ಮೋಹನ ಮುರುಳಿಯ ಸೆಳೆತ.

ಕಳೆದು ಹೋಗುವುದು

ಎಚ್.ಆರ್. ರಮೇಶ

ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ ಮನಸ್ಸಿನೊಳಗಿನ ಆಳದ ಮೂಲೆಯೆಲ್ಲೆಲ್ಲೋ ಚೇಳಿನಂತೆ ಕುಟುಕುತ್ತಿರುತ್ತದೆ. ಸೂಜಿಯಂತೆ ಚುಚ್ಚುತ್ತಿರುತ್ತದೆ. ಭರ್ಚಿಯಂತೆ ಇರಿಯುತ್ತಿರುತ್ತದೆ. ನೋವಿನ ಹಲ್ಲಿಗೆ ಮತ್ತೆ ಮತ್ತೆ ನಾಲಗೆ ತಾಗಿದಂತೆ.

ಎಡವಿದ ಬೆರಳಿಗೆ ಮತ್ತೆ ಮತ್ತೆ ಆಡುವಾಗ ನಡೆವಾಗ ಕಲ್ಲುತಾಕುವಂತೆ. ಮತ್ತು ಬಿಸಿಲಕುದುರೆಯಂತೆ ಓಡುತ್ತಿರುತ್ತದೆ ಓಡಿದಂತೆ ವೇಗ ವೇಗ. ಕನವರಿಸದ್ದು ಸಿಗದಾಗ ಏನೋ ಕಳೆದುಕೊಳ್ಳಬಾರದ ವಸ್ತುವೊಂದ ಕಳೆದಂತೆ ಮಾಯಾಮೃಗದಂತೆ. ಕಣ್ಣಮುಂದೆಯೇ ಕಾಣುತ್ತ ಕಾಣದೆ. ಸಿಕ್ಕಿತು ಎನ್ನುವಷ್ಟರಲ್ಲಿ ಸಿಗದೆ. ‘ಕರ್ವಾಲೋ’ ಕಾದಂಬರಿಯ ಹಾರುವ ಓತಿ.

ಹೌದು. ಒಮ್ಮೊಮ್ಮೊ ಹಾಗೆಯೇ. ಕಳೆದುಕೊಂಡರೆ ಇದ್ದದ್ದ ತಾಳಲಾರದ ವಿರಹ ವೇದನೆ. ಹುದುಗಲಾರದ ದುಃಖ. ನಿಜ ದುಃಖ ಮರೆಯಲಾಗುವುದಿಲ್ಲ. ಸಾವಿರ ತಾಜಮಹಲುಗಳ ಕಟ್ಟಿಸಿ. ಬೇಂದ್ರೆ ಸಾಲುಗಳು. ಸಿಕ್ಕಿತು ಎನ್ನುವಷ್ಟರಲ್ಲಿ ಸಿಗದೆ. ದಕ್ಕಿರುವ ಬದುಕಿನಲ್ಲಿ ಇರುವ ಜೀವನದಲ್ಲಿ ಕಳೆದುದರ ಕುರಿತೇ ಚಿಂತೆ. ವ್ಯಥೆ. ಬಲು.

ಗುತ್ತಿಗೆ ತಿಮ್ಮಿ ಎಲ್ಲಿ ತನ್ನ ಕೈ ತಪ್ಪಿ ಹೋಗುವಳೋ ಎನ್ನುವ ಆತಂಕ. ಇಷ್ಟಪಟ್ಟಿದುದು ಹೇಗೆ ಕಳೆದುಕೊಳ್ಳವುದು. ಬದುಕು ಒಮ್ಮೆಯಲ್ಲವೆ. ಇಷ್ಟಪಟ್ಟ ವಸ್ತು. ಮನಸಿಗೆ ಹಿಡಿಸಿದ ಸಂಗಾತಿ. ಮುಂದೆ ದೂರದಲ್ಲೆಲ್ಲೋ ಸರ್ವಜ್ಞನ ಸಾಲುಗಳ ಮಿಣುಕುಹುಳಗಳ ಮಿಣುಕು ಮಿಣುಕು.

ಸ್ವರ್ಗಕ್ಕೆ ಕಿಚ್ಚು ಹಚ್ಚು ಇಷ್ಟದ ಮಡದಿ ಜೊತೆಯಲಿದ್ದರೆ. ಭ್ರಮೆಯೋ. ಮರೀಚಿಕೆಯೋ. ಮುದುಕನಾದರೂ, ತೊಟ್ಟಿಲಲಿ ತನ್ನ ಮಗಳ ತೂಗುತ್ತಿದ್ದರೂ ಹುಚ್ಚುಹಿಡಿಸಿದ, ಕೈ ತಪ್ಪಿ ಹೋದ ಆಧುನಿಕ ಹೆಲೆನ್ ಮಾಡ್‍ಗನ್‍ಳದೆ ಧ್ಯಾನ ಯೇಟ್ಸ್‍ಗೆ.

ಮಾಡ್‍ಗನ್ ಕವಿ ಯೇಟ್ಸ್‍ನ ಚಿಂತೆಯಲ್ಲಿ. ಚಿಂತನೆಯಲ್ಲಿ. ಕವಿತೆಯ ಸಾಲಿನಲ್ಲಿ. ಬಿಟ್ಟು ಬಿಡದೆ. ಅವನ ಕವಿತೆಯ ತಧ್ಯಾತ್ಮವೇ ಆಗಿ ಪ್ರತಿ ಸಾಲಿನ ಅಡಿಯಲ್ಲಿ ಕನವರಿಕೆ.

ಕಷ್ಟಬಂದಾಗ ಇಷ್ಟಪಟ್ಟಿದ್ದವರು ಜೊತೆ ಇದ್ದಿದ್ದರೆ ಬದುಕು ಸುಖವಾಗಿರುತ್ತಿತ್ತು. ಸುಖಜೀವನವಿದ್ದಾಗ ಕಟ್ಟಿಕೊಂಡವರೆ ಸಾಕು. ಸಮಾಧಾನ. ತಮಿಳಿನ ಸುಂದರ ಪಾಂಡ್ಯನ್‍ನ ರಿಮೇಕ್ ಕನ್ನಡ ರಾಜಾಹುಲಿ ಸಿನಿಮಾದಲ್ಲಿನ ಮಾತು.

ಇರುವುದ ಬಿಟ್ಟು ಇಲ್ಲದ್ದರ ಕಡೆ ತುಡಿತ. ಮೋಹನ ಮುರುಳಿಯ ಸೆಳೆತ. ಅಡಿಗರು. ಮೈಸೂರಿನಂತಹ ದೊಡ್ಡನಗರದಲ್ಲಿ ಕುಳಿತು ಕುವೆಂಪು ತಾನು ಕಳೆದುಕೊಂಡ ನದಿ, ಝರಿ, ತೊರೆ, ಕಣಿವೆ, ಪರ್ವತ, ಮಂಜು, ಮಳೆ, ಮೀನು, ಹುಲಿ, ಗೊಬ್ಬರದ ಹುಳು, ಹೀರೆಹೂವು, ಹೆಗ್ಗಡತಿ, ಗುತ್ತಿ, ತಿಮ್ಮಿ, ಐತ, ಪೀಂಚಲು, ಅಂತ ಅವರ ನೆನಪು. ಹೋಗುವೆನು ಹೋಗುವೆನು ನಾ ಎಂಬ ಹಂಬಲ.

ಕಳೆದುಕೊಂಡುದುದರ ಕುರಿತು ಧ್ಯಾನ. ನೋವು. ಯಾತನೆ. ಕನವರಿಕೆ. ವಡ್ರ್ಸ್ ವರ್ಥ್‍ಗೆ ತನ್ನ ಬಾಲ್ಯದಲ್ಲಿ ಕಂಡ ಕಾಮನಬಿಲ್ಲು, ಕೈಯ ಬೆರಳಿಗೆ ಅಂಟಿದ ಅದರ ಬಣ್ಣ ಬೆಳೆಯುತ್ತಾ ಬೆಳೆಯುತ್ತಾ ಕಳೆದುಕೊಂಡು ಪರಿತಪಿಸುವಿಕೆ. ಲೇಕ್ ಮಣ್ಣಿನ ವಾಸನೆ ಹೆಜ್ಜೆ ಹೆಜ್ಜೆಯಲ್ಲೂ. ರೂಸೋನ ಸಾಲುಗಳು. ಮನುಷ್ಯ ಸರ್ವ ಸ್ವತಂತ್ರಿ. ಬೆಳೆಯುತ್ತಾ ಬೆಳೆಯುತ್ತಾ ಸರಪಳಿಗಳೊಳಗೆ ಸಿಕ್ಕು ಒದ್ದಾಡುವ ಪಾಪಿ.

ಕವಿ ವಡ್ರ್ಸ್ ವರ್ಥ್ ಬೆಳೆದಂತೆ ಚೆಲುವೆಯರಂತೆ ಕುಣಿದು ಕುಪ್ಪಿಳಿಸುತ್ತಿದ್ದ ಡ್ಯಾಫೋಡಿಲ್ಸ್ ಹೂವುಗಳು ಮಿಂಚಿ ಮಾಯಾವಾಗಿ ಕೇವಲ ನೆನಪು. ಪ್ರಿಯತಮೆಯನ್ನು ಕಳೆದುಕೊಂಡಷ್ಟು ವೇದನೆ ಜೀವಮಾನವಿಡೀ. ಮುಗ್ಧತೆಯ ಕಳೆದುಕೊಂಡ ಮನುಷ್ಯ ಮತ್ತೆ ಅಂತಹ ಮನಸ್ಥತಿಯ ಪಡೆಯಲು ಹಂಬಲಿಸುತ್ತಾನೆ. ಕಳೆದುಕೊಳ್ಳುವುದು ಅಂದರೆ ಖಾಲಿಯಾಗುವುದೂ.

ಬರಿದಾಗದೆ ಸೋರೆಯಲಿ ನೀರ ತುಂಬುತಿದ್ದರೆ ಅಜ್ಜಿ ತೊಳೆದು. ಕಳೆದುಕೊಳ್ಳುವುದು ಮತ್ತೆ ಜೀವಂತವಾಗುವುದರ ಪ್ರತೀಕ. ಇರಬಹುದು. ಸೋರೆಕಾಯಿಯ ತಿರುಳ ತೆಗೆಯಬೇಕು. ಕಳೆಯಬೇಕು. ತಂಬೂರಿಯ ಶೂನ್ಯದಲಿ ಜಗ ತೂಗುವ ಅಲೌಕಿಕ ನಾದ ಹೊಮ್ಮಿಸಲು. ಶೂನ್ಯದ ಒಡಲಲಿ ಸಂಗೀತದ ಪ್ರಾಣ. ಕಳಕೊಂಡು ಕೊಡುವುದು.

ಬುದ್ಧನಂತವರು ಕಳಕೊಂಡದ್ದು ಹೀಗೆ ಕೊಡಲು ಹಾಗೆ ಅಗಾಧ. ಕಳಕೊಂಡರೂ ಕಳದಂತಿರಬೇಕು. ಕೊಟ್ಟರೂ ಕೊಟ್ಟೆನೆಂಬ ಭಾವವ ತೊರೆಯಬೇಕು. ಪಡೆದರೂ ಪಡೆಯದಂತಿರಬೇಕು. ವಚನಗಳ ತಿಳಿವು.  ಅಮ್ಮನ ಮಾತು. ಅಪ್ಪನ ಮಾತು. ತಾತನ ಮಾತು. ಅಜ್ಜಿ ಮಾತು. ದಾರ್ಶನಿಕರ ಮಾತು. ಎಡಗೈಲಿ ಕೊಟ್ಟದ್ದು ಬಲಗೈಗೆ ಗೊತ್ತಾಗಬಾರದು.

ನೂರು ವರ್ಷಗಳಲಿ ಜರುಗಿದ ಇತಿಹಾಸದಂತ ಪುರಾಣ, ವಾಸ್ತವದಂತ ಪುರಾಣ, ಕನಸಂತ ವಾಸ್ತವ, ಭ್ರಮೆಯಂತ ಕನಸು, ನಿಜದಂತ ಕಲ್ಪನೆ, ಎಲ್ಲವುಗಳನು ಒಳಗೊಂಡ ಮೆಕೆಂಡೋ ಅಲ್ಲಿ ನಡೆದ ಹಿಂಸೆ, ನಾಗರಿಕತೆಯ ಹುಟ್ಟು, ಹಾದರ, ಮದುವೆ, ಸಾವು, ಯುದ್ಧ, ಪ್ರೇಮ, ಬೆಳೆದ ವಿಜ್ಞಾನ, ಹಾಸುಹೊಕ್ಕಾದ ನಂಬಿಕೆಗಳು, ಮೂಢನಂಬಿಕೆಗಳು, ಚಿಗುರಿಂದ ಬೃಹದಾಕಾರದೆತ್ತರಕೆ ಬೆಳೆದ ತಲತಲಾಂತರಗಳು,  ಮಾಕ್ರ್ವೆಜ್‍ನ ಏಕಾಂತದಲಿ ಅರಳಿದವು.

ಅರಳಿ ಅವನು ಅಳಿದರೂ ಉಳಿದವು ಅವನ ನೆನಪುಗಳು ಕೃತಿಯಾಗಿ. ಅವಸರವು ಸಾವಧಾನದ ಬೆನ್ನೇರಿ. ಯಾರೂ ಅಮುಖ್ಯರಾಗದೆ, ಯಾವದೂ ಯಃಕಶ್ಚಿತವಾಗದೆ, ಮೊದಲಿಲ್ಲದೆ, ತುದಿಯಿಲ್ಲದೆ, ನಿಲ್ಲದೆ, ಮುಟ್ಟದೆ ಕೊನೆ, ಅರ್ಥವಾಗಿ ಎಲ್ಲ ವ್ಯರ್ಥವಾಗದೆ. ಮದುಮಗಳ ಮೊದಲ ಸಾಲುಗಳು. ಕಳೆದದ್ದು ರಕ್ತವಾಗಿ ಹರಿಯುತ್ತ. ಮೈ-ಮನಧಮನಿಗಳಲ್ಲಿ. ಕಳೆದುಹೋದುದರ ಕನವರಿಸುತ್ತ ಸದ್ಯದಲಿ ಅಮರತ್ವ ಬಯಸಿ.

ಕೇವಲ ಒಂದೇ ದಿನದಲಿ ಮೊಗ್ಗಾಗಿ ಅರಳಿ ಕಂಪ ಸೂಸಿ, ಸೌಂದರ್ಯವ ಬಿತ್ತಿ ಜಗದಲಿ, ಬಾಡಿ ರಾತ್ರಿಯಲಿ ಮಣ್ಣಾಗಿ, ಸಾರ್ಥಕವ ಪಡೆದು. ಕಳೆದು ಹೋದದ್ದು ಕೇವಲ ನೆನಪೇ? ಸದ್ಯದಲಿ ನಿಂತು ಪುರಾಣದಂತ ಇತಿಹಾಸವನ್ನು ಅರಿಯುವ ಕನ್ನಡಿ. ಮನುಷ್ಯನ ಅಂತರಂಗ ಮತ್ತು ಬಹಿರಂಗದ ಸೇತುವೆ. ಹೊರಗಿನ ನಟನೆಯಾಗುತ್ತ ಒಳಗಿನ ಸತ್ಯಸಹಜವಾಗುತ್ತ ಅಷ್ಟಕ್ಕೂ ಎಲ್ಲನೂ ಹೇಳಿ ಬಟಾಬಯಲಮಾಡಿಕೊಳ್ಳವುದಾದರು ಹೇಗೆ ಬದುಕಾ.

ಪ್ರಕೃತಿಯಲ್ಲಿಯೇ ಇಲ್ಲವೆ ಅಡಗಿ ಅಸಂಖ್ಯ ಕೌತುಕಗಳು, ಗುಟ್ಟುಗಳು, ರಹಸ್ಯಗಳು. ಲಂಕೇಶರ ಮಾತು ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳುವುದೆಂದರೆ ಅದೊಂದು ಭಯಾನಕವೇ ಸರಿ. ನನ್ನ ಒಳಗನ್ನು ಅವಳು ಅವಳದನ್ನು ನಾನು. ಅರ್ಥಮಾಡಿಕೊಳ್ಳಲು ಸಾಧ್ಯವೇ?! ಹಾಗಾದರೆ ನಮ್ಮ ಬದುಕು ನಟನೆಯೇ ಹೊರಗೆ? ಉತ್ತರ ನಿರುತ್ತರ. ಸುಳ್ಳಿನಂತ ನಿಜ. ನಿಜದಂತಿನ ಸುಳ್ಳು. ಸಂಕೀರ್ಣವಲ್ಲವೆ ಇದು.

ಕೊನೆಯ ದಿನಗಳಲಿ ಅಪ್ಪ ಆಸ್ಪತ್ರೆಯ ಬೆಡ್ಡಿನಲ್ಲಿ. ಸಾವಿನ ದಿನಾಂಕ ಗೊತ್ತಿಲ್ಲದಿದ್ದರೂ ದಿನಗಳು ಆಗಲೇ ಗಡಿಯಾರದ ಮುಳ್ಳಿನಂತೆ. ಎಷ್ಟೊಂದು ಜಗಳ. ಪ್ರತಿಭಟನೆ. ಮುನಿಸು. ವಿರೋಧ. ಅಹಂ.ಕೋಪ. ಹಿಂಸೆ.ಪ್ರೀತಿ. ಸ್ನೇಹ. ನನ್ನದೊಂದು ಪದ್ಯ ಪತ್ರಿಕಯಲ್ಲಿ ಕಾಣಿಸಿಕೊಂಡರೆ ಭಾನುವಾರವಿಡೀ ಕಿಸಿಯಲ್ಲಿ ಮಡಚಿಟ್ಟುಕೊಂಡು ಸರೀಕರಿಗೆ ತೋರಿಸುತ್ತ ಬೀಗುತ್ತಿದ್ದುದು ನೆನಪು.

ಕೊನೆಯ ದಿನಗಳಲಿ ಕಾಂತಿ ಕಣ್ಣುಗಳಲಿ. ಹಾರುವಮುನ್ನ ದೀಪ ಜೋರಾಗಿ ಉರಿಯುತ್ತೆ ಅನ್ನುತ್ತಾರಲ್ಲ ಹಾಗೆ. ಒಳಗಿನ ಕಾಯಿಲೆಯ ನೋವನ್ನು ಸಹಿಸಿಕೊಳ್ಳಲಾರದೆ ಸತ್ತು ಹೋಗಿಬಿಡಲಾ ಹಾರಿ. ನಿಮಗೆಲ್ಲ ಯಾಕೆ ಸುಮ್ಮನೆ ತೊಂದರೆ. ಎಷ್ಟೂಂತ ನೋಡುತ್ತೀರಿ. ನಾನು ಸುಮ್ಮನೆ ಹೊರಗೆ ಯುಗಾದಿಯ ಚಂದ್ರನ ನೋಡುತ್ತಿದ್ದೆ. ಚೆನ್ನಿಯ ಕ್ಲಾಸ್ ರೂಮ್. ಜೀವಂತ ಸೀಸರ್‍ಗಿಂತ ಸತ್ತ ಸೀಸರ್ ಹೆಚ್ಚು ಜೀವಂತ. ಹೆಚ್ಚು ಪ್ರಬಲ.

ಕಳೆದು ಹೋದುದು ಮತ್ತೆ ಜೀವಂತ ಸಂಗಾತಿಯಾಗಿ ನಮ್ಮ ನಿತ್ಯದ ಬದುಕಿನಲ್ಲಿ. ಸತ್ತ ಅಪ್ಪ ಕ್ಷಣಕ್ಷಣವೂ ಜೀವಂತವಾಗಿ. ಮುತುವರ್ಜಿವಹಿಸಿ ನೀರೆರೆದು ಪೊರೆದು ನನ್ನಾಕೆ ಬೆಳೆಸಿದ ಗಿಡದಲ್ಲಿ ಡೆಹ್ಲಿಯಾ ಹೂವಾಗಿ ಗಿಡದ ತುಂಬೆಲ್ಲಾ ನಗು ನಿನ್ನೆ. ಇಂದು ಬಣ ಬಣ ಅನ್ನುತ್ತಿದೆ ಸತ್ತವರ ಮನೆಯಂತೆ. ಬೇಂದ್ರೆ ಹೇಳಿದ ಮಾತಿರಬೇಕು.

ಪ್ರತಿಕ್ಷಣವೂ ಪ್ರಳಯ. ಪ್ರತಿ ಕ್ಷಣವೂ ಸೃಷ್ಟಿ. ಇದೇ ಬದುಕಿನ ಲಯವಿರಬೇಕು. ಲಯದ ರಿದಮ್ಮ. ಲಯದ ವಿನಾಶ. ಕಳೆಯುವುದು. ಪಡೆಯುವುದು. ನಾವು ಕಲಿತ ಪ್ರೈಮರಿ ಶಾಲೆಯ ಗಣಿತದ ಪಾಠಗಳು ಹೇಗೆಲ್ಲ ಬೆಳೆದು ಹೇಗೆಲ್ಲ ಆವರಿಸಿಕೊಂಡಿವೆ ನಾವು ಬೆಳೆದಂತೆ. ಮಡಿಕೇರಿಗೆ ಬರುವಾಗ ಅಪ್ಪ ಕುರುಬರ ಹಟ್ಟಿಯ ಹುಡುಕಿಕೊಂಡು ಹೋಗಿ ನನಗಾಗಿಯ ನೇಯಿಸಿಕೊಂಡು ತಂದುಕೊಟ್ಟ  ಕಪ್ಪು ಕಂಬಳಿ ಎಷ್ಟು ಮಳೆಗಳಲ್ಲಿ, ಚಳಿಗಳಲ್ಲಿ ಬೆಚ್ಚಗಿಟ್ಟಿಲ್ಲ. ಜೊತೆಗೆ ಕಪ್ಪು ಕೊಡೆ.

ಅದು ಹೇಗೋ ಆ ಕಪ್ಪು ಕೊಡೆ ಕಳೆದಿದೆ. ಕಳೆದುಹೋಗಿದೆ. ಹೊಸ ಕೊಡೆ ಖರೀದಿಸುವಾಗೆಲ್ಲ ಅಪ್ಪನ ಆ ಕಪ್ಪು ಕೊಡೆ ನೆನಪಾಗುತ್ತದೆ. ಅನಂತಮೂರ್ತಿಯವರ ಪದ್ಯ ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ. ಬ್ಲು ಅಂಬ್ರೆಲಾ ಸಿನಿಮಾದ ಸುಂದರ ಮೋಹಕ ಕೊಡೆಯಷ್ಟು ಸೌಂದರ್ಯವಾಗಿಲ್ಲದಿದ್ದರೂ. ನೆನಪಿಗೆ, ಕಾಳಜಿಗೆ, ಸೌಂದರ್ಯಬೇಕೆ. ಪಡೆದ ವಸ್ತುವಿಗೆ ಬೆಲೆಕೊಟ್ಟರೆ ಬೆಲೆಕಳೆದುಕೊಳ್ಳವುದು ನಾವಲ್ಲವೆ.

ಕಳೆದು ಹೋದದ್ದು ಮತ್ತೆ ನೆನಪಾಗುತ್ತಿದೆ. ರಾಧೆಗೆ ಕೃಷ್ಣನ ನೆನಪಿನಂತೆ. ಕೃಷ್ಣ ಕೇವಲ ಪ್ರಿಯಕರನೇ, ಸ್ನೇಹಿತನೇ, ಯಾವ ಹೆಸರಿಡಲಿ ಅವರ ಸಂಬಂಧಕೆ. ಶೇಕ್ಸಿಪಿಯರ್ ಹೇಳುವಂತೆ ರೋಮಿಯೋ ಜೂಲಿಯೆಟ್‍ನಲ್ಲಿ ಹೆಸರಲ್ಲೇನಿದೆ.

ಮೊದಲ ಮುತ್ತು, ಮೊದಲ ಚಾಕ್‍ಲೇಟ್, ಮೊದಲ ಆಲಿಂಗನ, ಮೊದಲ ಮಳೆಯಲ್ಲಿ ಜೊತೆಸಾಗಿ ಒಂದೆ ಕೊಡೆಯಡಿಯಲ್ಲಿ ಉಸಿರಿಗೆ ಉಸಿರತಾಕಿಸಿ ದೇಹಕ್ಕೆ ದೇಹ ಅಂಟಿಕೊಂಡು. ನೆನಪುಗಳು ಒದ್ದೆನೆಲದಲ್ಲಿನ ಹೆಜ್ಜೆಗಳು.

ಹೋದವರೆಲ್ಲ ಒಳ್ಳೆಯದಕೆ ಎನ್ನುವ ಕನ್ನಡ ಸಿನಿಮಾದ ಹಾಡು ಬಾತ್ ರೂಮಿನಲ್ಲಿ ಎಷ್ಟು ಸಲ ಗುನುಗಿಲ್ಲ. ಅಮ್ಮನ ಮಾತು. ಅದು ಎಲ್ಲ ಹಿರಿಯರ ಮಾತೂ ಆದೀತು. ಆಗೋದೆಲ್ಲ ಒಳ್ಳೆಯದಕ್ಕೆ.

ಒಮ್ಮೊಮ್ಮೆ ಸರಿ. ಒಮ್ಮೊಮ್ಮೆ ಹೊಂದಿಕೆಯಾಗುವುದಿಲ್ಲ. ಡನ್ ಕಂಡಂತೆ ಪ್ರೀತಿಯ ಮನದನ್ನೆಯನ್ನು ಕಾಣುವ ಪ್ರತಿ ಹೆಣ್ಣಿನಲ್ಲೂ. ಹೀಗೆ ಕಳೆದು ಹೋಗುತ್ತದೆ. ಮತ್ತೆಯಾವುದೋ ಸಿಗುತ್ತದೆ. ಕಳೆದದ್ದು ಮಾತ್ರ ವಾಸಿಯಾಗದ ಅಥವಾ ಮಾಯದ ಗಾಯ.

ಕಳೆದು ಹೋದದ್ದು ಗಾನ್ ವಿಥ್ ದ ವಿಂಡ್ ನ ಹಾಗೆ. ಫೆಡ್ಲರ್ ಆನ್ ದ ರೂಫ್ ನ ನಾಯಕ ಆ ಹೆಣ್ಣು ಮಕ್ಕಳ ತಂದೆ ಕಳೆದುಕೊಳ್ಳುತ್ತಲೇ ಹೋಗುತ್ತಾನೆ ಜೀವನ ಪರ್ಯಂತ. ಕೆಲವರ ಬದುಕು ಕಳೆದು ಕೊಳ್ಳವುದೇ ಆಗಿರುತ್ತದೆ. ದಾರ್ಶನಿಕರ ಮಾತು. ನದಿಗ ನೆನಪಿನ ಹಂಗಿಲ್ಲ. ಡಿ.ಆರ್. ಸಹ ಹೇಳುತ್ತಾರೆ ಈ ಮಾತನ್ನು. ನಿಜಸ್ವಪ್ನದ ಮುನ್ನುಡಿಯಲ್ಲಿ ರಾಜಶೇಖರ್ ನೆನೆಸಿಕೊಳ್ಳುವ ಸಾಲುಗಳು.

ನದಿಗೆ ಒಮ್ಮೆ ಇಟ್ಟ ಹೆಜ್ಜೆ ಮತ್ತಮ್ಮೊ ಇಟ್ಟಾಗ ಮೊದಲಿನಂತಿರುವುದಿಲ್ಲ. ಕಾಲಿಟ್ಟ ಮನುಷ್ಯನೂ ಒಬ್ಬನೇ ಅಲ್ಲ. ಬೇರೆ ಬೇರೆಯೂ ಅಲ್ಲ. ನದಿಯೂ ಸಹ ಅಷ್ಟೇ. ಅದೇ ಅಲ್ಲ. ಬೇರೆಯದೂ ಅಲ್ಲ. ಹೀಗೆ… ಕಳೆದುಕೊಳ್ಳುವುದು ಈಗಿನ ‘ಇರು’ ವನ್ನು ಪಡೆದುಕೊಳ್ಳುವುದಕ್ಕಾಗಿಯೇ. ಬಯಲು ಸೀಮೆಯ ಮಾಳಿಗೆಯ ಮೇಲೆ ಮಲಗಿ ನಕ್ಷತ್ರಗಳ ಎಣಿಸುತ್ತಾ ಮಡಿಕೇರಿಯ ಹಿಮ ಬೀಳುವ ಚಳಿಯಲ್ಲಿ  ಕಾಣುವ ಮಿಣುಕುಹುಳ ಧರೆಗೆ ಬಿದ್ದು ಜೋತಾಡುತ್ತಿರುವ ಬೆಳಕಿನ ಜೋಕಾಲಿ ಕತ್ತಲಲಿ.

ಸಾಗರದಿಂದ ಹೆಗ್ಗೋಡಿಗೆ ಹೋಗುವಾಗ ರಾತ್ರಿ ಬಸ್ಸಿನ ಆಚೆ ಇಂತದ್ದೆ ಮಿಣುಕುಹುಳದ ದೃಶ್ಯ ಕಾರಂತರಿಗೆ ಗೋಕುಲ ನಿರ್ಗಮನದಲಿ ನೆನಪುಗಳಾಗಿ, ನೋವಾಗಿ, ಸಂಭ್ರಮದ ಕ್ಷಣಗಳಾಗಿ ಕಂಡು ರಾಧೆಯರಿಗೆ, ಗೋಪಿಕೆಯರಿಗೆ ಕೃಷ್ಣ ಬೀಳ್ಕೊಡುವಾಗ. ಕಳೆದುಹೋಗುತ್ತಿದೆ ಕೃಷ್ಣನ ಉಸಿರು, ಕೊಳಲು, ಮೋಹನರಾಗ.

ಕಳೆದ ಕೃಷ್ಣ ನಿಟ್ಟುಸಿರಾಗಿ ರಾಧೆಯ ಕನಸುಗಳಲ್ಲಿ. ನಿದ್ರೆಗಳಲ್ಲಿ. ಕಣ್ಣೆದುರೇ ಟೈಟಾನಿಕ್ ಮುಳುಗುತ್ತಿದೆ. ಮ್ಯೂಸಿಕ್ ಬ್ಯಾಂಡ್‍ನವರ ಕೊನೆಯ ಸಂಗೀತ. ಕೊನೆಯ ಸ್ಕಾಚ್. ಕೊನೆಯ ಸಿಪ್. ಜಾಕ್‍ನ ಕೊನೆಯ ಮುತ್ತು. ಇಲ್ಲೀತನಕ ಜೊತೆಯಾಗಿಯೇ ಇದ್ದದ್ದು ಸಂಗಾತಿಯಾಗಿ ಕಳೆದುಹೋಗುತ್ತಿದೆ. ಮುಳುಗಿಹೋಗುತ್ತಿದೆ. ಕೈ ತಪ್ಪಿಹೋಗುತ್ತಿದೆ.

ಪಿ.ಜಿ. ಮುಗಿಸಿ ಬರುವಾಗ ಕೊನೆಯ ಬಾರಿ ಸ್ನೇಹಿತರ ಅಪ್ಪಿದ್ದು, ಕೂಗಾಡಿದ್ದು, ಯೂನಿರ್ವಸಿಟಿಯ ರಸ್ತೆಗಳಲ್ಲಿ ತಿರುಗಾಡಿದ್ದು. ನಾಳೆಯ ಸೆಮೆನಾರಿಗೆ ಮಳೆಬಂದರೂ ಬಿಡದೆ ಲಂಕೇಶರ ಸಂಕ್ರಾಂತಿಯ ಬಗ್ಗೆ ಕನ್ನಡದ ಹುಡುಗಿಯರ ಜೊತೆ ಮಾತಾಡಿದ್ದೂ ಸಹ ಕಳೆದುಹೋಗಿದೆ. ನೆನಪಾಗಿದೆ.

ಕಳೆದು ಹೋಗಿರುವುದರ ನೆನಪು ಸುಮಧುರ ಯಾತನೆ. ವಿದಾಯವೂ. ವಿದಾಯದ ಅಗಲಿಕೆ ಅನಿವಾರ್ಯ. ನೋವು. ಹೇಳಿಕೊಳ್ಳಲಾರದ ಸಂಕಟ. ಮತ್ತೆ ಲಂಕೇಶರ ಮತು ವಿದಾಯದ ಅನಿವಾರ್ಯತೆಯನ್ನು ಅರಿಯದ ಮನುಷ್ಯ ನಾಶವಾಗುತ್ತಾನೆ.

ಶಕುಂತಲೆ ಆಶ್ರಮದಲ್ಲಿಯೇ ಇದ್ದಿದ್ದರೆ. ಇರಲು ಆಗದು. ದುಶ್ಯಂತನ ಸೆಳೆತ. ಅಪ್ಪ ಕಣ್ವ ದಾರ್ಶನಿಕನಿರಬಹುದು. ಋಷಿಯಿರಬಹುದು. ಮಗಳ ಮೇಲಿನ ಮೋಹ. ಅವನೂ ಎಲ್ಲರಂತಲ್ಲವೆ. ಅವನಿಗೂ ಖಿನ್ನತೆ. ಬೇಸರ. ಮಗಳ ಕಳುಹಿಸುವಾಗ ಕಣ್ಣಂಚಲ್ಲೆ ಹನಿ. ನೆನಪಿನ ಉಂಗುರ ನದಿಯಲ್ಲಿ ಅಲೆ ಅಲೆಯಾಗಿ ಆಡುತ್ತ ನೀರಲ್ಲಿ ಕಳೆದಿದೆ. ಪ್ರೀತಿಯ ಸಾಬೀತಿಗೆ ನೆನಪು ಬೇಕಾ.

ದುಶ್ಯಂತನಿಗೆ ಬೇಕು. ಶಕುಂತಲೆಯ ಲೆಕ್ಕದಲಿ ಸಾದ ಸೀದ ಪ್ರಿಯಕರ. ಕನಸಿಗೆ ರೂಪು ಕೊಟ್ಟ ಕಲಾವಿದ. ಬೇಟೆಗಾರನಾದರೂ ಪ್ರೀತಿಯ ಸ್ಫುರಿಸುವ ನಲ್ಲ. ಅವನಿಗಾಗಿ ಎಲ್ಲನೂ ಕಳೆದುಕೊಳ್ಳುತ್ತಾಳೆ ಅಪ್ಪ ಕಣ್ವನನ್ನು, ಚಿಗರೆಮರಿಗಳನ್ನು, ಸ್ನೇಹಿತೆಯರನ್ನು, ನದಿ-ತೊರೆ-ಝರಿಗಳನ್ನು, ಆಡಿಬೆಳೆದ ಆಶ್ರಮವನ್ನು. ನನ್ನ ಹೆಂಡತಿಯೂ ಹೀಗೆ ಅಲ್ಲವೆ ಬಂದಿರುವುದು ತೊರೆದು ತವರ.

ಜೆ.ಕೆ, ತಿಪ್ಪ, ಗೌಡ, ಗುರು ಈ ಎಲ್ಲರ ಹೆಂಡಂದಿರೂ ಸಹ ಬಂದಿದ್ದಾರೆ ಪ್ರೀತಿಯ ಅರಸಿ ಗಂಡನ ಮನೆಯಲ್ಲಿ. ಕಳೆದುಕೊಂಡು ಪಡೆಯುತ್ತಾ. ಇದು ಎಲ್ಲರ ಪಾಡೂ. ಶಕುಂತಲೆಯ ಯಾತನೆ ಪ್ರತಿ ಹೆಣ್ಣಿಗೂ. ಇಲ್ಲಿಯೇ ಎಲ್ಲವನ್ನು ಬಿಡಬೇಕು. ಕಳೆದುಕೊಳ್ಳಬೇಕು. ಪಡೆದದ್ದು ಇಲ್ಲಿಂದಲೇ ಅಲ್ಲವೆ. ಸತ್ತವರ ಮನೆಯಲ್ಲಿ ಕೇಳುವ ಮಾತು. ಯಾರನ್ನು ತಾನೆ ಬಿಟ್ಟೀತು. ಎಲ್ಲರೂ ಒಂದಲ್ಲ ಒಂದು ದಿನ. ಹಿಂದೆ ಮುಂದೆ ಸಂತೆದಾರಿ. ಇರುವಾಗ ಉಣಬೇಕು. ಇರುವಾಗ ಉಡಬೇಕು.

ಸತ್ತಾಗ ಏನಾದ್ರು ಹೊತ್ಕೊಂಡು ಹೋಗ್ತೀವೇ. ಅಮ್ಮನ ಮಾತು. ಸರಳವಾದುದು ಎಷ್ಟೊಂದು ಸಂಕೀರ್ಣವಲ್ಲವೆ. ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ ಮಾತು. ಎಲ್ಲದಕ್ಕೂ ಒಂದು ಆಗ್ರ್ಯಾನಿಕ್ ಸಂಬಂಧ. ಒಂದು ಇಂಗ್ಲಿಷ್ ಗಾದೆ. ಪಡೆಯುವುದೆಂದರೆ ಕಳೆದುಕೊಳ್ಳುವುದು. ಕೊಡುವ ಸುಖ ದಾರ್ಶನಿಕರ ಮಾತು. ಅನುಭವವಾಗಬೇಕು ಈ ಸರಳ ಸಹಜ ಮಾತು ಅರ್ಥವಾಗಲು. ನಡೆಯಲು ಹಾಗೆ.

ಬುದ್ಧ ಕಳೆದುಕೊಂಡ ಅರಮನೆಯ. ಹಾಲಬೆಳದಿಂಗಳಿನಂತಹ ತೊಟ್ಟಿಲಲ್ಲಾಡುವ ಮಗುವ, ಮೋಹದ ಹೆಂಡತಿಯ ತೊರೆದ ಅಥವಾ ಕಳೆದುಕೊಂಡ ಜನರ ನೋವಿಗೆ ಪರಿಹಾರ ಹುಡುಕಲು. ಹುಡುಕಿದ ಎಲ್ಲ ಬಿಟ್ಟು ಎಲ್ಲರನೂ ಪಡೆದು. ಆಸೆಯ ಕರಾಳ ಮುಖಗಳ ತೋರಿಸುತ್ತ. ಹಿಂಸೆಯ ಕ್ರೂರತೆಯನ್ನು ತೋರಿಸುತ್ತ. ಸೆಳೆದ ಜನರ ಪ್ರೀತಿಯತ್ತ. ಸಹಜತೆಯತ್ತ.

ಲಂಕೇಶರ ಮಾತು ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ. ಕೊಟ್ಟಿದ್ದನ್ನು ತಿಂದು ಇದ್ದುದರಲ್ಲಿಯೇ ಹಸಿವ ನೀಗಿಸಿಕೊಳ್ಳುತ್ತ ಖಾಲಿ ಪಾತ್ರೆಯನ್ನು ಅಕ್ಷಯವಾಗಿಸುತ್ತ. ಇದ್ದುದ ಕೊಟ್ಟು ಪಡೆವ ಸುಖ ಪ್ರೀತಿ. ಪ್ರೀತಿಯೇ ಬದುಕಿನ ಅಮೃತ ಬಳ್ಳಿ. ಕಳೆದಾಗಲ್ಲವೆ ಏನನ್ನಾದರೂ ಪಡೆಯುವುದು ಜ್ಞಾನವನ್ನು, ಅರಿವನ್ನು. ಜ್ಞಾನಕ್ಕೆ ಕೇಡುಂಟೆ. ಪಡೆದ ಜ್ಞಾನದಲ್ಲಿಯೇ ಪಾಪವ ತೊಳೆದುಕೊಂಡು ಶುದ್ಧಿಯಾಗಬೇಕು.

ನಿಜದ ಗಂಡನ ಕಳೆದಕೊಂಡು ಅಕ್ಕ ಹೊರಟಳು ಹುಡುಕಿಕೊಂಡು ಸಾವಿಲ್ಲದ ಕೇಡಿಲ್ಲದ ಗಂಡನ ಅರಸುತ್ತಾ. ಮಲ್ಲಿಕಾರ್ಜುನನ. ಅಬ್ಬಾ ದೇವನನ್ನೇ ಗಂಡನನ್ನಾಗಿ ಪಡೆವುದೆಂದರೆ. ದಕ್ಕಿತೋ ಇಲ್ಲವೋ ಬೆಂಕಿಯಲ್ಲಿಯೇ ಅರಳಿದವು ಮಿಂಚಿನಂತ ವಚನಗಳು. ಸವೆಸಿದ್ದು ಕಮ್ಮಿ ದಾರಿಯೇ. ಕಾಡು, ಮೇಡು, ಖಗ, ಮೃಗ.

ಲೋಕದ ಕಾಮದ ಕಣ್ಣುಗಳಿಗೆ ದಿವ್ಯೌಷಧಿಯ ಒಯ್ಯುತ್ತ. ಅವಳು ಕಳೆದುಕೊಳ್ಳದಿದ್ದರೆ ಲೋಕ ಕಳೆದುಕೊಳ್ಳುತ್ತಿತ್ತು ಆ ಅಂತಹ ಜ್ಞಾನದ ಸಾಲುಗಳ. ಒಮ್ಮೊಮ್ಮೆ ಖಾಸಗಿ ಬದುಕನ್ನು ಕಳೆದುಕೊಳ್ಳುತ್ತೇವೆ. ಸಾರ್ವಜನಿಕ ಬದುಕನ್ನು ಕಳೆದುಕೊಳ್ಳುತ್ತೇವೆ. ಮನುಷ್ಯತ್ವವನ್ನು ಕಳೆದುಕೊಳ್ಳುತ್ತೇವೆ. ಅಭಿವೃದ್ಧಿಯ ಹೆಸರಲ್ಲಿ ಬದುಕನ್ನೇ ಕಳೆದುಕೊಳ್ಳುತ್ತೇವೆ.

ಕಾಳಸರ್ಪಗಳಂತೆ ಬಂದೆರಗಿರುವ ರಸ್ತೆಗಳು ನಮ್ಮ ಹಳ್ಳಿಗಳನ್ನು ಕಳೆದುಹಾಕಿವೆ. ದೇಶಪ್ರೇಮದ ಹೆಸರಿನಲ್ಲಿ ಯುದ್ಧಮಾಡಿ ಅಮಾಯಕ ಜೀವಗಳು  ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಮನೆಯೊಳಗೆ ದೆವ್ವದಂತೆ ಆಕ್ರಮಿಸಿಕೊಂಡಿರುವ ಟಿ.ವಿ. ಮನುಷ್ಯರ ಖಾಸಗೀ ಬದುಕನ್ನು ಕಸಿದುಕೊಳ್ಳುತ್ತಿದೆ. ಎಲ್ಲವೂ ವಾರ್ತೆಯಾಗಿದೆ. ಕೊಲೆ, ಕಳುವು, ಹಾದರ, ಸಿನೆಮಾ, ಮನರಂಜನೆ ಎಲ್ಲ ಎಲ್ಲವೂ.

ರಿಪೀಟೊಡೆಯುವ ಧಾರವಾಹಿಗಳ ನಡುವೆ ಮನೆಯೊಳಗಿನ ಸಹಜಮಾತಿನ ಸುಂದರಭಾವನೆಗಳು ಕಳೆದುಹೋಗುತ್ತಿವೆ. ಹುಡುಕಬೇಕಿದೆ ಬದುಕಿನ ಸಹಜಲಯವ. ಹುಡುಕುವುದಾದರೂ ಏನನ್ನೂ. ಕಳೆದು ಹೋಗಿರುವ ನಮ್ಮ ಇಷ್ಟಗಳನ್ನು. ಹಳೆಯ ಹಳವಂಡಗಳನ್ನಲ್ಲ. ಬದಲಾದ ಹೊಸತನದಲ್ಲಿ ಕಳೆದಿರುವ ಇಷ್ಟಗಳನ್ನು ಹೊಸ ರೂಪಗಳಲ್ಲಿ. ಟಿ.ಎಸ್. ಎಲಿಯೆಟ್‍ದಿರಬೇಕು ಈ ಮಾತು. ಎಲ್ಲಿ ಪ್ರಾರಂಭವಾಗಿರುತ್ತದೆಯೋ ಮತ್ತೆ ಅದರೆಡೆಗೆ ಪಯಣ.

ಕಳೆಯುವುದು ಮತ್ತೆ ಹುಡುಕುವುದು. ನಮ್ಮ ಅರ್ಧ ಆಯಸ್ಸು ಅದರಲ್ಲಿಯೇ ಕಳೆದುಹೋಗುತ್ತದೆ. ಹಂಬಲ, ಕನಸು, ಆದರ್ಶ, ಭ್ರಮೆಯಾದರೂ ಬಿಡದೆ ಹುಡುಕುವ ಅವಿರತ ಯತ್ನ ಪ್ರಯತ್ನ.  ಜಪಾನ್ ಗಾದೆ. ಏಳುಬಾರಿ ಬಿದ್ದರೂ ಎಂಟನೇ ಬಾರಿ ಎದ್ದೇಳುವುದು. ಕಳೆದದ್ದ ನೆನೆ ನೆನೆದು ಪರಿತಪಿಸಿದರೆ ಸಿಗುವುದೆ. ಬದುಕು ಸಾಗಬೇಕು. ಶೆಲ್ಲಿಯ ಸಾಲು.

ಶಶಿರ ಬಂದರೆ ವಸಂತ ದೂರವಿರುವುದೆ? ಹಾವು ಪೊರೆ ಕಳೆದಂತೆ ಎಲೆಕಳೆದುಕೊಂಡು ಬೋಳಾದರೆ ಮರ ಅದರಾತ್ಮದೊಳಗಿಲ್ಲವೆ ಹೊಳೆಹೊಳೆವ ಬಂಗಾರದಂತ ಎಲೆಗಳು. ಕಾಯುತ್ತಿವೆ ಬೆಳಕ ಹಂಬಲಿಸಿ. ಒಮ್ಮೊಮ್ಮೆ ಕಳೆದದ್ದು ಎದುರೇ ಇರುತ್ತೆ ನನ್ನದು ನನ್ನದಲ್ಲದಂತೆ. ಕುಂತಿಗೆ ಕರ್ಣನಂತೆ. ಅಜ್ಜಿಯ ಪಕ್ಕದ ಮನೆಯ ಹರತಿ ಹೆಂಡತಿಯ ಓಲೆ ಅಡವಿಟ್ಟು ಜೂಜಾಡಿ ಸೋತು ಮನೆಬಿಟ್ಟು ಅಲೆದದ್ದು ಲೆಕ್ಕವಿಲ್ಲ.

ತವರಿನ ಆ ಒಂದು ನೆನಪಿನ ಆಸ್ತಿಯನ್ನು ಕಳಕೊಂಡು ಪರಿತಪಿಸಿದ ರಾತ್ರಿಗಳೆಷ್ಟಿಲ್ಲ.  ಅದರ ಬದಲಿಗೆ ಸರೀಕರೆದುರು ಮಾರಿಗೆಯ ಓಲೆ ಕಿವಿಗಿಟ್ಟು ಮರ್ಯಾದೆಯಿಂದ ಓಡಾಡಿದ್ದು ಇನ್ನೂ ನೆನೆಪಿದೆ. ಅಜ್ಜಿಯ ಊರಿಗೆ ಹೋದಾಗೆಲ್ಲ ಅದು ಮತ್ತೆ ಮತ್ತೆ. ಒಂದು ಕಾಲದಲ್ಲಿ ಮೆರೆದ ಸಾಮ್ರಾಜ್ಯಗಳು ಕಾಲದ ನದಿಯಲ್ಲಿ ಅಳಿದು ಹೋಗುವುವು. ಕೆಲವು ತಮ್ಮದೇ ದರ್ಪ ದೌಲತ್ತು ಗಳಿಂದ. ಹಿಂಸೆಗಳಿಂದ. ಮತ್ತೆ ಕೆಲವು ಹೊರಗಿನ ಆಕ್ರಮಣಗಳಿಂದ.

ಕಾಲ ಏನೇ ಅಳಿಸಿಹಾಕಿದರೂ ಮನುಷ್ಯರ ಕರ್ಮಗಳ ಕೃತಿಗಳ ಅಳಿಸಲಾದೀತೆ. ಇಲ್ಲಿ ಯಾವುದೂ ಸಂಪೂರ್ಣ ಆಗದ ನಾಶ. ಗುರುತುಗಳು ಅನೇಕ. ಕಾಲದ ಬಯಲಲ್ಲಿ ಸೆಣೆಸಾಟ. ಅಮರತ್ವಕ್ಕೆ. ಅಸ್ತಿತ್ವಕ್ಕೆ. ಮತ್ತೆ ಬುದ್ಧದೇವನ ಮಾತು. ಸತ್ಯವನ್ನ ಸೂರ್ಯನನ್ನ ಮುಚ್ಚಲಾದೀತೆ. ಸುಳ್ಳಿನ ರಂಗು ಗ್ರಹಣದ ಕತ್ತಲೆ ಎಷ್ಟು ಹೊತ್ತು. ನೀರಮೇಲಿನ ಗುಳ್ಳೆ. ಕಾಣಲೇ ಬೇಕು ಸತ್ಯ ಪ್ರಜ್ವಲಿಸುತ್ತ. ಸೂರ್ಯನಂತೆ.

ಮಚಪಿಚ್ಚುವಿನ ಪುರಾತನ ಸಾಮ್ರಾಜ್ಯದ ಪರ್ವತದ ಮೇಲೆ ಇಂತಹ ವಿನಾಶವನ್ನು ಕುರಿತು ಧ್ಯಾನ ಎಚ್.ಎಸ್.ಶಿವಪ್ರಕಾಶ. ಅವರವೇ ಸಾಲು. ಮಚಪಿಚ್ಚಿವಿನ ಎತ್ತರಗಳು ಕರಾಲ್‍ನ ಆಳಗಳ ಸಾಲುಗಳು. ಇದೊಂದು ಬೆಟ್ಟವಲ್ಲ, ನಗರ ವಿಶೇಷ ನಗರವಲ್ಲ ನಗರದವಶೇಷ ಪುನಃ ರಚಿಸಕೊಳ್ಳುತ್ತೇನೆ ಇಲ್ಲಿದ್ದ ಎಲ್ಲಾ ವೈಭವಗಳನ್ನು. ಧ್ಯಾನಿಸುತ್ತೇನೆ ಎಲ್ಲ ವೈಭವಗಳ ನಶ್ವರ ಸ್ವಭಾವವನ್ನು.

ಮನುಷ್ಯನ ದೊಡ್ಡ ಸಾಮ್ರಾಜ್ಯಗಳು ಮಾನವನ ಸಾಮರ್ಥ್ಯದ ಪ್ರತೀಕಗಳಂತೆ ಕ್ರೌರ್ಯತೆಗೂ ಹಿಡಿದ ಕನ್ನಡಿ. ಮತ್ತೆ ಅವರವೇ ಸಾಲು. ಶಾಂತಸಾಗರದ ಅಶಾಂತ ದಡದಲ್ಲಿ ಅಶಾಂತ ನಗರ ನರಹಿಂಸೆ ಬಿರುಗಾಳಿಗಳ ನಂಟ ಸಿಡಿಲುನಗರ ಹೆರರ ದಾಳಿಗೆ ಅಂಜಿ ಕೋಟೆ ಕಟ್ಟಿದವರ ದೈವಕೋಪಕ್ಕಂಜಿ ಹೆಣ್ಣುಬಲಿ ಕೊಟ್ಟ ಗಂಡುವೀರರ ಕತೆ. ಇಂತಹ ಅನೇಕ ಮಾನವನ ಸಾಧನೆಗಳಡಿಯಲ್ಲಿಯ ವಿನಾಶವನ್ನು ಕಂಡಿಲ್ಲವೆ ಇತಿಹಾಸದಲ್ಲಿ.

ಕಳೆದುಕೊಂಡರೆ ಅದಕ್ಕೊಂದು ಅರ್ಥವಿರಬೇಕು. ಕಳೆದೇ ಹೋದರೆ. ಮರತೇಹೋದರೆ ತಾನ್ಯಾರೆಂಬುದ. ವಿವೇಕಕ್ಕು ಅವಿವೇಕಕ್ಕು ಅಂತರದ ದೂರ ನನ್ನ ಹೆಂಡತಿ ಹರಿದ ಅಂಗಿಯ ಹೊಲೆಯುವ ದಾರದಷ್ಟು. ಪ್ರೀತಿಗೂ ದ್ವೇಷಕ್ಕೂ ಇರುವ ಅಂತರದಷ್ಟು. ಈ ಎರಡರ ಸಂದಿಯಲ್ಲಿಯೇ ತಾನೆ ಪಡೆಯುವುದು. ಕಳೆದುಕೊಳ್ಳುವುದು.

ಮತ್ತೆ ಶೇಕ್ಸ್ ಪಿಯರ್. ಈ ಕಣ್ಣುಗಳು ಇರುವ ತನಕ, ಈ ಲೋಕ ಇರುವ ತನಕ ಇದು ಅಂದರೆ ಕವಿತೆ ಉಳಿಯುತ್ತೆ. ಅಳಿದರೂ ಅಮರತ್ವದ ಯಾಚನೆ. ಕಳೆದುಕೊಂಡಗ ಕವಿಯ ಸಾಲುಗಳು ಜೀವ ಚೈತನ್ಯ. ಮತ್ತೆ ಕವಿ ಶಿವಪ್ರಕಾಶರ ಅದೇ ಕವಿತೆಯ ಕೊನೆಯ ಸಾಲುಗಳು. ಬರೆಯಿರಯ್ಯಾ ಈ ಅಮೃತವಾಕ್ಯಗಳನ್ನು ಮೃತ ಜಗದ ಕಾಗದ ಚೂರಗಳ ಮೇಲೆ ಕಟ್ಟಿ ಆ ಚೂರುಗಳನ್ನು ಪ್ರೀತಿದಾರಗಳಿಂದ ಕನಸು ಪಾರಿವಾಳಗಳ ಕಾಲುಗಳಿಗೆ ಹಾರಿಬಿಡಿ ಹಾರಲವು ಎಲ್ಲ ದೇಶಗಳೊಳಗೆ ಎಲ್ಲ ಕಾಲಗಳೊಳಗೆ ಎಲ್ಲ ಜೀವಗಳೊಳಗೆ.

ಕಳೆದುಕೊಂಡಿದ್ದೇವೆ ಅಂಗಳದಲ್ಲಿ ಬಿದ್ದಿದ್ದ ನಕ್ಷತ್ರಗಳ. ಸಿಗುವವೆ. ನೋಡಬೇಕು. ಅಥವಾ ಯೋಗಬೇಕು. ಅದೃಷ್ಟವೂ. ಅಥವಾ ಸಿಗಲಾರವು. ಬದುಕು ಅಗಾಧವಲ್ಲವೆ. ಹೋಲಿಸಿಲ್ಲವೆ ಅದಕೆ ಅದ ಸಾಗರಕೆ. ಅಲೆಗಳಿಗೆ ಬರವೆ ಸಾಗರದಲಿ. ಒಂದಾದ ನಂತರ ಮತ್ತೊಂದು. ದಡದಲ್ಲಿ ಒಂದೊಂದೇ ಬಂದು ಕಳೆದುಹೋಗುವುದು. ಅಮ್ಮ ಮಗಳಲ್ಲಿ. ತಾತ ಅಪ್ಪನಲ್ಲಿ. ಕಳೆದುಹೋಗುವುದು ಮತ್ತೊಂದರಲ್ಲಿ ಪಡೆಯುವುದು.

ನಮಗೆ ಸಿಗಬೇಕಾದುದು ಬೇರೆಯಾರಿಗೋ ದಕ್ಕಿದರೆ ಹೇಳಲಾರದ ದುಃಖ. ಕಂಡರೆ ಮತ್ತೆ ಅದ ಸುಮ್ಮನಿರುವುದೆ ಮನ ಪರಿತಪಿಸದೆ. ಕಾರಣಗಳು ಅನಂತ ಸಿಗದಿದ್ದುದಕೆ. ಸಿಕ್ಕಿದ್ದಕ್ಕೆ ಕಾರಣಗಳೇ ಇಲ್ಲ. ಒಮ್ಮೊಮ್ಮೆ ಎಷ್ಟು ಸಲೀಸಾಗಿ ಕಳೆದುಹೋಗುತ್ತವೆ ಕೆಲವು. ಕಳೆದದ್ದು ಮತ್ತೆ ಪಡೆಯುವುದು ಸಲೀಸೇ. ಪ್ರೀತಿಸಿದ ಹೆಣ್ಣ ಪಡೆಯಲು ಹಾದಿ ತುಂಬಾ ಅಪಾಯಗಳೇ.

ರಕ್ತದ ಮಡುವಿನಲ್ಲಿ ಬಿದ್ದು ಅಳಿದವರೆಷ್ಟೋ. ಯಾರು ಹಿತವರು ಈ ಮೂವರೊಳಗೆ. ದಾಸರ ವಾಣಿ. ಹಿತವೆನ್ನಿಸುವುದು ಸುಲಭವಿಲ್ಲ ದಕ್ಕಿಸಿಕೊಳ್ಳಲು. ಯುದ್ಧಗಳೇ ಆಗಿವೆ. ಇಂದ್ರಪ್ರಸ್ಥದಲ್ಲಿ. ಕುರುಕ್ಷೇತ್ರದಲ್ಲಿ. ಶ್ರೀಲಂಕಾದಲ್ಲಿ. ಟ್ರಾಯ್‍ನಗರದಲ್ಲಿ. ಅಷ್ಟು ಪುರಾತನ ಕಾಲಕ್ಕೆ ಹೋಗಬೇಕು ಯಾಕೆ. ನಿತ್ಯ ನಡೆಯುತ್ತಿಲ್ಲವೆ ನಮ್ಮ ಸುತ್ತಮುತ್ತ.

ರಮೇಶ ಅರೋಲಿಯ ಜುಲುಮೆಯ ಪದಗಳ ನೆನಪು. ಮಲಶೆಟ್ಟಿಯ ಮಗಳು ಸರಸಿಗೆ ಪಾದರಸದಂತಹ ಪಾದಕ್ಕೆ ಅಂಟಿದ ಆಣಿಗಾಯ ವಾಸಿಯಾಗದೆ ನೋವ ಅನುಭವಿಸುತಿಹಳು. ರಾಜನಾದರೇನು. ರಾಜನ ಮಗಳಾದರೇನು. ನೋವು ನೋವೇ. ನಾವೆಲ್ಲ ಕೇವಲ ಮನುಷ್ಯರಲ್ಲವೆ. ಜೋಡಮಲ್ಲಯ್ಯನ ಜೋಡು ಬೇಕು ವಾಸಿಯಾಗಲು.

ಆದರೆ ಅಪ್ಪನ ದರ್ಪ. ರಾಜನಲ್ಲವೆ. ಬಿಡಬೇಕು ಜಾತಿಯ. ಅಂಬೇಡ್ಕರ್ ಬಿಟ್ಟಂತೆ. ತೊರೆದಾಗ ಜಾತಿ ಅರಳುವುದು ಪ್ರೀತಿ. ದೇವನೂರರ ಮಾತು ಇಲ್ಲದಿರೆ ನಮ್ಮ ಸಂವೇದನೆಯನ್ನೇ ಕಳೆದುಕೊಳ್ಳುತ್ತೇವೆ. ಹೌದಲ್ವಾ. ಸಂವೇದನೆಯೇ ಇಲ್ಲ ಅಂದರೆ ನಾವು ಮನುಷ್ಯರಾಗುವುದಾದರು ಹೇಗೆ.  ಏನೆಲ್ಲಾ ಕಳೆದು ಕೊಂಡಿದ್ದೇವೆ. ಕಳೆದುಕೊಳ್ಳುತ್ತಲಿದ್ದೇವೆ ನಮ್ಮ ಕನಸುಗಳ. ನಮ್ಮ ಆದರ್ಶಗಳ ರಾಷ್ಟ್ರನಾಯಕರ ಭಾಷಣಗಳಲ್ಲಿ. ಅವರು ಮಾತಾಡುವುದೇ ಭಾಷಣವಾಗಿಬಿಟ್ಟಿದೆ.

ಭಾಷಣಗಳು ಲೊಳಲೊಟ್ಟೆ. ಶೇಕ್ಸ್ ಪಿಯರ್‍ನ ಸಾಲು. ಟಾಕಿಂಗ್ ಈಸ್ ನಾಟ್ ಡೂಯಿಂಗ್; ಇಟ್ ಈಸ್ ಅ ಗುಡ್ ಡೀಡ್ ಟು ಸೆ ವೆಲ್; ಯೆಟ್ ವಡ್ರ್ಸ್ ಆರ್ ನಾಟ್ ಡೀಡ್ಸ್. ಜನರ ಕಷ್ಟಕ್ಕೆ ನೋವಿಗೆ ಸ್ಪಂದಿಸುವರೋ ಭಾಷಣಮಾಡಲೆಂದೇ ಗೆದ್ದು ಬಂದಿರುವರೋ. ಮಾತೇ ಸತ್ಯವಾಗಿದ್ದರೆ. ಜಗದ ತುಂಬೆಲ್ಲಾ ಎಷ್ಟೊಂದು ಮಾತು. ಕಳೆದು ಹೋಗಿದ್ದೇವೆ ಮಾತುಗಳಲ್ಲಿ. ಕಳೆದುಕೊಂಡಿದ್ದೇವೆ ಮೌನಗಳ.

‍ಲೇಖಕರು avadhi

November 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: