ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನಿದ್ದಾನೆ..

ನಾಗರೇಖಾ ಗಾಂವಕರ್ 

ವ್ಯತಿರಿಕ್ತ ವರ್ಣಗಾಥೆ

ಆಗಸದ ತುಂಬೆಲ್ಲ ಚೆಲ್ಲಿ ಬಿದ್ದ
ಅನ್ನದ ಅಗುಳು
ಕಲಾವಿದ ಕೊಂಚ ಕೊಂಚ
ಬಲಗೈಯೂರಿ ಒತ್ತತೊಡಗಿದ ಕುಂಚ.
ನಡುವೆ ಬೆಳದಿಂಗಳ ಚಂದಿರನ ಹೊತ್ತು ತರಬೇಕು
ಎನ್ನುತ್ತ ಕವಿತೆ ಬರೆಯತೊಡಗಿದ.

ಅದು ಬರಿಯ ಒಂದು ನೋಟವಲ್ಲ
ಒಂದು ಆಟ, ಒಂದು ಅಧ್ಯಾಯ
ಮತ್ತೆ ಪುಟ ತಿರುವಿ ಬಳಿಯಬೇಕು
ವರ್ಣಗಾಥೆ -ಬಣ್ಣ ಬಣ್ಣಗಳಲ್ಲಿ

ಕೈಯ ಹಿಂಡತೊಡಗಿತು ಕುಂಚ
ಆಕುಂಚಿಸಿ ಸೆಟೆದುಕೊಳ್ಳುತ್ತ.
ಚುಕ್ಕಿಗಳ ಜೊತೆಗೇಕೆ ಚಂದಿರ?
ಉತ್ತರವಿಲ್ಲ ಕಲಾವಿದನಲ್ಲಿ.

ಬರೆದ ಚಿತ್ರದ ಅಡಿಗೆ ಕೊಂಚಕೊಂಚವೇ ಅದೆಷ್ಟೋ
ಕುಂಚಗಳ ಸೃಷ್ಟಿಯಾಗತೊಡಗಿತು.
ಈಗ ಹತ್ತಾರು ನೂರಾರು ಕುಂಚಗಳು
ಎದ್ದು ಬರತೊಡಗಿದವು. ಚಿತ್ರಪಟದಿಂದ
ಗಾಬರಿಗೊಂ ಡ ವಿಹ್ವಲಿತನಾದ ಕಲಾವಿದ
ಮುಖತಿರುವಿ ಮರೆಯಾಗಬಯಸಿದ.

ಸೂಜಿ ಇರಿತಕ್ಕಿಂತ ಆಳವಾಗಿ ಕುಂಚ
ಕುಕ್ಕತೊಡಗಿತು. ಇಂಚು ಇಂಚಿಗೂ ಬಿಡದೆ
ತೊಟ್ಟಿಕ್ಕುವ ರಕ್ತದೊಂದಿಗೆ ಕಲಾವಿದ
ಹಿಂಗಾಲಲ್ಲಿ ನಡೆಯತೊಡಗಿದ.
ಕಾಲಲ್ಲಿ ಎನೋ ಸಿಕ್ಕಂತಾಗಿ ಎಡವಿಬಿದ್ದ
ಅಂಗಾತಾಗಿ, ಚಿತ್ರಪಟದ ಚಾರಕಲ ಚುಕ್ಕಿಗಳ
ಮಧ್ಯೆ ಈಗ ರಕ್ತಸಿಕ್ತ ಗುಳಿಬಿದ್ದ ಮುಖದ
ಅವನಿದ್ದಾನೆ

ರೂಹು

ನಿನ್ನೊಳಗೆ ಅವಳಿರುವುದರಿಂದಲೇ
ನೀ ಹೀಗೆ ಕನಲುತ್ತಿ
ಮತ್ತೆ ನನಗಾಗಿ ಕರಗುತ್ತಿ
ಮರುಕ್ಷಣ ಮರುಗುತ್ತಿ.

ನನ್ನೊಳಗೆ ಅವನಿರುವುದರಿಂದಲೇ
ನಾ ಒಮ್ಮೆ ಕಿತ್ತೂರ ಚೆನ್ನಮ್ಮ
ಮಗದೊಮ್ಮೆ ಒನಕೆ ಓಬವ್ವ
ಮತ್ತೆ ಕೆಲವೊಮ್ಮೆ
ಮೃದುಮುಗುದೆ ಕುಸುಮವ್ವ

ಅವನಲ್ಲಿ ನನ್ನನ್ನು
ನನ್ನಲ್ಲಿ ಅವನನ್ನು
ಹುಡುಕಿ ಹೋದಂದಿನಿಂದ
ಎದೆಮುಗಿಲ ಮುಟ್ಟಿದೆ
ಮಣ್ಣವಾಸನೆ ಗಂಧ

ಅವನೆದೆಯ ದುಂಬಿ
ನನ್ನದೆಯ ಸೌಗಂಧ
ಹೀರಿ ಹೀರಿ ಪರಾಗ
ಹೊತ್ತು ಹರಡಿದ ಸ್ಪರ್ಷಕ್ಕೆ
ಎದ್ದ ಎಷ್ಟೊಂದು ಹೂಗಳು
ನನ್ನದೇ ಬಯಲಿನ ತುಂಬಾ
ಅರಳಿ ನಿಂತಿವೆ
ನನ್ನ ರೂಹು ಅರಸುತ್ತ ಕುಣಿಯುತ್ತಿವೆ.

‍ಲೇಖಕರು avadhi

29 November, 2019

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading