ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಮುನಾ ಗಾಂವ್ಕರ್ ಕವಿತೆ – ಇತಿಹಾಸವೆಂದರೆ…

ಯಮುನಾ ಗಾಂವ್ಕರ್

ಇತಿಹಾಸವೆಂದರೆ
ಶಿಲೆಯ ಶಿಲ್ಪದೊಳಗೆದ್ದ ಕಲೆ,
ತಾಳೆ ಪತ್ರಾಗಾರದೊಳು ಮೂಡಿದ ಅಕ್ಷರ,
ರಾಜನೂ ವೈರಿ ರಾಜನೂ ಮಾಡಿ ಮಡಿದ ಕಾಳಗ
ಇಷ್ಟೇ ಅಲ್ಲ!

ಇತಿಹಾಸವೆಂದರೆ…
ದಮನಿತರ ನೋವಿನ ಖಜಾನೆ
ಒಣಗಿದ ಕಣ್ಣೀರ ಉಪ್ಪುಗಲ್ಲು
ಜೈಲು ಕಂಬಿಗಳ ತೊಳೆದ ಕಣ್ಣೀರು
ಇಷ್ಟೇ ಅಲ್ಲ!

ಇತಿಹಾಸ ಎಂದರೆ,
ದಾಳಿಕೋರರ ತುಕ್ಕುಹಿಡಿದ ಶಸ್ತ್ರಾಗಾರ
ಕತ್ತಿಗೆ ಮೆತ್ತಿದ ಕನ್ನೆತ್ತರು
ಕುಡಿಯೊಡೆದ ದ್ವೇಷದ ಜ್ವಾಲೆ
ಇಷ್ಟೇ ಅಲ್ಲ!

ಇತಿಹಾಸವೆಂದರೆ,
ಅಲ್ಲಾ ಏಸು ಈಶ್ವರರ
ಕೋಟೆಯೊಳಗಿಂದ ಹೊರಬಂದು
ಗೋಪುರದಿಂದ ಗುಂಬಜದ ತುದಿಗೆ ಕಟ್ಟಿದ ಸೇತು!
ಇಷ್ಟೇ ಅಲ್ಲ!

ಇತಿಹಾಸವೆಂದರೆ,
ಒಲ್ಲದ ಮನದ ನಗುಮೊಗದ ಲೇಪವಲ್ಲ
ಆಹ್ಲಾದಮಯ ಬೆಳಗಿನ ಹೊಂಗಿರಣವೂ ಅಲ್ಲ
ಅಲೆದಲೆದು ಅಗಲಿದವರ
ಮತ್ತೆ ಕೂಡಿದ ನೈಜಕಥಾನಕ
ಇಷ್ಟೇ ಅಲ್ಲ!

ಇತಿಹಾಸವೆಂದರೆ,
ಗದ್ದೆ ಕಣಜದಲಿ ತುಂಬಿಕ್ಕಿದ ಹಸಿವು
ಬೆವರ ಬರಿಗಾಲು ಮೂಡಿಸಿದ ಒಡಕು ಹೆಜ್ಜೆ
ಇಷ್ಟೆಲ್ಲದರೊಳಗೂ ಬೆಸೆದ ಜೀವಜೀವದ ಸಂಕಥನ!

‍ಲೇಖಕರು Admin

21 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading