ಮೋಸ ಹೋದ ಅವಮಾನವೂ ಸೇರಿಕೊಂಡಿತು..

ಡಾ ಎಸ್ ಬಿ ರವಿಕುಮಾರ್

ಆಸ್ಪತ್ರೆಗೆ ಜಾನುವಾರುಗಳನ್ನು ತಂದು ಚಿಕಿತ್ಸೆ ಕೊಡಿಸಿಕೊಂಡು ಹೋಗುವುದು ಸಾಮಾನ್ಯ ರೂಢಿಯಾದರೂ ಕೆಲವೊಂದು ಬಾರಿ ಜಾನುವಾರು ಬರಲಾರದಷ್ಟು ಸುಸ್ತಾಗಿದೆಯೆಂದು ರೈತರು ನಮ್ಮನ್ನೇ ಹಳ್ಳಿಗಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದುಂಟು. ಅಧಿಕೃತವಾಗಿ ಆ ಆಸ್ಪತ್ರೆಯ ವ್ಯಾಪ್ತಿಗೆ ಹನ್ನೆರಡು ಹಳ್ಳಿಗಳು ಸೇರಿದ್ದರೂ ಪಕ್ಕದ ತಾಲ್ಲೂಕಿನ ಕೆಲವು ಹಳ್ಳಿಗಳಿಂದಲೂ ಜಾನುವಾರುಗಳನ್ನು ಚಿಕಿತ್ಸೆಗೆ ತರುವುದಿತ್ತು.

ಚಿಕಿತ್ಸೆಗೆ ಕರೆ ಬಂದಾಗ ಹತ್ತಿರದ ಗ್ರಾಮವಾದರೆ ಪರವಾಗಿಲ್ಲ, ಹೋಗಿ ಚಿಕಿತ್ಸೆ ನೀಡಿಬರುತ್ತಿದ್ದೆವು. ಆದರೆ ದೂರದ ಹಳ್ಳಿಯವರು ಬಂದು ಚಿಕಿತ್ಸೆಗೆ ಕರೆದಾಗ ಸಮಸ್ಯೆ ಶುರುವಾಗುತ್ತಿತ್ತು. ‘ಹತ್ತಿರದಲ್ಲೇ ಎಲ್ಲಾದರೂ ತೋರಿಸಿ, ಗುಣವಾಗದಿದ್ದರೆ ನೋಡೋಣ’ ಎನ್ನಲು ಹತ್ತಿರದಲ್ಲೆಲ್ಲೂ ಅವರಿಗೆ ಆಸ್ಪತ್ರೆಯೂ ಇರಲಿಲ್ಲ ಯಾವ ಸಿಬ್ಬಂದಿಯೂ ಲಭ್ಯವಿರುತ್ತಿರಲಿಲ್ಲ. ಚಿನ್ಹೆಗಳನ್ನು ಕೇಳಿ ಮಾತ್ರೆ, ಔಷಧಿ ಕೊಟ್ಟು ಕಳಿಸೋಣವೆಂದರೆ ಸೀರಿಯಸ್ ಆಗಿದೆ ಎಂದು ಮಾಲೀಕರು ಒಪ್ಪದೆ ನಾವು ಹೋಗದೇ ಗತ್ಯಂತರವಿರಲಿಲ್ಲ. ಆದರೆ ಚಿಕಿತ್ಸೆ ನೀಡಲು ಹೋಗಿ ಬರುವುದು ಹೇಗೆ? ಆಗೆಲ್ಲಾ ವಾಹನ ಸೌಲಭ್ಯ ತುಂಬಾ ಕಡಿಮೆ. ಹೆಚ್ಚು ಕಡಿಮೆ ಒಂದೂವರೆಯಿಂದ ಎರಡು ಗಂಟೆಗೆ ಒಂದು ಬಸ್ಸು ಓಡಾಡುತ್ತಿತ್ತು.

ಆ ಬಸ್ಸಿನಲ್ಲಿ ಕುಳಿತುಕೊಂಡರೆ ಪ್ರತಿ ಅರ್ಧ ಕಿಲೋಮೀಟರಿಗೊಂದು ಬರುವ ಸ್ಟಾಪ್‍ಗಳಲ್ಲಿ, ಇಳಿಯುವವರಿಗೂ ಬಿಡದೆ ಹತ್ತಲು ಪ್ರಯತ್ನಿಸುವವರು, ಇಳಿಯುವಾಗ ಪ್ರಪಂಚದ ಆಗುಹೋಗುಗಳಿಗೂ ತಮಗೂ ಸಂಬಂಧವಿಲ್ಲವೆನ್ನುವಂತೆ ಸ್ಥಿತಪ್ರಜ್ಞರಾಗಿ ಎಷ್ಟುಸಾಧ್ಯವೋ ಅಷ್ಟು ನಿಧಾನವಾಗಿ ಇಳಿಯುವರು, ಒಟ್ಟಾರೆ ಎಂಟು ಹತ್ತು ಕಿಮೀ ಪ್ರಯಾಣಕ್ಕೆ ಒಂದು ಗಂಟೆಯೇ ಆಗಿಬಿಡುತ್ತಿತ್ತು. ನಂತರ ಅವರ ಮನೆಗೆ ನಡೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಮತ್ತೆ ಬಸ್ಸಿಗೆ ಕಾಯವುದಿದೆಯಲ್ಲ ಅದಕ್ಕಿಂತ ಬೇಸರದ ಸಂಗತಿ ಮತ್ತೊಂದಿಲ್ಲ.

ಕೆಲಸ ಆಗುವುದಕ್ಕಿಂತ ಮುಂಚೆ ಕೇಸು ಯಾವುದಿರಬಹುದೆಂಬ ಕುತೂಹಲದ ಜೊತೆಗೆ ಚಿಕಿತ್ಸೆ ನೀಡುವ ಉಮೇದು ಇರುತ್ತಿತ್ತು. ಆದರೆ ಕೆಲಸ ಆದಮೇಲೆ ಬಸ್ಸಿಗೆ ಕಾಯುವಾಗ ಕಾಲ ಏಕೆ ಇಷ್ಟು ನಿಧಾನವಾಗಿ ಚಲಿಸುತ್ತಿದೆ ಅನ್ನಿಸುತ್ತಿತ್ತು. ಆಸ್ಪತ್ರೆಯಲ್ಲಿ ಕೆಲಸ ಮಾಡಿದಂತಲ್ಲ, ಅಥವಾ ಹಳ್ಳಿಯಲ್ಲಿ ಜಾನುವಾರಿಗೆ ಚಿಕಿತ್ಸೆ ನೀಡಿದಂತಲ್ಲ ರಸ್ತೆಯಲ್ಲಿ ಕಾಲ ವ್ಯರ್ಥವೆಂಬ ಬೇಸರ. ಯಾವುದಾದರೂ ಅರ್ಜೆಂಟು ರಿಪೋರ್ಟ್ ಸಲ್ಲಿಸುವುದು ಬಾಕಿಯಿದ್ದಾಗಲಂತೂ, ಎಷ್ಟು ಹೊತ್ತಾದರೂ ನಾನೇ ಹೋಗಿ ಮಾಡಬೇಕಾದ್ದರಿಂದ, ವೃಥಾ ಇಲ್ಲಿ ಬಸ್ಸಿಗೆ ಕಾಯುತ್ತ ಕುಳಿತುಕೊಳ್ಳುವುದು ಅಸಹನೀಯ ಹಿಂಸೆ ಎನಿಸುತ್ತಿತ್ತು.

ನಾಲ್ಕೈದು ಕಿಲೋಮೀಟರಿನಷ್ಟು ದೂರವಾದರೆ ಮಾಲೀಕರು ಸೈಕಲ್ಲು ತಂದುಬಿಡುತ್ತಿದ್ದರು. ಕೆಲವರು ಸೈಕಲ್ಲನ್ನು ನನ್ನ ಕಡೆಗೆ ವಾಲಿಸಿ ‘ನೀವೇ ಹೊಡೀರಿ ಸಾ’ ಎನ್ನುವ ಸೀಟಿನ ಮೇಲೆ ಕುಳಿತು ಪ್ರಯಾಣಿಸುವ ಬಂಪರ್ ಆಫರ್ ಕೊಡುತ್ತಿದ್ದರು. ಆದರೆ ನನಗೆ ಸೈಕಲ್ಲು ಅಷ್ಟಾಗಿ ಅಭ್ಯಾಸವಿಲ್ಲ. ಕೇವಲ ಬ್ಯಾಲೆನ್ಸ್ ಮಾಡಬಲ್ಲೆನೇ ಹೊರತು ರಸ್ತೆಗಳಲ್ಲಿ ಸೈಕಲ್ ತುಳಿದವನಲ್ಲ. ಅದರಲ್ಲೂ ಡಬಲ್ ರೈಡ್ ಮಾಡಿದವನೇ ಅಲ್ಲ. ನಾನು ಗಾಬರಿಯಿಂದ ‘ಬೇಡ ಬೇಡ ನೀವೇ ತೊಗೊಳಿ’ ಎಂದು ಹಿಂದಿನ ಕ್ಯಾರಿಯರ್ ಮೇಲೆ ಕುಳಿತುಕೊಳ್ಳುತ್ತಿದ್ದೆ. ಅವನಿಗೋ ಡಾಕ್ಟರನ್ನು ಬೇಗ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಧಾವಂತ.

ಕೃಶಕಾಯನಾದ, ಬೊಜ್ಜಿನ ಪ್ಯಾಡಿಂಗ್ ಇಲ್ಲದ ನಾನು ಆ ಜೆಲ್ಲಿ ಕಿತ್ತು ಬಂದ ಒರಟು ರಸ್ತೆಗಳಲ್ಲಿ ಕ್ಯಾರಿಯರ್ ಮೇಲೆ ಎತ್ತಿ ಎತ್ತಿ ಹಾಕುತ್ತಿರುವಾಗ ಆದಷ್ಟೂ ನೋವಾಗದಂತೆ ಹಗೂರಾಗಿ ಕುಳಿತುಕೊಳ್ಳುವ ಪರಿಯನ್ನು ನಿಮಗೆ ಹೇಳಿ ಪ್ರಯೋಜನವಿಲ್ಲ. ‘ಸೈಕಲ್ಲು ನಿಂದಿರಬಹುದು, ಬುಡ ನನ್ನದು ಕಣೋ ಮಾರಾಯ ನಿಧಾನ’ ಎಂದರೆ ಒಂದೆರಡು ಕ್ಷಣ ನಿಧಾನಿಸಿದಂತೆ ಮಾಡಿ ಮತ್ತೆ ತನ್ನಿಂದ ತಾನೇ ವೇಗ ಪಡೆದುಕೊಂಡು ನನ್ನ ಮನವಿ ಅವರ ಮೇಲೆ ಹೆಚ್ಚಿನ ಪರಿಣಾಮ ಬಿರಿದಂತೆ ಕಾಣುತ್ತಿರಲಿಲ್ಲ, ಕ್ಯಾರಿಯರ್ ಮೇಲಿನ ನನ್ನ ಸರ್ಕಸ್ ತಪ್ಪುತ್ತಿರಲಿಲ್ಲ. ಆದರೂ ಈ ಒರಟು ಯಾನ ನಮ್ಮನ್ನು ಚಿಕಿತ್ಸೆ ಮುಗಿದ ತಕ್ಷಣ ವಾಪಾಸು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದುದರಿಂದ ಒಂದು ರೀತಿಯಲ್ಲಿ ಸಹನೀಯವಾಗೇ ಇತ್ತು.

ಕೆಲವರು ‘ಈಗ ಬರ್ರಿ ಸಾ, ಬರುವಾಗ ನಮ್ಮದೇ ಬೈಕು ಐತಿ, ಅದರಾಗೇ ಡ್ರಾಪ್ ಮಾಡ್ತವಿ. ಅದನ್ನೇ ತಗಂಡು ಬರನ ಅನ್ಕಂಡಿದ್ವಿ. ನಮ್ಹುಡುಗ ಜಾಜೂರಿಗೆ ಹೋಗ್ಯಾನೆ ಬೆಳೆಗೆ ಔಷಧಿ ತರಾಕೆ. ನಾವು ಹೋಗಾದ್ರಾಗೆ ಬಂದಿರ್ತಾನೆ ಬರ್ರಿ’ ಎಂದು ಆಸೆ ತೋರಿಸಿ ಬಸ್ಸಿಗೆ ಕರೆದುಕೊಂಡು ಹೋಗುತ್ತಿದ್ದರು. ಕೆಲಸ ಮುಗಿಯುವ ತನಕ ನಮ್ಮನ್ನು ಬಹು ಮುಖ್ಯ ವ್ಯಕ್ತಿಗಳಂತೆ ಗಮನಿಸುತ್ತಿದ್ದವರು ಒಮ್ಮೆ ಚಿಕಿತ್ಸೆ ನೀಡುವುದು ಮುಗಿಯಿತೆಂದರೆ, ಹೆಣ ಒಪ್ಪ ಮಾಡಿದವರಂತೆ ನಿರಾಳರಾಗಿ ಬಿಡುತ್ತಿದ್ದರು. ಎಷ್ಟೋ ಬಾರಿ ಕೆಲಸ ಮುಗಿದ ನಂತರ ಬೈಕು ಬಂದಿದೆಯೋ, ಇಲ್ಲವೋ ವಿಚಾರಿಸುವ ಗೋಜಿಗೂ ಕೂಡ ಹೋಗದೆ ‘ಮತ್ತೇನಪ್ಪ ಸಮಾಚಾರ ಮೆಕ್ಕೆ ಜ್ವಾಳ ಕೊಟ್ಟೇನೋ? ನಾನು ರೇಟಕವೆ ಅಂತ ಬಿಟ್ಟಕಂಡು ತಪ್ಪು ಮಾಡಿಬಿಟ್ಟೆ ಕಣೋ’ ಎಂದು ತಮ್ಮದೇ ಸಾಮ್ಯಾಜ್ಯದಲ್ಲಿ ಮುಳುಗಿಬಿಡುತ್ತಿದ್ದರು.

ನಾನು ಇವರು ‘ಬೈಕು ತೆಗೆದುಕೊಂಡು ಬರಲು ಯಾರಿಗಾದರೂ ಹೇಳಿ ಕಳಿಸಿರಬಹುದು’ ಎಂದು ಕಾದು ಕಾದು ಸಾಕಾಗಿ ‘ಹೋಗೋಣವಾ ಎಲ್ಲಿದೆ ಬೈಕು?’ ಎಂದರೆ ‘ಬರ್ತತಿ ಕುಂತ್ಗಳ್ರಿ. ಕೆಲ್ಸ ಆಗಬೇಕಲ್ಲ’ ಎಂದು ನಿರ್ಲಕ್ಷ್ಯದಿಂದ ಉತ್ತರಿಸಿ ಆಗ ‘ಏ ಹನುಮಂತ ಆ ಜೋಗೇರ ಸಿದ್ದಪ್ಪನ ಮಗ ಬಂದಾನೇನೋ ನೋಡಿಕೆಂಡು ಬಾರೋ ಇಷ್ಟೊತ್ತಿಗೆ ಬರ್ತನಿ ಅಂದಿದ್ದ…’ ಎಂದು ರಾಗ ಎಳೆಯುತ್ತ ಹುಡುಗನನ್ನು ಕಳಿಸುತ್ತಿದ್ದರು. ಅಲ್ಲಿಗೆ ಬೈಕು ಇವರದಲ್ಲ. ಬೇರೆ ಯಾರದೋ ಎನ್ನುವುದು ಖಾತ್ರಿಯಾಗುತ್ತಿತ್ತು. ಬೇರೆಯವರಿಗಾದರೆ ಬೇಗ ಬರುವ ದರ್ದು ಏನಿರುತ್ತದೆ ಹೇಳಿ.

ನಿಜವಾಗಿಯೂ ಅಲ್ಲಿ ಕೆಲಸ ತಡವಾಯಿತೋ ಅಥವಾ ಆತನಿಗೆ ಇವರು ಡಾಕ್ಟರನ್ನು ಕರೆದುಕೊಂಡು ಬಂದಿದ್ದಾರೆ ಬೇಗ ಬರಬೇಕು ಎನ್ನುವ ವಿಚಾರವಾದರೂ ಗೊತ್ತಿದೆಯೋ ಇಲ್ಲವೋ ಅಥವಾ ವಿಷಯ ಗೊತ್ತಿದ್ದೇ ಬೈಕು ಕೊಡಲಾರದೆ ತಡ ಮಾಡುತ್ತಿದ್ದಾರೋ ಯಾರಿಗೆ ಗೊತ್ತು? ವಾಪಾಸು ಹೋಗಿ ಮಾಡಬೇಕಾದ ಕೆಲಸ ಜ್ಞಾಪಕಕ್ಕೆ ಬಂದು ಚಡಪಡಿಸುವಂತಾಗುತ್ತಿತ್ತು. ಸ್ವಲ್ಪ ಹೊತ್ತಾದ ಮೇಲೆ ‘ಬರಲಿಲ್ಲರೀ ಬೈಕು ಇನ್ನೂ?’ ಮತ್ತೊಮ್ಮೆ ಅಸಹನೆಯಿಂದ ಕೇಳಿದರೆ ‘ಬರ್ತಾನೆ ಕುಂತ್ಗಳ್ರೀ ಸಾ, ಇಲ್ದಿದ್ದರೆ ಈಗ ರಿಪಬ್ಲಿಕ್ ಬರ್ತಾನಲ್ಲ. ಅದಕ್ಕೆ ಹೋದ್ರಾತು’ ಎಂದು ಉಡಾಫೆಯಿಂದ ಮಾತನಾಡುತ್ತಿದ್ದರು. ಅಲ್ಲಿಗೆ ನಮ್ಮದೆ ಬೈಕಿದೆ ಎಂದದ್ದು ನಾನು ಚಿಕಿತ್ಸೆಗೆ ಬರಲಿ ಎಂದು ಹಾಕಿದ ಗಾಳ ಎನ್ನುವುದು ಪಕ್ಕಾ ಆಗುತ್ತಿತ್ತು. ಇಂಥ ಅನೇಕ ಸಂದರ್ಭಗಳಲ್ಲಿ ಸುಳ್ಳು ಹೇಳಿ ಕರೆದುಕೊಂಡು ಬಂದ ಇವರನ್ನು ಶಪಿಸುತ್ತ ಮತ್ತೆ ಬಸ್ಸಿಗೇ ವಾಪಾಸು ಬಂದಿದ್ದಿದೆ.

ಕೆಲವೊಂದು ಬಾರಿ ಬೈಕಿನಲ್ಲೇ ಕರೆದುಕೊಂಡು ಹೋಗುತ್ತಿದ್ದರು. ಆದರೆ ನಾವು ಚಿಕಿತ್ಸೆ ಮುಗಿಸಿ ನೋಡುವಷ್ಟರಲ್ಲಿ ಬೈಕು ಮಂಗಮಾಯವಾಗಿಬಿಟ್ಟಿರುತ್ತಿತ್ತು. ಕೇಳಿದರೆ ‘ಬೈಕು ನಮ್ಮದಲ್ಲ. ಅದೇನೂ ಬೇರೇರ್ದಲ್ಲ ತಗಳ್ರೀ ನಮ್ಮ ದೊಡ್ಡಪ್ಪಾರ ಮಗಂದೇ. ಬರ್ತಾನೆ ಕುಂತುಗಳ್ರೀ’ಎಂದು ಕೂಡಿಸುತ್ತಿದ್ದರು. ಏನೋ ಮುಲಾಜಿಗೆ ಮೂಕಪ್ರಾಣಿಗೆ ಸೀರಿಯಸ್ ಎಂದು ಒಮ್ಮೆ ಬೈಕು ಕೊಟ್ಟಿರುವುದಲ್ಲದೆ ಮತ್ತೆ ಡಾಕ್ಟರನ್ನು ವಾಪಾಸು ಬಿಟ್ಟುಬರಲು ಸಹ ಕೊಡಲು ಅವರೇನು ದಡ್ಡರೇ? ಅರ್ಜೆಂಟು ಕೆಲಸ ಎಂದು ತೆಗೆದುಕೊಂಡು ನಾಪತ್ತೆಯಾಗಿಬಿಡುತ್ತಿದ್ದರು. ಕಾದು ಕಾದು ಕೊನೆಗೆ ಹೊಂಡಗುಂಡಿಗಳ ರಸ್ತೆಯಲ್ಲಿ ಜನರ ಭಾರಕ್ಕೆ ವಾಲಾಡಿಕೊಂಡು ಧೂಳೆಬ್ಬಿಸಿಕೊಂಡು ಬರುವ ಬಸ್ಸಿಗೇ ಕಾಯವುದು ಅನಿವಾರ್ಯವಾಗುತ್ತಿತ್ತು.

ಹೀಗಾಗಿ ಅನೇಕ ಬಾರಿ ನಾನು ವಿಸಿಟ್ ಕೇಸುಗಳಿಗೆ ಕಾಂಪೌಂಡರ್ ಕಾಳಪ್ಪರನ್ನೇ ಕಳಿಸಿಬಿಡುತ್ತಿದ್ದೆ. ಪ್ರತಿ ದಿನ ಆತ ಡ್ಯೂಟಿಗೆ ಬರುತ್ತಿದ್ದುದೇ ಸೈಕಲಿನಲ್ಲಿ. ಅವರಿಗಾದರೆ ಚಿಕಿತ್ಸೆ ನೀಡಿ ಬೇಗ ಬರಬೇಕೆಂಬ ತುರ್ತು ಇರುತ್ತಿರಲಿಲ್ಲ. ಒಂದು ಕೇಸಿಗೆ ಹೆಚ್ಚು ಕಡಿಮೆ ಅರ್ಧ ದಿನವಾದರೂ ಪರವಾಗಿರಲಿಲ್ಲ. ನಾನು ಕಳಿಸಿದ ಕೇಸಿನ ಚಿಕಿತ್ಸೆ ಮುಗಿಸಿದ ನಂತರ ನಿನ್ನೆ ಮೊನ್ನೆ ಅವರು ನೋಡಿದ್ದ ಕೇಸುಗಳನ್ನು ಅನುಸರಣೆ ಮಾಡಬಹುದಾಗಿತ್ತು ಅಥವಾ ಆಸ್ಪತ್ರೆಯ ಅವಧಿ ಮುಗಿದ ನಂತರ ಇಂದು ನೋಡಬೇಕಾಗಿದ್ದ ಕೇಸುಗಳನ್ನು ಅಟೆಂಡ್ ಮಾಡಿ ಪ್ರತಿದಿನಕಿಂತ ಮೊದಲೇ ಮನೆಗೆ ಹೋಗುವ ಸಾಧ್ಯತೆ ಇತ್ತು.

ನಾನು ಬೇರೆ ಮಧ್ಯಾಹ್ನದ ನಂತರವಾದರೆ ‘ಚಿಕಿತ್ಸೆ ನೀಡಿ ವಾಪಾಸು ಬನ್ನಿ’ ಎಂದು ಹೇಳುತ್ತಿರಲಿಲ್ಲ. ಹೇಗಿದ್ದರೂ ಆಸ್ಪತ್ರೆಯಲ್ಲಿ ನಾನಿರುತ್ತಿದ್ದೆನಲ್ಲ? ದೂರದ ಗ್ರಾಮವಾದರೆ ಬಸ್ಸಿನಲ್ಲಿ ಹೋದವರು ಮಾರನೆಯ ದಿನವೇ ಡ್ಯೂಟಿಗೆ ಬರುತ್ತಿದ್ದರು. ಆದ್ದರಿಂದ ಅವರು ವಿಸಿಟ್ ಕೇಸಿಗೆ ಯಾವಾಗಲೂ ಹೋಗಲು ತುದಿಗಾಲಲ್ಲಿ ನಿಂತಿರುತ್ತಿದ್ದರು. ರೈತರಿಂದ ವಿವರ ಕೇಳಿಕೊಂಡು, ಇಂತಹ ಕಾಯಿಲೆ ಎಂದು ಅಂದಾಜಿಸಿ ಬೇಕಾದ ಔಷಧಿಗಳನ್ನು ಕೊಟ್ಟುಕಳಿಸಿಬಿಟ್ಟರೆ ಸಮಸ್ಯೆ ಬಗೆಹರಿದುಬಿಡುತ್ತಿತ್ತು. ಆದರೆ ಕೇಸುಗಳು ಕ್ಲಿಷ್ಟವಾಗಿದ್ದಾಗ ನಾನೇ ಹೋಗಿಬರುವ ಹಿಂಸೆ ತಪ್ಪುತ್ತಿರಲಿಲ್ಲ.

ಕೇವಲ ಅರ್ಧ ಗಂಟೆ ಚಿಕಿತ್ಸೆ ಕೆಲಸಕ್ಕೆ ಮೂರು ನಾಲ್ಕು ಗಂಟೆ ವ್ಯರ್ಥವಾಗುವುದು ಜೊತೆಗೆ ಕೆಲಸ ಮುಗಿಸಿದ ನಂತರ ಅಬ್ಬೆಪಾರಿಯಾಗಿ ಅವರು ವಾಹನ ತರುವ ತನಕ ಅಥವಾ ಬಸ್ಸು ಬರುವ ತನಕ ಅಸಹಾಯಕನಾಗಿ ಕಾಯುವ ಹಿಂಸೆ ತಪ್ಪಿಸಿಕೊಳ್ಳಲು ಒಂದು ಮೋಟಾರ್ ಬೈಕ್ ಕೊಂಡುಕೊಂಡರೆ ಹೇಗೆ ಎಂದು ಯೋಚಿಸಿದೆ. ಆದರೆ ವೇತನದಲ್ಲಿ ಹೆಚ್ಚಿನ ಭಾಗವನ್ನು ಮನೆಯ ಸಾಲಕ್ಕೆ ಅಂತ ತಂದೆಯವರಿಗೆ ಹಣ ಕಳಿಸುತ್ತಿದ್ದುದರಿಂದ ಬೈಕಿಗೆ ಸಾಲ ಮಾಡಿದರೆ ಕಂತು ಕಟ್ಟಲು ಸಾಕಾಗುವುದೋ ಇಲ್ಲವೋ? ಮನೆಗೆ ಹೋಗಿ ಚಿಕಿತ್ಸೆ ನೀಡಿದರೂ ಈ ಭಾಗದಲ್ಲಿ ಮೊದಲಿನಿಂದಲೂ ಫೀಸು ಕೊಡುವ ಸಂಸ್ಕೃತಿ ಬೇರೆ ಇರಲಿಲ್ಲ.

ಇದು ನನ್ನ ಸೇವೆಯ ಮೊದಲ ಆಸ್ಪತ್ರೆಯಾದ್ದರಿಂದ ಪಶುವೈದ್ಯರೆಂದರೆ ಹೀಗೆಯೇ ಎಲ್ಲಾ ಕಡೆಯೂ ಇರಬಹುದೇನೋ ಎಂದುಕೊಂಡ ನಾನು, ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡಿದರೂ, ಬಾಯಿಬಿಟ್ಟು ಫೀಸು ಕೇಳುತ್ತಿರಲಿಲ್ಲ. ಬೈಕು ತೆಗೆದುಕೊಂಡರೆ ಪೆಟ್ರೋಲಿನ ಬಾಬ್ತು ಮೈಮೇಲೆ ಬಂದರೆ ಹೇಗೆ ಎಂದು ಯೋಚಿಸಿ, ಸಧ್ಯ ಸೈಕಲ್ಲೋ ಬೈಕೋ ಹೇಗೋ ಅವರೇ ಕರೆದುಕೊಂಡು ಹೋಗಿ ಬರುತ್ತಿದ್ದಾರೆ. ಬಸ್ಸಿನಲ್ಲಾದರೆ ಹೋಗುವಾಗ ಜೊತೆಗೆ ಇರುತ್ತಿದ್ದವರು ಟಿಕೇಟು ಕೊಳ್ಳುತ್ತಿದ್ದರು, ಬರುವಾಗ ಟಿಕೇಟುಕೊಂಡು ನನ್ನ ಕೈಯಲ್ಲಿರಿಸುತ್ತಿದ್ದರು. ಸಧ್ಯಕ್ಕೆ ಇದೇ ನಡೆಯಲಿ ಎಂದು ಸುಮ್ಮನಾದೆ.

ಆದರೆ ವಿಸಿಟ್ ಕೇಸುಗಳ ಕಾಟ ಬರುಬರುತ್ತ ಜಾಸ್ತಿಯಾಗತೊಡಗಿತು. ಬಾಯಿ ಬಿಟ್ಟು ಫೀಸು ಕೇಳದಿರುವ ನನ್ನ ದೌರ್ಬಲ್ಯವೇ ನನಗೆ ಶಾಪವಾಗಿ ಪರಿಣಮಿಸತೊಡಗಿತು. ಜನರಿಗೆ ‘ಹೇಗೂ ಫೀಸು ಕೇಳುವುದಿಲ್ಲ. ಯಾಕೆ ದನಗಳನ್ನು ಆಸ್ಪತ್ರೆಗೆ ತರುವ ಕಷ್ಟಪಡಬೇಕು ಅವರೇ ಮನೆಗೆ ಬಂದು ನೋಡುವಾಗ?’ ಎಂದೆನಿಸತೊಡಗಿತೇನೋ ಸಣ್ಣ ಪುಟ್ಟ ಕೇಸುಗಳಿಗೂ ಮನೆಗೆ ಕರೆಯಲು ಬರಲಾರಂಭಿಸಿದರು. ‘ಆಸ್ಪತ್ರೆಗೆ ತನ್ನಿ ನೋಡುತ್ತೇನೆ’ ಎಂದರೆ ‘ಭಾಳ ಸುಸ್ತಾಗೇತಿ ಸಾ ನಡೆಯಾಕೇ ಆಗಂಗಿಲ್ಲ. ಅದು ನಡೆಯಂಗಿದ್ರೆ ತರ್ತಿರ್ಲಿಲ್ಲೇನ್ರೀ?’ ಎಂದು ನನ್ನನ್ನೇ ಪ್ರಶ್ನಿಸಿ, ಈಗ ಬರದೇ ಇದ್ದರೆ ಜಾನುವಾರು ಉಳಿಯುವುದೇ ಇಲ್ಲ ಎಂಬಂತೆ ಮಾತನಾಡಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಇದರಲ್ಲಿ ಸತ್ಯಾಂಶವಿರಲಾರದು ಎಂಬ ಅನುಮಾನ ಬಂದರೂ ಅಕಸ್ಮಾತ್ ನಿಜವಾಗಿದ್ದರೆ ಎನ್ನುವ ಯೋಚನೆ ಹೋಗುವ ಅನಿವಾರ್ಯತೆ ಸೃಷ್ಟಿಸುತ್ತಿತ್ತು. ಅಲ್ಲಿಗೆ ಹೋದಮೇಲೆ ಇವರ ಹುನ್ನಾರ ಅರ್ಥವಾಗಿ ಇನ್ನುಮುಂದೆ ‘ಈ ಮನುಷ್ಯ ಎಷ್ಟೇ ತುರ್ತು ಎಂದು ಗೋಗರೆದರೂ ಬರಬಾರದು’ ಎಂದುಕೊಳ್ಳುತ್ತಿದ್ದೆ. ಆದರೆ ಹಾಗೆ ಅಂದುಕೊಳ್ಳುತ್ತಿದ್ದೆ ಅಷ್ಟೇ.

ಕೇವಲ ಒಮ್ಮೆ ನೋಡಿದವರನ್ನು ಜ್ಞಾಪಕದಲ್ಲಿಟ್ಟುಕೊಂಡು ಅವರು ಮತ್ತೆ ಕರೆಯಲು ಬಂದಾಗ ನಿರಾಕರಿಸುವುದು ನನಗೆ ಸಾಧ್ಯವೇ ಇರಲಿಲ್ಲ. ಮತ್ತೊಮ್ಮೆ ಬಂದರೂ ಅವರ ಮನೆಯ ತನಕ ಹೋಗುವವರೆಗೆ ನನಗೆ ಗೊತ್ತಾಗುತ್ತಲೇ ಇರಲಿಲ್ಲ. ಅವರೂ ಸಹ ಬುದ್ಧಿವಂತರು. ನನಗೆ ಮುಖಪರಿಚಿಯದವರಾಗಿದ್ದರೆ ಇಂಥ ಸಂದರ್ಭದಲ್ಲಿ ಮನೆಯ ಬೇರೊಬ್ಬರು ಬಂದುಬಿಡುತ್ತಿದ್ದರು. ಹಾಗಾಗಿ ತುರ್ತು ಸಂದರ್ಭವಿಲ್ಲದೆ ಮನೆಗೆ ಮತ್ತೆ ಚಿಕಿತ್ಸೆಗೆ ಹೋಗಬಾರದೆನ್ನುವ ನನ್ನ ನಿರ್ಧಾರ ಎಂದೂ ಕಾರ್ಯಗತವಾಗಲೇ ಇಲ್ಲ. ಹೋಗುವಾಗ ಗೌರವ ವಿಧೇಯತೆಯಿಂದ ಕರೆದುಕೊಂಡು ಹೋದವರು ಚಿಕಿತ್ಸೆ ಮುಗಿದ ತಕ್ಷಣ ಬದಲಾಗುವ ಪರಿ ಕಂಡು ಬೇಸರವಾಗುತ್ತಿದ್ದರೂ ವಿಧಿಯಿರಲಿಲ್ಲ. ಜೊತೆಗೆ ಚಿಕಿತ್ಸೆ ಮುಗಿಸಿ ಕಾಯುವ ಹಿಂಸೆ ಬೇರೆ.

ಈ ತೊಂದರೆಗೆಲ್ಲಾ ಒಂದು ಅಂತ್ಯ ಹಾಡಲು ನಿರ್ಧರಿಸಿದೆ. ಬೈಕು ಇಟ್ಟುಕೊಂಡರೆ ಕನಿಷ್ಟ ಪೆಟ್ರೋಲ್ ಚಾರ್ಜಾದರೂ ಕೊಡಬೇಕಾಗುತ್ತದೆ ಎಂದು ಜನ ಅನಾವಶ್ಯಕವಾಗಿ ಮನೆಗೆ ಕರೆಯುವುದನ್ನು ಬಿಡಬಹುದೆಂಬ ದೂರದ ಆಸೆಯೂ ಸೇರಿಕೊಂಡು ಬ್ಯಾಂಕಿನ ಮ್ಯಾನೇಜರರ ಬಳಿ ಮಾತನಾಡಿ ನನ್ನ ವೇತನದ ಆಧಾರದ ಮೇಲೆ ಬೈಕಿಗೆ ಸಾಲ ಕೊಡುವ ಬಗ್ಗೆ ವಿಚಾರಿಸಿದೆ. ಆ ಹಳ್ಳಿಯಲ್ಲಿ ಪೆಟ್ರೋಲು ಬಂಕ್ ಇರಲಿಲ್ಲ. ಕನಿಷ್ಟ 15 ಕಿಮೀ ಹೋಗಬೇಕು. ಅಲ್ಲಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಹೋಗಿಬರುವುದಕ್ಕೆ ಒಂದು ಲೀಟರ್ ಪೆಟ್ರೋಲ್ ವ್ಯರ್ಥವಾಗುತ್ತಿತ್ತು. ಆದರೆ ಕೆಲವು ಅಂಗಡಿಗಳಲ್ಲಿ ಪೆಟ್ರೋಲ್ ಡೀಸೆಲ್ ತಂದಿಟ್ಟುಕೊಂಡು ಮಾರುತ್ತಿದ್ದುದರಿಂದ ‘ಅಂಥಹ ಸಮಸ್ಯೆ ಏನೂ ಆಗಲಾರದು.

ತುರ್ತು ಇದ್ದಾಗ ಇಲ್ಲಿ ಹಾಕಿಸಿಕೊಂಡು ಪೆಟ್ರೋಲ್ ಬಂಕು ಇರುವ ಕಡೆ ಹಳ್ಳಿಗೆ ಹೋದಾಗ ಪೆಟ್ರೋಲ್ ಹಾಕಿಸಿಕೊಂಡು ಬಂದರಾಯಿತು, ಮುಖ್ಯವಾಗಿ ಚಿಕಿತ್ಸೆಗೆ ಹೋಗಿ ಬೇಗ ಬರಬಹುದು, ಕಾಯುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದು ಅದಕ್ಕಿಂತ ಲಾಭ ಬೇರೆ ಏನು ಬೇಕು ? ಜೊತೆಗೆ ನನ್ನ ಸ್ವಂತ ಕೆಲಸಕ್ಕೂ ಉಪಯೋಗವಾಗುವುದಲ್ಲ’ ಎನ್ನುವ ಸಮಾಧಾನ ಮೂಡಿ ಸಾಲ ಮಂಜೂರು ಮಾಡಿಸಿಕೊಂಡು ಯೆಜ್ಚಿ ಬೈಕು ಖರೀದಿಸಿದೆ. ಆಗ ನನ್ನ ಸ್ನೇಹಿತ ಅಧಿಕಾರಿಗಳಾರೂ ಬೈಕು ಉಪಯೋಗಿಸುತ್ತಿರಲಿಲ್ಲ. ಕೇವಲ ಪೋಲಿಸ್ ಸಬ್‍ಇನ್ಸ್ಪೆಕ್ಟರ್, ಒಬ್ಬ ಕಂಟ್ರಾಕ್ಟರ್ ಮತ್ತು ಮೂರು ನಾಲ್ಕು ಸಾಹುಕಾರರುಗಳು ಮಾತ್ರ ಬೈಕು ಹೊಂದಿದ್ದರು. ಗ್ರಾಮದಲ್ಲಿ ಬೈಕಿನ ಮೇಲೆ ಸ್ನೇಹಿತರನ್ನು ಕೂಡಿಸಿಕೊಂಡು ಹೋಗುವಾಗ ಬೈಕು ಹೊಂದಿರುವ ಕೆಲವೇ ಗಣ್ಯರಲ್ಲಿ ನಾನೂ ಒಬ್ಬ ಎಂಬ ಕೋಡು ಮೂಡುತ್ತಿದ್ದುದು ಸುಳ್ಳಲ್ಲ.

ನನ್ನ ನಿರೀಕ್ಷೆಯಂತೆ ಚಿಕಿತ್ಸೆಗೆ ನನ್ನ ಬೈಕಿನಲ್ಲೇ ಹೋದಾಗ ಜನರಿಗೆ ಅನಿವಾರ್ಯವಾಗಿ ಸ್ವಲ್ಪವಾದರೂ ಪೆಟ್ರೋಲ್ ದರ ಕೊಡಬೇಕಾಯಿತು. ಅವರು ಕೊಟ್ಟಷ್ಟು ಸುಮ್ಮನೆ ತೆಗೆದುಕೊಳ್ಳುತ್ತಿದ್ದೆ. ನನಗೆ ಒಟ್ಟಾರೆ ಪೆಟ್ರೋಲಿನ ಖರ್ಚು ನನ್ನ ಮೈಮೇಲೆ ಬೀಳದಿದ್ದರೆ ಸಾಕಾಗಿತ್ತು. ಅವರು ಕೊಟ್ಟಿದ್ದು ಅಲ್ಲಿಗಲ್ಲಿಗೆ ಎಂಬಂತೆ ಆಗಿ ನಾನು ಸಂಬಳದಲ್ಲೇನೂ ಪೆಟ್ರೋಲ್ ಹಾಕಿಸುವ ಸಂದರ್ಭ ಬರದಿದ್ದುದರಿಂದ ಹಾಯಾಗಿಯೇ ಇದ್ದೆ.
ಒಂದು ದಿನ ರಾತ್ರಿ ನಮ್ಮ ರೂಮಿನಲ್ಲಿದ್ದ ಹೈಸ್ಕೂಲು ಉಪಾಧ್ಯಾಯರೂ ನಾನೂ ಅಡುಗೆ ಕೆಲಸ ನಡೆಸಿದ್ದೆವು.

ಆ ಗ್ರಾಮದಲ್ಲಿ ಯಾವುದೇ ಹೋಟೆಲು ಅಥವಾ ಖಾನಾವಳಿ ಇರಲಿಲ್ಲ. ಇರುವ ಎರಡು ಗುಡಿಸಲು ಹೋಟಲಿನಲ್ಲಿ ಕಾಫಿ, ಟೀ, ಸಿಗರೇಟು ಸಿಗುತ್ತಿತ್ತು. ಮಂಡಕ್ಕಿ ಜೊತೆಗೆ ಮೆಣಸಿನಕಾಯಿ ಬೋಂಡಾ ಅಲ್ಲಿ ಸಿಗುತ್ತಿದ್ದ ಏಕೈಕ ತಿನಿಸು. ಮೂರೂ ಹೊತ್ತೊ ಅದನ್ನು ತಿಂದು ಬದುಕುವುದು ಸಾಧ್ಯವಿಲ್ಲದಿದ್ದುದರಿಂದ ಅನಿವಾರ್ಯವಾಗಿ ನಮ್ಮ ಅಡುಗೆ ನಾವೇ ಮಾಡಿಕೊಳ್ಳಬೇಕಿತ್ತು. ಸುಮಾರು 7.45 ರ ಸಮಯ. ಒಬ್ಬರು ಎತ್ತರದ ಕಪ್ಪನೆಯ ವ್ಯಕ್ತಿ ಮನೆಗೆ ಬಂದರು.

ವಿದ್ಯಾವಂತರಂತೆ ಕಾಣುತಿದ್ದ ಅವರು ದಾವಣಗೆರೆಯಲ್ಲಿ ಕಾಲೇಜು ಉಪನ್ಯಾಸಕನೆಂದು ಪರಿಚಯಿಸಿಕೊಂಡು ತಮ್ಮ ಎತ್ತಿಗೆ ತುಂಬಾ ಸೀರಿಯಸ್ ಆಗಿದೆಯೆಂದೂ ಚಿಕಿತ್ಸೆಗೆ ಬರಬೇಕೆಂದು ವಿನಂತಿಸಿದರು. ಏನಾಗಿದೆ ಎಂದು ವಿಚಾರಿಸಿದೆ. ‘ಕೆಮ್ಮು ಸಾರ್ ತುಂಬಾ ಕೆಮ್ಮು’ ಎಂದಾಗ ನನಗೆ ಸಮಾಧಾನವಾಗಿ ‘ಕೆಮ್ಮಾದರೆ ಈಗ ಬರುವ ಅಗತ್ಯ ಇಲ್ಲ. ಔಷಧಿ ಕೊಡುತ್ತೇನೆ ಜೊತೆಗೆ ಮಾತ್ರೆ ಬರೆದುಕೊಡುತ್ತೇನೆ. ಹಾಕಿ ಸರಿಯಾಗುತ್ತದೆ. ಇಲ್ಲದಿದ್ದರೆ ನಾಳೆ ನೋಡೋಣ’ ಎಂದೆ. ಆಸ್ಪತ್ರೆಗೆ ಹೋಗಿ ಬೀಗ ತೆಗೆದು ಔಷಧಿ ಕೊಡುವುದು ನನಗೆ ಕಷ್ಟವಾಗಿರಲಿಲ್ಲ. ಆದರೆ ಅವರು ‘ಇಲ್ಲ ಸಾರ್ ನೋಡಲೇ ಬೇಕು’ ಒತ್ತಾಯಿಸಿದರು.

‘ಮೇವು ತಿನ್ನುತ್ತಿದೆ ತಾನೇ ಇದು ಅಂಥಹ ತುರ್ತು ಏನೂ ಅಲ್ಲ’ ಎಂದು ಸಮಾಧಾನ ಪಡಿಸುವ ನನ್ನ ಪ್ರಯತ್ನ ಫಲಿಸಲಿಲ್ಲ. ಮೊದಲು ಕೆಮ್ಮು ಎಂದವರು ಕೊನೆಗೆ ಮೇವು ತಿನ್ನುತ್ತಿಲ್ಲ, ಜ್ವರ ಇರಬಹದು ಎಂದು ಚಿಕಿತ್ಸೆಗೆ ಬರಲೇಬೇಕೆಂದು ಇನ್ನಿಲ್ಲದಂತೆ ಬೇಡಿಕೊಂಡರು. ಉಪನ್ಯಾಸಕರು, ಒಳ್ಳೆಯ ಎತ್ತು ಎನ್ನುತ್ತಿದ್ದಾರೆ. ಏನು ಮಾಡಲಿ? ನಮ್ಮ ರೂಮಮೇಟ್ ಮೇಸ್ಟ್ರು ಸಹ ‘ಹೋಗಿ ಬನ್ನಿ ಸಾರ್. ನೀವು ಬರುವುದರೊಳಗೆ ಅಡುಗೆ ನಾನು ಮುಗಿಸಿರುತ್ತೇನೆ. ಒಟ್ಟಿಗೇ ಊಟ ಮಾಡೋಣ’ ಎಂದರು. ಉಪನ್ಯಾಸಕರು ಎಂದ ತಕ್ಷಣ ವೃತ್ತಿಬಾಂಧವರು ಎನ್ನುವ ಅಭಿಮಾನ ಮೂಡಿರಬೇಕು. ಇಲ್ಲಿಂದ ಸುಮಾರು 10-11 ಕಿಮೀ ದೂರದ ಹಳ್ಳಿ. ಹೊಸಬೈಕು ಬೇರೆ ಇತ್ತಲ್ಲ? ಹೋಗಿಬರಲು ನಿರ್ಧರಿಸಿದೆ.

ಮತ್ತೊಮ್ಮೆ ಅವರಿಂದ ಚಿನ್ಹೆಗಳನ್ನು ಕೇಳಿ ಆಸ್ಪತ್ರೆಯ ಬೀಗ ತೆಗೆದು ಔಷಧಿಗಳನ್ನು ತೆಗೆದುಕೊಂಡು ಹೊರಟೆವು. ಅಮವಾಸ್ಯೆಯ ಸನಿಹದ ರಾತ್ರಿ ಕಗ್ಗತ್ತಲು. ಹಿಂದೆ ಯಾವಾಗಲೋ ಜೆಲ್ಲಿ ಹಾಕಿದ್ದುದು ಕಿತ್ತುಬಂದು ರಸ್ತೆಯಲ್ಲೆಲ್ಲಾ ಜೆಲ್ಲಿ ಕಲ್ಲುಗಳು ಚಲ್ಲಾಡಿ ಮಣ್ಣಿನ ರಸ್ತೆಗಿಂತಲೂ ಅಧ್ವಾನವಾಗಿದೆ. ಜಲ್ಲಿ ತಪ್ಪಿಸಿ ಪಕ್ಕದ ಮಣ್ಣಿನ ಭಾಗದಲ್ಲೇ ಹೋಗೋಣವೆಂದರೆ ಅಲ್ಲಿಯೂ ಜಲ್ಲಿಕಲ್ಲುಗಳು ಹರಡಿಕೊಂಡು, ಮಧ್ಯೆ ಮಧ್ಯೆ ನೀರು ಹರಿದು ಉಂಟಾಗಿರುವ ಗುಂಡಿಗಳು ಅನಿರೀಕ್ಷಿತವಾಗಿ ಬಂದು, ಡಬಲ್ ರೈಡ್ ಅದೂ ತೂಕದ ವ್ಯಕ್ತಿ ಬೇರೆ, ಬ್ಯಾಲೆನ್ಸ್ ತಪ್ಪಿದಂತಾಗುತ್ತಿತ್ತು.

ಬೈಕಿನ ದೀಪ ಬಿಟ್ಟರೆ ಇನ್ನೊಂದು ಬೆಳಕಿನ ಕುರುಹೂ ಇಲ್ಲ. ಅಕ್ಕ ಪಕ್ಕದ ಜಮೀನುಗಳಿಂದ ಜೀರುಂಡೆಗಳ, ಹುಳುಗಳ ಶಬ್ದ. ಒಮ್ಮೊಮ್ಮೆ ಹುಳುಗಳು ಕಣ್ಣಿಗೆ ಹೊಡೆಯುತ್ತಿದ್ದವು. ಕಾಡು ಪ್ರಾಣಿಗಳ ಅಥವಾ ಕಳ್ಳ ಕಾಕರ ಭಯವೇನೂ ಇರಲಿಲ್ಲ. ಆದರೆ ರಸ್ತೆಯಲ್ಲಿ ಇದ್ದಕ್ಕಿಂದಂತೆಯೇ ಧುತ್ತೆಂದು ಪ್ರತ್ಯಕ್ಷವಾಗಿಬಿಡುವ ಮಲಗಿರುವ ಬೀಡಾಡಿ ದನಗಳದೋ, ಧೇನಿಸುತ್ತ ನಿಂತಿರುವ ಕತ್ತೆಗಳದೇ ಸಮಸ್ಯೆ. ಕತ್ತಲಲ್ಲಿ ಹತ್ತಿರ ಹೋಗುವವರೆಗೂ ಕಾಣುತ್ತಿರಲಿಲ್ಲ. ಅದೇ ಸಮಯಕ್ಕೆ ಎದುರಿಗೆ ಇನ್ನೊಂದು ವಾಹನ ಬಂದರಂತೂ ಏನಂದರೆ ಏನೂ ಕಾಣುತ್ತಿರಲಿಲ್ಲ.

ಉಪನ್ಯಾಸಕರನ್ನು ಕುತೂಹಲಕ್ಕೆ ಯಾವ ಕಾಲೇಜೆಂದು ಕೇಳಿದೆ. ಯಾವುದೋ ಪ್ರೈವೇಟ್ ಕಾಲೇಜೆಂದೂ, ಸರಿಯಾಗಿ ಸಂಬಳವನ್ನೇ ಕೊಡುವುದಿಲ್ಲವೆಂದು ದೂರು ಹೇಳಿದರು. ‘ಜಮೀನೆಷ್ಟಿದೆ, ಸುಮ್ಮನೆ ಅದನ್ನೇ ಮಾಡಬಹುದಲ್ಲ’ ಎನ್ನುವ ಪ್ರಶ್ನೆಗೆ ‘ಎಂಎ ಓದಿ ಜಮೀನು ಹೇಗೆ ಮಾಡಿಸುವುದು?’ ಎಂಬ ಸಂದಿಗ್ದವನ್ನು ಹೊರಹಾಕಿದರು. ಇದಕ್ಕೆ ನನ್ನಲ್ಲಿ ಉತ್ತರವಿರಲಿಲ್ಲ. ಸುಮ್ಮನಾದೆ.

ಸುಮಾರು ಮುಕ್ಕಾಲು ಗಂಟೆಯ ಪ್ರಯಾಣದ ನಂತರ ಹಳ್ಳಿಯನ್ನು ತಲುಪಿ ಉಪನ್ಯಾಸಕರ ನಿರ್ದೇಶನದಂತೆ ಗಲ್ಲಿಗಲ್ಲಿಗಳನ್ನು ದಾಟಿ ಅವರ ಮನೆಯ ಮುಂದೆ ಬೈಕು ನಿಲ್ಲಿಸಿದೆ. ಸರಸರನೆ ಇಳಿದ ಉಪನ್ಯಾಸಕರು ಒಳಗೆ ಹೋದರು. ನಾನು ಬೈಕಿನ ಸ್ಟ್ಯಾಂಡ್ ಹಾಕಿ ನನ್ನ ಔಷಧಿ ಬ್ಯಾಗ್ ತೆಗೆದುಕೊಂಡು ಅವರನ್ನು ಹಿಂಬಾಲಿಸಿದೆ. ಹಳೆಯ ಕಾಲದ ಮನೆ. ಜಗುಲಿಯ ಮೆಟ್ಟಿಲಿನ ಎರಡೂ ಕಡೆ ಎತ್ತುಗಳನ್ನು ಕಟ್ಟಿದ್ದಾರೆ. ಬಲಗಡೆ ಎರಡು ಎತ್ತುಗಳಿವೆ. ಎಡಗಡೆ ಒಂದು ಎಮ್ಮೆ, ಒಂದು ಹಸು ಮತ್ತು ಕರು ಇದೆ. ನಾನು ಒಳಗೆ ಕಾಲಿಡುತ್ತಲೇ ಅಪರಿಚಿತರು ಬಂದುದನ್ನು ಗ್ರಹಿಸಿ ಗಲಿಬಿಲಿಯಿಂದ ಒಂದೆರಡು ದನ ಗಂಜಲ ಹುಯ್ದು ಸಗಣಿ ಹಾಕಿ ಅಸಹನೆಯಿಂದ ಎಂಬಂತೆ ಮುಲುಕಿದವು.

ಎರಡೂ ಎತ್ತುಗಳು ಮೇವು ತಿನ್ನುತ್ತಿದ್ದು, ಚುರುಕಾಗೇ ಕಂಡವು. ‘ಎತ್ತಿಗೆ ಹುಷಾರಿಲ್ಲ ಎಂದರಲ್ಲ ಯಾವ ಎತ್ತು ಇರಬಹುದು’ ಯೋಚಿಸಿದೆ. ಬಹುಷಃ ಬೇರೆಡೆ ಕಟ್ಟಿ ಹಾಕಿರಬೇಕು. ಇತ್ತೀಚಿಗೆ ಜನ ಸುಧಾರಿಸಿದ್ದಾರೆ. ಕಾಯಿಲೆ ಬಂದ ಎತ್ತನ್ನು ಇತರೆ ಎತ್ತುಗಳ ಜೊತೆಗೆ ಕಟ್ಟುವುದಿಲ್ಲ. ಅದನ್ನೆ ತರಲು ಹೋಗಿರಬಹುದು ಎಂದು ಎಣಿಸಿ, ನನ್ನ ಬ್ಯಾಗನ್ನು ಕಟ್ಟೆಯ ಮೇಲಿಟ್ಟು ಜಿಪ್ ತೆಗೆದು ಮುಖ್ಯವಾದ ಎಲ್ಲ ಔಷಧಿಗಳು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳುತ್ತಿದ್ದೆ. ಒಳಗಿನಿಂದ ಬಂದ ಉಪನ್ಯಾಸಕರಿಗೆ, ‘ಎತ್ತು ತರುವುದಕ್ಕಿಂತ ಮೊದಲು ಸ್ವಲ್ಪ ನೀರು ಕುದಿಸಲು ಹೇಳಿ. ಸ್ವಚ್ಛವಾಗಿರಬೇಕು. ಮುಚ್ಚಿ ಕಾಯಿಸಲು ಹೇಳಿ’ ಸೂಚನೆ ಕೊಟ್ಟೆ. ಮುಚ್ಚಿ ಕಾಯಿಸಲು ಹೇಳದಿದ್ದರೆ ಒಲೆ ಊದಿ ಊದಿ ಬೂದಿ ಎಲ್ಲ ಹಾರಿ ನಾನು ಸಿರಿಂಜ್ ಸ್ಟರಿಲೈಸ್ ಮಾಡಿಕೊಳ್ಳಲು ಸಾಧ್ಯವಾಗದಷ್ಟು ನೀರು ಗಲೀಜಾಗಿಬಿಡುತ್ತಿತ್ತು. ಹಾಗಾಗಿ ಕಡ್ಡಾಯವಾಗಿ ‘ಮುಚ್ಚಿ, ಧೂಳು ಬೀಳದಂತೆ ಕಾಯಿಸಲು’ ಹೇಳುವುದು ಅಭ್ಯಾಸವಾಗಿಬಿಟ್ಟಿತ್ತು.

ಉಪನ್ಯಾಸಕರು ‘ಆಗಲೇ ಹೇಳಿದೀನಿ, ಗ್ಯಾಸಿದೆ’ ಎಂದುಹೇಳಿ ಧೂಳು ಬೀಳಬಹುದು ಎನ್ನುವ ನನ್ನ ಆತಂಕವನ್ನು ನಿವಾರಿಸಿ ಸುಮ್ಮನೆ ನಿಂತರು. ‘ಹಾಗಾದರೆ ತನ್ನಿ ಮತ್ತೆ ಯಾವ ಎತ್ತು ಎಂದೆ ‘ಇದೇ ಸಾರ್’ ಎಂದು ಗೋಡೆಯ ಪಕ್ಕದ ಎತ್ತಿನ ಬಳಿ ಹೋಗಿ ನಿಂತರು. ಗಮನಿಸಿದೆ. ಎತ್ತು ಆರೋಗ್ಯವಾಗಿಯೇ ಕಾಣುತ್ತಿದೆ. ಮೂಗು ಹಸಿಯಾಗಿದೆ, ಕಣ್ಣು ಚುರುಕಾಗಿವೆ, ಜ್ವರ ಇದ್ದಂತೆ ಕಾಣಲಿಲ್ಲ. ‘ಏನಾಗಿದೇ ರಿ ಎತ್ತಿಗೆ ಚನ್ನಾಗೇ ಕಾಣುತ್ತಲ್ಲ?’ ಮೂಗುದಾರ ಹಿಡಿದುಕೊಳ್ಳುತ್ತ ಕೇಳಿದೆ. ಇನ್ನೊಂದು ಪಕ್ಕದಲ್ಲಿ ನಿಂತಿದ್ದ ಉಪನ್ಯಾಸಕರು ‘ಅದೇ ಸರ್ ಕೆಮ್ಮು’ ಎಂದರು. ಗಟ್ಟಿಯಾಗಿ ಹಿಡಿದುಕೊಳ್ಳಲು ಹೇಳಿ ಸ್ಟಥೋಸ್ಕೋಪ್‍ನಿಂದ ಪರೀಕ್ಷಿಸಿದೆ.

ಶ್ವಾಸಕೋಶಗಳಲ್ಲಿ ಸಹ ಏನೂ ತೊಂದರೆ ಕಂಡುಬರಲಿಲ್ಲ. ಅಲರ್ಜಿಯಿಂದ ಏನಾದರೂ ಕೆಮ್ಮಾಗಿರಬಹುದೇ ಎಂದುಕೊಂಡು ಮೇವು ತುಂಬಾ ಹಳೆಯದೇ ಎಂದು ಕೇಳೋಣವೆಂದು ಸ್ಟೆಥೋಸ್ಕೋಪ್ ಕಿವಿಯಿಂದ ತೆಗೆಯುವಷ್ಟರಲ್ಲಿ ಒಬ್ಬ ಎತ್ತರದ ಬೋಳು ತಲೆಯ ಯಜಮಾನರು ಬಂದು ನನ್ನನ್ನು ಜಿಗುಪ್ಸೆಯಿಂದ ನೋಡಿ, ಮಗನ ಕಡೆ ತಿರುಗಿ ‘ಏನೋ ಯಾಕೆ ತೋರಿಸ್ತದೀಯ?’ ಎಂದು ಕೇಳಿದರು. ಅನಿರೀಕ್ಷಿತವಾಗಿ ಬಂದ ಅಪ್ಪನ ಕಡೆ ಅಸಹನೆಯಿಂದ ನೋಡಿ ‘ಎತ್ತಿಗೆ ಹುಷಾರಿಲ್ಲವಲ್ಲ, ನೀವ್ಯಾಕೆ ಬಂದಿರಿ?’ ಸಿಡುಕಿದರೂ ಯಜಮಾನರು ನಿರ್ಲಕ್ಷಿಸಿ ‘ಎತ್ತಿಗೆ ಏನಾಗೇತೋ ಚನ್ನಾಗೇ..’ ಎನ್ನುವಷ್ಟರಲ್ಲಿ ಇಕ್ಕಳದಿಂದ ಪಾತ್ರೆಯನ್ನು ಹಿಡಿದುಕೊಂಡು ಬಂದ ಹೆಂಗಸು ‘ನೀವು ಹೊರಾಗೆ ಯಾಕ್ ಬಂದಿರಿ. ಅವನು ನೋಡಿಕೆಂತಾನೆ ಹೋಗ್ರೀ ಒಳಾಗೆ’ ಎಂದು ಯಜಮಾನರನ್ನು ಉದ್ದೇಶಿಸಿ ಹೇಳಿ ಪಾತ್ರೆಯನ್ನು ಕಟ್ಟೆಯ ಮೇಲಿಟ್ಟರು. ‘ಅಲ್ಲೇ, ಎತ್ತಿಗೆ ಏನಾಗೇತೇ ? ಬೆಳಿಗ್ಗೆ ದಾವಣಗೆರಿಗೆ ಹೋ….’ ಮಧ್ಯದಲ್ಲಿಯೇ ಅವರ ಮಾತನ್ನು ತುಂಡರಿಸಿದ ಹೆಂಗಸು ‘ನೀವು ಸುಮ್ಮನೆ ಹೋಗಿ ಅಂತ ಹೇಳಿದ್ನಲ್ಲ’ ಎಂದು ಗದರಿ ಕಣ್ಣು ಬಿಟ್ಟಾಗ ಯಜಮಾನರು ಮರುಮಾತಾಡದೆ ಒಳಹೋದರು.

ಕೆಲವು ಯಜಮಾನರಿಗೆ ಸಣ್ಣ ಪುಟ್ಟ ತೊಂದರೆಗೆಲ್ಲಾ ವೈದ್ಯರನ್ನು ಕರೆತರುವುದು ಇಷ್ಟವಾಗುವುದಿಲ್ಲ. ಈಗಿನ ಹುಡುಗರು ಸಣ್ಣಪುಟ್ಟವುಕ್ಕೆಲ್ಲ ಡಾಕ್ಟರನ್ನು ಕರೆದುಕೊಂಡುಬಂದುಬಿಡುತ್ತಾರೆ. ಒಂದೆರಡು ದಿನ ಬಿಟ್ಟರೆ ಸಹಜವಾಗಿ ಸರಿ ಹೋಗುವುದಕ್ಕೆಲ್ಲಾ ಯಾಕೆ ಚಿಕಿತ್ಸೆ ಎನ್ನುವುದು ಅವರ ಅನುಭವದ ಮಾತಾಗಿರಬಹುದು.

ಯಜಮಾನರು ಒಳಹೋದಮೇಲೆ ನನ್ನ ಕಡೆ ತಿರುಗಿದ ಉಪನ್ಯಾಸಕರಿಗೆ ‘ಏನಾಗಿಲ್ಲ ಇವರೇ ಎತ್ತು ಆರೋಗ್ಯವಾಗೇ ಇದೆ. ಕೆಮ್ಮು ಅಂತೀರಿ ಯಾವ ತರಹ ಕೆಮ್ಮುತ್ತದೆ ನೋಡೋಣವೆಂದರೆ ಅದು ಕೆಮ್ಮುತ್ತಲೂ ಇಲ್ಲ. ಎಲ್ಲೋ ಸ್ವಲ್ಪ ಅಲರ್ಜಿಯಾಗಿರಬಹುದು. ಇನ್ಜೆಕ್ಷನ್ ಕೊಡುತ್ತೇನೆ. ಕಡಿಮೆಯಾಗುತ್ತದೆ. ಮೇವನ್ನು ಸ್ವಲ್ಪ ಕೊಡವಿ ಬಿಸಿಲಿಗೆ ಹಾಕಿ ಧೂಳು ತೆಗೆದು ಕೊಡಿ. ಮೂರು ದಿನಗಳ ನಂತರವೂ ಕಡಿಮೆಯಾಗದಿದ್ದರೆ ನೋಡೋಣ’ ಎಂದು ಹೇಳಿ ಇನ್ಜೆಕ್ಷನ್ ಕೊಟ್ಟೆ.

ಕೈ ತೊಳೆದು ಬ್ಯಾಗು ತೆಗೆದುಕೊಳ್ಳುವಾಗ ಮೊದಲೇ ತಮ್ಮ ಕೈಯಲ್ಲಿ ಹಿಡಿದುಕೊಂಡು ಸಿದ್ಧರಾಗಿದ್ದ ಉಪನ್ಯಾಸಕರು ಇಪ್ಪತ್ತು ರೂಪಾಯಿ ನೋಟನ್ನು ಕೊಟ್ಟರು. ಕೆಲವರು ಚಿಕಿತ್ಸೆ ಮುಗಿದ ಮೇಲೆ ತಕ್ಷಣ ನಮ್ಮನ್ನು ಕಳಿಸದೆ ವಿನಾ ಕಾರಣ ತಡ ಮಾಡುತ್ತಾರೆ. ಹೊಟ್ಟೆ ಬೇರೆ ಹಸಿಯುತ್ತಿತ್ತು. ಸಧ್ಯ ಉಪನ್ಯಾಸಕರು ಬೇಗ ಕೊಟ್ಟು ಕಳಿಸಿದರಲ್ಲ ಎಂದುಕೊಂಡು ಬೈಕ್ ಕಿಕ್ ಹೊಡೆದೆ.

ರಾತ್ರಿ ಹೀಗೆ ಬಂದಾಗ ಗಂಭೀರವಾದ ಕಾಯಿಲೆಯಿದ್ದರೆ ಬೇಸರವಾಗುವುದಿಲ್ಲ. ನಾಳೆಯವರೆಗೂ ಬಿಟ್ಟಿದ್ದರೆ ರೋಗಿಗೆ ತೊಂದರೆಯಾಗುತ್ತಿತ್ತು. ನಾನು ಕಷ್ಟಪಟ್ಟು ಬಂದಿದ್ದು ಒಳ್ಳೆಯದಾಯಿತು ಎನಿಸುತ್ತಿತ್ತು. ಆದರೆ ಈ ಮಹರಾಯ ಮಾತ್ರೆ ಬರೆದುಕೊಡುತ್ತೇನೆ ಎಂದರೂ ಕೇಳಲಿಲ್ಲ ಸೀರಿಯಸ್ ಎನ್ನುವ ಹಾಗೆ ಕರೆದುಕೊಂಡು ಬಂದರು ಈ ಕತ್ತಲಲ್ಲಿ. ಬೈಕು ಹೊಸದಾದದ್ದರಿಂದ ಪರವಾಗಿಲ್ಲ. ಅಕಸ್ಮಾತ್ ಒಬ್ಬನೆ ಬರುವಾಗ ಇಂಥ ಕಡೆ ಪಂಕ್ಚರ್ ಆಗಿಬಿಟ್ಟರೆ ಗತಿ ಏನು? ಯಾರಿಗಾದರೂ ಕಾದು ಅವರಿಂದ ಡ್ರಾಪ್ ತೆಗೆದುಕೊಳ್ಳೋಣವೆಂದರೆ ತುಂಬಾ ವಿರಳ ಜನಸಂಚಾರದ ರಸ್ತೆ ಬೇರೆ.

ಬೈಕನ್ನು ರಸ್ತೆಯಲ್ಲೇ ಬಿಟ್ಟು ಬೇರೆ ಯಾರಾದರೂ ಸಿಗುವವರೆಗೆ ನಡೆದುಕೊಂಡು ಹೋಗದೆ ವಿಧಿಯಿಲ್ಲ. ಇನ್ನೊಮ್ಮೆ ಕತ್ತಲಾದ ಮೇಲೆ ಈ ರಸ್ತೆಯಲ್ಲಿ ಎಂದೂ ಬರಬಾರದು. ಕರೆಯಲು ಬಂದವರನ್ನು ಕೂಡಿಸಿಕೊಂಡು ಬಂದು ವಾಪಾಸು ಹೋಗುವಾಗ ಒಬ್ಬನೇ ಹೋಗುವಂಥ ಪರಿಸ್ಥಿತಿ ತಂದುಕೊಳ್ಳುವ ಮೂರ್ಖತನ ಮಾಡಿಕೊಳ್ಳಬಾರದು. ‘ನೀವು ಹೋಗಿರಿ ನಾನು ಆನಂತರ ಬರುತ್ತೇನೆ’ ಎಂದು ಬಂದವರನ್ನು ಕಳಿಸಿ ನಂತರ ಯಾರನ್ನಾದರೂ ಜೊತೆಗೆ ಕರೆದುಕೊಂಡು ಹೋಗಬೇಕು. ಇವೊತ್ತೂ ಕೂಡ ನನ್ನ ರೂಂ ಮೇಟ್ ಮೇಷ್ಟ್ರನ್ನ ಕರೆದುಕೊಂಡು ಬರಬಹುದಿತ್ತು ಆಗ ನನಗೆ ಹೊಳೆಯಲೇ ಇಲ್ಲವಲ್ಲ ಎಂದುಕೊಳ್ಳುವ ಹೊತ್ತಿಗೆ ಅವರು ಅಡುಗೆ ಮಾಡುತ್ತಿದ್ದುದು ಜ್ಞಾಪಕವಾಗಿ ಅದನ್ನು ಬಿಟ್ಟು ಬರುವುದು ಎಲ್ಲಿ ಸಾಧ್ಯವಾಗುತ್ತಿತ್ತು ಎಂದು ಸಮಾಧಾನ ಮಾಡಿಕೊಂಡೆ. ಸಧ್ಯ ಈಗ ಹುಷಾರಾಗಿ ತಲುಪಿದರೆ ಸಾಕು. ಕತ್ತಲಲ್ಲಿ ಮೈಯೆಲ್ಲಾ ಕಣ್ಣಾಗಿ ನಿಧಾನವಾಗಿ ಬೈಕು ಓಡಿಸುತ್ತ ಮನೆ ಸೇರಿದಾಗ ರೂಮ್ ಮೇಟ್ ಆಗಲೇ ಅಡುಗೆ, ಊಟ ಮುಗಿಸಿ ಏನನ್ನೋ ಓದುತ್ತಿದ್ದವರು ‘ಯಾಕ್ಸಾರ್ ಇಷ್ಟು ಲೇಟು?’ ಎಂದು ವಿಚಾರಿಸಿದರು.

ಸುಮಾರು 8-10 ದಿನಗಳಾದ ನಂತರ ಒಂದು ದಿನ ಮಧ್ಯಾನ್ಹ ಕೇಸುಗಳು ಇರದಿದ್ದುದರಿಂದ ನಾನು ಸ್ಟಾಕ್ ಬುಕ್‍ನಲ್ಲಿ ಔಷಧಿಗಳ ಖರ್ಚು ಹಾಕುತ್ತಿದ್ದೆ. ಕಾಂಪೌಂಡರ್ ಕಾಳಪ್ಪ ‘ಸರ್ ಟೀ ಕುಡಿದುಬರುತ್ತೇನೆ’ ಎಂದು ಹೊರಟರು. ಅವರು ಹೋಗುವುದು ಟೀ ಕುಡಿಯುವುದಕ್ಕಿಂತ ಹೆಚ್ಚಾಗಿ ಸಿಗರೇಟು ಸೇದಲು ಎಂದು ಗೊತ್ತಿತ್ತು. ಹೋಟೆಲಿಗೆ ಹೋದರೆ ಇವರು ಹೋಟೆಲಿನ ದೋಸ್ತಿ ಹುಡುಗನೊಂದಿಗೆ -ಗಿರಾಕಿಗಳಿಲ್ಲ ಎಂದರೆ -ಒಂದರ್ಧ ಗಂಟೆ ಹರಟೆ ಹೊಡೆದು ಬರುವುದು ರೂಢಿ. ಅವರು ಟೀ ಹೆಸರು ಎತ್ತಿದ್ದರಿಂದ ನನಗೂ ಟೀ ಕುಡಿಯಬೇಕೆನ್ನುವ ಹುಕ್ಕಿ ಬಂದು ‘ಇಲ್ಲಿಗೂ ಒಂದು ಟೀ ಕಳಿಸಿ’ ಎಂದು ಹೇಳಿ ನನ್ನ ಕೆಲಸದಲ್ಲಿ ತೊಡಗಿದೆ.

ಸುಮಾರು ಅರ್ಧ ಗಂಟೆಯ ನಂತರ ಬಂದ ಕಾಳಪ್ಪ ‘ಸಾರ್ ನೀವು ಹೋದವಾರ ಬಲ್ಕುದುರೆಗೆ ಹೋಗಿ ಬಂದ್ರಾ … ರಾತ್ರಿ?’ ಪ್ರಶ್ನಿಸಿದರು. ಅದನ್ನು ಯಾಕೆ ಕೇಳುತ್ತಿದ್ದಾರೆ, ಎತ್ತಿಗೇನಾದರೂ ತೊಂದರೆಯಾಗಿರಬಹುದೇ ? ಅವೊತ್ತು ಚನ್ನಾಗೇ ಇತ್ತಲ್ಲ ಎಂದುಕೊಂಡು ‘ಹೌದು ಅವರಾರೋ ಲೆಕ್ಚರರಂತೆ ಎತ್ತಿಗೆ ಹುಷಾರಿಲ್ಲ ಅಂತ ಹೋಗಿಬಂದೆನಲ್ಲ’ ತಲೆ ಎತ್ತದೆ ಉತ್ತರಿಸಿದೆ. ‘ಏನಾಗಿತ್ತು ಸಾರ್?’ ಎಂದು ಮತ್ತೆ ಪ್ರಶ್ನಿಸಿದರು. ಬರೆಯುವ ಕೆಲಸ ಬಿಟ್ಟು ಪೆನ್ನನ್ನು ಕೆಳಗೆ ಇಟ್ಟು ಮೈಮುರಿಯುತ್ತ ಅವರತ್ತ ನೋಡಿ ‘ಏನೂ ಆಗಿರಲಿಲ್ಲ ಕಣ್ರಿ. ಎತ್ತು ಎಲ್ಲೋ ಒಂದೆರಡು ಸಾರಿ ಕೆಮ್ಮಿರಬೇಕು, ಪುಣ್ಯಾತ್ಮ ಹೆದರಿ ತುಂಬಾ ಸೀರಿಯಸ್ ಅನ್ನುವ ಹಾಗೆ ಕರೆದುಕೊಂಡು ಹೋದರು. ಔಷಧಿ ಕೊಟ್ಟು ಮಾತ್ರೆ ಬರೆದುಕೊಡ್ತೀನಿ ಅಂದರೂ ಕೇಳಲಿಲ್ಲ. ಯಾವ ಸೀಮೆ ಲೆಕ್ಚರರೋ ಏನೋ ಒಂದು ಅವಿಲ್ ಹಾಕಿ ಬಂದೆ ಹೋದ ತಪ್ಪಿಗೆ’ ಎಂದೆ ಮನದ ಅಳುಕನ್ನು ತೋರಿಸದೆ. ‘ಹೌದು ಸಾರ್ ಅದಕ್ಕೆ ಏನೂ ಆಗಿರಲೇ ಇಲ್ಲ’ ಎಂದರು. ಆಶ್ಚರ್ಯವಾಯಿತು.

ಕುತೂಹಲದಿಂದ ಮುಂದೆ ಬಾಗಿ ಅದು ಹೇಗೆ ಇವರಿಗೆ ಗೊತ್ತು ಎನ್ನುವ ಮುಖಭಾವದಲ್ಲಿ ಅವರನ್ನೇ ನೋಡಿದೆ. ಕಾಂಪೌಂಡರ್ ವಿವರಿಸಿದರು. ಅಂದು ಉಪನ್ಯಾಸಕ ದಾವಣಗೆರೆಯಿಂದ ಇಲ್ಲಿಗೆ ಬಂದು ಪ್ರತಿದಿನದಂತೆ ಹೊಳಲಕರೆಯಿಂದ ಬಲ್ಕುದುರೆಗೆ ಹೋಗುವ 7. 30 ರ ಲಾಸ್ಟ್ ಬಸ್ಸಿಗೆ ಹೋಗಲು ಹೋಟಲಲ್ಲಿ ಟೀ ಕುಡಿಯುತ್ತ ಕಾಯುತ್ತಿದ್ದರಂತೆ. ಅಷ್ಟರಲ್ಲಿ ಬಂದ ಬಸ್ಸಿನ ಏಜೆಂಟ್ ಬಸಣ್ಣ ‘ಆ ಬಸ್ಸು ಇನ್ನು ಮೂರು ದಿನ ಬರಲ್ಲ ಬಿಡ್ರೀ ಮೇಜರ್ ರಿಪೇರಿ ಐತಿ’ ಎಂದಾಗ ಏನು ಮಾಡುವುದು ಎಂದು ತೋಚದಾಗಿದೆ. ಊರಿಗೆ ಹೋಗಲು ದಾವಣಗೆರೆಯಿಂದ ಬಂದಾಗಿದೆ.

ಈಗ ಬಸ್ಸಿಲ್ಲ ಎಂದರೆ 10 ಕಿಲೋಮೀಟರ್ ನಡೆದುಕೊಂಡು ಬಲ್ಕುದುರೆಗೆ ಹೋಗುವುದು ಅದೂ ರಾತ್ರಿ ಸಾಧ್ಯವೇ ? ಯಾರದಾದರೂ ಸೈಕಲ್ಲು ತೆಗೆದುಕೊಂಡು ಹೋಗಬೇಕು ಅಥವಾ ಯಾರ ಮನೆಯಲ್ಲಾದರೂ ರಾತ್ರಿ ಉಳಿದು ಬೆಳಿಗ್ಗೆ ಮತ್ತೆ ಇಲ್ಲಿಂದಲೇ ಡ್ಯೂಟಿಗೆ ಹೋಗಬೇಕು. ಆಟೋ ರಂಗಣ್ಣನ್ನ ಕರೆದುಕೊಂಡು ಹೋದರೆ ಹಗಲಿನಂತೆ ‘ಸೀಟು ಲೆಕ್ಕ’ ಕೊಡುವ ಹಾಗಿಲ್ಲ. 50-60 ರೂಪಾಯಿನಾದರೂ ಕೊಡಲೇಬೇಕು. ಇಲ್ಲಾ ರಾತ್ರಿ 10 ರ ಕಡೇ ಬಸ್ಸಿಗೆ ಮತ್ತೆ ದಾವಣಗೆರೆಗೇ ವಾಪಾಸು ಸ್ನೇಹಿತರ ರೂಮಿಗೆ ಹೋಗಿ ನಾಳೆ ಡ್ಯೂಟಿ ಮುಗಿಸಿ ಬೇಗನೇ ಬಂದು 6.30 ಬಸ್ಸನ್ನು ಹಿಡಿಯಬೇಕು. ಏನು ಮಾಡುವುದು ಅಂತ ಯೋಚಿಸುತ್ತ ಚರ್ಚಿಸುತ್ತಿರುವಾಗ ಹೋಟೆಲ್ ಮಾಲೀಕ ರೇವಣ್ಣ ‘ನೀವು ಅರಾಮಾಗಿ ನಿಮ್ಮೂರ್ಗೆ ಹೋಗೋ ಐಡಿಯಾ ಹೇಳ್ತನಿ’ ಎಂದು ಅವರ ಕಿವಿಯಲ್ಲಿ ಏನೋ ಹೇಳಿದನಂತೆ. ಉಪನ್ಯಾಸಕರು ‘ಆದರೆ.. ಆದರೆ ಇದು ಸರೀನಾ?’ ಕೇಳಿದ್ದಕ್ಕೆ ‘ನೀವು ಹಂಗೆ ಏನೂ ಕಳಿಸಲ್ಲಲ್ಲ. ಕೊಟ್ಟೇ ಕಳಿಸುತ್ತೀರಿ ತಾನೇ’ ಎಂದರಂತೆ ರೇವಣ್ಣ. ಟೀ ಕುಡಿದು ಉಪನ್ಯಾಸಕರು ಹೊರಟರೂ ಹೋಟಲಿನ ಹುಡುಗನಿಗೆ ಆಗ ಏನೂ ಅರ್ಥವಾಗಿರಲಿಲ್ಲವಂತೆ.

ಮಾರನೆಯ ದಿನ ರೇವಣ್ಣ ‘ಮೇಷ್ಟ್ರನ್ನ ಹ್ಯಂಗೆ ರಾತ್ರಿ ಊರು ತಲುಪಿಸಿದೆ ನೋಡು’ ಎಂದು ಹೆಮ್ಮೆಯಿಂದ ಹೇಳಿಕೊಂಡಾಗ ಹೋಟೆಲ್ ಹುಡುಗನಿಗೆ ಅರ್ಥವಾಯಿತಂತೆ ಎನ್ನುವ ವಿವರವಾದ ಮಾಹಿತಿ ಕೊಟ್ಟ ಕಾಳಪ್ಪ ‘ನೋಡಿ ಸಾ ಹ್ಯಂಗಿದಾರೆ ಜನ, ಇನ್ನೊಮ್ಮೆ ನಿಜವಾಗ್ಲೂ ಸೀರಿಯಸ್ ಅಂದಾಗ ನಾವು ಹೋಗಬೇಕೋ ಬ್ಯಾಡವೋ?’ ಎಂದು ಪ್ರಶ್ನಿಸಿದರು. ಇಂಥ ಜನರೂ ಇದ್ದಾರಲ್ಲ ಎನ್ನುವ ಬೇಸರ, ಜಿಗುಪ್ಸೆಯ ಜೊತೆಗೆ ಅಸಹಾಯಕತೆಯಿಂದ ನಿಟ್ಟುಸಿರಿಟ್ಟು ಮಾಡಿನ ಹೆಂಚು ನೋಡತೊಡಗಿದೆ.

‍ಲೇಖಕರು Avadhi

April 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. T S SHRAVANA KUMARI

    ಎಂಥೆಂತಾ ಜನರಿರುತ್ತಾರಲ್ಲಾ, ಪಾಪದವರನ್ನು ಕಂಡರೆ ಎಲ್ವರಿಗೂ ಸದರವೇ.

    ಪ್ರತಿಕ್ರಿಯೆ
    • Ravikumar S B

      ಹೌದು ಮೇಡಂ. ತಮ್ಮ ಅಭಿಪ್ರಾಯ ಸರಿ. ಅಂಥ ಜನರೂ ಇದ್ದಾರೆ. ಮನೆಗೆ ಹೋಗಿ ಚಿಕಿತ್ಸೆ ಕೊಡಬೇಕೆಂಬ ಯಾವ ಆದೇಶ ಇಲ್ಲದಿದ್ದರೂ ಕೇವಲ ಮಾನವೀಯತೆಯಿಂದ ಮನೆಗೆ ಹೋಗಿ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡುತ್ತಿದ್ದ ಪಶುವೈದ್ಯನಿಗೆ, ಊಟವೂ ದೊರಕದ ಕಗ್ಗಾಡಿನಲ್ಲಿ ತನ್ನ ಅಡುಗೆ ತಾನೇ ಬೆಯಿಸಿಕೊಳ್ಳುತ್ತಿದ ಒಬ್ಬ ಸರ್ಕಾರಿ ನೌಕರನಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿ ತಾನು ಡ್ರಾಪ್ ತೆಗೆದುಕೊಳ್ಳಲು ಯೋಚಿಸಿದ್ದು ಉಪನ್ಯಾಸಕನ ರೋಗಗ್ರಸ್ತ ಮನಸ್ಥಿತಿಯೇ ಸರಿ. ಇಲ್ಲಿ ನಾನು ಮೋಸಹೋದದ್ದು ದೊಡ್ಡ ಸಂಗತಿಯಲ್ಲ. ಇಂಥ ವಿಕೃತ ಮನಸ್ಸಿನವರೂ ಇರುತ್ತಾರೆ ಅದೂ ಉಪನ್ಯಾಸಕನಂಥ ದೊಡ್ಡ ಹುದ್ದೆಯಲ್ಲಿದ್ದೂಕೊಂಡು ಎನ್ನುವುದು ಬಹಳ ದೊಡ್ಡ ಸಂಗತಿ. ಹೇಗೆ ಸರಕಾರಿ ನೌಕರರನ್ನು ಜನ ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವುದು ಬೇಸರದ ಸಂಗತಿ. ತಮ್ಮ ಪ್ರತಿಕ್ರಿಯೆಗೆ ವಂದನೆಗಳು

      ಪ್ರತಿಕ್ರಿಯೆ
  2. Ashfaq Peerzade

    ವಾಸ್ತವದಲ್ಲಿ ಪಶುವೈದ್ಯರು ವಾಸ್ತವದಲ್ಲಿ ಇಂಥ ಸಾಕಷ್ಟು ಸಂಕಟಗಳು ಎದುರಿಸುತ್ತಾರೆ. ಮೂಲಭೂತ ಕೊರತೆಗಳ ನಡುವೆಯೂ ತಮ್ಮ ಕರ್ತವ್ಯಗಳನ್ನು ನಿಭಾಯಿಸುವ ಪಶುವೈದ್ಯರ ವೃತ್ತಿ ಬದುಕಿನ ಬವನೆಗಳು ಈ ಲೇಖನದಲ್ಲಿ ತುಂಬಾ ಚೆನ್ನಾಗಿ ನಿರೂಪಿತವಾಗಿವೆ. ಲೇಖಕರು ಮುಂದೆಯೂ ತಮ್ಮ ಅನುಭವಗಳನ್ನು ಲೇಖನ ರೂಪದಲ್ಲಿ ಕಟ್ಟಿಕೊಡಲಿ ಎಂದು ಆಶಿಸುತ್ತೇನೆ. ಲೇಖಕರಿಗೂ ಲೇಖನ ಪ್ರಕಟಿಸಿದ ಅವಧಿಗೂ ಅಭಿನಂದನೆಗಳು.

    ಪ್ರತಿಕ್ರಿಯೆ
    • Ravikumar S B

      ತಮ್ಮ ಅಭಿಪ್ರಾಯಕ್ಕೆ ಪ್ರೋತ್ಸಾಹಭರಿತ ಮಾತುಗಳಿಗೆ ವಂದನೆಗಳು ಸರ್.

      ಪ್ರತಿಕ್ರಿಯೆ
      • ಡಾ.ಮಿರ್ಜಾ ಬಷೀರ್.ತುಮಕೂರು

        ಚನಾಗಿದೆ ರವಿಕುಮಾರ್.
        ಈ ಥರದ ಪ್ರಕರಣಗಳು ನನ್ನಲ್ಲಿಯೂ ಸಾವಿರಾರಿವೆ.
        ಈಗಾಗಲೆ ಮರೆಯುತ್ತಿದ್ದೇನೆ.
        ನೀನು
        ನೆನಪು ಮಾಡಿದಂಗಾತು.
        ಬರಹ ಪಾರದರ್ಶಕವಾಗಿದೆ.
        ಬರಹ ಮಾಡುತ್ತಿರುವವರು ಪ್ರಾಮಾಣಿಕವಾಗಿದ್ದರೆ ಮಾತ್ರ ಈ ಥರದ ಪಾರದರ್ಶಕತೆ ಸಾಧ್ಯ.
        ನಮಸ್ಕಾರ.
        ಡಾ.ಮಿರ್ಜಾ ಬಷೀರ್
        ತುಮಕೂರು

        ಪ್ರತಿಕ್ರಿಯೆ
        • Ravikumar S B

          ಅಭಿಪ್ರಾಯಕ್ಕೆ, ಮೆಚ್ಚುಗೆಯ ಮಾತಿವೆ ವಂದನೆಗಳು

          ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: