ಯಲ್ಲಪ್ಪ ಎಮ್ ಮರ್ಚೇಡ್ ‘ಹೆಜ್ಜೆ ಗುರುತಿನ ಸಾಲು’ಗಳು

ಯಲ್ಲಪ್ಪ ಎಮ್ ಮರ್ಚೇಡ್

ಯುವಕವಿ ರಾಮು ಎಂ ರಾಠೋಡ್ ಒಬ್ಬ ಕ್ರಿಯಾಶೀಲ ಬರಹಗಾರ ಅಲ್ಲದೆ ಕ್ರಿಯಾತ್ಮಕವಾಗಿ ಯೋಚಿಸುವ ಪಾದರಸದಂತೆ ಇರುವ ಚಿಂತನೆಗಳು, ಯೋಜನೆಗಳು ಅವರು ಕಟ್ಟಿಕೊಂಡಿರುವ ಜಿಲ್ಲಾ ಕವಿ ವೃಕ್ಷ ಬಳಗ ವತಿಯಿಂದ ಸದಾ ಕ್ರಿಯಾತ್ಮಕ ಚಟುವಟಿಕೆಗಳನ್ನು ವಾರಕ್ಕೊಮ್ಮೆ ಸ್ಪರ್ಧೆಗಳನ್ನು ಏರ್ಪಡಿಸುವುದು, ಯುವ ಬರಹಗಾರರನ್ನು ಎಲೆಮರೆ ಕಾಯಿಯಂತೆ ಇರುವ ನೂರಾರು ಬರಹಗಾರರನ್ನು ತಮ್ಮ ಬಳಗದ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಯಿಸಿರುವುದನ್ನು ಕಾಣಬಹುದು. 

ಕವಿ ರಾಮು ಎಂ ರಾಠೋಡ್ ರವರು ಬಯಲುಸೀಮೆಯ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮೆದಿಕಿನಾಳ ತಾಂಡದಲ್ಲಿ ಹುಟ್ಟಿಬೆಳೆದ ಅಪ್ಪಟ ಗ್ರಾಮೀಣ ಸೊಗಡನ್ನು ಮೈದುಂಬಿಕೊಂಡಿರುವ ಯುವಕವಿ ರಾಮು ಎಂ ರಾಥೋಡ್ ರವರು ನಾಗಪ್ಪ ಪೂಜಾರಿ ತಾಯಿ ಯಮುನಾ ಬಾಯಿ ದಂಪತಿಗಳ ಪುತ್ರ.      

ಎಲ್ಲರಂತೆ ಯುವ ಕವಿ ರಾಮು ಎಂ ರಾಠೋಡ್ ಪ್ರೀತಿ ಪ್ರೇಮ ಅಂತ ಬರೆಯದೇ, ವಿಭಿನ್ನ ರೀತಿಯಲ್ಲಿ  ಕನ್ನಡ ನಾಡು ನುಡಿ, ಪರಿಸರ ಪ್ರಜ್ಞೆ, ರೈತನ ತೊಳಲಾಟದ ಕುರಿತು, ಕುಟುಂಬದ ಸಂಬಂಧಗಳ ಬೆಸೆಯುವ ಕವಿತೆಗಳು, ಸಾಮಾಜಿಕ ಧೋರಣೆಗಳನ್ನು ಚಿಂತಿಸುವ ಬರಹಗಳನ್ನು ಬರೆಯುವುದರ ಮೂಲಕ  ಸಾಹಿತ್ಯಾಸಕ್ತರಿಗೆ ಆಕರ್ಷಿತರಾಗುತ್ತಾರೆ.

ಅವರ ಬರಹ ಶೈಲಿ, ಚಿಂತನ ಲಹರಿಯು ಎಲ್ಲಿಯೂ ಮಧ್ಯೆ ನಿಲ್ಲಿಸದೆ ದಡ ಸೇರಿಸುವ ತವಕ ಅವರದು. ಅಂತಹ ಯುವ ಬರಹಗಾರನ ಮೊದಲ ಕೃತಿ “ಅಶ್ವಿನಿ ಅಮಲುಗಳು”, ಎನ್ನುವ ಕೃತಿಯ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಗೊಂಡಿದ್ದಾರೆ, ಇಂದು ತಾನು ಯುವ ಬರಹಗಾರರನ್ನು ಬರಿಸುವುದರ ಜೊತೆಗೆ ಬರೆದಿದ್ದನ್ನ ಸಂಪಾದಿಸಿ ಪ್ರಕಟಿಸಿದ್ದಾರೆ.

ರಾಮು ಅವರ ಸಂಪಾದನೆಯಲ್ಲಿ ಮೂರು ಕೃತಿಗಳನ್ನು ಹೊರತಂದಿರುವ “ಭಾವನೆಗಳ ಸಿಂಚನ”, “ಕನ್ನಡ ಕಾವ್ಯ ವೈಭವ”, “ಕವಿ ವೃಕ್ಷ ಕಥಾಮಾಲಿಕೆ”, ಕೃತಿಗಳನ್ನು ಸಂಪಾದಿಸಿ ಯುವ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸುವುದರ ಮೂಲಕ ಸಾಹಿತ್ಯಲೋಕಕ್ಕೆ ಹೊಸ ಬರಹಗಾರರನ್ನು ಪರಿಚಯಿಸಿದ್ದಾರೆ.

ಅಲ್ಲದೆ ಇತ್ತೀಚಿಗೆ ತನ್ನ ಎರಡನೆಯ ಸ್ವ ರಚಿತ ಕವನ ಸಂಕಲನ “ಹೆಜ್ಜೆ ಗುರುತಿನ ಸಾಲು” ಕೃತಿಯೊಂದಿಗೆ ನಾವು ಎರಡು ಹೆಜ್ಜೆ ಹಾಕೋಣ… ಏನಂತೀರಾ! ಹೆಜ್ಜೆ ಗುರುತಿನ ಸಾಲು ಕೃತಿಯು ಸುಮಾರು 55 ಕವಿತೆಗಳನ್ನು ಒಳಗೊಂಡಿದ್ದು 74 ಪುಟಗಳನ್ನು ಹೊಂದಿದೆ. ಈ ಕೃತಿಗೆ ಜಿಲ್ಲೆಯ ಹಿರಿಯ ಸಾಹಿತಿಗಳು ಮಹಾಂತೇಶ ಮಸ್ಕಿ ರವರು ಕೃತಿಗೆ ಮುನ್ನುಡಿ ಬರೆದು ರಾಮು ಎಂ ರಾಥೋಡ್ ರವರಿಗೆ ಮುನ್ನಡೆಯಲು ಸಾಥ್ ನೀಡಿದ್ದಾರೆ. 

ಇನ್ನೋರ್ವ ಹಿರಿಯ ಸಾಹಿತಿಗಳಾದ ಮಂಡಲಗಿರಿ ಪ್ರಸನ್ನ ರವರು ಕೃತಿಗೆ ಬೆನ್ನುಡಿ ಬರೆದು ಕವಿ ರಾಮು ರಾಥೋಡ್ ರವರಿಗೆ ಬೆನ್ನು ತಟ್ಟಿ ಸಾಮಾಜಿಕ ಕಳಕಳಿ ಒಡನಾಟ ತಮ್ಮ ಸುತ್ತಮುತ್ತಲಿನ ಘಟನೆಗಳನ್ನು ಸೂಕ್ಷ್ಮ ಮನುಷ್ಯನಿಂದ ನೋಡುವ ಪರಿ ಒಬ್ಬ ಕವಿಯಾಗಿ ಅವೆಲ್ಲವನ್ನು ಗ್ರಹಿಸಿದ್ದರ ಫಲವೇ ಇಂತಹ ಜೀವಪರ ಮತ್ತು ಕಾವ್ಯಪರ ಕವಿತೆಗಳನ್ನು ಕಟ್ಟಿಕೊಡಲು ಸಾಧ್ಯ ಎಂದು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.   

ಕವಿ ರಾಮು ತನ್ನ ಹೆಜ್ಜೆ ಗುರುತಿನ ಸಾಲು ಕೃತಿಯಲ್ಲಿ ಎರಡನೆಯ ಕವಿತೆ ‘ಕುರುಡ ನಾನು’ ರಲ್ಲಿ ತುಂಬ ಮಾರ್ಮಿಕವಾಗಿ ಪ್ರಪಂಚದ ಆಗುಹೋಗುಗಳನ್ನು ಕಣ್ಣಾರೆ ಕಂಡು ಬರೆದಿರುವಂತಹ ಕವಿತೆ ಎನಿಸುತ್ತದೆ. ಕಾಣದೆಲ್ಲವ ಕಂಡು ಕಾಣದಂತೆ ನಡೆವ ಜಾಣ ಕುರುಡ ನಾನು ಇಂದಿನ ಜಗತ್ತಿನಲ್ಲಿ ಕುರುಡನಂತೆ ನಮ್ಮ ಪಾಡಿಗೆ ನಾವು ಬದುಕಿದರೆನೇ ಜೀವಿಸಲು ಸಾಧ್ಯವಿದೆ.

ಸಮಾಜದ ಅಂಕುಡೊಂಕುಗಳನ್ನು ಪ್ರಶ್ನೆ ಮಾಡಲು ಹೋದರೆ ಸಮಾಜದ ಜನತೆ ಒಪ್ಪುವುದಿಲ್ಲ, ಅದಕ್ಕಾಗಿ ಕಂಡರೂ ಕಾಣದಂತೆ ಜಾಣ ಕುರುಡನಾಗಿದ್ದೇನೆ ಎಂದು ಕವಿ ಹೇಳುತ್ತಾರೆ. ಮನುಷ್ಯ ಭೂಮಿ ಮೇಲೆ ಭ್ರಮೆ ಲೋಕದಲ್ಲಿ ಜೀವಿಸುತ್ತಿರುವುದನ್ನು ‘ತಿಳಿಯೊ ಮನುಜ’ ಕವಿತೆಯಲ್ಲಿ ಈ ರೀತಿಯಾಗಿ ಹೇಳುತ್ತಾರೆ.

ಹುಟ್ಟು ಇಲ್ಲಿ ಸಹಜ  ಸಾವು ಇಲ್ಲೇ ಖಚಿತ  ಹುಟ್ಟು-ಸಾವು ವಿಶಾಲ ಅರ್ಥ  ನಾನು ನೀನೆಂಬುದು ಬರೀ ಭೂತ ನೀ ತಿಳಿದು ನಡೆಯೋ ಮನುಜ ಅಹಂಕಾರದಲ್ಲಿ ನಡೆಯುತ್ತಿರುವ ಮನುಷ್ಯರಿಗೆ ಹುಟ್ಟು ಇಲ್ಲೇ ಸಾವು ಇಲ್ಲೇ, ಹುಟ್ಟು-ಸಾವಿನ ಅರ್ಥ ತಿಳಿಯದೆ ನಾನು ನನ್ನದು ಎಂದು ಮೆರೆದಾಡುವ ಮೂಢನಿಗೆ ಏನು ಹೇಳೋದು,  ಮನುಷ್ಯನಾದವನು ಅರಿತು ನಡೆಯಬೇಕು.

ಅದಕ್ಕಾಗಿ ಇಲ್ಲಿ ಕವಿ ನಾನು ನೀನೆಂಬುದು ಬರೀ ಭೂತ, ನೀ ತಿಳಿದು ನಡೆಯುವ ಮನುಷ್ಯ ಎಂದು ಕವಿ ಚಾಟಿಯೇಟು ಬೀಸಿದ್ದಾರೆ. ಕವಿಯಾದವನು ತನ್ನ ತನ್ನ ನೆಲ ಜಲ ನಾಡು ನುಡಿ ಬಗ್ಗೆ ಅಭಿಮಾನ ಹೆಮ್ಮೆಪಡುವಂತೆ ಬರೆದುಕೊಳ್ಳುತ್ತಾನೆ. ಅದೇ ರೀತಿಯಲ್ಲಿ ಇಲ್ಲಿ ಕವಿ ರಾಮು ತಾನು ಹುಟ್ಟಿ ಬೆಳೆದ ನಡೆದಾಡಿದ ನೆಲದ ಬಗ್ಗೆ ತುಂಬಾ ಸ್ವಾಭಿಮಾನದೊಂದಿಗೆ ಹೆಮ್ಮೆಯಿಂದ ಕನ್ನಡ ಮಾತೆಯನ್ನು ನನ್ನ ರಕ್ತದ ಕಣ ಕಣದಲ್ಲೂ ತುಂಬಿದ್ದಾಳೆ ಎಂದು ಬರೆದುಕೊಳ್ಳುತ್ತಾರೆ.

ನೆಲ ಕನ್ನಡ ಜಲ ಕನ್ನಡ  

ಉಸಿರು ಕನ್ನಡ ಹಸಿರು ಕನ್ನಡ     

ಗುರಿ ಕನ್ನಡ ಸಿರಿ ಕನ್ನಡ     

ಶಾಂತಿ ಕನ್ನಡ ಕ್ರಾಂತಿ ಕನ್ನಡ      

ಬಡಿತ ಕನ್ನಡ ತುಡಿತ ಕನ್ನಡ      

ರೋಮ ರೋಮದಿ ಕನ್ನಡ..!

ಪ್ರತಿಯೊಬ್ಬ ಕನ್ನಡಿಗನ ಎದೆಯಲ್ಲಿ, ಪ್ರತಿಯೊಬ್ಬ ಕವಿಯಲ್ಲಿ ಇರಲೇಬೇಕಾದ ಕನ್ನಡಾಭಿಮಾನ ಇವರಲ್ಲೂ ಇದೆ. ಕನ್ನಡ ನಾಡು ನುಡಿ ಬಗ್ಗೆ ತುಡಿತ ಬಡಿತ, ಕನ್ನಡ ರಕ್ಷಣೆಗಾಗಿ ಕ್ರಾಂತಿಯ ಶಾಂತಿ ಹೋರಾಟ ಬೇಕಾಗಿದೆ, ಕನ್ನಡ ಸದಾ ಉಳಿಯಬೇಕಾಗಿದೆ ಬೆಳೆಯಬೇಕಾಗಿದೆ ಎಂದು ಕವಿ ಹೇಳುತ್ತಾನೆ.

ಮತ್ತೊಂದು ಕವಿತೆ ಶ್ರೇಷ್ಠ ಹಕ್ಕು ಈ ಕವಿತೆಯಲ್ಲಿ ಕವಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ ಮತದಾನದ ಮಹತ್ವ ವನ್ನು ಕವಿತೆಯ ಮೂಲಕ ತಿಳಿಸುತ್ತಾರೆ.              

ಓ ಮತದಾನದ ರಾಜ               

ಮತ ಮಾರಿ ಮಾಡಬೇಡ ಮೋಜು               

ಯಾರು ಕಾಯುವರು ನಿನ್ನ ಹಿತ             

ಯೋಚಿಸಿ ದಾನಮಾಡು ನಿನ್ನ ಮತ                

ಪ್ರಜಾ ಸೇವಕನೆ ಪ್ರಜಾ ನಾಯಕ  ಪ್ರಸ್ತುತ ದಿನಮಾನಗಳಲ್ಲಿ ಪರಿಸ್ಥಿತಿಯನ್ನು ಗಮನಿಸಿದಾಗ, ಚುನಾವಣೆಯ ಸಮಯದಲ್ಲಿ ಹಣ ಹೆಂಡ-ಖಂಡಗಳಿಗೆ ಮನಸೋತು ಮತದಾರ ತನ್ನ ಮತವನ್ನು ಮಾರಿಕೊಳ್ಳುತ್ತಾನೆ. ಕವಿ ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಯೋಚಿಸಿ ಬರೆದಿರುವ ಕವಿತೆ ಆಗಿದೆ.

ನೀನು ಮತದಾರ ಅಂದರೆ ಮತ ರಾಜ, ಮೋಜು ಮಸ್ತಿ ಮಾಡುತ್ತಾ ನಿನ್ನ ಮತವನ್ನು ಮಾರಿಕೊಂಡರೆ, ಯಾರು ಕಾಯುವರು ನಿನ್ನ ಹಿತ ಎಂದು ಕವಿ ಚಿಂತಾಕ್ರಾಂತನಾಗಿ ಕವಿತೆಯ ಮೂಲಕ ಪ್ರಶ್ನೆ ಮಾಡುತ್ತಿದ್ದಾನೆ. ರೈತ ಜಗದೊಡೆಯ ಕವಿತೆಯಲ್ಲಿ ಕವಿ ರೈತನ ಕಷ್ಟ ನಷ್ಟಕ್ಕೆ, ಕವಿತೆಯ ಮೂಲಕ ಬರೆದು ಹೇಳುತ್ತಾನೆ. 

ಜಗದ ಹಸಿವು ನೀಗಿಸಲು ತನ್ನ ಹಸಿವು ನುಂಗಿ     

ಜಗದ ಜನರ ಹಸಿವು ಪೊರೆಯಲು ಹೊರಟಿಹನು ಜಗದೊಡೆಯ ರೈತ      

ರೈತ ದೇಶದ ಬೆನ್ನೆಲುಬು ಆತನು ತನ್ನ ಕಷ್ಟ ಮರೆತು ಜಗದ ಚಿಂತನೆಗೆ ತನ್ನ ಹಸಿದ ಹೊಟ್ಟೆಗೆ ಬಟ್ಟೆ ಕಟ್ಟಿ ದೇಶದ ಜನರ ಹಸಿವು ನೀಗಿಸಲು ಹೊರಟಿರುವ ನೇಗಿಲ ಹಿಡಿದು ಅವನೇ ಜಗದ ಒಡೆಯ ರೈತ ಎಂದು ಕವಿ ರೈತನ ಮೇಲೆ ಇರುವ ಅಪಾರ ಪ್ರೀತಿಯನ್ನು ತೋರಿಸುತ್ತಾನೆ.

ಕವಿಯು ಹೆಜ್ಜೆಗುರುತಿನ ಸಾಲು ಕೃತಿಯಲ್ಲಿ ಪ್ರಕೃತಿಯ ಕುರಿತು ಸಹ ಕವಿವಾಣಿಯ ಮೂಲಕ ಜನತೆಯಲ್ಲಿ ಪರಿಸರ ನಿಸರ್ಗ ಸಂರಕ್ಷಣೆಯ ಕುರಿತು ತನ್ನದೇ ಆದ ದಾಟಿಯಲ್ಲಿ ಕವಿತೆಗಳನ್ನು ರಚಿಸಿದ್ದಾರೆ. ನಾನು ಭೂಮಿ ಎನ್ನುವ ಕವಿತೆಯು….   

ಇಂದು ನನ್ನ ದಿನ ಅನ್ನುವರು  ಒಂದು ದಿನ ನೆನೆವರು…     

ನನ್ನೊಳಗೆ ಉಳುವರು ಪ್ಲಾಸ್ಟಿಕ್ಕು, ಮೇಲಾಕುಕುವರು ಕೊಳಕು…

ಬಿಸಿಲಿಗೆ ಬಗ್ಗ ದವಳು  ಮಳೆಗೆ ಮರಗದವಳು…     

ನೆಡಿ ಮರ ಗಿಡ  ನಾ ರಕ್ಷಿಸುವೆ ಬುಡ…

ಭೂಮಿಯನ್ನು ಕುರಿತು ಸಂರಕ್ಷಣೆ ಹೇಗೆ ಮಾಡುವುದು, ಭೂಮಿಯನ್ನು ಸಂರಕ್ಷಣೆ ಮಾಡದಿದ್ದರೆ ಆಗುವ ಪರಿಣಾಮವೇನು ಎಂಬುವುದರ ಬಗ್ಗೆ ಸೂಕ್ಷ್ಮವಾಗಿ ಕವಿ ಗಮನಿಸಿ ಕವಿತೆ ಕಟ್ಟಿರುವುದು, ಕವಿಯ ಮನಸ್ಸು ಪರಿಸರ ಪ್ರಜ್ಞೆತಯತ್ತ ಚಿಂತನೆ ಮಾಡುತ್ತಿದೆ ಎನ್ನುವುದು ಕಂಡುಬರುತ್ತದೆ.

ಮತ್ತೊಂದು ಕಡೆ ಕವಿ ಗುಳೆ ಹೊರಟವರ ಗೋಳು ಎನ್ನುವ ಕವಿತೆಯಲ್ಲಿ ಕಷ್ಟದಲ್ಲಿರುವ ಬಡವರನ್ನು ಕುರಿತು, ಸಂತ ಊರನ್ನು ಬಿಟ್ಟು, ಹಸಿದ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಪರ ಊರಿಗೆ ಹೋಗಿದ್ದಾಗ, ಕೋರೋನಾ  ವೈರಸ್ ಬಂದಾಗ ಗುಳೆ ಹೊರಟವರು ಮರಳಿ ಗೂಡು ಸೇರಲು ಪಟ್ಟಿರುವ ಗೋಳು ಈ ಕವಿತೆಯು ಬಿಂಬಿಸುತ್ತದೆ.     

ಈ ಕೃತಿಯನ್ನು ಓದಿ ಗಮನಿಸಿದಾಗ ಕವಿಯ ತನ್ನ ಸ್ವಂತ ಊರಿನ ಜನತೆಯು ಮುಂಬೈ ನಂತಹ ಮಹಾನಗರಗಳಿಗೆ, ದುಡಿದು ತಿನ್ನಲು ಗುಳೆ ಹೊರಟ ತನ್ನ ಊರಿನ ಜನತೆ ಕೋರೋಣ ವೈರಸ್ ಬಂದ ಕಾರಣ ಮರಳಿ ಗೂಡು ಸೇರಲು, ಸ್ವಂತ ತನ್ನ ಊರಿನ ಸಂಬಂಧಿಕರನ್ನು ಕುರಿತು ಬರೆದ ಕವಿತೆ ಇದಾಗಿದೆ.

ಈ ರೀತಿಯ ಸಮಸ್ಯೆಯಲ್ಲಿ ಸಿಲುಕಿಕೊಂಡ ಊರಿನ ಜನತೆಯ ಬಗ್ಗೆ ಆ ದಿನ ನನ್ನಲ್ಲಿ ಚರ್ಚಿಸಿದ್ದರು… ತನ್ನ ಊರಿನ ಜನತೆ ಯಾವ ರೀತಿ ಕಷ್ಟಪಡುತ್ತಿದ್ದಾರೆ. ಸಾವಿರಾರು ಕಿ ಮೀ ನಷ್ಟು ನಡೆದುಕೊಂಡೇ ಪಾದಯಾತ್ರೆ ಬರುತಿದ್ದಾರೆ. ಕೊರೋನಾ ವೈರಸ್ ನಿಂದ ಆದ ಪರಿಣಾಮ ಏನೆಂಬುದನ್ನು ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಗುಳೆ ಹೋದರು  ತುತ್ತಿನ ಚೀಲ ತುಂಬಿಸಿಕೊಳ್ಳಲು  ಖಾಲಿಮಾಡಿ ಗುಡಿಸಲು ಮನೆ ಹಳ್ಳಿ…

ಹಸಿವು ಹೈರಾಣಾಗಿಸಿದೆ  ಆಹಾರಕ್ಕೆ ಹಾಹಾಕಾರವೆದ್ದಿದೆ 

ಮಾನವೀಯತೆ ಮೌನವಾಗಿದೆ  ಸಾವು ಬೆನ್ನೇರಿ ಕುಳಿತಿದೆ…

ಹೊಕ್ಕಿತಂದು ಮಧ್ಯರಾತ್ರಿ  ಮಹಾಮಾರಿ ಕೊರೊನಾ  ನಡುಗಿಸಿತ್ತು

ದೇಶ ದೇಶವಾ  ಸ್ತಬ್ಧವಾಗಿತ್ತು ಜಗತ್ತನ್ನು…

ಕವಿ ತನ್ನ ಊರಿನವರ ಸಂಕಷ್ಟದಲ್ಲಿ ಸಿಲುಕಿದ್ದಾಗ ಅವರ ಪರಿಸ್ಥಿತಿಯನ್ನು ಅರಿತು ಕವಿ ಕವಿತೆ ಕಟ್ಟಿ ತನ್ನ ನೋವನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದ್ದಾನೆ. ಒಟ್ಟಾರೆಯಾಗಿ ಹೆಜ್ಜೆಗುರುತಿನ ಸಾಲುಗಳು ಪುಸ್ತಕ ಕುರಿತು ಹೇಳಬೇಕಾದರೆ, ಸಮಾಜದಲ್ಲಿ ಘಟಿಸಿದ ಘಟನೆಗಳಿಗೆ ಪ್ರತ್ಯುತ್ತರವಾಗಿ ಕವಿತೆ ಕಟ್ಟಿದ್ದಂತೆ ಕಾಣುತ್ತಿದೆ.

ಅಪ್ಪನ ಬೇಟಿಯ ಕ್ಷಣ, ನಾ ಬೆಳೆದಲ್ಲಿ, ಭರವಸೆಯ ಬೆಸುಗೆ, ತಂದೆ-ತಾಯಿ ಜೀವ ದೈವ, ದುನಿಯಾ ಒಂದೇ ಅಸಲಿ, ನಮ್ಮಲ್ಲಿ ಏನಿದೆ ಏನಿಲ್ಲ, ಗೋಪಾಲ, ಪರಿಸ್ಥಿತಿ, ಕನಸಿನ ಕುವರಿ, ನಿನ್ನೆಗಳ ಮರೆತು, ಈ ಮೊದಲಾದ ಕವಿತೆಗಳು ಉತ್ತಮವಾದ ಆಶಯಗಳೊಂದಿಗೆ ಕೃತಿಯ ಮೌಲ್ಯವನ್ನು ಹೆಚ್ಚಿಸುತ್ತಿವೆ.      

ಕವಿ ವೃಕ್ಷ ಬಳಗದ ವತಿಯಿಂದ ಜಿಲ್ಲೆ ಮತ್ತು ರಾಜ್ಯದ ತುಂಬಾ ಕವಿಗಳಲ್ಲಿ ಸಂಚಲನ ಮೂಡಿಸಿದ್ದಾರೆ, ರಾಮು ಎಂ ರಾಠೋಡ್ ರವರು ಉತ್ತಮ ಕವಿತೆಗಳಿಂದ ಕಾವ್ಯಲೋಕದಲ್ಲಿ ಸಂಚರಿಸಿ, ಭರವಸೆಯ ಕವಿಯಾಗಿ ಬಿಸಿಲೂರಿನ ಹಾದಿಯಲ್ಲಿ ಒಂದೊಂದೇ ಹೆಜ್ಜೆ ಗುರುತಿನ ಸಾಲುಗಳೊಂದಿಗೆ ದಾಪುಗಾಲು ಹಾಕುತ್ತಿದ್ದಾರೆ.

ಅವರಿಂದ ಇನ್ನೂ ಉತ್ತಮವಾದ ಕೃತಿಗಳು ಸಾಹಿತ್ಯ ಲೋಕಕ್ಕೆ ಬಂದು, ಸಾಮಾಜಿಕ ಸಮಸ್ಯೆಗಳನ್ನು ಕುರಿತು ಪ್ರತಿಧ್ವನಿಸುವ ಶಕ್ತಿಯಾಗಿ ಮೂಡಿಬರಲೆಂದು ಸದಾ ಆಶಯದೊಂದಿಗೆ ಹಾರೈಸುವೆ.

‍ಲೇಖಕರು Avadhi

November 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: