ಮ ಶ್ರೀ ಮುರಳಿ ಕೃಷ್ಣ ನೋಡಿದ ಸಿನಿಮಾ ʼ2 ಆರ್‌ 3 ಥಿಂಗ್ಸ್‌ ಐ ನೊ ಅಬೌಟ್‌ ಹರ್‌ʼ

ಮ ಶ್ರೀ ಮುರಳಿ ಕೃಷ್ಣ

ಜಾನ್‌ ಲುಕ್‌ ಗೊದಾರ್ದ್ (Jean Luc Godard) ಫ್ರೆಂಚ್‌ ಸಿನಿಮಾರಂಗದಲ್ಲಿ ಸಂಚಲನವನ್ನು ಉಂಟುಮಾಡಿದ ಪ್ರತಿಭಾನ್ವಿತ ಸಿನಿಮಾ ನಿರ್ದೇಶಕ.  ವಿಶ್ವಸಿನಿಮಾ ವಲಯದಲ್ಲೂ ಆತ ತಮ್ಮದೇ ಆದ ಛಾಪನ್ನು ಮೂಡಿಸಿದರು. ಫ್ರೆಂಚ್‌ ಭಾಷೆಯಲ್ಲಿ ಗೊದಾರ್ದ್‌ ನಾಮಪದವನ್ನು ʼಗೊದಾʼ ಎಂದು ಉಚ್ಚರಿಸುತ್ತಾರೆ.  ಅಸಿಸ್ಟಡ್‌ ಸೂಯಿಸೈಡ್‌ ಮೂಲಕ  ತೊಂಬತ್ತೊಂದು ವರ್ಷದ ಇವರು ಸ್ವಿಟ್ಸರ್‌ಲ್ಯಾಂಡಿನಲ್ಲಿ  ಸೆಪ್ಟೆಂಬರ್‌ 13, 2022ರಂದು ಅಸುನೀಗಿದರು. 

ಒಂದರ್ಥದಲ್ಲಿ ಸಿನಿಮಾ ಎನ್ನುವುದು ಸಿದ್ಧಪಡಿಸಿದ ಅಡಿಗೆಗೆ ಹೋಲಿಸಬಹುದೇನೋ.  ಸಿನಿಮಾ ನಿರ್ಮಾಪಕರು ಅಡುಗೆಯನ್ನು ತಯಾರಿಸುತ್ತಾರೆ. ವೀಕ್ಷಕರು ಅದನ್ನು ಭುಜಿಸುತ್ತಾರೆ. ಸಿದ್ಧಸೂತ್ರದ ಸಿನಿಮಾ ಅಡುಗೆಯನ್ನು ಉಣ್ಣುವ ವೀಕ್ಷಕರಿಗೆ ತೀರ ಭಿನ್ನ ತೆರನಾದ ಅಡುಗೆ ರುಚಿಸದೆ ಹೋಗಬಹುದು ಅಥವಾ ಸ್ವಲ್ಪ ರುಚಿಸಬಹುದು.  ಏಕೆ ಈ ಬಗೆಯ ಅಡುಗೆ ಮಾಡುತ್ತಾರೆ ಎಂಬ ಪ್ರಶ್ನೆ ಕೂಡ ಅವರ ಮನಸ್ಸಿನಲ್ಲಿ ಸುಳಿಯಬಹುದು. ಭಿನ್ನ ಅಡಿಗೆಯ ರೀತಿಯದ್ದು ಗೊದಾರ್ದರ ಸಿನಿಮಾ. 

ಗೊದಾರ್ದರ ʼ2 ಆರ್‌ 3 ಥಿಂಗ್ಸ್‌ ಐ ನೊ ಅಬೌಟ್‌ ಹರ್‌ʼ ಸಿನಿಮಾ 1967ರಲ್ಲಿ ತೆರೆಕಂಡಿತು. ಈ ಸಿನಿಮಾದ ಅವಧಿ 90 ನಿಮಿಷಗಳು.  1966ರಲ್ಲಿ ಫ್ರೆಂಚ್‌ ಪತ್ರಿಕೆಯೊಂದರಲ್ಲಿ ʼದಿ ಶೂಟಿಂಗ್‌ ಸ್ಟಾರ್ಸ್‌ʼ ಎಂಬ ಲೇಖನ ಪ್ರಕಟವಾಯಿತು. ಇದರಲ್ಲಿ ಪ್ಯಾರಿಸ್‌ನ ಹೊರವಲಯದಲ್ಲಿ ಹೊಸದಾಗಿ ಕಟ್ಟಿದ ವಸತಿ ಸಂಕೀರ್ಣಗಳಲ್ಲಿ ವಾಸಮಾಡುವ ಮಹಿಳೆಯರು ಮಧ್ಯಮ ವರ್ಗದ ಬಾಳನ್ನು ನಡೆಸುವುದಕ್ಕಾಗಿ ಅರೆಕಾಲಿಕ ವೇಶ್ಯೆಯರಾಗಿ ಕೆಲಸ ಮಾಡುತ್ತಿರುವ ವಿಷಯದ ಪ್ರಸ್ತಾಪವಿತ್ತು.  ಈ ಸಂಗತಿ ವಿವಾದಗಳಿಗೆ ಒಳಗಾಯಿತು.  ಇದನ್ನು ಗೊದಾರ್ದ್‌ ಪತ್ರಿಕೆಯಲ್ಲಿ ಓದಿದ್ದರು. ನಂತರ ಇದೇ ʼ2 ಆರ್‌ 3 ಥಿಂಗ್ಸ್‌ ಐ ನೊ ಅಬೌಟ್‌ ಹರ್‌ʼ ಸಿನಿಮಾದ ಸ್ಥೂಲ ಕಥಾ ಎಳೆಗೆ ಕಾರಣವಾಯಿತು.

ಈ ಸಿನಿಮಾವನ್ನು ಒಂದು ʼಸಿನಿಮಾ ಪ್ರಬಂಧʼಎಂದು ವರ್ಗೀಕರಿಸಬಹುದು. ಏಕೆಂದರೆ ಇದರಲ್ಲಿ ವಿಭಾಗಗಳಿವೆ. ಅವುಗಳಿಗೆ ಶೀರ್ಷಿಕೆಗಳಿವೆ. ಸ್ವತಃ ಗೊದಾರ್ದರೇ ಪಿಸುಗುಟ್ಟುವ ರೀತಿಯಲ್ಲಿ ಕ್ಷೀಣವಾಗಿ ಕೇಳಿಸುವ ವಾಯ್ಸ್‌ಓವರ್ ನೀಡಿದ್ದಾರೆ. ಅದರಲ್ಲಿ ʼಅವಳʼ ಬಗೆಗೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಈ ʼಅವಳು ʼ ಸಿನಿಮಾದ ಪ್ರಧಾನ ಮಹಿಳಾ ಪಾತ್ರ ಜುಲಿಯಟ್‌( ಆಕೆ ಅರೆಕಾಲಿಕ ವೇಶ್ಯೆಯೂ ಆಗಿರುತ್ತಾಳೆ) ಅಥವಾ ಆ ಪಾತ್ರವನ್ನು ಮಾಡಿರುವ ಮರಿನಾ ವ್ಲಾಡಿ ಇರಬಹುದು, ಪ್ಯಾರಿಸ್‌ ನಗರ ಅಥವಾ ವೇಶ್ಯಾವಾಟಿಕೆ ಇರಬಹುದು. ಮುಖ್ಯ ಸ್ತ್ರಿ ಪಾತ್ರವನ್ನು ಭಿನ್ನ ಬಗೆಯಲ್ಲಿ ಪರಿಚಯ ಮಾಡಲಾಗಿದೆ. ಆಕೆಯನ್ನು ಫ್ರೇಮಿನ ಮಧ್ಯಭಾಗದಲ್ಲಿ ತೋರಿಸಲಾಗುತ್ತದೆ. ವಾಯ್ಸ್‌ಓವರ್‌ನಲ್ಲಿ ಗೊದಾರ್ದ್‌ ಆಕೆ ಮರಿನಾ ವ್ಲಾಡಿ (ಈಕೆ ಈ ಸಿನಿಮಾದ ಜುಲಿಯಟ್‌ ಪಾತ್ರವನ್ನು ನಿರ್ವಹಿಸಿದ್ದಾಳೆ), ಒಬ್ಬ ನಟಿ ಎಂದು, ನಂತರ ಆಕೆ ಜುಲಿಯಟ್ ಎಂದೂ ಪರಿಚಯಿಸುತ್ತಾರೆ! ಆಕೆಯ ಕೂದಲಿನ ಬಣ್ಣವನ್ನು ತಿಳಿಸುತ್ತಾರೆ. ಆದರೆ ನಿಖರವಾಗಿ ತಿಳಿದಿಲ್ಲ ಎಂತಲೂ ಹೇಳುತ್ತಾರೆ! ಸಿನಿಮಾ ಪ್ರಧಾನವಾಗಿ ಒಂದು ದೃಶ್ಯ ಮಾಧ್ಯಮ ಎಂದು ಬಣ್ಣಿಸಲಾಗುತ್ತದೆ. ಆದರೆ ಈ ತೆರನಾದ ಪರಿಚಯದಿಂದ ಈ ಬಣ್ಣನೆಗೆ ಕೊಕ್‌ ಕೊಡಲಾಗಿದೆ. ಇದು ಕೂಡ ಗೊದಾರ್ದ್ ಸಿನಿಮಾ ವ್ಯಾಕರಣವನ್ನು ಮುರಿಯುವ ಒಂದು ಪರಿ!‌ ಅಲ್ಲದೆ, ಈ ಸಿನಿಮಾದಲ್ಲಿ ಎಪಿಸೋಡಿಕಲ್‌ ನರೇಟಿವ್‌ ಸ್ಟೈಲನ್ನು ಬಳಸಲಾಗಿದೆ.  

ಗೊದಾರ್ದ್‌ ರಾಜಕೀಯವಾಗಿ ಎಡಪಂಥದ ಪರವಾಗಿದ್ದರು. ಬಂಡವಾಳಶಾಹಿ ವ್ಯವಸ್ಥೆ, ಉಪಭೋಗ ಸಂಸ್ಕೃತಿ(ಕನ್ಸ್ಯುಮರಿಸಂ) ಇತ್ಯಾದಿಗಳ ಠೀಕಾಕಾರರಾಗಿದ್ದರು. ಅವರ ಸಿನಿಮಾಗಳಲ್ಲಿ ಈ ನಿಲುವುಗಳು ಫಾರ್ಮ್‌ ಮತ್ತು ಕಂಟೆಂಟ್‌ ಮೂಲಕ ಅನಾವರಣಗೊಳ್ಳುತ್ತಿದ್ದವು. ಡೈಲೆಕ್ಟಿಕ್ಸ್‌ ಮೂಲಕ ಕೂಡ ಅವುಗಳನ್ನು ರವಾನಿಸುತ್ತಿದ್ದರು.  ಈ ಸಿನಿಮಾದಲ್ಲೂ ಅವು ಇವೆ.  ಜುಲಿಯಟ್‌ ಮತ್ತು ಇತರ ಪ್ಯಾರಿಸಿಗರ ದೈನಂದಿನ ಜೀವನವನ್ನು ತೋರಿಸುವುದರ ಮಧ್ಯೆ ದೊಡ್ಡ ಕಟ್ಟಡಗಳ ನಿರ್ಮಾಣ, ನಗರದ ಜೀವನ, ಜಾಹೀರಾತುಗಳ ಫಲಕಗಳು, ರಸ್ತೆಗಳು ಇತ್ಯಾದಿಗಳ ಇನ್ಸರ್ಷನ್‌ ಶಾಟ್ಗಳಿವೆ. ಈಗಾಗಲೇ ತಿಳಿಸಿರುವಂತೆ ಜುಲಿಯಟ್‌ ಒಂದು ಎತ್ತರದ ವಸತಿ ಸಂಕೀರ್ಣದಲ್ಲಿ ವಾಸ ಮಾಡುತ್ತಿರುತ್ತಾಳೆ.  ಗೊದಾರ್ದ್‌ ಬಹುಮಹಡಿಯ ದೊಡ್ಡ ಕಟ್ಟಡಗಳನ್ನು  ಉಪಭೋಗ ಸಂಸ್ಕೃತಿ ಪುಷ್ಟೀಕರಿಸುವ ಒಂದು ಮೌಲ್ಯ(ಅಪ) ಎಂದು ಬಗೆಯುತ್ತಾರೆ; ವೇಶ್ಯಾವಾಟಿಕೆಗೂ ಹೋಲಿಸುತ್ತಾರೆ. ಅಂದರೆ ಇಂತಹ ಕಟ್ಟಡಗಳಲ್ಲಿ ವಾಸಿಸಲು ಮಂದಿ ತಮಗೆ ಇಷ್ಟವಿರದ ಕೆಲಸವನ್ನು ಮಾಡುತ್ತಲೇ ಹೋಗಬೇಕಾಗುತ್ತದೆ.  1966ರಲ್ಲಿ ಜರುಗಿದ ಒಂದು ಟಿವಿ ಸಂದರ್ಶನದಲ್ಲಿ ಅವರು ಇಂತಹ ಜೀವನವನ್ನು ʼಮನಸ್ಸಿನ ವೇಶ್ಯಾವಾಟಿಕೆʼ ಎಂದು ಕರೆದರು! ವಾಯ್ಸ್‌ಓವರ್‌ನಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಠೀಕಿಸುವಾಗ ಪಾಪ್-ಅಪ್‌ ಕಲೆ ಮತ್ತು ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳನ್ನು(ಫ್ರೆಂಚ್‌ ರಾಷ್ಟ್ರಧ್ವಜದ ಬಣ್ಣಗಳು) ಗಮನೀಯವಾಗಿ ತೋರಿಸಲಾಗಿದೆ! 

ಅಲ್ಲದೆ ಒಂದು ದೃಶ್ಯದಲ್ಲಿ ನ್ಯೂಸ್‌ ಫುಟೇಜ್‌ನ ಬಿಂಬಗಳು, ಲೈಫ್‌ ಪತ್ರಿಕೆಯ ವಿಯಟ್ನಾಂ ಯುದ್ಧದ ಭೀಕರ ಚಿತ್ರಗಳು, ಮಕ್ಕಳ ಮೇಲಿನ ಅವುಗಳ ಪರಿಣಾಮಗಳು, ಹತ್ತಿರದಲ್ಲಿ ತೋರಿಸುವ ಒಂದು ಮರಣ ಕಾರ್ಯಾಚರಣೆ(ಎಕ್ಸಿಕ್ಯೂಷನ್)‌ ಮತ್ತು ಉತ್ತರ ವಿಯಟ್ನಾಂ ಅಡವಿಗಳಲ್ಲಿ ಜರುಗಿದ ನಪಾಂ ( Napalm) ಬಾಂಬಿಂಗ್‌ಗಳು ಇತ್ಯಾದಿಗಳನ್ನು ಇನ್ಸರ್ಷನ್‌ ಶಾಟ್ಗಳ  ಮೂಲಕ ಬಿಂಬಿಸಲಾಗಿದೆ. ಒಂದೆಡೆ, ನಿರ್ದೇಶಕರು “ನೀವು ಎಲ್‌ಎಸ್ ಡಿಯನ್ನು ಖರೀದಿಸುವುದಕ್ಕೆ ಸಾಧ್ಯವಾಗದಿದ್ದರೇ, ಒಂದು ಕಲರ್‌ ಟಿವಿಯನ್ನು ಕೊಳ್ಳಿ….” ಎಂದು ಉಸುರುತ್ತಾರೆ. 

ಸರ್ಕಾರ ಎಲ್‌ಎಸ್ ಡಿಯಂತಹ ಡ್ರಗ್‌ ಬಗೆಗೆ ಆತಂಕಪಡುತ್ತದೆ.  ಆದರೆ ಅದರ ಪ್ರಧಾನ ಪ್ರಚಾರ ಸಾಧನ ಕೂಡ ಆ ಡ್ರಗ್‌ನಂತೆ ಪರಿಣಾಮಗಳನ್ನು ಬೀರುವುದನ್ನು ಲೆಕ್ಕಿಸುವುದಿಲ್ಲ ಎಂದು ಸೂಚ್ಯವಾಗಿ ಅವರು ತಿಳಿಸುತ್ತಾರೆ. ಒಂದು ದೃಶ್ಯದಲ್ಲಿ ಜುಲಿಯಟ್‌ನ ಗಂಡ ರಾಬರ್ಟ್‌ ಅಮೆರಿಕದ ಶೂಗಳ ಒಂದು ಜಾಹೀರಾತನ್ನು ಕಂಡು ಠೀಕಿಸುತ್ತಾನೆ.  ಇದನ್ನು ಆಲಿಸಿದ ಜುಲಿಯಟ್‌ “ಅವುಗಳಲ್ಲಿ ಅವರು ವಿಯಟ್ನಾಮಿಗಳ ಕಾಲ್ಬೆರಳುಗಳನ್ನು ತುಳಿಯುತ್ತಾರೆ“ ಎಂದು ಪ್ರತಿಕ್ರಯಿಸುತ್ತಾಳೆ. ರಾಬರ್ಟ್‌ “ದಕ್ಷಿಣ ಅಮೆರಿಕದ್ದು ಕೂಡ“ ಎಂದು ಸೇರಿಸುತ್ತಾನೆ! 

ಕೆಫೆಯೊಂದರಲ್ಲಿ ಒಬ್ಬ ವ್ಯಕ್ತಿ ಮುಂದಿರುವ ಕಪ್‌ ನಲ್ಲಿ ಎಸ್ಪ್ರೆಸ್ಸೊ ಕಾಫಿ ಇರುತ್ತದೆ. ಅದನ್ನು ಝೂಮ್ಇನ್‌ ಮಾಡಿ ತೋರಿಸುತ್ತ ವಾಯ್ಸ್‌ಓವರ್ ನಲ್ಲಿ ಗೊದಾರ್ದ್‌ ಅಸ್ತಿತ್ವ, ಸಾಮಾಜಿಕ ಸಂಬಂಧಗಳು, ಬಂಡವಾಳಶಾಹಿ ವ್ಯವಸ್ಥೆ, ದುಡಿಯುವ ವರ್ಗದ ಸ್ಥಿತಿಗತಿ, ಕ್ರಾಂತಿಗಳು, ವಸ್ತುನಿಷ್ಠತೆ, ವ್ಯಕ್ತಿನಿಷ್ಠತೆ, ಬ್ರಹ್ಮಾಂಡ ಮುಂತಾದ ಗಹನ ವಿಷಯಗಳನ್ನು ಹರಿಬಿಡುತ್ತಾರೆ. ಸುಮಾರು ಮೂರುವರೆ ನಿಮಿಷಗಳ ಈ ಶಾಟ್‌ ಮನೋಜ್ಞವಾಗಿದೆ. ಇನ್ನೊಂದು ಶಾಟ್‌ನಲ್ಲಿ ಸಿಗರೇಟಿನ ತುದಿಯ ಬೆಂಕಿಯನ್ನು ಝೂಮ್‌ಇನ್‌ ಮಾಡಿ ಬಿಂಬಿಸಲಾಗಿದೆ. ಈ ವಿಶ್ಯುವಲ್‌ ಮೆಟಾಫರ್‌ ಕೂಡ ಯೋಚಿಸುವಂತೆ ಮಾಡುತ್ತದೆ. 

ಜುಲಿಯಟ್‌ ಮತ್ತು ಆಕೆಯ ಸಂಸಾರದ ಒಂದು ದಿನದ ಬಾಳಿನ ಘಟನೆಗಳನ್ನು ನಿರುದ್ವಿಘ್ನವಾಗಿ ನಿರೂಪಿಸಿರುವ ಈ ಸಿನಿಮಾದಲ್ಲಿ ಯಾವುದೇ ಫ್ರಿಲ್ಸ್ ಗಳಿಲ್ಲ. ಭಾವಗಳನ್ನು ತೀವ್ರವಾಗಿ ಉದ್ದೀಪಿಸುವಂತಹ ವೃತ್ತಾಂತಗಳಿಲ್ಲ. ಇದು ಬ್ಲಾಂಡ್‌( Bland) ಆಗಿದೆ ಎಂದೆನಿಸಬಹು. ಗೊದಾರ್ದರ ಸಿನಿಮಾಗಳನ್ನು ಸುಲಭವಾಗಿ ಗ್ರಹಿಸಲಾಗುವುದಿಲ್ಲ. ಅವು ಸಂಯಮವನ್ನು ಬೇಡುತ್ತವೆ. ಏಕಂದರೆ ಈಗಾಗಲೇ ಸ್ಥಿರೀಕರಿಸಲ್ಪಟ್ಟ ವೀಕ್ಷಕರ ಬಿಂಬ-ಅರ್ಥೈಸುವಿಕೆಯ ಮೇಲೆ ಪ್ರಹಾರವನ್ನು ಮಾಡುತ್ತಾರೆ ಗೊದಾರ್ದ್.‌ ʼ2 ಆರ್‌ 3 ಥಿಂಗ್ಸ್‌ ಐ ನೊ ಅಬೌಟ್‌ ಹರ್‌ʼ ಸಿನಿಮಾ ಕೂಡ ಇದಕ್ಕೆ ಹೊರತಾಗಿಲ್ಲ. 

‍ಲೇಖಕರು Admin

September 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: