ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಜ್ಞ ಕುದುರೆಯ ಓಟ…

ಪಿ ಆರ್ ವೆಂಕಟೇಶ್

ಕರುಳ ತುಂಬೆಲ್ಲ ಕೆಂಡಕಾರಿ
ಕನಿಕರವ ಕೊಂದವರ
ಯಜ್ಞ ಕುದುರೆಯ ಓಟ.
ದೇಶದೊರೆ ಕೈಯಲ್ಲಿ ಲಗಾಮಿನಾಟ.

ಓಡುತಿದೆ ಕುದುರೆ
ಬಿನ್ನಾಣ ಬಿತ್ತರಿಸಿ
ಬಿರಿಸುಬಿಸಿ ಎತ್ತರಿಸಿ
ಗಾಳಿಯನೆ ಕತ್ತರಿಸಿ
ಧರೆಯ ಮೈ ಅದರಿಸಿ
ಬಯಲ ತುಂಬೆಲ್ಲ ಧೂಳ ಹೂಂಕರಿಸಿ.
ಹಸಿದ ಹೊಟ್ಟೆಯ ತಟ್ಟೆ
ಬೆಳಗಿದೆ ಬೆವರೆಣ್ಣೆಯ ದೀಪ
ಹುಡಿಜೀವ ಹರಡಿದೆ ಇದಕೆ ಲೋಬಾನ.

ಗಾಯಗೊಂಡಿದೆ ಬಯಲು
ಹಿಡಿದು ಕಟ್ಟುವರಾರು
ಕಟ್ಟಿ ಮೆಟ್ಟುವರಾರು
ಸೋತ ಕೈಗಳ ತುಂಬ ಹತಾಶೆಯ ಹುಣ್ಣು.

ಧರ್ಮ ಮತ್ತನು ಕುಡಿದ
ಯಜ್ಞ ಕುದುರೆಯ ಕುಣಿತ
ರಾವಣನು ಸೋತ
ಶ್ರಾವಣನು ಸತ್ತ.
ಕಾಲಿಗೆಲ್ಲಿದೆ ಕಣ್ಣು ತುಳಿವುದೊಂದೆ ತಿಣ್ಣು
ಜೀವ ಜೀವವು ಮಣ್ಣು.
ಕಟ್ಟಿದವತಾರವು ಕೆಟ್ಟು ಕೆರ ಹಿಡಿದವು
ಭ್ರಾಂತಿಯೊಳಗಿನ ಕ್ಷಣಿಕ ಮಂತ್ರಕ್ಕಾಗಿ ಒಣ ಕ್ರಾಂತಿಗಾಗಿ.

ಧೋ…ಎಂದಿತು ಮಳೆ
ಯಾತನೆಯ ಯಜ್ಞ ಹೊಗೆ
ಅಲೆಯೊಳಗೆ ಹರಿದದ್ದು ರಕ್ತಹೊಳೆ.

ಯಾವ ತಡೆಗೂ ಸಿಗದ ಕುದುರೆ ಓಟ
ಯಾರ ಅರಿವಿಗೂ ಸಿಗದು ಇದರ ಮಾಟ
ಸೊನ್ನೆ ಬೆಲೆಯೊಳಗೂ ಸಾವಿನ ಚೆಲ್ಲಾಟ
ಶೂನ್ಯ ಸೆಳೆತದ ಒಳಗೆ ಎಲ್ಲ ಮಾನ್ಯ.

ಏರಿದ್ದಾನಯ್ಯ ದೊರೆ
ಕಾರ್ಪೊರೇಟ್ ಕುದುರೆ
ಮಸಣದಟ್ಟಿಯ ಒಳಗೂ ಕುದರೆ ಕುಣಿತ
ವಿರಸ ವಿಷ ಬೆರೆತ
ಮತ್ಸರದ ಮೊರೆತ
ಕಲ್ಕಿಯ ಕೈಯಲ್ಲಿ ಲಾಭನಷ್ಟದ ಕಡತ
ಮನುಷ್ಯತ್ವಕ್ಕೂ ಇಲ್ಲಿ ಗಣಿತ ಸೂತ್ರ.

‍ಲೇಖಕರು Admin

6 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading