ಯಾರಿಗೇಳೋಣ ನಮ್ಮ ಪ್ರಾಬ್ಲಮ್ಮು!

ಧರ್ಮ-ಸಂಕಟ! 

shiva-4

ಎಸ್ ಜಿ ಶಿವಶಂಕರ್

ಶೀರ್ಷಿಕೆ ಓದಿ ಯಾವುದೋ ಗಾಢ ಚಿಂತನೆಗೆ ಹಚ್ಚುತೇನೆ ಎಂದು ಓದುವುದು ಸ್ಕಿಪ್ ಮಾಡಬೇಡಿ. ದರ್ಮ-ಸಂಕಟದ ವಿಷಯದ ಬಗ್ಗೆ ಬರೆಯುವುದು ನಿಜಕ್ಕೂ ಧರ್ಮಸಂಕಟವೇ! ಆದರೂ ಇದು ಗಂಭೀರ ಚರ್ಚೆ ಅಲ್ಲ! ನಂಬಲಾರಿರಿ ಅಲ್ಲವೆ? ಈ ಲೇಖಕ ಏಮಾರಿಸುತ್ತಿದ್ದಾನೆ ಎಂದುಕ್ಕೊಳ್ಳಬೇಡಿ. ಮೊದಲಿಗೇ ಹೇಳುತ್ತಿದ್ದೇನೆ, ನೀವು ಹೆದರುವುದಕ್ಕಾಗಲೀ ಇಲ್ಲವೇ ಪುಟ ಮುಂದೆ ತಿರುಗಿಸುವುದಕ್ಕಾಗಲೀ ಕಾರಣವೇ ಇಲ್ಲ! ಈ ಲೇಖನ ಕೊರೆಯಲು ಸಾರಿ ಬರೆಯಲು ಕಾರಣ ಮೊನ್ನೆ ನಡೆದ ಒಂದು ಘಟನೆ! ಬಹುಶಃ ಇಂತಾ ಘಟನೆ ನಿಮ್ಮ ಜೀವನದಲ್ಲೂ ನಡೆದಿರಹುದು ಇಲ್ಲವೇ ನಡೆಯಬಹುದು. ಆ ಕಾರಣಕ್ಕಾಗಿಯೇ ಈ ಲೇಖನವನ್ನು ನೀವು ಓದಲೇಬೇಕು ಎಂಬ ಭಂಡ ತರ್ಕ ಮುಂದಿಟ್ಟು ಮುಂದುವರಿಯುವೆ!!

ಯಾವುದು ಧರ್ಮ ಎಂದು ನಂಬಿರುತ್ತೇವೊ ಅದನ್ನು ಅನುಸರಿಸಲು ಹೋದಾಗ ಆಗುವ ಸಂಕಟವನ್ನೇ ಧರ್ಮಸಂಕಟ ಎನ್ನುವುದು. ಇದೇನು ವ್ಯಾಕರಣ, ಸಂಧಿ ಎಲ್ಲಾ ಶುರುವಾಯಿತಲ್ಲ ಎಂದು ಹೆದರದಿರಾ? ನಾನು ವ್ಯಾಕರಣ ಓದುವಾಗ ವ್ಯಾಕುಲನಾಗಿದ್ದೇನೆ. ವ್ಯಾಕರಣದಲ್ಲಿ ನಾನು ಶುದ್ಧ ಶುಂಠಿ! ಈ ಪದ ಯಾಕೆ ನನ್ನ ಮನಸ್ಸಿಗೆ ಬಂತು ಎಂಬುದಕ್ಕೆ ಕಾರಣ ಒಂದು ಪ್ರಕರಣ. ಈ ಪದಕ್ಕೆ, ಲೇಖನ ಓದಲೇಬೇಕಾದ ನಿಮ್ಮ ಪರದಾಟಕ್ಕೆ ಕಾರಣವಾದ ಧರ್ಮಸಂಕಟ ಪ್ರಕರಣವನ್ನು ನಿಮಗೆ ಹೇಳುತ್ತಿದ್ದೇನೆ.

man in lines

ಅವರಿಗೆ ತುಂಬಾ ವಯಸ್ಸಾಗಿತ್ತು. ಅವರು ಎಂದರೆ ಯಾರು ಎಂದು ಹುಬ್ಬುಗಂಟಿಕ್ಕಿದಿರಾ..? ಅವರು ಅಪರಿಚಿತರು. ಯಾರೆಂದು ನನಗೂ ಗೊತ್ತಿರಲಿಲ್ಲ. ವಯಸ್ಸು ಬಹುಶಃ ಎಂಬತ್ತರ ಮೇಲಿರಬಹುದು. ಪ್ಯಾಂಟು, ಟಕ್ ಮಾಡಿದ ಷರ್ಟು, ಮೇಲೆ ಒಂದು ಹಾಫ್ ಸ್ವೆಟರ್ ಧರಿಸಿದ್ದ ಗಂಡಸು. ಅವರ ಉಡುಪನ್ನು ಬರೆದ ಮೇಲೆ ಅವರು ಗಂಡಸು ಎಂದು ಬರೆಯುವುದೇಕೆ..? ಎಂದು ಹುಬ್ಬು ಹಾರಿಸದಿರಿ. ಸುಮಾರು ಹತ್ತು ವರ್ಷದ ಹುಡುಗನೊಬ್ಬ ಅವರನ್ನು ಮದುವೆ ಮನೆಗೆ ಕರೆದುಕೊಂಡು ಬಂದು, ಖಾಲಿಯಿದ್ದ ಕುರ್ಚಿಗಳ ಒಂದು ಸಾಲಿನ ಮೊದಲನೆ ಕುರ್ಚಿಯಲ್ಲಿ ಕೂರಿಸಿ ಮಾಯವಾದ.

ಶುಂಠಿಯಂತೆ ಒಂಟಿ ಕೂತಿದ್ದ ನಾನವರನ್ನು ಗಮನಿಸಿದೆ. ನನ್ನವಳು ತಮ್ಮ ನೆಂಟರಿಷ್ಟರ ನಡುವೆ ಸಂಭ್ರಮದಲ್ಲಿದ್ದಳು. ಸ್ವಭಾವತಃ ಜನರಿಂದ ದೂರ ಇರಬಯಸುವ, ಸಂಕೋಚಪ್ರವೃತ್ತಿಯ ನಾನು ಕೆಲಸವಿಲ್ಲದೆ ಮದುವೆ ಮನೆಯಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ವೀಕ್ಷಿಸುತ್ತಿದ್ದೆ. ಆದುದರಿಂದಲೇ ಈ ವಯಸ್ಸಾದವರನ್ನೂ ಗಮನಿಸಿದ್ದೆ.

ನನ್ನ ಬಾಲ್ಯಸ್ನೇಹಿತನ ಮಗನ ಮದುವೆ. ಹೋಗಲೇಬೇಕಾದದ್ದು ಅನಿವಾರ್ಯವಾಗಿತ್ತು. ನಾನು ಗಂಡಿನ ಕಡೆಯವನಾದುದರಿಂದ ಹೆಚ್ಚೇನು ಕೆಲಸವಿಲ್ಲದೆ ಕೂತಿದ್ದೆ. ಆಗಲೇ ಈ ವಯಸ್ಸಾದವರು ಬಂದು ಕೂತಿದ್ದು.

ಅವರಿಗೆ ಆರೋಗ್ಯ ಅಂತಾ ಚೆನ್ನಾಗಿಲ್ಲ ಎನ್ನುವುದು ಅವರ ಮುಖ ನೋಡಿದರೆ ಗೊತ್ತಾಗುತ್ತಿತ್ತು. ಈಗಂತೂ ಬಿಡಿ ಇಪ್ಪತ್ತಕ್ಕೇ ಬಿ.ಪಿ, ಮೂವತ್ತಕ್ಕೇ ಡಯಾಬಿಟೀಸು-ಮುಂತಾದುವು ಕಾಡುವ ಕಾಲ. ಅವರ ವಯಸ್ಸಿನಲ್ಲಿ ಇವುಗಳಲ್ಲಿ ಯಾವುದಾದರೂ ಅಥವಾ ಎಲ್ಲವೂ ಇದ್ದಿರಲು ಸಾಧ್ಯ! ಜೊತೆಗೆ ಆಂಜಿಯೋಗ್ರಾಮು, ಓಪನ್ ಹಾರ್ಟು(ಹಾರ್ಟು ಇದ್ದವರಿಗೆ) ಸರ್ಜರಿ ಮುಂತಾದವು ಆಗಿರುವ ಸಾಧ್ಯತೆಗಳೇ ಹೆಚ್ಚು.

ಮದುವೆ, ಮುಂಜಿ, ನಾಮಕರಣ, ಬರ್ತ್ ಡೇಗಳು ಮುಂತಾದ ಯಾವುದೇ ಸಮಾರಂಭಗಳಲ್ಲಿಆನಂದಪಡುವವರು ಹೆಂಗಸರು! ಸಂಕಟಪಡುವವರು ಗಂಡಸರು! ಇದು ನಾನು ಮಾಡಿದ ಒಂದು ಮಹತ್ತರ ವಿಶ್ಲೇಷಣೆ! ಈ ಮಾತನ್ನು ನೀವು ಗಂಡಸಾದರೆ ಒಪ್ಪುವಿರಿ, ಹೆಂಗಸಾಗಿದ್ದರೆ ‘ಇವರೊಬ್ಬರು ಸಾಲದಾಗಿತ್ತು ಹೆಂಗಸರನ್ನು ಆಡಿಕ್ಕೊಳ್ಳಲು’ ಎಂದು ಹುಬ್ಬು ಗಂಟಿಕ್ಕುವಿರಿ. ಸಮಾರಂಭಗಳಿಗೆ ಹೊರಡುವ ಮುಂಚೆಯೇ ಹೆಂಗಸರಿಗೆ ಸಂಭ್ರಮ ಶುರುವಾಗುತ್ತದೆ. ಸೀರೆಗಳ ರಾಶಿಯಲ್ಲಿ ಯಾವುದು ಉಡಬೇಕೆನ್ನುವ ಚಿಂತೆಯಲ್ಲಿ ಮುಳುಗಿ ಏಳುತ್ತಾರೆ ನೀರೆಯರು. ಸೀರೆ ಇಲ್ಲವೇ ಡ್ರೆಸ್ಸು, ಅದಕ್ಕೆ ಮ್ಯಾಚಿಂಗ್ ಚಪ್ಪಲಿ, ಪರ್ಸ್ , ಹೇರ್ಸ್ಟೈಲು, ತಕ್ಕ ಒಡವೆ-ಹೀಗೆ ಎಲ್ಲವನ್ನೂ ಬಣ್ಣ, ಬೆಲೆ, ಆಕಾರಗಳಲ್ಲಿ ಹೊಂದಿಸಲು ಪ್ರಯತ್ನಪಡುತ್ತಾರೆ. ನಡುನಡುವೆ “ನಿಂದು ಇನ್ನೂ ಮುಗಿಲಿಲ್ವೇನೆ?” ಎಂದು ಮುಖ ಸಿಂಡರಿಸುವ ಗಂಡಂದಿರ ಸಲಹೆ ಕೇಳುತ್ತಾರೆ. ಬಂದ ಸಲಹೆ ಅವರ ಮನಸ್ಸಿನಲ್ಲಿರುವಂತೆಯೇ ಆದರೆ ಸಮಾಧಾನಪಡುತ್ತಾರೆ. ವ್ಯತಿರಿಕ್ತವಾಗಿದ್ದರೆ ತಮ್ಮ ಗಂಡಂದಿರ ವಿವೇಚನಾಶಕ್ತಿಯನ್ನು ಟೀಕಿಸುತ್ತಾರೆ! “ನಿಮಗೆ ಸ್ವಲ್ಪವೂ ಕಾಮನ್ ಸೆನ್ಸೇ ಇಲ್ಲ” ಎಂದು ಹಂಗಿಸುತ್ತಾರೆ. ತಯ್ಯಾರಿಗೆ ಅನೇಕ ಗಂಟೆಗಳನ್ನು ವ್ಯಯಿಸಿ ಕೊನೆಗೊಮ್ಮೆ ಸಮಾರಂಭದ ಸ್ಥಳವನ್ನು ತಡವಾಗಿ ತಲುಪುತ್ತಾರೆ. ಎಷ್ಟೋ ಸಲ ಮದುವೆಯ ಧಾರಾಮಹೂರ್ತಕ್ಕೆ ಹೊರಟವರು ರಿಸಿಪ್ಷನ್ ಸಮಯಕ್ಕೆ ತಲುಪುವುದೂ ಇದೆ. ರೆಸೆಪ್ಷನ್ನಿಗೆ ಹೊರಟವರು ಮದುವೆ ಮಂಟಪ ಖಾಲಿ ಮಾಡುವ ಸಮಯಕ್ಕೆ ಹೋಗುತ್ತಾರೇನೋ? ನನಗೆ ಆ ಅನುಭವ ಈವರೆಗೆ ಆಗಿಲ್ಲ.

2

ಇದಕ್ಕೆ ವ್ಯತಿರಿಕ್ತವಾಗಿ ಗಂಡಸರು ಮಡದಿಯರು ಹೊರಟಾಗ ಉಡುಪು ಆಯ್ಕೆ ಮಾಡಬೇಕೆನ್ನುವುದನ್ನೂ ತಿಳಿಯದೆ, ಕೆಲವೊಮ್ಮೆ ಗೊತ್ತಿದ್ದರೂ ಗಮನ ನೀಡದೆ, ಕೈಗೆ ಸಿಕ್ಕಿದ ಪ್ಯಾಂಟು, ಷರ್ಟ್ ತೊಟ್ಟು ಹೊರಡುತ್ತಾರೆ. ನನ್ನ ಈ ಮಾತು ಈಗಿನ ಯುವಕರಿಗೆ ಅನ್ವಯಿಸುವುದಿಲ್ಲ. ಈಗಿನ ಯುವಕರು ಹೆಂಗಸರಿಗೆ ಸಮಸಮನಾಗಿ ಸಿದ್ಧತೆ ನಡೆಸುತ್ತಾರಂತೆ. ಇತ್ತೀಚೆಗೆ ನಾನು ಕೇಶಕರ್ಮ ಮಾಡಿಸುವಾಗ ಕೆಲವು ಐಟಿ ತರುಣರನ್ನು ಕಂಡೆ. ಅವರಲ್ಲಿ ಒಬ್ಬ ಮುಖಕ್ಕೆ ಫೇಷಿಯಲ್ ಮಾಡಿಸಿಕ್ಕೊಳ್ಳುತ್ತಿದ್ದ. ಇನ್ನೊಬ್ಬ ತಲೆಗೆ ಮಸಾಜ್ ಮಾಡಿಸಿಕ್ಕೊಳ್ಳುತ್ತಿದ್ದ. ಮಗದೊಬ್ಬ ಮುಖಕ್ಕೆ ಬ್ಲೀಚ್ ಮಾಡಿಸಿಕ್ಕೊಳ್ಳುತ್ತಿದ್ದ. ಈ ಸೇವೆಗೆಲ್ಲಾ ಎಷ್ಟು ಚಾರ್ಜ್ ಮಾಡುತ್ತೀಯ ಎಂದು ಕೇಶಕರ್ಮಿಯನ್ನು ಕೇಳಿದಾಗ ಆತ ನಕ್ಕು ‘ನಿಮಗ್ಯಾಕೆ ಸಾರ್? ನಿಮ್ಮ ಟೈಮು ಮುಗಿದಿದೆಯಲ್ಲ?’ ಎಂದು ನನ್ನ ಬಿಳಿಯ ತಲೆಯ ಮೇಲೆ ಕತ್ತರಿ ಆಡಿಸುತ್ತಾ ಹೇಳಿದ್ದ! ಆಗ ನಿಜಕ್ಕೂ ಕೋಪ ಬಂದಿತ್ತು. ಆನಂತರ ಅವನು ಹೇಳಿದ್ದರಲ್ಲಿ ತಪ್ಪೇನು ಇಲ್ಲ ಎಂದು ಸಮಾಧಾನಪಟ್ಟುಕೊಂಡೆ. ಕಳೆದ ಇಪ್ಪತ್ತು ವರ್ಷದಿಂದ ಆತನನ್ನು ಹೇರ್ಕಟ್ ಬಿಟ್ಟು ಉಳಿದ ಸೇವೆಯ ಬಗೆಗೆ ಕೇಳಿರಲಿಲ್ಲ. ಜೊತೆಗೆ ನಾನು ಹೇರ್ಕಟ್ ಮಾಡಿಸುವುದೇ ಮೂರು ತಿಂಗಳಿಗೊಮ್ಮೆ. ಪ್ರತಿಬಾರಿಯೂ ಹೇರ್ಕಟ್ಟಿಂಗ್ ಚಾರ್ಜ್ ಹೆಚ್ಚಿಸಿದಾಗಲೂ ಅದನ್ನು ಪ್ರಶ್ನಿಸುತ್ತಿದ್ದೆ. ನಮ್ಮಂತವರಿಂದ ಅವನಿಗೆ ಯಾವುದೇ ರೀತಿಯಲ್ಲಿ ಹೆಚ್ಚಿನ ಲಾಭವಾಗುವುದಿಲ್ಲ ಎನ್ನುವ ಕಾರಣಕ್ಕೆ ಅವನು ಹಾಗೆ ಹೇಳಿದ್ದ.

ಹಾ..ಮರೆತೆ ನೋಡಿ, ನಾನು ಆ ವೃದ್ಧರ ಬಗೆಗೆ ಹೇಳುತ್ತಿದೆ, ಆಗಲೇ ವಿಷಯಾಂತರವಾಯಿತು. ಊಟದ ಸಮಯ ಕೊನೆಗೂ ಬಂದಿತ್ತು! ಆಹ್ವಾನಿತರೆಲ್ಲರೂ ಸೆಲ್ಲಾರಿನಲ್ಲಿದ್ದ ಡೈನಿಂಗ್ಗೆ ಧಾವಿಸುತ್ತಿದ್ದರು. ಹತ್ತಿಪ್ಪತ್ತು ವರ್ಷಗಳ ಹಿಂದೆ “ಊಟಕ್ಕೆ ದಯಮಾಡಿಸಿ” ಎನ್ನುವ ಆಹ್ವಾನ ಬರುವವರೆಗೂ ಆಹ್ವಾನಿತರು ಊಟಕ್ಕೆ ಏಳುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಸಮಾರಂಭಕ್ಕೆ ಬಂದವರು ಒಂದು ಕಣ್ಣು ಡೈನಿಂಗ್ ಹಾಲಿನ ಕಡೆ ಇಟ್ಟೇ ಇರುತ್ತಾರೆ. ಎಲ್ಲರೂ ಊಟಕ್ಕೆ ಆತುರದಿಂದ ಹೋಗುತ್ತಿದ್ದರೆ ಈ ವೃದ್ಧರು ಮಾತ್ರ ಸುತ್ತ ನೋಡುತ್ತಿದ್ದರು. ಅವರ ಚರ್ಯೆ ನೋಡಿದರೆ ಊಟಕ್ಕೆ ಹೋಗಬೇಕು ಆದರೆ ಒಬ್ಬರೇ ಹೋಗಲು ಸಾಧ್ಯವಿಲ್ಲದೆ ತಮ್ಮನ್ನು ಕರೆತಂದ ಹುಡುಗನನ್ನು ಹುಡುಕುತ್ತಿದ್ದರು. ಅದನ್ನು ಅವರ ಅತ್ತಿತ್ತ ಹುಡುಕಾಡುವ ಚರ್ಯೆಯಲ್ಲೇ ಅರ್ಥವಾಗುತ್ತಿತ್ತು. ಎಲ್ಲೂ ಆ ಹುಡುಗನ ಸುಳಿವೇ ಇರಲಿಲ್ಲ. ಅವರ ಅಸಹಾಯಕತೆ ನೋಡಲಾರದೆ ಅನುಕಂಪದ ಕಂಪನದಿಂದ ಕಂಪಿಸಿದೆ! ಅವರನ್ನು ಊಟಕ್ಕೆ ಕರೆದುಕೊಂಡು ಹೋಗಬೇಕೆನ್ನಿಸಿತು. ಅವರ ಬಳಿ ಹೋಗಿ ಏಳಿಸಿಕೊಂಡು ಡೈನಿಂಗ್ ಹಾಲಿನ ಕಡೆಗೆ ಎರಡು ಹೆಜ್ಜೆ ಮುಂದೆ ನಡೆಸಿದ್ದೆ. ಅವರಿಗೆ ದೃಷ್ಟಿ ಕೂಡ ಸರಿಯಿರಲಿಲ್ಲ. ಜೊತೆಗೆ ನಡಿಗೆಯಲ್ಲ್ಲಿ ನಿಯಂತ್ರಣವಿಲ್ಲದೆ ಓಲಾಡುತ್ತಿದ್ದರು. ಹೇಗೋ ಅವರನ್ನು ಅನುಸರಿಸಿ ಇನ್ನೆರಡು ಹೆಜ್ಜೆ ನಡೆಯುವಾಗ ಎದುರಿಗೆ ಬಂದವರೊಬ್ಬರು “ಅಯ್ಯೋ ಇವರನ್ನ ಡೈನಿಂಗಿಗೆ ಕರ್ಕೊಂಡು ಹೋಗ್ತೀರಾ..? ಇವರು ಅಷ್ಟೊಂದು ಮೆಟ್ಟಿಲು ಹೇಗೆ ಇಳಿದು ಹತ್ತುತ್ತಾರೆ? ಬೇಡ ಇವರನ್ನು ಇಲ್ಲೇ ಕೂರಿಸಿ, ತಟ್ಟೆಯಲ್ಲಿ ತಂದು ಕೊಟ್ಟಾರಾಯ್ತು” ಎಂದರು.

ಅವರ ಮಾತು ಸರಿ ಎನ್ನಿಸಿ, “ನೀವು ಇಲ್ಲಾ ಕೂತಿರಿ, ಊಟ ತಂದುಕೊಡ್ತಾರೆ” ಎಂದು ಹೇಳಿ ಅಲ್ಲಿಂದ ಕಾಲುಕೀಳುವಾಗ ಸುಮಾರು ಮೂವತ್ತು ವಯಸ್ಸಿನ ಒಬ್ಬ ಹೆಂಗಸು ಬಂದರು. ಬಹುಶಃ ಅವರ ಆ ವೃದ್ಧರ ಮಗಳೋ ಸೊಸೆಯೋ ಇರಬೇಕು. “ಬೇಡಿ ಅವರನ್ನು ಡೈನಿಂಗ್ ಹಾಲಿಗೆ ಕರೆದುಕೊಂಡು ಹೋಗಿ. ಅವರಿಗೆ ಇಲ್ಲೇ ಊಟ ಕೊಟ್ಟರೆ ತುಂಬಾ ಚೆಲ್ಲಾಡುತ್ತಾರೆ” ಎಂದು ಹೇಳಿ ಸರಸರನೆ ಮದುವೆ ಮಂಟಪದ ಕಡೆಗೆ ನಡೆದರು.

ಆ ಹೆಂಗಸಿನ ಮಾತಿನಂತೆ ಅವರನ್ನು ಎಬ್ಬಿಸಿಕೊಂಡು ಇನ್ನೊಂದು ಹೆಜ್ಜೆ ಮುಂದಿಡುವಾಗ ಮತ್ತೊಬ್ಬ ಗಂಡಸರು “ಅಷ್ಟು ವಯಸ್ಸಾದವರನ್ನು ಅಷ್ಟೊಂದು ಮೆಟ್ಟಿಲು ಇಳಿಸಿ ಕರ್ಕೊಂಡು ಹೋಗೋಕಾಗುತ್ತಾ..? ಬೇಡಿ ಇಲ್ಲೇ ಕೂರಿಸಿ ಒಂದು ತಟ್ಟೆಯಲ್ಲಿ ಊಟ ತಂದುಕೊಟ್ಟಾರಾಯಿತು” ಎಂದರು.
ಇದೊಳ್ಳೆ ಫಜೀತಿಯಾಯಿತಲ್ಲ..? ಈ ಮುದುಕರಿಗೆ ಸಹಾಯ ಮಾಡುವ ಉಸಾಬರಿ ನನಗೇಕೆ ಬೇಕಿತ್ತು ಎನಿಸಿತು. ಅವರ ಕಡೆಯ ಆ ಹೆಂಗಸಾಗಲೀ ಹುಡುಗನಾಗಲಿ ಕಾಣಲಿಲ್ಲ. ಮತ್ತೆ ಅವರನ್ನು ಕೂರಿಸಿ ನಾನು ಇನ್ನೇನು ಹೋಗಬೇಕೆನ್ನುವಾಗ ಇನ್ನೊಬ್ಬರು ಮಹಾಶಯರು “ಪಾಪ ಅವರಿಗೆ ಹಸಿವಾಗಿರಬೇಕು ಒಂದು ತಟ್ಟೆಯಲ್ಲಿ ಊಟ ತಂದುಬಿಡಿ” ಎಂದರು. ಒಳ್ಳೆಯ ಧರ್ಮಸಂಟಕ್ಕೆ ಸಿಕ್ಕಿಕೊಂಡೆನಲ್ಲಾ ಎಂದು ಕಸಿವಿಸಿಯಾಯಿತು.

ಅಷ್ಟರಲ್ಲಿ ಎಲ್ಲೋ ಮಾಯವಾಗಿದ್ದ ನನ್ನ ಪತ್ನಿ ಹತ್ತಿರ ಬಂದು “ಇನ್ನೂ ಇಲ್ಲೇ ಇದ್ದೀರಾ..? ಬೇಗ ಊಟ ಮುಗಿಸಿ ಬನ್ನಿ. ಸಂಜೆ ನನ್ನ ದೊಡ್ಡಮ್ಮನ ಅತ್ತಿಗೆಯ ತಂಗಿಯ ಮಗಳ ರಿಸೆಪ್ಷನ್ನಿಗೆ ಹೋಗ್ಬೇಕು ನೆನಪಿದೆ ತಾನೆ” ಎಂದು ಹೇಳಿ ನನ್ನ ಉತ್ತರಕ್ಕೂ ಕಾಯದೆ ಮದುವೆಯ ಜನಜಂಗುಳಿಯಲ್ಲಿ ಕರಗಿದಳು!
“ಏನಪ್ಪಾ ಊಟ ಸಿಗುತ್ತಾ?” ಎಂದು ವೃದ್ಧರು ಕೊರಗಿದರು.

“ಹತ್ನಿಮಿಷ ಕಾಯಿರಿ ತಂದ್ಕೊಡ್ತೀನಿ” ಎನ್ನುತ್ತಾ ಹೆಜ್ಜೆ ಮುಂದಿಟ್ಟಾಗ ವೃದ್ಧರ ಸಂಬಂಧಿ ಹೆಂಗಸು ಪ್ರತ್ಯಕ್ಷಳಾದರು.

“ಅವರಿಗೆ ತಟ್ಟೆಯಲ್ಲಿ ತಂದುಕೊಡಬೇಡಿ ಅಂತ ಎಷ್ಟು ಸಲ ಹೇಳಬೇಕು ನಿಮಗೆ? ಇಡೀ ಚೌಲ್ಟ್ರಿ ತುಂಬಾ ಚೆಲ್ಲಾಡುತ್ತಾರೆ ಅದನ್ನ ಕ್ಲೀನ್ ಮಾಡೋರು ಯಾರು? ಮತ್ತೆ ಚೌಲ್ಟ್ರಿಯವರು ಸುಮ್ಮನಿರ್ತಾರಾ? ನಿಮಗೆ ಇಷ್ಟೂ ಅರ್ಥವಾಗೊಲ್ಲವಾ..?!”

ಆಕೆಯ ಮಾತಿಗೆ ತಲೆ ಗಿರ್ರೆಂದಿತು! ಅಕಸ್ಮಾತ್ ಆ ವೃದ್ಧರು ಇಲ್ಲೇ ಊಟ ಮಾಡಿ, ಸುತ್ತ ಚೆಲ್ಲಿ ಅದನ್ನು ನಾನೇ ಕ್ಲೀನ್ ಮಾಡಬೇಕಾದ ದೃಷ್ಯ ಕಣ್ಮುಂದೆ ಬಂತು!! ಈಗ ನಾನು ಯಾರ ಮಾತು ಕೇಳಲಿ..? ಯಾರಿಗೂ ಇಲ್ಲದ ಈ ಧರ್ಮಸಂಕಟ ನನಗೇಕೆ..? ದೂರದಲ್ಲೆಲ್ಲೋ ಮಡದಿ ಕೈಸನ್ನೆಯಲ್ಲೇ ಊಟಕ್ಕೆ ಹೋಗಿ ಎಂದಳು.

“ಇವರು ನಿಮಗೇನಾಗಬೇಕು?” ಆಕೆಯನ್ನು ಕೇಳಿದೆ.

“ಮಾವ” ಎಂದಳಾಕೆ.

“ನನಗೇನಾಗಬೇಕು..?” ಕೇಳಿದೆ.

“ನನಗೇನು ಗೊತ್ತು..?” ನನಗೆ ತಲೆ ಸರಿ ಇಲ್ಲ ಎನ್ನುವ ಭಾವ ಅವಳ ಪ್ರಶ್ನೆಯಲ್ಲಿತ್ತು!

“ನನಗೆ ಇವರು ಏನೂ ಆಗಬೇಕಾಗಿಲ್ಲ. ಇವರ ಹತ್ರ ಯಾರೂ ಇರಲಿಲ್ಲ ಅದಕ್ಕೇ ಅವರನ್ನ ಊಟಕ್ಕೆ ಕರ್ಕೊಂಡು ಹೋಗೋ ಪ್ರಯತ್ನ ಮಾಡಿದೆ. ನಿಮಗೆ ಹೇಗೆ ಸರಿ ಅನ್ನಿಸುತ್ತೋ ಹಾಗೆ ಇವರಿಗೆ ಹೇಗೆ ಊಟ ಮಾಡಿಸಿ, ನಾನು ಬೇರೆ ಇನ್ನೊಂದು ಕಡೆ ಹೋಗಬೇಕು” ತುಸು ಕೆಟ್ಟದೆನ್ನಿಸಿದರೂ ಧೈರ್ಯ ಮಾಡಿ ಹೇಳಿಬಿಟ್ಟೆ!
“ಏನಂತೆ..? ಅಡಿಗೆಯವನು ಕರ್ಕೊಂಡು ಹೋಗೊಲ್ಲವಂತಾ..?” ಕಿವಿ ಕೂಡ ಸರಿಯಾಗಿ ಕೇಳದ ಆ ವೃದ್ಧರು ನನ್ನನ್ನು ಅಡಿಗೆಯವನನ್ನಾಗಿ ಮಾಡಿದ್ದರು.
ಇದಲ್ಲವೆ ಧರ್ಮಸಂಕಟ? ಆ ಹೆಂಗಸು ನನ್ನನ್ನು ನುಂಗುವಂತೆ ನೋಡಿದರು!

“ವಯಸ್ಸಾದವರನ್ನು ಕಂಡರೆ ಅಯ್ಯೋ ಅನ್ನಿಸೊಲ್ಲವಾ…?”

ತೀರಾ ತಿರಸ್ಕಾರದಿಂದ ಆಕೆ ಹೇಳಿದರು.

ಆಗಲೇ ಅಲ್ಲಿ ನಾಲ್ಕಾರು ಜನ ಸೇರಿದ್ದರು. ಅವರೆಲ್ಲರ ಕಣ್ಣಲ್ಲಿ ನಾನು ವಿಲನ್ ಆಗಲಿರುವೆ ಎನ್ನುವ ಅಪಾಯ ಅರಿವಾಯಿತು! ಇದು ನನ್ನ ಅಳಿವು ಉಳಿವಿನ ಪ್ರಶ್ನೆ ಎನಿಸಿತು.

“ನೋಡಿ ಈ ಹಿರಿಯರು ಇವರ ಮಾವ. ಇವರನ್ನ ಊಟಕ್ಕೆ ಕರ್ಕೊಂಡು ಹೋಗೋಕೆ ಸಹಾಯ ಕೇಳ್ತಿದ್ದಾರೆ ”

ನಾನೇ ಮುಂದಾಗಿ ಹೇಳಿದೆ.

“ಅಯ್ಯೋ..ಅದಕ್ಕೇನಂತೆ ಏಳಿ” ಎಂದೊಬ್ಬರು.

“ಅಯ್ಯೋ ಬೇಡಿ. ಅವರಿಗೆ ಅಷ್ಟೊಂದು ಮೆಟ್ಟಿಲು ಇಳಿದು ಹತ್ತೋಕಾಗೊಲ್ಲ. ಯಾರಾದ್ರೂ ಇಲ್ಲಿಗೇ ಊಟ ತಂದುಕೊಟ್ಟುಬಿಡಿ”

ಇನ್ನೊಬ್ಬರು ಹೇಳಿದರು.

ಅವರ ಸೊಸೆ ಮಧ್ಯದಲ್ಲಿ ಬಾಯಿ ಹಾಕಿದರು.

“ಅವರಿಗೆ ಕೈ ಸ್ವಾಧೀನದಲ್ಲಿ ಇಲ್ಲ, ಚೆಲ್ಲಾಡಿಬಿಡ್ತಾರೆ. ಅವರನ್ನ ಡೈನಿಂಗ್ ಹಾಲಿಗೆ ಕರ್ಕೊಂಡು ಹೋಗಿ” ಎಂದಳು.

ಈ ಗೋಜಲು ಇಲ್ಲಿಗೇ ಮುಗಿಯುವುದಿಲ್ಲ ಎನ್ನಿಸಿ ನನ್ನ ಪಾಲಿನ ಧರ್ಮಸಂಕಟವನ್ನು ಇತರರ ಮೇಲೆ ಹೊರಿಸಿ ಮೆಲ್ಲಗೆ ಆ ಗುಂಪಿನಿಂದ ದೂರ ಸರಿದು ಡೈನಿಂಗ್ ಹಾಲಿನ ಕಡೆಗೆ ಯಾರ ಗಮನಕ್ಕೂ ಬರದಂತೆ ನಡೆದೆ. ಆ ವೃದ್ಧರ ಹಸಿವಿಗೆ ಸಹಾಯ ಮಾಡಲಾರದ್ದಕ್ಕಾಗಿ ಮನಸ್ಸಿಗೆ ಇರುಸುಮುರುಸಾಗಿತ್ತು. ಬೇರೆ ದಾರಿ ಇರಲಿಲ್ಲ ಎಂಬ ಸಮಾಧಾನ ಹೇಳಿಕೊಂಡರೂ ಮನಸ್ಸು ಅಪಸ್ವರ ಹೊರಡಿಸುತ್ತಲೇ ಇತ್ತು!

‍ಲೇಖಕರು admin

October 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: