ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ

ಮೊನ್ನೆ ‘ಬಹುರೂಪಿ’ ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು ತಕ್ಷಣವೇ ತರಿಸಿಕೊಂಡೆ. ಅದಕ್ಕೆ ಕಾರಣವೂ ಇತ್ತೆನ್ನಿ. ನನಗೆ ಮೊದಲಿನಿಂದಲೂ ಜಂಗಲ್ ಕಥೆಗಳೆಂದರೆ ತುಂಬಾ ಇಷ್ಟ ಇದಕ್ಕೆ ಕಾರಣ ನನ್ನ ಬಂಧು ಮನಮೋಹನ್ ಅಂಕಲ್.

ಮನಮೋಹನ್ ಅಂಕಲ್ ಕಾರಣ ಎನ್ನುವುದಕ್ಕಿಂತ ಅವರ ಮಗಳು ವನಜ ಕಾರಣ ಎಂದರೆ ಹೆಚ್ಚು ಸೂಕ್ತವೇನೋ ಏಕೆಂದರೆ ಅವಳು ಹುಟ್ಟಿದ ಕಥೆಯೇ ರೋಚಕವಾಗಿತ್ತು. ಅದೂ ಒಂದು ರೀತಿಯಲ್ಲಿ ಜಂಗಲ್ ಡೈರಿಯೇ.

ಅಂಕಲ್ ಮನಮೋಹನ್ ಎಂದೊಡನೆ ನಮ್ಮ ಮನದಲ್ಲಿ ಮೂಡುವುದು ಮೈಸೂರು ಮೃಗಾಲಯ, ಅರಮನೆ, ಮಹಾರಾಜರು ಹಾಗೂ ಖೆಡ್ಡಾದ ಚಿತ್ರ. ಅರಣ್ಯಾಧಿಕಾರಿಯಾಗಿ ಮೂವತ್ತೈದು ವರ್ಷಗಳ ಕಾಲ ದುಡಿದು ನಿವೃತ್ತರಾದ ಮನಮೋಹನ್ ಅಂಕಲ್ ಕಾಡನ್ನು ಪ್ರೀತಿಸಿ ನಾಡಿಗಿಂತ ಕಾಡಿನಲ್ಲೇ ಹೆಚ್ಚು ಸಮಯ ಕಳೆದಿದ್ದ ನಿಸ್ಪೃಹ ಅಧಿಕಾರಿ. ನಿಸರ್ಗ ಪ್ರೇಮಿ. ವನ್ಯ ಸಂಪತ್ತು, ವನ್ಯಜೀವಿಗಳ ಬಗ್ಗೆ ಅವರ ಕಾಳಜಿ ಅಪಾರ.

ಫಾರೆಸ್ಟರ್ ಆಗಿದ್ದ ತಮ್ಮ ಮಾವನೊಡನೆ ಸುತ್ತಿದ ಅನುಭವದಿಂದ ಅವರ ಹೆಜ್ಜೆಯಲ್ಲೇ ನಡೆಯ ಬಯಸಿದವರು, ಅಂಕಲ್ ಮನಮೋಹನ್. ಮಂಗಳೂರ ಅಲೋಶಿಯಸ್ ಕಾಲೇಜ್‌ನಲ್ಲಿ ಇಂಟರ್‌ಮೀಡಿಯೆಟ್ ಮುಗಿಸಿ, ಫಾರೆಸ್ಟರ್ ಹುದ್ದೆಗೆ ಆಯ್ಕೆಯಾಗಿ ೧೯೪೫ರಲ್ಲಿ ಸುಳ್ಯದಲ್ಲಿ ವೃತ್ತಿನಿರತರಾದರು.

ಮುಂದೆ ಫಾರೆಸ್ಟ್ ರೇಂಜ್ ಆಫೀಸರ್ ಟ್ರೇನಿಂಗ್‌ಗಾಗಿ ಕೊಯಮತ್ತೂರಿನ ಮದ್ರಾಸ್ ಫಾರೆಸ್ಟ್ ಕಾಲೇಜ್ ಸೇರಿದರು. ತರಬೇತಿಯ ಬಳಿಕ ೧೯೫೩ರಲ್ಲಿ ಮದುಮಲೈಯಲ್ಲಿ, ನಂತರ ೧೯೫೬ರಲ್ಲಿ ಕಾಕನಕೋಟೆಯಲ್ಲಿ ಪೋಸ್ಟಿಂಗ್ ಆಗಿ ಕಾಡನ್ನೇ ಉಸಿರಾಡಿದರು.ಅವರ ಕಾಡಿನ ಅನುಭವಗಳು, ಮೈಸೂರು ಮಹಾರಾಜರೊಡನೆ ಬೇಟೆಯ ಅನುಭವಗಳು, ಮೈಸೂರು ಖೆಡ್ಡಾದ ಅನುಭವಗಳು ಬಹು ಅಮೂಲ್ಯವಾದವು.

ಕಾಕನಕೋಟೆಯ ದಟ್ಟ ಕಾಡು. ಫಾರೆಸ್ಟ್ ವಿಭಾಗದ ಈ ಕ್ವಾರ್ಟರ್ಸ್ ಮನೆ ಬಿಟ್ಟರೆ ಬೇರೆ ಒಂದೆರಡು ಕುರುಬರ ಮನೆಗಳು. ಸರಿರಾತ್ರಿಯಲ್ಲಿ ಮಡದಿಗೆ ಹೆರಿಗೆ ಬೇನೆ ಆರಂಭವಾಯ್ತು. ಊರಿನಿಂದ ಜೊತೆಗಿರಲು ಬಂದ ನಾದಿನಿ ಚಂದ್ರಿಯನ್ನು ಪತ್ನಿ ಹಾಗೂ ಮಕ್ಕಳು ಸುಧಾ, ಪ್ರಶಾಂತ್, ಜ್ಯೋತಿ ಬಳಿ ಬಿಟ್ಟು ಅಂಕ್ ಲ್ ಮನಮೋಹನ್ ಸೂಲಗಿತ್ತಿಯನ್ನು ಕರೆತರಲು ಆ ನಟ್ಟಿರುಳಿನಲ್ಲಿ ಮಾಸ್ತಿಗುಡಿಯತ್ತ ಧಾವಿಸಿದರು. ಸುತ್ತಲೂ ಆನೆಗಳು ಘೀಳಿಡುವ, ನರಿಗಳು ಊಳಿಡುವ ಸದ್ದು. ಕಬಿನಿ ದಡದಲ್ಲಿ ಮಾಸ್ತಿಗುಡಿಯಾಚೆ ವಾಸವಿದ್ದ ಸೂಲಗಿತ್ತಿಯನ್ನು ಕರಕೊಂಡು ಅಂಕಲ್ ಮನೆಗೆ ಮರಳಿದ ಅನಿತರಲ್ಲೇ ಮಗು ಭುವಿಗಿಳಿಯಿತು. ಹಾಗೂ ಮಗುವಿನ ಮೊದಲ ಅಳು ಪಕ್ಕದಲ್ಲೇ ಧ್ವನಿಸಿದ ಮೃಗದ ಘರ್ಜನೆಯೊಂದಿಗೆ ಮೇಳವಿಸಿತು. ಅಂಕಲ್ ಮಗುವನ್ನು ‘ವನಜ’ ಎಂದೇ ಹೆಸರಿಸಿದರು.

ಕಾಕನಕೋಟೆಯ ದಿನಗಳನ್ನು ನೆನೆದು ಹತ್ತಿರದಲ್ಲೆಲ್ಲೂ ಕುಡಿವ ನೀರಿರದುದರಿಂದ ಆಳುಗಳು ದೂರದಿಂದ ನೀರು ಹೊತ್ತು ತರುತ್ತಿದ್ದುದನ್ನು, ಅಮ್ಮ ಬಟ್ಟೆ ಒಗೆಯಲು ಹೊಳೆಗೆ ಹೋಗುವಾಗ ತಾವು ಮಕ್ಕಳೂ ಜೊತೆಗೆ ಹೋಗುತ್ತಿದ್ದುದನ್ನು ನೆನೆಯುತ್ತಾರೆ. ಹೊಳೆ ದಡದಲ್ಲಿ ನೀರು ಕುಡಿಯಲು ಬರುತ್ತಿದ್ದ ಆನೆಗಳು, ಸುತ್ತ ಓಡಾಡುತ್ತಿದ್ದ ಜಿಂಕೆಗಳು! ಒಂದಿನ ಮಧ್ಯಾಹ್ನ ತಂದೆ ಮನೆಗೆ ಹಿಂದಿದಿರುಗಿದಾಗ ಕಿಟಿಕಿಯಲ್ಲಿ ಹರಿದಾಡುತ್ತಿದ್ದ ಕೃಷ್ಣ ಸರ್ಪವನ್ನು ಕಂಡು ಒಳಗಿದ್ದ ಮಕ್ಕಳನ್ನು ನೆನೆದು ಅಯಾಚಿತವಾಗಿಯೇ ಕೋವಿಯೆತ್ತಿ ಗುಂಡು ಸಿಡಿಸಿದ್ದರು. ಕೃಷ್ಣಸರ್ಪ ಹೆಡೆಯೆತ್ತಿ ಜೀವ ಬಿಟ್ಟಿತ್ತು. ಗಂಧದ ಚಿತೆಯಲ್ಲಿ ಮತ್ತದರ ಸಂಸ್ಕಾರವೂ ನೆರವೇರಿತು!

ಕಾಕನಕೋಟೆಯಲ್ಲಿದ್ದಾಗ ಒಂದಿನ ಕಬಿನಿ ನದಿಯಲ್ಲಿ ಮಡದಿ, ಮಕ್ಕಳೊಡನೆ ಬೆತ್ತದ ತೆಪ್ಪದಲ್ಲಿ ವಿಹಾರ ಹೊರಟು ಇದ್ದಕ್ಕಿದ್ದಂತೆ ಏರಿದ ನದಿಯ ಸೆಳೆತದಲ್ಲಿ ತೆಪ್ಪವನ್ನು ನಿಯಂತ್ರಿಸಲಾಗದೆ ನಾಲ್ಕೈದು ಮೈಲು ದೂರ ಸಾಗಿ ಹೇಗೋ ದಡವೊಂದನ್ನು ಸೇರಿದ ಬಗ್ಗೆ, ತೆಪ್ಪದಲ್ಲಿ ಪ್ರಾಣಭೀತಿಯಿಂದ ಹುಯಿಲೆಬ್ಬಿಸಿದ ಬಗ್ಗೆ ಪ್ರಶಾಂತ್ ಆಗಾಗ ನೆನೆಯುವುದಿದೆ.

ಮೊದಲ ಮಗುವಾದ ಸುಧಾ ಹುಟ್ಟಿದ್ದು ಊರಲ್ಲಾದರೆ, ಪ್ರಶಾಂತ್ ಕಾರ್ಕಳದಲ್ಲೂ, ಜ್ಯೋತಿ ಬೇಗೂರಲ್ಲೂ, ಹಾಗೂ ಕಿರಿಯವಳು ಸಂಧ್ಯಾ ಮುಂಬೈಯಲ್ಲೂ ಭುವಿಗಿಳಿದವರು.
ಮೈಸೂರಲ್ಲಿ ತಮ್ಮ ಮನೆಯಲ್ಲಿದ್ದ ಸಿನಿ ಎಂಬ ಕಾಡುಕುರಿ, ರಾಮು ಎಂಬ ಮಲಬಾರ್ ಸ್ಕ್ವಿರಿಲ್, ಮತ್ತೆರಡು ನವಿಲುಗಳು ಅಂಕಲ್ ಮನಮೋಹನ್ ಅವರ ಮನೆಯ ಸದಸ್ಯರಂತೇ ಇದ್ದುವು.

ಅರಣ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ತರಬೇತು ಪಡೆದಿದ್ದ ಅಂಕ್‌ಲ್ ಮನಮೋಹನ್, ಆನೆಗಳ ತರಬೇತಿ, ಟಿಂಬರ್ ಸಾಗಾಣಿಕೆ, ಸರ್ವೆ, ಗಿಡ ನೆಟ್ಟು ಬೆಳೆಸುವುದು ಹೀಗೆ ಎಲ್ಲದರಲ್ಲೂ ಪರಿಣತರಾಗಿದ್ದರು. ಈಗ ಇತಿಹಾಸ ಸೇರಿರುವ ಜಗತ್ಪ್ರಸಿಧ್ಧ ಮೈಸೂರು ಖೆಡ್ಡಾದ ಮೂರು ಪ್ರದರ್ಶನಗಳಲ್ಲೂ ಗೇಮ್ ಆಫೀಸರ್ ಆಗಿ ಪ್ರಮುಖ ಪಾತ್ರ ವಹಿಸಿದ್ದರು.

ಖೆಡ್ಡಾದ ಆರಂಭದಲ್ಲಿ ಬಂಡೀಪುರ, ಕಲ್ಗೆರೆ, ಬಾನೂರುಗಳಿಂದ ಬೇಗೂರು ಕಾಡಿಗೆ ಬರುವ ಆನೆಗಳ ಹಿಂಡನ್ನು ಕಬಿನಿ ನದಿ ದಾಟಿಸಿ, ಬೆಂಕಿರೇಖೆಯ ಕಾವಲಲ್ಲಿ ಕಾಕನಕೋಟೆ ಕಾಡು ಸೇರುವಂತೆ ಮಾಡಿ ಅಲ್ಲಿ ಮೊದಲೇ ಸಿಧ್ಧಪಡಿಸಿಟ್ಟ ಖೆಡ್ಡಾದೊಳಗೆ ಬೀಳುವಂತೆ ಮಾಡುವುದು ಅಪಾರ ಬುಧ್ಧಿಶಕ್ತಿ, ಕೆಚ್ಚೆದೆ ಒಂದಾದ ಮಹಾಸಾಹಸಗಾಥೆ. ಆನೆಗಳ ಹಿಂಡಿನ ನಾಯಕನಾದ ಒಂಟಿಸಲಗವು ಬಹಳ ಅಪಾಯಕಾರಿಯಾಗಿದ್ದರೂ, ಅಂತಹ ಮೂರು ಗಂಡಾನೆಗಳನ್ನು ೧೯೬೮ರ ಖೆಡ್ಡಾದಲ್ಲಿ ಬಂಧಿಸಲಾಗಿತ್ತು. ಅವೇ ಭೀಷ್ಮ, ದ್ರೋಣ ಮತ್ತು ಕೃಪ.

೧೯೭೨ರಲ್ಲಿ ನಡೆದ ಕೊನೆಯ ಖೆಡ್ಡಾ ನೋಡಲು ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್, ರಷ್ಯಾದ ನಾಯಕ ಬುಲ್ಗಾನಿನ್, ಶ್ರೀಲಂಕಾದ ಅಧ್ಯಕ್ಷೆ ಸಿರಿಮಾವೋ ಬಂಡಾರನಾಯಕೆ, ಮೈಸೂರು ಮಹಾರಾಜರು, ಕಾಮರಾಜ ನಾಡಾರ್ ಅವರು ಮುಂತಾದ ದೇಶವಿದೇಶಗಳ ಗಣ್ಯರು ನೆರೆದಿದ್ದರು. ಕಬಿನಿ ಹೊಳೆಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಖೆಡ್ಡಾ ನಡೆಯುತ್ತಿದ್ದ ಜಾಗ ಮುಳುಗಡೆಯಾಯ್ತು. ಅಂತಹ ಇನ್ನೊಂದು ಸ್ಥಳವನ್ನರಸುವ ಯತ್ನ ಸಫಲವಾಗದೆ ವಿಶ್ವವಿಖ್ಯಾತ ಖೆಡ್ಡಾ ಇತಿಹಾಸದ ಬಸಿರಲ್ಲಿ ಹುದುಗಿ ಹೋಯ್ತು.

೧೯೭೭ರಲ್ಲಿ ಮೈಸೂರು ಮೃಗಾಲಯದಲ್ಲಿ ಅಸಿಸ್ಟೆಂಟ್ ಕನ್ಸರ್ವೇಟರ್ ಆಫ್ ಫಾರೆಸ್ಟ್  ಆಗಿ ನೇಮಕ ಗೊಂಡ ಅವರು ನಿವೃತ್ತಿಯ ಬಳಿಕ ಫಾರೆಸ್ಟ್ ಪ್ಲಾಂಟೇಶನ್ ಕಾರ್ಪೊರೇಶನ್‌ನಲ್ಲಿ ಅದೇ ಹುದ್ದೆಯಲ್ಲಿ ಮುಂದುವರಿದು ೧೯೮೦ರಲ್ಲಿ ವೃತ್ತಿಗೆ ವಿದಾಯ ಹೇಳಿದರು.

ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಗೇಮ್ ಆಫೀಸರ್ ಆಗಿ ಅರಮನೆಯಲ್ಲಿ ನಿಯುಕ್ತರಾದ ಅಂಕ್ಲ್ ಮನಮೋಹನ್, ಮಹಾರಾಜರ ಒಳ್ಳೆಯತನದ ಬಗ್ಗೆ ಹೃದಯ ಬಿಚ್ಚಿ ನುಡಿಯುತ್ತಿದ್ದರು. ನಿಷ್ಣಾತ ಬೇಟೆಗಾರರಾದ ಮಹಾರಾಜರ ಗುರಿ ಎಂದೂ ತಪ್ಪುತ್ತಿರಲಿಲ್ಲವೆಂದೂ, ಬೇಟೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರೆಂದೂ, ಬೇಟೆಯ ಸಾಮಗ್ರಿಗಳ ಬಗ್ಗೆ ಅವರ ಜ್ಞಾನ ಅಪಾರವೆಂದೂ ಅವರನ್ನುತ್ತಿದ್ದರು. ನಾಲ್ಕೂವರೆ ಅಡಿ ಉದ್ದದ ದಂತ ಇರುವ ಬಲು ಅಪಾಯಕಾರಿ ಒಂಟಿ ಸಲಗಗಳನ್ನು ಮಾತ್ರ ಬೇಟೆಯಾಡುತ್ತಿದ್ದರು,

ಮಹಾರಾಜರು. ಪತ್ನಿ ರೇವತಿ, ಮಕ್ಕಳು ಸುಧಾ, ವನಜಾ, ಪ್ರಶಾಂತ್, ಜ್ಯೋತಿ, ಸಂಧ್ಯಾರ ಸಂತೃಪ್ತ ಕುಟುಂಬವದು. ಮೈಸೂರಲ್ಲಿದ್ದಾಗ ಅವರ ಮನೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ಸಮೀಪ ಬಂಧುಗಳಿಗೆ ಪ್ರೀತಿಯ ಆಶ್ರಯ ತಾಣವಾಗಿತ್ತು. ಕಾಡನ್ನೂ, ವನ್ಯಜೀವಿಗಳನ್ನೂ ಪ್ರೀತಿಸಿದ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಅಂಕಲ್ ಮನಮೋಹನ್ ಸರಳ ಜೀವನವನ್ನು ಬಾಳಿದವರು. ಅವರ ಸೇವೆಗೆ ಮೆಚ್ಚಿ ಮಹಾರಾಜರು ಚಾಮುಂಡಿ ಬೆಟ್ಟದ ತಪ್ಪಲಲ್ಲಿ ೨೮ ಎಕ್ರೆ ಭೂಮಿಯನ್ನು ಇನಾಮಾಗಿ ನೀಡಿದ್ದರು.

ನಿವೃತ್ತಿಯ ಬಳಿಕ ಬೆಂಗಳೂರಲ್ಲಿ ನೆಲಸಿದರು. ರೇವತಿ ಚಿಕ್ಕಮ್ಮ ವಿಧಿವಶರಾದ ಮೇಲೆ ಒಂಟಿಯಾಗೇ ಜೀವಿಸಿದ್ದ ಅಂಕ್‌ಲ್ ಮನಮೋಹನ್, ಒಂದು ಪ್ರಾತಃಕಾಲದ ವಾಯುವಿಹಾರದಲ್ಲಿ ಪ್ರಕೃತಿಯ ಮಡಿಲಲ್ಲೇ ಹೃದಯಾಘಾತಕ್ಕೆ ಈಡಾಗಿ ನಮ್ಮನ್ನು ಅಗಲಿದರು. ಅವರು ಬರೆಯುತ್ತಿದ್ದ ಪತ್ರಗಳೂ, ಮಾಸಿಹೋದ ಅಮೂಲ್ಯ ಫೋಟೋಗಳೂ ಅವರ ಸ್ಮೃತಿಸಂಚಯವಾಗಿ ನನ್ನಲ್ಲುಳಿದಿವೆ.

‘ಜಂಗಲ್ ಡೈರಿ’ ಕೊಳ್ಳಲು-

https://bahuroopi.in/product/jungle-diary-2/

‍ಲೇಖಕರು AdminS

August 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: