ಮೋಹಿಸುವಂತಿದೆ ‘ವರ್ಜಿನ್ ಮೊಹಿತೊ’

ಸಂತೋಷ್ ಅನಂತಪುರ

ಹದಿನೆಂಟು ವರ್ಷಗಳ ವನವಾಸದ ಬಳಿಕ ಬರಹಗಾರನೊಬ್ಬನಿಗೆ ಪುಟಿದೇಳುವುದು ಸುಲಭದ ವಿಚಾರವಲ್ಲ. ಬರೆಯಲಾಗದ ಬದುಕಿನ ಕ್ಷಣಗಳಲ್ಲಿ ಸತ್ತೇ ಹೋಗಬಾರದೇಕೆಂದು ಅನಿಸುವಷ್ಟು ಜಿಗುಪ್ಸೆ, ವೇದನೆಗಳು ಹೊಮ್ಮುವುದೂ ಉಂಟು. ಅದೆಲ್ಲವನ್ನೂ ಮೀರಿ ಸತೀಶ್ ಚಪ್ಪರಿಕೆ ಅವರು ಎಂಟು ಉತ್ತಮ ಕತೆಗಳ ಗುಚ್ಚ- ‘ವರ್ಜಿನ್ ಮೊಹಿತೊ’ವನ್ನುನೀಡಿದ್ದಾರೆ.

‘ವರ್ಜಿನ್ ಮೊಹಿತೊ’ವನ್ನು ಓದಿ ಮುಗಿಸಿದ ಹೊತ್ತಲ್ಲಿ ಪುಸ್ತಕ ಅನಾವರಣದ ಕುರಿತಾಗಿ ಚರ್ಚಿಸಿದ್ದೆಲ್ಲವೂ ಮುನ್ನೆಲೆಗೆ ಬಂದವು. ಆ ನೆನಪಿನ ಎಳೆಯನ್ನು ಹಿಡಿದುಕೊಂಡು ಪುಟ ಬಿಡಿಸಿದರೆ… ತಿರುವಿ ಕೊನೆಗೊಂಡಿದ್ದೇ ಅರಿವೆಗೆ ಬರಲಿಲ್ಲ. ಆಷಾಢದ ಮಳೆಯು ಸಾಮಾನ್ಯವಾಗಿ ಹಲವು ಅವಾಂತರಗಳನ್ನುತಂದರೆ, ಸತೀಶರ ಪಾಲಿಗೆ ಮಾತ್ರ ಅದು ವರವಾಗಿ ಪರಿಣಮಿಸಿದ್ದನ್ನು ‘ವರ್ಜಿನ್ ಮೊಹಿತೊ’ದಲ್ಲಿನ ಕಥೆಗಳು ಹೇಳುತ್ತವೆ. ಒಂದಿರುಳ ಮಳೆಗೆ ಎಲ್ಲವೂ ಕೊಚ್ಚಿ ಹೋದಂತೆ.. ಹಂದಿನೆಂಟು ವರುಷಗಳ ದೀರ್ಘ ಮೌನವನ್ನು ಸತೀಶ್ ಒಡೆದುಬಿಟ್ಟಿದ್ದಾರೆ.

ಭಾವನೆಗಳನ್ನೇ ಜೀವಾಳವಾಗಿಸಿಕೊಂಡು ಹೆಣೆದ ಕತೆಗಳು- ಜಂಜಡದ ಬಾಳಿನಿಂದ ಬೇರೆಯೇ ಲೋಕಕ್ಕೆ ಓದುಗರನ್ನು ಒಯ್ಯುತ್ತದೆ. ಕೆಲವು ಕತೆಗಳು ಆಧುನಿಕ ಬದುಕಿನ ಮನಸ್ಥಿತಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿವೆ. ಅಂತೆಯೇ ಕರುಳು ಚುರುಗುಟ್ಟಿಸುವಂತಹ, ಈ ಮಣ್ಣಿನ ಸುಗಂಧಭರಿತ ಕತೆಗಳೂ ಇಲ್ಲಿವೆ. ಮೂಲ ಸೆಲೆಯನ್ನು ಜತೆಗಿರಿಸಿಕೊಂಡು ಆಧುನಿಕ ಜಗತ್ತಿಗೆ ತೆರೆದುಕೊಳ್ಳುವ ಬಗೆ ಕತೆಗಳಲ್ಲಿ ಕಾಣುತ್ತೇವೆ. ಪ್ರಸಕ್ತ ಬದುಕಿನ ಝಲಕುಗಳ ಜೊತೆಗೆ ರಮ್ಯತೆಯನ್ನೂ ಬೆರೆಸಿ ಹಕೀಕತ್ ಅನ್ನಾಗಿಸಿದ ಹೆಚ್ಚುಗಾರಿಕೆ ಸತೀಶರದ್ದು. ಕುದಿ ಕುದಿದು ರೂಪುಗೊಂಡ ಕತೆಗಳು ಇಲ್ಲಿವೆ. ಅನುಭವದ ಮೂಸೆಯಲ್ಲಿ ಸೋಸಿ ತೆಗೆದಂತಿರುವ ಕತೆಗಳಲ್ಲಿ ನಗರ ಜೀವನಕ್ರಮದೊಳಗಿನ ವೈಪರೀತ್ಯಗಳನ್ನು ಮುಚ್ಚುಮರೆಯಿಲ್ಲದೆ ಹೇಳಿದ ರೀತಿ ಇಷ್ಟವಾಗುತ್ತದೆ.

ಅವಸರ, ಅನುಕೂಲ ಮತ್ತು ಹಲವು ಅತಿ ರುಚಿಗಳಿಂದ ಕೂಡಿದ ಇಂದಿನ ಜೀವನ ಶೈಲಿಯನ್ನು ಅಪ್ಪಿಕೊಳ್ಳುತ್ತಲೇ ಮೂಲಭಾವನೆಗಳನ್ನು ಬಿಟ್ಟುಕೊಡದ ಮನಸ್ಥಿತಿಯನ್ನೂ ಕಾಣಬಹುದು. ಬಿಟ್ಟೆನೆಂದರೂ ಮೂಲದ ಸೆಲೆ ಇವರನ್ನು ಸುಲಭದಲ್ಲಿ ಬಿಡುವುದಿಲ್ಲ. ಹರಿದು ಉರುಳುವ ಬೇರುಗಳು ಇವರೊಳಗೆ ಇಳಿದ ಪರಿಣಾಮ ಯಾತನೆಯ ಕ್ಷಣಗಳಲ್ಲಿ ಮೂಡುವ ಆರ್ದ್ರತೆಯನ್ನು ಕತೆಗಳಲ್ಲಿ ಅನುಭವಿಸಲು ಸಾಧ್ಯವಾಗುತ್ತದೆ. ಕತೆಯುದ್ದಕ್ಕೂ ಜೊತೆಯಲ್ಲೇ ಅನುಭವಗಳು ನೆರಳಾಗಿ ಸಾಗುತ್ತವೆ.

ಅನುಭವಕ್ಕೆ ದಕ್ಕದ್ದನ್ನು ಬಲವಂತದಿಂದ ದಕ್ಕಿಸಿಕೊಳ್ಳುವ ಸಾಹಸಕ್ಕೆ ಎಲ್ಲೂ ಮುಂದಾಗುವುದಿಲ್ಲ. ದಕ್ಕಿದ್ದಷ್ಟನ್ನು ಜೋಳಿಗೆಯಲ್ಲಿ ಇರಿಸಿದ ಅನುಭವಗಳು ತಮ್ಮ ಸರದಿಗಾಗಿ ಕಾಯುತ್ತಿರುತ್ತವೆ. ಬಲು ಎಚ್ಚರದಿಂದ ಅಂತಹ ಅನುಭವಗಳನ್ನು ಇಲ್ಲಿ ಆರಿಸಿಕೊಂಡಿದ್ದಾರೆ. ಹೆಜ್ಜೆಹೆಜ್ಜೆಗಳಲ್ಲಿ ಮೂಡುವ ಬದುಕಿನ ಸಂಘರ್ಷಗಳನ್ನು ಸದ್ದಿಲ್ಲದೆ ಇಲ್ಲಿನ ಕತೆಗಳು ದಾಟಿಸಿ ಬಿಡುತ್ತವೆ. ಕುಂದ ಕನ್ನಡದ ಇಂಪನ್ನೂ ಉಣಿಸುತ್ತಾ.. ಕುಂದಾಪ್ರ ಮಣ್ಣಿನ ಗಂಧವನ್ನೂ ತೇಲಿಸಿ.. ತಾವು ನಡೆದು ಬಂದ ಹಾದಿಯನ್ನು ತೆರೆದಿರಿಸುತ್ತಾರೆ. ಹುಟ್ಟಿದೂರಿನ, ಬೆಳೆದ ಪರಿಸರದ ಮಣ್ಣಿನ ದಟ್ಟ ಘಮಲು ಕತೆ ತುಂಬಾ ಹಬ್ಬಿಕೊಂಡು ಮೂಲ ಬೇರಿಂದ ಸುಲಭದಲ್ಲಿ ಕಳಚಿಕೊಳ್ಳಲಾಗವುದಿಲ್ಲ ಎನ್ನುವುದನ್ನು ಒಟ್ಟು ಕಥೆಯು ಮನದಟ್ಟು ಮಾಡಿಕೊಡುತ್ತದೆ.

ಎಲ್ಲವನ್ನು, ಎಲ್ಲದರಿಂದಲೂ ಕಳಚಿಕೊಳ್ಳುತ್ತಲೇ ನಿರಾಳವಾಗಿಬಿಡುವ ನಿರುಮ್ಮಳ ಯೋಚನೆಯು ಹರಿದು ಹೋದಷ್ಟೇ ವೇಗದಲ್ಲಿ, ಥಟ್ಟನೆ ಮತ್ತೆ ಬಂಧದ ಚಿಪ್ಪೊಳಗೆ ಬಂದು ಸೇರುವ ತವಕವನ್ನೂ ಕಾಣಬಹುದು. ಕಟ್ಟಿಕೂತ ಹರಿಯದ ಭಾವವಿಕಾರಗಳನ್ನು ಹುಚ್ಚೆದ್ದು ಓತಪ್ರೋತವಾಗಿ ಹರಿಯಲು ಬಿಡದೆ ಕಣ್ಣೀರ ಹನಿಗಳಾಗಿಸಿ ಅವುಗಳಿಗೆ ಆಕಾರ ನೀಡಿ ಸಮಾಧಾನಪಟ್ಟುಕೊಳ್ಳುವ.. ಬೆನ್ನಿಗೇರಿದ ಸಮಸ್ಯೆಗಳು ತಂದೊಡ್ಡುವ ನೋವುಗಳನ್ನು ಅದುಮಿಟ್ಟುಕೊಳ್ಳಲಾಗದ ಕ್ಷಣಗಳಲ್ಲಿ ಅತ್ತು ಹಗುರ ಆಗುವುದು- ನಮ್ಮನ್ನು ನಮಗೆ ಸಂತೈಸಿಕೊಳ್ಳಲಿಕ್ಕಿರುವ ಏಕೈಕ ವಿಧಾನ ಎನ್ನುವುದನ್ನು ಅವರ ‘ಮೂರು ಮುಖಗಳು’ ಕತೆಯು ಹೇಳುತ್ತದೆ.

ಕಣ್ಣೀರಾಗುವುದು ಹೆಪ್ಪುಗಟ್ಟಿದ ನೋವುಗಳಿಗೆ ಒದಗುವ ಮುಕ್ತಿ ಮಾರ್ಗ. ಹಾಗಾಗಿ ಸುಖ-ದುಃಖಗಳಿಗೆ ಹನಿಯುವ ಕಂಬನಿಗಳಿಗೆ ಗಂಡು-ಹೆಣ್ಣು ಎಂಬ ಲಿಂಗದ ಹೊದಿಕೆ ಇಲ್ಲ. ಒಳಭಾವನೆಯ ಅಳು… ನೊಂದ ಹೃದಯದ ಅಳು..ಅಳುತ್ತಲೇ ದೇಹ-ಮನಸ್ಸನ್ನು ಹಗುರವಾಗಿಸುತ್ತಿರು… ಎನ್ನುವ ಭಾವುಕ ಅಂಶವು ಕತೆಯ ನಿಜದ ಉಸಿರು.

ಕರಿಯರ್‌ ಬಗ್ಗೆ ತೋರುವ ಪ್ರಾಮುಖ್ಯತೆಯು ಸೃಷ್ಟಿಸುವ ಉನ್ಮಾದವು ಮದುವೆಯಂತಹ ಬಂಧನದೊಳಗೆ ಸಿಲುಕಲು ಇಷ್ಟಪಡದಂತೆ ಮಾಡಿ ಬಿಡುತ್ತದೆ. ಅಂತಹ ಉನ್ಮಾದಕ್ಕೆ ಬಿದ್ದವರ ಸಂಖ್ಯೆ ಹೆಚ್ಛೇ ಇದೆ. ಹೆತ್ತವರ ಒತ್ತಾಯಕ್ಕೆ ಮದುವೆಯ ಬಂಧವನ್ನು ಬೆಸೆದು ಮಗುವನ್ನೂ ಹೆತ್ತು ಬಂಧದಿಂದ ದೂರವಾಗಿ, ಸ್ವತಂತ್ರ ಬಾಳನ್ನು ಬದುಕುತ್ತ.. ಮಗುವನ್ನೂ ಬೆಳೆಸುತ್ತ.. ಕೆರಿಯರ್ ನಲ್ಲಿ ಎತ್ತರಕ್ಕೆ ಏರಿ ತಾವು ಅನಿಸಿಕೊಂಡದ್ದನ್ನು ಸಾಧಿಸಿ ತೋರಿದ ಸಾಧಕರು ಕಾಣಸಿಗುತ್ತಾರೆ.

ತಾಯಿಯ ವಯಸ್ಸಿನ, ಎರಡು ಮಕ್ಕಳೂ ಇರುವ ತನ್ನದೇ ವಯಸ್ಸಿನ ಡಿವೋರ್ಸಿ ವಿದೇಶಿ ಮಹಿಳೆಯನ್ನು ಸೊಸೆಯಾಗಿಸಿಕೊಳ್ಳುವ ಆಧುನಿಕ ಮನಸ್ಸಿನ ಭಾರತೀಯ ತಾಯಿಯ ಗೊಂದಲ ಕತೆಯನ್ನು ಹಿಡಿದಿಡುತ್ತದೆ. ‘ನಿಜವಾದ ಪ್ರೇಮವನ್ನು ಜೀವವಿರುವವರೆಗೆ ಕೊಡವಿಕೊಳ್ಳಲಾಗುವುದಿಲ್ಲ. ಕೇವಲ ಕಾಮವಾಗಿದ್ದರೆ ಕೊಡವಿಕೊಳ್ಳಬಹುದಿತ್ತು’- ಮಗ ಚಿರಂತನ್ ಹೇಳುವ ಮಾತು ತಾಯಿ ವಂದನಾಳನ್ನು ಬೆಚ್ಚಿ ಬೀಳಿಸುತ್ತದೆ. ಬದಲಾದ ಕಾಲದೊಳಗೆ ಕಾಮ-ಪ್ರೇಮದ ಕುರಿತಾಗಿ ಇಂದಿನ ಮನಸ್ಸುಗಳು ಯೋಚಿಸುವ ರೀತಿ ಇಲ್ಲಿ ಅನಾವರಣಗೊಂಡಿದೆ. ಅಂತಹ ಮನಸ್ಥಿತಿ ಇರುವ ವ್ಯಕ್ತಿಗೆ ತಾನು ಬಯಸಿದ್ದನ್ನು ಪಡೆಯಲು ವಯಸ್ಸು ಒಂದು ಮಾನದಂಡ ಆಗುವುದಿಲ್ಲ ಎನ್ನುವುದನ್ನು ಚಿರಂತನ್ ಪಾತ್ರದ ಮೂಲಕ ಹೇಳಿಸಿದ್ದಾರೆ.

ದಾಂಪತ್ಯದಲ್ಲಿ ಪ್ರೇಮವನ್ನು ಹೊದೆದ ಕಾಮವು ಇರಬೇಕಾದ್ದರ ಅಗತ್ಯವನ್ನು ‘ವಂದನಾ’ ಪಾತ್ರ ಹೇಳಿ ಹಗುರವಾಗುವ ಕತೆ- ‘ಹೈಡ್ಪಾರ್ಕ್’. ಮನಸ್ಸಿನಲ್ಲಿರುವ ಎಲ್ಲವನ್ನೂ’ಹೈಡ್ಪಾರ್ಕ್’ ಎನ್ನುವ ಉದ್ಯಾನದಲ್ಲಿ ‘ಹೈಡ್’ ಮಾಡದೆ ಹೇಳಿಕೊಳ್ಳಬಹುದು. ಬಂಧ ಬಂಧಗಳು ಒಡೆದು ಕಟ್ಟುವ ಹೊತ್ತಲ್ಲಿ ಕೆಲವೊಂದು ಬಂಧಗಳು ಕೈಬಿಟ್ಟು ಹೋಗುತ್ತವೆಯೋ ಎನ್ನುವ ಆತಂಕದ ತಲ್ಲಣಗಳು ಹುಟ್ಟಿದ ಕ್ಷಣದಲ್ಲಿ ಕಟ್ಟಿಕೊಂಡ ಕತೆ- ‘ಗರ್ಭ’. ಆಸ್ಪತ್ರೆಯ ವಾತಾವರಣ- ಅಲ್ಲಿರುವವರ, ಬರುವವರ ವ್ಯತ್ಯಸ್ತ ಭಾವ ಲೋಕದಲ್ಲಿ ಕಣ್ಣುಗಳೇ ಬಾಯಿಯಾಗಿ ಮಾತನಾಡುತ್ತಿರುತ್ತವೆ. ‘ರೆ’ಗಳ ಸುತ್ತ ಸುತ್ತಿ ಸುತ್ತಿ ಉದ್ವೇಗಗೊಳ್ಳುವ ಮನಸ್ಸು ಹಸಿವೆ-ಸಮಯದ ಪರಿವೆಯೇ ಇಲ್ಲದೆ ಒಳಗೊಳಗೇ ಬಿಕ್ಕುತ್ತಿರುತ್ತದೆ.

ಕರುಳ ಬಳ್ಳಿಯನ್ನು ಕಡಿದುಕೊಂಡು ನಿಂತರೂ, ಕರುಳ ಬಂಧ ಕಡಿಯಲಾಗದ್ದನ್ನು ಕತೆ ಭಾವಪೂರ್ಣವಾಗಿ ಹೇಳುತ್ತದೆ. ಅಮ್ಮ ಎನ್ನುವ ಭಾವುಕತೆಯು ಪ್ರೀತಿ, ಮಮಕಾರಗಳ ಭಂಡಾರವನ್ನು ಹೊತ್ತು ಹೆತ್ತ ಒಡಲು. ಕತೆಯ ಕೊನೆಯಲ್ಲಿ ಬರುವ ಒಂದು ಸಾಲು-‘ನೀ ಸಮಾ ಉಂಡಿದ್ಯಾ ಮಗಾ’- ಎನ್ನುವ ಅಮ್ಮನ ಮಾತು ಓದುವ ಕಣ್ಣುಗಳನ್ನು ಹನಿಸಿಬಿಡುತ್ತವೆ. ಹೃದಯ-ಮನಸ್ಸುಗಳು ಅರಳುತ್ತಾ-ಕಮರುತ್ತಾ..

ಬದುಕು ಬಿಚ್ಚುತ್ತಾ- ಮುಚ್ಚುತ್ತಾ ಸಾಗುವ ಹಾದಿಯಲ್ಲಿ ಅದೆಷ್ಟು ‘ಕಾಣದ ಕೈಗಳ ಆಟ’ ! ‘ಮೂರು ಮುಖಗಳು’ ಹೊತ್ತುತರುವ ‘ಬೊಂಬಾಯಿ ಪೆಟ್ಟಿಗೆ’, ಅದರ ‘ಗರ್ಭ’ದೊಳಗೆ ಸುಖಿಸುತ್ತಿರುವಾಗಲೇ ‘ಹೈಡ್ಪಾರ್ಕ್’ ನಲ್ಲಿ ಕಳೆದೇ ಹೋಗಿಬಿಟ್ಟೆನೇನೋ ಎಂದನ್ನಿಸುವ ಹೊತ್ತಿಗೆ ‘ದಾಸ’ ಜೊತೆಯಾಗಿ ಬಾಳಿಗೆ ಅರ್ಥ ಬರೆಯುತ್ತಾನೆ. ‘ಆಷಾಢದ ಮಳೆ ಹನಿಗಳಲಿ’ ಮೈ-ಮನಸ್ಸನ್ನು ತೋಯಿಸಿಕೊಳ್ಳುತ್ತಿರುವಾಗಲೇ… ಲೋಕದ ಅನುಭವವನ್ನು ಪಡೆದ ‘ಮಾಯಾ’ ಮತ್ತು ‘ಕಾರ್ತಿಕ್’ ಪರಸ್ಪರ ಬಂಧವನ್ನು ಬೆಸೆಯಲು ಕುಟು೦ಬ ಸಮೇತ ಎದುರಾ ಬದುರಾಗೊಳ್ಳುತ್ತಾರೆ. ಎರಡೂ ಕಡೆಯವರು ಸಾಂಸಾರಿಕ ಸಂಪ್ರದಾಯಸ್ಥರು.

ಹೀಗಿರಲು ಸಮಾಜದಲ್ಲಿ ಬೇರುಬಿಟ್ಟ ಗಂಡಸಿನ ಅಹಂಕಾರದ – ‘ಆರ್ ಯು ವರ್ಜಿನ್?’ ಪ್ರಶ್ನೆಯನ್ನು ಕಾರ್ತಿಕ್ ಕೇಳುವ ಮೂಲಕ ನೈತಿಕವಾಗಿ ಸೋತು ಹೋಗುತ್ತಾನೆ. ಗಂಡಿಗಿಲ್ಲದ ‘ವರ್ಜಿನ್’ ಪ್ರಶ್ನೆ ಹೆಣ್ಣಿಗೆ ಮಾತ್ರ ಯಾಕೆ? ಎಂಬ ಪ್ರಶ್ನೆ ಸಾರ್ವತ್ರಿಕವಾದುದು. ಅಷ್ಟಕ್ಕೂ ವರ್ಜಿನ್ ಆಗಿ ಇರಬೇಕಾದುದು ನಮ್ಮ ಮನಸ್ಸುಗಳು. ಬೆಸೆಯಲಿರುವ ಎರಡು ಹೃದಯಗಳು ರೆಸ್ಟುರಾಗೆ ಹೋದಾಗ: ಹೆಣ್ಣು, ‘ವರ್ಜಿನ್ ಮೊಹಿತೋ ಪ್ಲೀಸ್’- ಎಂದು ಆರ್ಡರ್ ಮಾಡಿದರೆ, ವರ್ಜಿನಿಟಿಯನ್ನು ಕಳಕೊಂಡ ಗಂಡಸಿನ ಮನಸ್ಸು ತಲೆ ತಗ್ಗಿಸುವಂತಿರಬಾರದು.

ಆಧುನಿಕ ಭಾವ ಜಗತ್ತಿನ ಮನಸ್ಸುಗಳ ಆಟವನ್ನು ತೋರಿಸಿದ ಕತೆ – ‘ವರ್ಜಿನ್ ಮೊಹಿತೊ’ – ಕುಡಿಯಬೇಕು ಎಂದೆನಿಸಿಬಿಡುತ್ತದೆ!
ನಿರ್ಭಿಡೆಯಿಂದ ಎಲ್ಲವನ್ನೂ ಕಥಿಸುತ್ತಾ ಸಾಗುವುದು ಇಲ್ಲಿಯ ಕತೆಗಳಲ್ಲಿರುವ ವಿಶೇಷತೆಗಳು. ಒಂದೇ ಉಸಿರಲ್ಲಿ ಓದಿಸಿಕೊಂಡು ಹೋಗುವ ಕಥೆಗಳು, ಓದುವ ಮನಸ್ಸಿಗೆ ಬಿಡುಗಡೆಯ ಅನುಭವನ್ನು ನೀಡುತ್ತವೆ. ನಗರೀಕರಣದ ಬದುಕಲ್ಲಿ ಕಾಣುವ ಆಧುನಿಕ ಸ್ಪರ್ಶಗಳ, ಸಾಂಪ್ರದಾಯಿಕ ಮನಸ್ಸಿನ ಭಾವ ಬಿಸುಪುಗಳ ನಡುವಿನ ಅಂತರವನ್ನು ಬಿಡಿಸಿಡುತ್ತಾ ಎರಡೂ ಧ್ರುವಗಳಲ್ಲಿ ಒಸರುವ ಭಾವ ಹನಿಯು ಬಣ್ಣವಿಲ್ಲದ್ದು ಎನ್ನುವುದನ್ನು ಒತ್ತಿ ಹೇಳುತ್ತಾರೆ.

‘ಇಲ್ಲಿಯವರೆಗೆ ಬರೆದ ಕತೆಗಳು ಬಲವಂತವಾಗಿ ಹಡೆದ ಕೂಸಲ್ಲ. ಅವಾಗಿಯೇ ಬರೆಸಿಕೊಂಡ ತುಣುಕುಗಳು. ಆ ಕಾರಣದಿಂದಲೇ ಕಳೆದ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ನನಗೆ ಇಪ್ಪತ್ತೈದು ಕತೆಗಳನ್ನು ಕೂಡ ಬರೆಯಲು ಸಾಧ್ಯವಾಗದೆ ಇರುವುದು..’ ಎಂದು ಖುದ್ದು ಸತೀಶ್ ಚಪ್ಪರಿಕೆಯವರೇ ಹೇಳುತ್ತಾರೆ.

ಅಂದರೆ ಅವರೊಳಗೆ ಕತೆ ಹುಟ್ಟುವ, ಕಟ್ಟುವ ಬಗೆ ಹೇಗಿರಬಹುದು ಎನ್ನುವುದನ್ನು ಊಹಿಸಬಹುದು. ಅವರೇ ಹೇಳಿಕೊಳ್ಳುವಂತೆ- ‘ಸೃಜನಶೀಲ ಸಂಕಲನದಿಂದ ಸಿಗುವ ಆ ಒಂದು ಕ್ಷಣದ ‘ಆಸುಖ’ ಅನುಭವಿಸಿದವರಿಗೆ ಮಾತ್ರ ಗೊತ್ತು’- ಅಂತಹ ಅನುಭವವು ಇಲ್ಲಿನ ಕತೆಗಳನ್ನು ಓದುವ ಸೃಜನಶೀಲ ಮನಸ್ಸುಗಳಿಗಿರಲಿ.

ಇಷ್ಟವಾಯಿತಲ್ಲ.. ಹಾಗಾಗಿ ಒಂದಷ್ಟು ಇಷ್ಟದ ಮಾತುಗಳು.

‍ಲೇಖಕರು Avadhi

April 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: