ಮೋದಿ ಮೇಲೆದ್ದು ನಿಲ್ಲಲು ಕೈ ಆಸರೆ ನೀಡಿದವರು ಪ್ರಣಬ್

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ.

ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ.

ಅವತ್ತಿನ ಅ ಘಟನೆಯ ನಂತರ ಅವರು ತಮ್ಮ ನಿರ್ಧಾರವನ್ನು ಬದಲಿಸಿದರು.
ಇನ್ನು ಈ ದೇಶದ ಪ್ರಧಾನಿ ಹುದ್ದೆಯ ಮೇಲೆ ಕೂರುವ ಕನಸು ಕಾಣುವುದರಲ್ಲಿ ಅರ್ಥವಿಲ್ಲ ಎಂದುಕೊಂಡರು. ಹಾಗೆಯೇ ಮನೆ ಬಾಗಿಲಿಗೆ ನಡೆದುಕೊಂಡು ಬಂದ ರಾಷ್ಟ್ರಪತಿ ಹುದ್ದೆಯನ್ನು ಒಪ್ಪಿ,ಅಪ್ಪಿಕೊಂಡರು.

ಅವರ ಹೆಸರು-ಪ್ರಣಬ್‌ ಮುಖರ್ಜಿ

ಇತ್ತೀಚೆಗೆ ತೀರಿಕೊಂಡ ಪ್ರಣಬ್ ಮುಖರ್ಜಿ ಈ ರಾಷ್ಟ್ರ ಕಂಡ ಮಹಾನ್‌ ರಾಜಕಾರಣಿ. ಜನರ ಮಧ್ಯೆ ನುಗ್ಗಿ ರಾಜಕಾರಣ ಮಾಡುವುದು ಅವರಿಗೆ ಕಷ್ಟವಾಗಿತ್ತಾದರೂ ಸರ್ಕಾರಗಳನ್ನು ನಡೆಸುವ ವಿಷಯದಲ್ಲಿ ಪ್ರಣಬ್‌ ಮುಖರ್ಜಿ ಅವರಂತಹ ನಾಯಕರು ದೇಶದಲ್ಲಿ ಅತ್ಯಂತ ವಿರಳ.

ಆದರೆ ಇಂದಿರಾಗಾಂಧಿ ಅವರಿಂದ ಹಿಡಿದು ಮನಮೋಹನ್‌ಸಿಂಗ್‌ ಸರ್ಕಾರದ ತನಕ ಹಲವು ಸರ್ಕಾರಗಳಲ್ಲಿ ಮಂತ್ರಿಯಾಗಿ ಪ್ರಣಬ್‌ ಸಲ್ಲಿಸಿದ ಸೇವೆ ಅನುಪಮವಾಗಿತ್ತಾದರೂ ಒಂದು ಅನುಮಾನದ ಬಲೆಯಲ್ಲಿ ಸಿಕ್ಕು ನಿರಂತರವಾಗಿ ನರಳಿದ ಬದುಕು ಅವರದು.

ಈ ಅನುಮಾನ ಶುರುವಾಗಿದ್ದು ಇಂದಿರಾಗಾಂಧಿ ಅವರ ಹತ್ಯೆಯ ನಂತರ.1984ರ ಅಕ್ಟೋಬರ್‌ ಮೂವತ್ತೊಂದರಂದು ತಮ್ಮ ಅಂಗರಕ್ಷಕರ ಗುಂಡಿಗೆ ಇಂದಿರಾ ಬಲಿಯಾದ ಸಂದರ್ಭದಲ್ಲಿ ಅವರ ಪುತ್ರ ರಾಜೀವ್‌ ಗಾಂಧಿ ವಿದೇಶದಲ್ಲಿದ್ದರು.

ಅವರು ಬರುವ ತನಕ ಪ್ರಧಾನಿ ಹುದ್ದೆಯನ್ನು ಹಾಗೇ ಬಿಡುವುದು ಬೇಡ, ತಾತ್ಕಾಲಿಕವಾಗಿಯಾದರೂ ಆ ಹುದ್ದೆಯ ಹೊಣೆಗಾರಿಕೆಯನ್ನು ನಾನು ಹೊರುತ್ತೇನೆ ಎಂದು ಪ್ರಣಬ್‌ ಮುಖರ್ಜಿ ಪಕ್ಷದ ಪ್ರಮುಖರ ಬಳಿ ಹೇಳಿಕೊಂಡಿದ್ದೇ ಅವರ ಬದುಕಿನ ಸುತ್ತ ಅನುಮಾನದ ಹುತ್ತವಾಗಿ ಪರಿವರ್ತನೆಯಾಯಿತು.

ಕಾಂಗ್ರೆಸ್‌ ಪಕ್ಷದ ದಂಡು ಇಂದಿರಾಗಾಂಧಿ ಜಾಗಕ್ಕೆ ರಾಜೀವ್‌ ಗಾಂಧಿ ಅವರನ್ನು ತಂದು ಕೂರಿಸಲು ಬಯಸಿದ್ದಾಗ ಪ್ರಣಬ್‌ ಮುಖರ್ಜಿ ವ್ಯಕ್ತಪಡಿಸಿದ ಇಚ್ಚೆ ಬಹು ದುಬಾರಿಯಾಯಿತು.

ಮುಂದೆ ರಾಜೀವ್‌ ಗಾಂಧಿ ವಿದೇಶದಿಂದ ಬಂದರು. ಪ್ರಧಾನಿ ಹುದ್ದೆಗೇರಿದರು. ಅದೇ ಕಾಲಕ್ಕೆ ತಮ್ಮ ಹುದ್ದೆಯ ಮೇಲೆ ಕಣ್ಣು ಹಾಕಿದ್ದ ಪ್ರಣಬ್‌ ಮುಖರ್ಜಿ ಅವರನ್ನು ಸೈಡ್‌ ಲೈನಿಗೆ ಸರಿಸಿದರು.

ಇಂದಿರಾ ಅವರಂತಹ ಮಹಾನ್‌ ನಾಯಕಿ ಕೂಡಾ ಪ್ರಣಬ್‌ ಮುಖರ್ಜಿ ಅವರಿಲ್ಲದೆ ನನ್ನ ಸಂಪುಟ ಪೂರ್ಣವಲ್ಲ ಎನ್ನುತ್ತಿದ್ದ ಕಾಲ ಹಿಂದಕ್ಕೆ ಸರಿದು, ಪ್ರಣಬ್‌ ಮುಖರ್ಜಿ ಜತೆ ಯಾರಾದರೂ ಕಾಣಿಸಿಕೊಂಡರೆ ಅವರು ಪ್ರಧಾನಿ ಪಾಳೆಯದ ಸಮೀಪಕ್ಕೂ ಸುಳಿಯಲಾರರು ಎಂಬ ಮೆಸೇಜು ತಲುಪಿತು.

ಅದು ಪ್ರಣಬ್‌ ಮುಖರ್ಜಿ ಅವರು ಅತ್ಯಂತ ನೋವನ್ನು ಅನುಭವಿಸಿದ ಕಾಲ. ಮುಂದೆ ಇದು ಸರಿಯಾಗಲು ಪಿ.ವಿ.ನರಸಿಂಹರಾವ್‌ ಅವರು ಪ್ರಧಾನಿ ಹುದ್ದೆಗೆ ಬರಬೇಕಾಯಿತು.
ಪಿ.ವಿ. ನರಸಿಂಹರಾವ್‌ ಕುಶಾಗ್ರಮತಿ, ಪ್ರಣಬ್‌ ಮುಖರ್ಜಿ ಅವರ ಸಾಮರ್ಥ್ಯವೇನು ಅಂತ ಬಲ್ಲವರು. ಅವರು ಬರ ಬರುತ್ತಿದ್ದಂತೆಯೇ ಪ್ರಣಬ್‌ ಮುಖರ್ಜಿ ಅವರನ್ನು ಪಕ್ಕದಲ್ಲಿಟ್ಟುಕೊಂಡು ಭಾರತದ ಹೊಸ್ತಿಲಿಗೆ ಜಾಗತೀಕರಣ ಕಾಲಿಡುವಂತೆ ಮಾಡಿದರು.

ಆ ಹೊತ್ತಿಗಾಗಲೇ ದೇಶ ಆರ್ಥಿಕವಾಗಿ ಮಹಾಕಷ್ಟದಲ್ಲಿದ್ದ ಕಾಲ. ಅಂತಹ ಕಾಲದಲ್ಲಿ ಪ್ರಣಬ್‌ ಮುಖರ್ಜಿ ಅವರು ಅರ್ಥಶಾಸ್ತ್ರಜ್ಞ, ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಮನಮೋಹನ್‌ಸಿಂಗ್‌ ಸಹಕಾರದಿಂದ ಅದ್ಭುತ ಕೆಲಸ ಮಾಡಿದರು.

ಈ ದೇಶ ದೊಡ್ಡ ಮಟ್ಟದ ದುಡ್ಡಿನ ಒಳಹರಿವು ಕಂಡಿದ್ದು ಆ ಸಂದರ್ಭದಲ್ಲಿ. ಕುಸಿದು ಕುಂತ ದೇಶವನ್ನು ಮೇಲೆಬ್ಬಿಸಿ ನಿಲ್ಲಿಸಿದ ಸಾಹಸಕ್ಕಾಗಿ ಪ್ರಣಬ್‌ ಮುಖರ್ಜಿ ಅವರಿಗೆ ಕಾಂಗ್ರೆಸ್‌ ಪಾರ್ಟಿ ಗೋಲ್ಡ್‌ ಮೆಡಲನ್ನೇನೂ ಕೊಡಲಿಲ್ಲ.

ನರಸಿಂಹರಾಯರ ಯುಗ ಕಳೆದು ಸೋನಿಯಾಗಾಂಧಿ ಕಾಲಕ್ರಮೇಣ ಕಾಂಗ್ರೆಸ್‌ ಪಕ್ಷದ ರೆಕ್ಕೆ ಪುಕ್ಕಗಳ ಮೇಲೆ ನಿಯಂತ್ರಣ ಪಡೆದರಲ್ಲ? ಅದಾದ ನಂತರ ಯಥಾ ಪ್ರಕಾರ ಪ್ರಣಬ್‌ ಮುಖರ್ಜಿ ಅವರ ಮೇಲೆ ಅನುಮಾನದ ಕಣ್ಣು ಇಟ್ಟೇ ಇದ್ದರು.

2004 ರಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂತಲ್ಲ? ಆ ಸಂದರ್ಭದಲ್ಲಿ ಪ್ರಧಾನಿ ಹುದ್ದೆಗೇರಬೇಕಿದ್ದ ಸೋನಿಯಾಗಾಂಧಿ ಅವರಿಗೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಯಿತು. ಹೀಗಾಗಿ ಆ ಹುದ್ದೆಯ ಮೇಲೆ ಕೂರುವುದಿಲ್ಲ ಎಂದ ಸೋನಿಯಾಗಾಂಧಿ ನೇರವಾಗಿ ಕೈ ಹಿಡಿದು ಕರೆತಂದಿದ್ದು ಮನಮೋಹನ್‌ಸಿಂಗ್‌ ಅವರನ್ನು.

ಒಂದು ಕಾಲದಲ್ಲಿ ತಾವು ನಿರ್ವಹಿಸುತ್ತಿದ್ದ ಹಣಕಾಸಿನ ಖಾತೆಯ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಸಿಂಗ್‌ ಅವರನ್ನು ಪ್ರಧಾನಿ ಹುದ್ದೆಯಲ್ಲಿ ನೋಡಿ ಪ್ರಣಬ್‌ ಮುಖರ್ಜಿ ಮೌನವಾಗಿರಬೇಕಾಯಿತು. ಅಂದರೆ? ರಾಜೀವ್‌ ಗಾಂಧಿ ಅವರಂತೆಯೇ ಸೋನಿಯಾಗಾಂಧಿ ಕೂಡಾ ಪ್ರಣಬ್‌ ಮುಖರ್ಜಿ ಅವರ ಬಗ್ಗೆ ಅನುಮಾನದ ಕಣ್ಣಿಟ್ಟಿದ್ದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಹಗರಣಗಳ ಸರಮಾಲೆ ಶುರುವಾಯಿತು. 2 ಜಿ ಸ್ಪೆಕ್ಟ್ರಂ ಹಗರಣ, ಕಲ್ಲಿದ್ದಲು ಹಗರಣ, ಆದರ್ಶ ಹೌಸಿಂಗ್‌ ಸೊಸೈಟಿ ಕರ್ಮಕಾಂಡ ಹೀಗೆ ಒಂದರ ಹಿಂದೊಂದರಂತೆ ಹಗರಣಗಳು ಮೇಲೆದ್ದಾಗ ಪ್ರಧಾನಿ ಸಿಂಗ್‌ ಬಸವಳಿದರು.

ಹೀಗಾಗಿ ; ಪ್ರಧಾನಿ ಹುದ್ದೆಯ ಜವಾಬ್ದಾರಿಯಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಅವರು ಸೋನಿಯಾಗಾಂಧಿ ಅವರ ಬಳಿ ಕೋರಿಕೊಂಡಿದ್ದರು. ಈ ಟೈಮಿನಲ್ಲಿ ಮತ್ತೆ ಪ್ರಣಬ್‌ ಮುಖರ್ಜಿ ಅವರ ಆಸೆ ಗರಿಗೆದರಿತು. ಒಂದು ಸಲವಾದರೂ ತಾವು ಪ್ರಧಾನಿ ಹುದ್ದೆಗೇರುವಂತಾದರೆ? ಎಂಬ ಅವರ ಆಸೆಯ ತುಣುಕುಗಳು ಅಲ್ಲಲ್ಲಿ ಕಾಣಿಸಿಕೊಂಡವು.

ಇದಾದ ಕೆಲವೇ ದಿನಗಳಲ್ಲಿ ಒಂದು ಘಟನೆ ನಡೆಯಿತು. ಅವತ್ತು ಪ್ರವಾಸದಲ್ಲಿದ್ದ ಪ್ರಣಬ್‌ ಮುಖರ್ಜಿ ದೊಡ್ಡ ಅಪಘಾತವೊಂದಕ್ಕೆ ಗುರಿಯಾದರು. ಅಚ್ಚರಿ ಎಂದರೆ ಪ್ರಣಬ್‌ ಮುಖರ್ಜಿ ಅವರಿಗೆ ಯಾವ ಗಾಯಗಳೂ ಆಗಿರಲಿಲ್ಲ.

ಆದರೆ ಅವರಿಗೆ ಬಗೆ ಹರಿಯದ ಒಂದು ಪ್ರಶ್ನೆ ಹಾಗೇ ಉಳಿದುಕೊಂಡಿತು. ಈ ಅಪಘಾತದಲ್ಲಿ ನನ್ನನ್ನು ಮುಗಿಸುವುದು ಸುಲಭವಾಗಿತ್ತು. ಆದರೆ ಅಪಘಾತ ಮಾತ್ರ ಭೀಕರವಾಗಿದ್ದು, ನಾನು ಬದುಕುಳಿಯುವಂತೆ ಮಾಡಿದ್ದು ಏಕೆ? ಎಂಬುದು ಈ ಪ್ರಶ್ನೆ.

ಈ ಪ್ರಶ್ನೆ ಸುಳಿದೊಡನೆ ಪ್ರಣಬ್‌ ಮುಖರ್ಜಿ ಪ್ರಧಾನ ಮಂತ್ರಿಯಾಗುವ ತಮ್ಮ ಆಸೆಯನ್ನು ತೊರೆದರು. ಅದೇ ಕಾಲಕ್ಕೆ ಖುದ್ದು ಸೋನಿಯಾಗಾಂಧಿ ಅವರಿಂದ ಬಂದ ರಾಷ್ಟ್ರಪತಿ ಹುದ್ದೆಯ ಆಫರ್‌ ಅನ್ನು ಒಪ್ಪಿಕೊಂಡರು.

ಆದರೆ ಪ್ರಣಬ್‌ ಮುಖರ್ಜಿ ಹಿಂದಿದ್ದ ಭಾರತದ ಬಹುದೊಡ್ಡ ಬಂಡವಾಳಷಾಹಿ ಶಕ್ತಿಗಳು ಕ್ರಮೇಣ ತಮ್ಮ ದಿಕ್ಕು ಬದಲಿಸಲಾರಂಭಿಸಿದವು. ತುಂಬ ಜನರಿಗೆ ಗೊತ್ತಿಲ್ಲದಿರುವುದೆಂದರೆ ಈ ದೇಶದ ಟಾಪ್‌ ಲೆವೆಲ್‌ ಉದ್ಯಮಿಗಳ ಪಾಲಿಗೆ ಪ್ರಣಬ್‌ ದಾ ಅವರಂತಹ ಮೆಚ್ಚಿನ ನಾಯಕರೇ ಇರಲಿಲ್ಲ.

ಹಲವು ವರ್ಷಗಳ ಕಾಲ ದೇಶದ ಹಣಕಾಸು ಸಚಿವರಾಗಿ ಕೆಲಸ ಮಾಡಿದ್ದ ಪ್ರಣಬ್‌ ಮುಖರ್ಜಿ ಅವರು ಇಂತಹ ಕಾರಣಕ್ಕಾಗಿಯೇ ಉದ್ಯಮಪತಿಗಳ ಮಹಾ ಲಿಂಕ್‌ ಒಂದನ್ನು ಹೊಂದಿದ್ದರು. ಮತ್ತು ಯಾವಾಗ ತಾವು ಈ ದೇಶದ ಪ್ರಧಾನಿಯಾಗುವುದಿಲ್ಲ ಎಂಬುದು ಕನ್‌ಫರ್ಮ್‌ ಆಯಿತೋ? ಇದಾದ ನಂತರ ಅವರ ಬೆನ್ನ ಹಿಂದಿದ್ದ ಉದ್ಯಮಪತಿಗಳ ದಂಡು ಮತ್ತೊಬ್ಬ ನಾಯಕನತ್ತ ಸರಿಯಿತು.ಅವರ ಹೆಸರು-
ನರೇಂದ್ರ ಮೋದಿ.

ಮುಂದೆ ಈ ಉದ್ಯಮಿಗಳ ದಂಡು ಏನು ಮಾಡಿತು? ಏನುಮಾಡಿತು ಎಂಬುದು ಇತಿಹಾಸ ಮತ್ತು ವರ್ತಮಾನ. ಅವತ್ತು ಪ್ರಣಬ್‌ ಮುಖರ್ಜಿ ಅವರ ಇಶಾರೆಯಂತೆ  ಕೈ ಪಾಳೆಯದಿಂದ ಕಮಲ ಪಾಳೆಯಕ್ಕೆ ದಾಟಿಕೊಂಡ ಈ ದಂಡು ದೊಡ್ಡ ಮಟ್ಟದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಬೆಂಬಲಕ್ಕೆ ನಿಂತಿದೆ.

ಇವತ್ತು ಏನೇ ಮಾಡಿದರೂ ಕಾಂಗ್ರೆಸ್‌ ಮೇಲೇಳುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಅದರ ಹಿಂದಿನ ನಿಜವಾದ ಕಾರಣ ಇದು. ಅವತ್ತು ಪ್ರಣಬ್‌ರ ಆಸೆಯನ್ನು ನಿರ್ಲಕ್ಷಿಸಿದ ಕಾಂಗ್ರೆಸ್‌ ಇವತ್ತು ಹೆಜ್ಜೆ,ಹೆಜ್ಜೆಗೂ ಎಡವುತ್ತಿದೆ.

ಮೇಲೆದ್ದು ನಿಂತು ಸರಿಯಾಗಿ ಹೆಜ್ಜೆ ಹಾಕಬೇಕೆಂದರೆ ಅದರ ಪಾಳೆಯದಲ್ಲಿ ಮತ್ತೊಬ್ಬ ಪ್ರಣಬ್‌ ಮುಖರ್ಜಿ ಕಾಣುತ್ತಿಲ್ಲ.

September 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: