’ವ್ಯಾಸರ ಬದುಕಿನ ಒಂದು ಪುಟ ’ – ಅನುಪಮಾ ಪ್ರಸಾದ್

’ಅವಧಿ’ಯಲ್ಲಿ ಬೆಸಗರಹಳ್ಳಿ ರಾಮಣ್ಣ ಹಾಗು ರವಿಕಾಂತೇ ಗೌಡರ ಅನುಬಂಧದ ಬಗ್ಗೆ ಜಿ ಎನ್ ಮೋಹನ್ ಬರೆದ ಲೇಖನ ಓದಿದ ಅನುಪಮಾ ಪ್ರಸಾದ್ ಅವರು

ಎಂ ಎನ್ ವ್ಯಾಸರ ಕುರಿತು ಅವರು ಬರೆದ ’ಅರ್ಧ ಕಥಾನಕ’ದ ಒಂದು ಅಧ್ಯಾಯವನ್ನು ’ಅವಧಿ’ಗಾಗಿ ಪ್ರೀತಿಯಿಂದ ಕಳಿಸಿದ್ದಾರೆ.

ವ್ಯಾಸರ ಬದುಕಿನ ಒಂದು ಪುಟ ’ಅವಧಿ’ ಓದುಗರಿಗಾಗಿ

***ಅನುಪಮಾ ಪ್ರಸಾದ್

ಜಾನೆ ಕ್ಯಾ ತೂನೇ ಕಹೀ..
ನನ್ನ ಕಣ್ಣ ಮುಂದೆ ನಾನೇ ಕೊಳ್ಳಿ ಇಟ್ಟ ಅಣ್ಣನ ಶರೀರ ಹೊತ್ತಿ ಉರಿಯುತ್ತಿತ್ತು. ಅಣ್ಣ ಸಿಗರೇಟು ಸೇದುತ್ತಿದ್ದ ಕಾಲದಲ್ಲೊಮ್ಮೆ ಬೆಂಕಿ ಪೊಟ್ಟಣ ಒದ್ದೆಯಾಗಿ ಅವರು ಕಡ್ಡಿ ಗೀರಲು ಕಷ್ಟ ಪಡುತ್ತಿದ್ದರು. ಆಗ ನಾನು ಹೊತ್ತಿಸಿಕೊಡುತ್ತೇನೆ ಅನ್ನುತ್ತ ಕಡ್ಡಿ ಗೀರಿದ್ದೆ. ಕಡ್ಡಿ ಮುರಿದು ಕಿಡಿಯೊಂದು ಅಣ್ಣನ ಕೈಗೆ ಬಿದ್ದು ಸ್ವಲ್ಪ ಕೆಂಪಾಗಿತ್ತು. ಅಲ್ಲಿಗೆ ಬಾಯಿಯಿಂದ ಫೂ..ಫೂ.. ಊದಿ ಊದಿ ಗಾಳಿ ಹಾಕಿ ಸಮಾಧಾನ ಪಟ್ಟುಕೊಂಡಿದ್ದೆ. ಆದರೆ, ಅಣ್ಣನ ಇಡೀ ಶರೀರಕ್ಕೆ ನಾನೇ ಬೆಂಕಿ ಕೊಟ್ಟು ನೋಡುತ್ತ ನಿಂತಿದ್ದೆ! ಬಾಲ್ಯದಲ್ಲಿ ಅಣ್ಣನೇ ನೀರು ಹದ ಮಾಡಿ ನನ್ನನ್ನು ಮೀಯಿಸಿ; ಅಂಗಿ ಚಡ್ಡಿ ಹಾಕಿಸಿ; ನನ್ನ ತಲೆ ಬಾಚಿ ತನ್ನ ಜೊತೆ ಪೇಟೆಗೋ ಇನ್ನೆಲ್ಲಿಗಾದರೂ ಹೋಗುವುದಿದ್ದರೆ ಅಲ್ಲಿಗೋ ಕರೆದೊಯ್ಯುತ್ತಿದ್ದರು. ಅಣ್ಣನಿಗೆ ಸ್ವತಃ ಧರಿಸಲು ಚಿನ್ನದ ಆಸೆ ಇಲ್ಲ. ಆದರೆ, ನನ್ನ ಕುತ್ತಿಗೆಗೆ ಹಾಕಿದ್ದರು. ನಾನೂ ಅಣ್ಣನನ್ನು ಒಂದೇ ಒಂದು ಬಾರಿ ಸ್ನಾನ ಮಾಡಿಸಿದೆ. ನೀರು ಜಾಸ್ತಿ ಬಿಸಿಯಾಗಿದೆ ಅನಿಸಿ ತಣ್ಣೀರು ಸೇರಿಸಿದ್ದೆ. ಆದರೆ, ನಾನು ಸ್ನಾನ ಮಾಡಿಸಿದ್ದು ಮನೆ ಎದುರು ಅಂಗಳದಲ್ಲಿ ಮಲಗಿಸಿದ ಅಣ್ಣನ ಶರೀರಕ್ಕೆ. ಎಂದೂ ಚಿನ್ನ ಬಯಸದ ಅಣ್ಣನ ಬಾಯಿಗೆ ನಾನೂ ಚಿನ್ನ ಹಾಕಿದೆ. ಅಂಗಳದಲ್ಲಿ ಮಲಗಿಸಿದ ಅಣ್ಣನ ಉದ್ದ ತಲೆಕೂದಲಿನಿಂದ ಇಳಿಯುತ್ತಿದ್ದ ನೀರು ನನಗೆ ಕಣ್ಣೀರಿನ ಹಾಗೆ ಕಾಣುತ್ತಿತ್ತು. ಅದನ್ನು ಒರೆಸಿ ಒರೆಸಿ ತೆಗೆದೆ. ಅಂಗಳದಲ್ಲಿ ಹಾಗೆ ಅಂಗಾತ ಮಲಗಿಸಿದ್ದಕ್ಕೆ ಕಿರಿಕಿರಿ ಮಾಡಿದೆ. ಸ್ವಲ್ಪವೇ ಅಂತರದಲ್ಲಿ ಕೆಲವರು ಚಟ್ಟ ಕಟ್ಟುತ್ತಿದ್ದರು.
ವರ್ಷಗಳ ಹಿಂದೆ ನಾನು ವೈದ್ಯಕೀಯ ಪದವಿ ಮುಗಿಸಿ ಬಂದಾಗ ಅಣ್ಣ ಹೇಳುತ್ತಿದರು, ನೀನು ಇಲ್ಲೇ ಸಮೀಪದಲ್ಲಿ ಪ್ರಾಕ್ಟೀಸ್ ಮಾಡು. ನಾನು ಕರೆದ ಕೂಡಲೆ ನೀನು ನನ್ನ ಪಕ್ಕ ಬರುವಂತೆ; ಅಷ್ಟು ಹತ್ತಿರದಲ್ಲಿರಬೇಕು ನೀನು. ನನಗೆ ನಿನ್ನ ಮಡಿಲಲ್ಲೇ ಮಲಗಿ ಸಾಯಬೇಕು ಅಂತ ಆಸೆ. ನಾವು ಅವರ ಬಾಯಿ ಮುಚ್ಚಿಸುತ್ತಿದ್ದೆವು. ಆದರೆ, 2008 ಜುಲೈ 23ರಂದು ಅಣ್ಣ ಅವರಿಚ್ಚೆಯಂತೆ ನನ್ನ ಮಡಿಲಲ್ಲೇ ಕೊನೆಯುಸಿರೆಳೆದರು. ಬೇರೆ ಯಾವ ರೀತಿಯಲ್ಲೂ ನಾನು ಅಣ್ಣನ ಸೇವೆಯೋ ಚಾಕರಿಯೋ ಮಾಡಲಿಲ್ಲ. ಅಣ್ಣನನ್ನು ಮಲಗಿಸಿದ ಚಟ್ಟವನ್ನು ನಾನು, ಚಿಕ್ಕಪ್ಪ, ಬಾವ ಚಂದ್ರಶೇಖರ, ಹಾಗು ನನ್ನ ಸೋದರ ಮಾವ ರಾಧಾಕೃಷ್ಣ ಸೇರಿ ಹೊತ್ತುಕೊಂಡೆವು. ಅದು ಅಣ್ಣನ ಕೊನೆಯ ಯಾತ್ರೆ. ನನ್ನ ಕೈಯಲ್ಲಿ ಬೆಂಕಿ ಇತ್ತು. ಮಡಕೆಯಲ್ಲಿ ನೀರು..ಅಣ್ಣನನ್ನು ಚಿತೆಯ ಮೇಲೆ ಮಲಗಿಸಿ ಕಟ್ಟಿಗೆಗಳನ್ನು ಇಡಲು ಸುರು ಮಾಡಿದ್ದಾಯಿತು.
ಮೊದಲು ಅಣ್ಣನ ಕಾಲುಗಳು.. ಅಣ್ಣಾ, ನಾನು ಎಸ್.ಎಸ್.ಎಲ್.ಸಿ. ಪಾಸು, ಅಣ್ಣಾ, ಅನಿತನ ಹೆರಿಗೆಯಾಯ್ತು..,ಗಂಡುಮಗು, ಅಣ್ಣಾ, ಇವತ್ತು ನಂಗೆ ನಲ್ವತ್ತು ವರ್ಷ ಆಯ್ತು ಆಶೀರ್ವಾದ ಮಾಡು ಅನ್ನುತ್ತ ಕಾಲಿಗೆ ಬೀಳುತ್ತಿದ್ದ ಪಾದಗಳು; ವಿಶೇಷ ದಿನಗಳಲ್ಲಿ ಮನೆಯ ಕಿರಿಯರೆಲ್ಲ ಮುಟ್ಟುತ್ತಿದ್ದ ಪಾದಗಳು, ನಮ್ಮ ಮನೆಯ ಆಧಾರಸ್ತಂಭವೆಂದುಕೊಂಡಿದ್ದ ಕಾಲಗಳನ್ನು ಮೊದಲು ಕಟ್ಟಿಗೆಗಳು ಮುಚ್ಚಲಾರಂಭಿಸಿದವು. ನಿಧಾನವಾಗಿ ಕಟ್ಟಿಗೆಗಳು ಮೇಲೇರುತ್ತ ಸದಾ ನಿಷ್ಕಲಂಕವಾಗಿರುತ್ತಿದ್ದ ಅಣ್ಣನ ಮುಖವನ್ನು, ಯಾರನ್ನೂ ದುರುಗುಟ್ಟಿ ನೋಡದ ಆದರೆ, ತೀಕ್ಷ್ಣವಾಗಿ ನೋಡುತ್ತಿದ್ದಾರೇನೋ ಎಂದನಿಸುವ ಅಣ್ಣನ ಕಣ್ಣುಗಳನ್ನು ಮುಚ್ಚಿದವು. ಮೋಸ ಮಾಡುವುದು ಹೇಗೆಂದು ಗೊತ್ತಿಲ್ಲದ; ಸುಳ್ಳು ಹೇಳಿ ಗೊತ್ತಿಲ್ಲದ ಮನುಷ್ಯನನ್ನು ಪೂರ್ತಿಯಾಗಿ ಕಟ್ಟಿಗೆಗಳು ಮುಚ್ಚಿಕೊಂಡವು. ಸಣ್ಣಗೆ ಮಳೆ ಬರುತ್ತಿತ್ತು. ನನ್ನ ಕೈಗೆ ಬೆಂಕಿಯ ದೊಂದಿ ಕೊಟ್ಟರು. ಮೊದಲು ಕಾಲಿನ ಕಡೆಯಿಂದ ಬೆಂಕಿ ಕೊಡಲು ಹೇಳಿದರು. ಅಲ್ಲಿಯವರೆಗೂ ನನಗೆ ಅಣ್ಣ ಯಾವುದೇ ಘಳಿಗೆಯಲ್ಲು ಎದ್ದು ಕುಳಿತುಕೊಳ್ಳಬಹುದೆಂಬ ಹುಚ್ಚು ಭ್ರಮೆ. ಯಾರ ಸಾವಿಗೂ ನಾನು ಹೋದವನಲ್ಲ. ನನಗೆ ಹೆಣ ಸುಡುವುದನ್ನು ನೋಡುವುದೆಂದರೆ ಒಂದು ವಿಚಿತ್ರ ಭಯವಿತ್ತು. ನನ್ನ ಅಜ್ಜಿ ಸತ್ತಾಗಲೂ ಅವರನ್ನು ಸುಡುವಲ್ಲಿಗೆ ನಾನು ಹೋಗಿರಲಿಲ್ಲ. ತಂದೆಯನ್ನು ಬೆಂಕಿಗೆ ಕೊಡುವಾಗ, ವೈದಿಕ ಕ್ರಿಯಾ ಕರ್ಮಗಳನ್ನು ಮಾಡುವಾಗ, ಅಣ್ಣನನ್ನು ಪುರೋಹಿತರು ಪ್ರೇತ ಪ್ರೇತ ಎಂದೇ ಸಂಭೋಧಿಸುವಾಗಲೆಲ್ಲ ವೈದಿಕ ಕ್ರಿಯೆಗಳ ಬಗ್ಗೆ ಅತ್ಯಂತ ಜುಗುಪ್ಸೆಯಾಗುತ್ತಿತ್ತು. ಅಲ್ಲಿಂದ ಎದ್ದು ಓಡಬೇಕೆನಿಸುತ್ತಿತ್ತು. ಕ್ರಿಯೆಯ ಕೊನೆಯ ದಿನ ಪುರೋಹಿತರು ಮೂರು ಪಿಂಡ ಇಡಿಸಿ ನನ್ನ ಕೈಯಲ್ಲಿ ಕರ್ಮಗಳನ್ನು ಮಾಡಿಸುತ್ತ ಈಗ ನಿನ್ನ ಅಪ್ಪನನ್ನು ಅವರ ತಂದೆಯ ಹತ್ತಿರಕ್ಕೆ ಸೇರಿಸುವುದು ಅಂದಾಗ ಮಾತ್ರ ನನಗೆ ಒಂದು ರೀತಿಯ ಧನ್ಯತಾ ಭಾವದಿಂದ ರೋಮಾಂಚನವಾಗಿತ್ತು.
ಸಾಯುವ ಮುನ್ನಾದಿನದವರೆಗೂ ಅಣ್ಣನೇ ನನಗೆ ಹೆಗಲಾಗಿದ್ದರು, ಜವಾಬ್ದಾರಿಗಳು ನನ್ನ ಹೆಗಲೇರಿರಲೇ ಇಲ್ಲ. ನಾನು ಓಡಿಸುವ ಕಾರಿನ ಟಯರ್ ಹೊಸದು ಹಾಕುವುದೊ ಪುನಃ ರೀಸೋಲ್ ಮಾಡಿಸಬೇಕೊ ಅನ್ನುವುದನ್ನೂ ಅಣ್ಣನಿಗೇ ಕೇಳುತ್ತಿದ್ದೆ.

..ಆ ಮಧ್ಯಾಹ್ನ ಅಣ್ಣ ನನ್ನ ಅಂಗಿಯನ್ನು ಹಿಡಿದುಕೊಂಡು ಕುಸಿದಾಗಲೂ ಅಣ್ಣ ಸಾವಿನ ಸಮೀಪಕ್ಕೆ ನಡೆದಿದ್ದಾರೆ ಅನ್ನುವ ಗ್ರಹಿಕೆಯೇ ನನಗೆ ಬರಲಿಲ್ಲ. ಎರಡು ದಿನಗಳ ಹಿಂದಷ್ಟೆ ಅಣ್ಣನನ್ನು ಮಂಗಳೂರಿನ ಕೆ.ಎಮ್.ಸಿ.ಯ ತಜ್ಞ ವೈದ್ಯರೇ ಜನರಲ್ ಚೆಕಪ್ ಮಾಡಿ ಯಾವುದೇ ತೊಂದರೆ ಇಲ್ಲ. ಎಲ್ಲ ಸರಿಯಾಗಿದೆ ಅಂದಿದ್ದರು. ಉರಿಮೂತ್ರದ ತೊಂದರೆಗೆ ಜೀವರಕ್ಷಕ ಇಂಜೆಕ್ಷನ್ನಿನ ಒಂದು ಕೋಸರ್್ ಮಾಡಿಬಿಡೋಣ ಎಂದು ಇಂಜೆಕ್ಷನ್ ಬರೆದುಕೊಟ್ಟಿದ್ದರು. ಅದು ನಡೆಯುತ್ತ ಇತ್ತು. ಎಂಟನೆ ಇಂಜೆಕ್ಷನ್ನಿಗಾಗುವ ಹೊತ್ತಿಗೆ ಅಣ್ಣನ ಕೈಗೆ ಹಾಕಿದ ಕ್ಯಾನುಲಾದಿಂದಾಗಿ ಅವರಿಗೆ ವಿಪರೀತ ಕೈ ನೋವು ಬಂದಿತ್ತು. ಹಾಗಾಗಿ ಅದನ್ನು ಬದಲಿಸಲು ಆ ದಿನ ಅಣ್ಣನನ್ನು ಕಾಸರಗೋಡಿನ ನನ್ನ ಗೆಳೆಯನ ನರ್ಸಿಂಗ್ ಹೋಂಗೆ ಕರೆದೊಯ್ಯಬೇಕಿತ್ತು. ನಾನು ಮಧ್ಯಾಹ್ನ ಕ್ಲಿನಿಕ್ ಮುಗಿಸಿ ಬರುವಷ್ಟರಲ್ಲಿ ಅಣ್ಣ ಊಟ ಮುಗಿಸಿ ತಯಾರಾಗಿ ಕುಳಿತಿದ್ದರು. ನಾನು ಬೇಗ ಊಟ ಮುಗಿಸಿ ಹೊರಡೋಣ ಅಂದಾಗ ನೀನು ಸ್ವಲ್ಪ ಹೊತ್ತು ರೆಸ್ಟ್ ತಗೊ ಮಗಾ. ಮತ್ತೆ ಹೋದರಾಯಿತು ಅಂದಿದ್ದರು.
ಆ ಹೊತ್ತಿಗೆ ಮನೆಯಲ್ಲಿದ್ದಿದ್ದು ಅಮ್ಮ ಒಬ್ಬರೆ. ಅನಿತಾ ಕಾಞೆಂಗಾಡಿಗೆ ಹೋಗಿದ್ದಳು. ಅಮಿತ್ ಶಾಲೆಗೆ ಹೋಗಿದ್ದ. ಗೋಡೆಯಾಚೆಯೇ ಇರುವ ಮನೆಯಲ್ಲಿ ಚಿಕ್ಕಪ್ಪನೂ ಬಾರಿಕ್ಕಾಡಿಗೆ ಹೋಗಿದ್ದರು. ಅಲ್ಲಿ ಚಿಕ್ಕಮ್ಮನೂ ಅವರನ್ನು ಕಾಣಲು ಬಂದಿದ್ದ ನಮ್ಮ ಬಂಧು ಪ್ರಭಾ ಇದ್ದರು. ಅಣ್ಣ ಅಮ್ಮನ ಹತ್ತಿರ ಬೇಗ ಹೋಗಿ ಬರುತ್ತೇವೆ ಅನ್ನುತ್ತ ಕಾರ್ ಹತ್ತಿದ್ದರು. ಅಣ್ಣನಿಗೆ ಕೆಲವು ದಿನಗಳಿಂದ ನಿತ್ರಾಣವಿತ್ತು. ಹಾಗಾಗಿ ಅವರು ನನ್ನ ಹೆಗಲು ಬಳಸಿ ಕಾರ್ ಹತ್ತಿದ್ದರು. ಮೊದಲ ಬಾರಿ ಅಣ್ಣನಿಗೆ ನನ್ನ ಹೆಗಲು ಆಧಾರವಾಗಿತ್ತು. ಆಸ್ಪತ್ರೆಯಲ್ಲಿ ಅಣ್ಣನೊಂದಿಗೆ ಮಾತಾಡುತ್ತಲೇ ಗೆಳೆಯ ಕೆನುಲಾ ಬದಲಿಸಿದ್ದ. ಹೇಗು ಆಸ್ಪತ್ರೆಗೆ ಬಂದಿದ್ದಾಗಿದೆ. ಎಂಟನೆಯ ಇಂಜೆಕ್ಷನ್ ಇಲ್ಲೇ ಕೊಟ್ಟರಾಯಿತೆಂದು ಗೆಳೆಯನಿಗೆ ಹೇಳಿದೆ. ಇಂಜೆಕ್ಷನ್ ಚುಚ್ಚಿಸಿಕೊಂಡು ಆಸ್ಪತ್ರೆಯಿಂದ ಹೊರಗೆ ಕಾಲಿಡುತ್ತಿದ್ದಂತೆ ಅಣ್ಣ, ನಾನೀಗ ಸಾಯುತ್ತೇನೆ ಮಗಾ ಅಂದುಬಿಟ್ಟರು. ನಿತ್ರಾಣಕ್ಕೆ, ಇಂಜೆಕ್ಷನ್ ನೋವಿಗೆ ಹೆದರಿಕೊಂಡಿದ್ದಾರೆ. ಮನೆಗೆ ಹೋಗಿ ಮಲಗಿದರೆ ಚೇತರಿಸಿಕೊಳ್ಳುತ್ತಾರೆ ಅಂದುಕೊಂಡು ಅಣ್ಣನಿಗೆ ಸಮಾಧಾನ ಹೇಳುತ್ತ ಕಾರಲ್ಲಿ ಕೂರಿಸಿಕೊಂಡು ಅಲ್ಲಿಂದ ಹೊರಟಿದ್ದೆ.
ಆಸ್ಪತ್ರೆಯಿಂದ ಮನೆಗೆ ಆರೇಳು ಕಿಲೋಮೀಟರುಗಳ ಪ್ರಯಾಣ. ಸ್ವಲ್ಪ ದೂರ ಬರುವಷ್ಟರಲ್ಲಿ ಅಣ್ಣ ನಂಗೆ ಕಣ್ಣೆಲ್ಲ ಮಯಮಯವಾಗ್ತಿದೆ ಮಗಾ ಅಂದರು. ಮತ್ತೆ ಆಸ್ಪತ್ರೆಗೆ ಹೋಗೋಣ ಅಂದಾಗ ಏನೂ ಬೇಡ. ಬೇಗ ಮನೆಗೆ ಹೋಗುವ. ಸ್ವಲ್ಪ ಮಲಗಿದರೆ ಸರಿಯಾದೀತು ಎಂದು ಆತುರ ಪಡಿಸಿದರು. ನಮ್ಮ ಕಾರಿನ ಮುಂದೆ ಹೋಗುತ್ತಿದ್ದ ಲಾರಿಯ ಬ್ರೇಕ್ ಲೈಟ್ ಸಹಿಸಲಾಗದಂತೆ ಕಣ್ಣಿಗೆ ಕೈ ಅಡ್ಡ ಹಿಡಿದುಕೊಂಡಿದ್ದರು. ಅಂಗಳದಲ್ಲಿ ಕಾರು ನಿಲ್ಲಿಸಿ ಅಣ್ಣನಿಗೆ ಇಳಿಯಲು ಬಲ ಬದಿಯ ಬಾಗಿಲು ತೆರೆದೆ. ಅಣ್ಣ ಇಳಿಯಲು ಪ್ರಯತ್ನಿಸಿದರೂ ಜೋಲಿ ಹೊಡೆದು ಸಾವರಿಸಿಕೊಂಡು ಆಧಾರಕ್ಕಾಗಿ ನನ್ನ ಅಂಗಿಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದರು. ಚಿಕ್ಕಪ್ಪನ ಮನೆಯ ಚಾವಡಿಯಲ್ಲಿದ್ದ ಚಿಕ್ಕಮ್ಮನೂ ಪ್ರಭನೂ ಅದನ್ನು ನೊಡಿ ಹೊರಗೆ ಬಂದರು. ಅಮ್ಮ ಒಳಗಿದ್ದರು. ಪ್ರಭ ಅಣ್ಣನ ಇನ್ನೊಂದು ಬದಿಯಿಂದ ಹೆಗಲು ಹಿಡಿದುಕೊಂಡರು. ಯಾವಾಗ ಬಂದೆ ಪ್ರಭ? ಎಂದು ಕೇಳಿ, ಅವಳ ಯೋಗ ಕ್ಷೇಮ ವಿಚಾರಿಸುತ್ತಲೇ ಅಣ್ಣ ಒಳಗೆ ಬಂದರು. ಅವರನ್ನು ಮಂಚದಲ್ಲಿ ಮಲಗಿಸಿ ಫ್ಯಾನ್ ಹಾಕಿದೆ. ಅಮ್ಮ ಒಳ ಬಾಗಿಲಾಚೆ ಪತ್ರಿಕೆ ಓದುತ್ತಿದ್ದರು. ಎರಡು ಮೂರು ದಿನದಿಂದ ನಿತ್ರಾಣವಿದ್ದುದರಿಂದ ಆಸ್ಪತ್ರೆಗೆ ಹೋಗಿ ಬಂದ ಆಯಾಸದಿಂದಾಗಿ ಹೀಗಾಗುತ್ತಿದೆ. ಸ್ವಲ್ಪ ಮಲಗಿದರೆ ಸರಿಯಾಗುತ್ತದೆ ಅಂದುಕೊಂಡೆವು. ಅಣ್ಣ ತುಂಬ ಬಾಯಾರಿಕೆಯಾಗ್ತಿದೆ ಮಗಾ ಅಂದರು. ನೀರು ತಂದು ಕುಡಿಸಿದೆ. ಆದರೂ ಏನೋ ಒಂದು ತೊಂದರೆಯಾಗುತ್ತಿರುವಂತಿತ್ತು ಅಣ್ಣನ ವರ್ತನೆ. ಯಾಕೊ ಅಣ್ಣನ ವರ್ತನೆಗಳು ನನಗೆ ಸಣ್ಣ ಗಾಬರಿ ಹುಟ್ಟಿಸುತ್ತಿದ್ದವು. ನನಗೆ ಗಾಬರಿಯಾಗುತ್ತಿರುವುದು ಅಮ್ಮನಿಗೆ ಗೊತ್ತಾಗಬಾರದೆಂದು ಪ್ರಭನ ಹತ್ತಿರ ಡಾ|ಸುಬ್ರಾಯ ಭಟ್ಟರನ್ನು ಕರ್ಕೊಂಡು ಬರ್ತೇನೆ ಅಂದವನೇ ಪಕ್ಕದಲ್ಲೇ ಇರುವ ಸುಬ್ರಾಯಭಟ್ಟರನ್ನು ಕರೆದೆ.
ಅವರು ಬಂದವರು ಎಂತಾಗ್ತದೆ ಶಾನುಭೋಗರೆ? ಕೇಳಿದರು. ಅಣ್ಣ ಮತ್ತೆ ಗಂಟಲು ಒಣಗುತ್ತಿದೆ ಅಂದರು. ಅವರೂ ಮತ್ತೆ ನೀರು ಕುಡಿಸಿದರು. ಅಣ್ಣನ ನಿತ್ರಾಣ ಗಮನಿಸಿ ಅವರ ಹೆಂಡತಿ ಶೋಭಾಗೆ ಫೋನ್ ಮಾಡಿ ಸಮೀಪದಲ್ಲೇ ಇದ್ದ ಅವರ ಮನೆಯಿಂದ ಸಲೈನ್ ಕಿಟ್ ತರಿಸಿದರು. ಅಣ್ಣ ಸುಧಾರಿಸಿಕೊಳ್ಳುತ್ತಿರುವಂತೆ ಕಾಣುತ್ತಿತ್ತು. ಅದರ ನಡುವೆಯೇ ಘಂಟೆ ಎಷ್ಟಾಯಿತು ಮಗಾ ಕೇಳಿದರು. ಎರಡುಮುಕ್ಕಾಲು ಅಣ್ಣಾ ಅಂದೆ. ಅದು ನಾನು ಕ್ಲಿನಿಕ್ಕಿಗೆ ಹೊರಡುವ ಸಮಯ. ನೀನಿನ್ನು ಹೊರಡು ಮಗಾ. ನಾನು ಈಗ ಹುಷಾರಾಗಿದೇನೆ ಅಂದರು. ಆದರೆ, ನಾನು ಇನ್ನೂ ಸ್ವಲ್ಪ ಹೊತ್ತು ಇದ್ದು ಹೊರಡುತ್ತೇನೆ ಅಂದೆ. ಈಗ ಏನಾದರೂ ಕುಡಿಯುತ್ತೀರಾ? ಬೆಳಗಿನ ಷರಬತ್ತು ಇದೆ. ಕುಡಿಯುತ್ತೀರಾ? ಕೇಳಿದೆ. ಅಮ್ಮ ಒಳಗಿನಿಂದ ಷರಬತ್ತು ತಂದು ನನ್ನ ಕೈಯಲ್ಲಿ ಕೊಟ್ಟರು. ಅವರ ತಲೆಯನ್ನು ತೊಡೆಯಮೇಲಿಟ್ಟುಕೊಂಡು ಕುಡಿಸಿದ್ದೆ. ಕುಡಿಸುತ್ತಿರುವಾಗಲೇ ತಲೆಯ ಭಾರ ಪೂರ್ತಿಯಾಗಿ ಕೈಗೆ ಬಿದ್ದಿತ್ತು. ನಾನು ಸಂಶಯದಿಂದ ಸುಬ್ರಾಯಭಟ್ಟರಿಗೆ ಹೇಳಿದೆ. ಅವರು ಪಲ್ಸ್ ನೋಡಿದ್ದೇ, ಪಲ್ಸ್ ಸಿಗ್ತಾ ಇಲ್ಲ. ನಾವು ಕೂಡ್ಲೆ ಆಸ್ಪತ್ರೆಗೆ ಕರ್ಕೊಂಡು ಹೋಗುವಾ. ಕಾರ್ ಸ್ಟಾರ್ಟ್ ಮಾಡಿ ಅಂದುಬಿಟ್ಟರು. ಅಷ್ಟು ಹೊತ್ತು ಪರಿಸ್ಥಿತಿಯ ಗಂಭೀರತೆಯ ಅರಿವಾಗಿರದಿದ್ದ ಅಮ್ಮ, ನೀವು ಎಂತ ಹೇಳಿದ್ದು ಡಾಕ್ಟ್ರೆ. ಪಲ್ಸ್ ಸಿಗ್ತಾ ಇಲ್ವಾ ಅನ್ನುತ್ತ ಓಡಿ ಬಂದಿದ್ದರು.
ನಾನು, ನಂಗೆ ಕೈ-ಕಾಲು ನಡ್ಗ್ತಿದೆ ಡಾಕ್ಟ್ರೆ. ಕಾರ್ ಡ್ರೈವಿಂಗ್ ಸಾಧ್ಯ ಇಲ್ಲ ಅಂದಾಗ ಸುಬ್ರಾಯ ಭಟ್ರೇ ನನ್ನ ಕಾರ್ ಸ್ಟಾರ್ಟ್ ಮಾಡಿ ಬೇಗ ಬನ್ನಿ ಅಂದರು. ಅಮ್ಮನಿಗೂ ಚಿಕ್ಕಮ್ಮನಿಗೂ ಧೈರ್ಯ ಹೇಳಿ ನಾನು ಅಣ್ಣನನ್ನು ಮಲಗಿಸಿಕೊಂಡು ಹಿಂದಿನ ಸೀಟಿನಲ್ಲಿ ಕುಳಿತಿದ್ದೆ. ಪ್ರಭ ಮುಂದಿನ ಸೀಟಿನಲ್ಲಿ ಕುಳಿತಿದ್ದಳು. ಅಣ್ಣ ಹೇಳಿದಂತೆಯೇ ಅಕ್ಷರಶಃ ಸಾಧಿಸಿಬಿಟ್ಟರು, ಅವರು ಅವರ ಮಗನ ಮಡಿಲಲ್ಲೇ ಕೊನೆಯುಸಿರು ಎಳೆದಾಯಿತು ಅನ್ನುವ ಸತ್ಯಕ್ಕೆ ಸಿದ್ಧನಾಗುವ ಮೊದಲೇ ಅದು ನಡೆದಾಗಿತ್ತು. ಅಣ್ಣ ಹಿಂದೊಮ್ಮೆ ನನಗೆ ಒಂದೇ ಒಂದು ದಿನವೂ ಯಾರಿಂದಲೂ ಮಲ-ಮೂತ್ರ ಎತ್ತಿಸಿಕೊಳ್ಳದಂತಹ ಸಾವು ಬೇಕು ಮಗಾ ಅಂದಿದ್ದರು. ಆಗ ನಾವು ಹಾಗಾದ್ರೆ ಅಣ್ಣ ಸಯನೈಡ್ ನುಂಗಬೇಕಷ್ಟೆ ಎಂದು ತಮಾಷೆ ಮಾಡಿದ್ದಿತ್ತು. ಆಗ ಅಣ್ಣ ಕೆಲವೊಮ್ಮೆ ಸಯನೈಡಿನ ಡೋಸು ಹೆಚ್ಚಾಗಿ ಅಲ್ಲೆ ಮಲ-ಮೂತ್ರ ವಿಸರ್ಜನೆಯಾದೀತೇನೊ ಅನ್ನುತ್ತ ನಕ್ಕಿದ್ದರು.
ಅಜ್ಜ ತೀರಿ ಹೋಗಿದ್ದೂ ಜುಲೈ 23 ರ ಮಧ್ಯಾಹ್ನ 2.45ಕ್ಕೇ. ಆಸ್ಪತ್ರೆಯತ್ತ ಕಾರ್ ಹೋಗುತ್ತಿತ್ತು. ಸತ್ಯ ಒಳ ಮನಸಿಗೆ ಗೊತ್ತಾಗಿದ್ದರೂ ಒಪ್ಪಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಆ ಹೊತ್ತಿಗೆ ನನಗೆ ಒಮ್ಮೆ ಗಾಂಧೀಜಿಯ ಆತ್ಮಕಥೆ ನೆನಪಾದರೆ ಮತ್ತೊಮ್ಮೆ ಅಣ್ಣ ಇಷ್ಟ ಪಡುತ್ತಿದ್ದ ಹಿಂದೀಗೀತೆಗಳು ಕಿವಿಯೊಳಗೆ ಗುಂಯ್ಗುಡುತ್ತಿತ್ತು. ಅಣ್ಣನ ಬಳಿ ನಾನೊಮ್ಮೆ ಕೇಳಿದ್ದೆ, ಅಜ್ಜನ ಸಾವಿನ ನಂತರ ನೀವು ಅತ್ಯಂತ ಕಂಗಾಲಾದ, ನಿಮಗೆ ಬಾಯಿ ಕಟ್ಟಿ ಹೋದ ಸಂದರ್ಭವಿದೆಯೇ ಎಂದು. ಆಗ ಅಣ್ಣ ಹೇಳಿದ್ದರು, ಅವರಿಗಿಂತ ಆರೇಳು ವರ್ಷಕ್ಕೆ ಕಿರಿಯರಾದ ಅವರ ಬಂಧುವೊಬ್ಬರ ವಯಸ್ಸಿಗೆ ಬಂದ ಮಗ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ತೀರಿಕೊಂಡಾಗ ಆ ಗೆಳೆಯನನ್ನು ನೋಡಲು ಅಣ್ಣ ಹೋಗಿದ್ದರಂತೆ. ಆಗ ಆ ಗೆಳೆಯ ಅಣ್ಣನ ಹೆಗಲು ಹಿಡಿದು ಅವನ ಹೆಗಲಲ್ಲಿ ನಾನು ಹೋಗಬೇಕಿತ್ತು ವ್ಯಾಸ. ಆದರೆ ನನ್ನ ಹೆಗಲಲ್ಲಿ ಅವನು ಹೋಗುವಂತಾಯ್ತಲ್ಲ ಅನ್ನುತ್ತ ದುಃಖಿಸುವಾಗ ನಾನು ಕಂಗಾಲಾಗಿದ್ದೆ ಮಗ. ನಂಗೆ ಸಮಾಧಾನ ಮಾಡಲೂ ಬಾಯಿ ಬರಲಿಲ್ಲ ಅಂದಿದ್ದರು. ಅಣ್ಣನ ಆ ಗೆಳೆಯರು ಅಣ್ಣನ ಹೊಸ ಕಥೆ ಬರಲು ತುಂಬ ತಡವಾದರೆ ನಿಮ್ಮ ಬತ್ತಳಿಕೆ ಬರಿದಾಗಿ ಹೋಯ್ತ ಭಾವ ಅಂತ ಕೇಳುತ್ತಿದ್ದರು. ಏನೇನೊ ಅಸಂಬದ್ಧಗಳೆಲ್ಲ ತಲೆಯೊಳಗೆ ಮಿಂಚಿ ಹೋಗುತ್ತಿರುವಾಗಲೇ ನಾನು ಶುಭಚಿತ್ತನಿಗೆ ಫೋನ್ ಮಾಡಿ ಆಸ್ಪತ್ರೆಗೆ ಹೋಗುತ್ತಿರುವುದನ್ನು ಹೇಳಿದೆ. ಹಾಗೆಯೇ ಸುಕುಮಾರ ಚಿತ್ತನಿಗೂ ಹೇಳಿದ್ದೆ. ಅವರಿಬ್ಬರೂ ನಾನು ಆಸ್ಪತ್ರೆ ತಲುಪಿ ಸ್ವಲ್ಪ ಹೊತ್ತಲ್ಲೇ ಅಲ್ಲಿಗೆ ಬಂದಿದ್ದರು. ಆ ಸಮಯದಲ್ಲಿ ದೊಡ್ಡ ತಂಗಿ ಕೃಪಾ ಬೆಂಗಳೂರು ಪ್ರವಾಸದಲ್ಲಿದ್ದಳು. ಸಣ್ಣ ಚಿಕ್ಕಪ್ಪನಿಗೆ ಫೋನ್ ಮಾಡುವಾಗ ಅಣ್ಣ ಹೋದ್ರುಅಂತಲೇ ನನ್ನ ಬಾಯಿಯಿಂದ ಬಂದಿದ್ದು. ಅವರು ಕೂಡಲೆ ಎಲ್ಲಿಗೆ ಹೋಗಿದಾನೆ? ಅಂತ ಕೇಳಿದಾಗಲೇ ನಾನು ಅಣ್ಣನ ಸಾವಿನ ಸುದ್ದಿಯನ್ನು ಹೇಳಿಬಿಟ್ಟೆ ಅಂತ ನನಗೆ ಗೊತ್ತಾಗಿದ್ದು.
ಆಸ್ಪತ್ರೆಯಿಂದ ಪುನಃ ಹಿಂದೆ ಬರುವಾಗ ಅಣ್ಣ(ಶರೀರದೊಂದಿಗೆ)ನೊಂದಿಗೆ ಅಂಬುಲೆನ್ಸ್ನಲ್ಲಿ ಕುಳಿತಿದ್ದಾಗ; ಮನೆಯಲ್ಲಿ ಅವರನ್ನು ಮಲಗಿಸಿದಾಗ ಅವರ ಕಾಲ ಬುಡದಲ್ಲಿ ಕುಳಿತಿದ್ದ ನನಗೆ ಯಾವುದೇ ಕ್ಷಣದಲ್ಲಾದರೂ ಮೂಚರ್ೆಯಿಂದೆದ್ದಂತೆ ಅಣ್ಣ ಏಳಬಹುದೇನೋ ಅನ್ನುವ ಭ್ರಮೆ. ಅಣ್ಣ ಹೀಗೆ ಸುಮ್ಮನೆ ಎಂತದೂ ಇಲ್ಲದೆ ಮಲಗಿದವರೇ ಅಲ್ಲ. ಒಂದೊ ಪದ್ಯ ಕೇಳುತ್ತಿದ್ದರು. ಇಲ್ಲಾ ಓದುತ್ತಿದ್ದರು. ಅಲ್ಲದಿದ್ದರೆ ಬರೆಯುತ್ತಿದ್ದರು. ಯಾವುದೂ ಅಲ್ಲದಿದ್ದರೂ ಕತ್ತಿ ಹಿಡಿದು ತೋಟದಲ್ಲಿ ಏನಾದರೂ ಕೆಲಸ ಮಾಡುತ್ತಿರಬೇಕು. ಅಣ್ಣನ ಇಷ್ಟದ ಹಾಡನ್ನು ಕಿವಿಯಲ್ಲಿ ಹೇಳಿದರೆ ಎದ್ದು ಕುಳಿತುಕೊಳ್ಳಬಹುದೇನೊ ಅನಿಸುತ್ತಿತ್ತು. ಅಣ್ಣ ಮನಸ್ಸಿಗೆ ತುಂಬ ಬೇಸರವಾದಾಗ ಅಂದರೆ ಸಣ್ಣ ಪ್ರಾಯದಲ್ಲೇ ತೀರಿ ಹೋದ ಅವರ ತಂಗಿಯ ನೆನಪಾದಾಗಲೊ ಅಥವಾ ಬೇರೆ ಯಾವುದೊ ಕಾರಣದಿಂದ ದುಃಖವಾದಾಗಲೊ ರಾತ್ರಿ ಮಲಗುವ ಮೊದಲು ಜಗಲಿಯಲ್ಲಿ ಕತ್ತಲಲ್ಲಿ ಕುಳಿತು ರಫಿಯ ದುಃಖ ಗೀತೆಗಳನ್ನು ಕೇಳುತ್ತಿದ್ದರು. ಆ ಸಮಯದಲ್ಲಿ ಅಮ್ಮನೂ ಮೌನವಾಗಿ ಅಲ್ಲೇ ಸಮೀಪದಲ್ಲಿ ಕುಳಿತಿರುವುದನ್ನ ಅವರು ಬಯಸುತ್ತಿದ್ದರು. ಅಂಬುಲೆನ್ಸಿನಿಂದ ಅಣ್ಣನನ್ನು ಇಳಿಸಿ ಜಗಲಿಯಲ್ಲಿ ಮಲಗಿಸಿದ್ದಷ್ಟು ಹೊತ್ತು ಅಮ್ಮ ಅಣ್ಣನ ತಲೆಯ ಬುಡದಲ್ಲಿ ಕುಳಿತಿದ್ದರು.
ವರ್ಷ ನಲ್ವತೈದು ದಾಟಿದ್ದರೂ ಅಣ್ಣನ ನೆರಳು ಯಾವ ಕ್ಷಣದಲ್ಲು ತಪ್ಪಿ ಹೋಗಬಹುದೆಂಬ ವಾಸ್ತವದ ಯೋಚನೆಯನ್ನು ಒಮ್ಮೆಯೂ ಮಾಡಿರದಿದ್ದ ನಾನು ಅಣ್ಣ ಅಚಾನಕ್ಕಾಗಿ ಹೊರಿಸಿದ ಜವಾಬ್ದಾರಿಯನ್ನು ಪ್ರಜ್ಞಾ ಪೂರ್ವಕ ನಿರ್ವಹಿಸಿದ್ದಲ್ಲ. ಎಲ್ಲವೂ ಒಟ್ರಾಸಿ ಆಗುತ್ತಾ ಹೋಯಿತು. ಗದ್ದೆ ಹುಣಿಯಲ್ಲಿ ನಡೆಯುತ್ತ ನಾನಿಲ್ಲದಿದ್ದರೂ ನೀನು ಹೀಗೆ ಧೈರ್ಯವಾಗಿ ನಡಿತೀಯ ಮಗಾ ಅಂತ ಅಣ್ಣ ನನ್ನ ಬಾಲ್ಯದಲ್ಲಿ ಕೇಳಿದ್ದರು. ಒಳಗೊಳಗೆ ಹೆದರಿಕೆಯಾಗಿದ್ದರೂ ಅಪ್ಪ ಎಲ್ಲಿಗಾದರೂ ಹೋದಾಗ ಅಲ್ವಾ ಆವಾಗ ನೋಡುವಾಂತೆ ಅಂದುಕೊಂಡು ನನಗೆಂತ ಹೆದರಿಕೆಯಾ? ಅಂತ ಗತ್ತಿನಲ್ಲಿ ತಲೆ ಆಡಿಸಿ ಹೇಳಿದ್ದೆ. ಅಣ್ಣ ನಿಂತು ನನ್ನ ಮುಖ ನೋಡಿ ಸಣ್ಣಗೆ ನಕ್ಕಿದ್ದರು. ಆಗ ನಾನು ಆರೇಳು ವರ್ಷದ ಹುಡುಗ. ಆಗಷ್ಟೆ ನೆಟ್ಟಿಯಾದ ಗದ್ದೆಗೆ ನೀರು ಸರಿಯಾಗಿ ಹಾಯುತ್ತಿದೆಯೊ ನೋಡಲು ಅಣ್ಣ ದಿನಾ ಬೆಳಗ್ಗೆ ಅಮ್ಮ ಪರಂಚಿಕೊಳ್ಳುತ್ತಿದ್ದರೂ ಕಿವಿಗೆ ಹಾಕಿಕೊಳ್ಳದೆ ಗದ್ದೆಗೆ ಹೋಗುವಾಗ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಗದ್ದೆ ಹುಣಿಯಲ್ಲಿ ನಡೆಯುವಾಗ ಅಣ್ಣ ನನ್ನ ಕೈ ಹಿಡಿದಿರುತ್ತಿದ್ದರು. ಕೆಲವೊಮ್ಮೆ ಅವರು ಅಕಸ್ಮಾತ್ತಾಗಿ ಕಪ್ಪೆಯನ್ನೊ ಸಣ್ಣ ಸಣ್ಣ ಕೀಟಗಳನ್ನೊ ಮೆಟ್ಟಿಬಿಟ್ಟರೆ ಅಥವಾ ಕೇರೆಯೊ ಹಸಿರು ಹಾವೊ ಸರಕ್ಕನೆ ಹರಿದು ಹೋದರೆ ತಟ್ಟನೆ ಕಾಲು ಎತ್ತಿಟ್ಟು ನನ್ನ ಕೈಯನ್ನು ಬಿಗಿಯಾಗಿ ಹಿಡಿದು ನಿಲ್ಲಿಸುತ್ತಿದ್ದರು. ಗದ್ದೆಯಿಂದ ಗದ್ದೆಗೆ ಹೋಗುವಾಗ ಮಧ್ಯೆ ಇರುವ ಗುಡ್ಡೆಯಲ್ಲಿ ಎತ್ತರೆತ್ತರ ಹುಲ್ಲು ಬೆಳೆದು ನಮ್ಮ ಮೊಣಕಾಲುಗಳವರೆಗೂ ಅದರ ಸೂಂಗು ಅಂಟಿಕೊಳ್ಳುತ್ತಿತ್ತು. ಗುಡ್ಡೆ ದಾಟಿ ಗದ್ದೆಹುಣಿಗೆ ಬಂದೊಡನೆ ನನ್ನ ಕಾಲುಗಳಿಂದ ಅದನ್ನೆಲ್ಲ ಉದುರಿಸಲು ಅಣ್ಣನೂ ಸಹಾಯ ಮಾಡುತ್ತಿದ್ದರು. ಹಾಗೆ ಮಾಡುವಾಗಲೇ ಅಣ್ಣ ಕೇಳಿದ ಪ್ರಶ್ನೆಯಾಗಿತ್ತು ಅದು. ಆ ಮಾತಿನ ಗೂಢಾರ್ಥ ನನಗೆ ಅರ್ಥವಾಗಿದ್ದು ಅಣ್ಣನ ಸಾವು ಎದುರು ನಿಂತಾಗಲೇ.
ಅಣ್ಣನ ಚಿತೆಗೆ ಕೊಳ್ಳಿ ಇಡುವಾಗ ನನ್ನ ಕಿವಿಗೆ ಕೇಳುತ್ತಿದ್ದುದು ಅವರ ಪ್ರೀತಿಯ ಹಾಡು `ಪ್ಯಾಸಾ’ ಸಿನೆಮಾದಲ್ಲಿ ಗೀತಾದತ್ತ್ ಹಾಡಿದ;
ಜಾನೆ ಕ್ಯಾ ತೂನೇ ಕಹಿ..
ಜಾನೇ ಕ್ಯಾ ಮಯಿನೇ ಸುನೀ..
ಬಾತ್ ಕುಚ್ ಬನ್ ಹೀ ಗಯೀ..
ಸನ್ ಸನಾ..
ಲಿರಿಕ್ಸ್ ತಪ್ಪಾದರೆ ಅಣ್ಣನಿಗೆ ಕಿರಿಕಿರಿಯಾಗುತ್ತಿತ್ತು.
ಅಣ್ಣನನ್ನು ಚಿತೆಗೇರಿಸಿ ಅಣ್ಣನಿಲ್ಲದ ಅಣ್ಣನ ದೇವರಗುಡಿಯಾಗಿದ್ದ ಕೃಪಾನಿಧಿ ಹೊಕ್ಕಾಗ ಈ ನಲ್ವತೈದು ವರ್ಷದ ನಾನು ಅನಾಥನಾಗಿದ್ದೆ.
ಪುಸ್ತಕ: ಅರ್ಧ ಕಥಾನಕ(ಮಗ ತೇಜಸ್ವಿ ನೆನಪಿನಲ್ಲಿ ಹುಟ್ಟಿದ ಎಮ್.ವ್ಯಾಸ)
ಲೇಖಕಿ: ಅನುಪಮಾ ಪ್ರಸಾದ್.
ಲೋಹಿಯಾ ಪ್ರಕಾಶನ
 

‍ಲೇಖಕರು G

July 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಕಲಾವತಿ.ಎಸ್

    ಬಹಳ ಆಪ್ತವಾದ ಬರಹ. ಪ್ರತಿ ವಾಕ್ಯವನ್ನೂ ಎರೆಡೆರಡು ಬಾರಿ ಓದಿದರೂ ಎಲ್ಲೋ ತಪ್ಪಿಸಿಬಿಟ್ಟೆನೆಂಬ ಭಾವ. ಮೊಗೆದಷ್ಟೂ ಸಿಗುವ, ಎಂದೂ ಬರಿದಾಗದ ನೆನಪಿನಾಳಕ್ಕೆ ಜಾರಿದ್ದೆ….. ನನ್ನಪ್ಪನ ನೆನೆದು. ಪುಸ್ತಕ ಖಂಡಿತಾ ಓದಬೇಕೆನಿಸಿದೆ.

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ
  3. Praveen V Savadi

    ಒಡನಾಟಗಳೆ ಹಾಗೆಏನೋ.. ಸಂಬಂಧಗಳ ನಡುವೆ ಆತ್ಮೀಯತೆ ಇದ್ದರಂತೂ, ಒಬ್ಬರ ಚಿರ ಅನುಪಸ್ತಿತಿಯಲ್ಲಿ ಇನ್ನೊಬ್ಬರಿಗೆ ಆ ಒಡನಾಟಗಳು ನೆನಪಿನಂಗಳದಲ್ಲಿ ಉಪಸ್ಥಿತವಾಗುತ್ತವೆ… ಹಾಗೆ ತೇಜಸ್ವಿ ಯವರಿಗೆ ವ್ಯಾಸರ ನೆನಪುಗಳು… ಹಾಗೆ ಇತರರಿಗೆ ಇಂತಹ ತಮ್ಮ ತಮ್ಮವರ ಸಂಬಂಧಗಳ ಒಡನಾಟಗಳನ್ನ ನೆನೆಯುವಂತಹ ಬರಹವಿದು… ಇಡೀ ಘಟನೆಯನ್ನ ಚಿತ್ರಿಸಿದ ಬರಹ… ಬರಹದಲ್ಲಿ ಕೆಲವೊಂದು ವಸ್ತುಗಳ ಪಾತ್ರವನ್ನ ನೋಡಿ.. ಗೀರಿದ ಕಡ್ಡಿಯಾಗಲಿ, ಬಿಸಿನೀರಾಗಲಿ, ಚಿನ್ನವಾಗಲಿ, ಒಮ್ಮೆ ಅವುಗಳ ಉಪಯೋಗ ಕುಶಿ ನೀಡಿದರೆ ಪ್ರತಿಯಾಗಿ ನೀಡುವಾಗ ದುಃಖದ ಅನಿವಾರ್ಯತೆಯ ಸಂದರ್ಭ ಇದು ಘಟನೆಯ ಮತ್ತು ನಿರೂಪಣೆಯ ಉತ್ತುಂಗತೆ… “ಅರ್ಧ ಕಥಾನಕ” ವನ್ನ ಪೂರ್ತಿಯಾಗಿ ಓದುತ್ತೇನೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: