ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ ಪ್ರವೇಶಿಕೆ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇಂದಿನಿಂದ ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

ಹಾಜಿ ಮುರಾದ್

ಹಾಜಿ ಮುರಾದ್ ಲಿಯೊ ಟಾಲ್ಸ್ಟಾಯ್ 1896 – 1904ರ ಅವಧಿಯಲ್ಲಿ ಬರೆದ ಕಿರು ಕಾದಂಬರಿ. ಪ್ರಕಟವಾದದ್ದು ಮಾತ್ರ ಅವನು ತೀರಿಕೊಂಡಮೇಲೆ, 1912ರಲ್ಲಿ. ಸೆನ್ಸಾರ್ ಆಗದ ಪೂರ್ಣ ಪ್ರಮಾಣದ ಕೃತಿ ಪ್ರಕಟವಾದದ್ದು 1917ರಲ್ಲಿ.

ಹಾಜಿ ಮುರಾದ್ 1818-52ರವರೆಗೆ ಬದುಕಿದ್ದ ಅವರ್ ಬುಡಕಟ್ಟಿನ ನಾಯಕ. ದಾಗೆಸ್ತಾನ್ ಮತ್ತು ಚೆಚನ್ಯಾದ ಜನ ತಮ್ಮ ಪ್ರಾಂತವನ್ನು ಕಬಳಿಸಲು ಪ್ರಯತ್ನಪಡುತ್ತಿದ್ದ ರಶ್ಯ ಸಾಮ್ರಾಜ್ಯದ ವಿರುದ್ಧ ಹೋರಾಟ ನಡೆಸುತ್ತಿದ್ದರು. ಅಂಥ ಒಂದು ದಂಗೆಕೋರರ ಗುಂಪಿನ ನಾಯಕ ಹಾಜಿ ಮುರಾದ್. ತನಗೆ ಅನ್ಯಾಯ ಮಾಡಿದ ಶಮೀಲ್‍ನ ವಿರುದ್ಧ ಸೇಡು ತೀರಿಸಿಕೊಳ್ಳಲು, ಅವನ ವಶದಲ್ಲಿರುವ ತನ್ನವರನ್ನು ಬಿಡಿಸಿಕೊಳ್ಳಲು ಹಾಜಿ ಮುರಾದ್ ರಶ್ಯನ್ ಸಾಮ್ರಾಜ್ಯದ ಸ್ನೇಹ ಬಯಸುತ್ತಾನೆ. ಚೆಚನ್ಯಾದ ಜನ ಶಮೀಲ್‍ನ ಆಜ್ಞೆಯಂತೆ ಹಾಜಿ ಮುರಾದ್‍ನನ್ನು ಸೆರೆಹಿಡಿಯಲು ಪ್ರಯತ್ನಪಡುತ್ತಿರುತ್ತಾರೆ. ತನ್ನವರಿಲ್ಲದೆ, ಬುಡಕಟ್ಟಿನ ನಾಯಕನ ವಿಶ್ವಾಸವಿರದೆ, ಇಷ್ಟು ದಿನ ಯಾವ ಶತ್ರುವಿನ ವಿರುದ್ಧ ಹೋರಾಡಿದನೋ ಆ ಶತ್ರುವಿನ ಮೋಸಕ್ಕೆ ಮತ್ತೆ ಗುರಿಯಾಗಿ, ಪ್ರಾಣ ಬಿಡುವ ದುರಂತ ನಾಯಕನಾಗುತ್ತಾನೆ ಹಾಜಿ ಮುರಾದ್.

ಟಾಲ್ಸ್ಟಾಯ್‍ನ ಕೊನೆಗಾಲದ ಈ ಕೃತಿ ಕ್ರಿಶ್ಚಿಯನ್-ಮುಸ್ಲಿಂ ಸಂಘರ್ಷ, ಸಾಮ್ರಾಜ್ಯದ ವಿರುದ್ಧ ಬುಡಕಟ್ಟುಗಳ ಹೋರಾಟ, ಆಧುನಿಕ ನಾಗರಿಕತೆ ಮತ್ತು ಪ್ರಕೃತಿ ಸಹಜ ಬದುಕು, ಬುಡಕಟ್ಟಿನ ಒಳಜಗಳ ಮತ್ತು ಯೂರೋಪು-ಏಶಿಯಗಳ ಭಿನ್ನ ಸ್ವಭಾವ, ಮನುಷ್ಯ ಮನಸಿನಲ್ಲಿ ನಡೆಯುವ ದ್ವೇಷ, ಅಸೂಯೆ, ಪ್ರೀತಿಗಳ ಹೋರಾಟ ಇಂಥ ಗಹನ ವಿಚಾರಗಳನ್ನು ಸರಳವಾಗಿ, ನೇರವಾಗಿ ಹೇಳುತ್ತದೆ. ರಶಿಯನ್ ಸಮ್ರಾಜ್ಯ ಮತ್ತು ಚಕ್ರವರ್ತಿಯ ಟೀಕೆ ನೇರವಾಗಿ ಇರುವುದರಿಂದ ಸೆನ್ಸಾರ್ ಆಗಿದ್ದ ಕೃತಿ ಇದು. ನಾವು ಬದುಕಿರುವ ವರ್ತಮಾನದಲ್ಲೂ ಇಂಥ ಘಟನೆಗಳು ನಡೆಯುತ್ತಲೇ ಇವೆ ಅನ್ನುವುದು ಸೂಕ್ಷ್ಮ ಓದುಗರಿಗೆ ಅರಿವಾಗುತ್ತದೆ. 

ಟಾಲ್ಸ್ಟಾಯ್ ಓದುಗರ ಕಣ್ಣಿಗೆ ಕಟ್ಟುವ ಹಾಗೆ ಲೋಕವನ್ನು ಚಿತ್ರಿಸುವ ಮಹಾನ್ ಕಲಾವಿದ. ಈ ಕೃತಿಯಲ್ಲೂ ಎಲ್ಲಾ ಇಂದ್ರಿಯಗಳ ಅನುಭವ ಭಾಷೆಯ ಮೂಲಕ ಓದುಗರಿಗೆ ತಲುಪುವ ಅಚ್ಚರಿ ಇದೆ. ಟಾಲ್ಸ್ಟಾಯ್‍ ಬರೆದ ಈ ನೀಳ್ಗತೆ ಕನ್ನಡದ ಬಹುತೇಕ ಓದುಗರಿಗೆ ಅಪರಿಚಿತವಾಗಿಯೇ ಉಳಿದಿದೆ. ರಶಿಯದ ರಾಷ್ಟ್ರೀಯ ಸಾಹಿತಿ ಎಂದೇ ಪ್ರಸಿದ್ಧನಾದ ಲೇಖಕ ರಶಿಯದ ‘ಶತ್ರು’ವನ್ನು ನಾಯಕನನ್ನಾಗಿ ಮಾಡಿಕೊಂಡು, ರಶಿಯದ ಚಕ್ರವರ್ತಿಯ ದೋಷ, ದ್ರೋಹ, ಅಹಂಕಾರ, ಪೊಳ್ಳುತನಗಳನ್ನು ನೇರವಾಗಿ ಚಿತ್ರಿಸುವ ಧೈರ್ಯ ಮಾಡಿದ್ದು ಅಪರೂಪದ ಸಂಗತಿ. ತಾರ್ತರ್ ಭಾಷೆಯ ಬಳಕೆ ಈ ಕೃತಿಯ ವಿಶೇಷ. ತಾರ್ತರ್ ಪದಗಳು ಕಥೆಯ ವಾತಾವರಣ ಸೃಷ್ಟಿಗೆ ಸಹಾಯ ಮಾಡುತ್ತವೆ. ಅನುವಾದದಲ್ಲೂ ಅವನ್ನು ಹಾಗೇ ಉಳಿಸಿಕೊಂಡು, ಓರೆ ಅಕ್ಷರಗಳಲ್ಲಿ ಅವನ್ನು ಸೂಚಿಸಿ, ಪಕ್ಕದಲ್ಲೇ ಕನ್ನಡ ಸಮಾನಾರ್ಥಕ ಬಳಸಿದ್ದೇನೆ.   

ಟಾಲ್ಸ್ಟಾಯ್‍ನ ಮಿಕ್ಕ ಕೃತಿಗಳಿಗಿಂತ ಬೇರೆ ಅನ್ನಿಸುವ, ಆದರೂ ಮನುಷ್ಯನ ಮನಸನ್ನು ಮಿಕ್ಕ ಕೃತಿಗಳಷ್ಟೇ ಸೂಕ್ಷ್ಮವಾಗಿ ಚಿತ್ರಿಸುವ, ವೇಗವಾಗಿ ಘಟನೆಗಳು ನಡೆಯುವ ಈ ಕಿರುಕಾದಂಬರಿಯನ್ನು ಹೋಲಿಸಬಹುದಾದರೆ ಅವನದೇ ನಾಟಕ ಪವರ್ ಆಫ್ ಡಾರ್ಕ್‍ನೆಸ್ ಜೊತೆಗೆ ಹೋಲಿಸಬಹುದು. 

ರಿಕಾರ್ಡೊ ಫ್ರೆಡಾ ನಿರ್ದೇಶಿಸಿ, 1961ರಲ್ಲಿ ಬಿಡುಗಡೆಯಾದ, ಒಂದು ಗಂಟೆ ಇಪ್ಪತ್ತೈದು ನಿಮಿಷ ಅವಧಿಯ ಹಾಜಿ ಮುರಾದ್ ಚಲನಚಿತ್ರವನ್ನು ಯೂಟ್ಯೂಬ್‍ನಲ್ಲಿ ನೋಡಬಹುದು: https://www.youtube.com/results?search_query=hadji+murad

1. ಪ್ರವೇಶ

ಊರಿಗೆ ವಾಪಸಾಗುವಾಗ ಹೊಲಗಳ ದಾರಿ ಹಿಡಿದಿದ್ದೆ. ನಡು ಬೇಸಗೆಯ ಕಾಲ. ಕರಡು ಹುಲ್ಲಿನ ಕುಯ್ಲು ಮುಗಿದಿತ್ತು, ರೈ ಬೆಳೆ ಕಟಾವಿಗೆ ಬಂದಿತ್ತು. ಬಗೆಬಗೆಯ ಹೂವು ಅರಳುವ ಕಾಲ ಇದು-ಕೆಂಪು, ಬಿಳಿ, ನಸುಗೆಂಪು ಬಣ್ಣದ ಕ್ಲೋವರ್, ನಟ್ಟ ನಡುವೆ ಹಳದಿ ಕೇಸರವಿರುವ ಹಾಲು ಬಿಳುಪಿನ ಡೈಸಿಯ ಹಿತವಾದ ಘಾಟು, ಜೇನು ವಾಸನೆಯ, ಹಳದಿ ಬಣ್ಣದ ರೇಪ್ ಮೊಗ್ಗು,  ಬಿಳಿಯ ಗಂಟೆ ಹೂ, ಊದಾ ಬಣ್ಣದ ಗಂಟೆ ಹೂ, ಕಡುಗೆಂಪು, ನಸುಗೆಂಪು ಬಣ್ಣದ ಸ್ಕಾಬಿಯಸ್, ತೆಳು ಪರಿಮಳದ ನೀಟಾಗಿ ಜೋಡಿಸಿದ ಹಾಗೆ ಕಾಣುವ ಹಣ್ಣುಗಳಿರುವ ಬಾಳೆ, ಹರಡಿರುವ ವೆಚ್, ಅರಳಿ ಎಳೆಯದಾಗಿರುವಾಗ ಬಿಸಿಲಿನಲ್ಲಿ ಪ್ರಖರ ನೀಲಿಯಾಗಿದ್ದು ಸಂಜೆ ಹೊತ್ತಿಗೋ ಹೂವಿಗೆ ವಯಸಾದಂತೆಯೋ ಮಂಕಾಗಿ ಕೆಂಪಿಗೆ ತಿರುಗುವ ಕಾರ್ನ್‌ಫ್ಲವರ್, ಬಲು ಬೇಗ ಒಣಗುವ, ಬಾದಾಮಿ ಪರಿಮಳದ ಡಾಡರ್ ಹೂಗಳು ಅಲ್ಲಿದ್ದವು. ಬಗೆಬಗೆಯ ಹೂಗಳನ್ನೆತ್ತಿ ಗೊಂಚಲು ಕಟ್ಟಿಕೊಂಡು ಮನೆಗೆ ಹೋಗುತಿರುವಾಗ ಅಲ್ಲೊಂದು ಹಳ್ಳದಲ್ಲಿ ಪೂರ್ಣವಾಗಿ ಅರಳಿದ ಕಡು ಕೆಂಪು ಬಣ್ಣದ ಚೆಲುವಾದ ಥಿಸಲ್ ಗಿಡ ಕಾಣಿಸಿತು. ನಮ್ಮಲ್ಲಿ ಅದನ್ನು ತಾರ್ತರ್ ಜಾಲಿ ಎಂದು ಕರೆಯುತ್ತಾರೆ. ನಡೆಯುವಾಗ ಅದರ ಮೇಲೆ ಕಾಲಿಡದ ಹಾಗೆ ಹುಷಾರಾಗಿರುತ್ತಾರೆ, ಅಕಸ್ಮಾತ್ ಬೇರೆ ಸೊಪ್ಪು, ಗಿಡಗಳ ಜೊತೆ ಅದನ್ನೂ ಕತ್ತರಿಸಿದರೆ ಕೈಗೆ ಚುಚ್ಚೀತೆಂದು ಅಂಜಿ ದಟ್ಟ ಹುಲ್ಲಿನ ನಡುವೆ ಎಸೆದುಬಿಡುತಾರೆ.

ನನ್ನ ಹೂ ಗುಚ್ಛದ ಮಧ್ಯದಲ್ಲಿ ಇದನ್ನಿರಿಸಿದರೆ ಚೆನ್ನಾಗಿರುತ್ತೆಂದು ಅದನ್ನು ಕೀಳಲು ಹಳ್ಳಕ್ಕೆ ಇಳಿದೆ. ಹೂವಿನ ನಡೂ ಮಧ್ಯಕ್ಕೆ ಹೋಗಿ ಪರಾಗ ಹೀರಿ ಸವಿನಿದ್ರೆಯಲ್ಲಿದ್ದ ದುಂಬಿಯನ್ನು ಬೆದರಿಸಿ ಓಡಿಸಿದೆ. ಮುಳ್ಳು ಹೂವನ್ನು ಕೀಳುವುದು ಬಹಳ ಕಷ್ಟವಾಯಿತು. ನನ್ನ ಕೈಗೆ ಕರ್ಚೀಫು ಸುತ್ತಿಕೊಂಡರೂ ದೇಟಿನ ಮುಳ್ಳು ಚುಚ್ಚುತಿದ್ದವು. ಒರಟಾದ ಚೂಪಾದ ಮುಳ್ಳುಗಳ ಜೊತೆ ಸುಮಾರು ಐದು ನಿಮಿಷ ಗುದ್ದಾಡಬೇಕಾಯಿತು. ಒಂದೊಂದೇ ಪುಟ್ಟ ಮುಳ್ಳನ್ನು ಗಿಡದಿಂದ ಎಳೆದು ಸುಲಿಯಬೇಕಾಯಿತು. ಕೊನೆಗೂ ಹೂವನ್ನು ಬಿಡಿಸಿ ಕೈಯಲ್ಲಿ ಹಿಡಿದಾಗ ಅದು ಮೊದಲಿನಷ್ಟು ತಾಜಾ ಕಾಣುತಿಲ್ಲ, ಚೆಂದವಾಗಿಯೂ ಇಲ್ಲ ಅನಿಸಿತು. ಒರಟೊರಟಾಗಿ, ಸೆಟೆದುಕೊಂಡ ಹಾಗೆ ಕಾಣುತಿದ್ದ ಮುಳ್ಳು ಹೂವು ನನ್ನ ಹೂ ಗುಚ್ಛದಲ್ಲಿ ಚಂದವಾಗಿ ಕಾಣುತಿರಲಿಲ್ಲ. ಅದು ಇದ್ದಲ್ಲೇ ಎಷ್ಟೊಂದು ಚೆಲುವಾಗಿದ್ದ ಹೂವನ್ನು ವ್ಯರ್ಥವಾಗಿ ಹಾಳುಮಾಡಿದೆನೆಂದು ಬೇಸರ ಪಡುತ್ತ ಅದನ್ನು ದೂರಕ್ಕೆಸೆದೆ. 

ಆ ಮುಳ್ಳು ಹೂವನ್ನು ಬಿಡಿಸಲು ನಾನು ಪಟ್ಟ ಪ್ರಯತ್ನವನ್ನು ನೆನೆದು, ’ಈ ಹೂವಿಗೆಷ್ಟು ಶಕ್ತಿ, ಎಷ್ಟು ತಾಳಿಕೆ! ಎಷ್ಟು ಚೆನ್ನಾಗಿ ತನ್ನ ತಾನು ಕಾಪಾಡಿಕೊಂಡಿತು! ಪ್ರಾಣ ಬಿಡುವುದಕ್ಕೆ ಮೊದಲು ಎಷ್ಟೊಂದು ಹೋರಾಡಿತು!’ ಅನ್ನಿಸಿತು. ನಮ್ಮೂರಿನ ದಾರಿ ಎರೆ ಮಣ್ಣಿನ ಹೊಲಗಳನ್ನು ಹಾದು ಹೋಗುತಿತ್ತು. ಆಗಿನ್ನೂ ಹೊಲ ಉತ್ತಿದ್ದರು. ಸ್ವಲ್ಪ ಏರಾಗಿದ್ದ ಮಣ್ಣು ಹಾದಿಯಲ್ಲಿ ನಡೆದೆ. ಉತ್ತಿದ್ದ ಹೊಲ ಜಮೀನುದಾರನದು. ನನ್ನ ಎಡ ಬಲಕ್ಕೆ ನೋಡಿದಷ್ಟೂ ದೂರ, ನನ್ನ ನೇರಕ್ಕೆ ಇರುವ ಬೆಟ್ಟ ಏರಿ ನೋಡಿದರೆ ಕಣ್ಣಿಗೆ ಕಾಣುವಷ್ಟೂ ದೂರ ಇರುವ ಜಮೀನು ಅವನದೇ. ಉಳುಮೆ ಸಾಲು ನೀಟಾಗಿ ಅಚ್ಚುಕಟ್ಟಾಗಿದ್ದವು. ಒಳ್ಳೆಯ ಬೇಸಾಯ ನಡೆಯುತಿದ್ದ ಭೂಮಿ. ಎಲ್ಲೂ ಒಂದು ಗರಿಕೆಯಾಗಲೀ ಸಣ್ಣದೊಂದು ಸಸಿಯಾಗಲೀ ಕಾಣದೆ ಉಳುಮೆಯಾಗಿರುವ ಕಪ್ಪು ಮಣ್ಣು ಮಾತ್ರ ಕಾಣುತಿತ್ತು. ನಿರ್ಜನ, ನಿರ್ಜೀವವಾದ ಹೊಲದ ವಿಸ್ತಾರವನ್ನು ಸುಮ್ಮನೆ ನೋಡುತ್ತಾ,  ’ಮನುಷ್ಯ ಎಷ್ಟೊಂದೆಲ್ಲ ವಿನಾಶಕ್ಕೆ ಕಾರಣವಾಗಿದಾನೆ, ತಾನು ಬದುಕಬೇಕೆಂದು ಎಷ್ಟೊಂದೆಲ್ಲ ಸಸ್ಯಜೀವಿಗಳನ್ನು ನಾಶಮಾಡುತಾನೆ!’ ಅಂದುಕೊಂಡೆ.

ಮುಂದೆ ನನ್ನೆದುರಿಗೆ, ರಸ್ತೆಯ ಬಲ ಬದಿಯಲ್ಲಿ, ಪುಟ್ಟದೊಂದು ಉಬ್ಬು ಕಾಣಿಸಿತು. ಹತ್ತಿರ ಹೋದಾಗ ಅದು ನಾನು ಸ್ವಲ್ಪ ಹೊತ್ತಿಗೆ ಮೊದಲು ಹೂವನ್ನು ಬಯಸಿ ಕಿತ್ತು ಎಸೆದ ಮುಳ್ಳುಗಿಡದಂಥದೇ ಇನ್ನೊಂದು ಗಿಡ ಅನ್ನುವುದು ತಿಳಿಯಿತು. ಈ ತಾರ್ತರ್ ಜಾಲಿ ಗಿಡಕ್ಕೆ ಮೂರು ಕೊಂಬೆಗಳಿದ್ದವು. ಒಂದು ಮುರಿದಿತ್ತು, ಸೊಟ್ಟ ಕೈಯಿನ ಹಾಗೆ ಕಾಣುತಿತ್ತು. ಉಳಿದೆರಡರಲ್ಲಿ ಒಂದೊಂದು ಹೂವಿದ್ದವು- ಒಮ್ಮೆ ಕೆಂಪಾಗಿದ್ದವು ಈಗ ಒಣಗಿ ಕಪ್ಪಾಗಿದ್ದವು. ಒಂದು ರೆಂಬೆಯ ಮುರಿದ ದೇಟು ಧೂಳು ಮೆತ್ತಿದ ಹೂವನ್ನು ಹೊತ್ತು ಜೋತಾಡುತಿತ್ತು. ಇನ್ನೊಂದು ರೆಂಬೆ, ಅದೂ ಮಣ್ಣು ಮೆತ್ತಿ ಕಪ್ಪಾಗಿದ್ದರೂ ಇನ್ನೂ ಗಟ್ಟಿಯಾಗಿ, ನೆಟ್ಟಗೇ ಇತ್ತು. ಯಾವುದೋ ಬಂಡಿ ಈ ಗಿಡದ ಮೇಲೆ ಹಾದು ಹೋಗಿದೆ, ಮಣ್ಣುಪಾಲಾದ ಗಿಡ ಮತ್ತೆ ತಲೆ ಎತ್ತಿ ನಿಂತಿದೆ, ನೆಟ್ಟಗೆ ನಿಂತರೂ ಒಂದು ಬದಿಗೆ ತಿರುಚಿಕೊಂಡು, ಮೈಯ ಒಂದು ಪಾರ್ಶ್ವ ಕೆತ್ತಿಹೋದ ದೇಹದ ಹಾಗೆ, ಕರುಳೆಲ್ಲ ಹೊರಕ್ಕೆ ಬಿದ್ದು, ಒಂದು ಕಣ್ಣು ಕಿತ್ತು, ಕೈಯನ್ನು ತಿರುಚಿದ ದೇಹದ ಹಾಗೆ ಕಾಣುತಿದ್ದರೂ ಗಿಡ ದೃಢವಾಗಿ, ನೆಟ್ಟಗೆ ನಿಂತಿತ್ತೇ ಹೊರತು ತನ್ನ ಜೊತೆಯ ಇತರ ಗಿಡಗಳನ್ನೆಲ್ಲ ನಾಶ ಮಾಡಿದ  ಮನುಷ್ಯನಿಗೆ ಶರಣಾಗಿರಲಿಲ್ಲ.

’ಎಂಥ ಚೈತನ್ಯ! ಮನುಷ್ಯ ಎಲ್ಲವನ್ನೂ ಗೆದ್ದಿದಾನೆ, ಲಕ್ಷಗಟ್ಟಲೆ ಗಿಡ ಮರಗಳನ್ನು ನಾಶಮಾಡಿದಾನೆ, ಆದರೂ ಇದೊಂದು ಮಾತ್ರ ಸೋಲು ಒಪ್ಪಿ ಶರಣಾಗಿಲ್ಲ,’ ಅಂದುಕೊಂಡೆ. 

ಹೀಗೆ ಅಂದುಕೊಳ್ಳುವಾಗ ಎಷ್ಟೋ ವರ್ಷದ ಹಿಂದೆ ಕಕೇಶಿಯದಲ್ಲಿ ನಡೆದ ಘಟನೆ ನೆನಪಾಯಿತು. ಆ ಘಟನೆಯನ್ನು ಸ್ವಲ್ಪ ಮಟ್ಟಿಗೆ ನೋಡಿದ್ದೆ, ಕಣ್ಣಾರೆ ಕಂಡವರಿಂದ ಇನ್ನಷ್ಟನ್ನು ಕೇಳಿದ್ದೆ, ಮಿಕ್ಕದ್ದನ್ನು ಕಲ್ಪನೆ ಮಾಡಿಕೊಂಡಿದ್ದೆ. ಆ ಘಟನೆ ನಡೆದದ್ದು ೧೮೫೧ರಲ್ಲಿ. 

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

September 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: