ಮೊದಲೇ ಹೇಳಿ ಬಿಡುತ್ತೇನೆ. ನಮಗೇನೂ ಆ ಉತ್ತರ ಕೇಳಿ ಗಾಬರಿ ಆಗಲಿಲ್ಲ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. 

ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

ಮಕ್ಕಳು ಪ್ರಜೆಗಳಲ್ಲವೆ?

“ನಮ್ಮ ಹತ್ತಿರ ಆ ಲೆಕ್ಕ ಇಲ್ಲ”

ಅವರು ಸರಳವಾಗಿಯೇ ಹೇಳಿದರು. ನಮಗೂ ಗೊತ್ತಿತ್ತು. ಅವರ ಬಳಿ ಆ ಲೆಕ್ಕ ಇರುವುದಿಲ್ಲ ಎಂದು. ಆದರೂ ನಾವು ಇಟ್ಟುಕೊಂಡಿದ್ದ ಪ್ರಶ್ನಾವಳಿಯಲ್ಲಿದ್ದ ಆ ಪ್ರಶ್ನೆಯನ್ನು ಕೇಳಲೇಬೇಕಿತ್ತು.

ಆ ಅವರ ಗ್ರಾಮಪಂಚಾಯತಿಯಲ್ಲಿ ಎಷ್ಟು ಹಳ್ಳಿಗಳು ಸೇರುತ್ತವೆ ಮತ್ತು ಅಲ್ಲಿನ ಒಟ್ಟು ಜನಸಂಖ್ಯೆಯೆಷ್ಟು ಎಂಬುದನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಂದ ಪಡೆದುಕೊಂಡಿದ್ದೆವು. ಆ ಜನಸಂಖ್ಯೆಯಲ್ಲಿ ಗಂಡು ಮತ್ತು ಹೆಣ್ಣು ವಿಭಾಗವನ್ನೂ ತಿಳಿಸಿದ್ದರು.

ಇಷ್ಟರ ಮೇಲೆ ಆ ಗ್ರಾಮಪಂಚಾಯತಿಯ ಚುನಾಯಿತ ಸದಸ್ಯರನ್ನು ನೀವು ಚುನಾಯಿತರಾದ ವಾರ್ಡ್‌ನಲ್ಲಿ ಎಷ್ಟು ಜನ ಇದ್ದಾರೆ ಎಂದು ಕೇಳಿದಾಗಲೂ ಅವರೊಂದು ಸಂಖ್ಯೆ ಹೇಳಿದ್ದರು. ಅವರಲ್ಲಿ ಗಂಡು ಹೆಣ್ಣು ಎಷ್ಟೆಂದು ಕರಾರುವಾಕ್ಕಾಗಿ ತಿಳಿಸಿದ್ದರು. 

ಇಷ್ಟಾದ ನಂತರ ನಾವು ಕೇಳಿದ್ದ ಪ್ರಶ್ನೆ, ನಿಮ್ಮ ಗ್ರಾಮಪಂಚಾಯತಿಯಲ್ಲಿ ಎಷ್ಟು ಮಕ್ಕಳಿದ್ದಾರೆ? 

ಅದಕ್ಕೆ ಸಿಕ್ಕಿದ್ದ ಉತ್ತರ,  “ನಮ್ಮ ಹತ್ತಿರ ಆ ಲೆಕ್ಕ ಇಲ್ಲ.”

ಮೊದಲೇ ಹೇಳಿ ಬಿಡುತ್ತೇನೆ. ನಮಗೇನೂ ಆ ಉತ್ತರ ಕೇಳಿ ಗಾಬರಿ ಆಗಲಿಲ್ಲ. ಹೇಳಿದೆನಲ್ಲ. ನಮಗೆ ಈ ಉತ್ತರ ಮೊದಲೇ ಗೊತ್ತಿತ್ತು, 

ಆದರೂ ೨೦೦೩ರಲ್ಲಿ ನಾವು ಪ್ರತಿನಿಧಿಸುವ ಸಂಸ್ಥೆ ‘ಚೈಲ್ಡ್‌ ರೈಟ್ಸ್‌ ಟ್ರಸ್ಟ್‌’ ಪರವಾಗಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನ ಹಳ್ಳಿ ಮತ್ತು ಬಳ್ಳಾರಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನಡೆಸಿದ್ದ ಕ್ಷೇತ್ರಕಾರ್ಯದ ಭಾಗವಾಗಿದ್ದ ಒಂದು ಪ್ರಶ್ನಾವಳಿ ಭರ್ತಿ ಮಾಡಿಕೊಳ್ಳಲು, ಸ್ಪಷ್ಟ ಮಾಡಿಕೊಳ್ಳಲು ಕೇಳಲೇಬೇಕಿತ್ತು.

ನನ್ನ ಕ್ಷೇತ್ರಕಾರ್ಯದ ಸಂಗಾತಿ ರಾಘವೇಂದ್ರ ಮುಂದುವರಿಸಿದ್ದ, “ಈಗ ನೀವು ಹೇಳಿದಿರಲ್ಲ ನೀವು ಗೆದ್ದಿರುವ ವಾರ್ಡ್‌ನಲ್ಲಿ ೩೯೦ ಜನ ಇದ್ದಾರೆ ಅಂತ, ಅದು ಏನು?” [ಈ ಪ್ರಶ್ನೆ ನಮ್ಮ ಪ್ರಶ್ನಾವಳಿಯಲ್ಲಿರಲಿಲ್ಲ!]. 

ಅದು ನಮ್ಮ ಒಟ್ಟು ಮತದಾರರ ಸಂಖ್ಯೆ.

“ಅಂದ್ರೆ, ೧೮ ವರ್ಷ ದಾಟಿದವರ ಸಂಖ್ಯೆ. ೧೮ ವರ್ಷದೊಳಗಿನವರ ಸಂಖ್ಯೆ ಗ್ರಾಮಪಂಚಾಯತಿಯ ಲೆಕ್ಕದಲ್ಲಿ ಇಲ್ಲವಾ?” ನನ್ನ ಪ್ರಶ್ನೆಗೆ ಗ್ರಾಮ ಪಂಚಾಯತಿಯ ಆ ಚುನಾಯಿತ ಸದಸ್ಯ ಸಹಜವಾಗಿಯೇ ಹೇಳಿದರು “ಇಲ್ಲ.” 

ಇದು ಒಂದು ಗ್ರಾಮ ಪಂಚಾಯತಿಯದಷ್ಟೇ ಅಲ್ಲ, ನಾವು ಆಯ್ಕೆ ಮಾಡಿಕೊಂಡು ಭೇಟಿ ಮಾಡಿದ ಎಲ್ಲ ೧೫ ಗ್ರಾಮಪಂಚಾಯತಿಗಳಲ್ಲೂ ಅದೇ ಉತ್ತರ.

ಕೆಲವೊಂದು ಕಡೆ ನಮ್ಮ ಪ್ರಶ್ನಾವಳಿಯ ಆಚೆಗೂ ಮಾತನಾಡುತ್ತಾ, ಯಾಕೆ ಅವರ ಹತ್ತಿರ ೧೮ ವರ್ಷದೊಳಗಿನವರ ಲೆಕ್ಕ ಇಲ್ಲ ಎಂಬ ಮಾತುಕತೆಗೂ ಇಳಿದಿದ್ದೆ. ಅನೇಕರಿಗೆ ಆ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಕೆಲವರು ಹೇಳಿದ್ದು, ಮತ್ತೆ ಬಹಳ ಸಹಜವಾಗಿ, “ಅವರು ಮತದಾರರಲ್ಲ.”

ಆಯಿತು, ಹಾಗೆಂದು ನಿಮ್ಮ ಬಳಿ ಯಾಕೆ ಅವರ ಲೆಕ್ಕವಿಲ್ಲ ಎಂದರೆ ಉತ್ತರ ಕೊಡಲು ಯತ್ನಿಸಿದವರು ಬಹಳ ಕಡಿಮೆ ಜನ. ಅಂತಹವರಲ್ಲಿ ಒಬ್ಬ ಹಿರಿಯ ಸದಸ್ಯರು ಹೇಳಿದ್ದು, “ನಮ್ಮ ಹತ್ತಿರ ಇರಲ್ಲ. ಯಾಕೆಂದ್ರೆ ಅವರು ಪ್ರಜೆಗಳಲ್ಲ.”

ಈ ಮಾತನ್ನ ಹಲವು ವರ್ಷಗಳಿಂದ ಜನಸಾಮಾನ್ಯರಿಂದ, ಜನಪ್ರತಿನಿಧಿಗಳಿಂದ, ಸರ್ಕಾರದ ಅಧಿಕಾರಿಗಳಿಂದ, ಶಿಕ್ಷಕರಿಂದ, ಪತ್ರಕರ್ತರಿಂದ ಅಷ್ಟೇಕೆ ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವವರಿಂದ ಕೇಳಿದ್ದರೂ, ಆ ಕುರಿತು ಚರ್ಚೆಗಳನ್ನು ನಡೆಸಿದ್ದರೂ ನಾನು ಆ “ಮಾತನ್ನು” ಅಲ್ಲಿ ಆ ಹೊತ್ತು ಅವರಿಂದ ಅಷ್ಟು ಸುಲಭವಾಗಿ ನಿರೀಕ್ಷಿಸಿಯೇ ಇರಲಿಲ್ಲ.

“ಪ್ರಜೆಗಳಲ್ಲ!?” ಯಾರು ನಿಮಗೆ ಹೇಳಿದ್ದು, ಮತ್ತೊಂದು ಪ್ರಶ್ನೆ. “ಇಂದಿನ ಮಕ್ಕಳು ಮುಂದಿನ ಪ್ರಜೆಗಳು” ಸ್ಕೂಲ್ನಲ್ಲೇ ಹೇಳ್ಕೊಡಲ್ವ? ಆತ ನನ್ನನ್ನು ಅಷ್ಟೂ ಗೊತ್ತಿಲ್ವೇನೋ ಗುಲ್ಡು ಬೆಂಗಳೂರಿಂದ ಬಂದಿದ್ದಾನಂತೆ ಎನ್ನುವಂತೆ ನನ್ನನ್ನೇ ಈಗ ಪ್ರಶ್ನೆ ಕೇಳಿದ್ದರು, ಅಷ್ಟೇ ಅಲ್ಲ ಅದೇ ದನಿಯಲ್ಲಿ ಮಾತು ಮುಗಿಸುವ ಸೂಚನೆಯೆಂಬಂತೆ, ಮಕ್ಕಳ ಲೆಕ್ಕ ಬೇಕಿದ್ರೆ ಅಂಗನವಾಡಿಯಲ್ಲೋ ಸ್ಕೂಲಲ್ಲೋ ಹೋಗಿ ಕೇಳಿ ಎಂದಿದ್ದರು.

ಮಕ್ಕಳು ಪ್ರಜೆಗಳಲ್ಲವೆ?

ಈ ಪ್ರಶ್ನೆ ನನ್ನ ಬೆನ್ನು ಹತ್ತಿದ್ದು ಯಾವಾಗ? ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಈ ಪ್ರಶ್ನೆಯನ್ನು ಇನ್ನೂ ಹಲವರು ಕೇಳಿರಬಹುದು. ನನಗೆ ಈ ಪ್ರಶ್ನೆಯ ಮುಖಾಮುಖಿಯಾದದ್ದು ಅದೇ ಬಳ್ಳಾರಿಯಲ್ಲಿ ನಾನು ಸಮಾಜಕಾರ್ಯ ವಿದ್ಯಾರ್ಥಿಯಾಗಿ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆ ಎನ್ನುವ ಹಳ್ಳಿಯಲ್ಲಿ ಬ್ಲಾಕ್‌ ಪ್ಲೇಸ್‌ಮೆಂಟ್‌ಗೆ ಆರು ವಾರಗಳ ಕಾಲ ೧೯೮೯ರಲ್ಲಿ ಕೆಲಸ ಮಾಡಿದಾಗ.

ನನ್ನ ಗುರುಗಳಾದ ಪ್ರೊ. ಎಚ್‌.ಎಂ. ಮರುಳಸಿದ್ಧಯ್ಯನವರ ಸ್ವಂತ ಊರು. ಅಲ್ಲಿ ಅವರು ಸ್ಥಾಪಿಸಿದ್ದ “ಸ್ವಸ್ಥಿ” ಎಂಬ ಸಂಸ್ಥೆಯಲ್ಲಿ ಅವರು (ಬಲವಂತವಾಗಿ, ನಿಜವಾಗಿಯೂ ನನ್ನ ಇಷ್ಟಕ್ಕೆ ವಿರುದ್ಧವಾಗಿ – ಈ ಬಗ್ಗೆ ಮುಂದೆ ಬರೆಯುವ ಇರಾದೆ ಇದೆ!) ನನ್ನನ್ನು ನೇಮಿಸಿದ್ದರು.

ಹಳ್ಳಿಯಲ್ಲಿ ಸಾಕಷ್ಟು ವರ್ಷಗಳಿಂದ ಅವರು ಮತ್ತು ಅವರ ಅನುಯಾಯಿಗಳಾದ ಹನುಮಂತರಾಯ ಕಣ್ಣಿ ಮತ್ತು ಅವರ ಸಂಗಡಿಗರು ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಜನಸಂಘಟನೆಯ ಕೆಲಸಗಳನ್ನು ನಡೆಸಿದ್ದರು. ಅವರೊಡನೆ ಸೇರಿದ ನನಗೆ ಅವರ ಕೆಲಸದ ಸವಾಲಿನ ದರ್ಶನವಾಗತೊಡಗಿತು.

ಅದರಲ್ಲೂ ಬಹಳ ಮುಖ್ಯವಾಗಿ ರಾಚಿದ್ದು, ಮಕ್ಕಳಿರಲಿ ಎಲ್ಲ ಮನುಷ್ಯರನ್ನು ಪ್ರಜೆಗಳೆಂದು ಮೇಲ್‌ಸ್ತರದವರು ಮತ್ತು ಅಧಿಕಾರಿಗಳು ಪರಿಗಣಿಸುತ್ತಾರೋ ಇಲ್ಲವೋ ಎಂಬ ಅನುಮಾನ! ಅದರಲ್ಲೂ ಪರಿಶಿಷ್ಟ ಜಾತಿ ಪಂಗಡಗಳ ಜನರನ್ನು ಜನಪ್ರತಿನಿಧಿಗಳು, ಸರ್ಕಾರ ಪ್ರಜೆಗಳೆಂದು ತಮ್ಮ ಪರಿಗಣನೆಯಲ್ಲಿ ತೆಗೆದುಕೊಳ್ಳುತ್ತಾರೋ ಇಲ್ಲವೋ, ಅವರನ್ನು ಕುರಿತು ಮತ್ತು ಅವರಿಗಾಗಿ ಮಾಡುವ, ಪ್ರಕಟಿಸುವ ಯೋಜನೆಗಳು ಅವರುಗಳಿಗೆ ತಲುಪುತ್ತದೋ ಇಲ್ಲವೋ ಎನ್ನುವ ವಿಚಾರಗಳ ಮುಖಾಮುಖಿಯಾಯಿತು.

ಜನಗಳಿಗೂ ಈಗಲೂ ತಾವು ಪ್ರಜೆಗಳು ಮತ್ತು ಪ್ರಜೆಗಳೆಂದು ಗುರುತಿಸಿದಾಗ ಅವರಿಗಿರುವ ಹಕ್ಕುಗಳು ಏನು ಎಂಬ ಕಲ್ಪನೆಗಳು ಇವೆಯೋ ಇಲ್ಲವೋ ಎನ್ನುವ ಗೊಂದಲದಲ್ಲಿ ನಾನು ಬಿದ್ದೆ. (ಇದಕ್ಕೂ ಒಂದು ಉಪಕತೆಯಿದೆ. ಮುಂದೆ ಬರೆಯುವೆ). 

ಇದೇನಿದು ಮಕ್ಕಳು ಪ್ರಜೆಗಳು ಹೌದೋ ಅಲ್ಲವೋ ಎಂದು ಪ್ರಶ್ನೆ ಇಟ್ಟುಕೊಂಡು ಬೇರೆಲ್ಲೋ ಹೊರಟಿದೆಯಲ್ಲ ಬಂಡಿ ಎನಿಸಿತೇನು? 

ಹೌದು. “ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಸ್ಕೂಲ್ನಲ್ಲೇ ಹೇಳ್ಕೊಡಲ್ವ?” ಆಗಲೇ ನನಗೆ ಫಳಕ್‌ ಅಂತ ಹೊಳೆದದ್ದು. ಈ ಬಗ್ಗೆ ಅನೇಕ ಬಾರಿ ಯೋಚಿಸಿದ್ದರೂ, ಆ ಗ್ರಾಮಪಂಚಾಯತಿ ಸದಸ್ಯ “ಅಯ್ಯೋ ಗುಲ್ಡು” ಅಂತ (ಪ್ರಾಯಶಃ ಸ್ವಗತಿಸಿಕೊಂಡು) ಹೇಳಿದ್ದ ಮಾತು ಸಂವಿಧಾನದ ಪ್ರತಿಯನ್ನೇ ತೆಗೆದುಕೊಂಡು ನನ್ನ ತಲೆಗೆ ಘಟ್ಟಿಸಿದಂತೆ ಆಗಿತ್ತು. 

ಅದೆಷ್ಟು ಬಾರಿ ನಾವು ಕೇಳಿರಲಿಕ್ಕಿಲ್ಲ. ಪ್ರಾಥಮಿಕ ಶಾಲೆಯಿಂದ ಹಿಡಿದು ಈಗಲೂ, ಅತಿಥಿ ಮಹೋದಯರುಗಳಿಂದ, ಹಿರಿಯರಿಂದ, ಅಧಿಕಾರಿಗಳಿಂದ, ನಮ್ಮದೇ ಶಿಕ್ಷಕರಿಂದ, ದೊಡ್ಡ ದೊಡ್ಡ ಸಾಹಿತಿಗಳಿಂದ ಜನವರಿ ೨೬, ಆಗಸ್ಟ್‌ ೧೫, ನವೆಂಬರ್‌ ೧೪, ಮತ್ತೆ ನಮ್ಮ ನಮ್ಮ ಶಾಲಾ ವಾರ್ಷಿಕೋತ್ಸವಗಳಲ್ಲಿ “ಇಂದಿನ ಮಕ್ಕಳು ಮುಂದಿನ ಪ್ರಜೆಗಳು.”

ಆಗೆಲ್ಲಾ ಎಲ್ಲರೂ ಪಟ್ಟಪಟ್ಟ ಚಪ್ಪಾಳೆ ಹೊಡೆದಿದ್ದೆವು. ಈಗಲೂ ಹೊಡೆಯುತ್ತೇವೆ! ಈಗ ಆ ಗ್ರಾಮಪಂಚಾಯತಿ ಸದಸ್ಯ ನನಗೆ ಹೊಡೆದಾಗ ತಟಕ್‌ ಎಂದೇನೋ ಬಿಡಿಸಿಕೊಂಡಿತು. ಮಕ್ಕಳು ಈಗ ಪ್ರಜೆಗಳಲ್ಲ, ಹೀಗಾಗಿ ಅವರಿಗೆ ಅದೇನೋ ಸಿಗುವುದಿಲ್ಲ. ಅದೇನದು ಸಿಗದಿರುವುದು? 

ಪ್ರಜೆಗಳಲ್ಲದವರಿಗೆ ಹಕ್ಕುಗಳಿಲ್ಲ. ಪ್ರಶ್ನೆ ಕೇಳುವ ಅಧಿಕಾರವಿಲ್ಲ. ವಿರೋಧಿಸುವ ಸ್ವಾತಂತ್ರ್ಯವಿಲ್ಲ. ತನ್ನದು ಇದು ಎಂದು ಕೇಳುವಂತಿಲ್ಲ. ತಪ್ಪು ಸರಿಗಳನ್ನು ವಿಮರ್ಶಿಸುವಂತಿಲ್ಲ. ಕೊಟ್ಟರೆ ತೆಗೆದುಕೋ. ಇಲ್ಲದಿದ್ದರೆ… 

ಭಾರತದ ಸಂವಿಧಾನದ ಪರಿಚ್ಛೇದ ೫ರ ಪಠ್ಯ ನಮಗೆಲ್ಲ ಬಹಳ ಮುಖ್ಯವಾದುದು. ಭಾರತದ ಗಡಿಗಳೊಳಗೆ ಜನಿಸಿದವರು ಭಾರತೀಯ ಪ್ರಜೆಗಳು. [ಅದರ ಹಿಂದೆ ಮುಂದಿನ ವಿಚಾರಗಳನ್ನೆಲ್ಲಾ ಇಟ್ಟುಕೊಂಡು ಪ್ರಾಜ್ಞರು ಜಗ್ಗಾಡಲಿ. ಇಲ್ಲಿ ಅದು ಮುಖ್ಯವಲ್ಲ]. ಪ್ರಜೆಗಳೆಂದರೆ ಆಯಾ ದೇಶದಲ್ಲಿ ಸಂವಿಧಾನಗಳು ಘೋಷಿಸಿರುವ ಹಕ್ಕುಗಳನ್ನು ಚಲಾಯಿಸಲು ಅರ್ಹರು.

ಈ ಗಡಿಗಳೊಳಗೆ ಜನಿಸಿದವರೆಲ್ಲರೂ ಹಕ್ಕುಗಳೊಂದಿಗೆ ಹುಟ್ಟಿರುವ ಪ್ರಜೆಗಳು. ಮಕ್ಕಳೂ ಪ್ರಜೆಗಳು. ಅಂದರೆ ಮಕ್ಕಳಿಗೂ ಸಂವಿಧಾನದತ್ತವಾದ ಹಕ್ಕುಗಳು ಇವೆ. ಬಹಳ ಮುಖ್ಯವಾಗಿ ತಮಗೆ ಸಿಗಲೇಬೇಕಿರುವ ಹಕ್ಕುಗಳು ಸಿಗದಿದ್ದರೆ ಪ್ರಶ್ನಿಸುವ ಹಕ್ಕಿದೆ! 

ಈ ಹಳೆಯ ಘೋಷಣೆ, ಚಪ್ಪಾಳೆ ಗಿಟ್ಟಿಸುವ ಮಾತು, ʼಇಂದಿನ ಮಕ್ಕಳು ಮುಂದಿನ ಪ್ರಜೆಗಳುʼ ಹಾಗಾದರೆ ಏನು? 

ಕೇಳಲು ಚೆನ್ನಾಗಿದೆ. ಅಷ್ಟೇ ಅಲ್ಲ, ಈ ಘೋಷಣೆಯನ್ನು ಹೊರಡಿಸಿದವರಿಗೆ ಉದಾತ್ತವಾದ ಚಿಂತನೆಗಳೂ ಇದ್ದಿರಬಹುದು. ಆದರೆ ನಮ್ಮ ಸುತ್ತಮುತ್ತಲಿನವರು – ಅಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಕರು, ಪೊಲೀಸರು, ವಕೀಲರು, ಪೋಷಕರನ್ನೂ ಒಳಗೊಂಡಂತೆ ಎಲ್ಲರ ತಲೆಗಳಲ್ಲಿ “ಮಕ್ಕಳು ಈಗ ಪ್ರಜೆಗಳಲ್ಲ. ಅವರು ದೊಡ್ಡವರಾದ ಮೇಲೆ ಪ್ರಜೆಗಳಾಗುವರು. ಹೀಗಾಗಿ ಅವರು ಸುಮ್ಮನೆ ಕೊಟ್ಟಿದ್ದು ತೆಗೆದುಕೊಂಡದ್ದು, ಬಿಟ್ಟದ್ದಕ್ಕೆ ಪ್ರಶ್ನೆ ಮಾಡದೆ ಬಿದ್ದಿರಬೇಕು” ಎಂಬುದು ಊರಿ ಕೊಂಡುಬಿಟ್ಟಿದೆ. 

ಅದನ್ನೀಗ ಬದಲಿಸಲೇಬೇಕಿದೆ. ಮಕ್ಕಳಿಗೂ ಹಕ್ಕುಗಳಿವೆ. ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ೧೯೮೯ರಲ್ಲಿ ಘೋಷಿಸುವ ಮೊದಲೇ ಭಾರತದ ಸಂವಿಧಾನ ೧೯೫೦ರಲ್ಲೇ ಮಕ್ಕಳನ್ನು ಹಕ್ಕುಗಳಿಗೆ ಅರ್ಹರನ್ನಾಗಿಸಿದೆ.

ಈ ಮಾತನ್ನು ನಾನು ನನ್ನಂಥ ನೂರಾರು ಜನ ಒಂದಷ್ಟು ವರ್ಷಗಳಿಂದ ಸಿಕ್ಕ ಸಿಕ್ಕ ಅವಕಾಶಗಳನ್ನೆಲ್ಲಾ ಬಳಸಿಕೊಂಡು ನಮ್ಮ ಭಾಷಣ, ಲೇಖನ, ತರಬೇತಿ, ವಿಚಾರ ಸಂಕಿರಣ, ಕಾರ್ಯಾಗಾರ, ಭಿತ್ತಿಪತ್ರ, ಹಾಡು, ನಾಟಕ, ಪತ್ರಿಕಾಗೋಷ್ಠಿ, ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಭೆ, ಕಾರ್ಯಕ್ರಮ, ಫೇಸ್‌ಬುಕ್‌, ಜೊತೆಗೆ ನಮ್ಮ ಟೀ ಶರ್ಟ್‌ ಆಂದೋಲನ(!) ಎಲ್ಲ ಕಡೆ ನಡೆಸುತ್ತಿದ್ದೇವೆ. ನಮ್ಮ ಮಾತುಕತೆಗಳಲ್ಲಿ ಘೋಷಣೆಯನ್ನು, ಆ ಮೂಲಕ ತಲೆಗಳಲ್ಲಿ ಬಲವಂತವಾಗಿ ಬದಲಿಸುವ ಯತ್ನ ಮಾಡುತ್ತಿದ್ದೇವೆ “ಮಕ್ಕಳು ಪ್ರಜೆಗಳು!”

ಈ ಮಕ್ಕಳೆಂಬ ಪ್ರಜೆಗಳ ಲೆಕ್ಕ ತಳಮಟ್ಟದಲ್ಲಿ ಇಟ್ಟುಕೊಂಡು ಅದಕ್ಕನುಗುಣವಾಗಿ ಯೋಚಿಸುವ ಯೋಜಿಸುವ ಅವಶ್ಯಕತೆ ಇದೆಯಲ್ಲವೆ ಮತ್ತು ಯೋಜನೆಗಳನ್ನು ಅರ್ಥಬದ್ಧವಾಗಿ ನಿರ್ವಹಿಸುವುದಾಗಬೇಕಲ್ಲವೆ. ಆದರೆ ಏನು ಮಾಡೋಣ, ಭಾರತದಲ್ಲಿ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ ೨೦೧೫; ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗಗಳು ೨೦೦೫; ಬಾಲ್ಯವಿವಾಹ ನಿಷೇಧ ಕಾಯಿದೆ ೨೦೦೬; ಮಕ್ಕಳು ಮತ್ತು ಕಿಶೋರ ಕಾರ್ಮಿಕ ಕಾಯಿದೆ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ೧೯೮೬ ಇವೇ ಮೊದಲಾದ ಕಾಯಿದೆಗಳು ಮತ್ತು ಮಕ್ಕಳಿಗಾಗಿ ರಾಷ್ಟ್ರೀಯ ಯೋಜನೆ ೨೦೧೩ ಮಕ್ಕಳೆಂದರೆ ೧೮ ವರ್ಷ ಪೂರೈಸದ ಮಕ್ಕಳು ಎಂದು ಸ್ಪಷ್ಟ ಮಾಡಿದ್ದರೂ, ಭಾರತ ಜನಗಣತಿ ಇಲಾಖೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಹೊರಡಿಸುವ ಅಂಕಿಸಂಖ್ಯೆಯ ವರದಿಯಲ್ಲಿ ಈಗಲೂ “೬ ವರ್ಷದೊಳಗಿನ ಮಕ್ಕಳು” ಎಂದೇ ಪ್ರಕಟಿಸುತ್ತದೆ.

ಅದನ್ನೇ ಮಾಧ್ಯಮಗಳು ದೊಡ್ಡದಾಗಿ ಪ್ರಕಟಿಸುತ್ತವೆ. ಭಾರತದ ೨೦೧೧ರ ಜನಗಣತಿಯಂತೆ ೧೨೧ ಕೋಟಿಗೂ ತುಸು ಹೆಚ್ಚು ಜನರಲ್ಲಿ ಸರ್ಕಾರ ಪ್ರಕಟಿಸುವ “ಮಕ್ಕಳು” ವಿಭಾಗದಲ್ಲಿ ೦-೬ ವರ್ಷದವರನ್ನು ಮಾತ್ರ ಪರಿಗಣಿಸಿ ಅವರ ಸಂಖ್ಯೆ ೧೫,೮೭,೮೯,೨೮೭ ಎಂದು ಹೇಳಿಬಿಡುತ್ತದೆ (ಗ್ರಾಮೀಣ ೧೧,೭೫,೮೫,೫೧೪ ಹಾಗೂ ನಗರಗಳಲ್ಲಿ ೪,೧೨,೦೩,೭೭೩). ಇದೇ ಜನರ ಮನಸ್ಸಿನಲ್ಲಿ ಊರಿ ಕೊಂಡುಬಿಟ್ಟಿದೆ. ವಾಸ್ತವವಾಗಿ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯ಕ್ಕೆ ಬದ್ಧವಾಗಿರುವ ಭಾರತ ದೇಶ ಒಡಂಬಡಿಕೆಯ ಪರಿಚ್ಛೇದ ೧ರಲ್ಲಿನ ವ್ಯಾಖ್ಯಾನದಂತೆ ೧೮ ವರ್ಷದ ತನಕ ಮಕ್ಕಳು ಎಂದು ಘೋಷಿಸಿಕೊಂಡಿದೆ. ಅದೂ ೧೯೯೨ರಲ್ಲಿ. ಇದಾಗಿ ಎರೆಡು ಜನಗಣತಿಗಳಾಗಿದೆ. ಆದಾಗ್ಯೂ ದೇಶದ ವರದಿಗಳಲ್ಲಿ ಮಕ್ಕಳೆಂದರೆ ಈಗಲೂ “೦-೬ ವರ್ಷದೊಳಗಿನವರು!” ಅವರು ಪ್ರಜೆಗಳಲ್ಲ!

ಜನಗಣತಿಯ ಅಂಕಿಸಂಖ್ಯೆಗಳನ್ನು ಹಿಂಜಿ ತೆಗೆದು ನೋಡಿದಾಗ ಬೇರೆಯೇ ಕಾಣುತ್ತದೆ. ಭಾರತದಲ್ಲಿ ೧೮ ವರ್ಷದೊಳಗಿನ ಮಕ್ಕಳ ಸಂಖ್ಯೆ ೪೭,೨೧,೧೧,೪೭೭. ಹೆಚ್ಚೂ ಕಡಿಮೆ ಭಾರತದ ಒಟ್ಟು ಜನಸಂಖ್ಯೆಯ ಪ್ರತಿಶತ ೪೦.

ಈಗ ನಿಮ್ಮ ಸುತ್ತಮುತ್ತ ಇರುವ, ಓಡಾಡುವ, ಒಡನಾಡುವ ಎಲ್ಲ ಮಕ್ಕಳನ್ನು ಕೇವಲ ಮಕ್ಕಳಲ್ಲ “ಹಕ್ಕುಗಳಿರುವ ಪ್ರಜೆಗಳು” ಎಂಬ ಕನ್ನಡಕ ಹಾಕಿಕೊಂಡು ನೋಡಿ… ಏನು ಕಾಣುತ್ತದೆ? ಎಷ್ಟು ಮಕ್ಕಳು ಕಾಣುತ್ತಾರೆ?

‍ಲೇಖಕರು ವಾಸುದೇವ ಶರ್ಮ

August 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: