ಮುತ್ತಿನ ದಲಾಲಿ ಚಿಂದಿ ಮಾರಿದನು…

‘ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. 

ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ. 

‘ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿ’ ಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ. 

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ ಎಂದು ಮಾತು ಸೇರಿಸುತ್ತಾರೆ. ಇಂದಿನಿಂದ ಪ್ರತೀ ವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

ಡಿಗ್ರಿ ನಪಾಸಾದ್ರೆ ಏನಾಯ್ತು? ತೇಜಸ್ವಿನೇ ಇಂಗ್ಲಿಷಿನಲ್ಲಿ ಫೇಲಾಗಿದ್ದರು ಎನ್ನುವ ಹುಂಬತನವನ್ನು,

ಏನೋ ಸಾಧಿಸಲು ಹುಟ್ಟಿದ್ದೇನೆ… ಆದರೆ ವ್ಯವಸ್ಥೆಯಲ್ಲಿ ಯಾವುದೂ ನನಗೆ ಪೂರಕವಾಗಿಲ್ಲ ಎನ್ನುವ ಕಿರಿಕಿರಿಯನ್ನು,

ಅದುಮಿಡಲಾರದ ಚೇತನವೊಂದು ನನ್ನೊಳಗಿಂದ ಹೊರ ಬರ್ತಿದೆ ಆದರೆ ಅದನ್ನ ಎಲ್ಲಿ ತೊಡಗಿಸಿ ಸಾರ್ಥಕಗೊಳಿಸಬೇಕು ಅಂತ ಗೊತ್ತಾಗ್ತಿಲ್ಲ ಎನ್ನುವ ಮೂರ್ಖತನವನ್ನು,

ಅದ್ಭುತವಾದದ್ದನ್ನ ಬರೆಯೋ ಒತ್ತಡ ಒಳಗಿಂದ ಒದ್ಕೊಂಡು ಬರ್ತದೆ ಆದರೆ ಏನ್ ಬರೀಬೇಕು ಅಂತ ತೋಚಲ್ಲ ಎನ್ನುವ ಬಾಲಿಶತನದಿಂದ ಹೊರಬಂದು…

ಎಲ್ಲ ತಂದ ಚಿತ್ರದಲಿ ಇದ್ದಂತೆ ಇಲ್ಲವೆಂದರೆ ಅದೇ ನಿಜವಾದ ಜೀವನ. ಒಂದೊಂದೇ ಬಣ್ಣ ಸೇರಿಸುತ್ತ, ಒಂದೊಂದೇ ಗೆರೆ ಕೂಡಿಸುತ್ತ ಬದುಕನ್ನೂ, ಚಿತ್ರವನ್ನೂ ಪೂರ್ಣಗೊಳಿಸುವುದೇ ಸಹಜ ಬದುಕು ಎನ್ನುವ ಅರಿವು ಮೂಡಿಸಿದ್ದು ಪುಸ್ತಕಗಳು.

“ಈ ಜಗಕೆ ನಾನೇಕೆ ಬಂದಿಹೆನೊ! ತಿಳಿಯದದು;
ಎಲ್ಲಿಂದ ಬಂದೆನೊ! ಪೋಪುದಾವೆಡೆಗೋ!
ಇಚ್ಛೆ ಕೇಳುವರಿಲ್ಲ; ಗುಟ್ಟು ಬಿಚ್ಚುವರಿಲ್ಲ.
ಮರುಭೂಮಿಯಲಿ ಭೋರಿಡುವ ಗಾಳಿ ನಾನು.”

ಬದುಕಲ್ಲಿ ದಾಟಿ ಬಂದ ಪರಿಸ್ಥಿತಿ, ಸಂಗತಿ, ಸಂಬಂಧಗಳ ಬಗ್ಗೆ ಹೇಳು ಅಂದ್ರೆ ನಾನು ‘ಉಮರನ ಒಸಗೆ’ಯ ಈ ಮೇಲಿನ ರುಬಾಯಿ ಹೇಳಿ ಸುಮ್ಮನಾಗಬಹುದು. ‘ಅಂಥವು’ ಎಂಬ ಆ ಹೊತ್ತಿನ ನೀರ ಮೇಲಿನ ನಡಿಗೆಗೆ ಬೇಕಾದ ತಾಳ್ಮೆ, ಜಾಣ್ಮೆ, ಹೊಳಹು ನೀಡಿದ್ದೆಲ್ಲವೂ ನಾನು ಓದಿದ ಸಾಹಿತ್ಯ ಮತ್ತು ಸಾಹಿತ್ಯ ಕೃತಿಗಳಲ್ಲಿನ ಪಾತ್ರಗಳು.

ಎಂದೋ, ಎಲ್ಲೋ ಓದಿದ ಪಾತ್ರಗಳು ತಲೆಯಲ್ಲಿ ಕೂತು ನನ್ನ ಪ್ರತಿ ದಿನವನ್ನ ಕ್ಷಣವನ್ನ ನಿರ್ದೇಶಿಸುತ್ತಿರುತ್ತವೆ.

ಇದು ಶುರುವಾಗಿದ್ದು ಪದವಿಯಲ್ಲಿದ್ದಾಗ ಓದಿದ ‘ಮಲ್ಲಿಗೆ ಅರಳಿತು’ ಪುಸ್ತಕದಿಂದ. (ಮರಾಠಿ ಮೂಲ: ವಿ ಸ ಖಾಂಡೇಕರ, ಕನ್ನಡಕ್ಕೆ: ಗುರುನಾಥ ಜೋಶಿ)

ಈ ಪುಸ್ತಕ ನನಗೆ ಓದಲು ಸಿಕ್ಕಿದ್ದು ತೀರಾ ವಿಚಿತ್ರ ಸನ್ನಿವೇಶದಲ್ಲಿ. ಪರೀಕ್ಷೆಗಾಗಿ ಓದಬೇಕಿರುವುದನ್ನು ಬಿಟ್ಟು ಬೇರೆಲ್ಲ ಪುಸ್ತಕಗಳನ್ನು ಹಗಲು ರಾತ್ರಿಯ ವ್ಯತ್ಯಾಸವೇ ಗೊತ್ತಿಲ್ಲದಂತೆ ಓದುತ್ತಿದ್ದೆ. ಶಿಕ್ಷಣದ ವಿಷಯಕ್ಕೆ ಬಂದರೆ ‘ನಲಿ-ಕಲಿ’ ಭಾಷೆಯಲ್ಲಿ ಹೇಳಬೇಕೆಂದರೆ ನನ್ನ ಕಲಿಕಾ ಸಾಮರ್ಥ್ಯ ತೀರಾ ಸಾಧಾರಾಣ ಮಟ್ಟದ್ದಾಗಿತ್ತು.

ಪಿಯು ಮುಗಿದಿತ್ತು. ಕಾರಣವೇ ಇಲ್ಲದೆ ನಾನು ಬದುಕಿನಿಂದ ವಿಮುಖಗೊಂಡಿದ್ದೆ. ಎಷ್ಟೆಲ್ಲ ಯೋಚಿಸಿ ಎಷ್ಟೆಲ್ಲ ಸ್ವಯಂ ಕೌನ್ಸಿಲಿಂಗ್ ಮಾಡಿಕೊಂಡರೂ ಊಹೂಂ ಮನಸು ಮುಟ್ಟಿದರೆ ಮುನಿ. ಯಾರಾದರೂ ಮಾತನಾಡಿಸಿದರೆ ಸಿಡಿಸಿಡಿ.

ಮೂಲತಃ ನನಗೆ ಪದವಿ ಓದುವುದು ಇಷ್ಟವಿರಲಿಲ್ಲ. ಆ ನೆಪದಲ್ಲಿ ತಿರುಗೋಣವೆಂದು ಪಕ್ಕದೂರಿನ ಕಾಲೇಜಿನಲ್ಲಿ ಹೆಸರಿಗೆ ಡಿಗ್ರಿ ಪ್ರವೇಶ ಪಡೆದಿದ್ದೆ. ಯಾವ ಊರಿಗೇ ಹೋಗಲಿ, ಪರಿಚಿತರ ಸ್ನೇಹಿತರ ಮನೆಗೆ ಹೋಗುವುದಕ್ಕಿಂತ ಮೊದಲು ನಾನು ಗ್ರಂಥಾಲಯಗಳಿಗೆ ಹೋಗುತ್ತಿದ್ದೆ.

ವಿಳಾಸ, ಫೋನ್ ನಂಬರ್ ಗಳನ್ನು ನೆನೆಪಿಟ್ಟುಕೊಳ್ಳುವ ವಿಷಯ ಬಂದರೆ ಅದೊಂದು ಖಾಯಿಲೆಯಿರಬಹುದು ಎನ್ನುವಷ್ಟು ಮರೆವು. ಆದರೆ ಇಪ್ಪತ್ತು ವರ್ಷಗಳ ಹಿಂದೆ ಭೇಟಿಕೊಟ್ಟ ಊರುಗಳ ಬಸ್ ನಿಲ್ದಾಣಗಳಿಂದ ಗ್ರಂಥಾಲಯದ ದಾರಿ ನಜರ್ ಚೂಕಾಗಿಲ್ಲ.

ಇಲ್ಲೂ ಅದೇ ಆಯಿತು. ಕಾಲೇಜಿಗೆ ಹೋಗುವ ಮೊದಲು ಗ್ರಂಥಾಲಯಕ್ಕೆ ಹೋದೆ. ಪುಸ್ತಕದ ಸ್ಟ್ಯಾಂಡ್ ನಲ್ಲಿ ಕಣ್ಣಾಡಿಸುತ್ತಿದಾಗ ಕಂಡಿದ್ದು ‘ಮಲ್ಲಿಗೆ ಅರಳಿತು’. ಲೇಖಕರ ಜಾಗದಲ್ಲಿ ‘ಯಯಾತಿ’ಯ ಮುಖಪುಟದಲ್ಲಿ ನೋಡಿದ ಹೆಸರು. ಅರೆ, ಅವರು ಬರೆದ ಇನ್ನೊಂದು ಪುಸ್ತಕ ನಾನು ಓದೇ ಇಲ್ಲವಲ್ಲ ಎಂದು ಮೊದಲ ಪುಟ ತಿರುಗಿಸುವ ಮುಂಚೆ ಕೊನೆಯ ಪುಟ ಮಗುಚಿದೆ.

‘ಮನುಷ್ಯನ ಬುದ್ಧಿ ಮತ್ತು ಭಾವನೆ ಇವುಗಳಲ್ಲಿ ಈ ಜಗತ್ತಿನಲ್ಲಿ ಮೇಳ ಎಂದೂ ಆಗುವುದಿಲ್ಲ!’

‘ಆತ್ಮಕೇಂದ್ರಿತರಾಗಿ, ಕೇವಲ ನಮ್ಮ ಸುಖದುಃಖದ ವಿಚಾರವನ್ನಷ್ಟೇ ಮಾಡುವುದರಿಂದ ನಮಗಾದ ದುಃಖ ಬಹಳವೆನಿಸುತ್ತದೆ!’

ಈ ಎರಡು ಸಾಲುಗಳನ್ನು ಓದಿದ್ದಷ್ಟೇ. ಇದ್ಯಾವುದೋ ನನ್ನದೆಯ ಹಾಡಿನ ಧಾಟಿ ಎನಿಸಿ ಬಿಟ್ಟಿತು. ಒಂದಿಷ್ಟು ಪುಟ ಓದಿದೆ. ಮನೆಗೆ ತರಲು ಕಾರ್ಡ್ ಇಲ್ಲ. ನಾಳೆ ನಾ ಬರುವುದರೊಳಗಾಗಿ ಯಾರಾದರೂ ಪುಸ್ತಕ ಒಯ್ದರೆ? ಆದಷ್ಟು ಯಾರೂ ಮುಟ್ಟದ ಪುಸ್ತಕದ ರ್ಯಾಕಿನಲ್ಲಿ ಪುಸ್ತಕವನ್ನು ಅಡಿಗಿಸಿಟ್ಟು ಬಂದೆ.

ಎಂದೋ ಕೇಳಿದ ಹಾಡಿನ ರಾಗಗಳು, ಯಾವುದೋ ಪುಸ್ತಕದ ಯಾವುದೋ ಒಂದು ಸಾಲು ಗುಂಗೀ ಹುಳದಂತೆ ಕಾಡುತ್ತವೆ ನನ್ನನ್ನ. ಅಂತದ್ದರಲ್ಲಿ ಅದೇ ಸಮಯಕ್ಕೆ ಸರಿಯಾಗಿ ಬಸ್ ಪಾಸ್ ಆಗದೆ ಮನೆಯ ತಾಪತ್ರಯಗಳ ನಡುವೆ ನನಗೆ ಒಂದು ವಾರ ಆ ಕಡೆ ಹೋಗಲು ಆಗಲೇ ಇಲ್ಲ.

ಊರಿನ ಗ್ರಂಥಾಲಯವನ್ನೆಲ್ಲ ತಿರುವಿ ಹಾಕಿದೆ. ಪುಸ್ತಕ ಇರಲಿಲ್ಲ. ಹತ್ತನೆಯ ದಿನ ಏಳರ ಬಸ್ಸಿಗೆ ಹೋಗಿ ಲೈಬ್ರರಿ ತೆಗೆಯುವವರೆಗೆ ಕಾದಿದ್ದು, ಪುಸ್ತಕ ಕೈಗೆತ್ತಿಕೊಂಡೆ. ಮುಂದೆ… ಏನಾದರೂ ಮಹತ್ತರವಾದದ್ದನ್ನು ಹೇಳುವಾಗ ಅರ್ಧ ಮುಗಿದ ಮೇಲೆ ಮುಂದಿನದು ಇತಿಹಾಸ ಎನ್ನುತ್ತಾರಲ್ಲ ಇದೂ ಒಂದು ಲೆಕ್ಕಕ್ಕೆ ಹಾಗೇ.

‘ಅಲಕನಂದಾ’ ಬದುಕಿನ ಕಠೋರತೆಯನ್ನು ಎದುರಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿರುತ್ತಾಳೆ. ಇನ್ನೇನು ಒಂದೊಂದೇ ಹೆಜ್ಜೆ ಅವಳು ಸಮುದ್ರದೊಳಗೆ ಇಳಿಯುತ್ತಿದ್ದರೆ, ನನ್ನ ಕಾಲು ತತ್ತರಿಸಿತೊಡಗಿದ್ದವು. ನಗಾರಿ ಬಾರಿಸಿದಂತೆ ಎದೆಯಲ್ಲಿ ಧಡಧಡ. ಮನಸ್ಸು ಶೂನ್ಯವಾಗಿ ಕತ್ತಲು ಕವಿದಿತ್ತು. ಒಂದು ಕ್ಷಣ ಅವಳು ನೀರಲ್ಲಿ ಹಾಗೆ ನಿಂತಳು. ನಾನು ಉಸಿರುತೆಗೆದುಕೊಂಡೆ. ಇಬ್ಬರೂ ಏಕಕಾಲದಲ್ಲಿ ಸಾವಿನ ಮನೆಯ ಬಾಗಿಲನ್ನು ಲಿಕಿಲಿಕಿ ಮಾಡಿದ್ದೆವು. ಜೀವಿಸಿರಬೇಕೆಂಬ ಮನುಷ್ಯನ ಪ್ರಬಲ ಪ್ರೇರಣೆ ಅವಳು ಬೇಡವೆಂದು ವಾಪಸ್ಸು ಬಂದಳು ನಾನು ಬದುಕಿದೆ!

ನಮ್ಮ ಕಡೆ, ಮಕ್ಕಳು ಮಂದಿ ಮಾತು ಕೇಳಿ ಹಾಳಾದರೆ, ಊರ ಶಾಲೆಗೆ ಬಂದ ಶಿಕ್ಷಕರು ಸರಿಯಾಗಿ ಪಾಠ ಮಾಡದಿದ್ದರೆ ದೊಡ್ಡವರು, “ಮಕ್ಕಳು ಮುತ್ತಿನ ದಲಾಲಿಗಳಾಗುತ್ತಿದ್ದರು, ಇವರಿಂದಾಗಿ ಚಿಂದಿ ಮಾರುವ ಹಾಗಾದರು ಎಂದು ಮರಮರ ಮರುಗುತ್ತಾರೆ,” ಅರ್ಥ ಇಷ್ಟೇ… ಮಕ್ಕಳು ಬೆಳೆವ ಪರಿಸರ, ಅವರ ಕೌಟುಂಬಿಕ ಹಿನ್ನೆಲೆ ಬದುಕನ್ನ ನೋಡಲು ಮತ್ತು ಬದುಕಲು ಬೇಕಾದ ಕೌಶಲಗಳನ್ನು ಕೊಟ್ಟಿರುತ್ತದೆ. ಆದರೆ ಶಿಕ್ಷಣ ಮತ್ತು ಸಾಮಾಜಿಕ ವ್ಯವಸ್ಥೆ ಬೇರೆ ಏನನ್ನೋ ಕಲಿಸಲು ಹೋಗಿ ಅವೆರಡೂ ಹೊಂದಾಣಿಕೆಯಾಗದೆ ಒರಲುವ ಶೃತಿ ನಂಬಿ ಸಂಗೀತ ಕಚೇರಿಗೆ ಕೂತಂತಾಗಿರುತ್ತದೆ ಮಕ್ಕಳ ಪರಿಸ್ಥಿತಿ.

ನಾನು ಈ ಮಾತನ್ನು ಸಾಹಿತ್ಯದ ಆಯಾಮದಿಂದ ನೋಡುತ್ತೇನೆ. ಬೆಳ್ಳಿ, ಬಂಗಾರ, ವಜ್ರ, ಹವಳ ಎಲ್ಲವನ್ನ ಮುಟ್ಟಿ ಪರೀಕ್ಷೆ ಮಾಡುತ್ತಾರೆ. ತಡವಿದರೆ ಮುತ್ತಿನ ಬಣ್ಣ ಮಾಸುತ್ತದೆ. ಅದಕ್ಕಾಗಿ ಮುತ್ತಿನ ವ್ಯವಹಾರ ಕಣ್ಣಿಂದ ಮಾತ್ರ ನಡೆಯುವಂತದ್ದು. ಕಣ್ಣು ಎಂದೂ ಮೋಸ ಮಾಡುವುದಿಲ್ಲ ಎಂತಲೇ ಪ್ರತ್ಯಕ್ಷ ಸಾಕ್ಷಿಗೆ ಹೆಚ್ಚು ಪ್ರಾಮುಖ್ಯತೆ!

ಸಾಹಿತ್ಯ ಕೂಡ ಕಣ್ಣಿಂದ ಒಳಗಿಳಿವ ಕಾರಣಕ್ಕೆ ಈ ಎಲ್ಲ ಗೊಂದಲಗಳನ್ನು ಪರಿಹರಿಸಿ ಅಂತರಂಗವನ್ನ ಮುತ್ತಿನಷ್ಟೇ ಪರಿಶುದ್ಧಗೊಳಿಸುತ್ತದೆ ಮತ್ತು ಬದುಕಿನ ಬೆಲೆಯನ್ನು ತಿಳಿಸಿಕೊಡುತ್ತದೆ ಎನ್ನುವುದಕ್ಕೆ ನಾನೇ ಉದಾಹರಣೆ!!

August 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ರೇಣುಕಾ ರಮಾನಂದ

    ಚಂದಗೆ,ಖುಲ್ಲಂ ಖುಲ್ಲಾ ಬರೆದಿದ್ದೀರಿ ಹೇಮಾ ಮೇಡಂ..ಬಹಳ ಇಷ್ಟವಾಯ್ತು ಶೈಲಿ

    ಪ್ರತಿಕ್ರಿಯೆ
  2. Vasudeva Sharma

    ಕಲಿಸುವವರು ಸರಿಯಾಗಿ ಕಲಿಸದಿದ್ದರೆ…
    ಬದುಕುವ ಕೌಶಲಗಳ ಕೊಡದಿದ್ದರೆ… ಬಹಳ ಅರ್ಥಬದ್ಧವಾದ ವಿಚಾರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: