ಪಂಗನಾಮ ಪಾರಂಗತೆಯರ ಜೊತೆಯಲ್ಲಿ..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ.

ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು.

ಈಗ ‘ಚಲೋ ದಿಲ್ಲಿ..’

ವಿಕ್ಟರ್ ಲಸ್ಟಿಗ್ ಎಂಬ ಕುಖ್ಯಾತನೊಬ್ಬನ ಬಗ್ಗೆ ಮೊಟ್ಟಮೊದಲ ಬಾರಿಗೆ ಕೇಳಿ ತಿಳಿಯುವವರೆಗೂ ‘ಕಾನ್ ಮ್ಯಾನ್’ ಅಂದರೇನು ಎಂಬುದೇ ನನಗೆ ತಿಳಿದಿರಲಿಲ್ಲ.

‘ಕಾನ್’ ಎಂಬ ಪದದ ಮೂಲವಿರುವುದು ‘ಕಾನ್ಫಿಡೆನ್ಸ್’ ಎಂಬ ಪದದಲ್ಲಿ. ಇಲ್ಲಿಯ ಕಾನ್ಫಿಡೆನ್ಸ್ ಎಂಬ ಪದಕ್ಕೆ ಎರಡು ಅರ್ಥಗಳಿವೆ. ಒಂದು ಧೈರ್ಯವಾದರೆ ಮತ್ತೊಂದು ವಿಶ್ವಾಸ. ‘ಕಾನ್’ ಕೆಲಸಗಳನ್ನು ಮಾಡುವ ಧೂರ್ತರಲ್ಲಿ ಒಂದು ಭಂಡಧೈರ್ಯವಿರುತ್ತದೆ.

ಭಂಡಧೈರ್ಯವಿಲ್ಲದಿರುವವರು ಇಂಥಾ ದುಸ್ಸಾಹಸಗಳಿಗೆ ಕೈಹಾಕಿದರೆ ಭಾರೀ ಎಡವಟ್ಟುಗಳಾಗುವುದು ಖಚಿತ. ಸುಳ್ಳನ್ನೇ ಹೇಳುವುದಾದರೂ ಈ ಮಂದಿ ಸತ್ಯದ ತಲೆಗೆ ಹೊಡೆದಂತೆ ಹೇಳಬಲ್ಲರು.

ಕಟ್ಟಾ ನಾಸ್ತಿಕನೊಬ್ಬನೆದುರು ತಮ್ಮ ಮಾತಿನ ಮೋಡಿಯಲ್ಲೇ ಹೊಸ ಭಗವಂತನೊಬ್ಬನನ್ನು ಸೃಷ್ಟಿಸಿ, ಅವರನ್ನು ದೈವಭಕ್ತರಾಗಿಯೂ ಮಾಡಬಲ್ಲರು. ತಮ್ಮಲ್ಲಿರುವ ಅಪಾರ ಆತ್ಮವಿಶ್ವಾಸದಿಂದ ಇವರುಗಳು ಸುತ್ತಮುತ್ತಲಿನವರ ಗಮನವನ್ನೂ, ವಿಶ್ವಾಸವನ್ನೂ ಚಿಟಿಕೆ ಹೊಡೆಯುವಷ್ಟರಲ್ಲಿ ಗೆಲ್ಲಬಲ್ಲರು.

ಅಸಲಿಗೆ ಜನಸಾಮಾನ್ಯರ ದುರಾಸೆ, ಆಲಸ್ಯ, ಅಸಡ್ಡೆ, ಮುಗ್ಧತನ, ದಡ್ಡತನಗಳೇ ಕಾನ್ ಪರಿಣತರಿಗೆ ವರದಾನ. ಕಾನ್ ಆಸಾಮಿಯೊಬ್ಬ ಎಲ್ಲಿ, ಯಾವ ರೂಪದಲ್ಲಾದರೂ ನಮ್ಮ ಮುಂದೆ ಬರಬಹುದು. ನಂತರ ಬಂದ ವೇಗದಲ್ಲೇ ಮಾಯವಾಗಲೂಬಹುದು. ಸಾಮಾನ್ಯನೊಬ್ಬ ಕ್ಷಣಮಾತ್ರಕ್ಕೆ ಮೈಮರೆತರೂ ಕಾನ್ ಆಸಾಮಿಯೊಬ್ಬ ಆ ಬೇಟೆಯನ್ನು ಅತ್ಯಂತ ಸುಲಭವಾಗಿ ತನ್ನದಾಗಿಸಿಕೊಳ್ಳಬಲ್ಲ.

ವಿಕ್ಟರ್ ಲಸ್ಟಿಗ್ ಇಂಥದ್ದೇ ಓರ್ವ ಮಹಾಚಾಣಾಕ್ಷ ‘ಕಾನ್ ಮ್ಯಾನ್’ ಆಗಿದ್ದ. ಸಿಕ್ಕಸಿಕ್ಕವರಿಗೆ ಟೋಪಿ ಹಾಕುತ್ತಾ ತನ್ನ ಜೇಬು ತುಂಬಿಸುವುದು ಅವನಿಗೆ ಮಹಾ ಸಂಗತಿಯೇ ಆಗಿರಲಿಲ್ಲ. ಈತ ಐವತ್ತರ ದಶಕದಲ್ಲಿ ಪ್ಯಾರಿಸ್ಸಿನ ವಿಶ್ವವಿಖ್ಯಾತ ಐಫೆಲ್ ಟವರ್ ಅನ್ನು ಮಾರಾಟಕ್ಕಿಟ್ಟಿದ್ದ.

ತಮಾಷೆಯ ಸಂಗತಿಯೆಂದರೆ ಆ ಕಾಲದ ಹಲವು ಉದ್ಯೋಗಪತಿಗಳು ನಿಜಕ್ಕೂ ಇವನ ಕರಾಮತ್ತಿಗೆ ಬೇಸ್ತು ಬಿದ್ದು ದೊಡ್ಡ ಮೊತ್ತವನ್ನು ಕಳೆದುಕೊಂಡಿದ್ದರು. ದುಬಾರಿ ನಿರ್ವಹಣೆಯ ಕಾರಣವನ್ನು ನೀಡಿ ಐಫೆಲ್ ಟವರಿನ ಲೋಹವನ್ನು ಸಗಟಿನಲ್ಲಿ ಗುಜರಿಗೆ ನೀಡುವುದಾಗಿ ಹೇಳಿ, ರಹಸ್ಯವಾಗಿ ಟೆಂಡರ್ ಕರೆದು ಸಿರಿವಂತ ಉದ್ಯಮಿಗಳನ್ನು ಇಲ್ಲಿ ದೋಚಲಾಗಿತ್ತು.

ಈ ಉದ್ಯಮಿಗಳು ಅತ್ತ ಆಗಿದ್ದ ನಷ್ಟವನ್ನು ತಾಳಿಕೊಳ್ಳಲಾರದೆ, ಇತ್ತ ದೂರನ್ನೂ ದಾಖಲಿಸಲಾಗದೆ ತೀವ್ರ ಮುಜುಗರಕ್ಕೀಡಾಗಿದ್ದರು. ಆ ಕಾಲದ ಕುಖ್ಯಾತ ಡಾನ್ ಆಗಿದ್ದ ಅಲ್ ಕೆಪೋನ್ ಗೂ ಕೂಡ ವಿಕ್ಟರ್ ಲಸ್ಟಿಗ್ ಮಂಕುಬೂದಿ ಎರಚಿದ್ದು ಇಂದು ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ.

ನಮ್ಮ ದೇಶದವನೇ ಆಗಿದ್ದ ನಟವರಲಾಲ್ ಲಸ್ಟಿಗ್ ನಿಂದ ಪ್ರೇರಿತನಾಗಿದ್ದನೇ ಎಂದು ಕೆಲವೊಮ್ಮೆ ನನಗನ್ನಿಸುವುದುಂಟು. ಏಕೆಂದರೆ ನಟವರಲಾಲ್ ಸಾಹೇಬ್ರು ದೆಹಲಿಯ ಕೆಂಪುಕೋಟೆಯನ್ನೂ, ಸಂಸತ್ ಭವನವನ್ನೂ ಮಾರಾಟಕ್ಕಿಟ್ಟು ಹಲವರನ್ನು ದೋಚಿದ್ದರಂತೆ.

ಅಷ್ಟಕ್ಕೂ ಭಾರತ ಮತ್ತು ದಿಲ್ಲಿಯ ಮಟ್ಟಿನ ಕಾನ್ ಪ್ರಕರಣಗಳಿಗೆ ಬಂದರೆ ಇಂದು ಥಟ್ಟನೆ ನೆನಪಾಗುವುದು ಕೇವಲ ಎರಡು ಹೆಸರುಗಳು. ಅದು ನಟವರಲಾಲ್ ಮತ್ತು ಚಾಲ್ರ್ಸ್ ಶೋಭರಾಜ್. ವಿಚಿತ್ರವೆಂದರೆ ಇಂಥಾ ಕಾನ್ ಪ್ರಕರಣವೊಂದನ್ನು ಸ್ವತಃ ನೋಡುವ ಅವಕಾಶವೊಂದು ನನಗೆ ದಿಲ್ಲಿಯಲ್ಲಿ ಆಕಸ್ಮಿಕವಾಗಿ ಒಲಿದು ಬಂದಿತ್ತು.

ಈ ಘಟನೆಯನ್ನು ಅದೃಷ್ಟವೆನ್ನಬೇಕೋ, ದುರಾದೃಷ್ಟವೆನ್ನಬೇಕೋ ಎಂಬುದು ಗೊತ್ತಾಗುತ್ತಿಲ್ಲ. ಈಗ ಅದೊಂದು ಅಚ್ಚರಿಯೆನಿಸುವ ನೆನಪು ಮಾತ್ರ. 

ಅದು ಸೋಷಿಯಲ್ ನೆಟ್ವರ್ಕಿಂಗ್ ಆಪ್ ಗಳು ನಿಧಾನವಾಗಿ ಜನಪ್ರಿಯವಾಗುತ್ತಿದ್ದ ದಿನಗಳು. ವಿ-ಚಾಟ್, ಟಿಂಡರ್ ನಂಥಾ ಆಪ್ ಗಳು ಆಗಲೇ ತಕ್ಕಮಟ್ಟಿಗೆ ಜನಸಾಮಾನ್ಯರ, ಅದರಲ್ಲೂ ಯುವವರ್ಗಗಳ ನೆಚ್ಚಿನ ಮೊಬೈಲ್ ಅಪ್ಲಿಕೇಷನ್ ಗಳಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದವು.

ಈ ದಿನಗಳಲ್ಲೇ ದಿಲ್ಲಿಯ ಗೆಳೆಯನೊಬ್ಬ ಕರೆ ಮಾಡಿ ಇಂತಿಪ್ಪ ಆಪ್ ಒಂದರಲ್ಲಿ ಓರ್ವ ತರುಣಿಯ ಜೊತೆ ಮಾತುಕತೆಯಾಗಿದೆ ಎಂದೂ, ಮುಂದಿನ ಭಾನುವಾರವೇ ಮೊದಲ ಭೇಟಿಯೆಂದೂ ಹೇಳಿದ್ದ. ಬಹುಕಾಲದಿಂದ ಸಿಂಗಲ್ ಆಗಿದ್ದ ಗೆಳೆಯನಿಗೆ ಕೊನೆಗೂ ಅದೃಷ್ಟ ಖುಲಾಯಿಸಿತೆಂದು ಖುಷಿಪಡುತ್ತಾ ನಾವು ಅಂದು ಮನಸಾರೆ ಹರಟಿದೆವು.

ಆದರೆ ”ಜೊತೆಯಲ್ಲಿ ನೀನೂ ಬರಬೇಕು ಮಾರಾಯ” ಎಂದು ಆತ ಹೇಳುವುದರೊಂದಿಗೆ ನನಗೆ ಪೇಚಿಗಿಟ್ಟುಕೊಂಡಿತ್ತು. ಶಿವಪೂಜೆಯಲ್ಲಿ ಕರಡಿಗೇನು ಕೆಲಸ? ”ಇದು ಮೊದಲ ಭೇಟಿಯಷ್ಟೇ. ರೋಮ್ಯಾಂಟಿಕ್ ಡೇಟ್ ಎಂದೇನೂ ಅಲ್ಲ. ಕಾಫಿಶಾಪಿನಲ್ಲಿ ಒಂದಷ್ಟು ಹೊತ್ತು ಹರಟಿ ಮರಳೋಣವಂತೆ” ಎಂಬ ಆತನ ಸಲಹೆಯ ಮೇರೆಗೆ ಕೊನೆಗೂ ನಾನು ಒಪ್ಪಿಕೊಂಡೆ.

ದಿನಗಳು ಉರುಳಿದವು. ಪೂರ್ವಯೋಜನೆಯಂತೆ ಮುಂದಿನ ಭಾನುವಾರ ನಾವಿಬ್ಬರೂ ದಿಲ್ಲಿಯ ಲಕ್ಷ್ಮೀನಗರದಲ್ಲಿರುವ ದೊಡ್ಡ ಶಾಪಿಂಗ್ ಮಾಲ್ ಒಂದರಲ್ಲಿ ಸೇರಿದೆವು. ನಿರೀಕ್ಷೆಯಂತೆ ನಿಗದಿತ ಸಮಯಕ್ಕಿಂತ ಸುಮಾರು ಇಪ್ಪತ್ತು ನಿಮಿಷ ತಡವಾಗಿ ತರುಣಿಯೊಬ್ಬಳು ನಡೆದು ಬಂದಿದ್ದಳು. ಉಭಯ ಕುಶಲೋಪರಿಗಳ ನಂತರ ಮೂವರೂ ಕಾಫಿಶಾಪೊಂದರಲ್ಲಿ ಆಸೀನರಾಗಿ ಸಂಭಾಷಣೆಯಲ್ಲಿ ತಲ್ಲೀನರಾದೆವು.

ಹೀಗೆ ವಿ-ಚಾಟ್ ಮೂಲಕವಾಗಿ ಹೊಸದಾಗಿ ಗೆಳೆಯನಿಗೆ ಪರಿಚಯವಾಗಿದ್ದ ಈ ತರುಣಿ ಸುಮಾರು ಇಪ್ಪತ್ತರ ಆಸುಪಾಸಿನವಳಾಗಿದ್ದು ಉತ್ತರ ಭಾರತೀಯಳಾಗಿದ್ದಳು. ಪ್ರಾಯಶಃ ಉತ್ತರಪ್ರದೇಶ ಮೂಲದವಳು. ಸಲ್ವಾರ್ ಕಮೀಝಿನಲ್ಲಿ ಮಟ್ಟಸವಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದ ಆಕೆಯನ್ನು ನೋಡಿ ತೀರಾ ಫ್ಯಾಷನೇಬಲ್ ಅಲ್ಲವೆಂದೂ, ಸಾಮಾನ್ಯ ಕುಟುಂಬವೊಂದರ ಹೆಣ್ಣುಮಗಳೆಂದೂ ಮೇಲ್ನೋಟಕ್ಕೆ ಹೇಳಬಹುದಿತ್ತು.

ತಕ್ಕಮಟ್ಟಿನ ರೂಪವುಳ್ಳ, ಮಿತಭಾಷಿ ತರುಣಿ. ಕಾಫಿ ಕುಡಿದಾದ ನಂತರ ನಮ್ಮ ಸವಾರಿ ಹೊರಟಿದ್ದು ಮೆಕ್-ಡೊನಾಲ್ಡ್ ರೆಸ್ಟೊರೆಂಟಿಗೆ. ನಮ್ಮ ವಿಲಕ್ಷಣ ಆನ್ಲೈನ್ ಡೇಟಿಂಗ್ ಕಥೆಯು ಮೊದಲ ತಿರುವನ್ನು ಪಡೆದುಕೊಂಡಿದ್ದು ಈ ಹಂತದಲ್ಲೇ.

ಬಂದಿರುವ ತರುಣಿಯ ಗೆಳತಿಯೆಂದು ಹೇಳಿಕೊಳ್ಳುತ್ತಿದ್ದ ಮತ್ತೋರ್ವ ಹೆಣ್ಣುಮಗಳೊಬ್ಬಳು ಈ ಬಾರಿ ನಮಗೆ ಜೊತೆಯಾದಳು. ದಪ್ಪ ಕನ್ನಡಕವನ್ನು ಧರಿಸಿದ್ದ ಹದಿನೇಳು-ಹದಿನೆಂಟರ ಬಾಲೆಯಂತೆ ಕಾಣುತ್ತಿದ್ದ ಆಕೆ ಈಗಷ್ಟೇ ನಿದ್ದೆಯಿಂದ ಎದ್ದುಬಂದವಳಂತೆ, ಕೊಂಚ ಸುಸ್ತಾದವಳಂತೆ ಕಾಣುತ್ತಿದ್ದಳು.

ಪುಟ್ಟ ನಿಲುವಿನ, ಶಾಲಾ ವಿದ್ಯಾರ್ಥಿನಿಯಂತೆ ಕಾಣುತ್ತಿದ್ದ ಹುಡುಗಿ. ಸಂಭಾಷಣೆಯ ವಿಚಾರದಲ್ಲಂತೂ ತೀರಾ ಕಳಪೆ ಅನ್ನಿಸುವಷ್ಟು ಕಮ್ಮಿ ಮಾತಾಡುತ್ತಿದ್ದ ಆಕೆ ಒಮ್ಮೆಯೂ ನಮ್ಮೊಂದಿಗೆ ದೃಷ್ಟಿ ಮಿಲಾಯಿಸಿದ್ದನ್ನು ನಾನು ನೋಡಲಿಲ್ಲ.

”ಮುಂದೇನು?” ಎಂಬ ನಮ್ಮ ಪ್ರಶ್ನೆಗೆ ಈ ಈರ್ವರಿಂದ ಉತ್ತರವಾಗಿ ಬಂದಿದ್ದು ”ಮೂವಿ ಪ್ಲಾನ್” ಎಂಬ ಉತ್ತರ. ಮೊದಲು ಮೆಕ್-ಡೊನಾಲ್ಡಿನಲ್ಲಿ ಬರ್ಗರ್ ಗಳನ್ನು ಚಪ್ಪರಿಸಿ ನಾಲ್ವರೂ ಜೊತೆಯಲ್ಲಿ ಸಿನೆಮಾ ನೋಡುವುದೆಂದು ನಿರ್ಧರಿಸಿದೆವು.

ಇತ್ತ ರೆಸ್ಟೊರೆಂಟಿನಲ್ಲೋ ವಾರಾಂತ್ಯದ ಭಯಂಕರವೆನ್ನಿಸುವಷ್ಟಿನ ಜನಜಂಗುಳಿ. ಬರ್ಗರ್ ತರಲು ನಾನು ಹೊರಟರೆ, ಬಂದಿದ್ದ ತರುಣಿಯ ಜೊತೆಯಲ್ಲಿದ್ದ ಹುಡುಗಿ ತಾನು ಸಿನೆಮಾ ಟಿಕೆಟ್ ಬುಕ್ ಮಾಡುತ್ತೇನೆಂದು ಹೊರಟಳು.

ಸಿನೆಮಾ ಟಿಕೆಟ್ಟಿಗಾಗಿ ನಗದು ಕಮ್ಮಿಯಿದ್ದಿದ್ದರಿಂದ ಗೆಳೆಯ ನನ್ನೆದುರಿಗೇ ತನ್ನ ಡೆಬಿಟ್ ಕಾರ್ಡನ್ನು ಆಕೆಯ ಕೈಯಲ್ಲಿಟ್ಟು ತನ್ನ ರಹಸ್ಯ ಕೋಡನ್ನು ಅವಳಿಗೆ ತಿಳಿಸಿದ. ಹೀಗೆ ಕೆಲ ಕ್ಷಣಗಳ ಮಟ್ಟಿಗೆ ಅಸಲಿಗೆ ಭೇಟಿಯಾಗಬೇಕಿದ್ದ ಇಬ್ಬರು ತಮ್ಮ ಖಾಸಗಿ ಕ್ಷಣಗಳನ್ನು ಒಟ್ಟಿಗೆ ಕಳೆಯುವಂತಾಯಿತು.

ಇತ್ತ ನಾನು ಬರ್ಗರ್ ಗಳನ್ನು ತುಂಬಿದ್ದ ಟ್ರೇಯನ್ನು ಹಿಡಿದುಕೊಂಡು ಕೆಲ ನಿಮಿಷಗಳ ನಂತರ ಬರಬೇಕಾದಲ್ಲಿಗೆ ಬಂದಿದ್ದೆ. ಇವರಿಬ್ಬರ ಸಂಭಾಷಣೆಯು ಮುಂದುವರಿದಿತ್ತು. ಒಂದು ರೀತಿಯಲ್ಲಿ ಅದನ್ನೊಂದು ಏಕಮುಖ ಸಂಭಾಷಣೆಯೆಂದರೂ ಸರಿಯೇ.

ಹುಡುಗ ಹತ್ತು ಮಾತನಾಡಿದರೆ ಆಕೆಯದ್ದು ಒಂದೇ ಮಾತು. ತಾನು ಬೇರ್ಯಾರದ್ದೋ ಒತ್ತಾಯಕ್ಕೆ ಭೇಟಿಯಾಗಲು ಬಂದಿರುವೆನೆಂಬಂತಿನ ವರ್ತನೆ. ಟಿಕೆಟ್ ಬುಕ್ ಮಾಡಲು ಹೋದವಳು ಇನ್ನೇನು ಬರಲಿದ್ದಾಳೆಂದು ತಮ್ಮ ಬರ್ಗರ್ ಪ್ಯಾಕೆಟ್ಟುಗಳನ್ನು ತೆರೆಯದೆ ಮೂವರೂ ಅವಳಿಗಾಗಿ ಕಾಯುತ್ತಲಿದ್ದೆವು.

”ಈ ಜನಜಂಗುಳಿಯಲ್ಲಿ ಖಾಲಿಯಿರುವ ನಾಲ್ಕನೇ ಸೀಟನ್ನು ಬಹಳ ಹೊತ್ತು ಕಾದಿರಿಸುವುದು ಕಷ್ಟ. ಯಾರಾದರೂ ಬಂದು ಕುರ್ಚಿಯನ್ನು ತಮಗಾಗಿ ಕೊಂಡೊಯ್ದರೂ ಅಚ್ಚರಿಯಿಲ್ಲ” ಎಂದು ಜೊತೆಯಲ್ಲಿದ್ದ ಗೆಳೆಯ ಮೆಲ್ಲನೆ ಗೊಣಗತೊಡಗಿದ. ನಾನು ಪೆಚ್ಚಾಗಿ ಆಕೆಯ ಮುಖವನ್ನು ನೋಡಿದೆ. ನನ್ನ ನೋಟವನ್ನು ಅರ್ಥಮಾಡಿಕೊಂಡವಳಂತೆ ಆಕೆ ತನ್ನ ಸ್ಮಾರ್ಟ್‍ಫೋನನ್ನು ತೆಗೆದು ತನ್ನ ಗೆಳತಿಗೆ ಕರೆ ಮಾಡಲಾರಂಭಿಸಿದಳು.

”ಅದೇನು ಹೇಳುತ್ತಿದ್ದಾಳೋ ಕೇಳುತ್ತಿಲ್ಲ. ಹೊರಗೆ ಹೋಗಿ ಮಾತಾಡಿಕೊಂಡು ಬರುವೆ”, ಎಂದಳು ಈಕೆ. ರೆಸ್ಟೋರೆಂಟಿಗೆ ನಿರಂತರವಾಗಿ ನುಗ್ಗುತ್ತಿರುವ ಜನರ ಭರಾಟೆಯಲ್ಲಿ ಅದು ಸತ್ಯವೂ ಆಗಿತ್ತು. ಓಕೆ ಎಂದು ನಾವಿಬ್ಬರೂ ತಲೆಯಾಡಿಸಿದೆವು.

ಹೀಗೆ ಕರೆ ಮಾಡಲೆಂದು ಹೋದವಳ ಪತ್ತೆಯೇ ಇಲ್ಲ. ಇತ್ತ ಸಿನೆಮಾ ಟಿಕೆಟ್ ಬುಕ್ ಮಾಡಲೆಂದು ಹೋದವಳು ಇಪ್ಪತ್ತು ನಿಮಿಷಗಳಾದರೂ ವಾಪಾಸ್ಸಾಗಿರಲಿಲ್ಲ. ನಮ್ಮ ಕಥಾನಾಯಕಿ ಕರೆ ಮಾಡಲು ಹೊರಟು ಹತ್ತು ನಿಮಿಷಗಳು ಉರುಳಿದವು. ಹತ್ತು ಮೂವತ್ತಾಯಿತು. ಮೂವತ್ತು ಅರವತ್ತಾಯಿತು.

ಆಕೆಯ ನಂಬರಿಗೆ ನನ್ನ ಗೆಳೆಯನು ಮಾಡುತ್ತಿದ್ದ ಕರೆಗಳು ಉತ್ತರವಿಲ್ಲದೆ ಕೊನೆಗೂ ಸ್ವಿಚ್ ಆಫ್ ಆಗಿ ಅಸುನೀಗಿದಾಗ ನಾವು ಪರಸ್ಪರರ ಮುಖ ನೋಡಿಕೊಂಡೆವು. ಈ ಈರ್ವರು ತರುಣಿಯರು ಮತ್ತೆಂದೂ ನಮ್ಮ ಕಣ್ಣಿಗೆ ಕಾಣಲಾರರೆಂಬುದು ಅಷ್ಟು ಹೊತ್ತಿಗೆ ನಮಗೆ ಖಾತ್ರಿಯಾಗಿತ್ತು. 

ಇದಾದ ಕೆಲ ನಿಮಿಷಗಳಲ್ಲೇ ಡೆಬಿಟ್ ಕಾರ್ಡಿನಿಂದ ಹತ್ತು ಸಾವಿರ ರೂಪಾಯಿಗಳ ನಗದನ್ನು ತೆಗೆದಿದ್ದು ಮೊಬೈಲ್ ಬ್ಯಾಂಕಿಂಗಿನ ಎಸ್ಸೆಮ್ಮೆಸ್ ಸಂದೇಶದಿಂದಾಗಿ ತಿಳಿದುಬಂದಿತು. ಕೂಡಲೇ ಎಚ್ಚೆತ್ತುಕೊಂಡು ಕಳವಾದ ಕಾರ್ಡಿನ ಬಗ್ಗೆ ಸಂಬಂಧಿ ಬ್ಯಾಂಕಿಗೆ ತಿಳಿಸಿ ಅದನ್ನು ಬ್ಲಾಕ್ ಮಾಡುವಷ್ಟರಲ್ಲಿ ಸಾಕಷ್ಟು ಸಮಯ ಕಳೆದುಹೋಗಿತ್ತು.

ದುರಾದೃಷ್ಟವಶಾತ್ ಅಂದು ಶಾಪಿಂಗ್ ಮಾಲ್ ಆವರಣದಲ್ಲಿ ಓಡಾಡುತ್ತಿದ್ದ ಪೊಲೀಸರಿಂದಾಗಲಿ, ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರಿಂದಾಗಲಿ ಸೂಕ್ತ ನೆರವು ದೊರಕಲಿಲ್ಲ. ಇವೆಲ್ಲವೂ ಅವರಿಗೊಂದು ಕಾಲ್ಪನಿಕ, ತಮಾಷೆಯ ಕಥೆಯಾಗಿ ದಕ್ಕಿತೇ ಹೊರತು ಗಂಭೀರವಾದ ಅಪರಾಧ ಪ್ರಕರಣವೆಂದಲ್ಲ.

ನಮ್ಮ ಪರಿಸ್ಥಿತಿಯು ಒಂದು ರೀತಿಯಲ್ಲಿ ವಿಕ್ಟರ್ ಲಸ್ಟಿಗ್ ತೋಡಿದ ಖೆಡ್ಡಾಗೆ ತಾವಾಗಿಯೇ ಬಿದ್ದ ಮೂರ್ಖ ಉದ್ಯಮಿಗಳಂತಾಗಿತ್ತು. ಒಂದೆಡೆ ನಷ್ಟ, ಇನ್ನೊಂದೆಡೆ ಮುಖಭಂಗ. 

ಹೀಗೆ ಸಾವಿರಾರು ಮಂದಿ ಓಡಾಡುತ್ತಿರುವ, ಮೂಲೆಮೂಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿರುವ ಭವ್ಯ ಶಾಪಿಂಗ್ ಮಾಲೊಂದರಲ್ಲಿ ಇಪ್ಪತ್ತರ ಹರೆಯದ ಇಬ್ಬರು ತರುಣಿಯರು ನಮಗೆ ಪಂಗನಾಮ ಹಾಕಿದ್ದರು. ನನಗರಿವಿಲ್ಲದಂತೆಯೇ ನಾನು ದಿಲ್ಲಿಯಲ್ಲಿ ‘ಕಾನ್ ವುಮನ್’ ಒಬ್ಬಳೊಂದಿಗೆ ಹೀಗೆ ಮುಖಾಮುಖಿಯಾಗಿದ್ದೆ.

ಕಾನ್ ಪರಿಣತರು ಜನರನ್ನು ವಂಚಿಸುವಲ್ಲಿ ಯಶಸ್ವಿಯಾಗಲು ಅನುಸರಿಸಬೇಕಿದ್ದ ನಿಯಮಗಳಿಗೆ (ಲಸ್ಟಿಗ್ ಇಂಥಾ ಹತ್ತು ನಿಯಮಗಳನ್ನೂ ಕೂಡ ರೂಪಿಸಿದ್ದ) ಬಂದರೆ ಈ ಇಬ್ಬರು ಕಳಪೆ ಕಾನ್ ಆರ್ಟಿಸ್ಟ್‍ಗಳಾಗಿದ್ದರು. ಅಂಥಾ ಅನುಭವವಾಗಲಿ, ಆತ್ಮವಿಶ್ವಾಸ-ಧೈರ್ಯವಾಗಲಿ ಈ ತರುಣಿಯರಿಗೆ ಇದ್ದಂತೆ ಕಂಡಿರಲಿಲ್ಲ.

ದುರಂತವೆಂದರೆ ತನ್ನ ಡೆಬಿಟ್ ಕಾರ್ಡನ್ನು ಆಗಂತುಕರೊಬ್ಬರಿಗೆ ತಾನೇ ಕೈಯಾರೆ ನೀಡಿದ್ದ ಗೆಳೆಯನ ಪೆದ್ದುತನವು ದುಬಾರಿಯಾಗಿ ಪರಿಣಮಿಸಿತ್ತು. ದುರಾದೃಷ್ಟವಶಾತ್ ಈ ಸತ್ಯವು ಅರಿವಾಗುವಷ್ಟರಲ್ಲಿ ಈರ್ವರು ಧೂರ್ತರು ಶಾಶ್ವತವಾಗಿ ಮರೆಯಾಗಿದ್ದರು.

ಬದುಕಿನ ಯಾವ ಸಂದರ್ಭವು ಇಂಥಾ ಕೃತ್ಯಗಳಿಗೆ ಇಳಿಯಲು ಆ ತರುಣಿಯರನ್ನು ಪ್ರೇರೇಪಿಸಿರಬಹುದು? ಬದುಕು ಕಟ್ಟಿಕೊಳ್ಳಬೇಕಾದ ವಯಸ್ಸಿನಲ್ಲಿ ಇಷ್ಟು ಅಪಾಯಕಾರಿಯಾದ ಆಟಗಳನ್ನಾಡುತ್ತಾ ಕಾನೂನಿನೊಂದಿಗೆ ಚೆಲ್ಲಾಟವಾಡುತ್ತಿದ್ದ ಇವರ್ಯಾರು?

ಹೊಸಬರೇ ಅಥವಾ ಅನುಭವಿಗಳೇ? ಹೀಗೆ ಅಪರಾಧಿ ದ್ವಯರೊಂದಿಗಿನ ಆ ಆಕಸ್ಮಿಕ ಭೇಟಿಯೊಂದು ಹಲವು ಪ್ರಶ್ನೆಗಳ ರಾಶಿಯನ್ನೇ ನಮ್ಮ ಮುಂದೆ ಗುಡ್ಡಹಾಕಿತ್ತು.

ಕೊನೆಗೂ ನಮ್ಮ ಪಾಲಿಗೆ ಉಳಿದಿದ್ದು ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆ ಮಾತ್ರ!

September 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    Comment
    ತೀರ ಅಗತ್ಯವಾಗಿ ಬೇಕಾದ ಮಾಹಿತಿ. ಯುವಜನರಿಗೆ ಇವುಗಳ ಬಗ್ಗೆ ಎಚ್ಚರಿಕೆ ಅವಶ್ಯ. ನಿರೂಪಣೆಯೂ ಚಂದವಿದೆ

    ಪ್ರತಿಕ್ರಿಯೆ
  2. Mahantesh Soppimath

    ಸರ್, ತಪ್ಪು ತಿಳಿಬೇಡಿ. ಒಂದು ಸಣ್ಣ ತಿದ್ದುಪಡಿ.
    “ಶಿವಪೂಜೆಯಲ್ಲಿ ಕರಡಿಗೇನು ಕೆಲಸ” ಎಂಬದು ಮೂಲದಲ್ಲಿ “ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ” ಎನ್ನುವ ನುಡಿಗಟ್ಟು.

    ಕರಡಿಗೆ : ವೀರಶೈವರು ಇಷ್ಟಲಿಂಗವನ್ನು ಇಡುವ ಸಂಪುಟ. ಲಿಂಗಸಜ್ಜಿಕೆ ಎಂದೂ ಹೆಸರು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: