ದೀರ್ಘ ಏಕಾಂತ….
ಮಂಜುಳಾ ಹುಲಿಕುಂಟೆ
ದೀರ್ಘ ಏಕಾಂತವೊಂದರ ಧ್ಯಾನಕ್ಕಿಳಿದಿದ್ದೇನೆ
ಈ ಇಳಿಸಂಜೆಗಳಲ್ಲಿ ನೆನಪುಗಳ ಜಪವಿಡಿದು ಕೂರುತ್ತೇನೆ
ಇಲ್ಲ ನೀನೇಳುವಂತೆ ಮೌನಗಳ ತುದಿಗೆ ಮಾತು ಮೂಡುವುದೇ ಇಲ್ಲ
ನಾನೀಗ ನಿರ್ಲಿಪ್ತಳಾಗಿಯೂ ಇಲ್ಲ
ಎಂದಿಗೂ ಗುರುತಿಸಿಕೊಳ್ಳದ ನನ್ನ ಕಂಡುಕೊಳ್ಳುತ್ತಿದ್ದೇನೆ…
ನನ್ನ ಎದೆಬಡಿತದ ಸದ್ದಿಗೆ ಕಿವಿ ಸಲ್ಲಿಸಿದ್ದೇನೆ
ತುಟಿ ಬಿಚ್ಚದೇ ಆಡುವ ಸಾವಿರ ಮಾತುಗಳಿಗೆ
ತುಟಿಯ ಹಂಗು ಇಲ್ಲದಿರುವುದ ಅರಿಯುತ್ತಿದ್ದೇನೆ…
ಅದೆಷ್ಟು ಮೌನಗಳೊಂದಿಗೆ ಆತ್ಮಾನುಸಂಧಾನ…?
ನೀನರಿಯದ ನಾನೆಂದೂ ಪರಿತಪಿಸುವ ನನ್ನಾಳದಲ್ಲೂ
ನನ್ನ ಅರಿವಿಲ್ಲದಿದ್ದುದ್ದರ ಅರಿವಾಗಿದೆ
ನಾನೀಗ ಖಾಲಿ ಗೋಡೆಯ ಮೇಲೆ
ನಿನ್ನ ಕಳೆದು ನನ್ನನ್ನಷ್ಟೇ ಕೂಡಿಕೊಳ್ಳುವ ಆಟಕ್ಕಿಳಿದ್ದೇನೆ…
ನಿಜಕ್ಕೂ ಮಜವಿದೆ
ನೋವಿನ ಪ್ರತೀ ಮಜಲುಗಳು
ಎದೆ ಇರಿದು ಆಳಕ್ಕಿಳಿಯುತ್ತವೆ..
ನಾನಾಗ ಪ್ರತೀ ಬಾರೀಯೂ
ಸಾವಿನ ಸಾನಿದ್ಯಕ್ಕೆ ಸರಿದು
ಬದುಕಿನ ತುದಿಗೆ ಬೆರಗು ತಂದುಕೊಂಡು
ಕಣ್ಣ ಹನಿಗಳಿಗೆ ಬಣ್ಣ ತುಂಬಲು ತವಕಿಸುತ್ತೇನೆ….
ಇಲ್ಲಿ ಕಳೆದುಕೊಂಡದ್ದರ ಪಳೆಯುಳಿಕೆಗೆ
ದಿನದ ನೆನಪಿನ ಕಂತೆಯೊಳಗೆ
ಒಂದೊಂದಕ್ಕೂ ಮರುಕ ಹುಟ್ಟಿ ನಾನು ಮರುಗುತ್ತೇನೆ
ನೀನಾಗ ನನ್ನ ನೋವುಗಳ ಸಂತೆಯೊಳಗೆಲ್ಲಾ
ನೆನಪಿನ ಗಂಟಿಡಿದು ಸುತ್ತುವ ಅಲೆಮಾರಿಯಂತೆ ದಿನವಿಡೀ ಅಲೆದಾಡುತ್ತೀಯಾ
ಎಂದೂ ದಕ್ಕದ ದಾಖಲೆಗೂ ನಿನ್ನ ಹೆಸರಿನ ಮೊಹರ್ ಹೊತ್ತಿ
ನಾನು ಎದೆಯ ಪುಟಗಳ ತುಂಬಿಕೊಳ್ಳುತ್ತೇನೆ..
ಹೀಗೆ ಏಕಾಂತ, ಒಂಟಿತನಗಳಿಗೂ
ನಿನ್ನ ಗಂಟು ಕಟ್ಟಿಕೊಂಡು ಕೊರಗುವ ಮೋಹದ ಮೋಜಿಗೆ
ಎದೆಯಲ್ಲಿ ನೆತ್ತರು ಕಾವೇರುವ
ನೋವುಗಳು ಚೀರಿಡುವ
ಉಸಿರು ಬೆಂಕಿ ಉಗುಳುವ
ಗಾಢಾಂದಕಾರದ ನನ್ನ ದೀರ್ಘ ಹಗಲುಗಳ ಸಾವು ಅರಿವಾಗುವುದೇ ಇಲ್ಲ







ಚೆಂದದ ಕವಿತೆ.
very..very nice..