದ ನಗರಾಧಿಪತಿ, ಬೇರೊಂದು ಪಕ್ಷದ ಸ್ಥಳೀಯ ಶಾಸಕ, ಯಾವುದೋ ರಾಜ್ಯದ ದಂಡಾಧಿಕಾರಿ- ಹೀಗೆ ಎಲ್ಲವೂ ಕಲಸು ಕಲಸು. ಇವರಲ್ಲಿ ಯಾರು ನಮ್ಮವರು ಎನ್ನುವುದೂ ಗೊತ್ತಿಲ್ಲ.
ಯಾರಲ್ಲ ಅನ್ನುವುದೂ ಅರಿವಿಲ್ಲ. ಎಲ್ಲವೂ ಒಂದು ಕನಸಿನಂತೆ, ಕೊನೆಯೇ ಇಲ್ಲದ ಕನಸಿನಂತೆ ಸಾಗುತ್ತಲೇ ಇರುತ್ತದೆ. ಈ ಮಧ್ಯೆ ಮತ್ತದೇ ಮುಗಿದ ಕಾಲದ ಮರುಕಳಿಕೆ. ಅದೇ ಹಳೆಯ ಚರ್ಚೆ, ಅದೇ ವಾದವಿವಾದ. ಕೋಣೆಯೊಳಗಿನ ಮೌನ ಕದಡುವ ಸದ್ದು ಒಳನುಗ್ಗುವುದಕ್ಕೆ ಎಷ್ಟೊಂದು ಗವಾಕ್ಷಿ?

-2-

ಈ ಮಧ್ಯೆ ನಾವು ಹೇಗೆ ನಮ್ಮ ಸ್ವಾತಂತ್ರ್ಯ ಕಳಕೊಳ್ಳುತ್ತಾ ಬಂದಿದ್ದೇವೆ ಅನ್ನುವುದನ್ನು ಯೋಚಿಸೋಣ. ನಮ್ಮ ಇಡೀ ಬದುಕಿನ ತೀರ್ಮಾನಗಳನ್ನು ನಿರ್ಧರಿಸುವುದು ನಮ್ಮ ಸಂಬಳವೋ ಸಂಪಾದನೆಯೋ ಅಲ್ಲ. ಬದಲಾಗಿ ನಮ್ಮ ವಿಚಾರಧಾರೆ. ಸುಖ ಸಂತೋಷಗಳನ್ನು ನಾವು ಬೇರೆ ಬೇರೆ ಕಡೆಯಿಂದ ಪಡೆದುಕೊಳ್ಳುತ್ತೇವಾದರೂ, ನಮ್ಮ ಧೀಮಂತಿಕೆ ಮತ್ತು ಸಾರ್ವಜನಿಕ ನಿಲುವುಗಳ ಗಟ್ಟಿತನಕ್ಕೆ ಕಾರಣವಾಗುವುದು ನಾವು ನಂಬಿಕೊಂಡಿರುವ ಫಿಲಾಸಫಿ.
ಒಂದು ಕಾಲದಲ್ಲಿ ಅಂಥ ವಿಚಾರಧಾರೆಯನ್ನು ನಮ್ಮಲ್ಲಿ ತುಂಬುವುದಕ್ಕೆ ಗಾಂಧಿ, ನೆಹರೂ, ಅಂಬೇಡ್ಕರ್‌, ಪಟೇಲ್‌, ಬೋಸ್‌ ಮುಂತಾದವರಿದ್ದರು. ಅವರಿಗಿಂತಲೂ ಮೊದಲು ಧೀಮಂತರಾದ ರಾಜರಿದ್ದರು. ನಂತರದ ದಿನಗಳಲ್ಲಿ ಲೋಹಿಯಾ, ಮಾರ್ಕ್ಸ್, ಚೆ ಗೆವಾರ, ಮಾವೋತ್ಸೆ ತುಂಗ- ಹೀಗೆ ಹೊಸ ರಾಜಕೀಯ ವಿಚಾರಧಾರೆಗಳನ್ನು ಹೊಮ್ಮಿಸಬಲ್ಲವರು ಬಂದರು. ಇವರು ಯಾರೂ ಧಾರ್ಮಿಕವಾಗಿ ನಮಗೆ ಮುಖ್ಯರಾದವರಲ್ಲ. ಇವರೆಲ್ಲ ನಡುವೆಯೂ ಹಲವರಿಗೆ ಕರ್ಣ, ಭೀಷ್ಮ, ಧರ್ಮರಾಯ, ರಾಮ, ವಿಭೀಷಣ, ವಿದುರ- ಮುಂತಾದ ಪೌರಾಣಿಕ ಪಾತ್ರಗಲೇ ಮಾದರಿಗಳಾಗಿ ಉಳಿದರು. ಹೀಗೆ, ನಮ್ಮ ಜೀವಿತಕ್ಕೆ ಅಲ್ಲಿಂದ ಇಲ್ಲಿಂದ ಒಂದಿಷ್ಟಿಷ್ಟನ್ನು ನಾವು ಅಂಟಿಸಿಕೊಳ್ಳುತ್ತ ಬಂದಿದ್ದೇವೆ. ಮೂರ್ತಿ ಒಂದೇ ಕಲ್ಲಿನದೂ ಅಲ್ಲ, ಒಂದೇ ಮಣ್ಣಿನದೂ ಅಲ್ಲ.
ಹಾಗಿದ್ದರೂ ನಾವು ಯಾಕೆ ಸ್ವತಂತ್ರರು? ಒಂದು ಪುಟ್ಟ ಕತೆ ಇವೆಲ್ಲವನ್ನೂ ಹೇಳುತ್ತದೆ. ಪುತ್ತೂರಿನಂಥ ಒಂದು ಊರು. ಅಲ್ಲಿಗೊಬ್ಬ ರಾಜ. ಆ ಊರಿನಲ್ಲೊಬ್ಬ ಎಪ್ಪತ್ತು ವರುಷದ ರೈತ. ಒಮ್ಮೆ ರಾಜ “ನಮ್ಮೂರಲ್ಲಿ ಸುಖವಾಗಿರುವವರು ಯಾರು?’ ಅಂತ ಸೇವಕನನ್ನು ಕೇಳುತ್ತಾನೆ. ಸೇವಕ “ಎಪ್ಪತ್ತು ವರುಷದ ರೈತನೊಬ್ಬ ಇದ್ದಾನೆ. ಅವನು ಅತ್ಯಂತ ನೆಮ್ಮದಿ ಮತ್ತು ಸಂತೋಷದಲ್ಲಿದ್ದಾನೆ’ ಅನ್ನುತ್ತಾನೆ. ರಾಜನಿಗೆ ಆಶ್ಚರ್ಯ ಆಗುತ್ತದೆ. ‘ಅವನು ತುಂಬ ಶ್ರೀಮಂತನೇ, ಹತ್ತಾರು ದೇಶ ಸುತ್ತಿದ್ದಾನಾ, ಪುಸ್ತಕ ಓದಿದ್ದಾನಾ, ಅಧಿಕಾರ ಇದೆಯಾ’ ಎಂದೆಲ್ಲ ಕೇಳುತ್ತಾನೆ. “ಏನೂ ಇಲ್ಲ, ಆತ ಬಡವ, ಯಾವತ್ತೂ ಪುತ್ತೂರಿನಿಂದಾಚೆ ಕಾಲು ಕೂಡ ಇಟ್ಟಿಲ್ಲ’ ಎನ್ನುತ್ತಾನೆ ಸೇವಕ. ಅವನನ್ನು ಕರೆಸುವಂತೆ ಅಪ್ಪಣೆಯಾಗುತ್ತದೆ.
ರೈತ ಬರುತ್ತಾನೆ. ರಾಜ ಆತನ ಸಂತೋಷಕ್ಕೆ ಕಾರಣ ಹುಡುಕುತ್ತಾನೆ. ಪ್ರಶ್ನೆ ಕೇಳುತ್ತ ಹೋಗುತ್ತಾನೆ.
ನೀನು ಸುಖವಾಗಿದ್ದೀಯೋ?
ಹೌದು.
ಎಪ್ಪತ್ತು ವರುಷಗಳಲ್ಲಿ ಒಂದೇ ಒಂದು ಸಲ ಈ ಊರು ಬಿಟ್ಟು ಹೊರಗೇ ಹೋಗಿಲ್ಲವಂತೆ ನೀನು?
ಇಲ್ಲ, ಈ ಊರೇ ಅದ್ಭುತವಾಗಿದೆ. ಯಾಕೆ ಹೋಗಲಿ ನಾನು.
ಇಲ್ಲೇ ನೆಮ್ಮದಿ ಇದೆಯೋ?
ನೀರಲ್ಲಿರುವ ಮೀನಿನಷ್ಟು ನೆಮ್ಮದಿಯಾಗಿದ್ದೇನೆ.
ಈ ಉತ್ತರಗಳನ್ನು ಕೇಳಿದ ರಾಜ ಒಂದು ಕ್ಷಣ ಯೋಚಿಸಿ, ನೋಡು, ನೀನು ಊರಿನ ಹೆಬ್ಟಾಗಿಲ ಹತ್ತಿರ ಓಡಾಡುತ್ತಿಯಾ ಅಂತ ಸೆ„ನಿಕರು ಹೇಳಿದರು. ನೆನಪಿಟ್ಟುಕೋ, ನೀನು ಪುತ್ತೂರು ಬಿಟ್ಟು ಆಚೆ ಹೋಗುವಂತಿಲ್ಲ. ಇದು ರಾಜಾಜ್ಞೆ ಎಂದು ಹೇಳುತ್ತಾನೆ.
ರೈತ ಬೇಸರದಿಂದ ಮರಳುತ್ತಾನೆ. ಪುತ್ತೂರಿನಿಂದಾಚೆ ಹೋಗುವ ಎತ್ತಿನ ಗಾಡಿಗಳನ್ನು ಆಸೆಯಿಂದ ನೋಡುತ್ತಾನೆ. ತಾನು ಹಾಗೆ ಹೋಗುವಂತಿಲ್ಲವಲ್ಲ ಎಂದು ಮರುಗುತ್ತಾನೆ. ಸಂಕಟಪಡುತ್ತಾನೆ. ಎಂಥಾ ಗುಲಾಮಗಿರಿ ತನ್ನದು ಎಂದು ಕೊರಗುತ್ತಾ ಹೋಗುತ್ತಾನೆ. ಆರು ತಿಂಗಳಲ್ಲಿ ಪೂರ್ತಿ ಕಂಗಾಲಾಗಿ ಹೋಗುತ್ತಾನೆ. ಯಾರಾದರೂ ‘ಸುಖವಾಗಿದ್ದೀಯಾ?’ ಎಂದು ಕೇಳಿದರೆ ‘ಎಂಥ ಸುಖ. ನಾನು ಈ ಊರು ಬಿಟ್ಟು ಹೋಗಬಾರದು ಅಂತ ಹೇಳಿಬಿಟ್ಟಿದ್ದಾರಲ್ಲ, ಇಲ್ಲೇ ಸಾಯೋದು ನನ್ನ ಹಣೇಲಿ ಬರೆದಿದೆ’ ಎಂದು ಮರುಗುತ್ತಿರುತ್ತಾನೆ.
ಯಾವತ್ತೂ ಊರಾಚೆ ಹೋಗದವನಿಗೆ, ಹೋಗಬೇಕು ಎಂಬ ಆಸೆಯೂ ಇರದವನಿಗೆ, ಊರಿಂದಾಚೆ ಹೋಗಬಾರದು ಎಂದು ಕಟ್ಟುಪಾಡು ಹಾಕಿದಾಗ, ಹೇಗೆ ಆತ ಅಧೀರನಾಗುತ್ತಾನೆ, ಕುಗ್ಗುತ್ತಾನೆ ಅನ್ನುವುದನ್ನು ಈ ಕತೆ ಹೇಳುತ್ತದೆ.
ಅದು ಸ್ವಾತಂತ್ರ್ಯ. ನಾನು ಊರಾಚೆಗೆ ಕಾಲಿಡುವುದಿಲ್ಲ. ನನಗದು ಇಷ್ಟವಿಲ್ಲ. ಆದರೆ, ನೀನು ಅದನ್ನು ಹೇಳಿದರೆ ಅದು ಬಂಧನವಾಗುತ್ತದೆ.
ಇಲ್ಲೂ ಅಷ್ಟೇ. ನಮ್ಮ ಸ್ವಾತಂತ್ರ್ಯವೇ ನಮ್ಮ ಬಂಧನವೂ ಆಗಿಬಿಟ್ಟಿದೆ. ನಮ್ಮನ್ನು ನೆಮ್ಮದಿಯಲ್ಲಿಡಬೇಕಾಗಿದ್ದ ಪುರಾಣಗಳನ್ನು ನಾವು ನಮ್ಮನ್ನು ಸಿಗಿಯಲು, ಎರಡಾಗಿಸಲು ಬಳಸಿಕೊಳ್ಳುತ್ತಿದ್ದೇವೆ. ಲೇಖಕರೂ ಇದಕ್ಕೆ ಹೊರತಲ್ಲ, ರಾಜಕಾರಣಿಗಳೂ ಹೊರತಲ್ಲ, ಮಾಧ್ಯಮಗಳೂ ಹೊರತಲ್ಲ.
ನಾವು ಮೂಲವಿಗ್ರಹವನ್ನು ಮರೆತು, ಉತ್ಸವ ಮೂರ್ತಿಯನ್ನೇ ನೋಡುತ್ತಿದ್ದೇವಾ?
 

‍ಲೇಖಕರು G

October 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Anonymous

    ಜೋಗಿಯವರೇ …ತುಂಬಾ ಸತ್ಯವಾದ ಮಾತುಗಳು..!!!

    ಪ್ರತಿಕ್ರಿಯೆ
  2. Nagesha

    ಜೋಗಿಯವರೇ …ತುಂಬಾ ಸತ್ಯವಾದ ಮಾತುಗಳು..!!!

    ಪ್ರತಿಕ್ರಿಯೆ
  3. Anil Talikoti

    ಜೋಗಿ ಅವರೆ, ಗಂಭೀರ ವಿಚಾರ ಮನಮುಟ್ಟುವ ಬರಹ ನಿಮ್ಮದು. ಇಷ್ಟೆಲ್ಲಾ ಹೇಳಿದ ಮೇಲೆ ನೀವು ಕೊಟ್ಟ ರಾಜಾ-ರೈತ ನ ಕಥೆ ಮಾತ್ರ ಬರೀ ಹಳಸಲಷ್ಟೇ ಅಲ್ಲಾ ಅನುಪಯುಕ್ತವಾಗಿ ಪರಿಸ್ಥಿತಿಯನ್ನು ಎಲ್ಲಿದೆಯೊ ಅಲ್ಲೆ ಬಿಟ್ಟು ಬಿಡುತ್ತದೆ ಏನೋ ಎನ್ನುವ ಆತಂಕ. ನಮ್ಮಂಥವರು ಐದು ನಿಮಿಷ ಓದಿ, ಒಂದು ನಿಮಿಷ ಯೋಚಿಸಿ, ಒಂದು ಕಮೆಂಟ ದಾಟಿಸಿ ಮತ್ತೆ ಎಲ್ಲಿರುತ್ತೆಯೆವೊ ಅಲ್ಲೆ ಠಿಕಾಣಿ ಹೊಡೆಯುತ್ತೆವೆ. ಸತ್ಯದಿಂದ ಸತ್ವ ಶೋಧಿಸುವದು ಒಂದು ಲೇಖನದಲ್ಲಿ ಆಗುವ ಕೆಲಸವಲ್ಲ ಎಂದು ಗೊತ್ತಿದ್ದು ಈ ಮಾತು – ಸ್ವಾತ್ರಂತ್ರ್ಯ ಒಂಥರಾ ಬೆವರು ಇದ್ದಂತೆ – ನಾವೆ ಓಡಿ/ಮೈ ಮುರಿದು ಗಳಿಸಿದ ಬೆವರು ಖುಷಿ ಕೊಡುತ್ತದೆ(ಮನಸ್ಸಿಗೆ ಹಾಗೂ ದೇಹಕ್ಕೆ) ಆದರೆ ಬೇರೆಯವರು ಓಡಿಸಿದಾಗ ಬೆವಸಿದ ಬೆವರು ಜುಗುಪ್ಸೆ, ಅವಮಾನ ತರುತ್ತದೆ. ಸಂಪೂರ್ಣ ಸ್ವಾತ್ರಂತ್ರ್ಯ ಒಂದೇ (ಎಲ್ಲರಿಗೂ ಒಂದೆ ಸಮಾನ ಆಗಿರುವ) ಈ ಬಂಧನವನ್ನು ಸ್ವಲ್ಪ ಮಟ್ಟಿಗೆ ಕಳಚುವಲ್ಲಿ ಸಹಾಯ ಮಾಡಬಹುದೇನೋ?
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  4. Ashok Shettar

    ನಮ್ಮ ಉತ್ತರಕರ್ನಾಟಕದಲ್ಲಿ ಒಂದೆರಡು ಗಾದೆಮಾತುಗಳಿವೆ:
    ೧) ಹಿಂದಿನದೆಲ್ಲ ತೆಗೆದು ಹಿತ್ತಿಲಲ್ಲಿ ಕೂತು ಆತ್ತರಂತೆ.
    ೨) ಗೋಡೆ ಕೆದರಿದಷ್ಟೂ ರಾಡಿ.
    ಕೆಲವರಿಗೆ ಚರಿತ್ರೆಯ ಗೋಡೆಯನ್ನು ಕೆಬರುತ್ತ ಅದರಿಂದ ಹೊರಬರುವ ರಾಡಿಯ ಬಣ್ಣ ಮತ್ತು ಟೆಕ್ಸ್ಚರ್ ಕುರಿತು ಹಲಲಲಾ ಅಂತ ವಾದಾಡಿಕೊಳ್ಳುತ್ತ ಕುಳಿತಿರುವದು ಮಹಾಪ್ರಿಯವಾದ ಹವ್ಯಾಸವಾಗಿರುವಂತಿದೆ. ಇಷ್ಟೊಂದು ಜನ ಇಷ್ಟು ಅಧಿಕಾರಯುತವಾಗಿ ಚರಿತ್ರೆಯ ಕುರಿತು ಮಾತಾಡುವದನ್ನು ಚರಿತ್ರಕಾರರೇ ಸುಮ್ಮನೇ ನೋಡುತ್ತ ಕುಳಿತಿರಬೇಕಾಗಿ ಬಂದಿದೆ. ಜೋಗಿಯವರ ಈ ಲೇಖನದಲ್ಲಿ ಚಿಂತನಾರ್ಹ ಅಂಶಗಳಿವೆ.

    ಪ್ರತಿಕ್ರಿಯೆ
  5. Pramod

    ನಮ್ಮ೦ತಹ ಐಟಿ ದಿನಗೂಳಿ ಕಾರ್ಮಿಕರಿಗೆಲ್ಲಾ ಇದನ್ನು ಕಳಿಸಿ, ಕಲಿಸಬೇಕು. ಬಹಳ ಸೀರಿಯಸ್ ಸಬ್ಜೆಕ್ಟ್.

    ಪ್ರತಿಕ್ರಿಯೆ
  6. Rashmi

    ಹೌದಲ್ಲ ಎಷ್ಟೊಂದು ನಿಜ ನೀವು ಹೇಳಿದ್ದು… ವರ್ತಮಾನವನ್ನ ಎದುರಿಸಲಿಕ್ಕೆ ಆಗದೆ ಹೋದಾಗ, ಪುರಾಣಗಳಿಂದ ಪುರಾವೆ ತರೋದು..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: